Quantcast

’ಲವ್ ಯು ಆಲಿಯ’, ನೋಡಿಬಂದ ಮೇಲೆ…

download2-150x1501

-ಚಿತ್ರಪ್ರಿಯ ಸಂಭ್ರಮ್

hqdefault
ಇಂದ್ರಜಿತ್ ಲಂಕೇಶ್ ಬಹಳ ದಿನಗಳ ನಂತರ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದರೂ ಉತಮ ಸಿನಿಮಾವನ್ನೇ ಮಾಡಿದ್ದಾರೆ. ಸಂಸಾರದ ಕಥೆಯನ್ನ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರಕ್ಕೆ ಒಂಚೂರು ಮೈಲೇಜ್ ನೀಡಬೇಕೆನ್ನುವ ನಿಟ್ಟಿನಲ್ಲಿ ಸುದೀಪ್ ಅವರ ಸಂಸಾರದ ಕಥೆಯನ್ನ ಪ್ರೇಕ್ಷಕರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಸುದೀಪ್ ಕೂಡಾ ಪತ್ನಿ ಪ್ರಿಯಾ, ಮಗಳು ಸಾನ್ವಿ ಬಗ್ಗೆ ಮಾತಾಡಿದಾರೆ. ಶೂಟಿಂಗ್ ಮೊದಲೇ ಆಗಿತ್ತು. ಹಾಗಾಗಿ ಸುದೀಪ್ ಒಪ್ಪಿಕೊಂಡಿರಬೇಕು. ಸಿನಿಮಾ ಈಗ ಬಿಡುಗಡೆಯಾಗಿದೆ. ಸುದೀಪ್ ಕೌಟುಂಬಿಕ ವಿಚಾರ ಚಿತ್ರಕ್ಕೆ ಪ್ಲಸ್ಸೇ ಆದರೂ ಸುದೀಪ್ ಕೆರಿಯರ್ಗೆ ಮಾತ್ರ ಮೈನಸ್ ಅನ್ನುವ ಹಾಗಿದೆ.

ಕಿಚ್ಚ ಸುದೀಪ್ ಸಂದರ್ಶನದ ಮೂಲಕವೇ ತೆರೆದುಕೊಳ್ಳುವ ಸಿನಿಮಾ, ಸಂಸಾರ, ಹೆಂಡತಿ, ಮಗಳು, ಮಗಳ ಬಾಯ್ ಫ್ರೆಂಡ್, ಮದುವೆವರೆಗೂ ಹೋಗುತ್ತೆ. ಸುದೀಪ್ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಸಿನಿಮಾದಲ್ಲಿ ಸುದೀಪ್ ಕೊಟ್ಟಿರುವ ಉತ್ತರಗಳು ಪ್ರಾಮಾಣಿಕವೇ ಎನ್ನುವ ಸಂಶಯ ಅವರ ಈಗಿನ ವಿವಾಹ ವಿಚ್ಛೇದನ ವಿವಾದ ಕುರಿತು ಕೇಳಿರುವ ಎಲ್ಲರಿಗೂ ಕಾಡುತ್ತದೆ.

ಸ್ಟೈಲಿಶ್ ಡೈರೆಕ್ಟೆರ್ ಎಂದೇ ಕರೆಸಿಕೊಳ್ಳುವ ಇಂದ್ರಜಿತ್ ತಮ್ಮ ಹಿಂದಿನ ಎಲ್ಲ ಸಿನಿಮಾಗಳಿಗಿಂತ ಇಲ್ಲಿ ಪ್ರಬುದ್ಧರಾಗಿದ್ದಾರೆ ಎನಿಸುತ್ತದೆ. ಮೋನಾಲಿಸಾ, ಲಂಕೇಶ್ ಪತ್ರಿಕೆ, ಐಶ್ವರ್ಯ ಸಿನಿಮಾಗಳಂತೆ ಇಲ್ಲೂ ಸಖತ್ ಸ್ಟೈಲಿಶ್ ಸೀನ್ಗಳಿವೆ. ಹಿಂದಿನ ಸಿನಿಮಾಗಳಲ್ಲಿ ಗಟ್ಟಿ ಕಥೆಗಿಂತ ದೃಶ್ಯ ವೈಭವಕ್ಕೆ ಆದ್ಯತೆ ಎದ್ದು ಕಾಣುತ್ತಿತ್ತು. ಲವ್ ಯು ಆಲಿಯಾದಲ್ಲಿ ಎರಡಕ್ಕೂ ಇಂದ್ರಜಿತ್ ಆದ್ಯತೆ ನೀಡಿ ಗೆದ್ದಿದ್ದಾರೆ ಎನ್ನಬಹುದು.

ಗಂಡ-ಹೆಂಡತಿ ಮಧ್ಯೆ ಇಗೋ ಬಂದರೆ ಇಬ್ಬರೂ ಪರಸ್ಪರ ಗೋ ಎನ್ನುವ ಹಂತ ತಲುಪಿ ಡೈವರ್ಸ್ ದಾರಿ ಹಿಡಿಯುತ್ತಾರೆ. ಇದು ಮಕ್ಕಳು ಮದುವೆ ವಯಸ್ಸಿಗೆ ಬಂದ ಮೇಲೂ ನಡೆಯುತ್ತೆ ಎನ್ನುವುದನ್ನ ಇಂದ್ರಜಿತ್ ಹೇಳಿದ್ದಾರೆ. ಪತಿ-ಪತ್ನಿಯರ ಈ ಇಗೋ ಮಕ್ಕಳ ಮನಸ್ಸಿನ ಮೇಲೆ ಬೀರುವ ಪರಿಣಾಮ ಎಂಥದ್ದು? ಅದಕ್ಕೆ ಸಂಸಾರ ಹೇಗಿರಬೇಕು ಎಂಬುದನ್ನ ಹೇಳಿದ್ದಾರೆ. ಅಫ್ ಕೋರ್ಸ್, ಇದು ಮಹಿಳಾ ಪ್ರೇಕ್ಷಕರನ್ನ ಹಿಡಿದಿಡುತ್ತದೆ ಕೂಡಾ.

ದಿನಕ್ಕೆ ಹತ್ತಾರು ಜೀವಗಳನ್ನ ಉಳಿಸುವುದೇ ಜೀವನ ಎನ್ನುವ ಡಾಕ್ಟರ್. ಗಂಡನೇ ಜೀವ ಎನ್ನುವ ಡಾಕ್ಟರ್ನ ಹೆಂಡತಿ. ಜೀವ ಉಳಿಸುವ ಕೆಲಸದಲ್ಲಿ ಕುಟುಂಬಕ್ಕೆ ಸಮಯ ನೀಡಲಾಗದ ಡಾಕ್ಟರ್ನ ಪರಿಸ್ಥಿತಿ. ಇದನ್ನ ನಿಷ್ಕಾಳಜಿ ಎನ್ನುವ ಡಾಕ್ಟರ್ನ ಹೆಂಡತಿ. ಬೇರೆ ಜೀವನವೇ ಗತಿ ಎನ್ನುವ ನಿರ್ಧಾರ ಎಲ್ಲವೂ ವಯಸ್ಸಿಗೆ ಬಂದ ಮಗಳು ಆಲಿಯಾ ಮುಂದೆಯೇ ನಡೆಯುತ್ತದೆ. ಬೇರೆಯಾಗುತ್ತಾರೆ. ಹಾಗಾಗಿ ಮಗಳೂ ಕೂಡಾ ಸ್ವತಂತ್ರ. ಇಲ್ಲಿರಬೇಕೋ? ಅಲ್ಲಿಗೆ ಹೋಗಬೇಕೋ? ಮತ್ತೊಂದೆಡೆ ವಾಸಿಸಬೇಕೋ? ಯಾವುದು ಸುರಕ್ಷಿತ? ಯಾವುದು ಅಪಾಯ? ಎನ್ನುವ ಗೊಂದಲದಲ್ಲಿ ಬಿದ್ದಿರುವ ಹುಡುಗಿಗೆ ಲವ್ ಆಗುತ್ತದೆ. ಆದರೆ ಆಕೆಗೆ ಮದುವೆಯಲ್ಲಿ ನಂಬಿಕೆ ಇಲ್ಲ. ಇದಕ್ಕೆ ಕಾರಣ, ಹೆತ್ತವರ ಬದುಕು.

ಆಲಿಯಾಳನ್ನ ಪ್ರೀತಿಸಿದ ಹುಡುಗ ಕಿರಣ್ ಇದನ್ನೆಲ್ಲ ಅರಿತುಕೊಂಡು ಬೆಂಗಳೂರಿನಲ್ಲಿ ಇರುವ ಆಲಿಯಾಳ ಅಪ್ಪ ಹಾಗೂ ಮುಂಬೈನಲ್ಲಿ ವಾಸಿಸುವ ಅಮ್ಮನನ್ನ ಒಂದುಗೂಡಿಸಲು ಪಡುವ ಕಷ್ಟ, ಅದೂ ಸಾಧುಕೋಕಿಲನಂಥ ಡಾಕ್ಟರ್ ಎದುರು ನರ್ಸ್ ವೇಷ ತೊಟ್ಟು, ನಿತ್ಯವೂ ಬೆಂಗಳೂರಿನಿಂದ ಮುಂಬೈಗೆ ವಿಮಾನಯಾನ ಮಾಡಿ, ಬೇಡವಾಗಿದ್ದರೂ ಪ್ರೇಯಸಿಯ ಅಮ್ಮನಿಂದ ನೃತ್ಯ ಕಲಿಯುವ ನಾಟಕ… ಅಬ್ಬಬ್ಬಾ… ಕೊನೆಗೂ ನಾಯಕ ತನ್ನ ಪ್ರಯತ್ನದಲ್ಲಿ ಗೆಲುವು ಕಾಣುತ್ತಾನೆ. ಪ್ರೀತಿಯನ್ನ ದಕ್ಕಿಸಿಕೊಳ್ಳುತ್ತಾನೆ. ನಾಯಕಿ ಮದುವೆಗೆ ಒಪ್ಪಿಕೊಳ್ಳುವಂತೆ ಮಾಡುತ್ತಾನೆ. ಸಿನಿಮಾ ಸುಖಾಂತ್ಯ.

ಡಾಕ್ಟರ್ ಆಗಿ, ಸಮಾಧಾನದ ಪತಿಯಾಗಿ, ಪ್ರೀತಿಯ ಅಪ್ಪನಾಗಿ ರವಿಚಂದ್ರನ್ ಹೊಂದಿಕೊಂಡಿದ್ದಾರೆ. ಬಹುಶಃ ಅವರನ್ನ ಬಿಟ್ಟರೆ ಮತ್ಯಾರು ಆ ಪಾತ್ರಕ್ಕೆ ಹೊಂದುಕೊಳ್ಳುತ್ತಿದ್ದಿಲ್ಲ ಎನ್ನುವಷ್ಟು ತನ್ಮಯತೆಯಿಂದ ನಟಿಸಿದ್ದಾರೆ ಕೂಡ. ಟಾಲಿವುಡ್ನ ಭೂಮಿಕಾ ಮೊದಲ ಬಾರಿಗೆ ಕನ್ನಡದಲ್ಲಿ ಕಾಣಿಸಿಕೊಂಡು ಅಪ್ತರೆನಿಸುತ್ತಾರೆ. ಚಂದನ್, ಸಂಗೀತಾ ಚವ್ಹಾಣ್ ಫಸ್ಟ್ ಬೌಲ್ನ್ನು ಬೌಂಡರಿ ಗೆರೆ ದಾಟಿಸಿದ್ದಾರೆ. ಸಾಧುಕೋಕಿಲಾ ಕಾಮಿಡಿ ಕಿರಿಕಿರಿ ಎನಿಸಿದರೆ, ರವಿಶಂಕರ್ ಕಾಮಿಡಿ ಕಿಲಕಿಲ ಎನಿಸುತ್ತದೆ. ಜೆಸ್ಸಿಗಿಫ್ಟ್ ಸಂಗೀತದಲ್ಲಿ ಒಂದು ಹಾಡು ಆಪ್ತ. ಸಂತೋಷ ರೈ ಪಾತಾಜೆ ಛಾಯಾಗ್ರಹಣ ಚಿತ್ರದ ಮತ್ತೊಂದು ಪ್ಲಸ್. ಜನಾರ್ಧನ ಮಹರ್ಷಿಯವರ ಕಥೆಯನ್ನ ಇಂದ್ರಜಿತ್ ಲಂಕೇಶ್ ಆದ್ಭುತ ಚಿತ್ರವನ್ನಾಗಿ ಮಾಡಿರುವ ನಿರ್ದೇಶನ ಇಷ್ಟವಾಗುತ್ತದೆ. ಚಿತ್ರದಲ್ಲಿ ನ್ಯೂನ್ಯತೆಗಳೇ ಇಲ್ಲ ಅಂತೇನಿಲ್ಲ. ಇದು ಸಂಸಾರಸ್ಥರಿಗೆ ರುಚಿಸಿದರೂ, ಮಾಸ್ ಆಡಿಯನ್ಸ್ಗೆ ಬೇಕಿರುವ ಅಂಶಗಳನ್ನ ಇಂದ್ರಜಿತ್ ಮರೆತಂತಿದೆ.

ಒಟ್ಟಿನಲ್ಲಿ ಇಂದ್ರಜಿತ್ ಲಂಕೇಶ್, ರವಿಚಂದ್ರನ್ ಸಿನಿಮಾಗಳೆಂದರೆ ಮೂಗು ಮುರಿಯುತ್ತಿದ್ದ ಸಂಸಾರಸ್ಥ ಪ್ರೇಕ್ಷಕವರ್ಗ ನಿಸ್ಸಂಶಯವಾಗಿ ಸಿನಿಮಾ ನೋಡಬಹುದು.

2 Comments

  1. Narasimhamurthy
    September 19, 2015
  2. HARIDASA ACHARYA
    September 18, 2015

Add Comment

Leave a Reply