Quantcast

’ಬಾಹುಬಲಿ’ – ಚಿತ್ರಕಾರನ ಕಣ್ಣ ಕನಸು

ಗೊರೂರು ಶಿವೇಶ್

ಬಿಡುಗಡೆಯಾದ ಮೂರು ದಿನಗಳಲ್ಲಿ ನೂರ ಅರವತ್ತು ಕೋಟಿಗೂ ಮಿಕ್ಕಿ ಸಂಪಾದಿಸಿ ಭಾರತೀಯ ಚಲನಚಿತ್ರರಂಗ ಇತಿಹಾಸದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿರುವ ತೆಲುಗುಚಿತ್ರ ‘ಬಾಹುಬಲಿ’ ಕನ್ನಡದಲ್ಲೂ ಮೂರು ದಿನಕ್ಕೆ ಹತ್ತು ಕೋಟಿ ಸಂಪಾದಿಸಿ ‘ರನ್ನ’ ಚಿತ್ರದ (ಅದು ಕೂಡ ತೆಲುಗು ಚಿತ್ರದ ರಿಮೇಕ್ ಎಂಬುದು ಬೇರೆ ಮಾತು) ದಾಖಲೆಯನ್ನು ಸರಿಗಟ್ಟಿದೆ ಎಂದು ಹೇಳಲಾಗುತ್ತಿದೆ. ತಮಿಳು, ಹಿಂದಿ, ಮಲೆಯಾಳಂ ಭಾಷೆಗೆ ‘ಡಬ್ಬಿಂಗ್’ ಆಗಿ ಚಿತ್ರ ಬಿಡುಗಡೆಯಾಗಿ ಅಲ್ಲಿಯೂ ಕೂಡಾ ಉತ್ತಮ ಗಳಿಕೆಯನ್ನು ಮಾಡುತ್ತಿದೆ. ಆದರೆ ಇಲ್ಲಿ ‘ಡಬ್ಬಿಂಗ್’ ವಿರೋಧಿ ನಿಲುವಿನಿಂದಾಗಿ ಚಿತ್ರ ಮೂಲಭಾಷೆಯಲ್ಲಿ ಬಿಡುಗಡೆಯಾದರೂ ಭಾಷೆ ಅರ್ಥವಾಗದಿದ್ದರೂ ಜನ ನೋಡಿ ಆನಂದಿಸುತ್ತಿದ್ದಾರೆ.

ಕನ್ನಡದ ಸೀಮಿತ ಅವಕಾಶದಲ್ಲಿ ಇಂಥ ಚಿತ್ರಗಳನ್ನು ಪುನರ್ ನಿರ್ಮಿಸುವುದು ಅಸಾಧ್ಯವಾಗಿರುವಾಗ ಇಂಥ ಚಿತ್ರಗಳಿಗಾದರೂ ಡಬ್ಬಿಂಗ್ ಅವಕಾಶ ದೊರಕಿದ್ದರೆ ಚಿತ್ರವನ್ನಾದರೂ ಸಂಪೂರ್ಣವಾಗಿ ಆನಂದಿಸಬಹುದಿತ್ತು. ಭಾಷೆ ಬಾರದ ಅನೇಕರು ಸಂಭಾಷಣೆ, ದೃಶ್ಯಗಳ ಅರಿವಾಗದೆ ಅಕ್ಕಪಕ್ಕದವರ ಬಳಿ ಪ್ರಶ್ನಿಸುತ್ತಿದ್ದುದು ಚಿತ್ರ ಮಂದಿರದಲ್ಲಿ ಸಾಮಾನ್ಯವಾಗಿತ್ತು.

ಮೇಲ್ನೋಟಕ್ಕೆ ರಾಜ್ಯಾಧಿಕಾರಕ್ಕಾಗಿ ಹೋರಾಟ ನಡೆಸಿದ ಭರತ-ಬಾಹುಬಲಿಯ ಛಾಯೆ ಇದರಲ್ಲಿ ಇದೆ. ಆದರೆ ಸಂಪೂರ್ಣವಾಗಿ ಇದರ ಅರಿವಾಗಬೇಕಾದರೆ ಭಾಗ-2 ಕೂಡಾ ಬಿಡುಗಡೆಯಾಗಬೇಕು. ಚಿತ್ರ ಯಶಸ್ಸು ಕಂಡ ನಂತರ ಆ ಚಿತ್ರಗಳ ಭಾಗ-2, 3 ಎಂದು ನಿರ್ಮಿಸಲಾಗಿದ್ದರೂ ಪ್ರಾರಂಭದಲ್ಲೇ ಚಿತ್ರವನ್ನು ಎರಡು ಭಾಗ ಮಾಡಿ ಬಿಡುಗಡೆ ಮಾಡಿರುವುದು ಮತ್ತೊಮ್ಮೆ ಭಾರತೀಯ ಚಿತ್ರರಂಗಕ್ಕೆ ಹೊಸದು. ಅಂದರೆ ಇಂಟರ್ವಲ್ವರೆಗೆ ಮಾತ್ರ ಈಗ ನೋಡಿದ್ದಾಗಿದೆ. ಭಾಗ-2ರ ಕುರಿತು ಸಾಕಷ್ಟು ಕುತೂಹಲವನ್ನಂತೂ ಈ ಚಿತ್ರ ಮೂಡಿಸಿದೆ. ಇದಕ್ಕಾಗಿ ಮುಂದಿನ ವರ್ಷದ ಜುಲೈಯವರೆಗೆ ಕಾಯಬೇಕು.

ಚಿತ್ರದ ಪ್ರಾರಂಭ ರಾಜಮಾತೆ (ರಮ್ಯಕೃಷ್ಣ) ಉಕ್ಕಿ ಹರಿಯುವ ಪ್ರವಾಹದಲ್ಲಿ ತೇಲುತ್ತಾ ತನ್ನ ಕೈಯಲ್ಲಿನ ಮಗುವನ್ನು ಉಳಿಸಿಕೊಳ್ಳುವ ಪ್ರಯತ್ನದಿಂದ ಪ್ರಾರಂಭವಾಗುತ್ತದೆ. ರಾಷ್ಟ್ರವನ್ನು ಉಳಿಸಲು ಆ ಮಗುವನ್ನು ಉಳಿಸುವಂತೆ ದೇವರನ್ನು ಬೇಡಿಕೊಳ್ಳುತ್ತಾಳೆ. ಆಗ ದಡದಲ್ಲಿದ್ದ ಗುಡ್ಡಗಾಡಿನ ಜನ ಬಂದು ರಕ್ಷಿಸುವ ಪ್ರಯತ್ನ ಮಾಡಿದಾಗಲೇ ಮಗು ಮಾತ್ರ ಉಳಿದು ರಾಜಮಾತೆ ನೀರಿನಲ್ಲಿ ಕಣ್ಮರೆಯಾಗುತ್ತಾಳೆ.

ಸಾಕುತಾಯಿಯ ಜೊತೆಗೆ ಬೆಳೆಯುವ ಶಿವುಡು(ಪ್ರಭಾಸ್) ಪರ್ವತ ಹತ್ತಿ ಇಳಿಯುವ ಸಾಹಸಿ. ಶಿವನ ಲಿಂಗವನ್ನೇ ಬಂಡೆಯಿಂದ ಕಿತ್ತು ಜಲಪಾತದ ಅಡಿಯಲ್ಲಿ ಪ್ರತಿಷ್ಠಾಪಿಸುವಷ್ಟು ಬಲಶಾಲಿ ಆತ. ಪರ್ವತದ ಮೇಲಿನಿಂದ ಉರುಳಿ ಬರುವ ಮುಖವಾಡವು ಮರಳಿನಲ್ಲಿ ಹುದುಗಿದಾಗ ಸುಂದರ ಮುಖ ದೇವಕನ್ಯೆಯಾಗಿ ಕಂಡು ಆಕೆಗಾಗಿ ದುರ್ಗಮ ಪರ್ವತವನ್ನೇ ಹತ್ತಿ ಹೋದಾಗ ಆತನನ್ನು ಕಂಡ ಅಲ್ಲಿಯ ಜನ ಬಾಹುಬಲಿ ಎಂದು ಉದ್ಘಾರವೆತ್ತುತ್ತಾ ಹಿಂದೆ ಸರಿದಾಗ ನಿಜವಾದ ಹಿನ್ನೆಲೆ ಹೊರಬರುತ್ತದೆ. ಮುಂದೆ ಅಪ್ಪಟ ಚಂದಮಾಮ, ಬಾಲಮಿತ್ರದ ಕಥೆಯಂತೆ ಮುಂದುವರಿಯುತ್ತದೆ.

‘ಮಹಿಷಮತಿ’ ರಾಜ್ಯವನ್ನು ಈಗ ಕ್ರೂರಿ ಬಲ್ಲಾಳದೇವ (ರಾಣಾ ದಗ್ಗುಭಾಟಿ) ಆಳುತ್ತಿದ್ದಾನೆ. ಅವರ ಸೆರೆಯಲ್ಲಿ ಇರುವ ದೇವಸೇನ ರಾಣಿ ಅವನು ನೀಡುವ ಎಲ್ಲಾ ನೋವುಗಳನ್ನು ಸಹಿಸುತ್ತಲೆ ಮುಂದೊಮ್ಮೆ ತನ್ನನ್ನು ಕಾಪಾಡಲು ಬರುವ ಮಗನಿಗಾಗಿ ಕಾಯುತ್ತಿದ್ದಾಳೆ. ಈ ಹಿಂದೆ ಸಿಂಹಾಸನಕ್ಕೆ ಸಮಾನ ಹಕ್ಕುದಾರರಾದ ಬಾಹುಬಲಿ ಮತ್ತು ಬಲ್ಲಾಳ ದೇವ ಸಮಾನ ಬಲಶಾಲಿಗಳು. ಆದರೆ ಪ್ರಜೆಗಳ ಕುರಿತು ಕರುಣಾಳಾದ ಬಾಹುಬಲಿಯ ಕುರಿತು ರಾಜಮಾತೆಯ ಒಲವು. ಇದನ್ನೆಲ್ಲ ಗಮನಿಸುತ್ತಿರುವ ಬಲ್ಲಾಳದೇವ ಸಮಯವನ್ನು ಕಾಯುತ್ತಿದ್ದಾನೆ. ಮುಂದೆ ಸಂಖ್ಯೆಯಲ್ಲಿ ಸಾಕಷ್ಟು ದೊಡ್ಡದಾದ ಹಾಗೂ ಬಲಿಷ್ಠರಾದ ಕಾಡಿನ ಅಟಾವಿಕರನ್ನೇ ಒಳಗೊಂಡ ಕುಲಕೆಯರು ಯುದ್ಧಕ್ಕೆ ಬಂದಾಗ ಅವರನ್ನು ಸೋಲಿಸಲು ಹೆಣೆಯುವ ರಣತಂತ್ರಗಳ ಜೊತೆಗೆ ಬಾಹುಬಲಿಯನ್ನು ಹತ್ತಿಕ್ಕುವ ರಾಜಕೀಯವು ಬೆರೆಯುತ್ತಾ ಹೋಗುತ್ತದೆ. ಬಲ್ಲಾಳದೇವನ ಪಿತೂರಿಗೆ ಬಾಹುಬಲಿ ಅಸುನೀಗುತ್ತಾನೆ. ಅದು ಏಕೆ? ಹೇಗೆ? ಅದರ ಸೇಡನ್ನು ಬಾಹುಬಲಿಯ ಮಗ ತೀರಿಸಿಕೊಳ್ಳುವ ಪರಿಯೆಂತು? ಇದನ್ನು ನೋಡಲು ಭಾಗ-2 ಬಿಡುಗಡೆಯಾಗುವವರೆಗೂ ಕಾಯಬೇಕು.

ಹರ್ಕ್ಯುಲಸ್, ವರ್ಟಿಕಲ್ ಲಿಮಿಟ್, ಅಷ್ಟೇ ಏಕೆ ಕನ್ನಡದ ಸಂಗೊಳ್ಳಿರಾಯಣ್ಣ, ಮಯೂರ ಚಿತ್ರಗಳ ಛಾಯೆಯನ್ನು ಗಮನಿಸಬಹುದಾದರೂ ಅವುಗಳನ್ನೆಲ್ಲಾ ಒಳಗೊಂಡು ಬೇರೆಯದೆ ಆದ ಚಿತ್ರ ಬಾಹುಬಲಿ. ಕೆಲವು ಸನ್ನಿವೇಶಗಳು ಚಿತ್ರಗಾರ ಚಿತ್ರಿಸಿದ ‘ಚಿತ್ರಪಟ’ದಂತೆ ಕಂಡುಬಂದರೆ, ಇನ್ನೂ ಕೆಲವು ಸನ್ನಿವೇಶಗಳು ಮೈನವಿರೇಳಿಸುತ್ತವೆ. ಚಿತ್ರದ ಬಹುಭಾಗ ಘಟನೆಗಳು ರಾತ್ರಿ ಹಾಗೂ ಕತ್ತಲಿನಲ್ಲಿ ನಡೆಯುತ್ತವೆ. ತಲೆ ಕಡಿದ ದೇಹವೊಂದು ನಡೆಯುತ್ತಾ ಸಾಗುವ ದೃಶ್ಯವಂತೂ ಮೈನಡುಗಿಸುತ್ತದೆ.

ದೈತ್ಯಾಕಾರದ ನಾಯಕ-ಪ್ರತಿನಾಯಕರಿರುವುದರಿಂದ ಸಾಹಸಮಯ ದೃಶ್ಯಗಳೆ ತುಂಬಿ ಹೋಗಿ ಅಭಿನಯಕ್ಕೆ ಸಿಕ್ಕ ಅವಕಾಶಗಳು ಕಡಿಮೆಯೆಂದೇ ಹೇಳಬೇಕು. ಕನ್ನಡದ ಅಭಿನಯ ಚತುರ ಸುದೀಪ್ ಮೂರು ನಿಮಿಷಗಳ ದೃಶ್ಯದಲ್ಲಿ ಹಾಗೆ ಬಂದು ಹೀಗೆ ಹೋಗಿದ್ದಾರೆ. ಕಡೆಯ ಅರ್ಧ ಗಂಟೆಯ ‘ಯುದ್ಧದ ದೃಶ್ಯಗಳಂತೂ ಕಣ್ಣಿನ ಎವೆಯಿಕ್ಕದೆ ನೋಡುವಂತೆ ಮಾಡಿವೆ. ನಿರ್ದೇಶಕ ರಾಜಮೌಳಿಯ ಹತ್ತನೆ ಚಿತ್ರ ಖರ್ಚಿನ ದೃಷ್ಟಿಯಿಂದ (250 ಕೋಟಿ) ಗಳಿಕೆಯ ನಿಟ್ಟಿನಿಂದ ದಾಖಲೆಗಳನ್ನು ಬರೆಯುತ್ತಿದ್ದು ಮತ್ತೊಬ್ಬ ಪ್ರಸಿದ್ಧ ನಿರ್ದೇಶಕ ರಾಮಗೋಪಾಲವರ್ಮ ಹೇಳಿರುವಂತೆ ಎಷ್ಟು ಖರ್ಚು ಮಾಡಿ ತೆಗೆದರೂ ಮುಂದಿನ ಚಿತ್ರಗಳು ಈ ಚಿತ್ರದ ಎದುರು ಪೇಲವವಾಗುವ ಸಂಭವನೀಯತೆಯೂ ಇದೆ.

 

Add Comment

Leave a Reply