Quantcast

‘ಲೇಟೆಸ್ಟ್ ಟೈಲರ್ಸ್ ಎಂಬ ಅಡ್ಡೆಯೂ, ಶೋಲೆ ಎಂಬ ಸಿನಿಮಾವೂ…’

gs1-75x100

ಗೊರೂರು ಶಿವೇಶ್

ನಮ್ಮೂರಿನ ಮುಂದೆ ಹರಿದುಹೋಗಿ ಕಾವೇರಿ ನದಿಯನ್ನು ಸೇರುತ್ತಿದ್ದ ಹೇಮಾವತಿ ನದಿಗೆ ಅಣೆಕಟ್ಟು ಕಟ್ಟುತ್ತಿದ್ದ ಸಮಯ. ಅಣೆಕಟ್ಟಿನ ನಿರ್ಮಾಣಕ್ಕೆ ಬಂದು ಸೇರಿದ ಸಾವಿರಾರು ಜನ ಕಾರ್ಮಿಕರು, ಅಧಿಕಾರಿಗಳು, ಗುತ್ತಿಗೆದಾರರು ಬಂದು ಸೇರಿ ಪುಟ್ಟ ಗ್ರಾಮವನ್ನು ವಾಣಿಜ್ಯ ಕೇಂದ್ರವಾಗಿಸಿದರು. ಅವರನ್ನು ಆಧರಿಸಿ ಊರ ಮುಖ್ಯರಸ್ತೆಯಗುಂಟ ಚಿಲ್ಲರೆ ಅಂಗಡಿಗಳು, ಹೋಟೆಲ್ಗಳು, ಬಾರ್ಗಳು ತೆರೆಯುತ್ತಾ ಹೋದಂತೆ, ಊರೊಳಗೆ ಖಾಲಿಯಿದ್ದ ರೂಂಗಳಿಗೆ ಬೇಡಿಕೆ ಬಂತು. ಇದೇ ರೀತಿ ವರಾಂಡದ ಬಲಬದಿಯಲ್ಲಿದ್ದ ನಮ್ಮ ಮನೆಯ ಖಾಲಿ ಕೊಠಡಿಗೆ ಬಂದು ಸೇರಿದವರೆ ‘ಲೇಟೆಸ್ಟ್ ಟೈಲರ್’ ಸಹೋದರರು. ಐದು ವರ್ಷದ ದಿನೇಶ್ನಿಂದ ಹಿಡಿದು ಇಪ್ಪತ್ತೈದು ವರ್ಷದ ರಾಮಚಂದ್ರನ ನಡುವೆ ಮತ್ತೆ ಮೂವರು ಸೋದರರು. ಆ ಪಂಚ ಸೋದರರ ವಿವಿಧ ವಯೋಮಾನಕ್ಕೆ ತಕ್ಕಂತೆ ಸ್ನೇಹಿತರು. ಅಂಗಡಿಗೆ ಲಗ್ಗೆ ಇಡುತ್ತಿದ್ದ ಅವರೆಲ್ಲರೂ ಅಂಗಡಿಯನ್ನು ಪಡ್ಡೆಗಳ ಅಡ್ಡೆಯಾಗಿಸಿ ಹರಟೆಯ ತಾಣವನ್ನಾಗಿಸಿದ್ದ ಕಾರಣ ಅಂಗಡಿ ಸದಾ ಗಿಜಿಗುಡುತ್ತಿತ್ತು. ಆಗಾಗ್ಗೆ ಕುತೂಹಲದಿಂದ ಅಲ್ಲಿಗೆ ಇಣುಕು ಹಾಕುತ್ತಿದ್ದ ನನಗೆ ಅವರ ಸಂಭಾಷಣೆಯನ್ನು ಕೇಳುವ ಅವಕಾಶ.

ಈ ಸಹೋದರರಿಗೆ ಮೂವರು ಸಹೋದರಿಯರು. ಅವರಲ್ಲಿ ಒಬ್ಬಾಕೆ ಮದುವೆಯಾಗಿ ಹಾಸನದಲ್ಲಿ ನೆಲೆಸಿದರು. ಆ ಕುಟುಂಬದ ವಾಂಚಲ್ಯ ಹೇಗಿತ್ತಂದರೆ ವಿಶೇಷವಾದ ಯಾವುದೇ ಅಡುಗೆಯಾದರೂ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೊತ್ತಾಡುತ್ತಿದ್ದರು. ಐವರು ಸಹೋದರರಲ್ಲಿ ಒಬ್ಬರಲ್ಲ ಒಬ್ಬರು ಈ ಡ್ಯೂಟಿಗೆ ನಿಯೋಜಿತರಾಗುತ್ತಿದ್ದರು.

ಹೀಗಿರುತ್ತಿರಲಾಗಿ ಹಾಸನಕ್ಕೆ ಹೋಗಿಬಂದ ರಾಮಚಂದ್ರನು ಒಂದು ವಿಶೇಷ ಸುದ್ದಿಯನ್ನು ಹೊತ್ತುತಂದನು. ಅದುವೆ ಹಾಸನದ ಇಂಪೀರಿಯಲ್ ಟಾಕೀಸ್ಗೆ ‘ಶೋಲೆ’ ಎಂಬ ಹಿಂದಿ ಚಿತ್ರ ಬಂದ ಸುದ್ದಿ. ಅದೊಂದು ಅದ್ಭುತ ಚಿತ್ರವೆಂದು ಪರದೆಯು ನಮ್ಮೂರಿನ ಟೆಂಟ್ಸಿನಿಮಾದ ಪರದೆಗಿಂತ ಸಿಕ್ಕಾಪಟ್ಟೆ ದೊಡ್ಡದೆಂದು, ಟ್ರೇನ್ ಹೋಗುತ್ತಿದ್ದರೆ ತಲೆಯ ಮೇಲೆ ಹೋದಂತೆ ಆಗುತ್ತದೆ ಎಂಬುದು ಆ ಸುದ್ದಿ. ಒಂದೆರಡು ದಿನಗಳ ನಂತರ ಬೆಂಗಳೂರಿಗೆ ಹೋಗಿಬಂದ ಎರಡನೇ ಸೋದರ ಪುಂಡಲಿಕನು ನಾನು ಬೆಂಗಳೂರಿನ ‘ಸಂತೋಷ್’ ಎಂಬ ಹೊಸ ಸಿನಿಮಾ ಮಂದಿರದಲ್ಲಿ ಆ ಚಿತ್ರವನ್ನು ನೋಡಿದೆನೆಂದು ಅಲ್ಲಿ ಪರದೆ ಊರಗಲವಿದೆಯೆಂದು, ಕುದುರೆಗಳು ಓಡುತ್ತಿದ್ದರೆ ಎದೆಯ ಮೇಲೆ ಓಡಿದಂತೆ ಸೌಂಡ್ ಎಫೆಕ್ಟ್ ಇದೆಯೆಂದು ವಿವರಿಸಿದ.

ಅದಕ್ಕೆ ಪ್ರತಿಕ್ರಿಯಿಸಿದ ನಮ್ಮೂರಿನ ಕಾಲೋನಿಯಲ್ಲಿ ನೆಲೆಸಿದ್ದ ಇಂಗ್ಲೀಷ್ನಲ್ಲಿ ಪರಿಣತಿ ಹೊಂದಿ ಕ್ರಿಕೆಟ್ ಕಾಮೆಂಟ್ರಿಯನ್ನು ಮಾಡಿ ‘ಬಟ್ಲರ್’ ಎಂದು ಖ್ಯಾತನಾಗಿದ್ದ ಶಿವಕುಮಾರನು ‘ಅದು 70ಎಂಎಂ ಸ್ಕ್ರೀನ್ ಹಾಗೂ ಸ್ಟಿರಿಯೊಪೋನಿಕ್ ಸೌಂಡ್’ ಅದನ್ನು ಆನಂದಿಸಬೇಕಾದರೆ ಬೆಂಗಳೂರಿನ ಸಂತೋಷ ಚಿತ್ರಮಂದಿರದಲ್ಲೆ ನೋಡಬೇಕೆಂದು ಆ ಚಿತ್ರವು ‘ಸವೆನ್ಸಮುರಾಯ್’ ಎಂಬ ಜಪಾನಿ ಚಿತ್ರದ ಪ್ರೇರಣೆಯಿಂದ ತೆಗೆದ ಚಿತ್ರವೆಂದು ತಿಳಿಸಿದ. ಈ ಚಿತ್ರವು ಬೆಂಗಳೂರಿನ ಸಮೀಪದ ರಾಮನಗರದಲ್ಲಿ ಸುಮಾರು 2 ವರ್ಷಗಳ ಕಾಲ ಚಿತ್ರೀಕರಣ ನಡೆದಿದೆ ಎಂಬ ವಿವರಣೆ ಕೊಟ್ಟ. ಆಗ ಮತ್ತೊಬ್ಬ ಲೇಟೆಸ್ಟ್ ಸಹೋದರ ಜಯಪ್ರಕಾಶನು ‘ಅದೇ ರೀತಿಯ ಕಥೆಯನ್ನು ಒಂದೆರಡು ವರ್ಷಗಳ ‘ಕೊಟ್ಟೆಸಿಕ್ಕೆ’ ಎಂಬ ಚಿತ್ರದಲ್ಲಿ ನೋಡಿರುವುದಾಗಿ, ಆದರೆ ಅದಕ್ಕಿಂತ ಇದು ತುಂಬಾ ಚೆನ್ನಾಗಿರುವುದಾಗಿ ತಿಳಿಸಿದ. ಜೊತೆಗೆ ಅಸ್ರಾಣಿ ಹಾಗೂ ಜಗದೀಪ್ ಅವರ ಜೈಲ್ ಕಾಮಿಡಿ ಚೆನ್ನಾಗಿದೆ ಎಂದು ಆ ಸನ್ನಿವೇಶಗಳನ್ನು ವಿವರಿಸುತ್ತ ಅಲ್ಲಿದ್ದವರನ್ನು ನಗಾಡುವಂತೆ ಮಾಡಿದ್ದ.

sholay-poster

ಮುಂದೆ ನಮ್ಮೂರಿನ ಪಡ್ಡೆಗಳು ಆ ಸಿನಿಮಾಕ್ಕೆ ಒಬ್ಬೊಬ್ಬರಾಗಿ ಲಗ್ಗೆ ಇಟ್ಟು, ‘ಅರೇ ಓ ಸಾಂಬ ಹೇ ಕಿತನೆ ಆದ್ಮಿ ರೇ’ ಎಂದೋ ‘ಬಸಂತಿ ಇನ್ ಕುತ್ತೆಕೋ ಸಾಮ್ನೆ ಮತ್ ನಾಚನಾ’ ಮುಂತಾಗಿ ಡೈಲಾಗ್ ಉದುರಿಸುತ್ತಿದ್ದರು. ಇನ್ನೂ ಕೆಲವರು ಹೇ ದೋಸ್ತು ತೀ ಹಮ್ ನಹೀ ಚೋಡೇಂಗೆ’ ಇಲ್ಲವೆ ‘ಮೆಹಬೂಬ ಮೆಹಬೂಬ’ ಹಾಡನ್ನು ಗುನುಗುನಿಸುತ್ತ ರೋಮಾಂಚನ ಅನುಭವಿಸುತ್ತಿದ್ದರು. ಹಾಸನದಲ್ಲಿ ಬಿ.ಎಸ್ಸಿ ಮಾಡುತ್ತಿದ್ದ ಜೊತೆಗೆ ನಮ್ಮೂರಿನಲ್ಲಿ ಪ್ರತಿ ರಾಷ್ಟ್ರೀಯ ಹಬ್ಬದ ದಿನಾಚರಣೆಯಲ್ಲಿ ಬೇಲೂರು ಕೃಷ್ಣಮೂತರ್ಿಯವರ ‘ಕಂಬನಿ, ತ್ಯಾಗಿ, ಆಹುತಿ’ ಮುಂತಾದ ನಾಟಕಗಳಲ್ಲಿ ದುರಂತ ಪಾತ್ರಗಳನ್ನು ಅಭಿನಯಿಸಿ ‘ತ್ಯಾಗಿ ಮಂಜು’ ಎಂದೇ ಪ್ರಸಿದ್ಧಿಯಾಗಿದ್ದ ಮಂಜಣ್ಣನು ತನಗೆ ಆ ಚಿತ್ರದಲ್ಲಿ ಠಾಕೂರ್ ಪಾತ್ರದ ಸಂಜೀವ್ ಕುಮಾರನ ಪಾತ್ರವು ಇಷ್ಟವಾಯಿತೆಂದು ತಿಳಿಸಿದರೆ ಅದೇ ನಾಟಕಗಳಲ್ಲಿ ವಿಲನ್ ಪಾತ್ರ ಮಾಡುತ್ತಿದ್ದ ಪ್ರಕಾಶನು ಮಾಡಿದರೆ ಗಬ್ಬರ್ಸಿಂಗ್ ರೀತಿ ವಿಲನ್ ರೋಲ್ ಮಾಡಬೇಕೇಂದು ಅದರ ಪಾತ್ರಧಾರಿ ಅಮ್ಜದ್ಖಾನನನ್ನು ಹಾಡಿ ಹೊಗಳುತ್ತಿದ್ದನು. ಗಂಭೀರವಾದ ದುರಂತ ಪಾತ್ರಗಳಿಗೆ ಹೆಸರಾಗಿದ್ದ ಸಂಜೀವಕುಮಾರನನ್ನು ಅಪಾರವಾಗಿ ಮೆಚ್ಚಿದ್ದ ಮಂಜಣ್ಣನು ಸಂಜೀವ್ ಕುಮಾರ್ ಹೇಮಾಮಾಲಿನಿಯನ್ನು ಮದುವೆಯಾಗಲು ಇಷ್ಟಪಟ್ಟಿದ್ದನೆಂದು ಆದರೆ ಹೇಮಾಮಾಲಿನಿ ನಿರಾಕರಿಸಿದ ಕಾರಣಕ್ಕಾಗಿ ಸಿನಿಮಾದಲ್ಲಿ ಇಬ್ಬರು ಒಟ್ಟಾಗಿ ಅಭಿನಯಿಸಿರುವ ದೃಶ್ಯಗಳೇ ಇಲ್ಲವೆಂದು ಇದರ ಲಾಭ ಧರ್ಮೇಂದ್ರನಿಗಾಗಿ ಹೀರೋ ಆಗಿ ಮಿಂಚಿದ್ದನೆಂದು ತನ್ನ ಹೀರೋವಿನ ದುರಾದೃಷ್ಟಕ್ಕೆ ಮರುಗುತ್ತಿದ್ದನು.

ಇನ್ನು ಪ್ರಕಾಶನು ‘ಗಬ್ಬರ್ಸಿಂಗ್’ ಪಾತ್ರವನ್ನು ಡ್ಯಾನಿ ಮಾಡಬೇಕಾಗಿತ್ತೆಂದು ‘ಧರ್ಮಾತ್ಮ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದ ಕಾರಣಕ್ಕೆ ಈ ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಗಲಿಲ್ಲವೆಂದು ಅದರ ಲಾಭ ಪಡೆದ ಅಮ್ಜದ್ಖಾನ್ ಅದ್ಭುತವಾಗಿ ಮಿಂಚಿದ್ದಾನೆಂದು ‘ಅದೃಷ್ಟ’ದ ಆಟವನ್ನು ಮೀರಿಸುತ್ತದ್ದ.
ಹೀಗೆ ಪ್ರತಿಯೊಬ್ಬರು ಸಿನಿಮಾವನ್ನು ಹಾಡಿ ಹೊಗಳಲು ಸಿನಿಮಾವನ್ನು ನೋಡಲೇಬೇಕೆಂಬ ಆಸೆಯು ಹೆಚ್ಚಾಗತೊಡಗಿತು. ನಮ್ಮ ಮನೆಯಲ್ಲಿ ಕೇಳೋಣವೆಂದರೆ ಅವರು ನಮ್ಮೂರಿನ ಟೂರಿಂಗ್ ಟೆಂಟ್ನಲ್ಲಿ ಬರುತ್ತಿದ್ದ ಕನ್ನಡ ಸಿನಿಮಾ ಹೊರತು ಬೇರೆ ಸಿನಿಮಾ ನೋಡರಿಯರು. ಹೀಗಾಗಿ ಹಾಸನಾಂಬ ಜಾತ್ರೆಗೆ ಹಾಸನಕ್ಕೆ ಹೊರಟು ಬಂದರೂ ಶೋಲೆ ನೋಡಬೇಕೆಂಬ ನನ್ನ ಮನವಿ ತಿರಸ್ಕರಿಸಿ ಅದೇ ಬಿಡುಗಡೆಯಾಗಿದ್ದ ಡಾ. ರಾಜ್ರವರ ‘ಮಯೂರ’ ಚಿತ್ರವನ್ನು ನೋಡಿ ‘ಅಬ್ಬಾ ಸಿನಿಮಾವೆ’ ಎಂದು ಹಾಡಿ ಹೊಗಳಿ ಚಪ್ಪರಿಸಿದರು.

ಶೋಲೆ ನೋಡುವ ನನ್ನ ಆಸೆ ಕ್ಷೀಣವಾಗುತ್ತಿದ್ದಂತೆ ನಾಲ್ಕನೇ ಲೇಟೆಸ್ಟ್ ಸಹೋದರನಾದ ನನ್ನ ವಾರಿಗೆಯ ಕೃಷ್ಣಮೂರ್ತಿಯೂ ಆ ಚಿತ್ರವೂ ಮೂರುವರೆ ಗಂಟೆಯ ದೀರ್ಘ ಚಿತ್ರವಾದ್ದರಿಂದ ಎರಡು ಇಂಟರ್ವೆಲ್ ಎಂದೂ ಅದಕ್ಕಾಗಿ ಬೇಗನೆ ಸಿನಿಮಾ ಪ್ರಾರಂಭವಾಗುತ್ತಿದೆಯೆಂದು ತಿಳಿಸಿ, ಹಾಸನದಲ್ಲಿ ಇನ್ನೊಂದು ವಾರದಲ್ಲಿ ಚಿತ್ರವನ್ನು ತೆಗೆಯುತ್ತಾರೆಂದು ಸುದ್ದಿ ತಿಳಿಸಿದ.

ಇನ್ನೂ ನೋಡಲೇಬೇಕೆಂದು ನಿಶ್ಚಯಿಸಿದ ನಾನು ಭಂಡ ಧೈರ್ಯ ಮಾಡಿ ನಾವು ಇಟ್ಟಿದ್ದ ಚಿಲ್ಲರೆ ಅಂಗಡಿಯಲ್ಲಿ ಹಣವನ್ನು ಕದ್ದವನಾಗಿ ಬಸ್ಸ್ಟಾಂಡ್ಗೆ ಬಂದೆನು. ಆದರೆ ಅಂದೇ ಬಸ್ಸು ಬಾರದಿರಬೇಕೆ. ವಾಪಸ್ ಹಿಂತಿರುಗಬೇಕೆನ್ನುವಷ್ಟರಲ್ಲಿ ಕೊನೆಗೂ ಬಸ್ ಬಂದು ಹಾಸನ ತಲುಪಿ ನಾನು ಚಿತ್ರ ಮಂದಿರವನ್ನು ಅರಸಿ ತಲುಪುವಷ್ಟರಲ್ಲಿ ಟಾಕೀಸಿನ ಗೇಟ್ ಹಾಕಿತ್ತು. ಗೇಟ್ಕೀಪರ್ ಸಿನಿಮಾ ಪ್ರಾರಂಭವಾಗಿ ಮುಕ್ಕಾಲುಗಂಟೆ ಆಗಿದೆಯಂದು ತಿಳಿಸಿದರೂ ಬಿಡದೆ ಒಳಹೋಗಿ ಆಗಲೇ ಕ್ಯಾಶ್ಕೌಂಟರ್ನಲ್ಲಿ ಹಣ ಎಣಿಸುತ್ತಿದ್ದವನ ಬಳಿ ಟಿಕೇಟ್ ಪಡೆದು ಒಳಹೋಗುವಷ್ಟರಲ್ಲಿ ಈಗಾಗಲೇ ಚಿತ್ತಬಿತ್ತಿಯಲ್ಲಿ ಮೂಡಿದ್ದ ಟ್ರೈನಿನ ದರೋಡೆ, ಜೈಲಿನ ದೃಶ್ಯಗಳೆಲ್ಲ ಮುಗಿದು ಸಿನಿಮಾವು ರಾಮ್ಘರ್ ಹಳ್ಳಿಯ ಕಥಾಸಂದರ್ಭವನ್ನು ಪ್ರವೇಶಿಸಿತ್ತು. ನಿರಾಶೆಯಾದರೂ ಚಿತ್ರವನ್ನು ನೋಡುತ್ತಾ ತಲ್ಲೀನನಾಗಿ ಹೋದೆನು.

ರಾಮ್ ಘರ್ ಎಂಬ ದರೋಡೆ ಕೋರರಿಂದ ಪೀಡಿತವಾದ ಹಳ್ಳಿಯ ರಕ್ಷಣೆಗೆ ನಿಲ್ಲುವ ಠಾಕೂರ್ (ಸಂಜೀವ್ಕುಮಾರ್) ಅವರೆದುಗಿನ ಹೋರಾಟದಲ್ಲಿ ತಮ್ಮ ಕುಟುಂಬದ ಜೊತೆಗೆ ತನ್ನ ಕೈಗಳನ್ನು ಕಳೆದುಕೊಳ್ಳುತ್ತಾನೆ. ಮುಂದೆ ಆತ ಕರೆತರುವ ವೀರು (ಧಮೇಂದ್ರ) ಮತ್ತು ಜಯ್ (ಅಮಿತಾಬ್) ಊರವರ ವಿಶ್ವಾಸ ಗಳಿಸುವುದರ ಜೊತೆಗೆ ಡಕಾಯಿತ ಗಬ್ಬರ್ಸಿಂಗ್ನನ್ನು (ಅಮ್ಜದ್ಖಾನ್) ಬಗ್ಗು ಬಡಿಯುವ ಕಥೆ ಶೋಲೆ ಚಿತ್ರದ್ದು. ಡಕಾಯಿತಿ ಕಥೆಯನ್ನು ಹೊಂದಿರುವ ಅನೇಕ ಚಿತ್ರಗಳು ಬಂದಿದ್ದರೂ ಚಿತ್ರ ಗೆದ್ದದ್ದು ಉಸಿರು ಬಿಗಿಹಿಡಿಯುವ ಹಾಗೂ ನವರಸವನ್ನು ಹದವಾಗಿ ಬೆರೆಸಿದ ಚಿತ್ರಕಥೆ (ಸಲೀಂಜಾವಿದ್) ಹಾಗೂ ಬಿಗಿಯಾದ ನಿರ್ದೇಶನದಿಂದ (ರಮೇಶ್ಸಿಪ್ಪಿ).

ಚಿತ್ರ ಮುಗಿಸಿ ಬಂದಾಗ ನನ್ನ ಮನದಲ್ಲಿ ಸ್ಥಿರವಾಗಿ ನಿಂತದ್ದು ಅಮಿತಾಬ್ರ ಅಭಿನಯ ಎರಡೂ ಬದಿಯಲ್ಲಿ ಹೆಡ್ ಮಾತ್ರ ಇರುವ ನಾಣ್ಯ ಪ್ರತಿಬಾರಿ ಆತನನ್ನು ಗೆಲ್ಲಿಸುವುದು ಮತ್ತು ಅಮಿತಾಬ್ ಮೌತ್ ಆರ್ಗನ್ ನುಡಿಸುವಾಗ ಜಯಬಾಧುರಿ ದೀಪವನ್ನು ನಂದಿಸುತ್ತಾ ಹೋಗುವ ದೃಶ್ಯಗಳು. ಇಂದಿಗೂ ಶೋಲೆ ಚಿತ್ರ ಬಿಡುಗಡೆಯಾಗಿ 40 ವರ್ಷಗಳು ಕಳೆದಿದೆ. ಚಿತ್ರದ ನೆನಪಾದೊಡನೆ ಹಳೆಯ ನೆನಪುಗಳು ಮತ್ತೆ ಮೂಡುತ್ತವೆ.

Add Comment

Leave a Reply