Quantcast

’ರೋಜ಼್’ ಸಿನಿಮಾ : ಸಾರಿರೀ ಸಾರಿ.. ಒಂದ್ಸಾರಿ ನೋಡ್ರಿರೀ…

ರೋಜ್ ಚಿತ್ರವಿಮರ್ಶೆ

-ಚಿತ್ರಪ್ರಿಯ ಸಂಭ್ರಮ್

ಅದೇ ಹುಡುಗ, ಅದೇ ಹುಡುಗಿ, ಅದೇ ಮಳೆ, ಅಂಥದೇ ಕ್ರೈಮು.. ಇಷ್ಟು ಸಾಕಲ್ಲ ಒಂದು ಲವ್ ಸ್ಟೋರಿ ಸಿನಿಮಾ ತೆಗೆಯೋಕೆ. ನಿರ್ದೇಶಕರಗಿರುವ ಸಹನ ಅವರಿಗೆ ಸಹನೆ ಜಾಸ್ತಿ ಇದ್ದಂತಿದೆ. ಹಾಗಾಗಿ ವರ್ಷಕ್ಕೆ ಬಿಡುಗಡೆಯಾಗುವ 80 ಚಿತ್ರಗಳ ಸಾಲಿಗೆ ರೋಜ್ನ್ನು ಹಿಡಿದು ತಂದು ನಿಲ್ಲಿಸಿದ್ದಾರೆ. ಅಂದ್ರೆ ವರ್ಷಕ್ಕೆ ಸರಾಸರಿ 80 ರಷ್ಟು ಸಿನಿಮಾಗಳ ಕಥೆ ಪ್ರೀತಿಯ ಸುತ್ತವೇ ಗಿರಕಿ ಹೊಡೆಯುತ್ತವೆ. ಅವುಗಳಲ್ಲಿ ರೋಜ್ ತುಂಬಾ ಡಿಫರೆಂಟ್ ಎನ್ನಲು ಹೇಳಿಕೊಳ್ಳುವ ಪುರಾವೆಗಳು ಆಷ್ಟಾಗಿ ಪರಿಣಾಮಕಾರಿಯಾಗಿಲ್ಲ.

3 ವರ್ಷದ ಹಿಂದೆ ಬಿಡುಗಡೆಯಾಗಿದ್ದ ಕನ್ನಡದ ಆದ್ಧೂರಿ ಚಿತ್ರವನ್ನು ಮತ್ತೊಮ್ಮೆ ಅದ್ದಿ, ತಿದ್ದಿ ರೋಜ್ ತಯಾರಿಸಲಾಗಿದೆ ಎನ್ನುವ ಭಾವ ನೋಡುಗನನ್ನು ಕಾಡಿದರೆ ಸಹನ ಇದನ್ನು ಸಹಿಸಿಕೊಳ್ಳಲೇಬೇಕು. ಪ್ರೀತಿಯ ಹುಡುಗನ ಮೇಲೆ ಅದೇ ಅನುಮಾನ, ಆಮೇಲೆ ಮತ್ತೇ ಅರಳುವ ಪ್ರೀತಿ. ವ್ಯತ್ಯಾಸಗಳೆರಡೇ. ಅದ್ಧೂರಿಯಲ್ಲಿ ನಾಯಕನಿಗೆ ಅಪ್ಪ-ಅಮ್ಮ ಇರಲಿಲ್ಲ. ಹಾಗೂ ಚಿತ್ರ ಸುಖಾಂತ್ಯ. ರೋಜ್ ಸಿನಿಮಾದಲ್ಲಿ ನಾಯಕನಿಗೆ ಅಪ್ಪ-ಅಮ್ಮ ಇದ್ದಾರೆ. ಪರೋಕಪಾರಿ ಗುಣದಿಂದ ನಾಯಕ ಜೈಲು ಪಾಲಾದಾಗ ಅಪ್ಪ ಕಣ್ಮುಚ್ಚಿದರೆ, ಅಮ್ಮ ಕಣ್ತಪ್ಪಿಯೂ ಮಗನನ್ನ ನೋಡಲ್ಲ. ಕೊನೆಗೆ ಎಲ್ಲವೂ ಸುಖಾಂತ್ಯ ಎನ್ನುವಷ್ಟರಲ್ಲಿಯೇ ಪ್ರೇಮಿಗಳಿಬ್ಬರೂ ಸಾವಿನಲ್ಲಿ ಅಮರ.

ಕಥೆಯ ರಹಸ್ಯದ ಎಳೆಯನ್ನು ಇನ್ನಷ್ಟೂ ಥ್ರಿಲ್ ಅಗಿ ಹೇಳುವ ಎಲ್ಲ ಸಾದ್ಯತೆಗಳಿದ್ದರೂ ಪ್ರೀತಿಗೆ ಮಹತ್ವ ನೀಡಬೇಕು ಎನ್ನುವ ಪೂರ್ವಾಗ್ರಹ ಭಾವ, ರಹಸ್ಯವನ್ನು ಮಧ್ಯದಲ್ಲಿ ಬಯಲು ಮಾಡುತ್ತದೆ. ಹಾಗಾಗಿ ನೋಡುಗನಿಗೆ ಕೊನೆ ತನಕ ಸೀಟಲ್ಲಿ ಇರಬೇಕು ಎನಿಸದು. ರೋಜ್ ಹೇಗಿದೆ ಎಂದರೆ ಮೊದಲರ್ಧ ಕಾಮಿಡಿ ಟ್ರ್ಯಾಕು, ಸೆಕೆಂಡ್ ಆಫ್ ಟ್ರ್ಯಾಜಿಡಿ ಸರಕು. ಅರಂಭದಲ್ಲಿ ಬರುವ ಡಬ್ಬಲ್ ಮೀನಿಂಗ್ ಡೈಲಾಗ್ಗಳನ್ನ ಯೂತ್ಸ್ ಎಂಜಾಯ್ ಮಾಡಬಹುದೇನೋ ಆದರೆ ಫ್ಯಾಮಿಲಿ ಆಡಿಯನ್ಸ್ಗೆ ಆ ಮಾತುಗಳು ಇರೀಟೇಟ್ ಮಾಡುತ್ತವೆ. ಮಧ್ಯಂತರದ ನಂತರ ಜೈಲರ್ ಪಾತ್ರದಲ್ಲಿ ಎಂಟ್ರಿ ಕೊಡುವ ಸಾಯಿಕುಮಾರ್ ಅವರು ನಿಜವಾದ ಡೈಲಾಗ್ಕಿಂಗ್. ಆದರೆ ಅವರ ಪಾತ್ರ ಬಂದಾಗ ಸಿಳ್ಳೆ ಹೊಡೆಯಲು ಹೇಳಿಕೊಳ್ಳುವಂಥ ಡೈಲಾಗ್ಗಳೇ ಕೇಳಲ್ಲ. ಸಾಯಿಕುಮಾರ್ ಕೂಡಾ ತಮ್ಮ ಹಳೇ ಲವ್ ಸ್ಟೋರಿ ನೆನೆದು ಆಭಿಮಾನಿಗಳು ಕಣ್ಣೀರು ಹಾಕುವಂತೆ, ಒಮ್ಮೊಮ್ಮೆ ನಕ್ಕುಬಿಡುವಂತೆ ತೋರುತ್ತಾರೆ.

ತನ್ನ ಗೆಳೆಯನ ತಂಗಿಯ ಜೀವ, ಜೀವನ ಉಳಿಸಲು ಹೋಗಿ ಹಾಗೂ ಗೆಳೆಯರು ಸೇರಿಕೊಂಡು ಮಾಡಿದ ಕೊಲೆಯನ್ನು ತನ್ನ ತಲೆಗೆ ಕಟ್ಟಿಕೊಂಡು ಜೈಲುಪಾಲಾಗುವ ನಾಯಕ, ನಾಯಕನ ನಂತರ ಜೈಲಿಗೆ ಬರುವ ಮತ್ತೊಬ್ಬ ಖಳನಾಯಕ. ಇಬ್ಬರಿಗೂ ಆಗಾಗ ನಡೆಯುವ ವಾರ್ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ನಿಖರ ಕಾರಣವೇ ಇಲ್ಲ. ಕೊನೆಗೂ ಖಳನಾಯಕನ ಗ್ಯಾಂಗ್ನಿಂದ ಪ್ರೇಮಿಗಳು ಸಾಯುತ್ತಾರೆ. ಪ್ರೇಮಿಗಳನ್ನು ಸಾಯಿಸುವಂಥ ದ್ವೇಷ ಏನಿತ್ತು ಎಂಬುದು ಹುಡುಕಿದರೂ ಸಿಗುವುದಿಲ್ಲ. ಇಂಥ ಅಭಾಸಗಳಿಂದ ರೋಜ್ ಬಾಡಿದಂತೆ ಕಾಣುತ್ತದೆ.

ಗುರುಪ್ರಶಾಂತ್ ಅವರ ಕ್ಯಾಮರಾ ವರ್ಕ್  ಬಗ್ಗೆ ನೋ ಕಂಪ್ಲೇಂಟ್ಸ್. ಅನೂಪ್ ಸೀಳಿನ್ ಸಂಗೀತ ಚಿತ್ರದ ಹೈಲೈಟ್. ಆಜೇಯ್ರಾವ್ ಎಂದಿನಂತೆ ಮತ್ತೇ ಲವ್ವರ್ಬಾಯ್ ಇಮೇಜ್ನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರಾವ್ಯ ಆಭಿನಯ ಇಷ್ಟವಾಗುತ್ತದೆ. ಮಿಕ್ಕಂತೆ ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಂದ್ರಶೇಖರ, ಶಂಕರ್ ಅಶ್ವತ್ಥ್, ಗುರುದತ್, ಬುಲೆಟ್ ಪ್ರಕಾಶ್, ಸಾಧುಕೋಕಿಲ, ಪೆಟ್ರೋಲ್ ಪ್ರಸನ್ನ, ಮುನಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಾಯಿಕುಮಾರ್ ಬಹಳ ದಿನಗಳ ನಂತರ ಮತ್ತೇ ಪೋಲೀಸ್ ಅವತಾರದಲ್ಲಿ ಕಾಣಿಸಿಕೊಂಡು ಸರಕಾರಿ ಕೆಲಸ, ದೇವರ ಕೆಲಸ ಎನ್ನುತ್ತ ಖುಷಿ ಕೊಡುತ್ತಾರೆ.

***

ರೇಟಿಂಗ್ : **1/2

 

*   ನೋಡಬೇಡಿ

** ನೋಡಬಹುದು. ಆದರೂ…

*** ಪರವಾಗಿಲ್ಲ. ನೋಡಬಹುದು.

**** ಚೆನ್ನಾಗಿದೆ ನೋಡಿ

***** ನೋಡಲೇಬೇಕು.

 

 

Add Comment

Leave a Reply

%d bloggers like this: