Quantcast

‘ಸುರಯ್ಯಾ ಕೇಳಿದ ಪ್ರಶ್ನೆ’ – ಶಿವಶಂಕರ್

ಶಿವಶಂಕರ್ ಜಿ

ಈ ಚಿತ್ರದ ಬಗ್ಗೆ ಹೇಳದೆ ಇರಲಾಗುತ್ತಿಲ್ಲ.

THE STONING OF SORAYA M

ಈ ಚಿತ್ರವನ್ನು ನೋಡಿದ ಯಾರಾದರೂ ಆ ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡಿರಲು ಸಾಧ್ಯವೇ ?!

ಚಿತ್ರೋತ್ಸವ ಮುಗಿದು ಏಳು ತಿಂಗಳುಗಳೇ ಕಳೆಯುತ್ತಿದ್ದರೂ,

ನೋಡಿದ ವಿವಿಧ ದೇಶಗಳ – ಭಾಷೆಗಳ ೧೫ ಸಿನೆಮಾಗಳಲ್ಲಿ ಇದರಷ್ಟು ತೀವ್ರವಾಗಿ ಮತ್ತಾವುದೂ ನನ್ನ ಕಾಡುತ್ತಿಲ್ಲ.

ಕ್ರೌರ್ಯದ ಇತಿಹಾಸದಲ್ಲಿ ಇಷ್ಟೊಂದು ಘೋರವಾದ ಅಧ್ಯಾಯಗಳಿವೆಯೇ ?

ಇದು ಕಪೋಲ ಕಲ್ಪಿತವಲ್ಲ, ಹಾಗಿದ್ದಿದ್ದರೆ ಚಿತ್ರ ನಿರ್ದೇಶಕನೊಬ್ಬನ ವಿಕೃತಿ ಎಂದು ಮರೆತುಬಿಡಬಹುದಿತ್ತು:

ಇರಾನ್ ದೇಶದ ಹಳ್ಳಿಯೊಂದರಲ್ಲಿ ನಡೆದಿರುವ ನೈಜ ಘಟನೆಯ ಪ್ರತಿಕೃತಿ ಇದು – ಮರೆಯಲು ಹೇಗೆ ಸಾಧ್ಯ?

ಫೈದೂನ್ ಸಾಹೇಬ್ಜಮ್ ಎಂಬ ಫ್ರೆಂಚ್ ಪತ್ರಕರ್ತ ೧೯೯೦ ರಲ್ಲಿ La Femme Lapidde ( The Women Stoned) ಎಂಬ ಪುಸ್ತಕವನ್ನು ಪ್ರಕಟಿಸದೇ ಹೋಗಿದ್ದಿದ್ದರೆ

ಈ ಘೋರ ಕೃತ್ಯ ಜಗತ್ತಿನ ಗಮನಕ್ಕೆ ಬಾರದೇ ಹೋಗುತ್ತಿತ್ತೇನೋ .

ಅಲ್ಲಿ ಹರಿಯುತ್ತಿರುವ ಹೊಳೆ.  ದಂಡೆಯ ಮೇಲೆ ನಾಯಿ ಕಚ್ಚುತ್ತಿರುವ ಮೂಳೆ.  ಅದನ್ನು ಓಡಿಸಲು ಬರುವ ಮಹಿಳೆ!

ವೈದ್ಯನೂಬ್ಬ ಮರಣದಂಡನೆಗೆ ಗುರಿಯಾಗಿದ್ದಾನೆ; ಅವನ ೧೪ ವರುಷದ ಮಗಳನ್ನು ತನಗೆ ಕೊಟ್ಟು ಮದುವೆ ಮಾಡಿಕೊಡುವುದಾದರೆ ಶಿಕ್ಷೆಯಿಂದ ಪಾರುಮಾಡಲು “ಆಲಿ” ಎಂಬುವನು ಸಿದ್ಧನಿದ್ದಾನೆ. ಅದಕ್ಕೆ ವೈದ್ಯನೂ ಒಪ್ಪಿಕೊಂಡಿದ್ದಾನೆ. ಆದರೆ ಆಲಿಗೆ ತೊಡಕೆಂದರೆ ತನ್ನ ಹೆಂಡತಿ “ಸುರಯ್ಯಾ” ಮತ್ತು ನಾಲ್ವರು ಮಕ್ಕಳು

ಸುರಯ್ಯಾಳನ್ನು ಬಿಡದೇ ವೈದ್ಯನ ಮಗಳನ್ನು ಮದುವೆಯಾಗಲು ಬರುವುದಿಲ್ಲ; ಎರಡೂ ಸಂಸಾರಗಳ ಹೊಣೆ ಹೊರಲು ಆಲಿ ಸಿದ್ಧನಿಲ್ಲ.

ಆ ಊರಿಗೊಬ್ಬ ಮುಲ್ಲಾ ಇದ್ದಾನೆ. ಅವನನ್ನು ಆಲಿ ಎಡತಾಕುತ್ತಾನೆ, ತನ್ನ ತೊಡಕನ್ನು ನಿವಾರಿಸಲು ಕೇಳಿಕೊಳ್ಳುತ್ತಾನೆ. ಆಲಿಯ ಪ್ರಸ್ತಾವನೆಯಲ್ಲಿ ನ್ಯಾಯವಿಲ್ಲ ಎಂಬ ನಿಲುವನ್ನು ಮುಲ್ಲಾ ವ್ಯಕ್ತಪಡಿಸುತ್ತಾನೆ. ಆದರೆ ಹಿಂದೊಮ್ಮೆ ಮುಲ್ಲಾ ಅನಿರ್ದಿಷ್ಟ ಕಾರಣಕ್ಕಾಗಿ ಖೈದಿಯಾಗಿ ಜೈಲುಪಾಲಗಿದ್ದುದ್ದನ್ನು ಆಲಿ ನೆನಪಿಸುತ್ತಾನೆ, ಆ ವಿಷಯ ಊರಿನ ಜನಕ್ಕೆ ಗೊತ್ತಾದರೆ ಇನ್ನು ಮುಂದೆ ಆತ ‘ಮುಲ್ಲಾ’ ಆಗಿರಲು ಸಾಧ್ಯವಿಲ್ಲಾ ಎಂಬುದನ್ನು ಮನವರಿಕೆ ಮಾಡಿಕೊಡುತ್ತಾನೆ. ಮುಲ್ಲಾನಿಗೀಗ ಧರ್ಮಸಂಕಟ .

ಸುರಯ್ಯಾಳನ್ನು ಮುಲ್ಲಾ ಅವಳ ಮನೆಯಲ್ಲಿ ಭೇಟಿಯಾಗುತ್ತಾನೆ. ಆಲಿಯ ಪ್ರಸ್ತಾವನೆಯನ್ನು ತಿಳಿಸಿ ಇನ್ನು ಮುಂದೆ ‘ತಾತ್ಕಾಲಿಕ ಪತ್ನಿ’ಯಾಗುಳಿಯಲು ಸೂಚಿಸುತ್ತಾನೆ. (ಇರಾನಿನಲ್ಲಿ ‘ತಾತ್ಕಾಲಿಕ ಪತ್ನಿ’ ಧರ್ಮ ಸಮ್ಮತ). ಅದಕ್ಕೆ ಪ್ರತಿಯಾಗಿ ಆಲಿ, ಇಬ್ಬರು ಹೆಣ್ಣುಮಕ್ಕಳನ್ನು (ಉಳಿದಿಬ್ಬರು ಗಂಡು ಮಕ್ಕಳು ಆಲಿಯ ಸುಪರ್ದಿಗೆ), ಪೀಠೋಪಕರಣಗಳನ್ನು, ಸ್ವಲ್ಪ ಜಾಗವನ್ನು ಸುರಯ್ಯಾಳಿಗೆ ಕೊಡುವುದಾಗಿ ಹೇಳುತ್ತಾನೆ. ಆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಧಾವಿಸುವ ಅವಳ ಅತ್ತೆ “ಝಾರಾ”ಮುಲ್ಲಾನ ಪ್ರಸ್ತಾವನೆಯನ್ನು ಸ್ಪಷ್ಟವಾಗಿ ನಿರಾಕರಿಸಲು ಸುರಯ್ಯಾಳಿಗೆ ಆಜ್ಞಾಪಿಸುತ್ತಾಳೆ .

ಝಾರಾಳ ದಿಢೀರ್ ಆಗಮನದಿಂದ ಮುಲ್ಲಾ ಕೆಂಡಾಮಂಡಲವಾಗಿ ಇಬ್ಬರಿಗೂ ತಕ್ಕ ಶಾಸ್ತಿ ಮಾಡುವುದಾಗಿ ತಿಳಿಸಿ ಅಲ್ಲಿಂದ ತೆರಳುತ್ತಾನೆ.

ಅದೇ ಹಳ್ಳಿಯ “ಹಶೀಮ್” ಎಂಬುವವನ ಪತ್ನಿ ಖಾಯಿಲೆಯಿಂದ ತೀರಿಕೊಳ್ಳುತ್ತಾಳೆ. ವಿಧುರ ಹಶೀಮನ ಮನೆಗೆಲಸಕ್ಕೆ ನೆರವಾಗುವಂತೆ ಸುರಯ್ಯಾಳನ್ನು ಒಪ್ಪಿಸುವುದರಲ್ಲಿ ಗಂಡ ಆಲಿ, ಆ ಊರಿನ ಮೇಯರ್ ಮತ್ತು ಮುಲ್ಲಾ ಯಶಸ್ವಿಯಾಗುತ್ತಾರೆ. ಇದೀಗ ಆಲಿಗೆ ಪ್ರಶಸ್ತ ಸಮಯ,  ಹಶೀಮನ ಮನೆಗೆ ಅಡುಗೆ ಕೆಲಸಕ್ಕೆ ಹೋಗುವ ಸುರಯ್ಯಾಳ ಮೇಲೆ ಆರೋಪ ಹೊರಿಸಲು.  ಹೆಂಡತಿ ನಡತೆಗೆಟ್ಟವಳು, ವಿಶ್ವಾಸ ದ್ರೋಹಿ ಎಂದು ಹೀಯಾಳಿಸುತ್ತ ಬೀದಿ ಬೀದಿಗಳಲ್ಲಿ ಸುರಯ್ಯಾಳನ್ನು ಎಳೆದಾಡಿ ಥಳಿಸುತ್ತಾನೆ – ಊರ ಜನ ನಂಬುವಂತೆ ಮಾಡುತ್ತಾನೆ. ಅದನ್ನು ಸಾಬೀತು ಮಾಡಲು ಮತ್ತೊಬ್ಬನ ಸಾಕ್ಷಿ ಬೇಕಿರುತ್ತದೆ; ಸ್ವತಹ ಹಶೀಮನನ್ನೇ ಬೆದರಿಸಿ ಮಾಡದ ಅಪರಾಧವನ್ನು ಒಪ್ಪಿಕೊಳ್ಳುವಂತೆ ಮಾಡಿ ಸಾಕ್ಷಿಯಾಗಿಸಿಕೊಳ್ಳುತ್ತಾರೆ.

ಅಲ್ಲಿನ ಧರ್ಮದ ಪ್ರಕಾರ ವ್ಯಭಿಚಾರಕ್ಕೆ (ಹೆಣ್ಣಿಗೆ ಮಾತ್ರ) ಕೊಡುವ ಶಿಕ್ಷೆ ಏನು ಗೊತ್ತೆ ?

ಸೊಂಟದ ಮಟ್ಟಕ್ಕೆ ಅವಳನ್ನು ನೆಲದಲ್ಲಿ ಹೂತು ಹಾಕಿ, ಹಿಂಬದಿಗೆ ಕೈಗಳನ್ನು ಕಟ್ಟಿ, ಊರಜನರೆಲ್ಲ ಸೇರಿ ಕಲ್ಲುಗಳಿಂದ ಹೊಡೆದು ಹೊಡೆದು ಚಿತ್ರ ಹಿಂಸೆ ಕೊಟ್ಟು ಸಾಯಿಸುವುದು.

ಮೊದಲ ಕಲ್ಲಿನೇಟು ಸುರಯ್ಯಾಳ ಪಿತಾಮಹ ಹೊಡೆಯಬೇಕು. ಅವನ ಕೈಗೆ ಕಲ್ಲು ಕೊಡುತ್ತಾರೆ. ದೇವರ ಹೆಸರಿನಲ್ಲಿ ಬೀಸುತ್ತಾನೆ.

ತಪ್ಪಿ ಹೋಗುತ್ತದೆ ಹೊಡೆತ ! ಮತ್ತೊಮ್ಮೆ ಹೊಡೆಯುತ್ತಾನೆ – ಆಗಲೂ ಕಲ್ಲು ಸುರಯ್ಯಾಳನ್ನು ತಾಕದೇ ಹೋಗುತ್ತದೆ.  ಮೂರನೆ ಬಾರಿ ಹೊಡೆಯುತ್ತಾನೆ – ಉಹು ಕಲ್ಲು ತಾಕುವುದೇ ಇಲ್ಲ. ಆಗ ಸುರಯ್ಯಾಳ ಅತ್ತೆ ಝಾರಾ ಕೂಗಿ ಹೇಳುತ್ತಾಳೆ :

“ನೋಡಿದಿರಾ ಕಲ್ಲು ತಾಕಲಿಲ್ಲ, ಸುರಯ್ಯಾ ನಿರ್ದೋಷಿ… ಅಲ್ಲಾಹುವೇ ಸೂಚನೆ ಕೊಟ್ಟಿದ್ದಾನೆ, ಬಿಟ್ಟುಬಿಡಿ ಅವಳನ್ನು… ”

ಅಲ್ಲಾ ಬಿಟ್ಟರೂ ಮುಲ್ಲಾ ಬಿಡುತ್ತಾನೆಯೇ?

ಆಲಿ ಈಗ ತಡಮಾಡುವುದಿಲ್ಲ, ಕಲ್ಲನ್ನು ಕೈಗೆತ್ತಿಕೊಳ್ಳುತ್ತಾನೆ, ಹೆಣ್ಣು ಭೋಗದ ವಸ್ತು ಮಾತ್ರವೆಂದು ನಂಬಿರುವ ಗಂಡಸರೆಲ್ಲರ ಶೌರ್ಯವನ್ನು ಆವಾಹನೆ ಮಾಡಿಕೊಂಡವನಂತೆ ಬೀಸುತ್ತಾನೆ… ಗುರಿ ತಪ್ಪುವುದಿಲ್ಲ, ಕಲ್ಲು ನೇರವಾಗಿ ಸುರಯ್ಯಾಳ ಹಣೆಗೆ ತಾಕಿ ಚಿಲ್ಲನೆ ಚಿಮ್ಮುತ್ತದೆ ರಕ್ತ.

ಹಿಂದೆಯೇ ಮತ್ತೊಮ್ಮೆ ಬೀಸುತ್ತಾನೆ.  ಮತ್ತೆ ಹಣೆಗೇನೆ

ಮುಂದಿನ ಸರದಿ ಅವಳ ಗಂಡು ಮಕ್ಕಳದು. ಅವರ ಮುಖದಲ್ಲಿ ನಂಬಲಸಾಧ್ಯವಾದ ಕಾಠಿಣ್ಯ ಅಪ್ಪನ ಮಕ್ಕಳು – ಗುರಿ ತಪ್ಪುತ್ತಾರೆಯೇ ? – ಹೃದಯ ವಿದ್ರಾವಕ

ಈಗ ಹಶೀಮನ ಕೈಗೆ ಕಲ್ಲು ಕೊಡುತ್ತಾರೆ. ನೆರೆದ ಅಷ್ಟೂ ಜನರಲ್ಲಿ ಹೃದಯವಂತನೆಂದರೆ ಅವನೇ… ಹೆಂಡತಿ ಸತ್ತ ಮೇಲೆ ಅವನಿಗೂ ಅವನ ಮಗನಿಗೂ ಅನ್ನ ಹಾಕಿ ಪೊರೆದವಳು.  ಅಷ್ಟು ಮಾತ್ರದ ಋಣ ಅವನನ್ನು ಪ್ರಾಮಾಣಿಕನನ್ನಾಗಿಸುತ್ತದೆ. ಕಲ್ಲುಗಳನ್ನು ನೆಲಕ್ಕೆ ಹಾಕಿ ಅಳುತ್ತಾ ಅಲ್ಲಿಂದ ಹೊರಟು ಹೋಗುತ್ತಾನೆ.

ಇನ್ನು ಊರಿನ ಜನರು ಸಾಮೂಹಿಕವಾಗಿ ಕಲ್ಲುಗಳೆಸೆಯಲು ತೊಡಗುತ್ತಾರೆ

ಅಲ್ಲಾಹುವಿನ ಹೆಸರಿನಲ್ಲಿ ಎಲ್ಲವೂ ಮುಗಿದು ಹೋಗುತ್ತದೆ

ಸುರಯ್ಯಾಳ ರಕ್ತಸಿಕ್ತ ದೇಹವ ಹೊತ್ತುಕೊಂಡು ಹೋಗಿ ಮೂಟೆಕಟ್ಟಿ ಊರಾಚೆಯ ಹೊಳೆಗೆ ಎಸೆದು ಬರುತ್ತಾರೆ

ವಿಪರ್ಯಾಸವೆಂದರೆ , ಒಂದು ಸುಳ್ಳನ್ನು ಸತ್ಯವೆಂದು ನಂಬಿಸುವುದರಲ್ಲಿ ಯಶಸ್ವಿಯಾಗುವ ಆಲಿ ಹೆಂಡತಿಯನ್ನು ಕಳೆದುಕೊಳ್ಳುತ್ತಾನೆ.

ಅತ್ತ, ಸತ್ಯವನ್ನು ಸುಳ್ಳೆಂದು ಸಾಬೀತು ಮಾಡುವಲ್ಲಿ ವಿಫಲನಾಗಿ – ವೈದ್ಯನನ್ನು ಉಳಿಸಲಿಕ್ಕಾಗದೆ ಅವನ ಮಗಳೂ ಕೈ ತಪ್ಪಿಹೋಗುತ್ತಾಳೆ

ಘಟನೆ ನಡೆದ ಮಾರನೆ ದಿನ, ಫ್ರೆಂಚ್ ಪತ್ರಕರ್ತ ಫೈದೂನ್ ಆ ಹಳ್ಳಿಯ ಮೂಲಕ ಹಾದು ಹೋಗುವಾಗ ಅವನ ಕಾರು ಕೆಟ್ಟು ನಿಲ್ಲುತ್ತದೆ. ರಿಪೇರಿಗಾಗಿ ಮೆಕಾನಿಕ್ ಹಶೀಮನ ಬಳಿ ಬರುತ್ತಾನೆ. ಬಂದವನು ಪತ್ರಕರ್ತ ಎಂದು ತಿಳಿದ ಝಾರಾ ಅವನನ್ನು ಮನೆಗೆ ಕರೆಯಿಸಿಕೊಂಡು ಹಿಂದಿನ ದಿನ ಆ ಹಳ್ಳಿಯಲ್ಲಿ ನಡೆದ ಹತ್ಯಾಕಾಂಡವನ್ನು ವಿವರಿಸುತ್ತಾಳೆ. ನಂತರವೇ ಫೈದೂನ್ La Femme Lapidde ( The Women Stoned) ಬರೆದು, ಆಲಿಯ ಕಾಮಕಾರಣಕ್ಕೆ, ಮುಲ್ಲಾನ ಧರ್ಮಕಾರಣಕ್ಕೆ, ಮೇಯರ್ ನ ರಾಜಕಾರಣಕ್ಕೆ ಸುರಯ್ಯಾ ಎಂಬ ನಿರಪರಾಧಿ ಸ್ತ್ರೀಯೊಬ್ಬಳನ್ನು ಅತ್ಯಂತ ಅಮಾನವೀಯವಾಗಿ ಸಾಯಿಸಲ್ಪಟ್ಟ ಸಂಗತಿ ಜಗಜ್ಜಾಹೀರಾಗುತ್ತದೆ.

ಸುರಯ್ಯಾಳನ್ನು ಕಲ್ಲಿನಿಂದ ಹೊಡೆದು ಸಾಯಿಸುವ ಮೊದಲು ಕಡೆಯದಾಗಿ ಮಾತಾಡಲು ಅವಳಿಗೆ ಅವಕಾಶ ಕೊಡಲಾಗುತ್ತದೆ.

ತನ್ನನ್ನು ಸಾಯಿಸಲು ಕಲ್ಲು ಹಿಡಿದು ಕಾದು ನಿಂತಿರುವ ಕುಟುಂಬ ಸದಸ್ಯರಾದಿಯಾಗಿ ಸಮಸ್ತ ಊರಿನ ಜನತೆಗೆ – ಅವರೊಂದಿಗಿನ ತನ್ನ ಸಂಬಂಧವನ್ನು ನಿರ್ದೇಶಿಸುತ್ತಾ

” ನಿಮಗೆಲ್ಲಾ ನಾನ್ಯಾರು ಎಂದು ಗೊತ್ತಿಲ್ಲವೆಂದು ಕಾಣುತ್ತಿದೆ…

ನಾನು – ಸುರಯ್ಯಾ

ನಿಮ್ಮೆಲ್ಲರ ಮನೆಗಳಲ್ಲೂ ಇದ್ದವಳು

ನಿಮ್ಮೊಂದಿಗೆ ಅನ್ನವ ಹಂಚಿಕೊಂಡವಳು

ನಿಮ್ಮ ಗೆಳತಿಯಾಗಿದ್ದವಳು

ನನಗೆ ಹೀಗೆ ಮಾಡುವುದಕ್ಕೆ ಹೇಗೆ ಸಾಧ್ಯವಾಗುತ್ತಿದೆ ನಿಮಗೆ…?

ನಿಮ್ಮ ನೆರೆಯವಳು…

ನಿಮ್ಮ ತಾಯಿ…

ನಿಮ್ಮ ಮಗಳು…

ನಿಮ್ಮ ಹೆಂಡತಿ…

ಯಾರಿಗಾದರೂ ಹೀಗೆ ಮಾಡುವುದಕ್ಕೆ ಹೇಗೆ ಸಾಧ್ಯವಾಗುತ್ತದೆ ನಿಮಗೆ… ?”

ಗುಂಪು ಒಕ್ಕೊರಲಿನಿಂದ ಕೂಗುತ್ತದೆ:

” ಇದು ದೇವರ ನಿಯಮ… ”

” ದೇವರು ದೊಡ್ಡವನು… ”

” ದೇವರು ದೊಡ್ಡವನು… ”

” ಎಲ್ಲಕ್ಕಿಂತ ಮಿಗಿಲು ದೇವರೇ… ”

…………………………………..

…………………………………..

…………………………………..

ಹೇಗೆ ಸಾಧ್ಯ ?

“Don’t act like the hypocrite,

who thinks he can conceal his wiles

while loudly quoting the Koran.” – Hafez (14th century Iranian Poet)

ಅಲ್ಲಿ ಹರಿಯುತ್ತಿರುವ ಹೊಳೆ… ದಂಡೆಯ ಮೇಲೆ ನಾಯಿ ಕಚ್ಚುತ್ತಿರುವ ಮೂಳೆ… ಅದನ್ನು ಓಡಿಸಲು ಬರುವ ಮಹಿಳೆ…

ಹೇಗೆ ಸಾಧ್ಯವಾಗುತ್ತಿದೆ … ?

ಅಲ್ಲಿ ಸುರಯ್ಯಾ ಕೇಳಿದ ಪ್ರಶ್ನೆ ದೌರ್ಜನ್ಯಕ್ಕೆ, ದಮನಕ್ಕೆ, ಮತ್ತೆ ಮತ್ತೆ ಒಳಗಾಗುತ್ತಲೇ ಇರುವ ಎಲ್ಲ ಕಾಲದ ಎಲ್ಲ ದೇಶಗಳ ಸ್ತ್ರೀಯರ ಧ್ವನಿಯಾಗಿರಬಹುದೇ… ??

 

2 Comments

  1. ಲಕ್ಷ್ಮೀಕಾಂತ ಇಟ್ನಾಳ
    July 6, 2015
  2. HEMCHANDRA
    July 6, 2015

Add Comment

Leave a Reply