Quantcast

’ಮಸಾಣ್’ ಚಲನ ಚಿತ್ರ : ಒಂದು ಪ್ರತಿಕ್ರಿಯೆ..

ಅಶ್ವತ್ಥ,

ಶಿಕಾರಿಪುರ

ನೀರಜ್ ಘಯ್ವನ್ ರ “ಮಸಾಣ್” (“ಸ್ಮಶಾನ” ದ ಶುದ್ಧ ದೇಸಿ ಹಿಂದಿ ಪದ) ನಮ್ಮ ಕಾಲದ ಸ್ಥಿತ್ಯಂತರ ಹಾಗೂ ಪಲ್ಲಟಗಳನ್ನು ಹಲವು ಸ್ತರಗಳಲ್ಲಿ ಕಟ್ಟಿಕೊಡಲು ಮಾಡಿರುವ ಪ್ರಶಂಸನೀಯ ಮತ್ತು ಪ್ರೌಢ ಪ್ರಯತ್ನ (ಚಿತ್ರ ವಯಸ್ಕರಿಗೆ ಮಾತ್ರ).

ವಾರಾಣಸಿಯ ಹಿನ್ನೆಲೆಯಲ್ಲಿ, ನಮ್ಮ ಎಲ್ಲ ಸಣ್ಣ ನಗರ / ಪಟ್ಟಣಗಳ ರೂಪಾಂತರ ಪ್ರಕ್ರಿಯೆಯನ್ನು ದಾಖಲಿಸಲು ನೀರಜ್ ಯತ್ನಿಸಿದ್ದಾರೆ ಮತ್ತು ಬಹು ಮಟ್ಟಿಗೆ ಯಶಸ್ಸು ಗಳಿಸಿದ್ದಾರೆ.

ವಾರಾಣಸಿಯ ಸಂಪ್ರದಾಯಿಕ ಹಿನ್ನೆಲೆಯ ಕುಟುಂಬದ, ಚಿಕ್ಕ ವಯಸ್ಸಿನಲ್ಲೇ ತಾಯನ್ನು ಕಳೆದುಕೊಂಡ, ಉತ್ತಮ ಶಿಕ್ಷಣ ಪಡೆದ, ಮಾಹಿತಿ ತಂತ್ರಜ್ಞಾನ ಜಾಲಕ್ಕೆ (Facebook, You Tube) ತೆರೆದುಕೊಂಡ ದೇವಿ ಪಾಠಕ್ ಳ ಭಗ್ನ ಲೈಂಗಿಕ ಅನುಭವದ ವಿವರದೊಡನೆ ಕಥಾನಕ ಪ್ರಾರಂಭವಾಗುತ್ತದೆ. ಆ ಅವಸ್ಥೆಯಲ್ಲಿ ಸಿಕ್ಕಿ ಬಿದ್ದು ಪ್ರಿಯಕರ ಮರ್ಯಾದೆಗಂಜಿ ಹೋಟೆಲ್ ನಲ್ಲೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಪರಿಸ್ಥಿತಿಯ ಲಾಭ ಪಡೆಯುವ ಭ್ರಷ್ಟ ಪೋಲಿಸ್ ಅಧಿಕಾರಿ, ಮಾರ್ಯಾದೆ ಉಳಿಸಿಕೊಳ್ಳಲು ಹೆಣಗಾಡುವ ತಂದೆ ವಿದ್ಯಾಧರ್ ಪಾಠಕ್ ಇದನ್ನು ದೇವಿ ನಿಭಾಯಿಸುವ ಬಗೆ – ಇವುಗಳನ್ನು ದಾಖಲಿಸುತ್ತಾ ಸಾಗುತ್ತದೆ.

ಜತೆ ಜತೆ ಯಲ್ಲಿಯೇ ವಾರಾಣಸಿಯ ಘಾಟ್ ನಲ್ಲಿ ಹೆಣ ಸುಡುವ ಕಾಯಕದ, ನವ ಪೀಳಿಗೆಯ Civil Engineering ವಿದ್ಯಾಭ್ಯಾಸ ಮಾಡುತ್ತಿರುವ ತರುಣ ದೀಪಕ್ ಹಾಗೂ ಮೇಲು ಜಾತಿಯ ಶಾಲೂ (ಶಾಲಿನಿ ಅಗರ್ವಾಲ್) ರ ದುರಂತ ಪ್ರೀತಿಯ ಕಥನವೂ ನಡೆಯುತ್ತದೆ.

ಚಿತ್ರ ಗೆಲ್ಲುವುದು ಅಚ್ಚುಕಟ್ಟಾದ ಚಿತ್ರಕಥೆ, ಬಿಗಿಯಾದ ನಿರೂಪಣೆ, ವಾರಣಾಸಿಯ ಅದ್ಭುತ ಚಿತ್ರೀಕರಣ, ವೈರುಧ್ಯಗಳನ್ನು ಮುಖಾಮುಖಿಯಾಗಿಸುವ ಬಗೆ, ಮತ್ತು ಅದ್ಭುತ ಪಾತ್ರ ಪೋಷಣೆ ಮತ್ತು ಅಭಿನಯದಲ್ಲಿ..

ಬಾಲಿವುಡ್ ನಲ್ಲಿ ಲೈಂಗಿಕತೆ ಕುರಿತ ಬಹುತೇಕ ಚಿತ್ರಗಳು ಮೇಲ್ವರ್ಗದ ಚಿತ್ರಣಗಳಾಗಿವೆ. ಆದರೆ ಮಸಾಣ್ – ಈ ಲೈಂಗಿಕತೆ – ನೈತಿಕತೆ, ಜಾತೀಯತೆ- ಅಂತರ್ಜಾತೀಯ ಪ್ರೀತಿ-ಪ್ರೇಮ, ಮಾನಾಪಮಾನ ಇತ್ಯಾದಿ ಸಾಮಾಜಿಕ ಮೌಲ್ಯ(??)ಗಳನ್ನು ಕುರಿತ ಮಧ್ಯಮವರ್ಗದ, ಸಣ್ಣ ಪಟ್ಟಣಗಳಲ್ಲಿನ, ಗ್ರಾಮಗಳಲ್ಲಿನ ಗ್ರಹೀತಗಳು ಮತ್ತು ಅದನ್ನು ಶಿಕ್ಷಣ, ಮಾಹಿತಿ-ತಂತ್ರಜ್ಞಾನದ ತಿಳುವಳಿಕೆಯ ಮೂಲಕ ಯುವ ಜನಾಂಗ ಈ ಸಾಂಸ್ಥಿಕ ತಿಳುವಳಿಕೆಯ ಕ್ರಮವನ್ನು ಗ್ರಹಿಸುವ ಮತ್ತು ಸವಾಲನ್ನು ಎದುರಿಸುವ ಪರಿಯನ್ನು ಅನ್ಯಾದೃಶವಾಗಿ ಕಟ್ಟಿ ಕೊಡುತ್ತದೆ. ಹಾಗೆಯೇ ನಮ್ಮ ಎಲ್ಲ ಸಣ್ಣ-ಪಟ್ಟಣ- ಗ್ರಾಮಗಳಲ್ಲಿ ಈ ಸಮಯದಲ್ಲಿ, ನಮ್ಮ ನಡುವೆ ಆಗುತ್ತಿರುವ ಬದಲಾವಣೆಯ ಚಿತ್ರವನ್ನು ಕೂಡ.

ಚಿತ್ರದ ಭಿತ್ತಿ ಏಕ ಕಾಲಕ್ಕೆ ಜಾತೀಯತೆ-ನೈತಿಕತೆ-ಲೈಂಗಿಕತೆ-ಅಂತರ್ಜಾತೀಯ ವಿವಾಹ, ಶಿಕ್ಷಣಕ್ಕೆ ತೆರೆದುಕೊಂಡ ದಮನಿತ ಜನಾಂಗ, ಮಹಿಳಾ ಸಂವೇದನೆ ಮತ್ತು ಅಭಿವ್ಯಕ್ತಿ ಬದಲಾಗುತ್ತಿರುವ ಬಗೆ- ಆದರೆ ಸಾಂಸ್ಥಿಕ ರೂಪದಲ್ಲಿ ಬದಲಾಗದ / ಹೆಚ್ಚುತ್ತಿರುವ ಭ್ರಷ್ಟತೆ, ಶಿಕ್ಷಣ- ಮೊಬೈಲ್ – ಮಾಹಿತಿ – ಅಂತರ್ಜಾಲ ಯುವ ಜನಾಂಗಕ್ಕೆ ಒಡ್ಡುತ್ತಿರುವ ಸವಾಲುಗಳ ಜತೆಗೆ ವಿಮೋಚನೆಯ ಮಾರ್ಗವೂ ಆಗಿ ಒದಗಿಬರುತ್ತಿರುವ ಸಾಧ್ಯತೆಗಳನ್ನು ಅತ್ಯಂತ ವಾಸ್ತವದಲ್ಲಿ ಚಿತ್ರಿಸುತ್ತದೆ.

ಧಾರ್ಮಿಕ ಪ್ರವಾಸೋದ್ಯಮದ ವಾರಣಾಸಿಯ ಇನ್ನೊಂದು ವಾಸ್ತವದ ಆಯಾಮವನ್ನು ಅತ್ಯಂತ ದಟ್ಟವಾಗಿ, ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ಹೆಣಗಳು ಸುಡುತ್ತಿರುವ ಘಾಟಿನ ಘಾಟು ಮಂದಿರದೊಳಗೂ ಇದೆಯೇನೋ ಎಂದು ಭ್ರಮಿಸುವಷ್ಟು ಪರಿಣಾಮಕಾರಿಯಾಗಿದೆ. ಅದರಷ್ಟೇ ಪರಿಣಾಮಕಾರಿ ಚಿತ್ರಣ – ಬದುಕಿಗಾಗಿ ಹೆಣ ಸುಡುವುದನ್ನು ಕಾಯಕ ಮಾಡಿಕೊಂಡವರ ಬದುಕು – ಮತ್ತು ಅದನ್ನು ಮೀರುವ ಕನಸುಗಳೂ..

ಅಂಜದ, ಅಳುಕದ, ಸ್ವಾಭಿಮಾನದ, ಯಾವುದೇ ಶೋಷಣೆಯನ್ನೂ ಒಪ್ಪಿಕೊಳ್ಳದೆ ತಣ್ಣಗೆ ಪ್ರತಿಭಟಿಸುವ, ಈ ಶತಮಾನದ ಮಾದರಿ ಹೆಣ್ಣಿನ (ದೇವಿ ಪಾಠಕ್) ಪಾತ್ರದಲ್ಲಿ ರಿಚ ಚಡ್ಡಾ ಕಂಗೊಳಿಸುತ್ತಾರೆ. ದ್ವಂದ್ವಕ್ಕೆ ಸಿಕ್ಕಿಬಿದ್ದ ತಂದೆಯಾಗಿ(ವಿದ್ಯಾಧರ್ ಪಾಠಕ್) ಸಂಜಯ್ ಮಿಶ್ರಾ, ಜಾತಿ ಸಂಘರ್ಷದಲ್ಲಿ ಸಿಕ್ಕ ಪ್ರೇಮಿಗಳಾಗಿ ವಿಕಿ ಕೌಶಲ್ ಮತ್ತು ಶ್ವೇತ ತ್ರಿಪಾತಿ (ದೀಪಕ್ ಮತ್ತು ಶಾಲು), ಎಲ್ಲರ ಅಭಿನಯವೂ ಅಧ್ಬುತ.

ಅಪರಿಚಿತ ಯುವ ಜೋಡಿಯೊಂದು ಟಿಕೆಟ್ ಬದಲಾಯಿಸಲು ಬಂದಾಗ ಅವಕಾಶ ಇದ್ದರೂ “ತನಗಾದ ನೋವು ಇತರರಿಗೆ ಆಗ ಬಾರದು” ಎಂದು ಸುಳ್ಳು ಹೇಳುವ ನಾಯಕಿ, ಮುಳುಗೇಳುವ ಆಟದಲ್ಲಿ ಜೀವವನ್ನೇ ಒತ್ತೆ ಇಟ್ಟು ಭ್ರಷ್ಟ ಇನ್ಸ್ ಪೆಕ್ಟರ್ ಗೆ ಪಾಲಕ ಪಾಠಕ್ ಬ್ಲಾಕ್ ಮೇಲ್ ಹಣ ಜೋಡಿಸಲು ಮಾಡುವ ಪ್ರಯತ್ನದಂತಹ ಸನ್ನಿವೇಶಗಳು ಸರಳ ಮಾನವೀಯ ಮೌಲ್ಯ ಮತ್ತು ಸಂವೇದನೆ, ರಕ್ತ ಸಂಬಂಧಗಳನ್ನು ಮೀರಿದ ಪ್ರೀತಿಯ ವ್ಯಾಖ್ಯೆ ಆ ಸನ್ನಿವೇಶಗಳನ್ನು ಮೇಲ್ಮಟ್ಟಕ್ಕೆ ಏರಿಸುತ್ತವೆ.

ನಿತ್ಯ ಸಿಡಿಯುತ್ತಿರುವ ವಾರಾಣಸಿಯ ಘಾಟ್ ಗಳ ಬೆಂಕಿಯ ಕೆನ್ನಾಲಗೆ ಜತೆಗೆ ಪ್ರತಿ ಕ್ಷಣದ ನೀರು ಬದಲಾಗುತ್ತಿದ್ದರೂ ಬದಲಾಗದೆ ತಣ್ಣಗೆ ಹರಿಯುತ್ತಿರುವ ಗಂಗೆ – ರೂಪಕಗಳಂತೆ ಇಡೀ ಚಿತ್ರಕ್ಕೆ ಒಂದು ಹಿನ್ನೆಲೆಯಾಗಿ ಅದ್ಭುತವಾಗಿ ಮೂಡಿವೆ.

ಶಾಲೂ ಮತ್ತು ತಂಡದ ಎಲ್ಲ ಪ್ರವಾಸಿಗಳೂ ಬಸ್ ಅಪಘಾತದಲ್ಲಿ ಮುಳುಗುವುದೂ ಮತ್ತು ಅವಳ ಶವ ಸುಡಲು ದೀಪಕ್ ಬರುವುದು ತುಸು ಅವಾಸ್ತವ ಎನಿಸುತ್ತದೆ.

ಸಣ್ಣ ಪುಟ್ಟ ವಿವರಗಳ ಮಿತಿಯನ್ನು ಮೀರಿ, ಈ ಚಿತ್ರ ಒಟ್ಟಾರೆ ನಮ್ಮ ಸಮಕಾಲೀನ ಸಿನಿಮಾದಲ್ಲಿ ಒಂದು ಮೈಲಿಗಲ್ಲು. ಹಾಗಾಗಿ ನೋಡಲೇಬೇಕಾದ ಸಿನಿಮಾ..

 

One Response

  1. ರಾಧಿಕಾ
    July 28, 2015

Add Comment

Leave a Reply