ನೆನಪಿನಂಗಳದಲ್ಲೊಂದು ಕುಂಟಾಬಿಲ್ಲೆ ..

ಬಿ ವಿ ಭಾರತಿ

ಇವತ್ತಿನ ಬೆಳಬೆಳಗ್ಗೆಯೇ ‘ದೇಹಕೆ ಉಸಿರೇ ಸದಾ ಭಾರ’ ಅನ್ನೋ ಹಾಡು FM ನಲ್ಲಿ ಕಿವಿ ಮೇಲೆ ಬಿದ್ದಾಗ ಮನಸ್ಸಿನಲ್ಲಿ ಮಲಗಿದ್ದ ಏನೇನೋ ನೆನಪುಗಳು ಎದ್ದು ಕೂತವು. ಮನಸ್ಸು ನನ್ನ ಶಾಲೆಯ ದಿನಗಳಿಗೆ ಹಾರಿಹೋಯಿತು. ನೆನಪುಗಳ ಕೊಂಡಿ ಎಲ್ಲೆಲ್ಲಿ ಸಿಕ್ಕಿಕೊಂಡಿರುತ್ತವೆ! ಯಾವುದೋ ಹಾಡಿನ ನಾಲ್ಕು ಸಾಲು ನನ್ನನ್ನ ದಶಕಗಳ ಹಿಂದಕ್ಕೆ ಕರೆದುಕೊಂಡು ಹೋಗುತ್ತೆ ಅಂದರೆ ನೆನಪಿನ ಶಕ್ತಿ ಎಷ್ಟೊಂದು!

ಆಗ ನಾನು ಏಳನೆಯ ಕ್ಲಾಸಿನಲ್ಲಿದ್ದೆ. ಶಾಲೆಯಲ್ಲಿ ಆ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ನಡೆಸಬೇಕು ಅಂತ ತಯಾರಿ ನಡೀತಿತ್ತು. ಶಾಲೆ ಶುರುವಾಗಿ ಹತ್ತು ವರ್ಷವೋ, ಇಪ್ಪತ್ತೈದು ವರ್ಷವೋ ಏನೋ ಆಗಿತ್ತು ಅಂತೇನೋ ಹೇಳ್ತಿದ್ದ ನೆನಪು. ಸುಮಾರು ಕಾರ್ಯಕ್ರಮಗಳ ಲಿಸ್ಟ್ ತಯಾರಾಯಿತು. ಅದರಲ್ಲಿ ಪೌರಾಣಿಕ ನಾಟಕ ಆಡಿಸುವ ಪ್ರಸ್ತಾಪವೂ ಒಂದಿತ್ತು. ಪಾತ್ರಧಾರಿಗಳ ಆಯ್ಕೆ ಕಾರ್ಯಕ್ರಮ ಶುರುವಾಯ್ತು. ಈ ಪೌರಾಣಿಕ ನಾಟಕಕ್ಕೆ ನಾನೇ ಮುಖ್ಯ ಪಾತ್ರಧಾರಿ ಅಂತ ತೀರ್ಮಾನಿಸಿ ಬಿಟ್ಟರು. ನನ್ಗೆ ಸ್ಟೇಜ್ ಮೇಲೆ ನಿಂತರೆ ಕೈ ಕಾಲು ನಡುಕ ಮುಂಚಿನಿಂದ. ಅದಕ್ಕೆ ನಾಟಕದಲ್ಲಿ ಪಾರ್ಟ್ ಮಾಡು ಅಂತ ನಮ್ಮ ಮಾಸ್ಟರ್ ಹೇಳ್ದಾಗ ಹೌಹಾರಿದ್ದೆ . ಛೇ! ಛೇ! ಆಗದು .. ಆಗದು..’ ಅನ್ನೋ ಅಣ್ಣಾವ್ರ ಹಾಡಿನ ಥರ ಬಲವಾಗಿ ಪ್ರತಿಭಟಿಸಿದ್ದೆ. ಆದರೆ ಉಹೂ ಅವರು ನನ್ನ ಬಿಡೋದಿಕ್ಕೆ ಸಿದ್ಧರೇ ಇರಲಿಲ್ಲ.

ಅಯ್ಯೋ ನನ್ನ ಪ್ರತಿಭೆ ಅಷ್ಟಿತ್ತು ಅಂತೆಲ್ಲ ಅಂದುಕೊಳ್ಳಬೇಡಿ. ನಾನು ಹಿಂದಿನ ವರ್ಷ ಅದ್ಯಾವುದೋ ಸಾಮಾಜಿಕ ನಾಟಕದಲ್ಲಿ ‘ಅಮೋಘ’ ಅಭಿನಯ ನೀಡಿ ಬಿಟ್ಟಿದ್ದೆ! ನಮ್ಮದು ಬಾಲಕಿಯರ ಶಾಲೆ. ಅಲ್ಲಿ ಗಂಡು ಮಕ್ಕಳಿರಲಿಲ್ಲ. ಆ ನಾಟಕದಲ್ಲಿ ಒಂದು ಗಂಡು ಪಾತ್ರವಿತ್ತು. ಹಳ್ಳಿಯಲ್ಲಿ ಪ್ಯಾಂಟ್ ಧರಿಸಿ ‘ನಟಿಸಬಲ್ಲ’ ಏಕೈಕ ಹೆಣ್ಣು ನಾನು ಮಾತ್ರ ಆಗಿದ್ದರಿಂದ ಮತ್ತು ನಾನು ಆಗಲೇ ತೆಂಗಿನಮರದ ಹಾಗೆ ಐದೂ ಮುಕ್ಕಾಲು ಅಡಿ ಬೆಳೆದು ನಿಂತಿದ್ದ ಕಾರಣ ನೀನೇ ಆ ಪಾತ್ರ ಮಾಡಬೇಕು ಅಂತ ಮೇಷ್ಟರು ನಿರ್ಧರಿಸೇ ಬಿಟ್ಟರು. ನಾನು ‘ಸ್ಟೇಜ್ ಮೇಲೆ ನಿಂತರೆ ಕೈ ಕಾಲು ನಡುಕ ಬರುತ್ತೆ ಸಾರ್’ ಅಂತ ಬಿಡುಗಡೆಗಾಗಿ ಕೈ ಕಾಲಿಗೆ ಬಿದ್ದು ಬೇಡಿಕೊಂಡು ಬಿಟ್ಟೆ. ಆದರೂ ಬಿಡಲಿಲ್ಲ ಆ ಕಟುಕ ಮೇಷ್ಟ್ರು. ಬದಲಿಗೆ ಒಂದು ಉಪಾಯ ಸೂಚಿಸಿದರು ‘ಎದುರಿಗಿರುವ ಜನರ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ತಾನೇ ಭಯವಾಗೋದು? ಅದಕ್ಕೇ ನೀನು ಎದುರಿಗೆ ಇರೋರನ್ನ ನೋಡಲೇ ಬೇಡ. ಕಣ್ಣನ್ನು ಸ್ವಲ್ಪ ಎತ್ತರದಲ್ಲಿ ನಿಲ್ಲಿಸು ಅಂದರೆ ಕೂತಿರುವವರ ನೇರಕ್ಕೆ ನೋಡದೆ ನೀನು ಎತ್ತರದ ಸ್ಟೇಜ್ ಮೇಲೆ ನಿಂತಿರ್ತೀಯಲ್ಲ ನಿನ್ನ ಕಣ್ಣಿನ ನೇರಕ್ಕೆ ನೋಡಿಕೋ’ ಅಂತ ಹೇಳಿದರು. ವಿಧಿಯಿಲ್ಲದೇ ಒಪ್ಪಿದೆ.

ನಾಟಕದ ದಿನ ನಾನು ಅವರ ಮಾತನ್ನ ಜಾಸ್ತಿ ಸೀರಿಯಸ್ ಆಗಿ ತೆಗೆದುಕೊಂಡು ಬಿಟ್ಟು ಕಣ್ಣು ನನ್ನ ನೇರಕ್ಕೆ ಅಂದರೆ ಎಷ್ಟು ಅಂತಲೇ ಮರೆತು ಹೋಗಿ ಆಕಾಶ ನೋಡುತ್ತಾ ಅದ್ಭುತ ಅಭಿನಯ ನೀಡಿ ಬಿಟ್ಟಿದ್ದೆ! ಇಡೀ ನಾಟಕದ ಅಷ್ಟೂ ಹೊತ್ತು ನಾನು ಧೃತರಾಷ್ಟ್ರನಾಗಿದ್ದೆ! ಮನೆಗೆ ಬಂದ ಮೇಲೆ ಅಪ್ಪ ಕಷ್ಟ ಪಟ್ಟು ಹೊಗಳಿದರು. ಅಮ್ಮ ‘ಥೇಟ್ ಕುರುಡಿ ಹಾಗೆ ಕಾಣ್ತಿದ್ದೆ ಕಣೇ’ ಅಂತ ಹೇಳೇ ಬಿಟ್ಟಿದ್ದರು! ಇಂಥ ಅದ್ಭುತ ಪ್ರತಿಭಾವಂತೆಯಾದ ನಾನು ಪಾಪ ಆ ಸ್ಪೆಷಲ್ ವಾರ್ಷಿಕೋತ್ಸವದ ಸಮಯದಲ್ಲಿ ಅದ್ಯಾಕೆ ಮೇಷ್ಟ್ರ ಕಣ್ಣಿಗೆ ಬಿದ್ದೆನೋ, ನನ್ನ ಮೇಲೆ ಅದ್ಯಾಕೆ ಭರವಸೆ ಇಟ್ಟರೋ ನನಗೆ ಗೊತ್ತಿಲ್ಲ.

ಸ್ಪೆಷಲ್ ವಾರ್ಷಿಕೋತ್ಸವ ಆದ್ದರಿಂದ ಪೌರಾಣಿಕ ನಾಟಕ ಆಡಿಸಲು ನಿರ್ಧಾರ ಮಾಡಿದರು. ಕರ್ಣನ ಬಗ್ಗೆ… ಅದೂ ಇಡೀ ನಾಟಕ ಏಕ ಪಾತ್ರ ನಾಟಕ! ಇಡೀ ನಾಟಕ ನನ್ನ ಹೆಗಲ ಮೇಲೆ. ನಾನು ಅಳೋದೊಂದೇ ಬಾಕಿ. ಜೊತೆಗೆ ನಾಟಕದ ತುಂಬಾ ಹಾಡುಗಳು. ಹೆಗ್ಗಡದೇವನ ಕೋಟೆಯಿಂದ ಯಾರೋ ನಾಟಕದ ತರಬೇತಿದಾರರನ್ನು ಬೇರೆ ಕರೆಸುವ ನಿರ್ಧಾರ ಮಾಡಿಬಿಟ್ಟರು. ನಾನಂತೂ ಭಯದಿಂದ ಕುಸಿದು ಹೋಗಿದ್ದೆ. ತಪ್ಪಿಸಿ ಕೊಳ್ಳುವ ಉಪಾಯ ಇಲ್ಲದೇ ಬಲಿಪಶುವಿನ ಹಾಗೆ ಮುಖ ಮಾಡಿಕೊಂಡು ಎಲ್ಲಕ್ಕೂ ತಲೆಯಾಡಿಸುತ್ತಿದ್ದೆ. ಅವತ್ತೊಂದು ಕರಾಳ ದಿನ ಆ ನಾಟಕದ ಮೇಷ್ಟರು ಬಂದೇ ಬಿಟ್ಟರು. ಸಂಜೆ ಶಾಲೆ ಮುಗಿದ ಮೇಲೆ ನನ್ನ ‘ಸ್ಕ್ರೀನ್ ಟೆಸ್ಟ್’ ಇತ್ತು!! ಬೆಳಿಗ್ಗೆಯಿಂದಲೇ ತಲೆ ಮೇಲೆ ಮಣಗಟ್ಟಲೆ ಭಾರ ಬಿದ್ದ ಅನುಭವ. ಸಂಜೆ ಶಾಲೆ ಮುಗಿದ ಮೇಲೆ ಅದೊಂದು ರೂಮಿನಲ್ಲಿ ನನ್ನ ಕೂಡಿಸಿದಾಗ ನನಗೆ ಕೋರ್ಟ್‌ನಲ್ಲಿ ತೀರ್ಪು ಹೊರಬೀಳೋ ದಿನ ಖೈದಿಯ ಥರ ಅನ್ನಿಸಿ ಬಿಡ್ತು!

ಮೊದಲಿಗೆ ದನಿ ಹೇಗಿದೆ ಪರೀಕ್ಷಿಸೋಣ ಅಂತ ಹೇಳಿದಾಗ ಬಾತ್ ರೂಮ್ ಸಿಂಗರ್ ಆದ ನಾನು ಯಾವ ಹಾಡೂ ಹೊಳೆಯದೆ ಮಂಕಾಗಿ ನಿಂತಾಗಲೇ ಚಿನ್ನಾ ನಿನ್ನ ಮುದ್ದಾಡುವೆ ಸಿನಿಮಾದ ‘ದೇಹಕೇ ಉಸಿರೇ’ ಹಾಡು ನೆನಪಾಗಿದ್ದು! ನಡುಗುವ ದನಿಯಲ್ಲಿ ಹಾಡು ಶುರು ಮಾಡೇ ಬಿಟ್ಟೆ. ನಂತರ ಅದೇ ಸಿನೆಮಾದ ‘ಜೊ ಜೋ ಲಾಲಿ ನಾ ಹಾಡುವೆ’ ಹಾಡಿದ್ದೆ. ನನಗೆ ಆ ಹಾಡು ಹಾಡಿದ ಮಗುವಿನ ಧ್ವನಿ ತುಂಬ ಇಷ್ಟವಾಗುತ್ತಿತ್ತು.( ಸಂಗೀತ ನಿರ್ದೇಶಕ ಸಲೀಲ್ ಚೌಧರಿಯವರ ಮಗಳು .. ಹೆಸರು ನೆನಪಾಗುತ್ತಿಲ್ಲ). ಅದಕ್ಕೇ ಆ ಎರಡು ಹಾಡು ಹಾಡಿದ್ದೆ. ಆಮೇಲೆ ಒಂದೆರಡು ನಾಟಕದ ಹಾಡು ಕೂಡಾ ಹಾಡಿಸಿದರು. ಅಬ್ಬ! ದೊಡ್ಡದೊಂದು ಅಗ್ನಿಪರೀಕ್ಷೆ ಎದುರಿಸಿದ ಹಾಗೆ ಆಗಿತ್ತು ಮನಸ್ಸಿಗೆ. ಎಲ್ಲ ಮುಗಿಯಿತು. ಬಹುಶಃ ಫೇಲ್ ಆಗಲಿ ಅಂತ ಬೇಡಿಕೊಂಡ ಮೊದಲ ವಿದ್ಯಾರ್ಥಿನಿ ನಾನೇ ಇರಬೇಕು! ನಾಟಕದ ಮೇಷ್ಟ್ರು ನಮ್ಮ ಮೇಷ್ಟ್ರ ಹತ್ತಿರ ‘ಒಳ್ಳೆ ಶಾರೀರ!’ ಅಂದಿದ್ದು ಕೇಳಿಸಿತು. ಸತ್ಯಕ್ಕೂ ಹೇಳ್ತೀನಿ … ನನಗೆ ಅಲ್ಲಿವರೆಗೆ ಶಾರೀರ ಅನ್ನೋ ಪದವೇ ಗೊತ್ತಿರಲಿಲ್ಲ. ಶಾರೀರ ಮತ್ತು ಶರೀರ ಎರಡೂ ಒಂದೇ ಅಂದುಕೊಂಡು ಬಿಟ್ಟಿದ್ದೆ ! ೧೧ ವರ್ಷಕ್ಕೆ ಐದೂ ಮುಕ್ಕಾಲಡಿ ಎತ್ತರ ಬೆಳೆದಿದ್ದ ನನ್ನ ದೈಹಿಕ ನಿಲುವಿನ ಬಗ್ಗೆ ಹೇಳ್ತಿದಾರೆ ಅಂದುಕೊಂಡು ಅವಮಾನದಿಂದ ಕುದ್ದು ಹೋಯಿತು ಮನಸ್ಸು.

‘ಛೀ ಮೇಷ್ಟ್ರಂತೆ .. ವಿದ್ಯಾರ್ಥಿನಿ ಬಗ್ಗೆ ಹೀಗೆಲ್ಲ ಹೇಳಕ್ಕೆ ಇವರಿಗೆ ನಾಚ್ಕೆ ಆಗೋದಿಲ್ವಾ’ ಅಂತ ಸಕತ್ತಾಗಿ ಬಯ್ದುಕೊಂಡೆ. ನಾಳೆಯಿಂದ ಪ್ರ್ಯಾಕ್ಟೀಸ್ ಶುರು ಮಾಡೋಣ ಅಂದರು. ನನಗೆ ಮನಸಲ್ಲೇ ಏನೋ ಹಳಹಳಿ. ನಾಟಕ ಬೇಡ ಅಂತ ತಿರಸ್ಕರಿಸ ಬೇಕಿತ್ತು ಅನ್ನೋ ಮನಸ್ಸು. ಬೇಡ ಅಂದರೂ ಬಿಡುತ್ತಿರ್ಲಿಲ್ವಲ್ಲಾ ಅಂತ ಕೊರಗು. ಮಂಕಾಗಿ ಮನೆಗೆ ಬಂದ ಮೇಲೆ ಅಪ್ಪನ ಹತ್ತಿರ ಇದನ್ನ ಹೇಳಿದೆ. ಅವರು ಏನನ್ನುತ್ತಾರೋ ಅನ್ನುವ ಭಯದಲ್ಲೇ. ಅವರು ‘ಒಹೋ ನಿನ್ನ ವಾಯ್ಸ್ ಚೆನ್ನಾಗಿದ್ಯಂತಾ? ನಾವೇ ಕೇಳಿಲ್ಲವಲ್ಲಾ …’ ಅಂದಾಗಲೇ ನನಗೆ ಶಾರೀರ ಅನ್ನೋ ಪದದ ಅರ್ಥ ಹೊಳೆದಿದ್ದು!

ಉಪಸಂಹಾರ: ಆಮೇಲೆ ಒಂದಿಷ್ಟು ದಿನ ನಾಟಕದ ಪ್ರ್ಯಾಕ್ಟೀಸ್ ನಡೆದಿದ್ದೂ ಆಯಿತು. ದಿನಾ ಸಂಜೆ ಬಂದು ಸುಸ್ತಾಗಿ ಬಿದ್ದುಕೊಂಡು ಓದದೇ ಕಾಲ ಕಳೆಯೋದಿಕ್ಕೆ ಶುರು ಮಾಡಿದ್ನೋ, ಇಲ್ವೋ ಏಳನೇ ಕ್ಲಾಸಿನಂಥ ‘ದೊಡ್ಡ’ ಪಬ್ಲಿಕ್ ಪರೀಕ್ಷೆಯಲ್ಲಿ ಮಗಳು ಫೇಲ್ ಆದ್ರೆ ಅಂತ ಹೆದರಿ ಬೈದು ಅಮ್ಮ ನಾಟಕ ಕ್ಯಾನ್ಸಲ್ ಮಾಡಿಸಿ ಬಿಟ್ಟರು. ಅಲ್ಲಿಗೆ ಉದಯೋನ್ಮುಖ ಪ್ರತಿಭೆಯೊಂದರ ಅವಸಾನವಾಗಿ ಹೋಗಿತ್ತು !! ಮತ್ತೆ ನಾನು ಜೀವನದಲ್ಲಿ ನಾಟಕದ ತಂಟೆಗೆ ಹೋಗಲಿಲ್ಲ …

 

 

6 Comments

Add a Comment

Your email address will not be published.

Sharing Buttons by Linksku