Quantcast

‘ಅಧ್ಯಕ್ಷ’ರಿಗೆ ಜೈ… – ಚಿತ್ರಪ್ರಿಯ ಸಂಭ್ರಮ್

ಚಿತ್ರಪ್ರಿಯ ಸಂಭ್ರಮ್

ಥೇಟರ್ಗೆ ಹೋಗಿ ಕೂತ್ರೆ ಎರಡೂವರೆ ಗಂಟೆ ಕಳೆದಿದ್ದೇ ಗೊತ್ತಾಗಬಾರದು ಎನ್ನುವ ಪ್ರೇಕ್ಷಕ ವರ್ಗಕ್ಕೆ ಅಧ್ಯಕ್ಷ ರತ್ನಗಂಬಳಿ ಹಾಸಿ ಕರೆದಿದ್ದಾನೆ. ಸಮಯ ಹೋಗೋದಷ್ಟೇ ಅಲ್ಲ, ನಿಮ್ಮ ಹೊಟ್ಟೆ ಹಸಿವಾಗಿದ್ದರೂ ಸಿನಿಮಾದಲ್ಲಿರೋ ಕಾಮಿಡಿ ಅದನ್ನೂ ಮರೆಸುತ್ತೆ. ಕೆಲವು ಕಡೆ ನಗಿಸುವ ಡೈಲಾಗ್ಗಳು ಅತಿ ಎನಿಸಿದರೆ ಬಹಳಷ್ಟು ಕಡೆ ಆಪ್ತ ಎನಿಸುತ್ತವೆ.

ಕಥೆ ತುಂಬಾ ಸಿಂಪಲ್. ರಾಜಾಹುಲಿ ನೋಡಿದವರಿಗೆ ಇದು ಅದೇ ಥರದ್ದಾ ಅನಸುತ್ತೆ. ಖಂಡಿತವಾಗಿ ಅಧ್ಯಕ್ಷ, ರಾಜಾಹುಲಿಯ ನೆರಳಿನಲ್ಲಿ ನಿಂತು ಬಂದವನಂತೆ ಭಾಸವಾಗುತ್ತಾನೆ. ಚಿತ್ರಕಥೆಯಲ್ಲಿ ಮಾತ್ರ ಅಧ್ಯಕ್ಷನ ಸ್ಟೈಲೇ ಬೇರೆ. ಊರ ಗೌಡ(ರವಿಶಂಕರ್), ಗೌಡನಿಗೊಬ್ಬ ಶತ್ರು (ಸುಧಾಕರ್), ಊರಲ್ಲಿ ಇಬ್ರು ತುಂಡ ಹೈಕ್ಳು, ಗೌಡನ ಮಗಳ ಲವ್ ಅಧ್ಯಕ್ಷನ ಮೇಲೆ. ಪ್ರತಿಷ್ಠೆ, ಮನೆತನದ ಮರ್ಯಾದೆ, ಮಗಳು-ಅಳಿಯನ ಕೊಲೆ ಕೊನೆಗೆ ಸಸ್ಪೆನ್ಸ್, ಥ್ರಿಲ್ಲಿಂಗ್ ಸೂಪರ್ಬ್. ಒನ್ಸ್ ಅಗೇನ್ ಮಂಡ್ಯ ಬ್ಯಾಕ್ ಡ್ರಾಪ್ಲ್ಲಿ ಓಪನಿಂಗ್ ಪಡೆಯೋ ಸಿನಿಮಾ, ನಿಧಾನವಾಗಿ ಶರಣ್ ಸಿನಿಮಾ ಆಗಿ ಕನ್ವರ್ಟ್ ಆಗುತ್ತೆ.

ಚಿ.ತು. ಸಂಘದ ಅಧ್ಯಕ್ಷ ಶರಣ್, ಉಪಾದ್ಯಕ್ಷ ಚಿಕ್ಕಣ್ಣ. ಚಿ.ತು ಎಂದರೆ ಚಿಂತೆಯಿಲ್ಲದ ತುಂಡ ಹೈಕ್ಳ ಸಂಘ. ಇಂಗ್ಲಿಷ್ ಟೀಚರ್ ಮೇಲೆ ಅಧ್ಯಕ್ಷನ ಕಣ್ಣು. ತಾನು ಬರೆದ ಲವ್ ಲೆಟರ್ನ ಗೌಡರ ಮಗಳು ಮಿಯಾಂವ್ ಅಂದ್ರೆ ಐಶು ಕೈಗೆ ಕೊಟ್ಟು ಕೋಡೋಕೆ ಹೇಳ್ತಾನೆ ಅಧ್ಯಕ್ಷ. ಐಶು ಆ ಲೆಟರ್ಗಳನ್ನೆಲ್ಲಾ ಟೀಚರ್ಗೆ ಕೊಡ್ದೆ ತಾನೆ ಅಧ್ಯಕ್ಷನ್ನ ಲವ್ ಮಾಡ್ತಾಳೆ. ಕೊನೆಗೊಂದಿನ ಟೀಚರ್ ಮದುವೆಯಾಗಿ ಹೋಗ್ತಾಳೆ.

ಊರ ಗೌಡನಿಗೆ ಮೂವರು ಹೆಣ್ಣು ಮಕ್ಕಳು. ಸುಧಾಕರ ಎಂಬುವನೊಂದಿಗೆ ಚಾಲೆಂಜ್ ಮಾಡುವಂತೆ ಮಾತನಾಡುವ ಗೌಡನ ನಾಲ್ಕು ಜನ ಭಂಟರು, ನಮ್ಮ ಗೌಡರ ಹೆಣ್ಣುಮಕ್ಕಳು ಲವ್-ಗಿವ್ ಎನ್ನದೇ ಅವರು ತೋರಿಸಿದ ಹುಡುಗರನ್ನ ಮದುವೆಯಾಗ್ತಾರೆ. ಇಲ್ಲದಿದ್ದರೆ ನಿನ್ನ ಕಿವಿ ಕೊಯ್ದ ಹಾಗೆ ಅವರ ಕಿವಿನೂ ಕೋಯ್ಕೋತಾರೆ ಎಂದು ಸುಧಾಕರನ ಕಿವಿ ಕೊಯ್ದು ಗೌಡರು ಕಮಿಟ್ ಆಗುವಂತೆ ಮಾಡಿಬಿಡುತ್ತಾರೆ.

ಇಲ್ಲಿಂದ ಶುರುವಾಗುವ ಕಥೆ ಎಲ್ಲೆಲ್ಲೋ ಹೋಗಿ, ಹೆಂಗ್ಹೆಂಗೋ ಬಂದು ಕೊನೆಗೆ ದಡ ಸೇರುತ್ತೆ. ಕೆಲವು ಕಡೆ ಚಿತ್ರದ ಕಥೆ ನಿಧಾನ ಅನಿಸಿದಾಗ ಹಳೇಯ ಕನ್ನಡ ಹಾಡುಗಳನ್ನೇ ಕಾಮಿಡಿಗೆ ಬಳಸಿಕೊಳ್ಳಲಾಗಿದೆ. ರವಿಚಂದ್ರನ್ನನ್ನು ಮಿಮಿಕ್ರಿ ಮಾಡಲಾಗಿದೆ. ಪಾಸೀಟೀವ್ ಎನಜರ್ಿಗೆ ಹಾಡೊಂದರಲ್ಲಿ ಮುರಳಿ, ಕಿಟ್ಟಿ, ನಂದಕಿಶೋರ್ ಬಂದು ಹೋಗುತ್ತಾರೆ.

ಇಡೀ ಸಿನಿಮಾ ಕಾಮಿಡಿ ಟ್ರ್ಯಾಕ್ನಲ್ಲಿ ಸಾಗುತ್ತದೆ. ಡೈಲಾಗ್ಗಳು ಒಂದಕ್ಕಿಂತ ಒಂದು ಚೆಂದ. ಕೆಲವು ಕಡೆ ಮ್ಯೂಟ್ಗೂ ಕೆಲಸ ಕೊಟ್ಟಿದ್ದಾರೆ ನಂದ. ಶರಣ್ಗೆ ಸರಿಸಾಟಿಯಂತೆ ಚಿಕ್ಕಣ್ಣ ನಟಿಸಿದ್ದಾರೆ. ಇಬ್ಬರ ಜೋಡಿ ಸೂಪರ್. ರವಿಶಂಕರ್ ನಟನೆಯ ಬಗಗೆ ಎರಡೂ ಮಾತಿಲ್ಲ. ಆಸ್ಮಿತಾ ಸೂದ್ ಹೀಗೆ ಬಂದು ಹಾಗೆ ಹೋದರೂ ನೆನಪಲ್ಲುಳಿಯುತ್ತಾರೆ. ನಾಯಕಿ ಹೇಬಾ ಪಾಟೀಲ್ ರಾಜಾಹುಲಿಯ ಮೇಘನಾರನ್ನ ನೆನಪಿಸುತ್ತಾರೆ. ಉಳಿದಂತೆ ಸಹ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರದ ಮತ್ತೊಬ್ಬ ಹಿರೋ ಎಂದರೆ ಅರ್ಜುನ್ ಜನ್ಯ ಸಂಗೀತ. ಮೂರು ಹಾಡುಗಳು ಪಡ್ಡೆಗಳ ಫೇವರೇಟ್ ಎನಿಸಿವೆ. ಸುಧಾಕರ ಅವರ ಛಾಯಾಗ್ರಹಣದ ಬಗ್ಗೆ ದೂರುಗಳೇನೂ ಇಲ್ಲ. ಕಲರ್ಸ್ ಕಲರ್ಸ್ ಬ್ಯಾನರ್ಗಳು ಚಿತ್ರಕ್ಕೆ ಮೆರುಗು ತಂದುಕೊಟ್ಟಿವೆ. ಟೈಟಲ್ ಕಾರ್ಡ ಕೂಡ ಬ್ಯಾನರ್ ಮಾದರಿಯಲ್ಲಿರುವುದು ಖುಷಿ ಕೊಡುತ್ತದೆ. ಪಂಚಿಂಗ್ ಡೈಲಾಗ್ಗಳನ್ನ ಬರೆದಿರುವ ಪ್ರಶಾಂತ್ ರಾಚಪ್ಪ ಭರವಸೆ ಮೂಡಿಸಿದ್ದಾರೆ. ಚಿತ್ರಕಥೆ ಹಾಗೂ ನಿರ್ದೇನದ ಹೊಣೆ ವಹಿಸಿರುವ ನಂದಕಿಶೋರ್ ಮತ್ತೊಮ್ಮೆ ವಿಕ್ಟರಿಯ ಗೆಲುವನ್ನು ಮೆಲುಕು ಹಾಕಿದ್ದಾರೆ. ಈ ಬಾರಿ ಹೊಸ ಥರದ ಕಥೆ ಹೆಣೆದಿದ್ದಾರೆ. ನಿರ್ಮಾಪಕ ಗಂಗಾಧರ ಹಾಗೂ ಬಸವರಾಜು ಅವರು ಚಿತ್ರದಿಂದ ಲಾಭವನ್ನು ನಿರೀಕ್ಷಿಸಬಹುದು.

ರೇಟಿಂಗ್ : ****

*ನೋಡಬೇಡಿ

**ನೋಡ್ತಿರಾ?

***ನೋಡಬಹುದು.

****ಚೆನ್ನಾಗಿದೆ.

*****ನೋಡಲೇಬೇಕು.

 

 

One Response

  1. Ganapathi Magalu
    August 16, 2014

Add Comment

Leave a Reply

%d bloggers like this: