Quantcast

ತಿನ್ನುವುದಕ್ಕಾಗಿ ಬದುಕಿ ಎನ್ನುವ ‘ಒಗ್ಗರಣೆ’, ನೋಡಿದೆಲ್ಲ ನಿಜವಲ್ಲವೆನ್ನುವ ‘ದೃಶ್ಯ’

ಗೊರೂರು ಶಿವೇಶ್

ಹದಿನೈದು ದಿನಗಳ ಅವಧಿಯಲ್ಲಿ ಎರಡು ಮಲೆಯಾಳಂ ಸಿನಿಮಾಧಾರಿತ ರಿಮೇಕ್ ಸಿನಿಮಾಗಳು ಬಿಡುಗಡೆಯಾಗಿವೆ. ಒಂದು ಮಲೆಯಾಳಂದ ‘ಸಾಲ್ಟ್ ಅಂಡ್ ಪೆಪ್ಪರ್’ನ ರಿಮೇಕ್ ‘ಒಗ್ಗರಣೆ ‘ಬದುಕುವುದಕ್ಕಾಗಿ ತಿನ್ನಿ’ ಎಂಬ ಪುರಾತನ ನಂಬಿಕೆ, ಮಹಾನ್ ಪುರುಷರ ಆದರ್ಶವನ್ನು ಬದಲಾಯಿಸಿ ತಿನ್ನುವುದಕ್ಕಾಗಿ ಬದುಕಿ’ ಎಂಬ ಆಧುನಿಕ ನೀತಿಯನ್ನು ಹೇಳುವ ಚಿತ್ರ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಟಿ.ವಿ. ಛಾನೆಲ್ಗಳು ದಿನ ಒಂದೆರಡು ಗಂಟೆಗಳನ್ನು ರುಚಿ-ರುಚಿ ಅಡುಗೆ ತಯಾರಿಕೆಗೆ ಮೀಸಲಿಡುತ್ತಿರುವುದನ್ನು ಗಮನಿಸಿದರೆ ಜನರಿಗೆ ಅಡುಗೆಯ ಬಗೆಗಿನ ಅಭಿರುಚಿ ಹೆಚ್ಚುತಿದೆ ಎಂಬುದು ರುಜುವಾತಾಗುತ್ತಿದೆ.

ಆದರೆ ಚಿತ್ರವೂ ಅಡುಗೆ ವೈವಿಧ್ಯ ಆಹಾರದ ಹಿನ್ನೆಲೆಯಲ್ಲಿ ನಡು ವಯಸ್ಸಿನಲ್ಲಿ ಅರಳುವ ಪ್ರೀತಿಯ ಕುರಿತಾಗಿ ಹೇಳುತ್ತದೆ. ಷೇಕ್ಸ್ ಪಿಯರ್ ನ ಪ್ರಖ್ಯಾತ ನಾಟಕ ‘ಕಾಮಿಡಿ ಆಫ್ ಎರರ್ಸ್’ ನಾಟಕದ ಸಿದ್ಧಾಂತದ ಇಲ್ಲಿ ಕೆಲಸ ಮಾಡಿದೆ. ರಾಂಗ್ ನಂಬರಿನಿಂದ ಪರಿಚಯವಾಗಿ ಅಡುಗೆ ಅಭಿರುಚಿಯಿಂದ ಬೆಳೆಯುವ ಸ್ನೇಹಕ್ಕೆ ಪರಸ್ಪರ ಭೇಟಿೆಯಾಗಲು ನಿರ್ಧರಿಸಿದರೂ, ತಮ್ಮ ವಯಸ್ಸು ತಮ್ಮ ಪ್ರೇಮಕ್ಕೆ ಭಂಗವಾಗಬಹುದೆಂಬ ಕಾರಣಕ್ಕೆ ನಾಯಕಿ ತನ್ನ ತಂಗಿಯನ್ನು ಕಳುಹಿಸಿದರೆ ನಾಯಕ ತನ್ನ ಅಕ್ಕನ ಮಗನನ್ನು ಭೇಟಿಗೆ ಕಳುಹಿಸುತ್ತಾನೆ. ಮುಂದೆ ಉಂಟಾಗುವ ಅನೇಕ ಗೊಂದಲಗಳು ಇಬ್ಬರ ನಡುವೆ ವಿರಸ, ಸರಸ, ನೋವು, ವಿಷಾಧ ಮೂಡಿಸಿ ಕೊನೆಗೆ ವಿನೋದದಿಂದ ಮುಕ್ತಾಯವಾಗುತ್ತದೆ.

ಭಾರತೀಯ ಅದರಲ್ಲೂ ಕನರ್ಾಟಕದ ವೈವಿಧ್ಯಮಯ ಆಹಾರಗಳ ಜೊತೆಗೆ ವಿದೇಶಿ ಕೇಕ್ನವರೆಗೂ ಹಲವು ಖಾದ್ಯಗಳು ಚಿತ್ರದಲ್ಲಿ ಆಗಾಗ್ಗೆ ಕಾಣಿಸಿಕೊಂಡು ಬಾಯಲ್ಲಿ ನೀರೂರಿಸುತ್ತವೆ. ಆಹಾರ ಸೇವನೆ ಎಂದರೆ ಬರಿ ತಿನ್ನುವುದು ಎಂದುಕೊಂಡಿರುವ ನಮಗೆ ಅದನ್ನು ಆಸ್ವಾದಿಸುವುದು ಎಂಬುದನ್ನು ತಿಳಿಸಿಕೊಡುತ್ತದೆ. ಪ್ರೇಮದ ಹೂರಣವಿರುವ ಚಿತ್ರಕ್ಕೆ ಹಾಸ್ಯದ ಲೇಪನವಿದೆ. ಉತ್ತಮ ಸಂಗೀತ, ಸಾಹಿತ್ಯ, ಛಾಯಗ್ರಹಣ, ಅಭಿನಯ ಮೇಳೈಸಿ ಚಿತ್ರವನ್ನು ಸುಂದರವಾಗಿಸಿದೆ.

ಇನ್ನೂ ಈ ವಾರ ಬಿಡುಗಡೆಯಾಗುತ್ತಿರುವ ದೃಶ್ಯ ಮಲೆಯಾಳಂನ ಅದೇ ಹೆಸರಿನ ಚಿತ್ರದ ರಿಮೇಕ್. ಮಲೆಯಾಳಂನಲ್ಲಿ ಇದುವರೆವಿಗೂ ಬಿಡುಗಡೆಯಾದ ಚಿತ್ರಗಳಲ್ಲಿ ಅತಿ ಹೆಚ್ಚು ಎಂದರೆ ಅರವತ್ತೈದುಕೋಟಿ ರೂ. ಅಧಿಕಗಳಿಕೆ ಮಾಡಿರುವ ಚಿತ್ರವೆಂಬ ಹೆಗ್ಗಳಿಕೆ ಇದಕ್ಕಿದೆ. ಬಹುತೇಕ ಭಾರತೀಯ ಭಾಷೆಗಳಿಗೆ ರಿಮೇಕ್ ಆಗುತ್ತಿರುವ ಚಿತ್ರವೂ ಹೌದು. ವಿಷ್ಣುವರ್ಧನ ಮತ್ತು ದ್ವಾರಕೀಶ್ಗೆ ಚಿತ್ರರಂಗದಲ್ಲಿ ಮರುಜೀವ ನೀಡಿದ ಮತ್ತೊಂದು ಮಲೆಯಾಳಂ ಚಿತ್ರ ‘ಮಣಿಚಿತ್ರತ್ತಲ್’ ನ ಕನ್ನಡ ರಿಮೇಕ್ ‘ಆಪ್ತಮಿತ್ರ’ದ ನಿರ್ದೇಶಕ ಪಿ.ವಾಸು ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಮತ್ತೊಂದು ವಿಶೇಷ. ಬಹುಶಃ ವಿಷ್ಣುವರ್ಧನ್ ಬದುಕಿದ್ದರೆ ಅವರಿಗೆ ಹೇಳಿ ಮಾಡಿಸಿದ ಚಿತ್ರವೂ ಇದಾಗುತಿತ್ತು.

‘ದೃಶ್ಯ’ ಚಿತ್ರ ಒಂದು ಸಾಮಾಜಿಕ ಕ್ರೈಂ ಥ್ರಿಲರ್ ಚಿತ್ರ ನಾಯಕ (ರವಿಚಂದ್ರನ್) ಒಬ್ಬ ಅನಾಥ. ಹೆಚ್ಚು ಓದಲಾಗದೆ ಕೃಷಿಯನ್ನೇ ಅವಲಂಬಿಸಿ ಬೆಳೆದವ. ಮುಂದೆ ಗ್ರಾಮಾಂತರ ಪ್ರದೇಶದಲ್ಲಿ ಕೇಬಲ್ ನೆಟ್ವರ್ಕೊಂವೊಂದನ್ನು ಪ್ರಾರಂಭಿಸಿ ಉದ್ಯಮಿಯಾಗುತ್ತದೆ. ಮಿತವ್ಯಯಿಯಾದ ಆತನಿಗೆ ಜಿಪುಣನೆಂಬ ಪಟ್ಟ. ಅವನ ಹೆಂಡತಿ (ನವ್ಯಾ ನಾಯರ್) ಮತ್ತು ಕಾಲೇಜಿನಲ್ಲಿ ಮತ್ತು ಆರನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಹೆಣ್ಣುಮಕ್ಕಳ ಸುಖಿಕುಟುಂಬ. ಸಂಸಾರ ಪ್ರಿಯನಾದ ಆತನಿಗೆ ಸಿನಿಮಾ ನೋಡುವ ಹುಚ್ಚು. ತನ್ನ ಕೇಬಲ್ ನೆಟ್ವರ್ಕ್  ನ ಪುಟ್ಟ ಕಛೇರಿಯಲ್ಲಿ ಸಿನಿಮಾ ನೋಡುವುದರಲ್ಲಿ ಅವನ ಸಮಯ ಕಳೆಯುವುದರ ಜೊತೆಗೆ ಅವನ ಸುಪ್ತಮನಸ್ಸಿನಲ್ಲಿ ನೆಲೆಗೊಳ್ಳುವ ಅ ಸಿನಿಮಾಗಳ ಸಂದೇಶಗಳು ಅವನ ನಿಜಜೀವನದ ಸಮಸ್ಯೆಗಳಿಗೆ ಪರಿಹಾರವಾಗಿ ಮೂಡಿಬರುತ್ತಿರುತ್ತವೆ.

ಕಾಲೇಜಿನಿಂದ ಟ್ರಿಪ್ ಹೋದ ಸಂದರ್ಭದಲ್ಲಿ ಬಾತ್ರೂಂನಲ್ಲಿ ಸ್ನಾನ ಮಾಡುತ್ತಿರುವ ಹಿರಿಯಮಗಳ ದೃಶ್ಯವನ್ನು ಅವಳ ಸಹಪಾಠಿ ಅವಳಿಗೆ ಗೊತ್ತಿಲ್ಲದಂತೆ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿರುತ್ತಾನೆ. ಆತ ಲೇಡಿ ಇನ್ಸ್ಸೆಕ್ಟರ್ ಜನರಲ್ ಗೀತಾಳ ಮಗ. ಮುಂದೆ ಅದನ್ನಿಟ್ಟುಕೊಂಡು ಆತ ಬ್ಲಾಕ್ಮೇಲ್ ಮಾಡಲು ಪ್ರಯತ್ನಿಸಿದಾಗ ನಡೆಯುವ ಆಕಸ್ಮಿಕದಲ್ಲಿ ತಾಯಿ-ಮಗಳಿಂದ ಕೊಲೆಗೀಡಾಗುತ್ತಾನೆ. ತಾಯಿ-ಮಗಳು ಕಾಂಪೋಸ್ಟ್ ಗುಂಡಿಯಲ್ಲಿ ಶವವನ್ನು ಹೂತುಹಾಕುವುದನ್ನು ಎರಡನೆ ಮಗಳು ನೋಡಿಬಿಡುತ್ತಾಳೆ.

ಆ ವಿಷಯ ನಾಯಕನಿಗೆ ತಿಳಿಯುತ್ತದೆ. ನಾಯಕ ಸ್ಥಳದಲ್ಲಿದ್ದ ಒಡೆದ ಸೆಲ್ ಫೋನ್ ಮತ್ತು ಕಾರಿನ ಸಾಕ್ಷ್ಯವನ್ನು ನಾಶಮಾಡುವ ಸಂದರ್ಭದಲ್ಲಿ ಅವನ ಮೇಲೆ ದ್ವೇಷ ಸಾಧಿಸುತ್ತಿದ್ದ ಕಾನ್ಸ್ಟೇಬಲ್ (ಅಚ್ಯುತ) ನೋಡಿಬಿಡುತ್ತಾನೆ. ಅದೇ ದಿನ ನಾಯಕ ಮನೆಯವರೆರಲ್ಲರನ್ನು ಟ್ರಿಪ್ ಕರೆದುಕೊಂಡು ಹೋಗುವುದರ ಜೊತೆಗೆ ಸಿನಿಮಾ, ಹೋಟೆಲ್ಗೆ ಕರೆದೊಯ್ಯುತ್ತಾನೆ.

ಮುಂದೆ ಮಗ ಕಳೆದುಹೋದ ವಿಷಯ ತಾಯಿ ಗೀತಾಳಿಗೆ ತಿಳಿದು ಆಕೆ ತನಿಖೆ ಪ್ರಾರಂಭಿಸುತ್ತಾಳೆ. ಅನುಮಾನ ನಾಯಕನ ಸಂಸಾರದ ಸುತ್ತಲೂ ಸುತ್ತಿ ಅವರ ವಿಚಾರಣೆ ಪ್ರಾರಂಭವಾಗುತ್ತದೆ. ಆದರೆ ಮೊದಲೆ ತಾವೆಲ್ಲರೂ ಕೊಲೆ ನಡೆದ ಸಂದರ್ಭದಲ್ಲಿ ಊರಲಿಲ್ಲವೆಂದು ನಾಯಕ ಹೇಳಿಕೊಟ್ಟಂತೆ ಒಂದೇ ರೀತಿ ಸಾಕ್ಷಿ ನುಡಿಯುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಬಸ್ ಸಿನಿಮಾ ಟಿಕೇಟ್ ಮತ್ತು ರೆಸ್ಟೋರೆಂಟ್ನ ಬಿಲ್ ತೋರಿಸುತ್ತಾರೆ. ಸಂಬಂಧಿಸಿದ ಸಿನಿಮಾ, ಲಾಡ್ಜಗಳಲ್ಲಿ ವಿಚಾರಿಸಿದಾಗ ತಾವೆಲ್ಲ ಆ ದಿನ ಆ ಕುಟುಂಬವನ್ನು ಕಂಡಿದ್ದಾಗಿ ಅಲ್ಲಿದ್ದವರು ತಿಳಿಸುತ್ತಾರೆ.

ಐ.ಜಿ. ಗೀತಾಳಿಗೆ ಘಟನೆ ನಡೆದ ದಿನವೆ ನಾಯಕ ಆ ಟಿಕೇಟ್ಗಳನ್ನು ನಾಯಕ ಖರೀದಿಸಿ ಮಾರನೆ ದಿನ ಅವರನ್ನೆಲ್ಲಾ ಟ್ರಿಪ್ಗೆ ಕರೆದೊಯ್ದ ಬಗ್ಗೆ ಅನುಮಾನ ಮೂಡುತ್ತದೆ. ಕೋರ್ಟ್ನಲ್ಲಿ ಕೇಸ್ ನಿಲ್ಲುವುದಿಲ್ಲ ಎಂದು ತಿಳಿದು ಸಂಸಾರವನ್ನು ಬಂಧಿಸಿ ವಿಷಯ ತಿಳಿಯಲು ತೀವ್ರ ಚಿತ್ರಹಿಂಸೆ ಮಾಡಿದರೂ ವಿಷಯ ಹೊರಬರುವುದಿಲ್ಲ. ಕೊನೆಗೆ ಎರಡನೇ ಮಗಳು ಚಿತ್ರಹಿಂಸೆ ತಡೆಯಲಾರದೆ ಹೂತಿಟ್ಟ ಸ್ಥಳ ನೋಡಿರುವುದಾಗಿ ತಿಳಿಸುತ್ತಾಳೆ. ಹೂತಿಟ್ಟ ಸ್ಥಳಕ್ಕೆ ಬಂದು ಅಗೆದಾಗ ಅಲ್ಲಿ ಮಗನ ಶವ ಸಿಕ್ಕದೆ ಬದಲಾಗಿ ಅಲ್ಲೊಂದು ದನದ ಕಳೇಬರವಿರುತ್ತದೆ. ಆ ಸಮಯದಲ್ಲಿ ಹಾಜರಾಗುವ ಮಾಧ್ಯಮದವರೆದುರು ಎರಡನೇ ಮಗಳು ತನಗೆ ನೀಡಿದ ಚಿತ್ರ ಹಿಂಸೆ ನೀಡಿರುವ ಬಗ್ಗೆ ತಿಳಿಸುತ್ತಾಳೆ. ಇದು ಮುಂದೆ ದೊಡ್ಡ ಸುದ್ದಿಯಾಗಿ ಕಾನ್ ಸ್ಟೇಬಲ್ ಸಸ್ಪೆಂಡ್ ಆಗುವುದರ ಜೊತೆಗೆ ಗೀತಾ ತನ್ನ ಐ.ಜಿ. ಹುದ್ದೆಗೆ ರಾಜೀನಾಮೆ ನೀಡುತ್ತಾಳೆ. ಹಾಗಾದರೆ ಐ.ಜಿ. ಮಗನ ಶವ ಏನಾಯ್ತು ? ನಾಯಕ ಆ ಸಮಸ್ಯೆಯಿಂದ ಹೇಗೆ ಹೊರಬಂದ? ಎಂಬುದು ಚಿತ್ರದ ಕ್ಲೈಮ್ಯಾಕ್ಸ್. ಮಲೆಯಾಳಂನಲ್ಲಿ ಸೂಪರ್ ಹಿಟ್ಟಾದ ಚಿತ್ರ ರವಿಚಂದ್ರನ್ಗೂ ಮರುಹುಟ್ಟ ನೀಡಬಹುದೆಂಬ ನಿರೀಕ್ಷೆ ಇದೆ. ಫ್ಯಾಮಿಲಿ ಸೆಂಟಿಮೆಂಟ್ಗೆ ಕ್ರೈಂ ಥ್ರಿಲ್ಗಳನ್ನು ಮೇಳೈಸಿರುವ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಬಹುದೆಂಬ ಭರವಸೆ ಇದೆ.

ವಿಷ್ಣುವರ್ಧನ ಅಭಿನಯದ ರಾಯರು ಬಂದರು ಮಾವನ ಮನೆಗೆ, ಆಪ್ತಮಿತ್ರ, ಅಂಬರೀಶ್ ಅಭಿನಯದ ನ್ಯೂಡೆಲ್ಲಿ, ರಮೇಶ್ ಅಭಿನಯದ ಸಂಗಮ, ಸುದೀಪ್ ಅಭಿನಯದ ಕಾಮಣ್ಣನ ಮಕ್ಕಳು, ರಾಕ್ ಲೈನ್ವೆಂಕಟೇಶ್, ಓಂಪ್ರಕಾಶ್ರಾವ್ ಅಭಿನಯದ ‘ಡಕೋಟ ಎಕ್ಸ್ಪ್ರೆಸ್’ ಕನ್ನಡದಲ್ಲಿ ಯಶ ಕಂಡ ಮಲೆಯಾಳಂ ಚಿತ್ರಗಳ ರಿಮೇಕ್ಗಳು ಅತಿ ಕಡಿಮೆ ವೆಚ್ಚದಲ್ಲಿ ತನ್ನ ಕಥೆ, ಕೊನೆಯವರೆವಿಗೂ ಉಸಿರು ಬಿಗಿಹಿಡಿಯವಂತೆ ಮಾಡುವ ಸನ್ನಿವೇಶಗಳು, ತಿಳಿಹಾಸ್ಯ, ಕಣ್ತುಂಬುವ ಪ್ರಕೃತಿಯ ಚಿತ್ರಣ, ಕಿವಿಗಿಂಪೆನಿಸುವ ಸಂಗೀತ, ಮನ ಕಲಕುವ ಸಾಹಿತ್ಯ ಸಂಭಾಷಣೆಯ ಚಿತ್ರಗಳು, ಕೇರಳದಂತೆ ಕನ್ನಡಿಗರ ಮನವನ್ನು ಗೆದ್ದಿವೆ.

ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಕನ್ನಡದ ಹೊಸ ಹಳೆ ಚಿತ್ರಗಳಿಗೆ ಪೈಪೋಟಿ ನೀಡಿ. ಮುಂದೆ ಅವುಳುಡೆ ರಾವುಗಳ್ (ಅವಳ ರಾತ್ರಿಗಳು ಕನ್ನಡದ ರಿಮೇಕ್) ಮೂಲಕ ಕಾಮ ಪ್ರಚೋದಕ ಚಿತ್ರಗಳಿಗೆ ನಾಂದಿ ಹಾಡಿದರೂ ಮುಂದೆ ಅಲ್ಲಿಂದ ಹೊರಳಿ ಸುಂದರ ಆರಂಭ, ತಮಾಷೆಯ ಬೆಳವಣಿಗೆ, ಕುತೂಹಲದ ಮಧ್ಯಂತರ ಮತ್ತು ವಿಷಾದ ಇಲ್ಲವೆ ವಿನೋದದ ಮುಕ್ತಾಯದ ಚಿತ್ರಗಳು ಮಲೆಯಾಳಂ ಚಿತ್ರರಂಗವನ್ನು ಸಚೇತನವಾಗಿರಿಸಿವೆ. ವಿಸ್ತೀರ್ಣ ಜನಸಂಖ್ಯೆಯಲ್ಲಿ ಕರ್ನಾಟಕದ ಮೂರನೇ ಎರಡರಷ್ಟಿದ್ದರೂ ಅಲ್ಲಿ ಬಿಡುಗಡೆಯಾಗುವ ಸಿನಿಮಾಗಳ ಸಂಖ್ಯೆ ಪ್ರತಿವರ್ಷ ನೂರಕ್ಕಿಂತಲೂ ಹೆಚ್ಚಿದೆ.

ಆದರೆ ಕನ್ನಡದಲ್ಲಿ ಬಿಡುಗಡೆಯಾಗುವ ಸಿನಿಮಾಗಳ ಸಂಖ್ಯೆ ಅಷ್ಟೇ ಇದ್ದರೂ ಶೇ 75ರಷ್ಟು ರಿಮೇಕ್ ಚಿತ್ರಗಳು ಉಳಿದ 25 ರಷ್ಟು ಹೊಡಿ-ಬಡಿ-ಕೊಚ್ಚು ಸಿನಿಮಾಗಳೆ. ಅಲ್ಲೊಂದು ಲೂಸಿಯಾ. ಇಲ್ಲೊಂದು ಮುಂಗಾರುಮಳೆಯಂತೆ ಹೊಸತನ ಮೇಳೈಸಿರುವ ಬಂದರೂ ಅವುಗಳು ಬಹಳ ಅಪರೂಪ. ಸಾಕ್ಷರತೆಯ ಪ್ರಮಾಣದಲ್ಲಾಗಲಿ, ಉದ್ಯೋಗವಕಾಶ ಪಡೆಯುವಲ್ಲಾಗಲಿ ಅವರ ಸಮ-ಸಮದ ನೆಲೆಗೆ ಬಂದಿರುವ ನಾವು ಸದಭಿರುಚಿ ಮತ್ತು ಹೊಸತನದ ಸಿನಿಮಾದಲ್ಲೂ ಅವರಿಗೆ ಸರಿಸಾಟಿಯಾಗಬೇಕಾಗಿದೆ.

2 Comments

  1. lalithasiddabasavaiah
    June 28, 2014
  2. amardeep.p.s.
    June 24, 2014

Add Comment

Leave a Reply