Quantcast

‘ವೈಜನಾಥ್ ಬಿರಾದಾರ್ ಅವರಿಗೆ ಅಭಿನಂದನೆಗಳು’ – ಅರುಣ್ ಕುಮಾರ್

ಅರುಣ್ ಕುಮಾರ್

ಕನ್ನಡಿಗರಿಗೆಲ್ಲಾ ನಟ ವೈಜನಾಥ ಬಿರಾದಾರ್ ಚಿರಪರಿಚಿತರು. ಇವರ ಹೆಸರು ಕೇಳಿದೇಟಿಗೆ ಹಸಿವು, ಬಡತನದ ಸಂಕಟ ಹೊದ್ದ ನೂರಾರು ಪಾತ್ರಗಳು ಮನದಲ್ಲಿ ಕದಲಲಾರಂಭಿಸುತ್ತವೆ. ಅಪ್ಪಟ ಕಲಾವಿದನಾಗಿ ಕನ್ನಡಿಗರೆಲ್ಲರ ಮನಗಳಲ್ಲಿ ನೆಲೆ ನಿಂತಿರುವ ಬಿರಾದಾರ್ ಅವರಿಗೂ ಸಹ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಈ ಹಿನ್ನೆಲೆಯಲ್ಲಿ ಬಿರಾದಾರ್ ಅವರ ಬದುಕಿನ ಕಷ್ಟಕಾರ್ಪಣ್ಯಗಳ ಹಾದಿಯ ಮೇಲೊಂದು ಕ್ಲುಪ್ತ ನೋಟ…

`ನಾಲ್ಕನೇ ಕ್ಲಾಸು ಓದಿರೋ ಅಣ್ಣಾವ್ರು ಸಿನಿಮಾ ನಟರಾಗಿರೋವಾಗ ಅವರಷ್ಟೇ ಓದಿರುವ ನಾನ್ಯಾಕೆ ಸಿನಿಮಾ ಸೇರ್ಬಾರ್ದು?’ ಹೀಗೊಂದು ವಿಚಿತ್ರವಾದ ಆಲೋಚನೆ ಆ ಯುವಕನನ್ನು ಸಿನಿಮಾ, ರಂಗಭೂಮಿಯತ್ತ ಆಕರ್ಷಿಸಿತು.

ಅದು 1978. ಆ ವರ್ಷ ಉತ್ತರ ಕರ್ನಾಟಕದಲ್ಲಿ ಅನಂತ್ ನಾಗ್ ಅಭಿನಯದ `ಬರ’ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಮೈಗೆ ತೂತಿಕ್ಕುವಂಥ ಸೆಖೆ, ರಣರಣ ಬಿಸಿಲು. ಅನಂತ್ ಆ ಬಿಸಿಲಿನಿಂದ ಬಸವಳಿದು ಬಿಸಿಲನ್ನು ಬೈಯುತ್ತಾ ಕುಳಿತಿದ್ದರು. ಅಲ್ಲೇ ಇದ್ದ ಆ ಯುವಕ ತಕ್ಷಣ ತನ್ನ ಅಜ್ಜಿ ಬಳಿ ಹೋಗಿ ಭರ್ತಿ ಒಂದು ಕ್ಯಾನ್ ಮೊಸರು ತಂದು ಅನಂತ್ ಸೇರಿದಂತೆ ಚಿತ್ರೀಕರಣದಲ್ಲಿದ್ದವರೆಲ್ಲರಿಗೂ ನೀಡಿದ. ಕೆನೆ ಮೊಸರಿಗೆ ಮಾರುಹೋದ ಅನಂತ್ ಆ ಹುಡುಗನನ್ನು ಕರೆದು ಮಾತಾಡಿಸಿದರು. ಆತನ ಆಶಯದಂತೆ ನಿರ್ದೇಶಕ ಎಂ.ಎಸ್. ಸತ್ಯು ಅವರ ಬಳಿ ಶಿಫಾರಸು ಮಾಡಿ ಆತನಿಗೆ ಆ ಸಿನಿಮಾದಲ್ಲಿ ಸಣ್ಣದೊಂದು ಪಾತ್ರವನ್ನೂ ಕೊಡಿಸಿದರು.

ಡಾ. ರಾಜ್ಕುಮಾರ ರಂತೆ ನಟನಾಗಬೇಕು ಎಂದು ಕನಸು ಕಂಡಿದ್ದ ಹುಡುಗನಿಗೆ ಅವತ್ತು ಇದಕ್ಕಿಂತ ದೊಡ್ಡ ಸಂತಸವಿರಲಿಲ್ಲ.

ಈಗ ಅದೇ ವ್ಯಕ್ತಿ ತನ್ನ ನಟನೆಗೆ ಮೊಟ್ಟಮೊದಲ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ನಟ ಎನಿಸಿಕೊಂಡಿದ್ದಾರೆ.

ಆ ವ್ಯಕ್ತಿಯ ಹೆಸರು ವೈಜನಾಥ್ ಬಿರಾದಾರ್!

ಅಂದು ಅನಂತ್ ನಾಗ್ ಅವರ ಕೃಪೆಯಿಂದ ಸಿನಿಮಾದಲ್ಲಿ ಛಾನ್ಸು ಪಡೆದ ಬಿರಾದಾರ್ ನಂತರ ಬೆಂಗಳೂರಿಗೆ ಬಂದಮೇಲೆ ಅನುಭವಿಸಿದ ಯಾತನೆಯಿದೆಯಲ್ಲಾ? ಅದು ಅಕ್ಷರಶಃ ನರಕ. ಬಿರಾದಾರ್ರ ಏಕಪಾತ್ರಾಭಿನಯವನ್ನು ಕಂಡು ಇಷ್ಟಪಟ್ಟಿದ್ದ ಕುಂದಾಪುರದ ತೆಕ್ಕಟ್ಟೆ ಗೋಪಾಲ ರಾಯ ಎಂಬುವರೊಬ್ಬರು ಚಾಮರೇಜಪೇಟೆ ನಾಲ್ಕನೇ ಮುಖ್ಯರಸ್ತೆಯಲ್ಲಿ ಅವರ ಸಣ್ಣದೊಂದು ಕಚೇರಿಯಲ್ಲಿ ಬಿರಾದಾರ್ಗೆ ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದರಂತೆ. ಆದರೆ ರಾತ್ರಿ ಹತ್ತರಿಂದ ಬೆಳಿಗ್ಗೆ ಐದು ಗಂಟೆಯ ತನಕ ಮಾತ್ರ! ಬೆಳಗ್ಗೆ ಎದ್ದು ಐದೂವರೆ ಹೊತ್ತಿಗೆ ಅಲ್ಲೇ ತಣ್ಣೀರು ಸ್ನಾನ ಮಾಡಿ ಜಾಗ ಖಾಲಿ ಮಾಡಬೇಕಿತ್ತಂತೆ. ಆನಂತರ ಅವರು ಚಿಕ್ಕಲಾಲ್ಬಾಗ್ಗೆ ಹೋಗಿ ತಮ್ಮ ಬಳಿ ಇದ್ದ ಎರಡು ಜೊತೆ ಬಟ್ಟೆಯಲ್ಲಿ ಒಂದನ್ನು ತೊಟ್ಟು ಇನ್ನೊಂದನ್ನು ಬೋರ್ವಲ್ನಲ್ಲಿ ತೊಳೆದು ಮರದ ಕೊಂಬೆ, ಕಾಂಪೌಂಡಿನ ಮೇಲೆ ಹರವಿ ಒಣಗಿಸಿಕೊಳ್ಳುತ್ತಿದ್ದರಂತೆ. ಕೈಲಿ ಕಾಸಿಲ್ಲ, ಮಾಡೋಕೆ ಕೆಲಸವಿಲ್ಲ. ಇದ್ದ ಪುಡಿಗಾಸಲ್ಲಿ ಸೌತೆಕಾಯಿಯೂ ಸಿಗುತ್ತಿರಲಿಲ್ಲ.

ಇಂಥ ದಾರುಣ ಸಂದರ್ಭದಲ್ಲಿ ಬಿರಾದಾರ್ಗೆ ಆಸರೆಯಾಗಿದ್ದು ಗುರುರಾಜ ಹೊಸಕೋಟೆ ಅವರ ಆರ್ಕೇಸ್ಟ್ರಾ. `ಜಮಖಂಡಿ ಬ್ರದರ್ಸ್’ ಹೆಸರಿನಲ್ಲಿ ಹೊಸಕೋಟೆಯವರು ನಡೆಸುತ್ತಿದ್ದ ಆರ್ಕೇಸ್ಟ್ರಾದಲ್ಲಿ ಬಿರಾದಾರ್ ಕೂಡಾ ಕಲಾವಿದರಾದರು. ಆನಂತರ ಅವರು ನಾಟಕರಂಗದಲ್ಲಿ ಮತ್ತು ಸಿನಿಮಾಗಳಲ್ಲಿ ನಟಿಸಲಾರಂಭಿಸಿದರು.

ಅಜಗಜಾಂತರ, ಓ ಮಲ್ಲಿಗೆ, ಅಕ್ಕ, ಅಳಿಯ ಅಲ್ಲ ಮಗಳ ಗಂಡ, ಅಕ್ಕ ತಂಗಿ, ಲವ್ಟ್ರೈನಿಂಗ್ ಸ್ಕೂಲ್, ಹುಲಿಯಾ, ಮಠ, ಜಾಕಿ ಹಾಗೂ ಈಗ ಉತ್ತಮ ನಟ ಎಂಬ ಪ್ರಶಸ್ತಿ ಪಡೆದಿರುವ, ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕನಸೆಂಬ ಕುದುರೆಯನೇರಿ’ ಬಿರಾದಾರ್ ಅವರು ನಟಿಸಿರುವ ಪ್ರಮುಖ ಚಿತ್ರಗಳು. ಗುರುಪ್ರಸಾದ್ ನಿರ್ದೇಶನದ `ಮಠ’ ಬಿರಾದಾರ್ ಅಭಿನಯದ ೨೦೦ನೇ ಸಿನಿಮಾ. `ದೇವರು ಕೊಟ್ಟ ತಂಗಿ’  ೩೦೦ನೇ ಚಿತ್ರ. ವೃತ್ತಿ ರಂಗಭೂಮಿಯಲ್ಲೂ ಸಕ್ರಿಯರಾಗಿರುವ ಬಿರಾದಾರ್ ದಿನಕ್ಕೆ ಎರಡೆರಡು ನಾಟಕಗಳ ಶೋ ನೀಡಿದವರು.

ಒಮ್ಮೆ ಯಾರೋ ತರಕಾರಿ ಮಾರುವ ಸ್ನೇಹಿತ ಚಾಮರಾಜಪೇಟೆಯಲ್ಲಿರುವ ಮದುವೆ ಛತ್ರಕ್ಕೆ ಬಾ ಊಟ ಹಾಕಿಸ್ತೀನಿ ಎಂದಿದ್ದನಂತೆ. ಆತನ ಮಾತು ಕೇಳಿ ಕಲ್ಯಾಣ ಮಂಟಪದ ಬಾಗಿಲಿಗೆ ಹೋಗಿನಿಂತ ಬಿರಾದಾರ್ಗೆ ಅಲ್ಲಿದ್ದ ಮಾರ್ವಾಡಿಗಳು `ಅಚ್ಚಾ ಅಚ್ಚಾ’ ಎಂದು ನಾಯಿಯಂತೆ ಅಟ್ಟಿದ್ದರಂತೆ. ನಂತರ ರಸ್ತೆಯಲ್ಲಿ ಸಿಕ್ಕ ಐದು ರುಪಾಯಿಯ ಮುದುರಿದ ನೋಟನ್ನು ತೆಗೆದುಕೊಂಡು ಹೋಗಿ ಇಡ್ಲಿ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದರಂತೆ. ಹಸಿವನ್ನು ಈ ಪರಿ ಅನುಭವಿಸಿದ್ದರಿಂದಲೋ ಏನೋ ಬಿರಾದಾರ್ ತಮ್ಮ ಬಹುತೇಕ ಪಾತ್ರಗಳಲ್ಲಿ ಎಲ್ಲ ಹಸಿದವರ ಪ್ರತಿನಿಧಿಯಂತೆ ನಟಿಸುತ್ತಾರೆ. `ಹುಲಿಯಾ’ ಚಿತ್ರದಲ್ಲಿ ಹಸಿವು ತಾಳಲಾರದೆ ಬೂದಿತಿನ್ನುವ ದೃಶ್ಯ ಎಂಥವರ ಕಣ್ಣಲ್ಲೂ ನೀರುಕ್ಕಿಸುತ್ತದೆ.

ನಿಜಕ್ಕೂ ಹಸಿವಿನ ನೋವು ಉಂಡಿರುವ ಬಿರಾದಾರ್ ಬದುಕಿನಲ್ಲಿ ಇವತ್ತಿಗೂ ಅಂಥಾ ಬದಲಾವಣೆ ಆಗಿಲ್ಲ. ಹೊಟ್ಟೆ ಬಟ್ಟೆಗೆ ಮೋಸವಿಲ್ಲದಿದ್ದರೂ ಬರುವ ಆದಾಯ ಯಾವುದಕ್ಕೂ ಎಟಕುವುದಿಲ್ಲ. ಪತ್ನಿ ವಿಮಲಾ, ಚೇತನ್, ಮನೋಜ್ ಮತ್ತು ಲಾವಣ್ಯ ಎಂಬ ಮೂವರು ಮಕ್ಕಳೊಂದಿಗೆ ಬೆಂಗಳೂರಿನ ಮಂಜುನಾಥನಗರದಲ್ಲಿ ಮೂರು ಸಾವಿರ ರೂಪಾಯಿ ಬಾಡಿಗೆಯ ಸಣ್ಣದೊಂದು ಮನೆಯಲ್ಲಿ ಬಿರಾದಾರ್ ವಾಸಿಸುತ್ತಿದ್ದಾರೆ.

ಕಳೆದ ಐದಾರು ವರ್ಷಗಳಿಂದ ಬಿರಾದಾರ್ ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಗುಜರಾಯಿಸುತ್ತಿದ್ದರೂ ಯಾವ ಸರ್ಕಾರಗಳೂ ಇವರತ್ತ ಕಣ್ಣೆತ್ತಿಯೂ ನೋಡಿರಲಿಲ್ಲ. ಈ ವರ್ಷ ಬಿರಾದಾರ್ಗೆ ರಾಜ್ಯೋತ್ಸವ ಪ್ರಶಸ್ತಿ ಖಚಿತ ಎಂದು ಹೇಳಲಾಗುತ್ತಿದೆ. ಇಂಥ ಬಿರಾದಾರ್ ಅವರಿಗೆ ಎರಡು ವರ್ಷಗಳ ಹಿಂದೆ ಉತ್ತಮ ನಟನೆಗಾಗಿ ಸ್ಪೇನ್ ದೇಶದ `ಗೋಲ್ಡನ್ ವ್ಹೀಲ್’ ಪ್ರಶಸ್ತಿ ಕೂಡಾ ಲಭಿಸಿತ್ತು. ಆ ಸಂದರ್ಭದಲ್ಲಿ ಪರಿಚಿತರು `ಬಿರಾದಾರ್ ಅವರೇ ಇಂಟರ್ನ್ಯಾಷನಲ್ ಅವಾರ್ಡ್ ಬಂದಿದೆಯಂತೆ ನಿಮಗೆ?’ ಅಂತ ಪ್ರಶ್ನಿಸಿದರೆ `ಅದೇನೋ ಬಂದದಂತ್ರೀ… ಪೇಪರ್ನಾಗ್ ಹಾಕ್ಯವ್ರೆ… ನಂಗೆ ಅದ್ರ ಬಗ್ಗೆ ಏನೂ ತಿಳೀವಲ್ದು. ನೀವೇ ಒಂಚೂರ್ ತಿಳ್ಕಂಡ್ ಹೇಳ್ರೀ ನಂಗೆ’ ಎಂದು ಮುಗ್ಧವಾಗಿ ಹೇಳಿದ್ದರಂತೆ ಬಿರಾದಾರ್. ಇಂಥಾ ಪ್ರತಿಭಾವಂತ ಕಲಾವಿದ ಬಿರಾದಾರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿಯುವ ಸೂಚನೆಯಿರುವುದು ಸಂತಸದ ಸಂಗತಿ.

ಅದ್ಭುತ ಪ್ರತಿಭೆಯಾದ ವೈಜನಾಥ್ ಬಿರಾದಾರ್ ಅವರಿಗೆ ಅಭಿನಂದನೆಗಳು.

 

10 Comments

 1. Dinesh Kumar
  November 2, 2014
 2. ವಿಜಯ್ ಕುಮಾರ್
  November 2, 2014
 3. mmshaik
  October 31, 2014
 4. NS Shankar
  October 31, 2014
 5. ಸಂತೋಷ ಗುಡ್ಡಿಯಂಗಡಿ
  October 31, 2014
 6. Naveen
  October 31, 2014
 7. shobhavenkatesh
  October 31, 2014
 8. ಅಕ್ಕಿಮಂಗಲ ಮಂಜುನಾಥ
  October 31, 2014
 9. Gopaala Wajapeyi
  October 31, 2014
 10. kum veerabhadrappa
  October 31, 2014

Add Comment

Leave a Reply