Quantcast

’ಬುದ್ಧನನ್ನು ತಮ್ಮೊಳಗೆ ತುಂಬಿಕೊಂಡ ಕೆ ಎಂ ಶಂಕರಪ್ಪನವರು..’

ನನ್ನ ಗುರು

ಡಾ ಜಿ ವಿ ಆನಂದಮೂರ್ತಿ

ಕಾರಮರಡಿ ಮುದ್ದಲಿಂಗೇಗೌಡ ಶಂಕರಪ್ಪ ಕನ್ನಡ ಚಲನ ಚಿತ್ರರಂಗದ ಸಂವೇದನಾಶೀಲ ನಿರ್ದೇಶಕ ಮತ್ತು ಹಿರಿಯ ಸಮಾಜವಾದಿ. ಈ ಹೆಸರು ಈವೊತ್ತಿನ ಹೊಸ ತಲೆಮಾರಿನ ಚಲನ ಚಿತ್ರರಂಗದ ‘ಪ್ರತಿಭೆ’ಗಳಿಗೆ ಹಾಗೂ ಬರಹಗಾರರಿಗೆ ಎಷ್ಟು ತಿಳಿದಿದೆಯೋ ನಾ ಕಾಣೆ!

ಲೇಖಕರಾದ ಲಂಕೇಶ್, ತೇಜಸ್ವಿ, ಚಂಪಾ, ಕಂಬಾರ, ದೇವನೂರ ಮಹದೇವ, ಕಾಳೇಗೌಡ ನಾಗವಾರ, ಅಗ್ರಹಾರ ಕೃಷ್ಣಮೂರ್ತಿ ಮುಂತಾದ ಹಿರಿ-ಕಿರಿಯ ಲೇಖಕರ ನಿಕಟ ಒಡನಾಡಿಯಾಗಿದ್ದ ಶಂಕರಪ್ಪನವರು, ಶಾಂತವೇರಿ ಗೋಪಾಲಗೌಡ, ಜೆ ಹೆೆಚ್ ಪಟೇಲ್, ಕಾಗೋಡು ತಿಮ್ಮಪ್ಪ, ಎಂ ಡಿ ನಂಜುಂಡಸ್ವಾಮಿ, ಬಿ ಕೆ ಕೃಷ್ಣಪ್ಪ, ಕೋಣಂದೂರು ಲಿಂಗಪ್ಪ ಮುಂತಾದ ಸಮಾಜವಾದಿ ಹೋರಾಟಗಾರರೊಂದಿಗೂ ತಮ್ಮನ್ನು ಗುರುತಿಸಿಕೊಂಡಿದ್ದರು. ಸಮಾಜವಾದಿ ಯುವಜನ ಸಭಾ, ಕೋಣಂದೂರು ಲಿಂಗಪ್ಪನವರೊಡನೆ ಬೆಂಗಳೂರಿನಲ್ಲಿ ಕಟ್ಟಿದ ಕನ್ನಡ ಪರ ಚಳವಳಿ ಹಾಗೂ ತುತರ್ುಪರಿಸ್ಥಿತಿಯ ವಿರುದ್ಧದ ಹೋರಾಟಗಳಲ್ಲಿ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡಿದ್ದ ವ್ಯಕ್ತಿತ್ವ ಅವರದು. ಎಪ್ಪತ್ತರ ದಶಕದ ತಲ್ಲಣದ ದಿನಗಳಲ್ಲಿ ಮೈಸೂರಿನಲ್ಲಿ ನಡೆದ ‘ಲೇಖಕರು ಮತ್ತು ಕಲಾವಿದರ ಒಕ್ಕೂಟ’ದ ಚಾರಿತ್ರಿಕ ಘಟನೆಯ ಸಂದರ್ಭದಲ್ಲಿ ನೇಪಥ್ಯದಲ್ಲೇ ಇದ್ದು ಸಮಾವೇಶದ ಯಶಸ್ಸಿಗೆ ದುಡಿದ ಶಂಕರಪ್ಪನವರು ತಮ್ಮ ಬದುಕಿನ ಕೊನೆಯವರೆಗೂ ತೆರೆಮರೆಯಲ್ಲಿಯೇ ಉಳಿದರು.

ಎಪ್ಪತ್ತರ ದಶಕದಲ್ಲಿ ನಾಡಿನ ಸಾಮಾಜಿಕ ಬದಲಾವಣೆಯ ಎಲ್ಲ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಶಂಕರಪ್ಪನವರನ್ನು ಆಕರ್ಷಿಸಿದ್ದು ಸಿನಿಮಾ ಮತ್ತು ಬುದ್ಧ ತೋರಿದ ಅರಿವಿನ ಮಾರ್ಗ. ನಡುವೆ ಲೋಹಿಯಾ ವಿಚಾರಗಳ ಪ್ರಭಾವಕ್ಕೂ ಅವರು ಒಳಗಾದರು. ಒಮ್ಮೆ ಅವರೇ ಹೀಗೆ ಹೇಳಿದ್ದರು ‘ಲೋಹಿಯಾ ಅವರ ವಿಚಾರಗಳು ಸೋಕಿದರೆ ಸಾಕು, ಎಂತಹವರೂ ಮನುಷ್ಯರಾಗಿಬಿಡುತ್ತಾರೆ’ ಹೀಗೆ ಹೇಳುತ್ತಿದ್ದ ಶಂಕರಪ್ಪನವರು ತಮ್ಮನ್ನು ಎಂದೂ ‘ಲೋಹಿಯಾವಾದಿ’ ಎಂದು ಕರೆದುಕೊಂಡಿರಲಿಲ್ಲ! ಆದರೆ ಅವರ ಬದುಕು ಸಮಾಜವಾದಿ ನಡವಳಿಕೆಗಳಿಗೆ ಮಾದರಿಯಂತಿತ್ತು.

ಅರವತ್ತರ ದಶಕದಲ್ಲಿ ಕಾರಮರಡಿ ಶಂಕರಪ್ಪನವರು ಪುಣೆಯ ಫಿಲಂ ಇನ್ಸ್ಟಿಟ್ಯೂಟ್ಗೆ ಸೇರಿದರು. ಅಲ್ಲಿ ಋತ್ವಿಕ್ಘಟಕ್ ಇವರ ಗುರುಗಳು. ‘ಪುಣೆಯ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ಋತ್ವಿಕ್ ಘಟಕ್(1925-1976) ನನ್ನ ಗುರುಗಳಾಗಿದ್ದರು, ಇದೇ ನನ್ನ ಭಾಗ್ಯ. ಅವರಿಂದಲೇ ನಾನು ಸಿನಿಮಾದ ವ್ಯಾಕರಣಗಳನ್ನು ಅರಿತೆ. ಭಾರತ ಕಂಡ ನಿಜವಾದ ಸಾರ್ವಕಾಲಿಕ ಶ್ರೇಷ್ಟ ಸಿನಿಮಾ ನಿದೇರ್ಶಕರಲ್ಲಿ ಘಟಕ್ ಕೂಡ ಒಬ್ಬರು. ಆಗ ಸತ್ಯಜಿತ್ ರೇ ಅವರ ಸಿನಿಮಾಗಳೂ ನನ್ನ ಮೇಲೆ ಪ್ರಭಾವ ಬೀರಿದ್ದವು. ಒಮ್ಮೆ ಘಟಕ್ ನನ್ನ ‘ವಾಟರ್ ಇನ್ ದಿ ಟ್ಯಾಪ್’ ಕಿರು ಚಿತ್ರವನ್ನು ನೋಡಿ, ‘ತೂ ರೇ ಕ ಬಚ್ಚೆ ಹೋ’ ಎಂದು ಬೈದಿದ್ದರಂತೆ. ‘ನಾನು ಹೊರತರುತ್ತಿದ್ದ ‘ಚಲನ’ ಪತ್ರಿಕೆಯಲ್ಲಿ ನನ್ನ ಪರೋಕ್ಷ ಗುರು ಸತ್ಯಜಿತ್ ರೇ ಅವರ ಬಗ್ಗೆ ಒಂದು ವಿಶೇಷ ಸಂಚಿಕೆ ತಂದು ಅವರಿಗೆ ಅರ್ಪಿಸಿ ಗುರು ಕಾಣಿಕೆ ಸಲ್ಲಿಸಿದೆ’ ಎಂದು ಶಂಕರಪ್ಪನವರು ನೆನಪಿಸಿಕೊಳ್ಳುತ್ತಿದ್ದರು.

ಶಂಕರಪ್ಪನವರು ನಿರ್ದೇಶಿಸಿದ ಮೊದಲ ಮತ್ತು ಕೊನೆಯ ಸಿನಿಮಾ ‘ಮಾಡಿ ಮಡಿದವರು'(1974). ಈ ಚಿತ್ರದ ಅತ್ಯತ್ತಮ ನಿರ್ದೇಶನಕ್ಕಾಗಿ ಶಂಕರಪ್ಪನವರು ರಾಜ್ಯ ಸರ್ಕಾರದಿಂದ ಪ್ರಶಸ್ತಿಯನ್ನೂ ಪಡೆದರು. ಆ ಕಾಲಕ್ಕೆ ಹೊಸ ಪ್ರಯೋಗಶೀಲತೆಯಿಂದ ಕೂಡಿದ್ದ ಆ ಚಿತ್ರ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಈಗಲೂ ಅವರ ಒಡನಾಡಿಗಳು ಹೇಳುವಂತೆ, ತನ್ನ ಕಾಲಕ್ಕಿಂತ ಮೊದಲೇ ಬಂದ ಸಿನಿಮಾ ಅದು. ಹಾಗಾಗಿಯೇ ಅದನ್ನು ಗ್ರಹಿಸುವಲ್ಲಿ ಕನ್ನಡದ ಮನಸ್ಸು ಸೋತಿತು ಎಂಬುದು ಎಲ್ಲರ ಭಾವನೆ. ಆ ಸಿನಿಮಾದಲ್ಲಿನ ಸಂಗೀತ ಸಂಯೋಜನೆ, ಕೆಲ ಉತ್ಕೃಷ್ಟ ಫ್ರೇಮ್ಗಳು, ಲ್ಯಾಂಡ್ ಸ್ಕೇಪ್ ಚಿತ್ರಣ ಒಂದು ಶ್ರೇಷ್ಠ ಕಲಾ ಕೃತಿಯಂತೆ ಈಗಲೂ ನನ್ನ ಮನಸ್ಸಿನಲ್ಲಿ ಉಳಿದಿವೆ. ಇಂತಹ ಪ್ರತಿಭೆಯ ಶಂಕರಪ್ಪನವರು ತೀರಿಕೊಂಡಾಗ ಅವರಿಗೆ ಗೌರವದ ಶ್ರದ್ಧಾಂಜಲಿಯನ್ನು ಸಲ್ಲಿಸದಷ್ಟು ಅಸೂಕ್ಷ್ಮವಾಗಿರುವ ಕನ್ನಡ ಚಿತ್ರರಂಗದವರ ನಡವಳಿಕೆ ಗೌರವ ತರುವಂತಹುದಲ್ಲ.

‘ಮಾಡಿ ಮಡಿದವರು’ ಸಿನಿಮಾದ ನಂತರ ಶಂಕರಪ್ಪನವರು ಚಲನ ಚಿತ್ರರಂಗದಿಂದ ಅಕ್ಷರಶಃ ವಿಮುಖರಾದರು. ಅವರು ಇನ್ನೆಂದಿಗೂ ಸಿನಿಮಾ ಮಾಡಲಿಲ್ಲ. ತಮ್ಮ ಆಪ್ತ ಗೆಳೆಯರಿಂದ ‘ಒಡಲಾಳ’ ಸಿನಿಮಾ ಮಾಡಲು ಸಾಕಷ್ಟು ಒತ್ತಡ ಬಂದರೂ ಅವರು ಮಣಿಯಲಿಲ್ಲ. ಇದರಿಂದ ನಷ್ಟ ಆಗಿದ್ದು ಕನ್ನಡ ಚಿತ್ರರಂಗಕ್ಕೆ. ಸಿನಿಮಾದಿಂದ ಬಿಡುಗಡೆಗೊಂಡ ಅವರನ್ನು ಆಕಷರ್ಿಸಿದ್ದು ಭೌದ್ಧ ಧರ್ಮ ಬುದ್ಧನ ತತ್ವ್ತಗಳನ್ನು ಪಾಲಿಸುತ್ತಾ, ಲೌಕಿಕದ ಎಲ್ಲ ವಾಸನೆಗಳಿಂದ ಬಿಡುಗಡೆ ಹೊಂದುತ್ತಾ, ಸದಾ ಸಮಾಜದ ಒಳಿತನ್ನೇ ಬಯಸುತ್ತಾ ಅನುಕ್ಷಣವೂ ನಿತ್ಯ ಯೋಗಿಯಂತೆ ಬದುಕಿದರು. ಹೊರ ಜಗತ್ತಿನ ಯಾವ ಸಂಕೇತಗಳಿಗೂ, ಸ್ಥಾವರಗಳಿಗೂ ಗಂಟುಬೀಳದೆ ಅನಂತವಾದರು. ವಾರ್ತಾ ಇಲಾಖೆಯವರು ಶಂಕರಪ್ಪನವರ ಬಗ್ಗೆ ಒಂದು ಡಾಕ್ಯಮೆಂಟರಿ ಚಿತ್ರವನ್ನು ನಿರ್ಮಿಸಲು ಅನುಮತಿಗಾಗಿ ಇವರ ಬಳಿ ಅನೇಕ ಸಲ ಎಡತಾಕಿದರು. ಆದರೆ ಶಂಕರಪ್ಪನವರು ಇದನ್ನು ಒಪ್ಪಿಕೊಳ್ಳಲಿಲ್ಲ. ಆ ಯೋಜನೆ ಅಲ್ಲಿಗೇ ನಿಂತಿತು. ಹೀಗೆ ಅವಕಾಶಗಳು ತಮ್ಮ ಮನೆ ಬಾಗಿಲವರೆಗೆ ಹುಡುಕಿಕೊಂಡು ಬಂದರೂ ಅದನ್ನು ತಿರಸ್ಕರಿಸುವಷ್ಟು ನಿರ್ಲಿಪ್ತತೆ ಹಾಗೂ ನಿಷ್ಠರತೆ ಅವರಿಗಿತ್ತು. ಶಂಕರಪ್ಪನವರು ಎಂದರೆ ಹೀಗೆ.

ಕೆ ಎಂ ಶಂಕರಪ್ಪನವರನ್ನು ನಾವು ಗುರುಗಳೆಂದೇ ಕರೆಯುತ್ತಿದ್ದೆವು. ಎಂಥವರನ್ನೂ ತನ್ನೆಡೆಗೆ ಆಕರ್ಷಿಸುವ ಸೂಜಿಗಲ್ಲಿನ ವ್ಯಕ್ತಿತ್ವ ಅವರದು. ಗುರುಗಳನ್ನು ಒಮ್ಮೆ ನೋಡಿದರೆ ಸಾಕು! ಎಂಥವರಿಗಾದರೂ ಅವರ ಬಗ್ಗೆ ಸಕಾರಣಗಳಿಲ್ಲದೇ ಗೌರವ ಒಮ್ಮೆಲೇ ಮೂಡುತ್ತಿತ್ತು. ಕಳೆದ ಮುವತ್ತು ವರ್ಷಗಳಿಂದ ಅವರ ಪರಿಧಿಯಲ್ಲಿದ್ದ ನನಗೆ, ಅವರು ನನಗೆ ಎಷ್ಟು ಅರ್ಥವಾಗಿದ್ದಾರೋ ತಿಳಿಯದು! ಆದರೆ ಇಷ್ಟು ಮಾತ್ರ ಸತ್ಯ; ಪ್ರೀತಿ, ಕರುಣೆಗಳು ಹದವರಿತು ಬೆರೆತ ಬೆಳಕಿನ ಗಣಿಯಂತೆ, ದಾಹ ತಣಿಸುವ ಹರಿಯುವ ತೊರೆಯಂತೆ ಅವರು ನನಗೆ ಕಂಡಿದ್ದಾರೆ. ನನ್ನಂತಹ ಒರಟಾದ ಕಗ್ಗಲ್ಲನ್ನೂ ಕರಗಿಸುವ ಮಾಂತ್ರಿಕ ಶಕ್ತಿ ಅವರಿಗಿತ್ತು. ಬೆಳಕಿಗೆ ಹೇಗೆ ಸಾವಿಲ್ಲವೋ ಹಾಗೆಯೇ ಬುದ್ಧ ಮಾರ್ಗಿಯಾದ ನನ್ನ ಗುರುವಿಗೂ ಸಾವಿಲ್ಲ. ಧ್ಯಾನದ ಚೌಕಟ್ಟಿನಲ್ಲಿ ಕೌಶಲದಿಂದ ಬಿಡಿಸಿದ ನಿರಾಭರಣ ಚಿತ್ರದಂತೆ ನನ್ನ ಗುರುವಿನ ವ್ಯಕ್ತಿತ್ವ.

ಎಂಬತ್ತರ ದಶಕದ ಮೊದಲ ದಿನಗಳವು. ಒಂದು ಧೂಳುಸಂಜೆ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಮೆಟ್ಟಿಲುಗಳ ಮೇಲೆ ಪೈಪ್ ಸೇದುತ್ತಾ ಕುಳಿತಿದ್ದ ಯೋಗಿಯೊಬ್ಬರನ್ನು ನಾನು ಕಂಡೆ. ಹಿಮಾಲಯದ ತಪ್ಪಲಲ್ಲಿ ತಪಸ್ಸನ್ನು ಮುಗಿಸಿ ಆಗತಾನೆ ಬಂದಂತಿದ್ದ ಸಂತರಂತೆ ಅವರು ನನಗೆ ಕಂಡರು. ಜೊತೆಯಲ್ಲಿದ್ದ ಎಚ್ ಎಸ್ ಶಿವಪ್ರಕಾಶರು ‘ಇವರು ಕೆ ಎಂ ಶಂಕರಪ್ಪನವರು’ ಎಂದು ನನಗೆ ಹಿಮಾಲಯದ ಪರ್ವತವನ್ನು ತೋರಿಸುವಂತೆ ಪರಿಚಯಿಸಿದರು. ಮೊದಲ ದಿನ ನಾನು ಕಂಡ ಅವರ ಕಣ್ಣಲ್ಲಿನ ಕಾಂತಿ ಹಾಗೂ ಆದ್ರತೆಯ ನುಡಿಗಳಿಗೆ ನನ್ನ ಮನಸ್ಸು ಇಡಿಯಾಗಿ ಅವರಿಗೆ ಒಪ್ಪಿಸಿಕೊಂಡಿತು. ಗಾಯಕ್ಕೆ ಹಚ್ಚುವ ಮುಲಾಮಿನಂತೆ ಇರುತ್ತಿದ್ದ ಅವರ ಮಾತುಗಳು, ನನ್ನೊಳಗಿನ ಉದ್ವಿಗ್ನತೆ, ಹಿಂಜರಿಕೆ ಮತ್ತು ಹತಾಶೆಯನ್ನು ಶಮನಗೊಳಿಸಿತು. ‘ತಾಯಿ ಕರುಳು, ಹೊಂಗೆ ನೆರಳು. ಎರಡೂ ಒಂದೇ’ ಎನ್ನುವ ಗಾದೆಯೊಂದು ಕನ್ನಡದಲ್ಲಿ ಚಾಲ್ತಿಯಲ್ಲಿದೆ. ಈ ಗಾದೆಯಲ್ಲಿರುವ ಎಲ್ಲ ಸಕಾರಾತ್ಮಕ ಗುಣಗಳನ್ನೂ ನಾನು ಶಂಕರಪ್ಪನವರಲ್ಲಿ ಇಡಿಯಾಗಿ ಕಂಡಿದ್ದೇನೆ.

ಗುರುಗಳಿಗೆ ಇನ್ನೊಂದು ಶಕ್ತಿಯೂ ಇತ್ತು. ಒಬ್ಬ ವ್ಯಕ್ತಿಯ ಅಂತರಂಗದಲ್ಲಿ ಸುಪ್ತವಾಗಿ ಅಡಗಿರುತಿದ್ದ ಪ್ರತಿಭೆಯನ್ನು ಕಂಡುಹಿಡಿದು, ಅದನ್ನು ಸಬಲಗೊಳಿಸುವ ಹಾಗೂ ಪ್ರಕಟಗೊಳ್ಳುವ ಎಲ್ಲ ದಾರಿಗಳ ಬಗ್ಗೆಯೂ ಬೆಳಕು ಚೆಲ್ಲಿ, ಪ್ರತಿಭೆಯ ಕಿಡಿ ಜ್ವಾಲೆಯಾಗುವಂತೆ ಮಾಡುವುದರಲ್ಲಿ ಗುರುಗಳು ಸಿದ್ಧಹಸ್ತರು. ಅವರ ಪ್ರಭಾವದಿಂದಾಗಿ ಅನೇಕ ಜನ ಬರಹಗಾರರು ಸಮಾಜವಾದಿ ಚಳವಳಿಗೆ ಬಂದರು. ಶಂಕರಪ್ಪನವರದು ಮಿತವಾದ ಮಾತು. ಹೇಳಬೇಕಾದ್ದನ್ನು ಜೆನ್ ಗುರುವಿನಂತೆ ರೂಪಕದಲ್ಲಿ ಹೇಳಿ ಮೌನವಾಗುತ್ತಿದ್ದರು. ಸಭೆ-ಸಮಾರಂಭದ ಗೌಜು ಗದ್ದಲಗಳು, ಬಹಿರಂಗದ ಆಡಂಬರ, ಕೀತರ್ಿ, ಹಣ ಇವುಗಳನ್ನೆಲ್ಲಾ ನಿರ್ಲಕ್ಷಿಸಿ, ಅಕ್ಷರಶಃ ಸಂತನಂತೆ ಕೊನೆಯವರೆಗೂ ಬಾಳಿದರು. ಹಾಗೆಯೇ ಹೊರಗಿನ ಸಮಾಜದಲ್ಲಿ ಬದಲಾವಣೆಯನ್ನು ಕಾಣಲು ಅವರು ಹೇಗೆ ಹಂಬಲಿಸುತ್ತಿದ್ದರೋ, ಅಂತಹ ಬದಲಾವಣೆಯನ್ನು ಮೊದಲು ತಮ್ಮೊಳಗೇ ತಂದುಕೊಂಡಿರುತ್ತಿದ್ದರು.

ನನ್ನ ಗುರು ಬುದ್ಧನ ಪ್ರಿಯ ಶಿಷ್ಯ ಆನಂದನಂತೆ ಭಾವಜೀವಿಯೂ ಅಲ್ಲ; ಹಾಗೆಯೇ ಯೋಗಿ ಮಿಲರೇಪನಂತೆ ಕಠಿಣ ಸಾಧಕರೂ ಆಗದೆ ಇವುಗಳ ಸಮನ್ವಯವನ್ನು ಸಾಧಿಸಿ ತೋರಿಸಿದ ಮಧ್ಯಮ ಮಾರ್ಗಿ. ಪತ್ನಿ ಶ್ರೀಮತಿ ಸೀತಾಲಕ್ಷ್ಮಿಯವರು ತೀರಿಕೊಂಡ ದಿನ ಗುರುಗಳು ತೋರಿದ ಸಂಯಮ, ಭಾವೋದ್ವೇಗವಿಲ್ಲದ ಅವರ ನಡವಳಿಕೆಯನ್ನು ಕಣ್ಣಾರೆ ಕಂಡವನು ನಾನು. ಏಕಾಂತ, ಧ್ಯಾನ ಮತ್ತು ನಿರಂತರ ಓದು ಗುರುಗಳ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳು. ಅನ್ನ-ಪಾನಗಳು ಅವರಿಗೆ ಎರಡನೆ ಆಯ್ಕೆಯಾಗಿದ್ದವು.

ಎಲ್ಲರಿಗೂ ತಿಳಿದಿರುವಂತೆ ನನ್ನ ಗುರು ಬುದ್ಧನನ್ನು ತಮ್ಮೊಳಗೆ ತುಂಬಿಕೊಂಡವರು. ಹಾಗೆಯೇ ತನ್ನ ತೆಕ್ಕೆಗೆ ಬಂದ ಎಲ್ಲರಿಗೂ ಬುದ್ಧನ ಬೆಳಕಿನ ಮಾರ್ಗವನ್ನು ತೋರುತ್ತಿದ್ದರು. ನಾವೆಲ್ಲಾ ಬುದ್ಧನನ್ನು ಕಣ್ಣರಳಿಸಿ ನೋಡಲು ಗುರುಗಳೇ ಕಾರಣ. ಆದರೆ ಎಂದೂ ತಮ್ಮನ್ನು ‘ಬೌದ್ಧ’ ಎಂದು ಕರೆದುಕೊಂಡಿರಲಿಲ್ಲ. ಅವರೇ ಹೇಳುವಂತೆ ‘ಬೌದ್ಧ ಧರ್ಮವೆನ್ನುವುದು ಉಪದೇಶಿಸುವುದೂ ಅಲ್ಲ! ಬರೀ ಕೇಳುವ ಧರ್ಮವೂ ಅಲ್ಲ! ಅದು ನಡೆಯುವ ದಾರಿ. ಆ ಸಂತೋಷವನ್ನು ನಡೆದೇ ಅನುಭವಿಸಬೇಕು’ ಎಂದು ಹೇಳುತ್ತಿದ್ದರು. ಹೀಗೆ ಹೇಳಿ ತಾವೇ ದಮ್ಮದ ದಾರಿಯಲ್ಲಿ ನಡೆದು ತೋರಿಸಿದರು. ಹಾಗೇಯೇ ಸದ್ದಿಲ್ಲದೆ ನಡೆದೇ ಹೋದರು…

One Response

  1. D.Ravivarma
    June 30, 2014

Add Comment

Leave a Reply