Quantcast

‘ಅಂಬರೀಶ’ – ಭೂಮಾಫಿಯಾ ಮತ್ತು ಹೀರೋಯಿಸಂ

-ಚಿತ್ರಪ್ರಿಯ ಸಂಭ್ರಮ್

ಕೇಂಪೇಗೌಡರ ಹೆಸರಿನಲ್ಲಿ ರಕ್ತಪಾತ ನಡೆಯುತ್ತಿರುವುದು ತಪ್ಪೆನಿಸುವುದಿಲ್ಲವೇ ಎಂದು ಪತ್ರಕರ್ತೆ ಕೇಳುತ್ತಾಳೆ. ಪುರಾಣಗಳನ್ನು ಕೇಳಿರುವಂತೆ ಧರ್ಮಯುದ್ಧದಲ್ಲೇ ಶ್ರೀರಾಮ, ಶ್ರೀಕೃಷ್ಣ ಮಾರಣಹೋಮ ನಡೆಸಿಯಲ್ಲವೇ ಯುದ್ಧ ಗೆದ್ದದ್ದು ಎಂಬ ಸಮರ್ಥನೆ ಪಾತ್ರವೊಂದರಿಂದ ಬರುತ್ತದೆ.

ನಿರ್ದೇಶಕ ಮಹೇಶ್ ಸುಖಧರೆ ಈ ಬಗ್ಗೆ ಮೊದಲೇ ಯೋಚಿಸಿ ಚಿತ್ರದಲ್ಲೇ ಟೀಕಿಸುವವರಿಗೆ ಪರೋಕ್ಷವಾಗಿ ಉತ್ತರಿಸಿದ್ದಾರೆ ಎನಿಸುತ್ತದೆ. ಗೋವುಗಳನ್ನು ಮುದ್ದಾಡುವ ಅಂಬರೀಶ, ಕೆಂಪೇಗೌಡನ ಅವತಾರ ಎತ್ತುತ್ತಿದ್ದಂತೆ ಹೆಣಗಳ ರಾಶಿಯನ್ನು ಗುಡ್ಡೆ ಹಾಕುತ್ತಾನೆ. ಅದರೂ ಈತ ರೌಡಿಯಲ್ಲ, ಜನೋದ್ಧಾರಕ ಎಂದು ನಿರ್ದೇಶಕರು ಬಿಂಬಿಸಿರುವುದು ಹಿಂಸೆಯನ್ನು ಪ್ರಚೋದಿಸಿದಂತೆಯೂ ಹಾಗೂ ಲಾಜಿಕ್ಕೆ ಇಲ್ಲದ ಮೊಂಡುವಾದವನ್ನು ಮಂಡಿಸಿದಂತೆಯೂ ಭಾಸವಾಗುವುದು ಸುಳ್ಳಲ್ಲ.

ದರ್ಶನ್ ಸಿನಿಮಾ ಹೇಗಿರಬೇಕು ಎಂದು ಅಭಿಮಾನಿಗಳು ಬಯಸುತ್ತಾರೋ ಹಾಗೆಯೇ ಇದೆ ಅಂಬರೀಶ. ಅಲ್ಲಲ್ಲಿ ಸಾರಥಿಯ ಕಥೆ ನೆನಪಾಗುತ್ತದೆ. ಕ್ಲೈಮ್ಯಾಕ್ಸ್ ಇನ್ನೇನು ದುಃಖಾಂತ್ಯ ಎಂದು ಪ್ರೇಕ್ಷಕ ಸೀಟಿನಿಂದ ಮೇಲೆದ್ದಂತೆ ದರ್ಶನ್ ಸಹ ಭೂಮಿಯನ್ನು ಸೀಳಿಕೊಂಡು ಮೇಲೆ ಬರುತ್ತಾರೆ. ಸಪ್ಪೆ ಮುಖ ಮಾಡಿಕೊಂಡು ಹೋಗುತ್ತಿದ್ದವರು ಮತ್ತೆ ತಿರುಗಿ ನೋಡಿ ಶಿಳ್ಳೆ ಹಾಕಿ ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಶುಭಂ.

ಮೊದಲಾರ್ಧ ಅಷ್ಟೇನೂ ಬೋರ್ ಎನಿಸಲ್ಲ. ದ್ವಿತೀಯಾರ್ಧ ಕಥೆಯ ಜಾಡು ಎಲ್ಲೋ ತಪ್ಪುತ್ತಿದೆಯಲ್ಲ. ಇದು ಭಕ್ತಿ ಸಿನಿಮಾನಾ? ಇಲ್ಲವೇ ಮಂತ್ರಾಲಯದ ರಾಘವೇಂದ್ರಸ್ವಾಮಿಗಳ ಕುರಿತ ಸಾಕ್ಷ್ಯಚಿತ್ರಾನಾ ಎಂದುಕೊಳ್ಳುವಷ್ಟರಲ್ಲಿ ಊರಗೌಡನ ಆವಾಜು, ಇಂಟರ್ನ್ಯಾಷನಲ್ ಡಾನ್ ಆರ್ಡಿಎಕ್ಸ್ನ ಅಬ್ಬರ, ಮಂತ್ರಿಯ ಭೂಮಾಫಿಯಾದ ಗೋಪುರ ಬಂದು ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಎಂದು ಹೇಳುತ್ತದೆ.

ದುಡ್ಡಿನ ದರ್ಪದಿಂದ ಮೆರೆಯುವ ಹೆಣ್ಣಿಗೆ ಬುದ್ಧಿ ಕಲಿಸುವ ಗಂಡಸಾಗಿ, ಪ್ರೀತಿಸದವಳ ಭವಿಷ್ಯಕ್ಕೆ ಮಿಡಿಯುವ ನೈಜಪ್ರೇಮಿಯಾಗಿ, ದುರುಳರ ಪಾಲಿಗೆ ಸಾಕ್ಷಾತ್ ಕೇಂಪೇಗೌಡನಾಗಿ ದರ್ಶನ್ ಎಂದಿನಂತೆ ಇಷ್ಟವಾಗುತ್ತಾರೆ. ತನ್ನ ಅಂದಕ್ಕೆ ಮರುಳಾಗದ ಅಂಬಿಯನ್ನು ಮಣಿಸಲು, ಹಣಿಸಲು ಹಪಹಪಿಸಿ, ಕೊನೆಗೆ ದುರುಳರ ಚಕ್ರವ್ಯೂಹದಲ್ಲಿ ಸಿಲುಕಿ, ಸೊಕ್ಕಿನಿಂದಾಚೆಗೆ ಬರುವ ಹೆಣ್ಣಾಗಿ ಪ್ರಿಯಾಮಣಿ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡು ಪಾತ್ರಕ್ಕೆ ತಾನಲ್ಲದೇ ಬೇರೆಯವರ್ಯಾರು ಸೂಟ್ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸಂಪತ್ರಾಜ್, ರವಿಕಾಳೆ, ಶರತ್ ಲೋಹಿತಾಶ್ವ, ಅಜರ್ುನ್, ಮಂಜು ವಿಲನ್ಗಳಾಗಿ ಅಬ್ಬರಿಸಿದ್ದಾರೆ. ರಚಿತಾ ರಾಮ್ ನಾಯಕಿ ಎನಿಸಿಕೊಂಡರೂ ಪಾತ್ರಕ್ಕೆ ತೂಕವಿಲ್ಲ. ಬುಲ್ಲೆಟ್ ಪ್ರಕಾಶ್, ಸಾಧುಕೋಕಿಲ, ಬಿರಾದಾರ್ ಅವರ ಹಾಸ್ಯ ಗಮನ ಸೆಳೆಯುವುದಿಲ್ಲ. ಒಂದು ದೃಶ್ಯ ಹಾಗೂ ಒಂದು ಹಾಡಿನಲ್ಲಷ್ಟೇ ರೆಬಲ್ಸ್ಟಾರ್ ಅಂಬರೀಶ್ ದರ್ಶನ ಕೊಡುತ್ತಾರೆ. ಆದರೆ ಇಡೀ ಕಥೆ ಅವರ ಪಾತ್ರದ ಬ್ಯಾಗ್ರೌಂಡ್ನಲ್ಲಿ ನಡೆಯುತ್ತಿದೆಯಾದ್ದರಿಂದ ಅವರು ನೆನಪಲ್ಲುಳಿಯುತ್ತಾರೆ.

ಹರಿಕೃಷ್ಣ ಸಂಗೀತದಲ್ಲಿ ಹೀರೋ ಇಂಟ್ರಡಕ್ಷನ್ ಸಾಂಗ್ ಇಷ್ಟವಾದರೆ, ಅಸಕ, ಪಸಕ ಹಾಡು ಪಡ್ಡೆಗಳ ಚಳಿ ಬಿಡಿಸುತ್ತದೆ. ಉಳಿದ ಹಾಡುಗಳು ಅಷ್ಟಕ್ಕಷ್ಟೇ. ಸತ್ಯನಾರಾಯಣ್ ಅವರ ಕ್ಯಾಮರಾ ವರ್ಕ್ ಬಗ್ಗೆ ನೋ ಕಂಪ್ಲೇಂಟ್ಸ್. ರವಿವರ್ಮ ಸಂಯೋಜಿಸಿರುವ ಸಾಹಸ ದೃಶ್ಯಗಳು ದರ್ಶನ್ ಅಭಿಮಾನಿಗಳನ್ನೂ ಫುಲ್ ಇಂಪ್ರೆಸ್ ಮಾಡುತ್ತವೆ ಎನ್ನಲಡ್ಡಿಯಿಲ್ಲ. ಚಿತ್ರದ ಅಲ್ಲಲ್ಲಿ ಬರುವ ಪಂಚಿಂಗ್ ಡೈಲಾಗ್ಗಳು ಖುಷಿ ಕೊಡುತ್ತವೆ. ಮಹೇಶ ಸುಖಧರೆ ಬಹಳ ವರ್ಷಗಳ ನಂತರ ನಿರ್ದೇಶನಕ್ಕೀಳಿದು, ಒಳ್ಳೆ ಸಿನಿಮಾ ಕೊಡಬೇಕು ಎಂದು ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ. ಆದರೆ ಹೀರೋಯಿಸಂಗೆ ಕೊಟ್ಟ ಒತ್ತನ್ನು ಕಥೆಯ ನಿರೂಪಣೆಗೆ ಇನ್ನಷ್ಟೂ ಗಮನ ಹರಿಸಿದ್ದರೆ ಅಂಬರೀಶ ಮತ್ತಷ್ಟೂ ಆಪ್ತವಾಗುತ್ತಿದ್ದ. ಒಟ್ಟಿನಲ್ಲಿ ಅಂಬರೀಶ ಕೆಟ್ಟ ಸಿನಿಮಾವಂತು ಅಲ್ಲ ಎಂದು ಮಾತ್ರ ಹೇಳಬಹುದು.

ರೇಟಿಂಗ್ : ***

 

*ನೋಡಬೇಡಿ

**ನೋಡ್ತಿರಾ?

***ನೋಡಬಹುದು.

****ಚೆನ್ನಾಗಿದೆ.

*****ನೋಡಲೇಬೇಕು.

 

2 Comments

  1. umesh desai
    November 22, 2014
  2. R.shivarama sandur
    November 22, 2014

Add Comment

Leave a Reply