Quantcast

ಸಂಧ್ಯಾರಾಣಿ ಕಾಲಂ : ’ಮಕ್ಕಳ ಬೇಡಿಕೆಗೆ ’ಯೆಸ್’ ಎನ್ನುವ ಮೊದಲು…’

ಮೊನ್ನೆ ಡಾಕ್ಟರ ಶಾಪಿಗೆ ಹೋಗಿದ್ದೆ. ಸಾಲು ಉದ್ದ ಇತ್ತು … ಕಾಯುತ್ತಾ ಕುಳಿತವಳು ವೇಳೆ ಕಳೆಯಲು ಅಲ್ಲಿದ್ದ ಒಂದು ಮ್ಯಾಗಜೀನ್ ಓದಲು ಪ್ರಾರಂಭಿಸಿದೆ. ಅಲ್ಲಿ ಹದಿಹರೆಯದವರ ಪ್ರಶ್ನೆಗಳಿಗೆ ತಜ್ಞರಿಂದ ಉತ್ತರ ಸಿಗುವ ಒಂದು ಅಂಕಣ ಇತ್ತು. ಅಲ್ಲಿ ಒಬ್ಬ ಹೈಸ್ಕೂಲು ಹುಡುಗಿ ಒಂದು ಪ್ರಶ್ನೆ ಕೇಳಿದ್ದಳು. ಅದು ಹೀಗಿತ್ತು : ’ನಾನೀಗ ಹೈಸ್ಕೂಲು ಓದುತ್ತಿದ್ದೇನೆ, ಅಪ್ಪ ಅಮ್ಮ ಇಬ್ಬರು ಕೆಲಸ ಮಾಡುತ್ತಾರೆ, ಆದರೆ ನನಗೆ ಕೊಡುವ ಪಾಕೆಟ್ ಮನಿ ಕೇವಲ (!) ೫೦೦ … ನನ್ನ ಫ್ರೆಂಡ್ಸ್ ಮನೇಲಿ ೩೦೦೦ ರೂ ಕೊಡ್ತಾರೆ. ನಾನು ಹೆಚ್ಚು ಹಣ ಕೇಳಿದರೆ ’ನಿನಗೆ ಬೇಕಾದದ್ದನ್ನೆಲ್ಲಾ ನಾವೇ ಕೊಡಿಸ್ತೀವಿ, ಇನ್ನು ೫೦೦ ರೂಗಿಂತ ಹೆಚ್ಚಿನ ಹಣ ನಿನಗ್ಯಾತಕ್ಕೆ’ ಅಂತಾರೆ. ಆದರೆ ಇದರಿಂದ ನಾನು ಎಲ್ಲರ ಜೊತೆ ಬೆರೆಯೋಕ್ಕೆ ಅಗ್ತಾ ಇಲ್ಲ, ಕೀಳರಿಮೆ ಕಾಡುತ್ತೆ…. ಮೊನ್ನೆ ಅಮ್ಮನ ಪರ್ಸಿನಿಂದ ನನ್ನ ಖರ್ಚಿಗೆ ಹಣ ತೆಗೆದುಕೊಂಡೆ. ಅಮ್ಮನಿಗೆ ಗೊತ್ತಾಗಲಿಲ್ಲ. ನನ್ನ ಸಮಸ್ಯೇನೇ ಅವರಿಗೆ ಅರ್ಥ ಆಗಲ್ಲ, ನಾನು ದುಡ್ಡು ತೆಗೆದರೆ ಏನು ತಪ್ಪು’ ಅಂತ. ಓದಿದವಳು ಶಾಕ್ ಆಗಿ ಕೂತೆ. ಇಲ್ಲ ಅವಳು ಹಣ ತೆಗೆದಿದ್ದಕ್ಕಲ್ಲ, ಅಪ್ಪನ ಅಂಗಿಯಿಂದ ನಾವೂ ಸಹ ಎಷ್ಟೋ ಸಲ ಕಾಸು ಎತ್ತಿದ್ದೇವೆ, ಮಿಠಾಯಿ ತಿಂದಿದ್ದೇವೆ. ಆದರೆ ಆ ಹುಡುಗಿಯ ಪ್ರಶ್ನೆಯಲ್ಲಿದ್ದ ’ಧ್ವನಿ’ ನನ್ನನ್ನು ಬೆಚ್ಚಿಬೀಳಿಸಿತ್ತು. ಆ ಸಾಲುಗಳಲ್ಲಿ ಎಷ್ಟೇ ಹುಡುಕಾಡಿದರೂ ನನಗೆ ಒಂದು ಹನಿ ಗಿಲ್ಟ್ ಕಾಣಲಿಲ್ಲ …. ಇದ್ದದ್ದು ಅಪ್ಪ ಅಮ್ಮನ ಬಗ್ಗೆ ದೂಷಣೆ ಅಷ್ಟೆ.

ಮುಂದೆ ಓದುತ್ತಾ ಹೋದೆ … ಪುಣ್ಯಕ್ಕೆ ಅದಕ್ಕೆ ಉತ್ತರ ಕೊಟ್ಟಿದ್ದ ತಜ್ಞೆ ನೇರ ದನಿಯಲ್ಲಿ ಉತ್ತರ ಕೊಟ್ಟಿದ್ದಳು …. ’ನೀನು ಯಾವುದೇ ಹೆಸರಿನಿಂದ ಕರೆದರು, ಏನೇ ಸಮರ್ಥನೆ ಕೊಟ್ಟರೂ ಇದು ’ಕಳ್ಳತನ’ ಹುಡುಗಿ. ಅಪ್ಪ ಅಮ್ಮನನ್ನು ಇನ್ನು ಸ್ವಲ್ಪ ಹೆಚ್ಚು ಹಣ ಕೇಳು ಅಥವಾ ನಿನ್ನ ಖರ್ಚು ಕಡಿಮೆ ಮಾಡಿಕೋ. ಇಲ್ಲ ಅಂದ್ರೆ ನೀನು ಬಿಡುವಿನ ವೇಳೆಯಲ್ಲಿ ದುಡಿದು ಕೈ ಖರ್ಚಿಗೆ ಹಣ ಸಂಪಾದಿಸಿಕೋ’ ಅಂತ. ಆದರೆ ಯಾಕೋ ನನಗೆ ಅದನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲು ಸಾಧ್ಯ ಆಗಲಿಲ್ಲ. ಇಲ್ಲಿ ತಪ್ಪು ಆ ಹುಡುಗಿಯದು ಮಾತ್ರವಾ? ತಮ್ಮ ಸಾಮಾಜಿಕ ಪ್ರತಿಷ್ಠೆಗಾಗಿಯೋ ಅಥವಾ ತೀರಾ ಸೊಫೆಸ್ಟಿಕೇಟೆಡ್ ಶಾಲೆಯಲ್ಲಿ ಓದಿದರೆ ಮಾತ್ರ ಮಕ್ಕಳು ಮುಂದೆ ಬರುತ್ತಾರೆ ಎಂದು ಅಂತಹ ’ವೈಭವೋಪೇತ ’ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸುವ ಅಪ್ಪ ಅಮ್ಮಂದಿರದು ಇದರಲ್ಲಿ ಏನೂ ಪಾತ್ರ ಇಲ್ಲವಾ? ಆ ಹುಡುಗಿಯನ್ನು ಅಂತಹ ಶಾಲೆಗೆ ಸೇರಿಸುವುದರ ಜೊತೆಗೆ ಒಂದಿಷ್ಟು ಮೌಲ್ಯಗಳನ್ನೂ ಸಹ ಅವರು ಕಲಿಸಬೇಕಿತ್ತಲ್ಲವಾ?

ಭಾರತ ಮಕ್ಕಳ ಬಗ್ಗೆ, ಮಕ್ಕಳ ಭವಿಷ್ಯದ ಬಗ್ಗೆ ಹಗಲಿರುಳು ತಲೆಕೆಡಿಸಿಕೊಳ್ಳುವ, ಅದಕ್ಕಾಗಿ ತಾವು ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧವಾಗುವ ಮೇಲ್ ಮಧ್ಯಮ, ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿರುವ ದೇಶ. ಇಲ್ಲಿ ಮಕ್ಕಳಿಗಾಗಿ ತ್ಯಾಗ ಮಾಡುವುದು ಅಂದರೆ ಅದೊಂದು ಒಪ್ಪಿಕೊಂಡ ತತ್ವ. ಆದರೆ ಹೀಗೆ ತ್ಯಾಗ ಮಾಡಿ ಮಕ್ಕಳಿಗೆ ಬೇಕಾದ್ದು ಒದಗಿಸುವಾಗ ಒಂದು ಎಚ್ಚರಿಕೆಯ ಗಂಟೆ ಆಗೀಗ ಅಪ್ಪ ಅಮ್ಮಂದಿರ ತಲೆಯಲ್ಲಿ ಭಾರಿಸುತ್ತಲೇ ಇರಬೇಕು.

ಕೆಲವು ವರ್ಷಗಳ ಹಿಂದೆ ನಾನು ಭಾಗವಹಿಸಿದ್ದ ಸಭೆ ಒಂದರಲ್ಲಿ ಒಂದು ಭಾಷಣ ಇತ್ತು. ಭಾಷಣದ ಎಲ್ಲಾ ವಿವರಗಳು ಮರೆತು ಹೋಗಿದ್ದರೂ, ಅವರು ಹೇಳಿದ ಒಂದು ವಿಷಯ ನನ್ನ ಮನಸ್ಸಲ್ಲಿ ಹಾಗೇ ಉಳಿದುಕೊಂಡಿದೆ. ಅವರು ನಾವು ಬೆಳೆದ ಪರಿಸರ ಮತ್ತು ಈಗಿನ ಪರಿಸರವನ್ನು ’ನೋ ಜೆನೆರೇಶನ್’ ಮತ್ತು ’ಎಸ್ ಜೆನರೇಶನ್’ ಎಂದು ವಿಭಾಗಿಸಿದ್ದರು. ಇದ್ಯಾವುದು ಹೊಸ ಪದ ಅಂತ ನಾನು ನೆಟ್ಟಗೆ ಕುಳಿತೆ. ಅವರು ಮುಂದುವರಿಸಿದರು, ’ ಮೊದಲೆಲ್ಲಾ ನಾವು ಬೆಳೆಯುವಾಗೆಲ್ಲಾ ನಮಗೆ ಬೇಡಿಕೆಗಳು, ಕೋರಿಕೆಗಳು ಇರಲಿಲ್ಲ ಅಂತಲ್ಲ, ಇದ್ದವು. ಆದರೆ ಅದನ್ನು ಅಮ್ಮನ ಮೂಲಕ ನಾವು ಅಪ್ಪನ ಹತ್ತಿರ ಮಂಡಿಸಿದ ತಕ್ಷಣ ನಮಗೆ ಸಿಗುತ್ತಿದ್ದ ಖಾಯಂ ಉತ್ತರ ’ನೋ’, ಇಲ್ಲ ಅಂತಲೇ. ನಮ್ಮ ಅಪ್ಪ ಅಮ್ಮರಿಗೆ ನಮ್ಮ ಮೇಲೆ ಪ್ರೀತಿ ಇಲ್ಲ ಅಂತಲ್ಲ, ಆದರೆ ಅವರ ಆರ್ಥಿಕ ಮಿತಿ ಮತ್ತು ಅವರು ನಂಬಿದ್ದ ಮೌಲ್ಯಗಳ ಪ್ರಕಾರ ಅನಿವಾರ್ಯವಲ್ಲದ್ದ ಎಲ್ಲವೂ ಐಷಾರಾಮಿ ಅಂತಲೇ ಅನ್ನಿಸ್ತಿತ್ತು. ನಮ್ಮ ಹತ್ತು ಬೇಡಿಕೆಗಳಲ್ಲಿ ೯ ಬೇಡಿಕೆಗಳು ತಿರಸ್ಕೃತ ಆಗೋದು ನಮಗೂ ಗೊತ್ತಿರುತ್ತಿತ್ತು, ಹಾಗಾಗಿ ನಾವೂ ಏನೂ ತಲೆ ಕೇಡಿಸಿಕೊಳ್ಳುತ್ತಾ ಇರಲಿಲ್ಲ. ಆದರೆ ಒಪ್ಪಿಗೆಯಾದ ಆ ಒಂದು ಬೇಡಿಕೆ ನಮ್ಮನ್ನು ತಿಂಗಳುಗಟ್ಟಲೆ ಖುಷಿಯಾಗಿಡ್ತಾ ಇತ್ತು.

ಆದರೆ ಈಗ ಇರುವುದು ’ಯೆಸ್’ ಜೆನರೇಶನ್. ಮಕ್ಕಳು ಕೇಳುವ, ಮಂಡಿಸುವ ಬೇಡಿಕೆಗಳಲ್ಲಿ ಬಹುಪಾಲು ಮೊದಲ ಸುತ್ತಿನಲ್ಲೇ ಪೂರೈಕೆ ಆಗಿಬಿಡುತ್ತವೆ. ಹಲವು ಸಲ ಮಕ್ಕಳ ಪಟ್ಟಿಯಲ್ಲಿ ಇಲ್ಲದ ಬೇಡಿಕೆಗಳು ಸಹ. ಹೀಗಾಗಿ ಈಗ ತಯಾರಾಗುತ್ತಿರುವ ಜನಾಂಗಕ್ಕೆ ’ಆಗೋಲ್ಲ’ ಅನ್ನುವ ಪದವೇ ಅಪರಿಚಿತ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ ಅಂತ ಅವರು ಹೇಳಿದ್ದರು. ಈ ಮಾತು ನಾನು ಕೇಳಿದ್ದೆನಾದರೂ ಅದರ ಅರ್ಥ ಇನ್ನೂ ನನ್ನ ಎದೆಯೊಳಕ್ಕೆ ಇಳಿದಿರಲಿಲ್ಲ. ಅದು ಆಗಲು ನನಗೆ ಮತ್ತೂ ೧೦ ವರ್ಷ ಸಮಯ ಬೇಕಾಯ್ತು.

ಒಮ್ಮೆ ಗೆಳೆಯರ ಗುಂಪು ಹೊರಗೆ ಹೋಗಿದ್ದೆವು. ಗುಂಪಿನಲ್ಲಿ ಒಂದು ಕುಟುಂಬಕ್ಕೆ ಇಬ್ಬರು ಸಣ್ಣ ಸಣ್ಣ ಮಕ್ಕಳು, ಅಮ್ಮ ಆ ಮಕ್ಕಳನ್ನು ನೋಡುಕೊಳ್ಳುವುದಕ್ಕೆ ಸಮಯ ಸಾಲದೆ ಮನೆಯಲ್ಲಿದ್ದಳು. ದುಡಿಯುತ್ತಿದ್ದು ಅಪ್ಪ ಮಾತ್ರ. ಅಪ್ಪ ಒಳ್ಳೆ ಕೆಲಸದಲ್ಲೇ ಇದ್ದ, ಆದರೆ ಜಾಣತನದಿಂದ ಸಂಸಾರ ಸಾಗಿಸಿದರೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬಹುದು ಎನ್ನುವ ಪರಿಸ್ಥಿತಿ. ಇನ್ನೊಂದು ಕುಟುಂಬದಲ್ಲಿ ಒಬ್ಬನೇ ಮಗ. ಹಾಗಾಗಿ ಆ ಮಗುವಿಗೆ ಬೇಕೆನಿಸಿದ್ದು ತೆಗೆದುಕೊಡುವ ಪರಿಸ್ಥಿತಿ ಇತ್ತು ಮನೆಯಲ್ಲಿ. ಮಗುವಿಗೆ ಒಂದು ಆಟ ಆಡುವ ಎಲೆಕ್ಟ್ರಾನಿಕ್ ಉಪಕರಣ ಕೊಡಿಸಿದ್ದರು. ಆ ಮಗು ಉಳಿದ ಮಕ್ಕಳೊಡನೆ ಅದನ್ನು ಆಡುತ್ತಾ ಇತ್ತು. ನಾನು ಅಲ್ಲೇ ಕೂತಿದ್ದೆ.

ಮೊದಲ ಕುಟುಂಬದ ಹಿರಿಯ ಮಗು, ’ಆಶೂ ನೀನು ತುಂಬಾ ಲಕ್ಕಿ’ ಅಂತು. ನಾನು ಅವನ ಕಡೆ ತಿರುಗಿ, ’ಯಾಕೋ’ ಅಂದೆ. ಆಟಿಕೆಗಾಗಿ ಮಗು ಹಾಗೆ ಹೇಳ್ತಿದೆ ಅಂತ ನನ್ನ ಅಂದಾಜು. ’ಅವನು ಒಬ್ಬನೆ ಇದಾನಲ್ಲವಾ ಆಂಟಿ, ನಮ್ಮನೇಲಿ ತಮ್ಮ ಹುಟ್ಟದೆ ಇದ್ದರೆ, ನನಗೂ ಇವೆಲ್ಲಾ ತೆಕ್ಕೊಡ್ತಾ ಇದ್ರು…’ ಅಂತು ಮಗು. ನಾನು ಸ್ಥಬ್ಧಳಾಗಿದ್ದೆ. ದೇವರೆ ಇದೆಂತಹ ವಿಷದ ವಾತಾವರಣದಲ್ಲಿ ಬೆಳೆಸುತ್ತಿದ್ದೇವೆ ನಾವು ಮಕ್ಕಳನ್ನು… ಮಗು ಆಟಿಗೆ ಬೇಕು ಅಂತ ಆಸೆ ಪಡುವುದು ಸಹಜ, ಆದರೆ ತಮ್ಮ ಹುಟ್ಟದಿದ್ದರೆ ತಾನು ಇನ್ನೂ ಸುಖವಾಗಿರಬಹುದಿತ್ತು ಎಂದು ಆಶಿಸುವುದು… ಯಾಕೋ ಜೀರ್ಣಿಸಿಕೊಳ್ಳಲಾಗಲಿಲ್ಲ ನನಗೆ.. ’ಓಡು ಓಡು … ನಿನ್ನ ಗೆಳೆಯನನ್ನು ಹಿಂದೆ ತಳ್ಳಿ ಓಡು ಎಂದು ನಾವು ಕಲಿಸಿದೆವು, ’ಬೇಕು, ಬೇಕು, ಬೇಕು …. ಮನೆಯಲ್ಲಿ ಒಬ್ಬನೇ ಇದ್ದರೆ ಎಲ್ಲವೂ ನನ್ನದೆ’ ಎನ್ನುವುದನ್ನು ವ್ಯವಸ್ಥೆ ಕಲಿಸಿತು…

ಚಿತ್ರ ಕೃಪೆ : ಛಾಯಾ ಭಗವತಿ

ಇದ್ಯಾಕೆ ಹೀಗಾಯ್ತು….? ಹೀಗೆ ಮಕ್ಕಳ ಅಂಗಳಕ್ಕೆ ಮೊಬೈಲು, ಟ್ಯಾಬು, ಪ್ಲೇ ಸ್ಟೇಶನ್ನು ಇವೆಲ್ಲಾ ಹೇಗೆ ಬಂತು?? ಮೊದಲನೆಯದಾಗಿ ಮುಕ್ತ ಮಾರುಕಟ್ಟೆ, ಬದಲಾದ ಆರ್ಥಿಕ ನೀತಿ ದೇಶದೊಳಕ್ಕೆ ಅಪಾರ ಹಣವನ್ನು ಮಾತ್ರ ತರಲಿಲ್ಲ, ಅಪರಿಮಿತ ಸಾಲದ ಅವಕಾಶವನ್ನೂ ಸಹ ತಂದಿತ್ತು. ನೀವು ಮುಂದಿನ ಹದಿನೈದು ವರ್ಷದಲ್ಲಿ ದುಡಿಯುವ ಹಣವನ್ನು ಇಂದೇ ಖರ್ಚು ಮಾಡಬಲ್ಲ ಸವಲತ್ತನ್ನೂ ತಂದಿತ್ತಿತು … ಇದುವರೆಗೂ ಹಣ ಅಂದರೆ ಕೈಯಲ್ಲಿಟ್ಟ ಕಾಸು ಮಾತ್ರ ಅಂದುಕೊಂಡಿದ್ದ ನಮಗೆ ಒಂದು ಪ್ಲಾಸ್ಟಿಕ್ ಕಾರ್ಡ್ ಬ್ಯಾಂಕಿನ ಹಾಗೆ ಬಂದು ಪರ್ಸಿನಲ್ಲಿ ಕೂತಿತು. ಎರಡನೆಯದು ಅಂದರೆ ಮಕ್ಕಳನ್ನು ಬಿಟ್ಟು ಹೊರಗಡೆ ಕೆಲಸಕ್ಕೆ ಹೋಗುತ್ತಿದ್ದೇವೆ ಮತ್ತು ಅವರಿಗೆ ಕೊಡಬೇಕಾದ ಸಮಯವನ್ನು ಕೊಡಲಾಗುತ್ತಿಲ್ಲ ಎಂದು ಅಪ್ಪ ಅಮ್ಮನ ಮನಸ್ಸಿನಲ್ಲಿಯ ಗಿಲ್ಟ್. ಈ ವ್ಯವಸ್ಥೆ ’ಕ್ವಾಲಿಟಿ ಟೈಮ್’ ಎನ್ನುವ ಹೊಸ ಪದವನ್ನೇ ಹುಟ್ಟುಹಾಕಿತು. ಅಂದರೆ ನೀವು ಪರಸ್ಪರ ಜೊತೆಯಲ್ಲಿ ಕಳೆಯುವ ಸಮಯಕ್ಕಿಂತ ಆ ಸಮಯದಲ್ಲಿ ನೀವು ಏನು ಮಾಡುತ್ತೀರಿ ಎನ್ನುವುದು ಮುಖ್ಯವಾಯಿತು. ಆದರೆ ವಿಪರ್ಯಾಸ ಎಂದರೆ ಈ ಕ್ವಾಲಿಟಿ ಟೈಮ್ ಅನ್ನು ವ್ಯಕ್ತಿಗಳ ಬದಲು ವಸ್ತುಗಳು ಆಳತೊಡಗಿದ್ದು.

ಮಕ್ಕಳಿಗೆ ಅವರಿಗೆ ಏನು ಬೇಕು ಅಂತ ಯೋಚಿಸುವುದಕ್ಕೂ ಮೊದಲು, ನಾವು ಎಷ್ಟು ಕೊಡಬಲ್ಲೆವು ಎನ್ನುವುದು ನಿರ್ಣಾಯಕ ಆಗುತ್ತಾ ಹೋಯಿತು. ಇಂದು ೪-೫ ತರಗತಿಯ ಮಕ್ಕಳು ’ಬ್ರಾಂಡ್’ ಬಗ್ಗೆ ಮಾತನಾಡುತ್ತವೆ. ಅವರು ಹಾಕುವ ಶೂ ನಿಂದ ಹಿಡಿದು ತಿನ್ನುವ ಚಾಕೋಲೇಟಿನವರೆಗೂ ಅವರ ಆದ್ಯತೆಗಳಿವೆ, ಪ್ರತಿಯೊಂದರಲ್ಲೂ ಅಭಿಪ್ರಾಯ ಮಂಡಿಸುವಷ್ಟು ಅಸರ್ಟಿವ್ ಇದ್ದಾರೆ ಮಕ್ಕಳು.

ಇನ್ನೊಂದು ಬೆಳವಣಿಗೆ ಎಂದರೆ ಮಕ್ಕಳಿಗೆ ಅಪ್ಪ ಅಮ್ಮ ಕೂತು ಲಕ್ಷಣವಾಗಿ ಲಂಚದ ಅಭ್ಯಾಸ ಮಾಡಿಸಿದ್ದು. ’ಈ ಸಲ ಇಷ್ಟು ಮಾರ್ಕ್ಸ್ ತೆಗೆದರೆ ನಿನಗೆ ವಾಚು, ನಿನ್ನ ಫ್ರೆಂಡ್ ಗಿಂತ ಜಾಸ್ತಿ ಮಾರ್ಕ್ಸ್ ತೆಗೆದರೆ ಈ ಸಲ ಟಚ್ ಸ್ಕ್ರೀನ್ ಮೊಬೈಲ್, ಕ್ಲಾಸಿಗೇ ಫಸ್ಟ್ ಬಂದರೆ ಪ್ಲೇ ಸ್ಟೇಷನ್….’ ಹೀಗೆ ಆಮಿಷಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮಕ್ಕಳು ಒಳ್ಳೆ ಅಂಕ ತೆಗೆದಾಗ ಅದನ್ನು ಪ್ರೋತ್ಸಾಹಿಸುವುದು, ಖುಷಿಗೆ ಏನಾದರೂ ಕೊಡಿಸುವುದು ತಪ್ಪಲ್ಲ. ಆದರೆ ಮಕ್ಕಳಿಗೆ ವಿಪರೀತ ಬೆಲೆಯ ಆಟಿಗೆ ವಸ್ತುಗಳನ್ನು ಕೊಡಿಸುವುದು ಒಂದು ತಪ್ಪು ಮೇಲ್ಪಂಕ್ತಿಯನ್ನು ಹಾಕಿದಂತಾಗುತ್ತದೆ.

ಅದೇ ಸಮಯದಲ್ಲಿ ಆದ ಮಾಧ್ಯಮ ಕ್ರಾಂತಿ. ದೃಶ್ಯ ಮಾಧ್ಯಮ ಜಾಹಿರಾತುಗಳನ್ನು ನೇರ ಮನೆಯ ನಡುಮನೆಗೇ ಹೊತ್ತೊಯ್ದು ಇಡಲು ಪ್ರಾರಂಭಿಸಿತು.

ಹೀಗೆ ಹತ್ತು ಹಲವು ಕಾರಣಗಳಿಂದ ಬೆಳೆದದ್ದು ಮಕ್ಕಳ ಮಾರುಕಟ್ಟೆ… ನಿಮಗೆ ಆಶ್ಚರ್ಯ ಆಗಬಹುದು ಇಂದು ಭಾರತದ ಮಾರುಕಟ್ಟೆಯಲ್ಲಿ ಮುಖ್ಯ ಗಿರಾಕಿಗಳು ಅಂದರೆ ಇಲ್ಲ ಹೆಂಗಸರಲ್ಲ, ಮಕ್ಕಳು. ಹೌದು ಭಾರತದಲ್ಲೇ ಅಲ್ಲ ಇಡೀ ವಿಶ್ವದಲ್ಲೇ ಅತ್ಯಂತ ಫಲಭರಿತವಾದ, ಅತ್ಯಂತ ಲಾಭದಾಯಕವಾದ ಮಾರುಕಟ್ಟೆ ಎಂದರೆ ಮಕ್ಕಳ ಮಾರುಕಟ್ಟೆ. ಹಸುಗೂಸುಗಳಿಗೆ ಬೇಕಾದ, ಬೇಡವಾದ ಹಾಲಿನ ಉತ್ಪನ್ನಗಳಿಂದ ಹಿಡಿದು, ಮಕ್ಕಳು ಬಳಸುವ ಪೆನ್ಸಿಲ್, ಅಳಿಸುವ ಇರೇಸರ್, ಬಣ್ಣ, ಪುಸ್ತಕ, ಜಾಮಿಟ್ರಿ ಬಾಕ್ಸ್, ಊಟದ ಡಬ್ಬಿ, ನೀರಿನ ಬಾಟಲ್, ಆಟಿಗೆ ಎಲ್ಲಕ್ಕೂ ಮೀರಿ ಬೆಳೆಯುವ ಮಕ್ಕಳ ತಿಂಡಿ ತೀರ್ಥ…. ಎಲ್ಲ ಎಲ್ಲವನ್ನೂ ನಿರ್ಧರಿಸುವುದು … ಇಲ್ಲ ಮಗುವಿನ ಅಪ್ಪ ಅಮ್ಮ ಅಲ್ಲ, ಮಗು ಸಹ ಅಲ್ಲ … ಅದನ್ನು ನಿರ್ಧರಿಸುವುದು, ಅದರ ಪ್ರಮಾಣವನ್ನು ನಿರ್ಧರಿಸುವುದು ಯಾವುದೋ ಕಂಪನಿಯಲ್ಲಿ ಕುಳಿತ ಒಬ್ಬ ಆರ್ಥಿಕ ತಜ್ಞ. ಆತ ನಿರ್ಧರಿಸಿದ ಟಾರ್ಗೆಟ್ ಗೆ ಅನುಗುಣವಾಗಿ ಜಾಹಿರಾತಿನ ಹಣ ನಿರ್ಧಾರವಾಗುತ್ತದೆ. ಜಾಹಿರಾತನ್ನು ಪದೇ ಪದೇ, ಪದೇ ಪದೆ ಮಕ್ಕಳು ನೋಡುವ ಚಾನಲ್ ಗಳಲ್ಲಿ ಬಿತ್ತರಿಸಲಾಗುತ್ತದೆ.

ನಾವೆಲ್ಲಾ ಹುಟ್ಟಿದಾಗ ಅಮ್ಮನ ಹಾಲು ನಮ್ಮ ಊಟ. ಆದರೆ ನಾವು ನೋಡುತ್ತಿರುವಂತೆಯೇ ಪರಿಸ್ಥಿತಿ ಬದಲಾಯಿತು. ಗುಂಡು ಗುಂಡಾದ ಮುದ್ದು ಮುದ್ದು ಮಕ್ಕಳ ಫೋಟೋ ಜಾಹೀರಾತಿನಲ್ಲಿ ರಾರಾಜಿಸತೊಡಗಿದವು. ಸರಿ ಮಗುವಿಗೆ ಒಂದು ತಿಂಗಳಿರುವಾಗ ಏನೇನು ಕೊಡಬಹುದು, ಏನೇನು ಕೊಡಬೇಕು ಎನ್ನುವುದನ್ನು ಹತ್ತು ಮಕ್ಕಳನ್ನು ಬೆಳೆಸಿದ ಹೆಂಗಸರಿಗೆ ಮಕ್ಕಳ ಮೋರೆಯನ್ನೇ ನೋಡದ ವಿಶೇಷಜ್ಞರು ಕಲಿಸಿದರು. ಈಗ ಏನಾಯ್ತಪ್ಪ ಅಂದ್ರೆ ಮೊನ್ನೆ ಟಿವಿ ನೋಡುವಾಗ ಅಮೀರ್ ಖಾನ್, ನೆನಪಿಟ್ಟುಕೊಳ್ಳಿ ಅಂತ ಬೆರಳು ಮಡಸಿ ಹೇಳ್ತಾ ಇದ್ದ, ’ಮಕ್ಕಳಿಗೆ ಆರು ತಿಂಗಳು ತುಂಬುವವರೆಗೂ ಅಮ್ಮನ ಹಾಲು ಮಾತ್ರ ಕುಡಿಸಿ, ಬೇರೆ ಮೇಲಿನ ಆಹಾರ ಏನೂ ಬೇಡ, ನೀರು ಸಹ ಬೇಡ’ ಅಂತ. ಹಾಗಾದರೆ ಇಷ್ಟು ದಿನ ಹಸುಕಂದಮ್ಮಗಳ ಹೊಟ್ಟೆಯಲ್ಲಿ ನಾವು ತುಂಬಿದ್ದೇನು?

ಇನ್ನೊಂದು ಜಾಹಿರಾತು. ಮಕ್ಕಳು ಹೆಚ್ಚು ಓದಬೇಕು ಅಂದರೆ ಒಂದು ತಂಪು ಪಾನೀಯ ಬೇಕು ಅನ್ನುತ್ತಾವೆ. ಒಬ್ಬ ಅಮ್ಮ, ಪರಮ ಜಾಣೆಯಂತೆ ಚಿತ್ರಿತವಾದ ಹೆಣ್ಣು, ಅದಕ್ಕೆ ’ಹೂ’ ಅಂದು, ತನ್ನ ಗೆಳತಿಯರಿಗೆ ಹೇಳುತ್ತಾಳೆ. ಪರವಾಗಿಲ್ಲ ಅದರಲ್ಲಿ ಹಣ್ಣಿನ ಸತ್ವ ಇರುತ್ತದೆ’ ಅಂತ. ಅದರಲ್ಲಿ ಹಣ್ಣಿನ ಸತ್ವ ಇದೆ ಅಂತ ಹೇಳುವ ಯಾರೂ ಅದರಲ್ಲಿರುವ ಮಿಕ್ಕ ರಾಸಾಯನಿಕಗಳ ಬಗ್ಗೆ ಮಾತಾಡುವುದೇ ಇಲ್ಲ. ಅಲ್ಲ ಬೆಳೆಯುತ್ತಿರುವ ಮಕ್ಕಳು ಹಣ್ಣಿನ ಸತ್ವ ಕೆಲವು ಭಾಗದಲ್ಲಿ ಇರುವ ಈ ಜ್ಯೂಸುಗಳನ್ನು ಯಾಕೆ ಕುಡೀಬೇಕು, ಅದರ ಬದಲು ಹಣ್ಣನ್ನೇ ತಿನ್ನಬಹುದಲ್ಲಾ? ಅದರ ಜೊತೆಯಲ್ಲಿನ ಮಿಕ್ಕ ಎಲ್ಲವೂ ಮಕ್ಕಳ ಹೊಟ್ಟೆ ಯಾಕೆ ಸೇರಬೇಕು?? ಈಗ ಬೆಳೆಯುತ್ತಿರುವ ಮಕ್ಕಳೆಲ್ಲಾ ನಮ್ಮ ತಿಂಡಿಗಳ ಬಗ್ಗೆ ಹಠಾತ್ ವೈರಾಗ್ಯ ಬೆಳೆಸಿಕೊಂಡು ಮ್ಯಾಗಿ ಮತ್ತಿತರ ಸಿದ್ಧ ತಿಂಡಿಗಳ ಬಗ್ಗೆ ಮೋಹ ಬೆಳೆಸಿಕೊಂಡರಲ್ಲ, ಹೇಗಾಯ್ತು ಇದು. ಎಲ್ಲಾ ಮಕ್ಕಳು ಅಮ್ಮನ ಗರ್ಭದಲ್ಲೇ ಸಾಂಪ್ರದಾಯಿಕ ತಿಂಡಿ ತಿನ್ನುವುದಿಲ್ಲ ಎಂದು ಠರಾವು ಪಾಸು ಮಾಡಿದ ಹಾಗೆ? ಇಲ್ಲಿ ಬಂದದ್ದು ಅದೇ ಜಾಹಿರಾತು. ಮತ್ತೆ ಮತ್ತೆ ಅದನ್ನೇ ಪ್ರಸಾರ ಮಾಡಿ ಬ್ರೇನ್ ವಾಶ್ ಮಾಡಿ, ಅದು ಜಗತ್ತಿನ ಸರ್ವಶ್ರೇಷ್ಠ ಮಕ್ಕಳ ಆಹಾರ ಎನ್ನುವ ಹಾಗೆ ಆಗಿದೆ. ನಮ್ಮ ಸಾಂಪ್ರದಾಯಿಕ ತಿಂಡಿಗಳು, ಬಾಯಾಡಿಸುವ ತಿರು ತಿಂಡಿಗಳಿಗೆಲ್ಲಾ ಯಾವಾಗ ಕಡ್ಡಾಯ ನಿವೃತ್ತಿ ಘೋಷಣೆ ಆಯಿತು??

ಈಗ ತಿಂಡಿಗಳು ಪ್ಯಾಕೆಟ್ ನಲ್ಲಿ ಬರುತ್ತಿವೆ ಮತ್ತು ಎಲ್ಲಕ್ಕೂ expiry date ಇರುತ್ತವೆ. ಹೌದು ಈಗೀಗ ಎಲ್ಲಕ್ಕೂ expiry date ಇರುತ್ತದೆ… ಎಲ್ಲಕ್ಕೂ…

I am what I am ಅನ್ನುವುದು ಹೋಗಿ I am what I have ಹೆಚ್ಚು ಚಲಾವಣೆಯ ನಾಣ್ಯ ಆಗಿದೆ.

ಹಣದ ಕೊರತೆ ಇದ್ದ ಕಾಲ ನಮಗೆ ಹಂಚಿಕೊಂಡು ಬದುಕುವುದನ್ನು ಕಲಿಸಿತು. ಅಗತ್ಯ – ಅನಿವಾರ್ಯತೆಗಳ ನಡುವೆ ವ್ಯತ್ಯಾಸ ಗುರ್ತಿಸುವುದನ್ನು ಕಲಿಸಿತು … ಆದರೆ ಹಣದ ಸಮೃದ್ಧಿ ಯಾಕೆ ನಮ್ಮನ್ನು ಹೆಚ್ಚು ಹೆಚ್ಚು ಸ್ವಾರ್ಥಿಗಳನ್ನಾಗಿಸಿದೆ??

ಹತ್ತು ’ನೋ’ ಗಳ ನಡುವೆ ಬರುತ್ತಿದ್ದ ಒಂದು ’ಯೆಸ್’ ಕೊಡುತ್ತಿದ್ದ ಖುಷಿ ದೊಡ್ಡದಾ ಅಥವಾ ಹತ್ತು ’ಯೆಸ್’ ಗಳ ನಡುವೆ ಬರುವ ಒಂದು ’ನೋ’ ಕೊಡುವ ಆಘಾತ ದೊಡ್ಡದಾ ಮತ್ತು ಅದನ್ನು ಸಹಿಸುವ ಅನುಭವಿಸುವ ಮನಸ್ಸನ್ನು ನಾವು ಬೆಳೆಸುತ್ತಿದ್ದೇವೆ ಎನ್ನುವುದರ ಮೇಲೆ ಈ ಬದಲಾದ ಕಾಲದ, ಬದಲಾದ ಜೀವನ ಮೌಲ್ಯಗಳ ಯಶಸ್ಸು ನಿರ್ಧಾರವಾಗುತ್ತದೆ.

ನಾವು ಕಳುಹಿಸುವ ದುಬಾರಿ ಶಾಲೆಗಳು ಮಕ್ಕಳನ್ನು ಅವರ ಉದ್ಯೋಗಕ್ಕೆ ಮಾತ್ರ ತಯಾರು ಮಾಡುತ್ತವೆ, ಆದರೆ ಅವರನ್ನು ಬದುಕಿಗೆ ತಯಾರು ಮಾಡುವ ಹೊಣೆ ಇರುವುದು ನಮ್ಮ ಮೇಲೆ .. ಮಕ್ಕಳಿಗೆ ಸರಳತೆ ಮತ್ತು ಸಂಯಮಗಳನ್ನು ಕಲಿಸೋಣಾ … ಯಾವುದಕ್ಕೂ ಮಕ್ಕಳ ಬೇಡಿಕೆಗೆ ’ಯೆಸ್’ ಎನ್ನುವ ಮೊದಲು ಒಂದು ’ನೋ’ ಅನ್ನು ಸಹಿಸುವ, ಭರಿಸುವ ಶಕ್ತಿಯನ್ನೂ ಅವರೊಳಗೆ ಬೆಳೆಸೋಣ…

32 Comments

 1. Anuradha joshi
  August 29, 2016
 2. umavallish
  August 18, 2015
 3. Anil Talikoti
  August 17, 2015
 4. Kavya Bhat
  November 18, 2014
 5. nagarathna
  August 5, 2013
 6. sugunamahesh
  August 3, 2013
 7. D.Ravivarma
  August 3, 2013
 8. suseela
  August 3, 2013
 9. C P NAGARAJA
  August 3, 2013
 10. bharathi b v
  August 2, 2013
 11. ರುದ್ರೇಶ ಕಿತ್ತೂರ ಮುದ್ದೇಬಿಹಾಳ
  August 2, 2013
 12. Sharanappa Bachalapur
  August 2, 2013
 13. SUNIL B S
  August 2, 2013
  • Sharadhi
   August 2, 2013
 14. Anonymous
  August 2, 2013
 15. Radhika
  August 2, 2013
  • ಶಿವ
   August 2, 2013
 16. ಶಿವ
  August 2, 2013
 17. ಪು. ಸೂ . ಲಕ್ಷ್ಮೀನಾರಾಯಣ ರಾವ್
  August 2, 2013
 18. soumya
  August 2, 2013
 19. veena shivanna
  August 2, 2013
 20. sunil rao
  August 2, 2013
 21. Raghunandan K
  August 2, 2013
 22. shobhavenkatesh
  August 2, 2013
 23. Anonymous
  August 2, 2013
 24. Geetha b u
  August 2, 2013
 25. ಶಮ, ನಂದಿಬೆಟ್ಟ
  August 2, 2013
 26. Anonymous
  August 2, 2013
 27. Rj
  August 2, 2013
 28. samudyatha
  August 2, 2013
 29. mahantesh
  August 2, 2013

Add Comment

Leave a Reply