Quantcast

‘ಒಗ್ಗರಣೆ ಘಮ ಘಮ!’ – ಅರುಣ್ ಕುಮಾರ್ ಬರೀತಾರೆ

ಅರುಣ್ ಕುಮಾರ್

ಸುಮಾರು ದಿನಗಳ ನಂತರ ಒಂದೊಳ್ಳೆ ಸಿನಿಮಾ ನೋಡಿದ ಆತ್ಮತೃಪ್ತಿ ಮತ್ತು ಮನಸು ಪ್ರೀತಿಯ ಕುಕ್ಕರಿನಲ್ಲಿ ಬೆಂದು, ಅದರ ಆಚೀಚೆಯ ಭಾವಗಳಲ್ಲಿ ಮಿಂದು ಮುದಗೊಂಡಂಥಾ ಆಹ್ಲಾದ… ಬಹುಶಃ ಪ್ರಕಾಶ್ ರೈ ನಿರ್ದೇಶನದ ‘ಒಗ್ಗರಣೆ’ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರಿಗೂ ಇಂಥಾದ್ದೊಂದು ಫೀಲ್ ಆಗೋದು ಖಂಡಿತ.

LOVE IS COOKING

ಇಡೀ ಚಿತ್ರದ ಕೇಂದ್ರಬಿಂದು ಕಾಳಿದಾಸ. ಆತ ನಡುವಯಸ್ಸಿನ ಪುರಾತತ್ವ ವಿಜ್ಞಾನಿ. ಕಾಳಿದಾಸನ ಪಾಲಿಗೆ ಪ್ರೀತಿಯೆಂಬುದು ನಖಶಿಖಾಂತ ಆಸೆ ಹುಟ್ಟಿಸಿ ಹಸಿವು ನೆತ್ತಿಗೇರಿದರೂ ಸಿಗದ ಅಡುಗೆಯಂತೆ! ಆತ ಎಂದೋ ಕಳೆದುಹೋದ ಪ್ರೀತಿಯ ನೆನಪನ್ನೇ ನೆಂಚಿಕೊಂಡು ಬದುಕುವವನು. ಆತನದ್ದು ಕೈತಪ್ಪಿದ ಪ್ರೀತಿಯ ನಿರಾಸೆ, ಭ್ರಮೆಯಂಥಾ ನಿರೀಕ್ಷೆಗಳಿಂದಲೇ ಕಾಲನೂಕುವ ಒಂಟೊಂಟಿ ಬದುಕು. ಮತ್ತೊಂದು ಕಡೆ ಮದುವೆಯ ವಯಸ್ಸು ಮೀರಿದರೂ ತಕ್ಕ ಹುಡುಗ ಸಿಗದೇ ತೊಳಲಾಟದಲ್ಲಿರುವ ಹೆಣ್ಣುಮಗಳು. ಸಿನಿಮಾ-ಸೀರಿಯಲ್ಲುಗಳಿಗೆ ಕಂಠದಾನದ ಕೆಲಸ ನೆಚ್ಚಿಕೊಂಡಿರುವ ಆಕೆ ಗೌರಿ…

ಹೀಗೆ ಮರೆಯಾದ ಪ್ರೀತಿಯ ನಶೆಯಲ್ಲಿ ಒಂಟಿ ಬದುಕು ಸಾಗಿಸುವ ಕಾಳಿದಾಸನತ್ತ ಸ್ನೇಹಿತನೊಬ್ಬನಿಗೆ ಪ್ರೀತಿಪೂರ್ವಕ ಕನಿಕರ. ಏನಾರ ಮಾಡಿ ಕಾಳಿದಾಸನಿಗೊಂದು ಜೋಡಿಯನ್ನು ತಗುಲಿಹಾಕಲು ಆತ ಶತ ಪ್ರಯತ್ನ ನಡೆಸುತ್ತಾನೆ. ಆದರೆ ಹೆಣ್ಣು ನೋಡಲು ಕರೆದೊಯ್ದರೆ ಹೆಣ್ಣಿನ್ನು ಬಿಟ್ಟು ಆ ಮನೆಯ ಅಡುಗೆ ಭಟ್ಟನನ್ನೇ ತನ್ನೊಟ್ಟಿಗೆ ಕರೆತರುವ ಕಾಳಿದಾಸ ಮಹಾನ್ ಭೋ`ಜನ’ಪ್ರಿಯ. ಇಂಥ ಕಾಳಿದಾಸನ ಮನೆಗೆ ದೂರದೂರಿನಿಂದ ಆತನ ಅಕ್ಕನ ಮಗ ಬರುತ್ತಾನೆ. ಜೊತೆಗೆ ಅಪ್ಪ ಕೊಟ್ಟ ಸೆಂಟ್ ಬಾಟಲ್ಲು, ಸೆಲ್ಫೋನನ್ನು ಹೊಸ ವರ್ಷಕ್ಕೆ ಗಿಫ್ಟಾಗಿ ಕೊಡುತ್ತಾನೆ. ಅಲ್ಲಿಗೆ ಕಾಳಿದಾಸನ ಖಾಲಿ ಬದುಕಲ್ಲೂ ಸಹ ಹೊಸ ಅಧ್ಯಾಯವೊಂದು ಶುರುವಾಗುತ್ತದೆ.

ಕಂಠದಾನ ಕಲಾವಿದೆ ಗೌರಿ ಕೆಲಸದೊತ್ತಡದ ನಡುವಿನಲ್ಲೂ ಅಮ್ಮನ ನೆನಪಾಗಿ ಅಮ್ಮ ಮಾಡಿಕೊಡುತ್ತಿದ್ದ ಕುಟ್ಟಿ ದೋಸೆಯನ್ನು ಆರ್ಡರ್ ಮಾಡಲು ಹೋಟೇಲೊಂದಕ್ಕೆ ಕರೆ ಮಾಡುತ್ತಾಳೆ. ಆದರೆ ಆ ಕಾಲು ಮಿಸ್ಸಾಗಿ ಆಕರ್ಿಯಾಲಜಿಸ್ಟ್ ಕಾಳಿದಾಸ್ಗೆ ಬಂದಿರುತ್ತದೆ. ಹಾಗೆ ರಾಂಗ್ ಆಗಿ ಕನೆಕ್ಟ್ ಆದ ಫೋನ್ಕರೆ ಮುಂದೆ ಇವರಿಬ್ಬರ ಮೊಬೈಲ್ ಲವ್ಗೆ ನಾಂದಿಹಾಡುತ್ತದೆ. ಕಾಳಿದಾಸನ ವಿರಹ ಕರಗಿಹೋದಂತಾಗುತ್ತದೆ. ಫೋನಿನಲ್ಲೇ ವಿಧವಿಧದ ಅಡುಗೆ ರೆಸಿಪಿಗಳ ಪ್ರಯೋಗಗಳಾಗುತ್ತವೆ. ಥರಾವರಿ ಕೇಕು ತಯಾರಾಗುತ್ತದೆ. ಆನ್ಲೈನ್ನಲ್ಲಿಯೇ ಪ್ರೇಮ ರಸಾಯನ ಹದಗೊಂಡು ಪಕ್ವವಾಗುತ್ತದೆ.

ಇಷ್ಟೆಲ್ಲಾ ಆದಮೇಲೆ ಇಬ್ಬರಿಗೂ ಪರಸ್ಪರ ಭೇಟಿಯಾಗಬೇಕೆಂಬ ಹಂಬಲ ಶುರುವಾಗುತ್ತದೆ. ಭೇಟಿಯಾಗುವ ದಿನವೂ ಫಿಕ್ಸ್ ಆಗುತ್ತದೆ. ಕಡೆಗೂ ಕಾಳಿದಾಸ ತನ್ನ ಮೊಬೈಲ್ ಗೆಳತಿಯನ್ನು ನೋಡಲು ಸಿದ್ಧನಾಗಿ ಹೊರಡುತ್ತಾನೆ. ಕಾರಿನಲ್ಲಿ ಕುಳಿತು ಇನ್ನೇನು ಸ್ಟಾಟರ್್ ಮಾಡಬೇಕೆನ್ನುವಷ್ಟರಲ್ಲಿ ಮಿರರ್ನಲ್ಲಿ ತನ್ನ ನೆರೆಗೂದಲನ್ನು ಕಂಡ ಕಾಳಿದಾಸನ ಮನಸ್ಸಿನಲ್ಲಿ `ತನ್ನನ್ನು ನೋಡಿ ಆಕೆ ನಿರಾಕರಿಸಿಬಿಟ್ಟರೆ?’ ಎನ್ನುವ ತಳಮಳ. ಕಡೆಗೆ ಭೇಟಿಯನ್ನು ಮೊಟಕುಗೊಳಿಸುತ್ತಾನೆ. ಆದರೆ ಅಕ್ಕನ ಮಗ ಕಾರ್ತಿಕ್ `ಮಾವನ ಹೆಸರಿನಲ್ಲಿ ನಾನೇ ಹೋಗಿ ಆಕೆಯನ್ನು ಭೇಟಿಮಾಡಿಬರುವುದಾಗಿ’ ಹೇಳಿಹೋಗುತ್ತಾನೆ. ಕಾಫಿ ಶಾಪ್ನಲ್ಲಿ ಅವರಿಬ್ಬರ ಭೇಟಿ ಕೂಡಾ ಆಗುತ್ತದೆ. ಆದರೆ ಅಲ್ಲಿ ಗೌರಿಗೂ ಸಹ ಇಂಥಾದ್ದೇ ತಳಮಳ ಕಾಡಿ, ಆಕೆಯ ಬದಲಿಗೆ ತಂಗಿ ಮೇಘನಾ ಬಂದಿರುತ್ತಾಳೆ. ಆದರೆ ಪರಸ್ಪರ ಇಬ್ಬರೂ ಕಾಳಿದಾಸ್ ಮತ್ತು ಗೌರಿ ಎಂದೇ ಪರಿಚಯಿಸಿಕೊಳ್ಳುತ್ತಾರೆ.

ಅಲ್ಲಿಂದ ಕೊನೆಯವರೆಗೂ ಯಡವಟ್ಟುಗಳೇ. ಆದರೆ ಅದರ ಜೊತೆ ಜೊತೆಗೇ ಪ್ರೀತಿಯ ನಿಜವಾದ ಪುಳಕ, ಕಂಪನಗಳು ಕಚಗುಳಿಯಿಡುತ್ತಾ ಸಾಗುತ್ತವೆ. ತನಗಿಂತ ಚಿಕ್ಕ ಹುಡುಗಿಯನ್ನು ಹೇಗೆ ಸಂಗಾತಿಯಾಗಿ ಒಪ್ಪುವುದು ಎಂದು ಕಾಳಿದಾಸನೂ, ತನ್ನ ತಮ್ಮನಂತೆ ಕಾಣುವ ಆತನನ್ನು ಹೇಗೆ ಸ್ವೀಕರಿಸುವುದು ಎಂದು ಈ ಜೋಡಿ ಗೊಂದಲಕ್ಕೆ ಬೀಳುತ್ತದೆ. ಆದರೆ ಕಾಳಿದಾಸ ಮತ್ತು ಗೌರಿ ಹೆಸರಲ್ಲಿ ಕಾತರ್ಿಕ್ ಮತ್ತು ಮೇಘನಾರ ಪ್ರೀತಿಯ ಹೊಸ ಟ್ರ್ಯಾಕು ತೆರೆದುಕೊಳ್ಳುತ್ತದೆ. ಈ ಮಧ್ಯೆ ಆದಿವಾಸಿ ವೃದ್ಧನ ಔಷಧ ವಿದ್ಯೆಯನ್ನು ಹಣ ಮಾಡುವುದಕ್ಕೆ ಬಳಸಿಕೊಳ್ಳುವವರ ವಿರುದ್ಧ ಕಾಳಿದಾಸ್ ಸಂಘರ್ಷದ ಮತ್ತೊಂದು ಎಳೆ ಕಥೆಯ ನಡುವೆಯೇ ಬೆಸೆದುಕೊಂಡಿದೆ.

ಹೀಗೆ ಕಗ್ಗಂಟಿನಲ್ಲಿ ಸಿಲುಕಿದ ಕಾಳಿದಾಸ್ ಮತ್ತು ಗೌರಿಗೆ ನಿಜ ಗೊತ್ತಾಗುತ್ತಾ? ಈ ಅಂಕಲ್ ಮತ್ತು ಆಂಟಿ ರೇಂಜಿನ ಈ ಜೋಡಿ ಒಂದಾಗುತ್ತಾ? ಎಂಬಿತ್ಯಾದಿ ಕುತೂಹಲಕರ ಸಂಗತಿಗಳನ್ನು ನೋಡಬೇಕಾದರೆ ಒಂದೇ ಒಂದುಸಲ ಒಗ್ಗರಣೆ ನೋಡಿಬಂದರೆ ಸಾಕು.

ಇಡೀ ಚಿತ್ರದಲ್ಲಿ ಎಲ್ಲೂ ಕಳಪೆ ಹಾಸ್ಯವಿಲ್ಲ. ಸಿನಿಮಾದಲ್ಲಿ ಬರುವ ಸಹಜವಾದ ಸಂಭಾಷಣೆಯೇ ಸುಳಿನಾಭಿಯಿಂದ ನಗುವುಕ್ಕುವಂತೆ ಮಾಡುತ್ತದೆ. ಇಡೀ ಸಿನಿಮಾದ ಒಂದೊಂದು ಫ್ರೇಮ್ ಕೂಡಾ ಕಮಷರ್ಿಯಲ್ ಜಾಹೀರಾತುಗಳಂತೆ ಸುಂದರ ಮತ್ತು ಶ್ರೀಮಂತವಾಗಿ ಚಿತ್ರೀಕರಿಸಿದ್ದಾರೆ ಛಾಯಾಗ್ರಾಹಕಿ ಪ್ರೀತಾ. ಇಳಯರಾಜಾರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸೂಪಬರ್್. ಇನ್ನು ಪ್ರಕಾಶ್ ರೈ, ಸ್ನೇಹಾ ಯುವ ಪ್ರೇಮಿಗಳಾಗಿ ತೇಜಸ್ ಮತ್ತು ಸಂಯುಕ್ತಾರ ನಟನೆಯೂ ಅದ್ಭುತವೆಂಬಂತಿದೆ. ಒಟ್ಟಾರೆಯಾಗಿ ಪ್ರೀತಿಯ ಪುಳಕಗಳೆಲ್ಲವೂ ಹದಗೊಂಡಂತೆ ಈ ಚಿತ್ರ ಚೆಂದಗೆ ಸಿದ್ಧಗೊಂಡಿದೆ.

ಪ್ರಕಾಶ್ ರೈ ನಟರಾಗಿ ಎಂದೋ ಗೆದ್ದಿದ್ದಾರೆ. ಭಾಷೆಯ ಮೇರೆ ಮೀರಿ ಜನಪ್ರೀತಿ ಗಳಿಸಿದ್ದಾರೆ. ನಿದರ್ೇಶಕರಾಗಿಯೂ ಅವರೀಗ ಆ ಗೆಲುವಿನ ಪರ್ವವನ್ನ ಯಶಸ್ವಿಯಾಗಿ ಮುಂದುವರೆಸುವ ವಾಸನೆ ‘ಒಗ್ಗರಣೆ’ ಘಮದೊಂದಿಗೆ ಬೆರೆತು ಪಸರಿಸಿದಂತಿದೆ.

8 Comments

 1. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ,ಮೊ.9845500890
  June 9, 2014
 2. Jagadeesh
  June 8, 2014
 3. Jagadeesh
  June 8, 2014
 4. D.Ravivarma
  June 7, 2014
 5. siraj bisaralli
  June 7, 2014
 6. Rangaswamy mookanahalli
  June 7, 2014
 7. Anil talikoti
  June 7, 2014
 8. Pavanaja U B
  June 6, 2014

Add Comment

Leave a Reply