ಹೀಗ್ಯಾಕೆ ಕಾರ್ನಾಡ್?

ಗೋಪಾಲ ವಾಜಪೇಯಿ

ಮೊನ್ನೆ ಫೆಬ್ರವರಿ 24 (2013), ಆದಿತ್ಯವಾರ, ‘ಅವಧಿ‘ಯ ನನ್ನ ಅಂಕಣದಲ್ಲಿ ಪ್ರಕಟವಾದ ”...’ನಾಗಮಂಡಲ’ದ ಹಾಡು-ಪಾಡು!” ಲೇಖನಕ್ಕೆ ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ಆ ಪೈಕಿ ಸುನಿಲ್ ರಾವ್ ಪ್ರತಿಕ್ರಿಯೆಯ ಜೊತೆಗೆ, ಒಂದು ಪ್ರಶ್ನೆಯನ್ನೂ ಹಾಕಿದ್ದಾರೆ. ಮತ್ತು, ‘ದಯಮಾಡಿ ಇದಕ್ಕೊಂದು ಕ್ಲಾರಿಫಿಕೇಶನ್ ಕೊಡಿ,’ ಎಂದೂ ಕೇಳಿದ್ದಾರೆ.

ಸುನಿಲ್ ರಾವ್ ಅವರಲ್ಲಿ ಈ ಪ್ರಶ್ನೆ ಹುಟ್ಟಲು ಕಾರಣವಾದದ್ದು ಪ್ರಸ್ತುತ ಲೇಖನದಲ್ಲಿ ನಾನು ಉಲ್ಲೇಖಿಸಿರುವ ‘ಮಾಯಾದೋ ಮನದ ಭಾರ, ತಗಧಾಂಗ ಎಲ್ಲ ದ್ವಾರ…’ ಎಂಬ ಹಾಡು. ‘ಅವಧಿ’ಯಲ್ಲಿ ಈ ಪ್ರಶ್ನೆಯನ್ನು ಹಾಕುವುದರ ಜೊತೆ ಜೊತೆಗೇ ಸುನಿಲ್ ರಾವ್ ನನಗೆ ಫೋನ್ ಮೂಲಕವೂ ಈ ಪ್ರಶ್ನೆಯನ್ನು ಕೇಳಿ ಉತ್ತರ ಬಯಸಿದ್ದಾರೆ.

ಸುನಿಲ್ ಅವರ ಪ್ರಶ್ನೆ ಹೀಗಿದೆ : ”ಈ ಪ್ರಶ್ನೆ ಯಾಕೆ೦ದರೆ, ನಾನು ವ್ಯಾಸ೦ಗ ಮಾಡುತ್ತಿರುವ ಬಿ.ಎ ಪತ್ರಿಕೋದ್ಯಮ(ಅಟಾನಮಸ್)ಗೆ ‘ನಾಗಮಂಡಲ’ ನಾಟಕ ಪಠ್ಯದಲ್ಲಿದ್ದು, ಮೇಲಿನ ಈ ಪದ್ಯ ಅದರಲ್ಲಿ ಉ೦ಟು…ಈ ಹಾಡು ನಿಮ್ಮಿ೦ದ ರಚಿತವಾಗಿರುವುದಾ??!! ಇದು ಗಿರೀಶ ಕಾರ್ನಾಡರ ಹಾಡಲ್ಲವೇ?!! ಈ ಪದ್ಯ ನಿಮ್ಮಿ೦ದ ರಚಿತವಾಗಿದ್ದು ಎ೦ದು ಪುಸ್ತಕದಲ್ಲಿ ಎಲ್ಲೂ ಉಲ್ಲೇಖವಾಗಿಲ್ಲವಲ್ಲ…”

ಈ ಪ್ರಶ್ನೆ ನಿಜಕ್ಕೂ ನನಗೆ ಆಘಾತವನ್ನುಂಟು ಮಾಡಿದೆ. ಜೊತೆಗೇ, ‘ಹಿರಿಯರಾದ ಕಾರ್ನಾಡರು ಹೀಗೆ ಮಾಡಿದರಲ್ಲ…’ ಎಂಬ ಖೇದವನ್ನೂ, ‘ಕಾರ್ನಾಡರಂಥವರು ಹೀಗೆ ಮಾಡಬಹುದೇ?!’ ಎಂಬ ಅಚ್ಚರಿಯನ್ನೂ ಏಕಕಾಲಕ್ಕೇ ಉಂಟು ಮಾಡಿದೆ.

ಸುನಿಲ್ ರಾವ್ ಅವರ ಪ್ರಶ್ನೆಗೆ ನಾನು ಉತ್ತರಿಸಲೇಬೇಕು. ಆದರೆ, ಅದಕ್ಕಿಂತ ಮೊದಲು ಕಾರ್ನಾಡರ ‘ನಾಗಮಂಡಲ’ ನಾಟಕದ ಪಠ್ಯದಲ್ಲಿ ಈ ಹಾಡು ಹೇಗೆ ಬಂತು ಎಂಬುದರ ಹಿನ್ನೆಲೆಯನ್ನು ಕುರಿತು ಒಂದಷ್ಟು ವಿವರಣೆ ನೀಡಬೇಕು.

ಈಗಾಗಲೇ ಬಹುತೇಕ ಓದುಗರಿಗೆ ಗೊತ್ತಿರುವ ಹಾಗೆ, ‘ಸಂಕೇತ್ ನಾಟಕ ತಂಡ’ದವರು ನಿರ್ಮಿಸಿದ್ದ ‘ನಾಗಮಂಡಲ’ ನಾಟಕದ ಪ್ರಯೋಗಗಳಿಗಾಗಿ ನಾನು ಒಟ್ಟು ಹತ್ತು ಹಾಡುಗಳನ್ನು ಬರೆದುಕೊಟ್ಟೆ. ಸಿ. ಅಶ್ವಥ್ ಅಪರೂಪದ ರಾಗಸಂಯೋಜನೆ ಮಾಡಿ, ಅವನ್ನೆಲ್ಲ ಅಪರೂಪದ ರಂಗಗೀತೆಗಳನ್ನಾಗಿಸಿಟ್ಟರು. ಇಂದಿಗೂ ಬೆಂಗಳೂರು ಮುಂತಾದೆಡೆ ರಂಗಗೀತೆಗಳ ಕಾರ್ಯಕ್ರಮ ಇದ್ದಲ್ಲೆಲ್ಲ ಈ ಹಾಡುಗಳನ್ನು ಪ್ರೀತಿಯಿಂದ ಹಾಡುವವರಿದ್ದಾರೆ.

ಹೌದು. ಸಂಕೇತ್ ತಂಡ ‘ನಾಗಮಂಡಲ’ವನ್ನು ಪ್ರಯೋಗಿಸಲು ಕೈಗೆತ್ತಿಕೊಂಡಾಗ ಈ ನಾಟಕ ಇನ್ನೂ ಹಸ್ತಪ್ರತಿಯ ರೂಪದಲ್ಲೇ ಇತ್ತು. ಇದಾದ ಮೇಲೆ, ಧಾರವಾಡದ ‘ಮನೋಹರ ಗ್ರಂಥ ಮಾಲಾ’ ಈ ನಾಟಕವನ್ನು ಪುಸ್ತಕರೂಪದಲ್ಲಿ ಪ್ರಕಟಿಸಿತು. ‘ನಾಗಮಂಡಲ’ದ ಮೊದಲ ಆವೃತ್ತಿ ಪ್ರಕಟಗೊಂಡದ್ದು 1989ರಲ್ಲಿ. ಮೊದಲ ಆವೃತ್ತಿಯ ಆರಂಭಿಕ ಪುಟಗಳಲ್ಲಿ ಒಂದು ಕಡೆ ಸಂಕೇತ್ ನಾಟಕ ತಂಡದ ಪ್ರಥಮ ಪ್ರಯೋಗದಲ್ಲಿ ದುಡಿದ ನಟವರ್ಗ ಮತ್ತು ತಾಂತ್ರಿಕ ವರ್ಗದ ಪೂರ್ಣ ಪಟ್ಟಿಯನ್ನು ಕೊಡಲಾಗಿತ್ತು. ಆ ಪಟ್ಟಿಯಲ್ಲಿ ‘ಹೊಸ ಗೀತೆಗಳು’ ಎಂತಲೋ ಏನೋ ನನ್ನ ಹೆಸರೂ ನಮೂದಾಗಿತ್ತು. ನಂತರದ ಆವೃತ್ತಿಗಳಲ್ಲಿ ಕೇವಲ ನಟವರ್ಗದ ಹೆಸರುಗಳಷ್ಟೇ ಮುಂದುವರಿದವು. ಈ ವರೆಗೆ, ಅಂದರೆ 2012ರ ವರೆಗೆ ‘ನಾಗಮಂಡಲ’ ನಾಟಕದ ಒಟ್ಟು ಏಳು ಆವೃತ್ತಿಗಳು ಪ್ರಕಟವಾಗಿವೆ.

-೦-೦-೦-೦-೦-

2000ನೆಯ ಇಸವಿಯ ಹೊತ್ತಿಗಾಗಲೇ ನಾನು ಈಟೀವಿ ಕನ್ನಡ ವಾಹಿನಿಯನ್ನು ಸೇರಿ ಹೈದರಾಬಾದಿಗೆ ಸ್ಥಳಾಂತರಗೊಂಡಿದ್ದೆ. ಈಟೀವಿಯ ಕಚೇರಿಯಿದ್ದದ್ದು ಅಲ್ಲಿಯ ರಾಮೋಜಿ ಫಿಲಂ ಸಿಟಿಯಲ್ಲಿ. 2004ರ ಜನೆವರಿ ತಿಂಗಳಿನ ಮೂರನೆಯ ವಾರದ ಒಂದು ಮಧ್ಯಾಹ್ನ ಗೆಳೆಯ ಎಸ್. ಸುರೇಂದ್ರನಾಥ್ (ಆಗ ಆತ ಈಟೀವಿ ವಾಹಿನಿಯ ಹಿರಿಯ ನಿರ್ಮಾಪಕ) ಮೊಬೈಲಿನಲ್ಲಿ ಮಾತಾಡುತ್ತ ತನ್ನ ಚೇಂಬರಿನಿಂದ ನನ್ನ ಮೇಜಿನ ತನಕ ಬಂದರು. ”ಹಿಡಿ, ಕಾರ್ನಾಡರು… ಏನೋ ಮಾತಾಡಬೇಕಂತೆ…” ಅಂತ ಮೊಬೈಲನ್ನು ನನ್ನ ಕೈಗಿತ್ತರು. (ಆಗ ನಾನಿನ್ನೂ ಮೊಬೈಲ್ ಖರೀದಿಸಿರಲಿಲ್ಲ.)

ನಾನು ”ಹಲೋ, ನಮಸ್ಕಾರ,” ಅಂದೆ. ಕಾರ್ನಾಡರು ತುಂಬಾ ಪ್ರೀತಿಯಿಂದ ನನ್ನ ಕ್ಷೇಮಸಮಾಚಾರವನ್ನು ಕೇಳಿದರು. ನಂತರ, ‘ನಾಗಮಂಡಲ’ ನಾಟಕ ಪ್ರಯೋಗಕ್ಕಾಗಿ ನಾನು ಬರೆದಿದ್ದ ಹಾಡುಗಳನ್ನು ಒಂದಷ್ಟು ಪ್ರಶಂಸಿದರು. ಆ ಪೈಕಿ ‘ಮಾಯಾದೋ ಮನದ ಭಾರ…’ ಹಾಡನ್ನು ‘ನಾಗಮಂಡಲ’ದ ಮುಂದಿನ ಆವೃತ್ತಿಯಲ್ಲಿ ಬಳಸಿಕೊಳ್ಳಲು ಬಯಸಿರುವುದಾಗಿ ಹೇಳಿ, ನನ್ನ ಅನುಮತಿ ಬೇಕು ಅಂದರು. ಆಯಿತು ಅಂದೆ. ”ಆದ್ರ, ನನ್ಹತ್ರ ಆ ಹಾಡಿನ ಪ್ರತಿ ಇಲ್ಲ. ಬರದು ಕಳಸ್ರಿ,” ಅಂದರು. ಅದಕ್ಕೂ ಆಯಿತು ಅಂದೆ. ”ಎಷ್ಟು ಚೊಲೊ ಹಾಡು…! ಇದನ್ನ ಬಳಸಿಕೋಬೇಕು ಅನ್ನೋದು ಇಷ್ಟು ದಿನಾ ಯಾಕ ನನ್ನ ತಲೀ ಒಳಗ ಬರಲಿಲ್ಲೋ ಏನೋ…” ಎಂದೆಲ್ಲ ಹೇಳಿ ಹಾಡಿನ ಪ್ರತಿಯನ್ನೂ, ಅನುಮತಿಯನ್ನೂ ಬೇಗ ಕಳಿಸುವಂತೆ ಮತ್ತೊಮ್ಮೆ ಕೇಳಿ ಫೋನ್ ಇಟ್ಟರು.

ಅದಕ್ಕೂ ಮೊದಲೇ, ಅಂದರೆ 1992ರಷ್ಟು ಹಿಂದೆಯೇ, ಬೆಂಗಳೂರಿನ ಆಕಾಶ್ ಆಡಿಯೋದವರು ಈ ಹಾಡುಗಳ ಒಂದು ಧ್ವನಿಸುರುಳಿಯನ್ನು ತಂದ ವಿಚಾರ, ಮತ್ತು 1996-97ರಲ್ಲಿ ನಾಗಾಭರಣ ನಿರ್ದೇಶನದಲ್ಲಿ ತಯಾರಾದ ‘ನಾಗಮಂಡಲ’ ಚಿತ್ರದಲ್ಲಿಯೂ ‘ಮಾಯಾದೋ ಮನದ ಭಾರ…’ ಹಾಡನ್ನು ಬಳಸಿಕೊಂಡದ್ದು ಗಿರೀಶರಿಗೆ ಗೊತ್ತಿತ್ತು.

ಅಷ್ಟೇ ಅಲ್ಲ, ಆ ಧ್ವನಿಸುರುಳಿಯಲ್ಲಿ ಆರಂಭಕ್ಕೆ ”ನಾನು ಗಿರೀಶ ಕಾರ್ನಾಡ. ನಾಗಮಂಡಲ ನಾನು ಬರೆದ ನಾಟಕ…” ಅಂತೆಲ್ಲ ಹೇಳುತ್ತಾ ಸಂಕೇತ್ ನಾಟಕ ತಂಡ, ಅದರ ಪ್ರಯೋಗಗಳು, ಶಂಕರ್ ನಾಗ್ ಮತ್ತು ತಮ್ಮ ಬಾಂಧವ್ಯ ಇತ್ಯಾದಿ ಕುರಿತು ಹೇಳಿದ್ದರು. ಆ ನಾಟಕಕ್ಕೆ ಸಂಗೀತ ಸಂಯೋಜಿಸಿದ್ದ ಸಿ. ಅಶ್ವಥ್ ಅವರ ಹೆಸರನ್ನೂ ಹೇಳಿದ್ದ ಗಿರೀಶರಿಗೆ ಅದು ‘ನಾಗಮಂಡಲ’ ಪ್ರಯೋಗಕ್ಕಾಗಿ ಬರೆದ ಹಾಡುಗಳ ಧ್ವನಿಸುರುಳಿ ಎಂಬ ವಿಷಯವೇ ಮರೆತಂತಿತ್ತು. ಹಾಡುಗಳ ರಚನೆ ಯಾರದೆಂಬ ಬಗ್ಗೆ ತಮ್ಮ ಮಾತಿನಲ್ಲಿ ಪ್ರಸ್ತಾಪಿಸುವ ಗೋಜಿಗೇ ಹೋಗಿರಲಿಲ್ಲ ಆ ಮಹಾರಾಯರು…

ಅಂಥ ಗಿರೀಶ ಕಾರ್ನಾಡ… ಜ್ಞಾನಪೀಠ ಪ್ರಶಸ್ತಿ ಪಡೆದ ‘ಧೀಮಂತ’ ನಾಟಕಕಾರ ಗಿರೀಶ ಕಾರ್ನಾಡ… ನನ್ನ ಒಂದು ಹಾಡನ್ನು ತಮ್ಮ ನಾಟಕದ ಪಠ್ಯದಲ್ಲಿ ಅಳವಡಿಸಿಕೊಳ್ಳಲು ಬಯಸಿದ್ದು ನನಗೆ ತಕ್ಷಣಕ್ಕೆ ಅಚ್ಚರಿಯುಂಟು ಮಾಡಿತಾದರೂ, ಎಲ್ಲೋ ಒಂದು ಕಡೆ ಹೆಮ್ಮೆಯೂ ಅನಿಸಿತು. ಅದೇ ಸಂತೋಷದಲ್ಲಿ ಹಾಡನ್ನು ಟೈಪ್ ಮಾಡಿ, ಹೈದರಾಬಾದಿನ ನನ್ನ ಮನೆಯ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನೀಡಿದೆ. ಜೊತೆಗೆ, ‘ಇದಕ್ಕಾಗಿ ನೀವು ನನಗೆ ನೀಡಬಹುದಾದ ಗೌರವಧನ ಎಷ್ಟು ದಯವಿಟ್ಟು ತಿಳಿಸಿರಿ?’ ಎಂಬ ಸಾಲನ್ನೂ ಸೇರಿಸಿ, ಹಾಡನ್ನು ಅವರಿಗೆ ಫ್ಯಾಕ್ಸ್ ಮಾಡಿದೆ.

ಆ ಸಂಜೆಯೇ ನನ್ನ ಮನೆಗೆ ಕಾರ್ನಾಡರು ಫೋನ್ ಮಾಡಿದರು.

”ನಿಮ್ಮ ಫ್ಯಾಕ್ಸ್ ಬಂತ್ರೀ… ಥ್ಯಾಂಕ್ಸ್. ಅಂದಂಗ, ಅದರಾಗ ನೀವು ಗೌರವಧನ ಅಂತ ಬರದೀರೆಲs… ಆ ವಿಚಾರ ಮಾತಾಡೋದಿತ್ತು,” ಅಂದವರೇ, ”ನೀವು ಎಷ್ಟು ಕೇಳ್ತೀರಿ?” ಅಂತ ಮತ್ತೊಂದು ಪ್ರಶ್ನೆ ಎಸೆದರು.

”ನಾನು ‘ಇಷ್ಟು’ ಅಂತ ಹೇಳೂದಿಲ್ಲಾ… ನೀವs ತಿಳದು ಏನ್ ಕೊಡತೀರೋ ಕೊಡ್ರಿ,” ಅಂದೆ.

”ಆತು, ನಾಳೆ ಮತ್ತ ಮಾತಾಡ್ತೀನಿ,” ಅಂತ ಫೋನ್ ಇಟ್ಟರು.

ಗಿರೀಶ ಕಾರ್ನಾಡ ಯಾವುದೇ ಒಂದು ಕೆಲಸಕ್ಕೆ ನಿಂತರೆ, ಅದು ಮುಗಿಯುವ ತನಕ ಬಿಡುವಂಥವರಲ್ಲ ಎಂಬುದು ನನ್ನ ಅನುಭವಕ್ಕೆ ಬಂದದ್ದು ಆಗಲೇ.

ಮರುದಿನ ಮತ್ತೆ ಅವರ ಫೋನು. ”ರಾಮ ಬಂದಿದ್ದ… ಮಾತಾಡಿದೆ. ನಿಮಗ ದೀಡ ಸಾವಿರ ಕೊಡಲಿಕ್ಕೆ ಅಡ್ಡಿ ಇಲ್ಲಾ ಅಂತ ಹೇಳಿದಾ…” ಅಂದರು. (ರಾಮ ಅಂದರೆ ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಶಿ. ದೀಡ ಸಾವಿರ ಅಂದರೆ ಒಂದೂವರೆ ಸಾವಿರ.)

”ಹಂಗs ಆಗ್ಲಿ,” ಅಂದೆ ನಾನು.

”ಅಂದಂಗ, ಇನ್ನೂ ಒಂದು ವಿಚಾರ…”

”ಹೇಳ್ರಿ…”

”ಈ ಹಾಡನ ‘ನಾಗಮಂಡಲ’ದ ಮುಂದಿನ ಎಲ್ಲಾ ಆವೃತ್ತಿಗಳ ಒಳಗೂ ಬಳಸಿಕೊಳ್ಳಿಕ್ಕೆ ಅಂತ ಈಗ ಈ ದೀಡ ಸಾವಿರ ರುಪಾಯಿ ನಾನು ಒಂದs ಮೊತ್ತದಾಗ ಕಳಸೂದು…”

”ಆಗ್ಲಿ…” ಅಂದೆ ನಾನು. ಅವರು ಥ್ಯಾಂಕ್ಸ್ ಹೇಳಿ ಫೋನಿಟ್ಟರು.

ಮರುದಿನ ಮತ್ತೆ ಅವರ ಫೋನು. ”ಕೊರಿಯರ್ ಮಾಡಿ ಡಿಡಿ ಕಳಿಸೀನಿ… ಮುಟ್ಟಿದ ಕೂಡ್ಲೇ ತಿಳಸ್ರಿ…”

ಅಂದಿನಿಂದ ಮುಂದೆ ಆರು ದಿನಗಳ ಕಾಲ ಎರಡೆರಡು ಸಲದಂತೆ ಫೋನ್ ಮಾಡಿ, ‘ಮುಟ್ಟಿತೇನು?’ ಅಂತ ಕೇಳುತ್ತಲೇ ಇದ್ದರು ಕಾರ್ನಾಡರು. ಅವರ ಅವಸರ ನೋಡಿ ಬಹುಶಃ ‘ನಾಗಮಂಡಲ’ದ ಐದನೆಯ ಆವೃತ್ತಿ ಮುದ್ರಣಕ್ಕೆ ಹೋಗುತ್ತಿರಬೇಕು ಎಂದುಕೊಂಡೆ.

ಅಂತೂ ಬಂತು ಅವರ ಕೊರಿಯರ್ರು. ತಲಪಿದೆ ಅಂತ ಅವರಿಗೆ ತಿಳಿಸಿಯೂ ಆಯಿತು.

ಆಗ ಅವರು ಬರೆದಿದ್ದ ಪತ್ರದ ಭಾಗಗಳ ಪ್ರತಿಯನ್ನು ನಿಮ್ಮ ಅವಗಾಹನೆಗಾಗಿ ಇಲ್ಲಿ ಕೊಡುತ್ತಿದ್ದೇನೆ.

 

ಇದಾದ ಮೇಲೆ ಅವರು ಗೌರವಧನದ ಡಿ.ಡಿ.ಯ ಸಂಖ್ಯೆ ಇತ್ಯಾದಿ ಬರೆದು, ‘ನಾಟಕದ ಮುಂದಿನ ಎಲ್ಲ ಪುನರ್ಮುದ್ರಣಗಳಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳಲು ಈ ಗೌರವಧನವನ್ನು ಒಂದೇ ಮೊತ್ತವಾಗಿ ಕಳಿಸುತ್ತಿದ್ದೇನೆ’ ಎಂಬುದನ್ನು ಒತ್ತಿ ಒತ್ತಿ ಹೇಳಿದ್ದರು.

 

-೦-೦-೦-೦-೦-

ಮುಂದೆ ಸರಿಸುಮಾರು ನಾಲ್ಕು ವರ್ಷಗಳ ತನಕ ಅಂದರೆ, 2008ರ ವರೆಗೆ, ನಾನು ಆ ಬಗ್ಗೆ ತಲೆ ಕೆಡಿಸಿಕೊಂಡಿರಲೇ ಇಲ್ಲ. ಹಾಕಿಕೊಂಡರೆ ತಿಳಿಸುತ್ತಾರೆ ಬಿಡು ಎಂದು ಸುಮ್ಮನುಳಿದುಬಿಟ್ಟೆ. ಒಮ್ಮೆ ಕಾರ್ಯನಿಮಿತ್ತ ಧಾರವಾಡದಿಂದ ಹೈದರಾಬಾದಿಗೆ ಬರುತ್ತಿದ್ದ ನನ್ನ ಸಂಬಂಧಿಯೊಬ್ಬರು, ‘ಇಲ್ಲಿಂದ ಏನಾದರೂ ತರೋದದ ಏನು?’ ಅಂತ ಕೇಳಿದರು. ‘ಫೇಡೆ ಅಂತೂ ತಂದs ತರ್ತಿ… ಅದರ ಜೊತೀಗೆ ‘ನಾಗಮಂಡಲ’ ನಾಟಕದ ಇತ್ತೀಚಿನ ಆವೃತ್ತಿ ಖರೀದಿ ಮಾಡಿಕೊಂಡು ಬಾ…’ ಅಂತ ಹೇಳಿದೆ.

‘ನಾಗಮಂಡಲ’ದ ಪ್ರತಿ ಅವರು ತಂದ ಫೇಡೆಯಷ್ಟೇ ಆಪ್ಯಾಯವೆನಿಸಿತು. 2005ರ ಆವೃತ್ತಿ ಅದು. ಬದಲಾದ ಆಕಾರ, ಸುಂದರ ರಕ್ಷಾಕವಚಗಳ ಜೊತೆ ಒಳಗೆ ಮೊದಲ ಪುಟದಲ್ಲಿ ನಾಟಕದ ಶೀರ್ಷಿಕೆಯ ಕೆಳಗೆ ಬ್ರಾಕೆಟ್ಟಿನಲ್ಲಿ ‘ಹೊಸ ಸಂಸ್ಕರಣ’ ಎಂಬ ಒಕ್ಕಣೆ ಇತ್ತು. ಹಾಗೆಯೇ ಪುಟ ತಿರುವಿದೆ.

ಮುಂದೆ ಎಲ್ಲ ಅದೇ ಸರಕು. ಸಂಪಾದಕರ ಮಾತು, ಕೃತಜ್ಞತೆಗಳು ಇತ್ಯಾದಿ ಎಲ್ಲ ಮೊದಲ ಆವೃತ್ತಿಗೆ ಬರೆದದ್ದೇ… ಬಹುಶಃ ನನ್ನ ಹಾಡನ್ನು ಹಾಕಿಕೊಂಡಿರಲಿಕ್ಕಿಲ್ಲ ಅಂದುಕೊಂಡೇ ಓದತೊಡಗಿದೆ.

ಏಳನೆಯ ಪುಟ ಬಂದಾಗ ತಡೆದು ನಿಂತೆ. ಅಲ್ಲಿ ‘ಕತೆ’ಯ (ಅದು ಪಾತ್ರ) ಮಾತು ಆರಂಭವಾಗುವುದೇ ‘ಮಾಯಾದೋ ಮನದ ಭಾರ… ತಗಧಾಂಗ ಎಲ್ಲ ದ್ವಾರ…’ ಎಂಬ ಸಾಲುಗಳಿಂದ !… (ಅದಕ್ಕೂ ಮೊದಲಿನ ಆವೃತ್ತಿಯಲ್ಲಿ ಅದು ಹೀಗೆ ಆರಂಭವಾಗಿರಲಿಲ್ಲ.) ಕೂಡಲೇ ನಾನು ಪೂರ್ವಾರ್ಧದ ಕೊನೆಯ ಪುಟ ತೆರೆದೆ. ಅದು ರಾಣಿ ಮತ್ತು ನಾಗಪ್ಪ ಇಬ್ಬರ ಸಮಾಗಮದ ಸನ್ನಿವೇಶ. ನಾನು ಪ್ರಯೋಗಕ್ಕಾಗಿ ಹಾಡನ್ನು ಬರೆದದ್ದೂ ಅದೇ ಸನ್ನಿವೇಶಕ್ಕಾಗಿ…

ಕಾರ್ನಾಡರು ನನ್ನ ‘ಮಾಯಾದೋ ಮನದ ಭಾರ…’ ಹಾಡನ್ನು ಅಲ್ಲಿ ಅಳವಡಿಸಿಕೊಂಡಿದ್ದರು.

ಮತ್ತೆ ನಾನು ಮೊದಲ ಪುಟಗಳಿಗೆ ಬಂದೆ. ಆ ಹಾಡಿನ ರಚನಕಾರನೆಂದು ಅಲ್ಲೆಲ್ಲಾದರೂ ನನ್ನ ಹೆಸರನ್ನು ಹಾಕಿದ್ದರೆಯೇ ಅಂತ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಹುಡುಕಿದೆ. ಊಹೂಂ… ಕಾರ್ನಾಡರು ಕೊಟ್ಟ ಮಾತಿಗೆ ತಪ್ಪಿದ್ದರು. ನನ್ನ ಹೆಸರನ್ನು ಅವರು ಕೃತಜ್ಞತೆಗಳಲ್ಲಿ ನಮೂದಿಸಿರಲೇ ಇಲ್ಲ.

ಆ ಬಗ್ಗೆ ಕಾರ್ನಾಡರಿಗೆ ಬರೆಯಲೇ ಅಂತ ಅನೇಕ ಸಲ ಅಂದುಕೊಂಡೆ. ಆದರೆ, ಒಂದಿಲ್ಲೊಂದು ಕೆಲಸ ಅಡ್ಡ ಬಂದು ಬರೆಯಲು ಆಗಿರಲೇ ಇಲ್ಲ…

-೦-೦-೦-೦-೦-

2008ರಲ್ಲಿ ಒಮ್ಮೆ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆಂದು ಧಾರವಾಡಕ್ಕೆ ಹೋಗಬೇಕಾಯಿತು. ಅವತ್ತೇ ಬೆಳಿಗ್ಗೆ ಅಲ್ಲಿಯ ಕರ್ನಾಟಕ ಕಾಲೇಜಿನಲ್ಲಿ ಗಿರೀಶ ಕಾರ್ನಾಡರ ‘ಸಮಗ್ರ ನಾಟಕ ಸಂಪುಟ’ದ ಬಿಡುಗಡೆ ಕಾರ್ಯಕ್ರಮ. ಹೋದರೆ ಕಾರ್ನಾಡರೊಂದಿಗೆ ಮುಖತಃ ಮಾತಾಡಬಹುದು ಅಂದುಕೊಂಡೆನಾದರೂ, ಅವರೊಂದಿಗೆ ಆಗ ಮಾತು ಸಾಧ್ಯವಾಗಲಿಕ್ಕಿಲ್ಲ, ‘ಈ ಎಲ್ಲ’ ಮಾತು ಅಲ್ಲಿ ಆಡುವುದೂ ಸಾಧುವಲ್ಲ ಅಂತ ಸುಮ್ಮನುಳಿದುಬಿಟ್ಟೆ. ಅಂದು ಮಧ್ಯಾಹ್ನ ಕಳೆದ ಮೇಲೆ, ಅವರು ಸಿಕ್ಕೇ ಸಿಗಬಹುದೆಂಬ ಭರವಸೆ ಇಟ್ಟುಕೊಂಡು ಮನೋಹರ ಗ್ರಂಥ ಮಾಲೆಯ ‘ಅಟ್ಟ’ಕ್ಕೆ ಹೋದೆ. ಗಿರೀಶರು ಅವತ್ತು ಕಾರ್ಯಕ್ರಮ ಮುಗಿದ ಕೂಡಲೇ ಮುಂಬಯಿಗೆ ಪ್ರಯಾಣ ಬೆಳೆಸಿದ್ದರು. ನನಗಲ್ಲಿ ಸಿಕ್ಕವರು ರಮಾಕಾಂತ ಜೋಶಿ. ಅವರು ‘ಸಮಗ್ರ ನಾಟಕ ಸಂಪುಟ’ ಬಿಡುಗಡೆ ಸಂಭ್ರಮದ ಗುಂಗಿನಲ್ಲಿಯೇ ಇದ್ದರು.

ನಾನು ಸುಮ್ಮನೇ ಆ ‘ಸಂಪುಟ’ದ ಪುಟಗಳನ್ನು ತಿರುವುತ್ತ ಕೂತೆ.

‘ಸಮಗ್ರ’ ಸಂಪುಟ ಅಂದ ಮೇಲೆ ಅದರಲ್ಲಿ ‘ನಾಗಮಂಡಲ’ ಇರಲೇಬೇಕಲ್ಲ… ಅಲ್ಲಿ ನನ್ನ ಹಾಡು ಮತ್ತು ಹೆಸರು ಇರಲೇಬೇಕಲ್ಲ…

ಹೌದು. ಅದರ 439ನೆಯ ಪುಟದಲ್ಲಿ ನನ್ನ ಹಾಡೂ ಇತ್ತು. ಮತ್ತೆ ಆ ನಾಟಕದ ಆರಂಭಿಕ ಪುಟಗಳಿಗೆ ಬಂದೆ. ಈ ‘ಸಮಗ್ರ’ದಲ್ಲಿಯೂ ಅದೇ ಕತೆ. ಕೃತಜ್ಞತೆಗಳು ಇತ್ಯಾದಿ ಎಲ್ಲ ಮೊದಲ ಆವೃತ್ತಿಗೆ ಬರೆದದ್ದೇ… ಹೊಸದಾಗಿ ಸೇರಿದ್ದೆಂದರೆ ‘ಸಮಗ್ರ ಸಂಪುಟ’ದ ಬಗ್ಗೆ ಸಂಪಾದಕರ ಮಾತುಗಳು, ಅಷ್ಟೇ.

ಊಹೂಂ… ಅಲ್ಲಿಯೂ ನನ್ನ ಹೆಸರು ಗಾಯಬ್…

ಅದು ‘ಸಮಗ್ರ ನಾಟಕ ಸಂಪುಟ’…! ಹಲವು ದಶಕಗಳಷ್ಟು ಕಾಲ ಆಕರ ಗ್ರಂಥವಾಗಿ ನಿಲ್ಲುವಂಥದ್ದು. ಅಂಥ ಗ್ರಂಥದಲ್ಲಿ ಏನೇ ತಪ್ಪು-ಒಪ್ಪುಗಳಿದ್ದರೂ ಅವು ಶಾಶ್ವತವಾಗಿ ಉಳಿಯುವಂಥವೆ… ಅಂದರೆ, ನಾನು ಬರೆದ ಹಾಡು ಅಲ್ಲಿ ಗಿರೀಶರ ನಾಟಕದ ಒಂದು ಭಾಗವಾಗಿ, ಅವರೇ ಬರೆದದ್ದು ಎಂಬ ಭಾವನೆ ಮೂಡಿಸುವಂತೆ, ರಾರಾಜಿಸುತ್ತಿದೆ….! ಬಿಡಿ ಪ್ರತಿಯಲ್ಲೂ ಅಷ್ಟೇ. (ಸುನಿಲ್ ರಾವ್ ಅವರಿಗೆ ಈ ಕಾರಣದಿಂದಲೇ ಆ ಪ್ರಶ್ನೆ ಎದುರಾದದ್ದು…)

ನಾನು ಸುಮ್ಮನೇ ‘ಸಂಪುಟ’ವನ್ನು ಮುಚ್ಚಿ ಬದಿಗಿರಿಸಿದೆ. ಅಲ್ಲಿಯೇ ಕೂತಿದ್ದ ರಮಾಕಾಂತರಿಗೆ ‘ನಾನೇನನ್ನು’ ನೋಡುತ್ತಿದ್ದೆ ಎಂಬುದು ಗೊತ್ತಾಗದೆ ಇದ್ದೀತೇ…? ಆದರೂ, ಅವರೊಡನೆ ಆ ಬಗ್ಗೆ ಏನೊಂದನ್ನೂ ಕೇಳಲಿಲ್ಲ. ಅವರೊಡನೆ ಬೇರೇನೋ ಮಾತುಗಳನ್ನಾಡಿ, ಒಂದೆರಡು ಪುಸ್ತಕಗಳನ್ನು ಖರೀದಿಸಿ, ಅಟ್ಟವನ್ನಿಳಿದು ಬಂದೆ.

ಹೈದರಾಬಾದಿಗೆ ವಾಪಸಾಗಿ ಕೆಲವು ದಿನಗಳಾದ ಮೇಲೆ, ದಿ. 18-04-2008ರಂದು, ಕಾರ್ನಾಡರಿಗೆ ಒಂದು ಕಾಗದ ಬರೆದೆ.

ಹಿರಿಯರಾದ ಶ್ರೀ ಗಿರೀಶ ಕಾರ್ನಾಡ ಅವರಿಗೆ, ವಂದನೆಗಳು.

ಮೊನ್ನೆ ಅಕಸ್ಮಾತ್ತಾಗಿ ‘ನಾಗಮಂಡಲ’ ನಾಟಕದ 2005ರ ಆವೃತ್ತಿ ಮತ್ತು ಗಿರೀಶ ಕಾರ್ನಾಡ : ಸಮಗ್ರ ನಾಟಕ ಸಂಪುಟಗಳು ನೋಡಲು ಸಿಕ್ಕವು. ಕುತೂಹಲದಿಂದ ಪುಟ ತಿರುವಿದೆ.

‘ನಾಗಮಂಡಲ’ ನಾಟಕದ 2005ರ ಆವೃತ್ತಿ ‘ಹೊಸ ಸಂಸ್ಕರಣ’ ಎಂಬ ಘೋಷಣೆ , ಸುಂದರ ಮುಖಪುಟ ಮತ್ತು ಆಕಾರ ಹೊತ್ತು ಹೊರಬಂದಿದೆ. ಅದರ 31ನೆಯ ಪುಟದಲ್ಲಿ ನನ್ನ ಹಾಡೂ (ಮಾಯಾದೋ ಮನದ ಭಾರ…) ಪ್ರಕಟವಾಗಿದೆ.

ಇನ್ನು ಗಿರೀಶ ಕಾರ್ನಾಡ : ಸಮಗ್ರ ನಾಟಕ ಸಂಪುಟದ 439ನೆಯ ಪುಟದಲ್ಲೂ ನನ್ನ ಹಾಡನ್ನು (ಮಾಯಾದೋ ಮನದ ಭಾರ…) ಹಾಕಿಕೊಂಡಿದ್ದೀರಿ.

ಆದರೆ, ಈ ಎರಡೂ ಕೃತಿಗಳಲ್ಲಿ ತಪ್ಪಿ ಕೂಡ ಎಲ್ಲಿಯೂ ನನ್ನ ಹೆಸರು ಕಾಣಿಸದಿದ್ದದ್ದು ಸಖೇದಾಶ್ಚರ್ಯಕರ ಸಂಗತಿ.

‘ಹೊಸ ಸಂಸ್ಕರಣ ‘ದಲ್ಲಿ ಮರೆತಿದ್ದರೂ, ಅದಾಗಿ ಮೂರು ವರ್ಷಗಳ ನಂತರದಲ್ಲಿ ಪ್ರಕಟವಾದ ಸಮಗ್ರ ನಾಟಕ ಸಂಪುಟದಲ್ಲಾದರೂ ನನ್ನ ಹೆಸರನ್ನು ನೀವು ಹಾಕಬಹುದಿತ್ತು. ಬಹುಶಃ ಈ ‘ಸಣ್ಣ ವಿಚಾರ’ತಮ್ಮ ಗಮನಕ್ಕೆ ಬಂದಿರಲಿಕ್ಕಿಲ್ಲ.

-ಎಂದು ಆರಂಭಿಸಿ, ಅವರು ನನ್ನಿಂದ ಅನುಮತಿ ಪಡೆಯುವಾಗ ತೋರಿಸಿದ್ದ ‘ಮುತುವರ್ಜಿ’, ನನ್ನಿಂದ ಅನುಮತಿ ಪಡೆದಾದ ಮೇಲೆ ‘ನಿಷ್ಕಾಳಜಿ’ಯಾಗಿ ಮಾರ್ಪಟ್ಟದ್ದರ ಬಗ್ಗೆ ಬರೆದಿದ್ದೆ. ಆ ನಂತರ –

ನನ್ನ ಹಾಡಿಗೆ ಮತ್ತೆಂದೂ ಇಂಥ ಪರದೇಶಿತನ ಮತ್ತು ಅನಾಥತೆಗಳು ಕಾಡದಿರಲಿ ; ಆ ಕೊರಗು ನನಗೆ ಉಂಟಾಗದೇ ಇರಲಿ ಎಂಬ ಕಾರಣದಿಂದ , ನನ್ನ ‘ಮಾಯಾದೋ ಮನದ ಭಾರ …’ ಹಾಡನ್ನು ‘ನಾಗಮಂಡಲ ‘ ನಾಟಕ ಕೃತಿಯ ಮುಂದಿನ ಎಲ್ಲ ಮರುಮುದ್ರಣಗಳಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳಲು ನಾನು 2004ನೆಯ ವರ್ಷದಲ್ಲಿ ನೀಡಿದ್ದ ಕಾಯಂ ಅನುಮತಿಯನ್ನು ಈ ಮೂಲಕ ‘ಕಾಯಮ್ಮಾಗಿ ಹಿಂದಕ್ಕೆ’ ಪಡೆಯುತ್ತಿದ್ದೇನೆ .

-ಎಂದು ಬರೆದು, ಆಗಲೇ ಆಗಿಹೋದ ತಪ್ಪನ್ನು ಸರಿಪಡಿಸುವ ಹೊಣೆಯನ್ನು ಅವರ ಮೇಲೆಯೇ ಹೊರಿಸಿ, ಅವರು ನನಗೆ ಕಳಿಸಿದ್ದ ಗೌರವಧನದ ಹಣವನ್ನು ವಾಪಸ್ ಮಾಡುವ ಉದ್ದೇಶದಿಂದ, ಸಿಂಡಿಕೇಟ್ ಬ್ಯಾಂಕಿನ ಚೆಕ್ (ಸಂಖ್ಯೆ 487750) ಮತ್ತು ನನಗೆ ಅವರು ಹಿಂದೆ ಬರೆದಿದ್ದ ಪತ್ರದ ನಕಲನ್ನೂ ಒಳಗೊಂಡ ಪತ್ರವನ್ನು ಅವರಿಗೆ ರವಾನಿಸಿದೆ.

-0-0-0-0-0-

ಮುಂದೆ ಎರಡೇ ದಿನಗಳಲ್ಲಿ ಕಾರ್ನಾಡರಿಂದ ನನಗೊಂದು ಕುರಿಯರ್ ಬಂತು. ಅವರು ನನ್ನ ಪತ್ರವನ್ನು ಸರಿಯಾಗಿ ಓದಿರಲಿಲ್ಲವೆಂಬುದು ಮೇಲ್ನೋಟಕ್ಕೇ ಅರ್ಥವಾಗುತ್ತಿತ್ತು.

ಒಂದು ವೇಳೆ ಅವರು ಆವೃತ್ತಿಯಲ್ಲಿ ನನ್ನ ಹೆಸರನ್ನು ಸ್ಮರಿಸಿದ್ದಿದ್ದರೆ ಈ ಅಸಮಾಧಾನಕ್ಕೆ ಕಾರಣವೇ ಇರುತ್ತಿರಲಿಲ್ಲ. ಅವರಿಂದ ಎರಡೆರಡು ಸಲ ನಾನು ಉಪೇಕ್ಷಿಸಲ್ಪಟ್ಟೆ. ಹಾಗಾಗಿಯೇ ನಾನು ಅವರಿಗೆ ಕಾಗದ ಬರೆದು, ಕೊಟ್ಟಿದ್ದ ಅನುಮತಿಯನ್ನು ವಾಪಸ್ ಪಡೆಯಬೇಕಾಯಿತು. ಆದರೆ, ತಮ್ಮಿಂದ ‘ಏನೂ ಆಗಿಯೇ ಇಲ್ಲ’ವೆಂಬಂತೆ ತೋರಿಸಿಕೊಳ್ಳುವ ಭರದಲ್ಲಿ ಕಾರ್ನಾಡರು ಸಮಗ್ರ ಸಂಪುಟದಲ್ಲಾದ ತಪ್ಪಿನ ಹೊಣೆಯನ್ನು ಪ್ರಕಾಶಕರ ಮೇಲೆ ಹಾಕಿ ತಣ್ಣಗೆ ಕೂತುಬಿಟ್ಟರು. ಮತ್ತು, ಸಮಗ್ರ ಸಂಪುಟದ ಮುಂದಿನ ಆವೃತ್ತಿಯಲ್ಲಿ ಆ ತಪ್ಪನ್ನು ಸರಿಪಡಿಸುವುದಾಗಿ ಪ್ರಕಾಶಕರು ಹೇಳಿದ್ದಾರೆಂದೂ ಪತ್ರದಲ್ಲಿ ನಮೂದಿಸಿದರು. ಆ ಪತ್ರದ ಮುಂದಿನ ಭಾಗದಲ್ಲಿ ಕಾರ್ನಾಡರು ಬರೆದಿರುವುದನ್ನು ನೀವೇ ನೋಡಿ :

ಹೀಗೆ ‘ಅಭಿವಚನ’ ನೀಡಿದ್ದ ಮಾನ್ಯ ಗಿರೀಶ ಕಾರ್ನಾಡರು ಇದೀಗ ಮತ್ತೆ ‘ವಚನಭಂಗ’ ಮಾಡಿದ್ದಾರೆಂಬ ಅಂಶ ನನ್ನ ಗಮನಕ್ಕೆ ಬಂದದ್ದು ಸುನಿಲ್ ರಾವ್ ಅವರ ಪ್ರತಿಕ್ರಿಯೆಯ ಕಾರಣದಿಂದ.

ಕೂಡಲೇ ನಾನು ‘ನಾಗಮಂಡಲ’ ನಾಟಕದ ಇತ್ತೀಚಿನ ಆವೃತ್ತಿಯನ್ನು (2012) ಖರೀದಿಸಿ ನೋಡಿದೆ. ಇದಕ್ಕೂ ಹಿಂದಿನ ಆವೃತ್ತಿಯಲ್ಲೂ (2009) ನನ್ನ ಹಾಡು ಇರುವುದನ್ನು ಗೆಳೆಯರೊಬ್ಬರು ದೃಢಪಡಿಸಿದರು.

ಅಂದರೆ, ನಮ್ಮ ‘ಹೆಮ್ಮೆ’ಯ ನಾಟಕಕಾರ ಗಿರೀಶ ಕಾರ್ನಾಡರು, ಕೊಟ್ಟ ವಚನವನ್ನು ಮರೆತು, ಯಾವ ಎಗ್ಗೂ ಇಲ್ಲದೆ ನನ್ನ ಹಾಡನ್ನು ‘ನಾಗಮಂಡಲ’ ನಾಟಕದ ಪಠ್ಯದಲ್ಲಿ ಅಳವಡಿಸಿಕೊಳ್ಳುತ್ತಲೇ ಸಾಗಿದ್ದಾರೆ ಎಂದಾಯಿತು.

‘ಮಾಯಾದೋ ಮನದ ಭಾರ…’ ಹಾಡನ್ನು ಬಳಸಿಕೊಳ್ಳಲು ಅನುಮತಿ ಸಿಕ್ಕಾಗ ಕಾರ್ನಾಡರು ‘ಈ ಹಾಡಿನ ಬಳಕೆಯಿಂದ ನಾಟಕದ ಶೋಭೆ ಇಮ್ಮಡಿಸಿದೆ ಎಂಬುದರಲ್ಲಿ ಸಂದೇಹವಿಲ್ಲ,’ ಎಂದು ಬರೆದಿದ್ದರು.

ಆದರೆ, ಆ ಹಾಡನ್ನು ಬಳಸಿಕೊಳ್ಳಲು ಕಾರ್ನಾಡರಿಗೆ ಅನುಮತಿ ಇತ್ತ ಮೇಲೆ ನನ್ನ ಮನದ ಕ್ಷೋಭೆ ಹೆಚ್ಚಿರುವುದಂತೂ ನಿಜ.

73 Comments

Add a Comment

Your email address will not be published.

Sharing Buttons by Linksku