Quantcast

ರವಿ ಮೂರ್ನಾಡು ಇನ್ನಿಲ್ಲ …

ಅವಧಿಯ ಪ್ರೀತಿಯ ಓದುಗರೂ, ಬರಹಗಾರರೂ ಆಗಿದ್ದ ರವಿ ಮೂರ್ನಾಡು ಅವರ ನಿಧನದ ಸುದ್ದಿ ಕೇಳಿ ಅವಧಿಯೂ ಆಘಾತದಲ್ಲಿದೆ ….

ಅವರ ಪತ್ನಿ ಮತ್ತು ಮಗನ ನೋವಿನಲ್ಲಿ ಅವಧಿಯೂ ಭಾಗಿ… ಅವರ ಒಂದು ಬರಹ ಅವರ ನೆನಪಿನೊಂದಿಗೆ …

ಪೆಟ್ಟಿಗೆಗೆ ಎಲ್ಲಾ ತುಂಬಿಸಿದ್ದೇನೆ. ಈ ಫೋಟೋ ಇಟ್ಟಿದ್ದೇನೆ..

ಹಗಲು-ರಾತ್ರಿಯ ರೆಕ್ಕೆ

-ರವಿ ಮೂರ್ನಾಡು

ಮಗ ದೊಡ್ಡವನಾಗಿರಬಹುದು. ಬರುವಾಗ ಮೂರು ತಿಂಗಳ ಹಾಲುಗಲ್ಲದ ಮಗು. ವರ್ಷ 5 ಆಯಿತ್ತಲ್ಲ !. ಮುಂಜಾನೆ 5 ಗಂಟೆಗೆ ಅದೊಂದು ಶನಿವಾರ ಹೊರಟಿದ್ದೆ. ಕನಸು ನಿದ್ದೆಯಲ್ಲಿ ಕಾಣದ ದೇವರೊಂದಿಗೆ ನಗುತ್ತಾ ಮಲಗಿತ್ತು. ಕೆನ್ನೆ- ಹಣೆಯಲ್ಲಿ ಅತ್ತಿತ್ತ ಹೊರಳಾಡಿ ಕಾಡಿಗೆಯೂ ಚಿತ್ತಾರ ಬಿಡಿಸಿತ್ತು. ಬೆಣ್ಣೆಯಂತ ಕೆನ್ನೆಗೆ, ಚದುರಿದ್ದ ಕೂದಲ ನೇವರಿಸಿ ಹಣೆಗೆ ಒರಟು ತುಟಿಗಳಿಂದ ಮುತ್ತಿಟ್ಟಿದ್ದೆ. ಎಚ್ಚರವಾಗಲಿಲ್ಲ. ಅಯ್ಯೋ. ನೊಣಗಳು ಹಾರಾಡುತ್ತಿದ್ದವು ! ಕೈಗಳ ಗಾಳಿಯಾಡಿಸಿ ಹಾಲ್ದುಟಿಗೆ ಕೂರದಂತೆ ಓಡಿಸಿದ್ದೆ. ಅಹಾ..! ರಾತ್ರಿ ಬಳಿದಿದ್ದ ಬೇಬಿ ಜಾನ್ಸನ್‍ ಪೌಡರು, ಅವಳು ಕುಡಿಸಿದ್ದ ಹಾಲಿನ ಪರಿಮಳ ಹಾಗೇ ಬೀಸುತ್ತಿದೆ. ” ಮಗುವನ್ನು ಚೆನ್ನಾಗಿ ನೋಡಿಕೋ”. ಆ ಕ್ಷಣ ಬಾಗಿದ ಸ್ವರ ಮನಸ್ಸಿನೊಳಗೆ ಮಗುವಾಗುತ್ತಿದೆ.

ಅಡುಗೆ ಕೋಣೆಯಲ್ಲಿ ಕಾಫಿ ಪಾತ್ರೆ ಕುದಿಯುತ್ತಿತ್ತು. ಕೋಣೆ ತುಂಬಾ ನೀರವ ಮೌನ, ವಯಸ್ಸಾದ ಅತ್ತೆಯ ಹೊದಿಕೆಯೊಳಗೆ ಎರಡು ಕೆಮ್ಮಲು ಧ್ವನಿ ದಿಗಿಲು ಹುಟ್ಟಿಸುತ್ತಿವೆ. ಬಾಡಿದ ತಿಳಿ ಬೆಳಕಿನಲ್ಲಿ ಮುಖ ನೋಡಿದ್ದೆ. ಕಾಫಿ ಸುವಾಸನೆಯನ್ನು ಕೋಳಿ ಕೂಗಿನೊಂದಿಗೆ ಹೀರುತ್ತಿದ್ದಾಗ, ದೇವರ ನಂದಾ ದೀಪಕೆ ಕೈ ಮುಗಿಯುತ್ತಿದ್ದಳು. ಸಾಲು ದೇವರುಗಳು, ಗಣಪತಿ,ರಾಜರಾಜೇಶ್ವರಿ ಭಾವ ಚಿತ್ರಗಳು. ಹಿಂದಿನ ದಿನ ಮಲ್ಲಿಗೆಯ ಮಾಲೆ ಪೋಣಿಸಿ ಹಾಕಿದ್ದಳು. ಬಾಡಿರಲಿಲ್ಲ ಕೈಯ ಸ್ಪರ್ಶಗಳಿಗೆ ದೇವರುಗಳ ಮಂದಸ್ಮಿತ ಮುಖಗಳು. ಗಾಢ ಮೌನದ ತದೇಕ ದೃಷ್ಟಿಯ ಮುಖ ನನ್ನನ್ನೇ ನೋಡುತ್ತಿತ್ತು.

” ಯಾವಾಗ ಬರುತ್ತೀರಿ ?”

ಬರುತ್ತೇನೆ….ಓಡೋಡಿ ಬರುತ್ತೇನೆ. ಸ್ವರವಿಲ್ಲದ ಗಂಟಲಿಗೆ ಭಾರವಾದ ತಲೆ ಆಡಿತು.

” ಯಾರೊಂದಿಗೆ ಹೆಚ್ಚು ಮಾತಾಡಬೇಡಿ, ಕೆಟ್ಟ ಅಭ್ಯಾಸ ಬೆಳೆಸಿಕೊಳ್ಳಬೇಡಿ”

ಆಯಿತು, ಮಾತಾಡಲಿಲ್ಲ. ಅಭ್ಯಾಸವಂತೂ ನಿನ್ನ ನೆನಪಿನಲ್ಲಿ ದೂರವಿದೆ.

” ಸಮಯಕ್ಕೆ ತಕ್ಕಂತೆ ಚೆನ್ನಾಗಿ ಊಟ ಮಾಡಿ, ನಿದ್ದೆಗೆಡಬೇಡಿ”

ದೇವರ ತಿಲಕ ಹಣೆಗಿಡುವಾಗ ಕೈ ಬಳೆ ಸದ್ದಾಗುತ್ತಿತ್ತು. ಗೊತ್ತಿಲ್ಲದ ಹನಿಗಳು ಕೆನ್ನೆಯನ್ನು ಚುಂಬಿಸಿದವು. ತೋಳ ತೆಕ್ಕೆಯೊಳಗೆ ಬಿಡಲಾರದ ಕಣ್ಣೀರ ಬಿಸುಪು ಅಂಗಿಯನ್ನು ಒದ್ದೆ ಮಾಡಿದ್ದವು.

“ಪೆಟ್ಟಿಗೆಗೆ ಎಲ್ಲಾ ತುಂಬಿಸಿದ್ದೇನೆ. ಈ ಫೋಟೋ ಇಟ್ಟಿದ್ದೇನೆ.”

ಅದೇ ಈಗಲೂ ಜೀವ ತುಂಬಿದ್ದು. ಕೋಣೆಯ ಟೇಬಲ್ಲಿನಲ್ಲಿ ಬೆಳಿಗ್ಗೆ ಕೆಲಸಕ್ಕೆ ಹೊರಡುವಾಗ ನನ್ನನ್ನೇ ಬಾಗಿಲವರೆಗೆ ಬೀಳ್ಕೂಡುತ್ತೀರಿ. ಸಂಜೆ ಬಾಗಿಲಿನಿಂದಲೇ ಬರಮಾಡುತ್ತೀರಿ. ಒಂಟಿ ನೀರವ ಕ್ಷಣಗಳಿಗೆ ಗೋಡೆಯಲ್ಲೆಲ್ಲಾ ನಿಮ್ಮದೇ ಮುಖಗಳು. ಊಟದ ತಟ್ಟೆಯಲ್ಲಿ ನಿಮ್ಮದೇ ಬೆರಳ ಸ್ಪರ್ಶಗಳು. ಅಸ್ತವ್ಯಸ್ಥ ಮನಸ್ಸಿನ ಕಿಟಕಿಗಳಲ್ಲಿ ಉಸಿರ ಸದ್ದುಗಳು. ಬೀಸುವಾಗಲೆಲ್ಲಾ ಕೋಣೆ ಕಿಟಕಿಯ ಪರದೆಗಳು ಮೆಲ್ಲನೇ ತೆರೆದು ನೋಡುತ್ತವೆ. “ಹೇಗಿದ್ದೀರಿ?” ಗಾಳಿಯೊಂದಿಗೆ ಸ್ವರ ಸೇರಿಸುತ್ತವೆ. ಪಟ್ಟಣದ ಬೀದಿಗೆ ಸುತ್ತಾಡುವಾಗಲೂ ಮಗ ಬೆರಳಿಡಿದು, ಅಂಗಡಿ-ಬಜಾರುಗಳಲ್ಲಿ ” ಅದು ಯಾಕ್ರೀ, ಇದು ಯಾಕ್ರೀ?” ಎಂದು ಕೊರಳ ಕೊಂಕಿಸಿ ಕಾಡಿಗೆ ಹುಬ್ಬೇರಿಸಿ ಪ್ರಶ್ನಿಸಿದ ಮಾತುಗಳು ಹಿತವೆನಿಸುತ್ತವೆ.

ಪಟ್ಟಿಗೆ ಹೊತ್ತು ಮೆಟ್ಟಿಲ ಮೇಲೆ ಹೆಜ್ಜೆಗಳನ್ನಿಡುವಾಗ ತಿರುಗಿ ನೋಡಿದ್ದೆ. ಮನೆಯ ದೇವರ ದೀಪದ ಬೆಳಕಿಗೆ ಅಲ್ಲಲ್ಲಿ ಕಣ್ಣು ಬಿಟ್ಟ ಮನೆ ಅಂಚುಗಳು ಕಾಣುತ್ತಿತ್ತು. ಊದುಬತ್ತಿಯ ಸುವಾಸನೆಯನ್ನು ಹೀರುತ್ತಿದ್ದ ಹೊರಗಿನ ಗಾಳಿಗೆ ನಿಟ್ಟುಸಿರ ಸದ್ದು. ಅಲ್ಲೇ ಸಾಗಿದ ನಮ್ಮಿಬ್ಬರ ಅಂತರಕೆ ಸೋತು, ಬಾಗಿಲಿಗೆ ತಲೆಯಾನಿಸಿ ಕೈಬೀಸುತ್ತಲೇ ಇದ್ದಳು. ಮಗು ಅಳುತ್ತಿರುವ ಸ್ವರ ” ಹುಂಗ್ಯಾ… ಹುಂಗ್ಯಾ….”. ಮಗು ಎಚ್ಚರವಾಯಿತು. ನನ್ನ ನೆನಪಾಯಿತೇ !?… ಪಟ್ಟಿಗೆ ಕೆಳಗಿಟ್ಟು ತಿರುಗಿ ಎರಡು ಹೆಜ್ಜೆಗೆ ಮೆಟ್ಟಿಲಿಳಿದಿದ್ದೆ. ತಕ್ಷಣ ಅವಳ ಮಾತು ತಡೆದವು. ” ಹೊರಟ ಮೇಲೆ, ಕಾರ್ಯ ಮುಗಿಯದೆ ನುಗ್ಗಬಾರದು” ಒಂದಷ್ಟು ನಿಮಿಷ ಮಗುವಿನ ಅಳು ಮನದೊಳಗೇ ತುಂಬಿಕೊಂಡವು. ಭಾರಗಳು ಹೆಜ್ಜೆಗೆ ಜೋತು ಬಿದ್ದು ಬಸ್‍ ನಿಲ್ದಾಣಕ್ಕೆ ಹೊರಟವು.

ಈಗ ಪಪ್ಪಾ ಅಂತ ಕರೆಯುತ್ತಾನೆ. ಮೊನ್ನೆ ಮಾತಾಡಿದ್ದ,

” ಪಪ್ಪಾ ಕಳೆದ ವಾರ ಬರುತ್ತೇನೆ ಅಂದಿದ್ದೆ, ಯಾಕೆ ಬರಲಿಲ್ಲ?”

” ಬಸ್ ಸಿಗಲಿಲ್ಲ ಮಗನೇ, ಬರಲಾಗಲಿಲ್ಲ” .

” ಬಸ್ಸು ಸಿಗಲಿಲ್ಲವೇ ?! , ಅಮ್ಮ, ದೊಡ್ಡಮ್ಮ ಎಲ್ಲರೂ ರಿಕ್ಷಾದಲ್ಲಿ ಬರುತ್ತಾರೆ. ನೀನು ರಿಕ್ಷಾದಲ್ಲಿ ಬಾ” .

ಆಫ್ರೀಕಾದ ಕ್ಯಾಮರೂನಿನಿಂದ ರಿಕ್ಷಾದಲ್ಲಿ ಬರಲು ಹೇಳುವ ಮಗುವನ್ನು ಒಮ್ಮೆ ನೋಡಬೇಕು.! ಮುಗ್ದತೆಯನ್ನು ಅಪ್ಪಿ ಮುದ್ದಾಡಬೇಕು. ಒಂದು ವರ್ಷವುಂಟು. ದಿನಗಳು ಬೇಸರಿಸಿಕೊಂಡವೋ….! ಬೆಳಿಗ್ಗೆ ಮರೆಯಾದ ರಾತ್ರಿಗೆ ಕೈಬೀಸಬೇಕು…..ರಾತ್ರಿ ಮರೆಯಾದ ಹಗಲು ಮತ್ತೊಮ್ಮೆ ಕೂರಬೇಕು. ದಿನಗಳು ತಲಪುವ ಗುರಿಗೆ ಕಾವಲು ಕಾಯುತ್ತಿವೆ.

ತಂಗಿ ಮದುವೆ ವಯಸ್ಸಿಗೆ ಬಂದಿದ್ದಾಳೆ. ಗುಂಗುರು ಕೂದಲು, ದೇವತೆಯಂತಹ ಮೂಗುತಿ ಬೊಟ್ಟು. ಅಮ್ಮ ಹೊಲಿದ ಫ್ರಾಕ್ ತೊಟ್ಟು ಹೆಜ್ಜೆ ಹಾಕಿದ ಬರಿಗಾಲು ಕಾಣುತ್ತದೆ. ಅಮ್ಮನದೇ ಸ್ವರ,ಧಾಟಿ, ಸ್ವಲ್ಪ ಗದರಿಸಿದಾಗಲೂ ಉಮ್ಮಳಿಸುವ ದುಃಖ್ಖ. “ಅಳಬಾರದು, ಒಳ್ಳೆಯದಕ್ಕಲ್ಲವೇ ಹೇಳಿದ್ದು”. ಕೊಟ್ಟ 50-100 ರೂಪಾಯಿಗಳನ್ನು ಪರ್ಸಿನಲ್ಲಿ ಬಚ್ಚಿಟ್ಟುಕೊಂಡಿದ್ದಳು. ವಿದೇಶಕ್ಕೆ ಬರುವಾಗ ಕೂಡಿಟ್ಟು ಕೊಟ್ಟ ಮೊತ್ತ ಮೂರು ಸಾವಿರ ರೂಪಾಯಿ ಜೋಪಾನ ಮಾಡಿದ್ದು, ಮದುವೆಗೆ ಲಕ್ಷವಾಗಬೇಕು. ತಮ್ಮಂದಿರು ನೆಲ ಕಾಣಬೇಕು. ಕಾಣಲೇ ಬೇಕು. ಹೋಗಿ ಬರುತ್ತೇನೆ.

ಸತ್ತು ಸ್ವರ್ಗ ಸೇರಿದ ಆತ್ಮಗಳಿಗೆ ಅನ್ನ ಇಡಬೇಕು.ಆಯಿತು..! ರಾತ್ರಿ ಇಡುವಾಗ ಒಂದು ಸೀರೆ, ಕೈಬಳೆಗಳು,ಕುಂಕುಮದ ಡಬ್ಬಿ, ಒಂದು ಲುಂಗಿ. ಹೊರಗಡೆ ನಾಯಿ ಹೂಳಿಡುತ್ತಿತ್ತು. “ಬಂದರೇನೋ”. ಹೊರಗಡೆ ನೋಡಿದ್ದೆ. ತಂಪು ಹವೆಯಲ್ಲಿ ಕಪ್ಪುಗಳ ಸೀಳಿ ಮಂಜು ಹಾದು ಹೋಗುತ್ತಿತ್ತು. “ಅಣ್ಣಾ… ಅಪ್ಪ-ಅಮ್ಮನಿಗಿಟ್ಟ ಅನ್ನ ನೀನೇ ತಿನ್ನಬೇಕು”. ತಮ್ಮ ಎಲೆ ತುಂಬಿದ ಅನ್ನ ಮುಂದಿಟ್ಟ. ತಿನ್ನುತ್ತಲೇ ಇದ್ದೆ. ಹಲವರ ಗೈರು ಹಾಜರಿಗೆ ದಿನಗಳು ಲೆಕ್ಕ ಕೇಳಿದ್ದವು. ಹೋಗಿ ಬರುತ್ತೇನೆ.

ಎಲ್ಲವೂ ಮೌನ. “ಫೋನ್ ಮಾಡು”

” ಮಾಡುತ್ತೇನೆ ”

ಮಟ್ಟಿಲಿಳಿದು ಎಲ್ಲರೂ ಹೆಜ್ಜೆಯಿಕ್ಕಿದರು. ಮುಖಗಳು ಮರೆಯಾದಂತೆ ನನ್ನ ಒಂಟಿ ಹೆಜ್ಜೆಗಳು ಮಾತ್ರ ಕಂಡವು. ಅಹಾ..! ತಂಗಿಗೆ ಮದುವೆಯಾಗಿದೆ. ಗಂಡ ಡ್ರೈವರ್. ಮೊನ್ನೆ ಮಾತಾಡಿದ್ದೆ. ಚೆನ್ನಾಗಿದ್ದಾರೆ.ಮಾತಿನ ಮಧ್ಯೆ ಮಗುವೊಂದು ಅಳುತ್ತಿರುವ ಸ್ವರ ಕೇಳುತ್ತಿತ್ತು. ಒಂದು ಗಂಡು ಮಗುವಾಗಿದೆ.

ಯಾವಾಗ ಬರುತ್ತೀ ಅಣ್ಣಾ..?!

ಬರುತ್ತೇನೆ. ಯೋಚನೆಗಳು ಮೂಟೆ ಕಟ್ಟಿದ ಒಂದು ದಿನ ನಿಮ್ಮ ಮನಸ್ಸಿನಂಗಳದಲ್ಲಿ ನನ್ನ ಹೆಜ್ಜೆಗಳಿರುತ್ತವೆ. ಮಗುವಿಗೆ ಬೊಗಸೆ ತುಂಬಾ ಉಡುಗೋರೆ ಇರುತ್ತದೆ. ” ಮಾಮಾ ” ಅಂತ ಕರೆಯಬೇಕು. ಕಾಯುತ್ತಿದ್ದೇನೆ.

“ನನ್ನ ಮಗ ನೀನು”. ಹುಷಾರಿಲ್ಲದ ದೇಹದಿಂದ ಮಾವ ಮಾತು ಪ್ರಾರಂಭಿಸಿದ್ದರು. ಅತ್ತೆಯಿಲ್ಲದ ಒಂಟಿ ಮನಸ್ಸು ಒಂಟಿಯಂತೆ ಭಾಸವಾಯಿತು.

“ಅಲ್ಲಿಂದ ಹಣ ಕಳುಹಿಸುತ್ತೇನೆ. ಮನೆ ಬೇರೆ ಮಾಡಿ”. ಮಾತಿಲ್ಲದ ಮುಖದಿಂದ ನನ್ನನ್ನೇ ನೋಡಿದ್ದರು.

ಒಂದು ಗಟ್ಟಿ ಕೆಮ್ಮಲು. “ಸಿಗರೇಟು ಹೆಚ್ಚು ಸೇದಬೇಡಿ, ಹೆಚ್ಚು ಕುಡಿಯಬೇಡಿ”

ಮಾತು ಕೋಣೆಯ ಗೋಡೆಗೆ ಬಡಿದು ತಿರುಗಿ ನನ್ನನ್ನೇ ಕೇಳಿ ಮಾಯಾವಾಯಿತು. ಕಾಲಿಡಿದು ಆಶೀರ್ವಾದ ಬೇಡುವಾಗ ಅಪ್ಪಿ ಹಿಡಿದ ಸ್ಪರ್ಶ ,ಈಗಲೂ ಬಿಸಿಯಿದೆ. ಬಾಲ್ಯಕ್ಕೆ ಮಾತಾಡಿದ್ದ ಸದಾ ನಗುತ್ತಿರುವ ದೇವರುಗಳಿಗೆ ಕೆಳಗಿನ ಕೋಣೆಯಲಿ ಕೈ ಮುಗಿದಿದ್ದೆ. ಅಲ್ಲಲ್ಲಿ ಮಾಸಿದ್ದ ಗೋಡೆಗಳು “ನಮ್ಮನ್ನು ಬಿಟ್ಟು ಹೋಗುತ್ತೀಯೇನೋ?” ಕೇಳಿದಂತಾಯಿತು.

” ಇಲ್ಲ….ನಾನು ಮತ್ತೊಮ್ಮೆ ಬರುತ್ತೇನೆ. ಅಳಬೇಡಿ ಗೋಡೆಗಳೇ..! ನಾನೂ ಅತ್ತು ಬಿಡುತ್ತೇನೆ…! ” ಮಾವ ಹೊಡೆಯುವಾಗ ಅಧಾರಕ್ಕೆ ನಿಂತ ಗೋಡೆಗಳು. ಬದುಕಿನ ಹಲಗೆಗೆ ಗೋಡೆಗಳಾಗಿವೆ. ವ್ಯವಸ್ಥೆಗಳು ಅದರ ಮೇಲೆ ಬಳಪದಲ್ಲಿ ಬರೆದಿವೆ.

ಬಂದ ಒಂದು ತಿಂಗಳಲ್ಲಿ ಸುದ್ದಿ ಬಂತು. ನಾನಿಲ್ಲದ ಒಂದು ಅಂತಿಮ ಯಾತ್ರೆಗೆ ಜನ ಸೇರಿದ್ದರು.ಎಲ್ಲರೂ ನನ್ನನ್ನೇ ಕೇಳಿದ್ದರು.ಮನೆಯ ಹಿತ್ತಲ ನೆಲದಲ್ಲಿ ನಿಂತಾಗ ಸ್ಮಶಾನ ಕಾಣುತ್ತಿದೆ. ಕಣ್ಣ ಮುಂದೆ ಹಾದು ,ಮಾತಿಗೆ ಸಿಕ್ಕಿದ ಆತ್ಮಗಳು. ಒಂದು ಸಮಾರಂಭದಲ್ಲಿ ಜಗತ್ತಿಗೆ ವಿದಾಯ ಹೇಳುತ್ತಿದ್ದಾರೆ. ಅಳುತ್ತಿದ್ದವರು ಮಾರನೇ ದಿನ ನಗುತ್ತಿದ್ದಾರೆ. ಅಜ್ಜಿಯೂ ಅಲ್ಲೇ ಇದ್ದಾಳೆ, ಪದವಿ ಓದುವಾಗ ಇನ್ನೂರು ರೂಪಾಯಿ ಮೈಸೂರಿಗೆ ಮನಿ ಆರ್ಡರ‍್ ಕಳುಹಿಸಿ, ಅದರ ಮೂರನೇ ದಿನ ಮಾತಿಲ್ಲದೆ ಅದೇ ಸ್ಥಳಕ್ಕೆ ಹೋದರು. ಸ್ಮಶಾನದ ಸ್ಥಳಕ್ಕೆ ಬೇಲಿಯಿದೆ, ಗಟ್ಟಿಮುಟ್ಟಾದ ಕಾವಲು ಗೇಟಿದೆ. ಅದರೊಳಗೆ ಆತ್ಮಗಳಿವೆ…..! ದೇಹ ತೊರೆದ ಆತ್ಮಗಳು ಆ ಗೇಟು ದಾಟಿ ಪಟ್ಟಣದ ನಡು ಬೀದಿಯಲ್ಲಿ ಮಧ್ಯರಾತ್ರಿ ಸಂಚರಿಸಿದ ಕಥೆಗಳಿವೆ….! ಕೆಲವು ನಿಜಗಳು, ಹಲವು ಸುಳ್ಳುಗಳು…ಸತ್ತವರ ನೆನಪುಗಳು ಮನೆ-ಮನಗಳಲ್ಲಿ ಹೆಜ್ಜೆ ಹಾಕುತ್ತಿವೆ…!

ಹೆಣ್ಣು ಮಗು ಮಂಗಳೂರಿನಲ್ಲಿದೆ ಅವಳ ಅಜ್ಜಿ ಮನೆಯಲ್ಲಿ. ಗಂಡು ಮಕ್ಕಳೆರಡು ಚೆನ್ನಾಗಿವೆ. ಮಾತಾಡಿದ್ದೆ . ಭಾರತಕ್ಕೆ ಬಂದ ಮೇಲೆ ಸ್ವಲ್ಪ ಕೆಲಸವಿದೆ. ಅವರ ದಾರಿಯಲ್ಲಿರುವ ಮನೆಗೆ ಬೆಳಕು ಹಚ್ಚಬೇಕಿದೆ. ಮನೆಯ ಮೆಟ್ಟಿಲಿಳಿದು ನಡೆಯುತ್ತಲೇ ಇದ್ದೆ. ಮಕ್ಕಳು “’ ಟಾಟಾ” ಬೀಸುತ್ತಿದ್ದ ಪುಟ್ಟ ಕೈಗಳು ಹೂಗುಚ್ಚದಂತೆ ಕಂಡವು. ಅವರು ನೋಡುತ್ತಲೇ ಇದ್ದರು. ನನ್ನಿಂದ ಮರೆಯಾಗದಿದ್ದರೂ ಮರೆಯಾದರು. ಈಗ ದೊಡ್ಡವರಾಗಿದ್ದಾರೆ.

“ನೀವು ಯಾವಾಗ ಬರುತ್ತೀರಿ?”.

ಬರುತ್ತೇನೆ…..! ಬರುವಾಗ ನಿಮ್ಮ ಮುಖದಲ್ಲಿ ಗಡ್ಡ-ಮೀಸೆ ಕಾಣಬೇಕಿದೆ. ಸ್ವರದಲ್ಲಿ ಗಡಸಿದೆ. “ಟಾಟಾ”: ಬೀಸಿದ್ದ ಹೂಗುಚ್ಚದ ಕೈಗಳಲ್ಲಿ ರೋಮ ತುಂಬಿರಬಹುದು…! ಹೆಣ್ಣು ಮಗಳ ಕೈಗಳಲ್ಲಿ ಮದುಮಗಳ ಹಸಿರು ಬಳೆಗಳಿರಬಹುದು. ಬಾಚಿ ಅಪ್ಪಿಕೊಳ್ಳಬಹುದು..! . ಗಾಳಿ ಸೀಟಿ ಊದುತ್ತಿದೆ. ಭಾರತಕ್ಕಿರಬಹುದು..! ಅದೋ ಮರಗಳು ಇನ್ನಿಲ್ಲದಂತೆ ಎಲೆಗಳ ಉದುರಿಸುತ್ತಿದೆ. ದಿನಗಳ ಲೆಕ್ಕವಿರಬಹುದು….!

ದಿನಗಳ ಜೊತೆಗೆ ಕ್ಷಣಗಳನ್ನು ಸವರಿದ ಹೆಜ್ಜೆಗಳು, ಮಡಿಕೇರಿ ಪಟ್ಟಣದ ಗಲ್ಲಿಗಳಲ್ಲಿ ಚಪ್ಪಲಿಗಳ ಸಪ್ಪಳಕ್ಕೆ ಕಿವಿಯಾನಿಸುತ್ತಿದೆ. ” ಊರು ಖಾಲಿಯಾದರೂ ಮನಸ್ಸು ಖಾಲಿ ಮಾಡಿಕೊಳ್ಳಬೇಡ”. ಹೇಳಿದ ಮಾತುಗಳು ಖಾಲಿ ದಿನಗಳನ್ನು ಹೆಕ್ಕಿ ಹೆಕ್ಕಿ ಎದೆಗೆ ತುಂಬಿಸುತ್ತಿವೆ. ಸುತ್ತ ಕಾವಲು ಕಾಯ್ದ ಬೆಟ್ಟಗಳ ತುದಿಗೆ ನಿಂತು ಪಟ್ಟಣಕ್ಕೆ ಒಮ್ಮೆ ಕಣ್ಣು ಹಾಯಿಸಿದ್ದೇನೆ. ಗಲ್ಲಿ-ಗಲ್ಲಿಗಳಲ್ಲಿ, ಕೇರಿ ಕೇರಿಗಳಿಗೆ ಮನಸ್ಸು ನಾಗಾಲೋಟಕ್ಕೆ ಹಣಿಯಾಗುತ್ತಿದೆ. ಹಲವಾರು ಮುಖಗಳು, ಕೆಲವರು ನಕ್ಕವರು, ” ಹೋದ ಮೇಲೆ ಫೋನು ಮಾಡು, ಮರೆತು ಬಿಡಬೇಡ”. ಹೌದು..! ಮರೆತಿಲ್ಲ. ಮಾತುಗಳು ಇಷ್ಟಿಷ್ಟೇ ಬೆಟ್ಟವಾದಾಗ ” ಕವಿತೆ-ಕಥೆ ಬರೆಯುವುದನ್ನು ನಿಲ್ಲಿಸಬೇಡ”, ನಿಲ್ಲಿಸಲಿಲ್ಲ…! ನಿಮ್ಮದೇ ಮಾತುಗಳು,ನಕ್ಕು ಎದೆಗೆ ಸಿಕ್ಕಿಸಿಕೊಂಡ ಅಸ್ತವ್ಯಸ್ಥತೆಗಳು ಮತ್ತೆ ಮತ್ತೆ ಪಾತ್ರಗಳಾಗುತ್ತಿವೆ. ಪದಗಳಲ್ಲಿ ಮಾತಾಗಿ ಮೆಲುಕುಗಳು, ಅವರಿವರ ಮುಖಗಳಲ್ಲಿ ನಿಮ್ಮದೇ ಭಾವಗಳ ತಳುಕುಗಳು…!

ಆ ಬೀದಿಯಲ್ಲಿ ನಡೆವಾಗ ಸ್ಪರ್ಶಿದ ಮಂದಿಯೆಷ್ಟೋ ..! ಪರಿಚಯವಿದ್ದರೂ ಅಪರಿಚಿತನಂತೆ ಮುಖ ತಿರುಗಿಸಿದವರೆಷ್ಟೋ…! ಮಾತಿಗೆ ಸಿಗದೆ ಪರಿಚಯಕ್ಕೆ ತುಟಿಯಂಚಿನಲ್ಲೇ ನಕ್ಕವರೆಷ್ಟೋ…! ಈಗ ಬನ್ನಿ ನನ್ನ ಭಾವದ ಎದೆಗೆ…ಹದ ಮಾಡುತ್ತೇನೆ ಮಣ್ಣು .. ಉತ್ತಿ ನೆನಪಿನ ಬೀಜ ಬಿತ್ತಿ, ತೆನೆ ಕಣ್ಣು ಬಿಡುವವರೆಗೆ…! ಆಹಾ…ರಸ್ತೆಯನ್ನು ಅಗಲ ಮಾಡುವ ಕೆಲಸ ಎಲ್ಲಿಗೆ ನಿಂತಿತೋ? ನಗರ ಸಭೆಯವರು ನೋಟೀಸು ಕೊಟ್ಟ ನೆನಪು. ಅದರ ವಿರುದ್ಧ ಕೋರ್ಟು ಕಟಕಟೆಗೆ ಅರ್ಜಿ ಹಾಕಿದವರು ರಸ್ತೆ ಬದಿ ಅಂಗಡಿ ಮಾಲೀಕರು. ಬರುವಾಗ ನನ್ನ ಇಷ್ಟಗಲದ ಎದೆಯುಬ್ಬಿಸಿ ನಡೆಯುವ ಹೆಜ್ಜೆಗೆ ರಸ್ತೆ ದೊಡ್ಡದಿರಬಹುದು.

ಅಂದು ಬೆಳಿಗ್ಗೆ ಪೆಟ್ಟಿಗೆಗೆ ಜೋತು ಬಿದ್ದು, ಹೆಜ್ಜೆಗಳನ್ನು ದಾರಿಗೆ ಗೀಚುತ್ತಿದ್ದಾಗ ಓಂಕಾರೇಶ್ವರ ದೇಗುಲದಲ್ಲಿ ಓಂಕಾರದ ಸದ್ದು.. ಸಾಲು ಗಲ್ಲಿಗಳಲ್ಲಿ ಕದ ತೆರೆದ ಮನೆಗಳಲ್ಲಿ ದೇವರ ಸುಪ್ರಭಾತಗಳು… ಕುರಾನ್ ಪಠನೆಯ ಲಯಬದ್ಧ ಗೀತೆಗಳು. ಒಮ್ಮೆ ದೃಷ್ಟಿ ಮೇಲಕ್ಕೆತ್ತಿದ್ದೆ. ದೂರದ ಚರ್ಚು ಶಿಲುಬೆಗೆ ನಿಂತ ಏಸುವನ್ನು ಎತ್ತಿ ತೋರಿಸುತ್ತಿತ್ತು.. ಮತ್ತೊಮ್ಮೆ ದೃಷ್ಠಿ ಬೀದಿಗೆ ಬಿಟ್ಟಿದ್ದೆ. ಹಲವು ಮುಖಗಳು ಮಂದಿರಕೆ ನಡೆಯುತ್ತಿದ್ದವು, ಹಾಲು ಮಾರುವವರು ಹಾಲು ಮಾರುತ್ತಿದ್ದರು. ಅಂಗಡಿ-ಮುಂಗಟ್ಟುಗಳು ತಮ್ಮನ್ನು ತಾವೇ ಮಾರಾಟ ಮಾಡುತ್ತಿದ್ದವು.ಅಲ್ಲಲ್ಲಿ ಕೊಂಡು ಕೊಳ್ಳುವ ಮಾತುಗಳು. ಮೀನು ಮಾರುವವರು ಕಾಗೆಗಳೊಂದಿಗೆ ದಾರಿ ಹೋಕರನ್ನು ಕೂಗಿ ಕರೆಯುತ್ತಿದ್ದರು. ಅದೋ ಮಕ್ಕಳು ಮದ್ರಸಾಕ್ಕೆ ಹೋಗುತ್ತಿದ್ದಾರೆ. ಕೆಲವರು ನಮಾಜು ಮುಗಿಸಲು ತಾಮುಂದು- ನಾಮುಂದು ಎಂದು ಮಸೀದಿಗೆ ನುಗ್ಗುತ್ತಿದ್ದಾರೆ.

ಕೇರಳದ ಕಡೆಗೆ ಬಸ್‍ ಹೊರಟಿತು….! ಮಂದಿರದ ಕೆಂಪು ಭಾವುಟ ಪಟಪಟನೆ ಕೈ ಬೀಸಿತು. ಮಸೀದಿಗಳ ಹಸಿರು ಭಾವುಟಗಳು ಹೋಗಿ ಬಾ ಅನ್ನುವ ಸ್ವರ ಮೂಡಿಸಿದ್ದವು. ಹೋಗಿ ಬರುತ್ತೇನೆ ನಾನು ..! ಹೊಚ್ಚ ಹೊಸದರಂತೆ… ಎಲ್ಲಾ ಕೊಳೆಗಳನು ಮರೆತು… ನಿಮಗಳ ನೆನಪಿನಲ್ಲಿ ಬೆರೆತು….! ಚರ್ಚಿನ ಶಿಲುಬೆಗೆ ನಿಂತ ಏಸು ಎತ್ತಿದ ಕೈ ಮತ್ತೊಮ್ಮೆ ಎತ್ತಿ ಆಶೀರ್ವದಿಸಿದಂತೆ ಭಾಸವಾಯಿತು.

ಕೊಚ್ಚಿನ್ ವಿಮಾನ ನಿಲ್ದಾಣದಿಂದ ಗೊತ್ತಿಲ್ಲದ ಮನಸ್ಸಿನ ಗೊತ್ತಿಲ್ಲದ ಊರಿನ ಪಯಣಕ್ಕೆ ಉಕ್ಕಿನ ಹಕ್ಕಿ ಸಿದ್ದತೆಯಲ್ಲಿದೆ. ಪೆಟ್ಟಿಗೆಯಲ್ಲಿದ್ದ ಫೋಟೋದ ಕಡೆಗೆ ಮತ್ತೆ ಮತ್ತೆ ತಡಕಾಡಿದೆ. “ಹೌದು.. ಇದೆ…! ನಾವಿಲ್ಲೇ ಇದ್ದೇವೆ.!”

ಉಕ್ಕಿನ ಹಕ್ಕಿ ನಿಧಾನವಾಗಿ ಮೇಲಕ್ಕೇರುತ್ತಿತ್ತು….! ಒಂದು ಕುತೂಹಲಕ್ಕೆ ಕಿಟಕಿಗೆ ತಲೆಕೊಟ್ಟು ಕಣ್ಣು ಕೆಳಗೆ ಬಿಟ್ಟಿದ್ದೆ. ರಸ್ತೆಗಳು ಗೆರೆಗಳಾಗುತ್ತಿದೆ. ಮನುಷ್ಯರು ಇರುವೆಗಳಾಗುತ್ತಿದ್ದಾರೆ. ಅತ್ತಿತ್ತ ಅದುರಿದರೂ ಚದುರದಂತೆ….ಮತ್ತೆ ಮತ್ತೆ ಸಣ್ಣದಾಗುತ್ತಿದ್ದಾರೆ.

ಅಲ್ಲೊಂದು ಮೂಲೆಯಲ್ಲಿ ಭಾರತದ ಭಾವುಟ ತಲೆಯಾಡಿಸುತ್ತಿದೆ. ಕೇಸರಿ- ಬಿಳಿ- ಹಸಿರು. ಮಧ್ಯದಲ್ಲಿ ಅಶೋಕ ಮಹಾರಾಜನ ಸತ್ಯ ಮೇವ ಜಯತೇ ಚಕ್ರ ತಿರುಗುತ್ತಿದೆ. ನೋಡುತ್ತಿದ್ದಂತೆ ಚಕ್ರ ನಾಲ್ಕಾಗಿ.. ಇಡೀ ದೇಶವೇ ಅದರ ಬದುಕ ಬಂಡಿಯಲ್ಲಿ ಸಾಗುತ್ತಿದೆ. ಎಲ್ಲರದೂ ಒಕ್ಕೊರಲಿನ ಹಾಡು ” ಜನಗಣ ಮನ ಅದಿನಾಯಕ ಜಯಹೇ…” ಮುಗಿಲು ಮುಟ್ಟುತ್ತಿದೆ…..!ವಿಮಾನದೊಳಗೇ ಎದ್ದು ನಿಂತು ಸಾರಿ ಸಾರಿ ಕೂಗಬೇಕೆನಿಸಿತು.. ” ಭಾರತ ಮಾತಾ ಕೀ ಜೈ ” !

18 Comments

 1. sunil rao
  April 3, 2013
 2. Santhoshkumar LM
  April 1, 2013
 3. sunitha.a
  April 1, 2013
 4. mmshaik
  March 31, 2013
 5. bmbasheer
  March 31, 2013
 6. Jayalaxmi Patil
  March 31, 2013
 7. shanthi k.a.
  March 31, 2013
 8. Anitha Naresh manchi
  March 31, 2013
 9. Rajendra B. Shetty
  March 31, 2013
 10. Vinay Bharadwaj
  March 31, 2013
 11. bharathi bv
  March 31, 2013
 12. Gopaal Wajapeyi
  March 31, 2013
 13. ಕಾಣಿಕ್ಯರಾಜು
  March 4, 2012
 14. bharathi
  March 3, 2012
 15. Manjula Nagaraj
  March 3, 2012

Add Comment

Leave a Reply