Quantcast

ಕನ್ನಡದ ಮೊಗ್ಗುಗಳನ್ನು ತಮಿಳಿನಲ್ಲಿ ಅರಳಿಸಿದ ಕೆ ಬಾಲಚಂದರ್

ಗೊರೂರು ಶಿವೇಶ್

ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಇನ್ನಿಲ್ಲ. 84 ವರ್ಷಗಳ ತುಂಬುಜೀವನ (1930-2014) ನಡೆಸಿದ ಕೆ. ಬಾಲಚಂದರ್ ತಾವು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಸುಮಾರು ಐವತ್ತು ವರ್ಷಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸುವುದರ ಜೊತೆಗೆ ಅನೇಕ ಟಿ.ವಿ. ಸೀರಿಯಲ್ಗಳನ್ನು ನಿರ್ಮಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ಮೈಲಿಗಲ್ಲಾದ ಅನೇಕ ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ ನಾಗೇಶ್, ರಜನೀಕಾಂತ್, ಕಮಲಹಾಸನ್, ಶ್ರೀಕಾಂತ್, ಜಯಂತಿ, ರಮೇಶ್, ಪ್ರಕಾಶ್ರಾಜ್, ವಿವೇಕ್, ಸರಿತ, ರಾಮಕೃಷ್ಣ ಮುಂತಾದ ನಟರನ್ನು ಗುರುತಿಸಿ ಪೆೋಷಿಸಿದ್ದಾರೆ.

ಕಲೆಗೆ ಜಾತಿ, ಭಾಷೆ, ಧರ್ಮದ ಹಂಗಿಲ್ಲ ಎಂಬುದನ್ನು, ಅದರ ವಿಶ್ವ ಸಾರ್ವಭೌಮತ್ವವನ್ನು ಸಾರ್ವತ್ರಿಕಗೊಳಿಸಿದವರು ಕೆ. ಬಾಲಚಂದರ್. ಕನ್ನಡದಲ್ಲಿ ಮೊಗ್ಗಾಗಿ ಪೋಷಣೆಯಿಲ್ಲದೆ ಸೊರಗುತ್ತಿದ್ದ ರಜನೀಕಾಂತ್, ರಮೇಶ್, ಪ್ರಕಾಶ್ರಾಜ್ರಂಥ ಅನೇಕ ನಟರಿಗೆ ತಮ್ಮ ಚಿತ್ರದಲ್ಲಿ ಅವಕಾಶ ನೀಡಿ ಅವರು ಅರಳಿ ಪರಿಮಳ ಚೆಲ್ಲಲು ಕಾರಣರಾದರು. ಮುಂದೆ ಇವರಲ್ಲಿ ಕೆಲವು ನಟರು ಸೂಪರ್ಸ್ಟಾರ್ಗಳಾದರು.

ಅಲ್ಪಕಾಲ ಶಿಕ್ಷಕರಾಗಿ ನಂತರ ಗುಮಾಸ್ತರಾಗಿದ್ದ ಸಂದರ್ಭದಲ್ಲಿ ತಮ್ಮದೆ ನಾಟಕತಂಡ ಕಟ್ಟಿ ತಾಯ್ ನಾಗೇಶ್, ಮೇಜರ್ ಸೌಂದರ್ರಾಜನ್ರಂಥ ನಟರೊಡನೆ ಸರ್ವರ್ ಸುಂದರಂ, ನೀರ್ಕುಮಿಳಿ, ನವಗ್ರಹಂ, ಮೇಜರ್ ಚಂದ್ರಕಾಂತ್ ಮುಂತಾದ ನಾಟಕಗಳನ್ನು ರಚಿಸಿ ನಿರ್ದೇಶಿಸಿದರು. ಮುಂದೆ ಎಂ.ಜಿ.ಆರ್ ರವರ ದೈವತಾಯ್ ಚಿತ್ರಕ್ಕೆ ಸಂಭಾಷಣೆ ಬರೆಯುವುದರೊಂದಿಗೆ ಚಿತ್ರರಂಗ ಪ್ರವೇಶಿಸಿದರು. ಬಾಲಚಂದರ್ ಅವರ ಸರ್ವರ್ ಸುಂದರಂ, ಪಂಜು-ಅರುಣಾಚಲಂರವರ ನಿರ್ದೇಶನದಲ್ಲಿ ಚಿತ್ರವಾಗಿ ತಾಯಾನಾಗೇಶ್ಗೆ ಅಪೂರ್ವ ಅವಕಾಶ ನೀಡಿ ಅನೇಕ ಪ್ರಶಸ್ತಿಗಳನ್ನು ಬಾಚಿತು. ಮೇಜರ್ ಚಂದ್ರಕಾಂತ್ ತಮಿಳಿನೊಂದಿಗೆ ಹಿಂದಿಯಲ್ಲಿ ಜನಪ್ರಿಯವಾಯಿತು.

ಅವರು 1968ರಲ್ಲಿ ಮೊದಲ ಬಾರಿಗೆ ನಿರ್ದೇಶಿಸಿದ ಅವರದೇ ಕಥೆಯ ನೀರ್ಕುಮಿಳಿ (ನೀರ ಮೇಲಣ ಗುಳ್ಳೆ) ಅನಾಥ ರೋಗಿಯೊಬ್ಬ ಒಡೆದ ಮನದ ಇಬ್ಬರು ಪ್ರೇಮಿಗಳನ್ನು ಒಂದು ಮಾಡುವ ಕಥೆ ಹೊಂದಿದ್ದರೆ, ಮುಂದೆ ಅವರು ನಿರ್ದೇಶಿಸಿದ ಎದಿರ್ ನಿಳಲ್ (ಅಲೆಯ ಎದುರು ಈಜು)ವಠಾರದಲ್ಲಿ ತಂದೆಯ ಎದುರಿಗಿದ್ದರೂ ಅನಾಥನಂತೆ ಬದುಕುವ ಹುಡುಗನ ಕಥೆ. ಎರಡೂ ಚಿತ್ರಗಳು ಬಾಲಚಂದರ್ ಜೊತೆಗೆ ತಾಯ್ ನಾಗೇಶ್ಗೆ ಉತ್ತಮ ಹೆಸರನ್ನು ತಂದುಕೊಟ್ಟ ಚಿತ್ರಗಳು. ಇದೇ ಚಿತ್ರದ ಛಾಯೆ ಹೊಂದಿದ ಗಾಂಧಿನಗರ ಚಿತ್ರ ಕೆ.ಎಸ್.ಎಲ್ ಸ್ವಾಮಿ (ರವಿ) ನಿರ್ದೇಶನದಲ್ಲಿ ರಾಜ್ಕುಮಾರ್, ಕಲ್ಪನಾ ಅಭಿನಯದಲ್ಲಿ ಕನ್ನಡದಲ್ಲಿ ಮೂಡಿಬಂದಿತು. ಇನ್ನೂ ಎಪ್ಪತ್ತರ ದಶಕದಲ್ಲಿ ಅವರ್ಗಳ್, ಅವಳ್ವ ವರು ತೊಡರ್ಕಥೈ, ಅಪೂರ್ವರಾಗಂಗಳ್, ವರುಮಯಿನ್ ನಿರಂ ಸಿಗಪ್ಪು ಚಿತ್ರಗಳು ತಮ್ಮ ವಿಶಿಷ್ಟ ಕಥೆಗಳಿಂದಾಗಿ ಗಮನ ಸೆಳೆದಿದ್ದಲ್ಲದೆ ರಜನಿ, ಕಮಲ್, ಸುಜಾತ, ಜಯಸುಧಾ, ಸರಿತಾರಂಥ ನಟ ನಟಿಯರಿಗೆ ಅಪೂರ್ವ ಅವಕಾಶ ನೀಡಿದ ಚಿತ್ರಗಳಾಗಿವೆ. ರಜನಿ, ಕಮಲ್, ಸರಿತಾ ಅವರ ಅನೇಕ ಚಿತ್ರಗಳಲ್ಲಿ, ಅದರಲ್ಲೂ ಕಮಲ್ ಬಾಲಚಂದರ್ ನಿರ್ದೇಶನದ ಮೂವತ್ತೈದು ಚಿತ್ರಗಳಲ್ಲಿ ನಟಿಸಿದ್ದಾರೆ.

ತಮಿಳಿನ ಜೊತೆಗೆ ಕನ್ನಡದಲ್ಲಿ ಏಕಕಾಲಕ್ಕೆ ನಿದರ್ೇಶಿಸಿದ ಚಿತ್ರ ‘ತಪ್ಪಿದ ತಾಳ’ ಕನ್ನಡದಲ್ಲಿ. ಈ ಚಿತ್ರ ಅಷ್ಟಾಗಿ ಯಶ ಸಾಧಿಸಲಿಲ್ಲ. ರೌಡಿ ಹಾಗೂ ವೇಶ್ಯೆ ಪರಸ್ಪರ ಪ್ರೇಮಿಸಿ ತಮ್ಮ ವೃತ್ತಿಯನ್ನು ತ್ಯಜಿಸಿ ಸಮಾಜದಲ್ಲಿ ಹೊಸಬಾಳನ್ನು ನಡೆಸುವ ಕನಸ್ಸು ಕಂಡರೂ ಸಂಕುಚಿತ ಭಾವದ ಸಮಾಜದಲ್ಲಿ ಮತ್ತೆ ಮೂಲವೃತ್ತಿಗೆ ಮರಳುವ ಆ ಚಿತ್ರ ನನ್ನನ್ನು ಬಹಳ ದಿನ ಕಾಡಿದೆ. ಆ ಚಿತ್ರದಲ್ಲಿ ರಜನಿ, ಕಮಲ್, ಸರಿತಾರಿದ್ದರೂ ಕನ್ನಡಿಗರಿಗೆ ಅದು ರುಚಿಸಲಿಲ್ಲ. ಕಮಲ್ ಆ ಚಿತ್ರದಲ್ಲಿ ವಿಟನ ಪಾತ್ರ ನಿದರ್ೇಶಿಸಿದ್ದಾರೆ. ಇನ್ನೂ ಅದೇ ಕಾಲಕ್ಕೆ ಬಂದ ‘ಬೆಂಕಿಯಲ್ಲಿ ಅರಳಿದ ಹೂ’ ಹೆಸರೇ ಹೇಳುವಂತೆ ಹಾಗೂ ಚಿತ್ರದಲ್ಲಿ ಬರುವ ಗೀತೆಯ ಸಾಲಿನ ‘ಮಿಂಚುವ ಗುಡುಗುವ ಮೋಡಗಳೆ, ಮಳೆಯನು ಸುರಿವುದು ನೋಡಮ್ಮ’ ಎಂಬುದನ್ನು ಅರ್ಥಪೂರ್ಣವಾಗಿ ಬಿಂಬಿಸಿದ ಚಿತ್ರ. ಓಡಿಹೋದ ಅಪ್ಪ, ಅಸಹಾಯಕ ತಾಯಿ, ಬೇಜವಾಬ್ದಾರಿ ಅಣ್ಣ, ಅವನ ಹೆಂಡತಿ ಮಕ್ಕಳು, ವಿಧವೆ ತಂಗಿ, ಕುರುಡ ತಮ್ಮ ಇವರೆಲ್ಲರನ್ನು ನಿಭಾಯಿಸುವ ಹೆಣ್ಣು. ಅವಳ ತ್ಯಾಗ ಕಾಣದೆ ಕೇವಲ ಅವಳ ಒರಟು ಮಾತು, ಶಿಸ್ತು ಇತರರಿಗೆ ಎದ್ದು ಕಾಣುವುದನ್ನು, ತ್ಯಾಗದ ಹಿಂದಿನ ನೋವನ್ನು ಅರ್ಥ ಮಾಡಿಕೊಳ್ಳದ ಕುಟುಂಬದ ವ್ಯವಸ್ಥೆಯನ್ನು ಹೇಳುವ ಚಿತ್ರ. ತಮಿಳಿನಲ್ಲಿ ಸುಜಾತ ಮಾಡಿದ ಪಾತ್ರವನ್ನು ಕನ್ನಡದಲ್ಲಿ ಸುಹಾಸಿನಿ ಆ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಶೀಷರ್ಿಕೆ ಗೀತೆಯಲ್ಲಿ ಬರುವ ಹೆಣ್ಣನ್ನು ಕಣ್ಣಿಗೆ ಹೋಲಿಸಿ ಬರೆದ ಸಾಲುಗಳು ಸರಳವಾಗಿದ್ದರೂ ಎದೆಯನ್ನು ಮಿಡಿಯುತ್ತದೆ.

ಕಾಲಿಗೆ ಮುಳ್ಳು ಚುಚ್ಚಿದರೆ ಕಂಬನಿಗೆರೆವುದು ಕಣ್ಣುಗಳು

ವೇದನೆ ಮನಸನು ಹಿಂಡಿದರೆ ಸಂಕಟಪಡುವುದು ನಯನಗಳು

ದಾರಿಯತೋರುವ ದೀಪಗಳೇ ಅರಳಿದ ಸುಂದರ ಕಣ್ಣುಗಳು

ಆ ಕಣ್ಣೆ ಬಲ್ಲದು ತನ್ನಲ್ಲಿ ಮರೆಯಾಗಡಗಿಹ ನೋವುಗಳು.

ಬಾಲಚಂದರ್ ಹಿರಿಮೆ ಇರುವುದು ಪ್ರತಿ ಪಾತ್ರಗಳ ಪೋಷಣೆಯಲಿ.್ಲ ಚಿತ್ರದಲ್ಲಿನ ಎಲ್ಲಾ ಪಾತ್ರಗಳು ತಮ್ಮ ಪಾತ್ರ ಪೋಷಣೆಯಿಂದ ಗಮನ ಸೆಳೆಯುತ್ತ್ತವೆ. ಹೀಗಾಗಿ ‘ಪಟಾಪಟ್’ ಎನ್ನುತ್ತಾ ಅವಸರದ ಆಧುನಿಕ ಬದುಕಿಗೆ ಕೈ ಚಾಚುವ ನಾಯಕಿಯ ಸ್ನೇಹಿತೆಯ ದುರಂತ ಬದುಕು ಅವಕಾಶವಂಚಿತ ಪ್ರತಿಭಾವಂತ ಕಲಾವಿದ ರಾಮಕೃಷ್ಣನ ಪಾತ್ರಗಳು ಚಿತ್ರದಲ್ಲಿ ಪ್ರೇಕ್ಷಕರನ್ನು ಕಾಡುತ್ತವೆ.

ತೆಲುಗಿನಲ್ಲಿ ‘ಮರೋಚರಿತ್ರ’ ಮುಂದೆ ಹಿಂದಿಯಲ್ಲಿ ಅಪಾರ ಯಶಸ್ಸು ಸಾಧಿಸಿದ ‘ಏಕ ದುಜೆಟೆ ಕೆ ಲಿಯೆ’, ‘ರೋಮಿಯೋ ಜೂಲಿಯಟ್’ನಂತೆ ಸಿನಿಮಾದಲ್ಲಿ ಅರಳಿದ ಪ್ರೇಮಕಾವ್ಯ. ಭಾಷೆ, ಆಚಾರ, ವಿಚಾರಗಳಲ್ಲಿ ಬೇರೆ ಬೇರೆಯಾದ ಅಕ್ಕಪಕ್ಕದ ಕುಟುಂಬಗಳು, ಅವರ ಮಕ್ಕಳಲ್ಲಿ ಅರಳುವ ಪ್ರೇಮ ಪೋಷಕರ ವಿರೋಧದಿಂದಾಗಿ ಒಂದುವರ್ಷಗಳ ಕಾಲ ಬೇರ್ಪಡುವ ಒಳಗಾಗಿ ದೂರ ಸರಿಯುವ ಪ್ರೇಮಿಗಳು ಕೊನೆಯಲ್ಲಿನ ಅವರ ದುರಂತ ಅಂತ್ಯ ಆ ಕಾಲದಲ್ಲಿ ಭಾರತೀಯ ಚಲನಚಿತ್ರರಂಗಕ್ಕೆ ಹೊಸಭಾಷ್ಯ ಬರೆದ ಚಿತ್ರವೂ ಹೌದು. ಈ ಚಿತ್ರದಿಂದಾಗಿ ಬಾಲು – ಸ್ವಪ್ನ ಪಾತ್ರಗಳು ಅಮರ ಪ್ರೇಮಿಗಳ ಸಾಲಿಗೆ ಸೇರಿದವು.

ಗಂಭೀರವಾದ ವಿಷಯಗಳನ್ನು ಒಳಗೊಂಡರೂ ಆ ಚಿತ್ರದಲ್ಲಿ ಸಮಾಂತರವಾಗಿ ಹರಿದು ಬರುತ್ತಿದ್ದ ಹಾಸ್ಯಲಹರಿ, ಉತ್ತಮ ಸಂಗೀತದ ಝರಿ ಇಂದಿಗೂ ಅವರ ಅನೇಕ ಚಿತ್ರಗಳನ್ನು ಕ್ಲಾಸಿಕ್ ಚಿತ್ರಗಳನ್ನಾಗಿಸಿದೆ. ಭಾರತೀಯ ಚಿತ್ರರಂಗಕ್ಕೆ ಅವರು ಸಲ್ಲಿಸಿದ ಸೇವೆಗೆ ಪದ್ಮಶ್ರೀ ಮತ್ತು ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಗಳು ಸಂದಿವೆ. ಅದಕ್ಕಿಂತಲೂ ಹೆಚ್ಚಾಗಿ ಅವರು ನಿಮರ್ಿಸಿದ ಪಾತ್ರಗಳು ರೂಪಿಸಿದ ಕಲಾವಿದರು, ಚಿತ್ರಿಸಿದ ದೃಶ್ಯಗಳು, ಪ್ರೇಕ್ಷಕರ ಎದುರಲ್ಲಿ ಉಳಿದುಕೊಳ್ಳುವುದರ ಮೂಲಕ ಪರೋಕ್ಷವಾಗಿ ಬಾಲಚಂದರ್ ಅವರನ್ನು ಚಿರಸ್ಥಾಯಿಯಾಗಿ ಉಳಿಸಿವೆ.

 

One Response

  1. Aravind
    January 28, 2015

Add Comment

Leave a Reply