Quantcast

’ಮೈತ್ರಿ’ – ಪುನೀತಭಾವ, ಪಕ್ಕಾ ಸ್ಲಂನ ಹೈ ಕ್ಲಾಸ್ ಸಿನಿಮಾ

ಚಿತ್ರಪ್ರಿಯ ಸಂಭ್ರಮ್

 

ಜೈಲರ್ : ರಿಮ್ಯಾಂಡ್ ಹೋಮ್ ಸೇರಿರೋ ಮಕ್ಕಳು ಮುಂದೆ ಬಿಡುಗಡೆಯಾದರೂ ಮತ್ತೆ ಯಾವುದಾದರೂ ಕ್ರೈಂ ಮಾಡಿ ಜೈಲಿಗೆ ಬರ್ತಾರೆ ಹೊರತು ಸಮಾಜಮುಖಿಯಾಗಲ್ಲ, ಯಾಕಂದ್ರೆ ಕ್ರೈಂ ಅನ್ನೋದು ಅವರ ರಕ್ತದಲ್ಲೇ ಇದೆ. ಶಿಕ್ಷೆ ಬಿಟ್ಟರೆ ಬೇರೆ ಏನೂ ಮಾಡೋಕಾಗಲ್ಲ.

ಪುನೀತ್ : “ಮಕ್ಕಳ ಕೈಯಲ್ಲಿ ಗನ್ ಕೊಡೋ ಬದ್ಲು, ಪೆನ್ ಕೊಟ್ ನೋಡಿ, ಇತಿಹಾಸಾನೇ ಬರಿತಾರೆ”

ಮೈತ್ರಿ ಸಿನಿಮಾದ ಹೂರಣ ಇರೋದೇ ಈ ಭಾಗದಲ್ಲಿ. ಚಿತ್ರದ ಆರಂಭ ಸ್ಲಂಡಾಗ್ ಸಿನಿಮಾ ನೆನಪಿಸಿದರೂ ಮೈತ್ರಿಯ ಮಾರ್ಗವೇ ಬೇರೆ. ಸ್ಲಂನ 5 ನೇ ಕ್ಲಾಸ್ ಹುಡುಗ ಸಿದ್ರಾಮ ಮಹಾನ್ ಕೀಟಲೆ, ಅಷ್ಟೇ ಬುದ್ಧಿವಂತ ಕೂಡಾ. ಅಪ್ಪು ಅಂದ್ರೆ ಪಂಚಪ್ರಾಣ. ಒಮ್ಮೆ ತಮ್ಮೂರಿಗೆ ಸಿನಿಮಾ ಶೂಟಿಂಗ್ಗೆ ಬಂದು ಅಪ್ಪು ನೋಡಲು ಶಾಲೆಗೆ ಚಕ್ಕರ್ ಹಾಕಿ ಗೆಳೆಯರೊಂದಿಗೆ ಹೋಗುವ ಸಿದ್ರಾಮನನ್ನ ಸ್ವತಃ ಅಪ್ಪುವೇ ಅವನನ್ನ ಎತ್ತಿ ಮುದ್ದಾಡುವ ಭಾಗ್ಯ.

ದುರಾದೃಷ್ಟಕ್ಕೆ ಅವನ ತಾಯಿ ಕೆಲಸ ಮಾಡೋ ಅಗರಬತ್ತಿ ಫ್ಯಾಕ್ಟರಿಗೆ ಬೆಂಕಿ ಬಿದ್ದು ಅದೇ ದಿನ ತಾಯಿ ತೀರಿಹೋಗ್ತಾಳೆ. ಅನಾಥನಾದ ಸಿದ್ರಾಮ, ಮಕ್ಕಳನ್ನು ವೇಶ್ಯಾವಾಟಿಕೆ ಕೂಪಕ್ಕೆ ತಳ್ಳುವ, ಹುಡುಗರನ್ನು ಮಾದಕ ವ್ಯಸನಿಗಳನ್ನಾಗಿ ಮಾಡುವ ಎಲೆಕ್ಷನ್ಗೆ ನಿಲ್ಲಲು ಏನು ಬೇಕಾದರೂ ಮಾಡುವ ರೌಡಿ ಗೂಳಿಯ ಜಾಲಕ್ಕೆ ಬೀಳುತ್ತಾನೆ. ಶ್ರೀಮಂತರ ಮಕ್ಕಳನ್ನು ಅಪಹರಿಸಿ ಪಾಲಕರಿಂದ ಹಣವಸೂಲಿ ಮಾಡುವ ಕೃತ್ಯಕ್ಕೆ ಸಿದ್ರಾಮನನ್ನು ಬಳಸಿಕೊಳ್ಳುವಾಗ ಆಕಸ್ಮಿಕವಾಗಿ ಶ್ರೀಮಂತ ಮನೆತನದ ಹುಡುಗ ಸಾವನ್ನಪ್ಪುತ್ತಾನೆ. ಅ ಸಾವಿನ ಹೊಣೆ ಸಿದ್ರಾಮನ ಹೆಗಲೇರಿ ರಿಮ್ಯಾಂಡ್ ಹೋಮ್ ಬಾಲಕನ ಮನೆಯಾಗುತ್ತದೆ.

ಅಲ್ಲಿಯೂ ಸಿದ್ರಾಮನಿಗೆ ಹಿಂಸೆ ತಪ್ಪಿದ್ದಲ್ಲ. ಈತನ ಓದಿನ ಹಪಾಹಪಿ, ಬುದ್ದಿವಂತಿಕೆಯನ್ನು ಗೌರವಿಸುವ ಮತ್ತೊಬ್ಬ ಬಾಲಾಪರಾಧಿ ಜಾನ್ಸನ್, ರಿಮ್ಯಾಂಡ್ ಹೋಮ್ನಿಂದಲೇ ಸಿದ್ರಾಮನನ್ನ ಕರುನಾಡ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಕಳುಹಿಸಲು ಮಾಡುವ ಕಸರತ್ತು ನೋಡಲೇಬೇಕು.

ಪುನೀತ್ ತಮ್ಮ ಹುಟ್ಟುಹಬ್ಬವನ್ನು ರಿಮ್ಯಾಂಡ್ ಹೋಮ್ನ ಮಕ್ಕಳಿಗೆ ಸಿಹಿ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲು ನಿರ್ಧರಿಸಿ ಅಲ್ಲಿಗೆ ಭೇಟಿ ಕೊಟ್ಟಾಗ ರಿಮ್ಯಾಂಡ್ ಹೋಮ್ನಲ್ಲಿರುವ ಮಕ್ಕಳ ಬದುಕು-ಬವಣೆ ಕಣ್ಣಿಗೆ ರಾಚುತ್ತದೆ. ತಾವು ನಿರೂಪಿಸುವ ಕಾರ್ಯಕ್ರಮ ಇಂಥ ಮಕ್ಕಳಿಗೆ ಆನುಕೂಲವಾಗಬೇಕು ಎನ್ನುವ ಕಾಳಜಿಯನ್ನು ವಾಹಿನಿಯವರೊಂದಿಗೆ ಚರ್ಚಿಸಿ ಒಪ್ಪಿಸುತ್ತಾರೆ.

ನಿರೀಕ್ಷಿಸಿದಷ್ಟು ಸುಲಭವಾಗಿ ಸಿದ್ರಾಮ ಹಾಟ್ಸೀಟ್ಗೆ ಬರುವುದಿಲ್ಲ. ಕೊನೆಗೂ ಪುನೀತ್ ಎದುರು ಹಾಟ್ಸೀಟ್ನಲ್ಲಿ ಕುಳಿತಾಗ ಅ ಸಿದ್ರಾಮ ನಮ್ಮ ಮನೆ ಮಗ ಎನ್ನುವ ಫೀಲ್ ಎಂಥವರಿಗೂ ಕಾಡುತ್ತದೆ. ಇದಕ್ಕಾಗಿ ನಿರ್ದೇಶಕ ಗಿರಿರಾಜ್ಗೆ ಹ್ಯಾಟ್ಸಾಪ್. ಇನ್ನೇನು ಸಿದ್ರಾಮ ಕೋಟಿ ಗೆಲ್ಲಬೇಕು ಎನ್ನುವಷ್ಟರಲ್ಲಿ ಕಥೆಗೆ ಪ್ರಮುಖ ತಿರುವು. ವಿಜ್ಞಾನಿ ಮಹಾದೇವ ಎಂಟ್ರಿ. ಆ ಹುಡುಗನೇ ನನ್ನ ಮಗನನ್ನು ಸಾಯಿಸಿದ್ದು, ನನ್ನ ಮಗನ ಸಾವಿಗೆ ಗೌರವಿಸುವುದಾದರೆ ಆವನನ್ನು ಗೆಲ್ಲಲು ಬಿಡಬೇಡಿ ಎಂದು ಪುನೀತ್ಗೆ ದುಂಬಾಲು. ಪುನೀತ್ ಕೈಚೆಲ್ಲಿದಾಗ ಸೇಡು ತೀರಿಸಿಕೊಳ್ಳುವ ಮನೋಭಾವದಿಂದ ಹೋಗುವ ಮಹಾದೇವನೇ ಸಿದ್ರಾಮ ಕೋಟಿ ಗೆಲ್ಲಲು ಕಾರಣವಾಗ್ತಾರೆ. ಅದು ಹೇಗೆ? ಸತ್ಯಾಂಶ ಏನು? ಎಂಬುದನ್ನು ತಿಳಿದುಕೊಳ್ಳಲು ಮೈತ್ರಿಯನ್ನು ಮನದುಂಬಿಕೊಳ್ಳಬೇಕು.

ಮಾಸ್ಟರ್ ಆದಿತ್ಯ ನೈಜವಾಗಿ ಅಭಿನಯಿಸಿದ್ದಾನೆ. ಮಾಸ್ಟರ್ ಕುಶಾಲ್ದು ಚಿಕ್ಕಪಾತ್ರವಾದರೂ ತೂಕದ ಪಾತ್ರ. ಇಡೀ ಸಿನಿಮಾಕ್ಕೆ ತಿರುವು ನೀಡುವ ಪಾತ್ರದಲ್ಲಿ ಮೋಹನ್ಲಾಲ್ ಅಭಿನಯಿಸಿದ್ದಾರೆ. ಅವರ ಪಾತ್ರಕ್ಕೆ ಅವರೇ ಡಬ್ ಮಾಡಿರುವುದು ಸಂತೋಷದ ವಿಚಾರವೇ. ಇಡೀ ಸಿನಿಮಾದ ಜೀವಾಳ ಪುನೀತ್. ಭಾವನಾ ಬಂದು ಹೋಗುತ್ತಾರೆ. ಸುಕೃತಾ ವಾಗ್ಲೆ ಒಂದು ಸನ್ನಿವೇಶದಲ್ಲಿ ಮಿಂಚಿ ಮರೆಯಾಗುತ್ತಾರೆ. ಅರ್ಚನಾ ಸಹ ಬಹಳ ಹೊತ್ತು ಕಾಣೋದಿಲ್ಲ. ರವಿ ಕಾಳೆ ಖಳನಾಗಿ ಇಷ್ಟವಾಗ್ತಾರೆ. ಸಾಧುಕೋಕಿಲ ಸಹ ಹೀಗೆ ಬಂದು ಹಾಗೇ ಹೋಗುತ್ತಾರೆ. ಪುನೀತ್ರಷ್ಟೇ ಸ್ಕ್ರೀನ್ ಶೇರ್ ಮಾಡಿಕೊಂಡಿರೋದು ಜೈಲರ್ ಪಾತ್ರದ ಅತುಲ್ ಕುಲಕಣರ್ಿ. ಖಂಡಿತ ಆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಿಮ್ಯಾಂಡ್ ಹೋಮ್ಗೆ ಬಂದ್ರೂ ಕದಿಯುವುದನ್ನು ಬಿಡದ ಜಾನ್ಸನ್ ಪಾತ್ರದ ಜಗದೀಶ ಹೃದಯ ಕದಿಯುತ್ತಾರೆ.

ಜಟ್ಟ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಿದರ್ೇಶಕ ಗಿರಿರಾಜ್ ಮತ್ತೊಮ್ಮೆ ಜಬರ್ದಸ್ತ್ ಸ್ಕೋರ್ ಮಾಡಿದ್ದಾರೆ. ಎಲ್ಲೂ ಬೋರಾಗದಂತೆ ಸಿನಿಮಾ ಮಾಡಿದ್ದಾರೆ. ಕೋಟ್ಯಧಿಪತಿ ಸನ್ನಿವೇಶಗಳು ಕೆಲವು ಕಡೆ ಬೋರ್ ಎನಿಸಿದರೂ ಅದಿಲ್ಲದೇ ಸಿನಿಮಾ ಓಡುವುದೇ ಇಲ್ಲ. ಹಾಗಾಗಿ ಅದನ್ನು ತಪ್ಪು ಎಂದು ನಿರ್ಣಯಿಸುವುದು ಕಷ್ಟಸಾಧ್ಯ. ಹಿನ್ನೆಲೆ ಸಂಗೀತದಲ್ಲಿ ಗಮನ ಸೆಳೆಯುವ ಸಂಗೀತ ನಿದರ್ೇಶಕ ಇಳಯರಾಜಾ ಹಾಡಿನಲ್ಲಿ ಕೊಂಚ ಮಂಕಾಗಿದ್ದಾರೆ. ಚಂದ್ರ ನೀನು ಚಂದ ಹಾಡು ಚೆನ್ನಾಗಿದೆ. ಚಿತ್ರಕ್ಕೆ ಮತ್ತಷ್ಟೂ ಕಳೆ ಕೊಟ್ಟಿರುವುದು ಕೃಷ್ಣಕುಮಾರ್ ಛಾಯಾಗ್ರಹಣ. ಪುನೀತ್ ಇಂಟ್ರಡಕ್ಷನ್ನ ಗೆಜ್ಜೆ ಫೈಟ್ ಬೇಸರವನ್ನೇನೂ ತರಿಸೋದಿಲ್ಲ. ನಿಮರ್ಮಾಪಕ ರಾಜ್ಕುಮಾರ್ ಅವರು ಪ್ರಶಸ್ತಿ ಸ್ವೀಕರಿಸಲು ಸಿದ್ಧತೆಯನ್ನು ಆರಂಭಿಸಬಹುದು.

ಕೊನೆಯಲ್ಲಿ ಪುನೀತ್ ಮೋಹನ್ಲಾಲ್ ಅವರಿಗೆ, ” ನಿಮ್ಮ ಮಗ ಬದುಕಿದ್ದರೆ ನಿಮ್ಮನ್ನ ನೋಡಿ ಹೆಮ್ಮೆ ಪಡ್ತಿದ್ದ”

ಅಗ ಮೋಹನ್ಲಾಲ್ ಪುನೀತ್ಗೆ, ” ಈಗ ನಿಮ್ಮ ತಂದೆ ಇದ್ದಿದ್ದರೆ ನಿಮ್ಮನ್ನ ನೋಡಿ ತುಂಬಾ ಖುಷಿ ಪಡ್ತಿದ್ದರು”

ಮಕ್ಕಳು ದೇವರು, ದೇವರೂ ಒಂದು ಮಗು. -ಡಾ.ರಾಜ್ ಎಂದು ತೆರೆ ಮೇಲೆ ಕೊನೆ ಸೀನ್ ನೋಡಿದಾಗ ಕೆನ್ನೆಯ ಮೇಲೆ ಕಂಬನಿಯ ಒಂದೆರಡು ಹನಿ ಜಾರುತ್ತದೆ.

ಸಿನಿಮಾ ಪಂಚ್ :

ಪುನೀತ್ ಇಲ್ಲಿ ತಮ್ಮ ಪಾತ್ರವನ್ನ ತಾವೇ ನಿರ್ವಹಿಸಿದ್ದಾರೆ. ಬಹುಶಃ ಆ ಪಾತ್ರದಲ್ಲಿ ಬೇರೆ ಯಾವ ನಟನನ್ನೂ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಸ್ಟಾರ್ಗಿರಿ ದಕ್ಕಿದ ಮೇಲೆ ಎಷ್ಟೋ ನಟರಿಗೆ ಭೂಮಿ ಮೇಲೆ ಕಾಲೇ ನಿಲ್ಲಲ್ಲ. ದರ್ಶನ್, ಸುದೀಪ್ ಹಾಗೂ ಯಶ್ ಅವರು ಸ್ಟಾರ್ ಪಟ್ಟವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಈ ಸಿನಿಮಾದಲ್ಲಿರುವ ಪುನೀತ್ ಅವರನ್ನ ನೋಡಿ ಕಲಿಯಲೇಬೇಕು.

ರೇಟಿಂಗ್ : ****1/2

*ನೋಡಬೇಡಿ

**ನೋಡ್ತಿರಾ?

***ನೋಡಬಹುದು.

****ಚೆನ್ನಾಗಿದೆ.

*****ನೋಡಲೇಬೇಕು.

 

Add Comment

Leave a Reply