Quantcast

‘ಅಂಧರ ಪ್ರೇಮಲೋಕದ ಕಂಪನಗಳ ಅನಾವರಣ’ – ಕುಮಾರ ರೈತ

ಕುಮಾರ ರೈತ

ವರದಿಗಾರ

ಕಣ್ಣುಗಳ ದೃಷ್ಟಿ ಇರುವವರು ಹೆಣ್ಣು/ಗಂಡಿನ ಹೊರಚಹರೆ, ನಗು, ಬಣ್ಣ, ಬಟ್ಟೆ ಇತ್ಯಾದಿ ನೋಡಿ ಮೋಹಿಸಿ, ಪ್ರೀತಿಸುತ್ತಾರೆ. ಎಲ್ಲವೂ ಬಣ್ಣಗಳ ಮೇಲೆ ಆಧಾರಿತ. ಆದರೆ ಕಣ್ಣೇ ಇಲ್ಲದವರ ಪ್ರೇಮಲೋಕ ಹೇಗಿರಬಹುದು, ಅವರ ಅನುಭವ/ಅನುಭಾವಗಳೇನು… ಇಂಥ ಭಾವಗಳನ್ನು ತಮಿಳು ಸಿನಿಮಾ ‘ಕುಕ್ಕೂ’ ಬಹು ಸೊಗಸಾಗಿ ಕಟ್ಟಿಕೊಡುತ್ತದೆ. ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುವ ಚಿತ್ರ, ಮುಖ್ಯಪಾತ್ರಗಳ ಗತಿ-ಸ್ಥಿತಿ ಏನಾಗುವುದೋ ಎಂದು ಚಿಂತಿಸುವಂತೆ ಮಾಡುತ್ತದೆ.

ತನಗೆ ಕಣ್ಣಿಲ್ಲ ಎಂಬ ಕೊರಗು ಇಲ್ಲದ ಹಾಡುಹಕ್ಕಿ ತಮಿಳ್. ಸಣ್ಣ ಆರ್ಕೇಸ್ಟ್ರಾ ತಂಡದ ಗಾಯಕ. ವಿಷಾದದ ಛಾಯೆ ಇರುವ ಹಾಡುಗಳಿಂದ ಕೇಳುಗರ ಮನಗೆದ್ದಿರುತ್ತಾನೆ. ಹಾಡುವಿಕೆ ಇಲ್ಲದ ದಿನಗಳಲ್ಲಿ ರೈಲುಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರುವ ಕಾಯಕ. ಅಂಧರ ವಸತಿ ನಿಲಯದಲ್ಲಿಯೇ ವಾಸ. ಈತನ ಬದುಕಿನ ಬಂಡಿ ಏರಿಳಿತಗಳಿಲ್ಲದೆ ಉರುಳುತ್ತಿರುವಾಗಲೇ ಮದುವೆಯೊಂದರ ಸಂದರ್ಭ ಅಂಧ ಗೆಳತಿ ಸಂಗೀತಾ ಮೂಲಕ ಸ್ವತಂತ್ರ ಕುಡಿ ಪರಿಚಯವಾಗುತ್ತಾಳೆ. ಶಿಕ್ಷಕ ತರಬೇತಿ ಯಲ್ಲಿರುವ ಅಂಧಳಾದ ಈಕೆಗೆ ಆತನ ಗಾಯನ ಎಂದರೆ ಮೆಚ್ಚು. ಸ್ವತಂತ್ರ ಕುಡಿ ಹೆಸರನ್ನು ವ್ಯಂಗ್ಯ ಮಾಡುವುದರ ಮೂಲಕ ತಮಿಳ್, ಆಕೆಗೆ ಕಿರಿಕಿರಿ ಮಾಡುತ್ತಾನೆ.

ನವವಿವಾಹಿತರಿಗೆ ಉಡುಗೊರೆ ನೀಡುವಾಗ ನನ್ನನ್ನೂ ಕರೆಯಿರಿ ಎಂದು ಸಂಗೀತಾಳಿಗೆ ಮನವಿ ಮಾಡಿರುತ್ತಾನೆ. ಆದರೆ ಸ್ವತಂತ್ರಕುಡಿ ಅದಕ್ಕೆ ಒಪ್ಪುವುದಿಲ್ಲ. ಇದರಿಂದ ತಮಿಳ್ ಸಿಟ್ಟಾಗುತ್ತಾನೆ. ರೈಲಿನಲ್ಲಿ ಈಕೆ ತಾನು ಇಳಿಯುವ ನಿಲ್ದಾಣ ಬಂದಾಗ ತಿಳಿಸಬೇಕೆಂದು ಅಲ್ಲಿ ಭಿಕ್ಷೆ ಬೇಡುವಾತನಿಗೆ ಮನವಿ ಮಾಡಿಕೊಳ್ಳುತ್ತಾಳೆ. ಇದನ್ನು ಕೇಳಿಸಿಕೊಳ್ಳುವ ತಮಿಳ್, ಪರಿಚಯದ ಭಿಕ್ಷುಕನಿಗೆ ಹೇಳಿ ಆಕೆ ತಪ್ಪು ನಿಲ್ದಾಣದಲ್ಲಿ ಇಳಿಯುವಂತೆ ಮಾಡುತ್ತಾನೆ. ಮರುದಿನ ಇದು ಗೊತ್ತಾದ ಬಳಿಕ ಸಿಟ್ಟಿಗೇಳುವ ಸ್ವತಂತ್ರಕುಡಿ, ತಮಿಳನ ಹಣ್ಣೆ ಕಿತ್ತು ರಕ್ತ ಬರುವ ಹಾಗೆ ಬಾರಿಸುತ್ತಾಳೆ.

ಇದು ತಮಿಳ್ ಸಿಟ್ಟನ್ನು ಮತ್ತಷ್ಟೂ ಹೆಚ್ಚಿಸುತ್ತದೆ. ಅತ್ತ ತನ್ನ ದುಡುಕಿಗೆ ಪಶ್ಚಾತ್ತಾಪ ಪಡುವ ಸ್ವತಂತ್ರಕುಡಿ ಮರುದಿನ ಕ್ಷಮೆಯಾಚಿಸುವುದಲ್ಲದೆ ಆತನ ಕಿರುಗಾಯ ಶೀಘ್ರ ಗುಣವಾಗಲೆಂದು ಪ್ರಾರ್ಥಿಸುತ್ತಾಳೆ. ಇದು ತಮಿಳಿನ ಸಿಟ್ಟನ್ನು ಕರಗಿಸುತ್ತದೆ. ಆತ ಪ್ರೀತಿಯ ನವಿರು ಅಲೆಗಳಲ್ಲಿ ಹಾರಾಡತೊಡಗುತ್ತಾನೆ.

ಆದರೆ ಆಕೆಗೆ ತಾನು ಶಿಕ್ಷಕಿ ಆಗಬೇಕು ಮತ್ತು ದೃಷ್ಟಿ ಇರುವ ಯುವಕನನ್ನು ಮದುವೆ ಆಗಬೇಕೆಂಬ ಅಪೇಕ್ಷೆ. ಆದ್ದರಿಂದ ತನ್ನ ಬಗ್ಗೆ ಕಾಳಜಿ ತೋರುವ ವಾರಾಂತ್ಯ ದಿನಗಳ ವಿಶೇಷ ಟ್ಯೂಟರ್ ವಿನೋದ್ ಮೋಹಿಸುತ್ತಾಳೆ. ಈ ವಿಷಯ ತಮಿಳಿಗೂ ಗೊತ್ತಾಗಿ ಆತ ತೀವ್ರ ನೋವು-ವಿಷಾದಕ್ಕೆ ಒಳಗಾಗುತ್ತಾನೆ. ಆದರೆ ವಿನೋದ್ ಮತ್ತೋರ್ವ ಯುವತಿಯನ್ನು ಪ್ರೀತಿಸುತ್ತಿರುತ್ತಾನೆ. ಆತನಿಗೆ ತನ್ನ ಮೇಲಿರುವುದು ಅನುಕಂಪವೇ ಹೊರತು ಪ್ರೀತಿಯಲ್ಲ ಎಂದು ಅರಿಯುವ ಸ್ವತಂತ್ರಕುಡಿ ದುಃಖಿತಳಾಗುತ್ತಾಳೆ.

ಹೀಗೆ ದಿನಗಳು ಸಾಗುತ್ತಿರುವಾಗಲೇ ಆಕೆಗೆ ತಮಿಳ್ ತನ್ನನ್ನು ಪ್ರೀತಿಸುತ್ತಿದ್ದ ವಿಷಯ ತಿಳಿಯುತ್ತದೆ. ಅದನ್ನು ವ್ಯಕ್ತಪಡಿಸಲು ಧೈರ್ಯ ಇಲ್ಲದ ತಮಿಳನಿಗೆ ತಾನೇ ಮುಂದೆ ಹೋಗಿ ‘ನನ್ನನ್ನು ಮದುವೆ ಆಗುತ್ತಿಯಾ’ ಎಂದು ಕೇಳುತ್ತಾಳೆ. ನಂತರದ ದಿನಗಳಲ್ಲಿ ಇವರಿಬ್ಬರೂ ಜೋಡಿಹಕ್ಕಿಗಳಾಗುತ್ತಾರೆ. ಮದುವೆ ಆಗುವ ನಿಶ್ಚಯವನ್ನೂ ಮಾಡುತ್ತಾರೆ. ಇವರಿಬ್ಬರೂ ಮದುವೆ ಆಗಲು ನೂರೆಂಟು ಅಡ್ಡಿಗಳು. ಹಲ್ಲೆ, ಅಪಘಾತ, ಪರಸ್ಪರ ಬೇರ್ಪಡುವಿಕೆ, ಹತಾಶೆಯ ಘಟನೆಗಳು. ಇವುಗಳನ್ನು ಅವರು ಮೆಟ್ಟಿ ನಿಲ್ಲುತ್ತಾರೆಯೇ… ಇದನ್ನು ನೀವು ಚಿತ್ರ ನೋಡಿ ತಿಳಿದರೆ ಸೂಕ್ತ.

ಮುಖ್ಯವಾಗಿ ನಮ್ಮನ್ನು ಚಿತ್ರ ಎರಡು ಮುಖ್ಯ ಕಾರಣಗಳಿಗಾಗಿ ಗಮನ ಸೆಳೆಯುತ್ತದೆ. ಮುಖ್ಯ ಭೂಮಿಕೆಯಲ್ಲಿ ಅಂಧ ಪಾತ್ರಗಳೇ ಇರುವುದು. ಎರಡನೇಯದು ನಿರ್ದೇಶನ. ನಿರ್ದೇಶಕ ರಾಜು ಮುರುಗನ್ ಇಡೀ ಚಿತ್ರ ಹೃದಯಸ್ಪರ್ಶಿ ಆಗಿರುವಂತೆ ನಿರೂಪಣೆ ಮಾಡಿದ್ದಾರೆ. ಸಿನಿಮಾ ಆಗಿ ಕಟ್ಟಿಕೊಡಲು ಸವಾಲು ಎನಿಸುವ ಚಿತ್ರಕಥೆ ಮುಂದಿಟ್ಟುಕೊಂಡು ಪ್ರೇಕ್ಷಕನಿಗೆ ಎಲ್ಲಿಯೂ ಏಕತಾನತೆ ಎನಿಸದಂತೆ, ಬೇಸರ ಆಗದಂತೆ ಮಾಡುವಲ್ಲಿ ಗೆದ್ದಿದ್ದಾರೆ. ನಮಗೆ ಅಪರಿಚಿತವಾಗಿರುವ ಅಂಧಲೋಕದ ನವಿರು ಭಾವನೆಗಳನ್ನು ಅತ್ಯಂತ ಪರಿಣಾಮಕಾರಿ ಆಗಿ ಚಿತ್ರಿಸಿದ್ದಾರೆ. ಅಂಧರ ನೋವು-ನಲಿವುಗಳು ಬಹು ಸಮರ್ಥವಾಗಿ ಬಿಂಬಿತವಾಗಿವೆ.

ಕುಕ್ಕೂ, ಕಮರ್ಷಿಯಲ್ ಅಂಶಗಳಿರುವ ಸಿನಿಮಾ. ಆದರೆ ಇಂಥ ಸಿನಿಮಾಗಳ ಯುಗಳಗೀತೆಗಳಾಗಲಿ, ಫೈಟಿಂಗ್ ಆಗಲಿ ಅಥವಾ ನಾಯಕ-ನಾಯಕಿ ತಮ್ಮ ಕನಸಿನ ದೃಶ್ಯಗಳಲ್ಲಿ ದೃಷ್ಟಿ ಇರುವ ಪಾತ್ರಗಳಾಗಿ ಹಾಡು ಹೇಳುವಿಕೆಯಾಗಲಿ ಇಲ್ಲಿ ಇಲ್ಲ. ಈ ನಿಟ್ಟಿನಲ್ಲಿ ಪ್ರೇಕ್ಷಕನ ಅಂದಾಜನ್ನು ನಿರ್ದೇಶಕ ಹುಸಿಗೊಳಿಸುತ್ತಾರೆ.

ಸಿನಿಮಾದ ಎಲ್ಲ ವಿಭಾಗಗಳನ್ನು ಪರಸ್ಪರ ಪೂರಕವಾಗಿ ದುಡಿಸಿಕೊಳ್ಳುವಲ್ಲಿ ರಾಜು ಮುರುಗನ್ ಯಶಸ್ವಿ. ಸಂಕಲನಕಾರ ಷಣ್ಮುಗಮ್ ವೇಲುಸ್ವಾಮಿ, ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್, ಛಾಯಾಗ್ರಾಹಕ ಆರ್.ಕೆ. ವರ್ಮ ಅವರ ಕೆಲಸ ಅಚ್ಚುಕಟ್ಟು.

ಚಿತ್ರದ ಪ್ರತಿಯೋರ್ವ ಪಾತ್ರಧಾರಿಯೂ ಚೆನ್ನಾಗಿ ಅಭಿನಯಿಸಿದ್ದಾರೆ. ತಮಿಳ್, ಸ್ವತಂತ್ರಕುಡಿ, ಸಂಗೀತಾ ಪಾತ್ರಧಾರಿಗಳಾದ ದಿನೇಶ್, ಮಾಳವಿಕಾ ನಾಯರ್ ಮತ್ತು ನಂದಿನಿ ಅವರುಗಳು ಅಭಿನಯಿಸಿದ್ದಾರೆ ಎಂದು ಹೇಳುವುದಕ್ಕಿಂತ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ಎನ್ನುವುದೇ ಸೂಕ್ತ.

One Response

  1. srinivasamurthy B G
    August 16, 2014

Add Comment

Leave a Reply