Quantcast

ಕನ್ನಡ ಭಾಷಾಬೆಳವಣಿಗೆಯಲ್ಲಿ ‘ಸ್ಟಾರ್’ಗಳ ಪಾತ್ರ

ಗೊರೂರು ಶಿವೇಶ್

ಗಜಕೇಸರಿ ಚಿತ್ರ ಗೆದ್ದಿದೆ. ಇದರಿಂದಾಗಿ ಕನ್ನಡಕ್ಕೆ ಮತ್ತೊಬ್ಬ ಸ್ಟಾರ್ ನಟ ದೊರೆತಂತಾಗಿದೆ. ಕನ್ನಡದ ಸೂಪರ್ಸ್ಟಾರ್ಗಳಾದ ದರ್ಶನ್, ಪುನೀತ್ ರಾಜ್ಕುಮಾರ್ ಮತ್ತು ಸುದೀಪ್ರ ಪಟ್ಟಿಗೆ ಮತ್ತೊಬ್ಬ ನಟನ ಸೇರ್ಪಡೆಯಾಗಿದೆ. ಸಣ್ಣ ಪ್ರಮಾಣದ ನಟನಾಗಿ ಪ್ರವೇಶಿಸಿದ ಯಶ್ಗೆ ಕಿರಾತಕ, ರಾಜಧಾನಿ, ಜಾನು ಚಿತ್ರಗಳ ಯಶಸ್ಸಿನ ನಂತರ ಡ್ರಾಮಾ, ಗೂಗ್ಲಿ, ‘ರಾಜಾಹುಲಿ’ಯ ಅಭೂತಪೂರ್ವ ಹಿಟ್ ನಂತರ ಈಗ ಗಜಕೇಸರಿಯ ಯಶಸ್ಸು ಸೂಪರ್ ಸ್ಟಾರ್ನ ಸಾಲಿಗೆ ನಿಲ್ಲಿಸಿದೆ.

ಆರಂಭಿಕ ಯಶಸ್ಸನ್ನು ಸಾಧಿಸಿ ಭರವಸೆ ಮೂಡಿಸಿದ ಅನೇಕ ನಟರ ಚಿತ್ರಗಳು ಸಾಲುಸಾಲಾಗಿ ತೋಪು ಹೊಡೆದು ನಿರೀಕ್ಷೆಯನ್ನು ಹುಸಿ ಮಾಡಿವೆ. ರಾಘವೇಂದ್ರ ರಾಜ್ಕುಮಾರ್ರವರ ಪ್ರಾರಂಭದ ದಿನಗಳಲ್ಲಿನ ನಂಜುಂಡಿ ಕಲ್ಯಾಣ ಮತ್ತು ಗಜಪತಿ ಗರ್ವಭಂಗ ಚಿತ್ರಗಳು ಸೂಪರ್ ಡ್ಯೂಪರ್ ಹಿಟ್ಟಾದರೂ ಅದೇ ಯಶಸ್ಸನ್ನು ಸಾಧಿಸಲಾಗದೆ ಮುಂದೆ ಚಿತ್ರ ನಿರ್ಮಾಣ ಹಂಚಿಕೆಯ ಕಡೆಗೆ ಗಮನ ಹರಿಸಿದರು. ಕುಮಾರ್ ಗೋವಿಂದ್ ‘ಶ್’ ಮತ್ತು ಅನುರಾಗ ಸಂಗಮದಲ್ಲಿ ವಿಜಯರಾಘವೇಂದ್ರರ ನಿನಗಾಗಿ, ಮುರುಳಿ ಅಭಿನಯದ ಚಂದ್ರಚಕೋರಿ ಮತ್ತು ವಿಜಯ್ ಅಭಿನಯದ ದುನಿಯಾ . . . ಹೀಗೆ ಪ್ರಾರಂಭದಲ್ಲಿ ಅದ್ಭುತ ಯಶಸ್ಸಿನೊಂದಿಗೆ ಚಿತ್ರಜೀವನ ಪ್ರಾರಂಭಗೊಂಡರೂ ಮುಂದೆ ಇದೇ ಯಶಸ್ಸನ್ನು, ಕಾಯ್ದುಕೊಳ್ಳುವಲ್ಲಿ ವಿಫಲರಾಗಿ ಅವರ ಚಿತ್ರ ಜೀವನ ಏಳು, ಬೀಳಿನ ಹಾದಿಯಲ್ಲಿ ಮುನ್ನಡೆದಿದೆ.

ಇನ್ನು ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಸೂಪರ್ಸ್ಟಾರ್ ಗಿರಿಯನ್ನು ಅನುಭವಿಸಿದ ಶಿವರಾಜ್ಕುಮಾರ್ರವರ ಪ್ರಾರಂಭದ ಆನಂದ್, ರಥಸಪ್ತಮಿ, ಮನಮೆಚ್ಚಿದ ಹುಡುಗಿ ಶತದಿನೋತ್ಸವ ಕಂಡು ಹ್ಯಾಟ್ರಿಕ್ ಹೀರೋ ಅನಿಸಿಕೊಂಡರೂ ನಂತರ ಜನುಮದ ಜೋಡಿ, ಜೋಗಿಯ ಅಭೂತಪೂರ್ವ ಯಶಸ್ಸನ್ನು ಕಂಡರು ನಂತರ ಬಂದ ಚಿತ್ರಗಳು ಆ ಮಟ್ಟದ ಯಶಸ್ಸನ್ನು ಕಂಡಿಲ್ಲ. ಕ್ರೇಜಿಸ್ಟಾರ್ ರವಿಚಂದ್ರನ್ರವರ ಪ್ರೇಮಲೋಕ, ರಣಧೀರ ಪ್ರಾರಂಭಿಕ ಯಶಸ್ಸಿನ ನಂತರ ಮುಂದೆ ಅಣ್ಣಯ್ಯ, ಪುಟ್ನಂಜ ಯಶಸ್ಸಿನಲ್ಲಿ ಸಾಗಿದ ನಂತರ ಇತ್ತೀಚಿನವರೆಗಿನ ಮಾಣಿಕ್ಯದ ನಡುವಿನ ಚಿತ್ರಗಳು ವಿಫಲವಾಗಿವೆ. ಮತ್ತೊಬ್ಬ ಸೂಪರ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿದ, ಉಪೇಂದ್ರ ಯಶಸ್ಸು ಕಂಡು ಮುಂದೆ ಗೌರಮ್ಮ, ರಕ್ತಕಣ್ಣೀರು, ಐಶ್ವರ್ಯ, ಸೂಪರ್ ಮುಂತಾದ ಚಿತ್ರಗಳು ಯಶಕಂಡರೂ ಇತ್ತೀಚಿನ ಚಿತ್ರಗಳು ಅಂತ ಯಶಸ್ಸನ್ನು ಸಾಧಿಸಿಲ್ಲ.

ಯಾವುದೇ ನಟನ ಆರಂಭಿಕ ಹಂತದ ಕನಿಷ್ಟ ಐದಾರು ಚಿತ್ರಗಳು ಯಶ ಸಾಧಿಸಿದರೆ ಅವರದೇ ಆದ ಅಭಿಮಾನಿವೃಂದ ಹುಟ್ಟುವುದು ಸಹಜ. ಹಿಂದೆ ಕಳೆದ ಶತಮಾನದ ಅರವತ್ತು-ಎಪ್ಪತ್ತರ ದಶಕದಲ್ಲಿ ವರ್ಷಕ್ಕೆ ಇಪ್ಪತ್ತು-ಇಪ್ಪತ್ತೈದು ಚಿತ್ರಗಳು ನಿರ್ಮಾಣವಾಗುತ್ತಿದ್ದಾಗ ಡಾ. ರಾಜ್ ಕುಮಾರ್ ರವರ ಚಿತ್ರಗಳೇ ಅವುಗಳಲ್ಲಿ ಐದಾರು ಆಗಿರುತ್ತಿದ್ದವು. ಬಹುತೇಕ ಚಿತ್ರಗಳು ಶತದಿನವನ್ನು ಆಚರಿಸುತ್ತಿದ್ದವು. ಹೀಗಾಗಿ ಅವರ ಒಂದಲ್ಲ ಒಂದು ಚಿತ್ರಗಳು ಚಿತ್ರಮಂದಿರಕ್ಕೆ ಕಚ್ಚಿಕೊಂಡಿರುತ್ತಿತ್ತು. ಇವುಗಳ ಜೊತೆ ಪುಟ್ಟಣ್ಣ ಕಣಗಾಲ್ ಸಿದ್ಧಲಿಂಗಯ್ಯರಂಥ ನಿರ್ದೇಶಕರ ಚಿತ್ರಗಳು ರಾಜ್ರ ಜೊತೆಗೆ ಇನ್ನಿತರ ನಟರೊಂದಿಗೆ ಮಾಡಿದ ಚಿತ್ರಗಳು ನಿರ್ದೇಶಕರ ಸಾಮಥ್ರ್ಯದ ಮೇಲೆ ಯಶ ಸಾಧಿಸುತ್ತಿದ್ದವು.

ಇನ್ನೂ ಎಂಭತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಬೆಳೆದಂತೆ ವಾರಕ್ಕೊಂದು ಚಿತ್ರ ಬಿಡುಗಡೆಯಾಗಲು ತೊಡಗಿ ಚಿತ್ರಮಂದಿರಗಳ ಸಂಖ್ಯೆಯೂ ಹೆಚ್ಚಿತು. ಡಾ. ರಾಜ್ ಕುಮಾರ್ ರವರ ಚಿತ್ರಗಳು ಅಬಾಲವೃದ್ಧರಾಗಿ ಎಲ್ಲರನ್ನೂ ರಂಜಿಸಿದರೆ, ಅಂಬರೀಶ್, ಶಂಕರನಾಗರ ಚಿತ್ರಗಳು ಸಾಹಸ ಪ್ರ್ರಿಯರನ್ನು ಸೆಳೆಯಿತು. ವಿಷ್ಣುವರ್ಧನ್ರವರ ಚಿತ್ರಗಳು ಸಾಹಸಪ್ರಿಯರ ಜೊತೆಗೆ ಕೌಟುಂಬಿಕ ವಸ್ತುಗಳನ್ನು ಆಧರಿಸಿ ಗೆದ್ದಿದೆ. ಅನಂತನಾಗ್ರ ಚಿತ್ರಗಳು ಸಾಮಾಜಿಕ ಜೊತೆಜೊತೆಗೆ ಹಾಸ್ಯದಂಥಾ ವಸ್ತುಗಳ ಚಿತ್ರದಲ್ಲಿ ರಂಜಿಸಿದರು. ಇಷ್ಟೆಲ್ಲ ಇದ್ದರೂ ಡಾ. ರಾಜ್ಕುಮಾರ್ರವರ ಚಿತ್ರಗಳನ್ನು ಹೊರತುಪಡಿಸಿ (ಇವರ ಯಾರಿವನು? ಒಂದು ಮುತ್ತಿನ ಕಥೆ, ಅದೇ ಕಣ್ಣು ಚಿತ್ರಗಳೂ ವಿಫಲತೆಯನ್ನು ಹೊಂದಿವೆ.) ಉಳಿದಂತೆ ಚಿತ್ರಗಳು ಅಭೂತಪೂರ್ವ ಯಶಸ್ಸನ್ನು ಸಾಧಿಸಿ ಕನಿಷ್ಟ ಇಪ್ಪತ್ತೈದು ಐವತ್ತು ವಾರಗಳು ನಡೆದ ದಾಖಲೆಗಳಿವೆ. ಉಳಿದ ನಟರ ಯಶಸ್ಸಿನ ಪ್ರಮಾಣ ಇಷ್ಟಿರದಿದ್ದರೂ ವರ್ಷಕ್ಕೆ ಒಂದೆರಡು ಚಿತ್ರಗಳು ಹಿಟ್ ಆಗಿ ಚಾಲ್ತಿಯಲ್ಲಿರುವಂತೆ ಮಾಡಿ ಅವರದೇ ಆದ ಅಭಿಮಾನಿಗಳಲ್ಲಿ ಹುಟ್ಟು ಹಾಕಿ, ಕನ್ನಡ ಚಿತ್ರಗಳು ಚಲನಚಿತ್ರಮಂದಿರದಲ್ಲಿ ಸತತವಾಗಿ ಉಳಿಯುವಂತೆ ಮಾಡಿತು. ಅಷ್ಟೇ ಏಕೆ? ಹೊಸ ಚಲನಚಿತ್ರ ಮಂದಿರಗಳು ಪ್ರಾರಂಭಗೊಂಡವು. ಹಾಸನದಲ್ಲೇ ಆಗ ಏಳು ಚಿತ್ರಮಂದಿರಗಳಿದ್ದವು. (ಶಿವಮೊಗ್ಗ, ತುಮಕೂರುಗಳಿಗೆ ಹೋಲಿಸಿದರೆ ಇವುಗಳ ಸಂಖ್ಯೆ ಕಡಿಮೆಯೆಂದೇ ನಮ್ಮ ಎಣಿಕೆಯಾಗಿತ್ತು.) ಹಾಸನದಿಂದ ಹೊರಟರೆ ಗೊರೂರು, ಅರಕಲಗೂಡು, ಬರಗೂರು, ರಾಮನಾಥಪುರ, (ಜಾತ್ರೆ ಸಮಯದಲ್ಲಿ ಇಲ್ಲಿ ಐದಾರು ಚಿತ್ರಮಂದಿರಗಳು) ಕೊಣನೂರು, ಬಸವಪಟ್ಟಣ, ಕೇರಳಾಪುರ (ಇಂಥ ಚಿಕ್ಕ ಊರಿನಲ್ಲಿ ಎರಡು ಟಾಕೀಸ್ಗಳು) ಸಾಲಿಗ್ರಾಮ ಹೇಗೆ ಪ್ರತಿ ನಾಲ್ಕು ಐದು ಕಿ.ಮೀಗಳಿಗೆ ಒಂದು ಚಿತ್ರಮಂದಿರ.

ಹದಿನೈದು ವರ್ಷಗಳಿಂದೀಚೆಗೆ ಜನಸಂಖ್ಯೆ ದುಪ್ಪಟ್ಟಾಗಿದ್ದರೂ ಥಿಯೇಟರ್ಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹಾಸನದಂಥ ನಗರದಲ್ಲಿ ಆರು ಚಿತ್ರಮಂದಿರಗಳಿದ್ದರೂ ಆರು ಚಿತ್ರಮಂದಿರಗಳಿಗೆ ಒಳ್ಳೆಯ ಚಿತ್ರಗಳು ಸಿಗದಂತೆ ಅಗಿವೆ. ವರ್ಷಕ್ಕೆ ನೂರಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿದ್ದರೂ, ಚಿತ್ರಗಳಿಗೆ ಥಿಯೇಟರ್ ಬಾಡಿಗೆಯನ್ನು ಹುಟ್ಟಿಸಲೂ ಸಾಧ್ಯವಾಗುತ್ತಿಲ್ಲ. ಇರುವ ಆರು ಚಿತ್ರಮಂದಿರಗಳಲ್ಲಿ ಒಂದು ತೆಲುಗು ಚಿತ್ರಗಳಿಗೆ, ಇನ್ನೊಂದು ಹಿಂದಿ, ತಮಿಳು ಚಿತ್ರಕ್ಕೆ ಸೀಮಿತವಾಗಿದೆ. ವಿಪರ್ಯಾಸವೆಂದರೆ ಇತ್ತೀಚೆಗೆ ಬಿಡುಗಡೆಯಾದ ತೆಲುಗು ರೇಸುಗುರ್ರಂ ಚಿತ್ರ ಮೂರು ವಾರಗಳಲ್ಲಿ ಹಾಸನದ ಮೂರು ಚಿತ್ರಮಂದಿರದಲ್ಲಿ ಬಿಡುಗಡೆಯಾದರೆ ಅನೇಕ ಹೊಸಮುಖಗಳ ಕನ್ನಡ ಚಿತ್ರಗಳು ಇಲ್ಲಿ ಬಿಡುಗಡೆಯ ಭಾಗ್ಯವನ್ನು ಕಂಡಿಲ್ಲ. ಇದರಿಂದಾಗಿ ಹಾಸನದಿಂದ ಹೊರಟರೆ ಅರಕಲಗೂಡಿನಲ್ಲಿ ಒಂದು, ಬಸವಾಪಟ್ಟಣ ಮತ್ತು ಕೇರಳಾಪುರ, ಸಾಲಿಗ್ರಾಮದಲ್ಲಿ ಒಂದೊಂದು ಚಲಚಿತ್ರಮಂದಿರಗಳು ಉಳಿಸಿಕೊಂಡಿದ್ದರೆ. ಉಳಿದಂತೆ ಹಾಸನ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಒಂದೆರಡು ಚಿತ್ರಮಂದಿರಗಳು ಉಳಿದುಕೊಂಡಿವೆ. ವಿಶೇಷವೆಂದರೆ ಚಿತ್ರ ಬಿಡುಗಡೆಯಾದ ಒಂದೆರಡು ವರ್ಷದ ನಂತರ ಗ್ರಾಮಾಂತರ ಪ್ರದೇಶದಲ್ಲಿ ಬಿಡುಗಡೆಯಾಗುತ್ತಿದ್ದ ಮಾಣಿಕ್ಯ, ಗಜಕೇಸರಿಯಂಥ ಚಿತ್ರಗಳು ಏಕಕಾಲದಲ್ಲಿ ಬೆಂಗಳೂರು, ಹಾಸನದ ಜೊತೆಗೆ ಬಸವಾಪಟ್ಟಣದಂಥ ಗ್ರಾಮಾಂತರ ಪ್ರದೇಶದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಇದಕ್ಕೆ ಕಾರಣವನ್ನು ಅರಸುತ್ತಾ ಹೊರಟರೆ ದೂರದರ್ಶನ, ಕೇಬಲ್ ಟಿ.ವಿ, ನಕಲಿ ಡಿ.ವಿ.ಡಿ, ಸಿ.ಡಿಗಳು ಎಲ್ಲೆಡೆ ಲಭ್ಯವಾಗುತ್ತಿರುವುದು. ಮುಂತಾದ ಕಾರಣಗಳು ಸಿಗುತ್ತವೆ. ಇದರ ಜೊತೆಗೆ ಚಿತ್ರಮಂದಿರದಲ್ಲಿ ದೀರ್ಘಕಾಲ ಉಳಿಯುವ ಚಿತ್ರಗಳು ಕಡಿಮೆಯಾಗಿದ್ದು, ರಾಜ್, ವಿಷ್ಣು, ಅಂಬರೀಷ್ರ ವಯಸ್ಸಿನ ಕಾರಣ ಹಿನ್ನಲೆಗೆ ಸರಿದು ಅವರ ಚಿತ್ರಗಳು ಕ್ಷೀಣಿಸಿದ್ದು, ಅವರ ಚಿತ್ರಗಳ ರೀತಿ ದೀರ್ಘಕಾಲ ಥಿಯೇಟರಿನಲ್ಲಿ ಉಳಿಯುವ ಚಿತ್ರಗಳು ಕೂಡ ಕಡಿಮೆಯಾದದ್ದು ಕೂಡ ಕಾರಣವಾಯಿತು. ಅಲ್ಲೊಂದು ಜೋಗಿ, ಇಲ್ಲೊಂದು ಆಪ್ತಮಿತ್ರ ಮತ್ತೊಂದು ಮುಂಗಾರು ಮಳೆ ಚಿತ್ರಗಳು ಅಭೂತಪೂರ್ವ ಯಶಸ್ಸನ್ನು ಸಾಧಿಸಿದವೇ ಹೊರತು ಅದೇ ಮಟ್ಟಕ್ಕೇರೋ ಶತದಿನೋತ್ಸವದತ್ತ ಹತ್ತಾರು ಚಿತ್ರಮಂದಿರಗಳಲ್ಲಿ ಮುನ್ನೆಡೆಯುವ ಚಿತ್ರಗಳ ಸಂಖ್ಯೆ ಕಡಿಮೆಯಾಯಿತು.

ಪುನೀತ್ ರಾಜ್ಕುಮಾರ್ರವರ ಆರಂಭದ ಚಿತ್ರಗಳು ಅದ್ಭುತ ಯಶಸ್ಸನ್ನು ಸಾಧಿಸಿ ಸೂಪರ್ಸ್ಟಾರ್ ಮಟ್ಟಕ್ಕೇರಿಸಿದೆ. ಆದರೆ ಅವರ ಇತ್ತೀಚಿನ ಚಿತ್ರಗಳು ನಿರೀಕ್ಷಿತ ಯಶಸ್ಸನ್ನು ಸಾಧಿಸದೆ ಇರುವುದು ಮತ್ತು ನಿನ್ನಿಂದಲೇ ಚಿತ್ರದ ಹೀನಾಯ ಸೋಲು ಅವರ ಚಿತ್ರಗಳು ಆಯ್ಕೆಯ ಬಗ್ಗೆ ಮರುಯೋಚನೆಯನ್ನುಂಟು ಮಾಡಿದೆ. ಇನ್ನೂ ದರ್ಶನ್ ರವರು ಚಿತ್ರಗಳಲ್ಲಿ ಕೆಲವು ಉತ್ತಮ ಯಶಸ್ಸನ್ನು ಮತ್ತೆ ಕೆಲವು ಸಾಧಾರಣಯಶಸ್ಸನ್ನು ಸಾಧಿಸಿ ನಿಮರ್ಾಪಕರ ಕೈ ಕಚ್ಚ್ಟದೆ ಇರುವುದು ಸಮಾಧಾನದ ಸಂಗತಿಯಾದರೆ ಸುದೀಪ್ರವರ ಚಿತ್ರಗಳು ಗಲ್ಲಪೆಟ್ಟಿಗೆಯಲ್ಲಿ ಕಚ್ಚಿಕೊಳುತ್ತಿರುವುದರಿಂದ ಸೂಪರ್ಸ್ಟಾರ್ಗಳ ಯಾದಿಯಲ್ಲಿ ಅವರೂ ಸೇರಿಕೊಂಡಿದ್ದು ಈಗ ಯಶ್ರ ಸರದಿ.

ಭಾಷೆಯ ಉಳಿವಿಗೆ ಇಂಥ ಸೂಪರ್ ಸ್ಟಾರ್ಗಳ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಭಾಷಾ ಬೆಳವಣಿಗೆಯಲ್ಲಿ ಭಾಷಾಭಿಮಾನ ಮೂಡಿಸುವಲ್ಲಿ ಇಂಥ ನಟರ ಕೊಡುಗೆ ಹೆಚ್ಚು. ಈ ನಟರ ಪ್ರಭಾವ ವಿದ್ಯಾಥರ್ಿಗಳ ಮತ್ತು ಯುವಜನರ ಮೇಲೆ ಸಾಕಷ್ಟು ಹೆಚ್ಚಿದೆ. ಹೀಗಾಗಿ ಕನ್ನಡದಲ್ಲಿ ಇನ್ನೂ ನಾಲ್ಕೈದು ಸೂಪರ್ಸ್ಟಾರ್ ಗಳ ಅಗತ್ಯವಿದೆ. ಏಳೆಂಟು ಜನ ಸೂಪರ್ಸ್ಟಾರ್ಗಳಿದ್ದರೆ ವರ್ಷಕ್ಕೆ ಅವರ ಮೂರು ಚಿತ್ರಗಳು ಎಂದರೆ ವರ್ಷಕ್ಕೆ ಇಪ್ಪತ್ನಾಲ್ಕು ಚಿತ್ರಗಳು ಎಂದರೆ ಪ್ರತಿ ಹದಿನೈದು ಇಪ್ಪತ್ತು ದಿನಗಳಿಗೆ ಒಂದು ಚಿತ್ರಗಳು ಬಿಡಗಡೆಯಾದರೆ ಆಯಾ ನಟರ ಅಭಿಮಾನಿಗಳಿಂದಾಗಿ ಚಿತ್ರಮಂದಿರಗಳಲ್ಲಿ ಕಟೌಟ್ಗಳು, ಫ್ಲೆಕ್ಸ್ಗಳು ರಾರಾಜಿಸುತ್ತವೆ. ಬಿಡುಗಡೆಯಾದ ನಾಲ್ಕೈದು ದಿನಗಳು ಚಿತ್ರಮಂದಿರಗಳು ತುಂಬಿ ತುಳುಕುತ್ತಿದೆ. ಇಂಥ ಯಶಸ್ಸು ತರುವ ನಟರಿಗೆ ನಿಮರ್ಾಪಕರು ಧಾರಾಳವಾಗಿ ಖರ್ಚು ಮಾಡುವುದರಿಂದ ಚಿತ್ರದ ಅದ್ಧೂರಿತನದಿಂದಾಗಿ ಇತರೆ ಭಾಷಿಕರನ್ನು ಸೆಳೆಯಲು ಸಾಕು.

ಯಾವುದೇ ನಟನ ‘ಸೂಪರ್ಸ್ಟಾರ್’ ಗಿರಿಯಿಂದಾಗಿ ಆರಂಭದ ದಿನಗಳಲಿ ಚಿತ್ರಮಂದಿರವನ್ನು ತುಂಬಿಸಿದರೂ ಮುಂದೆ ಅದನ್ನು ಕಾಯ್ದುಕೊಳ್ಳುವುದು ಆ ಚಿತ್ರದ ಕಥೆ, ತಾಂತ್ರಿಕತೆ ಮತ್ತು ಗುಣಮಟ್ಟದಿಂದಾಗಿ ಇದು ತಮಿಳಿನ ಶಂಕರ್, ತೆಲುಗಿನ ರಾಜಮೌಳಿಯಂಥ ನಿರ್ದೇಶಕರು ಹಿಂದಿ ಭಾಷೆಗೆ ಸಡ್ಡು ಹೊಡೆಯುವಂತೆ ಚಿತ್ರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಏಳೆಂಟು ಸೂಪರ್ಸ್ಟಾರ್ಗಳ ಅಭಿಮಾನಿವೃಂದವೂ ಬಲವೂ ಇದೆ. ಇತ್ತ ತಮಿಳಿನಲ್ಲಿ ರಜನೀಕಾಂತ್, ಕಮಲಹಾಸನ್ರ ಚಿತ್ರಗಳು ವರ್ಷಕ್ಕೊಮ್ಮೆ ಬಿಡುಗಡೆಯಾಗಿ ಉಳಿದಂತೆ ವಿಜಯ್, ಸೂರ್ಯ, ವಿಕ್ರಮ್ ರ ಚಿತ್ರಗಳ ಜೊತೆಗೆ ಅಲ್ಲಿನ ನಿರ್ದೇಶಕರು ನೆಲದ ವಾಸನೆಯ ಚಿತ್ರಗಳಿಂದಾಗಿ ಚಾಲ್ತಿಯಲ್ಲಿಟ್ಟಿದ್ದಾರೆ.

ಈ ನಿಟ್ಟಿನಲ್ಲಿ ಕನ್ನಡಕ್ಕೆ ಕನಿಷ್ಠ ಇನ್ನಿಬ್ಬರಾದರೂ ಸೂಪರ್ಸ್ಟಾರ್ಗಳು ಅಗತ್ಯವಿದೆ. ಈಗಾಗಲೇ ಹತ್ತು ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ಶಿವರಾಜ್ಕುಮಾರ್, ಉಪೇಂದ್ರ ಮತ್ತು ಯಶಸ್ವಿ ಹಾದಿಯೆರಿಳಿದ ಗಣೇಶ್, ವಿಜಯ ಹೊಸನಟರಲ್ಲಿ ಯಾರಾದರೂ ಆಗಲಿ ಅ ಪಟ್ಟವೆಂದರೆ ಕನ್ನಡ ಭಾಷೆಗೂ ಅನುಕೂಲವಾಗಲಿದೆ. ಆದರೆ ರಿಮೇಕ್ ಚಿತ್ರಗಳನ್ನು ಬಿಟ್ಟರೆ ಅಲ್ಲಿನ ನೆಲದ ಕಥೆಯನ್ನೊಳಗೊಂಡ ಮಣ್ಣಿನ ವಾಸನೆಯ ಚಿತ್ರಗಳಾದರೆ ಕನ್ನಡ ಭಾಷಾ ಇತಿಹಾಸದ ಭಾಗವಾದರೂ ಆಗಿ ಆ ಚಿತ್ರಗಳು ಉಳಿಯುತ್ತವೆ.

4 Comments

 1. Mallikarjuna
  June 12, 2014
 2. raju
  June 12, 2014
 3. ashwini rao.k.n.
  June 12, 2014
 4. mohan devang
  June 11, 2014

Add Comment

Leave a Reply