Quantcast

ಕಮಲ್ ಹಾಸನ್‌ಗೆ ಅರವತ್ತಾಯ್ತಂತೆ

ಅಭಿಜಾತ ಕಲಾವಿದನಿಗೆ ಅರವತ್ತರ ಸಂಭ್ರಮ

ಗೊರೂರು ಶಿವೇಶ್

‘ಕಳತ್ತೂರು ಕಣ್ಣಮ್ಮ’ ಚಿತ್ರದ ಮೂಲಕ 6ನೇ ವಯಸ್ಸಿಗೆ ಚಲನಚಿತ್ರರಂಗವನ್ನು ಪ್ರವೇಶಿಸಿ ಸುಮಾರು 55 ವರ್ಷಗಳ ಕಾಲ ವಿಭಿನ್ನ ಪಾತ್ರಗಳಿಂದ ಭಾರತದ ಸಿನಿರಸಿಕರ ಮನಗೆದ್ದ ಪದ್ಮಭೂಷಣ ಕಮಲಹಾಸನ್ಗೆ ಈಗ ಅರವತ್ತರ ಸಂಭ್ರಮ. (ಜನನ ನವೆಂಬರ್ 7, 1954) ತೆಲುಗು, ಕನ್ನಡ, ಹಿಂದಿ, ಮಲೆಯಾಳಂ – – ಹೀಗೆ ಭಾರತೀಯ ಭಾಷೆಗಳಲ್ಲಿ ತಮ್ಮ ಸಹಜ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಅವರು ಪಡೆದುಕೊಂಡಿರುವುದು ಕಲಾವಿದನಿಗೆ ದೇಶ, ಭಾಷೆಯ ಹಂಗಿಲ್ಲವೆಂಬುದನ್ನು ಮತ್ತೆ ರುಜುವಾತುಪಡಿಸಿದೆ.

ಕೇವಲ ಎರಡು ಚಿತ್ರಗಳು ಹಿಟ್ಟಾದರೆ ತಮ್ಮ ಇಮೇಜಿಗೆ ಅಂಟಿಕೊಂಡು ಅದರಿಂದ ಆಚೆಬರದೆ ತಮ್ಮ ಅಭಿಮಾನಿಗಳಿಗಾಗಿ ನಟಿಸುವ ಇಂದಿನ ನಾಯಕನಟರ ನಡುವೆ ಸ್ಟಾರ್ಗಿರಿಗೆ ಆಸೆಪಡದೆ ಅಭಿನಯಕ್ಕೆ ಅವಕಾಶವಿರುವ ಮನುಷ್ಯನ ವಿವಿಧ ಮುಖಗಳನ್ನು ಅನಾವರಣಗೊಳಿಸುವ ವಿಭಿನ್ನ ಪಾತ್ರಗಳನ್ನು ಅರಸುತ್ತಾ ಆ ಪಾತ್ರಗಳನ್ನು ಅನುಭವಿಸಿ ಆ ಪಾತ್ರಗಳ ಮೂಲಕವೇ ಜನರಿಗೆ ಪರಿಚಯವಾಗುತ್ತಾ ಹೋದ ಕಮಲಹಾಸನ್ ಒಬ್ಬ ಮೇರು ನಟ. ಈ ಕಾರಣಕ್ಕಾಗಿಯೇ ಕಮಲಹಾಸನ್ ಎಂದರೆ ನೆನಪಿಗೆ ಬರುವುದು ಮರೋಚರಿತ್ರದ ಭಗ್ನಪ್ರೇಮಿ ಬಾಲು, ಸ್ವಾತಿಮುತ್ತುವಿನ ಅಮಾಯಕ ಶಿವಯ್ಯ, ಸಾಗರಸಂಗಮಂನ ಭರತನಾಟ್ಯ ಕುಚಿಪುಡಿ, ಕಥಕ್ನ ನರ್ತಕ ಬಾಲಕೃಷ್ಣ, ಮೂನ್ರಂಪಿರೈಯ ದೈಹಿಕ ಶಿಕ್ಷಕ ಶ್ರೀನಿವಾಸ (ಶೀನಿ), ಅಪೂರ್ವಸಹೋದರರ್ನ ಕುಳ್ಳ, ಅವ್ವೈ ಷಣ್ಮುಖಿಯ ಘಾಟಿಮುದುಕಿ ಷಣ್ಮುಖಿ, ನಾಯಗನ್ ಚಿತ್ರದ ವೇಲು, ಅವಳ್ ಒರ್ ತೊಡರ್ಕಥೈಯ ಮೂರ್ಛೆರೋಗಿ ಪ್ರಸಾದ್, ಮನ್ಮಥಲೀಲೈನ ಸ್ತ್ರೀಲೋಲ ಮಧು, 16 ವಯದಿನಲೆಯ ಹಳ್ಳಿಯ ಮುಗ್ದ ಚಪ್ಪಾಣಿ, ಸೋಮುಕಡದಿ ಸೋಕುಕಡದಿಯ ನಕಲಿ ಡಾಕ್ಟರ್, ಕಲ್ಯಾಣರಾಮನ್ನ ಭೂತ ಮತ್ತು ಪುಷ್ಪಕ ವಿಮಾನದ ಹಾಗೂ ವರುಮಯಿನ್ ನೀರಂಸಿಗಪ್ಪುವಿನ ನಿರುದ್ಯೋಗಿ ದಶಾವತಾರಂನ ದಶಾವತಾರಿ, ವಿಶ್ವರೂಪಂನ ಭಯೋತ್ಪಾದಕ, ತೆನಾಲಿಯ ಶ್ರೀಲಂಕಾ ತಮಿಳಿಗ ಒರು ಖೈದಿಯನ್ ಡೈರಿಯ ಕೊಲೆಗಾರ. . . ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ವಿಶೇಷವೆಂದರೆ ಎಲ್ಲಾ ಚಿತ್ರಗಳಲ್ಲೂ ಹಾಸ್ಯ, ಶೃಂಗಾರ, ರೌದ್ರ, ಭೀಭತ್ಸ. ಹೀಗೆ ನವರಸಗಳನ್ನು ಜನರಿಗೆ ಉಣಬಡಿಸಿ ಆರರಿಂದ ಅರವತ್ತರವರೆಗಿನ ಅಬಾಲವೃದ್ಧರನ್ನು ರಂಜಿಸಿದ ನಟನೀತ.

ಕನ್ನಡದಲ್ಲಿ 1977ರಲ್ಲಿ ‘ಕೋಕಿಲ’ ಚಿತ್ರದಲ್ಲಿ ನಟಿಸಿದ ಕಮಲಹಾಸನ್ ನಂತರ ಮರಿಯಾ ಮೈಡಾರ್ಲಿಂಗ್, ಬೆಂಕಿಯಲ್ಲಿ ಅರಳಿದ ಹೂವು (ಬಸ್ಕಂಡಕ್ಟರ್ ಪಾತ್ರದಲ್ಲಿ) ನಟಿಸಿದ್ದಾರೆ. ಇತ್ತೀಚಿನ ವರ್ಷದಲ್ಲಿ ರಮೇಶ್ ನಟಿಸಿ ನಿರ್ದೇಶಿಸಿದ ರಾಮಾ ಶಾಮ ಭಾಮ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದಲ್ಲದೆ ತಮ್ಮದೆ ದನಿ ನೀಡಿದ್ದಾರೆ. ವಿಶೇಷವೆಂದರೆ ಬಹುತೇಕ ನಮ್ಮ ಕನ್ನಡ ನಾಯಕನಟರೆ ಉತ್ತರಕರ್ನಾಟಕದ ಜವಾರಿ ಭಾಷೆಯನ್ನು ಮಾತಾಡಲು ಹಿಂದೆಮುಂದೆ ನೋಡುತ್ತಿರುವಾಗ ಆ ಭಾಷೆಯನ್ನು ಕಲಿತು ಚಿತ್ರದಲ್ಲಿ ಇದೇ ತಮ್ಮ ಮಾತೃಭಾಷೆಯಂತೆ ಮಾತಾಡಿರುವುದು ಅವರ ಬದ್ಧತೆಗೆ ಸಾಕ್ಷಿಯಾಗಿದೆ. ಆ ಚಿತ್ರದ ಮುಂದಾ. . ಮುಂದಾ. . ಎಂಬ ಪದಗಳು ಈಗಲೂ ಕೇಳಿದರೂ ನಗೆಉಕ್ಕಿಸುತ್ತವೆ.

ಒಬ್ಬ ಶ್ರೇಷ್ಠ ಕಲಾವಿದನನ್ನು ರೂಪಿಸಲು ಕಾಲ, ಪ್ರದೇಶ, ಪರಿಸರ, ಸನ್ನಿವೇಶ ಪೂರಕವಾಗಿ ವರ್ತಿಸುತ್ತದೆ ಎಂಬುದು ಕಮಲಹಾಸನ್ರವರ ಉದಾಹರಣೆಯಲ್ಲಂತೂ ಸತ್ಯವಾಗಿದೆ. ಎಪ್ಪತ್ತು-ಎಂಭತ್ತರ ದಶಕದ ಶ್ರೇಷ್ಠ ನಿರ್ದೇಶಕರಾದ ಕೆ ಬಾಲಚಂದರ್, ಭಾಗ್ಯರಾಜ್, ಮಣಿರತ್ನಂ, ಸಿಂಗಿತಂ ಶ್ರೀನಿವಾಸರಾವ್, ಕೆ ವಿಶ್ವನಾಥ್, ಭಾರತಿರಾಜ, ಬಾಲುಮಹೇಂದ್ರರಂಥ ನಿರ್ದೇಶಕರು ತಮ್ಮ ನಿರ್ದೇಶನದ ಶೃಂಗದಲ್ಲಿದ್ದಾಗ ಅವರೊಡನೆ ನಟಿಸುವ ಅವಕಾಶ ದೊರತದ್ದು, ಕಮಲ್ರ ಅಭಿನಯಸಾಮಥ್ರ್ಯವನ್ನು ಒರೆಗೆ ಹಚ್ಚಲು ಸಹಾಯಕವಾಯಿತು. ಬಾಲಚಂದರ್ರಂತು ಅವರ ‘ಗಾಡ್ಫಾದರ್’ ಆಗಿ ಬಹುತೇಕ ಅವರ ಚಿತ್ರಗಳಲ್ಲಿ ಅವಕಾಶ ನೀಡಿದರು. ಹೀಗಾಗಿಯೆ ಕಮಲ್ ತಮ್ಮ ಸಂದರ್ಶನದಲ್ಲಿ ಬಾಲಚಂದರ್ ನನ್ನನ್ನು ಕಂಡುಹಿಡಿಯಲಿಲ್ಲ (discover) ಬದಲಾಗಿ ಶೋಧಿಸಿದರು (invented) ಎಂದಿದ್ದಾರೆ. ಮೇರುನಟ ಸೂಪರ್ಸ್ಟಾರ್ ರಜಿನಿಕಾಂತ್, ಪ್ರಕಾಶ್ ರಾಜ್, ರಮೇಶ್, ವಿವೇಕ್, ಸರಿತ ಇವರೆಲ್ಲರೂ ಕೂಡ ಬಾಲಚಂದರ್ ಶೋಧನೆಯೆ.

ನಟನಾಗಿ ಅಷ್ಟೆ ಅಲ್ಲದೆ ಕಥೆಗಾರನಾಗಿ (ರಾಜಪಾರ್ವೈ, ಅಪೂರ್ವ ಸಹೋದರರ್ಗಳ್, ಮೈಕಲ್ ಮದನರಾಮರಾಜನ್, ದೇವರ್ಮಗನ್, ಮಹಾನದಿ, ದಶಾವತಾರಮ್, ವಿಶ್ವರೂಪಂ ಚಿತ್ರಗಳಿಗೆ ಇವರದೆ ಕಥೆ) ನಿರ್ದೇಶಕನಾಗಿ ಹೇರಾಮ್, ಚಾಚಿ420, ವಿಶ್ವರೂಪಂ ಚಿತ್ರಗಳನ್ನು ನಿರ್ದೇಶಿಸಿದಲ್ಲದೆ ತಮ್ಮ ರಾಜಕಮಲ್ ಎಂಟರ್ಪ್ರೈಸಸ್ನ ಮೂಲಕ ನಿರ್ಮಾಪಕನಾಗಿ, ನೃತ್ಯನಿರ್ದೇಶಕನಾಗಿ, ಚಿತ್ರಗೀತೆಗಳಿಗೆ ಸಾಹಿತ್ಯ ನೀಡುವುದರ ಮೂಲಕ ಅವರ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

ವೈಯಕ್ತಿಕ ಜೀವನದಲ್ಲಿ ಅನೇಕ ಏರು-ಪೇರುಗಳನ್ನು ಕಮಲ್ ಕಂಡಿದ್ದಾರೆ. ವಾಣಿಗಣಪತಿ ಹಾಗೂ ಸಾರಿಕರೊಂದಿಗಿನ ಅವರ ದಾಂಪತ್ಯ ಸಂಬಂಧ ಮುರಿದುಬಿದ್ದು, ಈಗ ಚಿತ್ರನಟಿ ಗೌತಮಿಯೊಂದಿಗೆ ಜೀವಿಸುತ್ತಿದ್ದಾರೆ. ಅವರ ಇಬ್ಬರು ಹೆಣ್ಣುಮಕ್ಕಳು ಶೃತಿಹಾಸನ್ ಚಿತ್ರನಟಿಯಾಗಿದ್ದರೆ ಅಕ್ಷರ ಹಾಸನ್ ಸಹನಿರ್ದೇಶಕಿಯಾಗಿ ಚಲನಚಿತ್ರರಂಗದಲ್ಲಿದ್ದಾರೆ. ಅವರ ಸಹೋದರ ಚಾರುಹಾಸನ್ ನಟರಾಗಿದ್ದು ಕನ್ನಡದ ‘ತಬರನಕಥೆ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ.

ತಮ್ಮ ಅಭಿನಯಕ್ಕಾಗಿ ನಾಲ್ಕು ಬಾರಿ ರಾಷ್ಟ್ರಪ್ರಶಸ್ತಿಯನ್ನು ಲೆಕ್ಕವಿಲ್ಲದಷ್ಟ್ರು ಇತರೆ ಪ್ರಶಸ್ತಿಗಳನ್ನು ಭಾರತ ಸರ್ಕಾರದಿಂದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪಡೆದ ಕಮಲ್ಗೆ ಭಾರತರತ್ನ ಪ್ರಶಸ್ತಿ ದೊರೆಯಲೆಂದು ಆಶಯ. ಅವರು ಇನ್ನೂರಕ್ಕೂ ಚಿತ್ರಗಳಲ್ಲಿ ಕನಿಷ್ಟ ಇಪ್ಪತ್ತು ಚಿತ್ರಗಳನ್ನಾದರೂ ಬೇರೆ ಬೇರೆ ಕಾರಣಕ್ಕೆ ಅತ್ಯುತ್ತಮ ಚಿತ್ರಗಳಾಗಿ ಸೇರ್ಪಡೆಗೊಂಡಿರುವುದು ಅವರ ಕಲಾಪ್ರತಿಭೆಗೆ ಹಿಡಿದ ಕನ್ನಡಿ.

Add Comment

Leave a Reply