Quantcast

‘ಕ್ಲಾಸ್‌ಗೆ ಆಟಗಾರ, ಮಾಸ್‌ಗೆ ಮಾಟಗಾರ’ – ಚಿತ್ರಪ್ರಿಯ ಸಂಭ್ರಮ್

download2-150x150

ಚಿತ್ರಪ್ರಿಯ ಸಂಭ್ರಮ್

       ದೂರದಲ್ಲೊಂದು ದ್ವೀಪ. ಒಂಟಿ ಮನೆ. ಆಧುನಿಕ ತಂತ್ರಜ್ಞಾನದ ಸುಳಿವು ಅಲ್ಲಿಲ್ಲ. ಸಮಾಜದ ವಿವಿಧ “ಮಹಾನ್ ಕಾರ್ಯ”ಗಳಲ್ಲಿ ಗುರುತಿಸಿಕೊಂಡಿರುವ ಹತ್ತು ಜನರು ಅಂಥ ಮನೆಯಲ್ಲಿ ತಿಂಗಳವರೆಗೆ ಜೀವಿಸುವ ವಾಹಿನಿಯೊಂದರ ಆಟವದು. ಈ ಪರಿಕಲ್ಪನೆ ಬಿಗ್ ಬಾಸ್ ಷೋಗೆ ಹೋಲಿಕೆ ಇದ್ದರೂ, ಇಲ್ಲಿ ನಡೆಯೋದೇ ಬೇರೆ. ಸಿನಿಮಾದಲ್ಲಿರುವ ಷೋದ ಹೆಸರೇ ಆಟಗಾರ.

ಸಿನಿಮಾ ತುಂಬಾ ಕ್ಲಾಸ್ ಆಗಿ ಬಂದಿದೆ. ಉತ್ತಮ ಸಂದೇಶವನ್ನು ಹೊತ್ತು ಬಂದಿರುವ ಆಟಗಾರನನ್ನ ಕ್ಲಾಸ್ ಆಡಿಯನ್ಸ್ ಕಣ್ತುಂಬಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಆದರೆ ಮಾಸ್ ಆಡಿಯನ್ಸ್‌ಗೆ ಆಟಗಾರ, ಮಾಟಗಾರನಂತೆ ಭಾಸವಾದರೆ ದ್ವಾರಕೀಶ್ ಬೇಸರಿಸಿಕೊಳ್ಳಬಾರದು. ಮಾಸ್‌ಗೆ ಬೇಕಾದ ಎಲಿಮೆಂಟ್ಸ್ ಚಿತ್ರದಲ್ಲಿ ಇಲ್ಲದಿರುವುದು ಮೈನಸ್. ಬೇಸರಿಸಿಕೊಳ್ಳದೇ ಆರಂಭದ ಅರ್ಧ ಗಂಟೆ ಸಹಿಸಿಕೊಂಡರೆ, ಮುಂದೆ ಸಿನಿಮಾ ಮುಗಿಯುವವರೆಗೆ ಸೀಟಿನ ತುದಿಗೆ ಕುಳಿತು, ಉಗುರು ಕಚ್ಚುವಂತೆ ಮಾಡುವ ಕಥೆ ಚಿತ್ರದ ಪ್ಲಸ್.

ರವಿ ಶ್ರೀವತ್ಸ ನಿರ್ದೇಶನದ ದಶಮುಖ ಸಿನಿಮಾ ಸಹ ಇದೇ ದಾರಿಯಲ್ಲಿ ಬಂದಿತ್ತು. ಒಂದು ಕೊಲೆಯ ಸುತ್ತ ತನಿಖಾಧಿಕಾರಿಗಳ ಹತ್ತಾರು ಯೋಚನೆಗಳನ್ನಾಧರಿಸಿ, ಒಂದೇ ಕೊಠಡಿಯಲ್ಲಿ ಹತ್ತು ಪಾತ್ರಗಳ ನಡುವೆ ನಡೆಯುವ ಸಂಭಾಷಣೆಯ ಕಥೆ ದಶಮುಖ ಚಿತ್ರದ್ದಾಗಿತ್ತು. ದಶಮುಖ ಇಂಗ್ಲಿಷಿನ “೧೨ ಆಂಗ್ರಿ ಮೆನ್” ಸಿನಿಮಾದಿಂದ ಪ್ರೇರಣೆ ಪಡೆದಿತ್ತು. ಆಟಗಾರ ಸಿನಿಮಾ ಸಹ ಕನ್ನಡದ ರೇಗ್ಯೂಲರ್ ಪ್ಯಾಟರ್ನ್‌ನಲ್ಲಿ ಇಲ್ಲದ್ದರಿಂದ ಇದು ಇಂಗ್ಲಿಷ್ ಸಿನಿಮಾವೊಂದರಿಂದ ಸ್ಫೂರ್ತಿ ಪಡೆದ ಕಥೆ ಎನ್ನುವ ಮಾತುಗಳು ಕೇಳಿ ಬಂದಿವೆ. ಕಥೆ ಹಾಗೆಯೇ ಇದೆ. ಆದರೆ ಚಿತ್ರಕಥೆ ಅಪ್ಪಟ ಕನ್ನಡ ನೆಲದ್ದು ಎನ್ನುವುದು ಸಿನಿಮಾ ನೋಡಿದವರಿಗೆ ಮನದಟ್ಟಾಗುತ್ತದೆ.

First look of

ಆಟಗಾರ, ಆರಂಭದಲ್ಲಿ ಹಾರರ್ ಸಿನಿಮಾ ಫೀಲ್ ಕಟ್ಟಿಕೊಡುತ್ತದೆ. ಕ್ರಮೇಣ ಸಸ್ಪೆನ್ಸ್ ಹಾದಿಗೆ ಹೊರಳುತ್ತದೆ. ಕೊನೆಗೆ ಸಮಾಜಮುಖಿಯಾಗಿ ಮುಕ್ತಾಯ ಕಾಣುತ್ತದೆ. ಆ ಒಂಟಿ ಮನೆಯಲ್ಲಿ ಹತ್ತು ತಲೆಗಳಿದ್ದರೂ, ಅವುಗಳ ಹಿಂದೆ ಹತ್ತಾರು ತಲೆಗಳು ಕೆಲಸ ಮಾಡುತ್ತಿರುತ್ತವೆ.

ಅಗೋಚರ ಮುಖ, ಹಾಗೂ ಕಂಚಿನ ಕಂಠದ ಧ್ವನಿಯೊಂದು ಈ ಹತ್ತು ಜನರನ್ನ ಆಯ್ಕೆ ಮಾಡಿ ಒಂಟಿ ಮನೆಯ ದಾರಿ ತೋರಿಸುತ್ತದೆ. ಗೆದ್ದವರಿಗೆ ಮಾತ್ರವಲ್ಲ, ಸೋತವರಿಗೂ ದುಡ್ಡು. ಹಾಗಾಗಿ ಪತ್ರಕರ್ತ, ವೈದ್ಯ, ಶಿಕ್ಷಕಿ, ಸಿನಿಮಾ ನಟಿ, ರೂಪದರ್ಶಿ, ಕಾಡಿನ ಹುಡುಗಿ, ಅಡುಗೆ ಭಟ್ಟ, ಹಳ್ಳಿ ಹುಡುಗಿ, ಮಾಡಲಿಂಗ್ ಕ್ಷೇತ್ರದ ಫೋಟೋ ಗ್ರಾಫರ್ ಹಾಗೂ ಸ್ಲಂನಿಂದ ಬಂದ ಸ್ಮಗ್ಲರ್ ನಡುವೆ ಆಟ ಶುರುವಾಗುತ್ತದೆ.

ಚಿರಂಜೀವಿ ಸರ್ಜಾ, ಮೇಘನಾ ರಾಜ್, ಬಾಲಾಜಿ ಮನೋಹರ್, ಪ್ರಕಾಶ್ ಬೆಳವಾಡಿ, ಅಚ್ಯುತ್ ರಾವ್, ಪಾರುಲ್ ಯಾದವ್, ಅನು ಪ್ರಭಾಕರ್, ಭಾವನಾ, ಸುನೇತ್ರ ಹಾಗೂ ಸಾಧುಕೋಕಿಲಾ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಸಾಧುಕೋಕಿಲ ಸಹ ಕೊಂಚ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ ಎಂದರೆ ನಂಬಲೇಬೇಕು. ಉಳಿದಂತೆ ಅನಂತನಾಗ್, ರವಿಶಂಕರ್, ರೋಹಿತ್, ಆರೋಹಿತಗೌಡ ನೆನಪಲ್ಲುಳಿಯುತ್ತಾರೆ. ಸತ್ಯ ಹೆಗಡೆ ಕ್ಯಾಮರಾ ಕೆಲಸದ ಬಗ್ಗೆ ಮಾತಾಡೋ ಹಾಗಿಲ್ಲ. ರೋಹಿತ್ ಪಡಕಿ ಬರೆದಿರುವ ಸಂಭಾಷಣೆ ಆಟಗಾರನಿಗೆ ಸಮಯೋಚಿತ. ಅನೂಪ್ ಸೀಳಿನ್ ಒಳ್ಳೇಯ ಹಾಡುಗಳನ್ನ ಕೇಳಿಸಿದ್ದಾರೆ. ಕೆ.ಎಂ.ಚೈತನ್ಯ ಸಹ ಬಹಳ ದಿನಗಳ ನಂತರ ಒಂದೊಳ್ಳೆ ಸಿನಿಮಾ ನಿರ್ದೇಶಿಸಿದ್ದಾರೆ.

ಕಥೆಯ ಬಗ್ಗೆ ಒಂಚೂರು ಹೇಳೋದಾದ್ರೆ,  ಆ ಒಂಟಿ ಮನೆಯಲ್ಲಿ ಹತ್ತು ತಲೆಯ ರಾವಣನ ಬೊಂಬೆಯೊಂದಿದೆ. ಇನ್ನೇನು ಆಟ ಆರಂಭವಾಗಬೇಕು ಅನ್ನುವಷ್ಟರಲ್ಲಿ ಷೋಗೆ ಬಂದವರ ಪೈಕಿ ನಾಲ್ವರು ಹೆಣವಾಗುತ್ತಾರೆ. ಅಷ್ಟೊತ್ತಿಗೆ ರಾವಣನ ಹತ್ತು ತಲೆಗಳಲ್ಲಿ ೪ ತಲೆಗಳು ಮಾಯವಾಗಿರುತ್ತವೆ. ಸಿನಿಮಾ ಮುಗಿಯುವ ಹೊತ್ತಿಗೆ ರಾವಣನ ಎಂಟು ತಲೆಗಳು ಮಾಯ! ಎಲ್ಲರೂ ಮಣ್ಣು ಸೇರುತ್ತಾರೆ. ಏನಾಗಿತ್ತು ಅವರಿಗೆ? ಅವರನ್ನ ಕೊಂದದ್ದು ಯಾರು? ಕೊನೆಗೆ ಉಳಿದ ಇಬ್ಬರ ಕಥೆ ಏನು? ಮುಂದೆ ಅವರಿಗೇನಾಯ್ತು? ನಿಜವಾದ ಆಟಗಾರ ಯಾರು? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಬೇಕಾದರೆ ಆಟಗಾರನನ್ನು ನೋಡಬೇಕು.

 

Add Comment

Leave a Reply