Quantcast

ಕುರೋಸಾವ meets ಮಾರ್ಕ್ವೆಜ್

ಕುರೋಸಾವ-ಮಾರ್ಕ್ವೆಜ್ ನಡುವೆ ಒಂದು ಚರ್ಚೆ

hrudayashiva

ಹೃದಯಶಿವ

ನೊಬೆಲ್ ಪ್ರಶಸ್ತಿ ವಿಜೇತ ಕಾದಂಬರಿಕಾರ ಗೇಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್ ಹಾಗೂ ಜಪಾನ್ ಮೂಲದ ಪ್ರಖ್ಯಾತ ಚಿತ್ರನಿರ್ದೇಶಕ ಅಕಿರಾ ಕುರೋಸಾವ 1990ರ ಅಕ್ಟೋಬರ್ ತಿಂಗಳ ಒಂದು ದಿನ ಜಪಾನಿನ ಟೋಕಿಯೊದಲ್ಲಿ ಪರಸ್ಪರ ಎದುರಾ ಬದುರಾ ಕೂತು ಸುಮಾರು ಆರು ಗಂಟೆಗಳ ಕಾಲ ಸಿನಿಮಾ, ಪರಮಾಣು ಬಾಂಬ್ ಕುರಿತಂತೆ ಒಂದಿಷ್ಟು ಮಾತಾಡಿದ್ದರು.

film frameಕುರೋಸಾವಾನ ಚಿತ್ರಗಳನ್ನು ಆತ್ಮೀಯವಾಗಿ ಇಷ್ಟಪಡುವ ಮಾರ್ಕ್ವೆಜ್ ಅಷ್ಟೇ ಪ್ರೀತಿಯಿಂದ ಆತನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ವಿಶೇಷವಾಗಿ 1965ರಲ್ಲಿ ತೆರೆಕಂಡ ಕುರೋಸಾವಾನ ‘ರೆಡ್ ಬಿಯರ್ಡ್’ ಚಿತ್ರದ ಬಗ್ಗೆ ಅತೀವವಾದ ಗೌರವ, ಅಭಿಮಾನ ಇಟ್ಟುಕೊಂಡಿದ್ದ ಮಾರ್ಕ್ವೆಜ್, “ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಚಿತ್ರವನ್ನು ಒಟ್ಟು ಆರು ಬಾರಿ ನೋಡಿದ್ದೇನೆ. ಈ ಚಿತ್ರದ ಬಗ್ಗೆ ನನ್ನ ಮಕ್ಕಳೊಂದಿಗೆ ಪ್ರತಿ ದಿನ ಮಾತಾಡಿದ್ದೇನೆ, ಚರ್ಚಿಸಿದ್ದೇನೆ. ಎಲ್ಲಿಯವರೆಗೆ ಅನ್ನುವಿರಾ? ಆ ಮಕ್ಕಳು ಈ ಚಿತ್ರವನ್ನು ನೋಡುವವರೆಗೆ”.

“ಈ ಚಿತ್ರ ನನ್ನ ಮತ್ತು ನನ್ನ ಕುಟುಂಬ ಸದಸ್ಯರ ಫೆವರಿಟ್ ಸಿನಿಮಾ ಅನ್ನುವುದಷ್ಟೇ ಅಲ್ಲದೆ ಚಿತ್ರರಂಗದ ಇತಿಹಾಸದಲ್ಲಿಯೇ ಈ ಚಿತ್ರ ನನ್ನ ಪಾಲಿಗೆ ವಿಶೇಷವಾದ ಚಿತ್ರ” ಎಂದು ಹೇಳುವ ಮಟ್ಟಕ್ಕೆ ಕುರೋಸಾವ ಚಿತ್ರಗಳ ಬಗ್ಗೆ ಮಾರ್ಕ್ವೆಜ್ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಅಂದು ಇವರಿಬ್ಬರ ನಡುವಿನ ಮಾತುಕತೆ ಶುರುವಾಗುವುದು ಸಿನಿಮಾಗಳಿಗೆ ಸಾಹಿತ್ಯವನ್ನು ಬಳಸಿಕೊಳ್ಳುವ ಅಥವಾ ಸಾಹಿತ್ಯ ಕೃತಿಯೊಂದರ ಆಧಾರದ ಮೇಲೆ ಸಿನಿಮಾ ನಿರ್ಮಾಣವಾಗುವ ವಿದ್ಯಮಾನದ ಕುರಿತು. ಅಂದರೆ ಸಿದ್ಧ ಕಾದಂಬರಿಯನ್ನೋ, ಸಿದ್ಧ ಕತೆಯನ್ನೋ, ಸಿದ್ಧ ನಾಟಕವನ್ನೋ ಆಧರಿಸಿ ಚಿತ್ರ ನಿರ್ಮಾಣ ಮಾಡುವ ಪ್ರಕ್ರಿಯೆಯ ಬಗ್ಗೆ…

ವಿಶ್ವ ಸಿನಿಮಾ ಇತಿಹಾಸವನ್ನೇ ಗಮನದಲ್ಲಿಟ್ಟುಕೊಂಡು ನೋಡಿದಾಗ ಒಂದು ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಸಿನಿಮಾವಾಗಿಸುವ ಪ್ರಯತ್ನದಲ್ಲಿ ಎಷ್ಟೋ ಸಲ ನಿರ್ದೇಶಕ ಗೆದ್ದಿರುತ್ತಾನೆ. ಹಾಗೆಯೇ ಎಷ್ಟೋ ಸಲ ಸೋತ ಉದಾಹರಣೆಗಳೂ ಉಂಟು. ಒಂದು ಕಾದಂಬರಿಯನ್ನೋ, ನಾಟಕವನ್ನೋ ತೆರೆಯ ಮೇಲೆ ತರಬೇಕಾಗಿ ಬಂದಾಗ ಸದಾ ದೃಶ್ಯ ಪರಿಕಲ್ಪನೆಯತ್ತ ತುಡಿಯುವ ನಿರ್ದೇಶಕ ಕೆಲವೊಂದು ರಾಜಿಸೂತ್ರಗಳಿಗೆ ಒಳಗಾಗಿ ಕೃತಿಯ ಮೂಲ ಧಾತು ಏನಿರುತ್ತದೆಯೋ ಅದು ಶೇ.ನೂರರಷ್ಟು ಪ್ರಮಾಣದಲ್ಲಿ ಪರದೆಯ ಮೇಲೆ ಮೂಡಿ ಬರುವ ಅವಕಾಶ ತಪ್ಪುತ್ತದೆ. ಅಂತಹ ಸಂದರ್ಭದಲ್ಲಿ ಆ ಕೃತಿಯನ್ನು ರಚಿಸಿದ್ದ ಸಾಹಿತಿಗೆ ಸಹಜವಾಗಿ ಬೇಸರವಾಗುತ್ತದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕುರೋಸಾವ ನಿಜಕ್ಕೂ ಕಿಲಾಡಿ ನಿರ್ದೇಶಕ. ಆತ ಯಾವುದೇ ಕಾದಂಬರಿಯನ್ನೋ ಅಥವಾ ನಾಟಕವನ್ನೋ ಆಧಾರವಾಗಿಟ್ಟುಕೊಂಡು ಸಿನಿಮ ಮಾಡಲು ಹೊರಟಾಗ ಮೂಲ ಕೃತಿಯ ಆಶಯಕ್ಕೆ, ಭಾವನೆಗೆ ಎಲ್ಲೋ ಧಕ್ಕೆ ಉಂಟಾಗದಂತೆ ಕಾಯ್ದುಕೊಳ್ಳುವುದರ ಜೊತೆಗೆ ತನ್ನೊಳಗಿನ ಚಾಣಾಕ್ಷ, ಪರಿಪಕ್ವ ನಿರ್ದೇಶಕನಿಗೂ ಅನ್ಯಾಯವಾಗದ ಹಾಗೆ ಆ ಕೃತಿಯನ್ನು ದೃಶ್ಯರೂಪಕ್ಕೆ ಇಳಿಸಬಲ್ಲವರಾಗಿದ್ದರು. ಈ ಮಾತಿಗೆ ಪುಷ್ಟಿ ನೀಡಬಲ್ಲ ಉದಾಹರಣೆಗಳೆಂದರೆ ವಿಲಿಯಂ ಶೇಕ್ಸ್ ಪಿಯರನ ‘ಮ್ಯಾಕ್ ಬೆತ್’ ಆಧರಿಸಿದ ‘ಥ್ರೋನ್ ಆಫ್ ಬ್ಲಡ್’ ಹಾಗೂ ‘ಕಿಂಗ್ ಲಿಯರ್’ ಆಧರಿಸಿದ ‘ರಾನ್’ ಚಿತ್ರಗಳು- ಈ ಚಿತ್ರಗಳ ಮೂಲಕ ಸಾಹಿತ್ಯ ಕೃತಿಗಳನ್ನು ಹೇಗೆ ಸಮರ್ಥವಾಗಿ ಸಿನಿಮಾವಾಗಿಸಬಹುದು ಎಂಬ ಗುಟ್ಟನ್ನು ಕುರೋಸಾವಾ ಇಡೀ ಜಗತ್ತಿಗೆ ತೋರಿಸಿಕೊಟ್ಟರು ಅನ್ನಬಹುದು.

kurosava marquez“ಶೇಕ್ಸ್ ಪಿಯರ್, ಗಾರ್ಕಿ, ದಾಸ್ತೋವ್ ಸ್ಕಿ ಮುಂತಾದವರ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡುವ ನಿಮ್ಮ ಉದ್ಧೇಶ ನಿಜಕ್ಕೂ ಅರ್ಥಗರ್ಭಿತವೇ?” ಎಂದು ಮಾರ್ಕ್ವೆಜ್ ತಕ್ಷಣ ಕುರೋಸಾವಾನನ್ನು ಪ್ರಶ್ನಿಸುತ್ತಾರೆ. ಕುರೋಸಾವ ಉತ್ತರಿಸುತ್ತಾ, “ಸಿನಿಮಾವನ್ನು ಎಷ್ಟೋ ಸಲ ಹಾಲ್ಫ್ ವೇಯಲ್ಲಿ ತೋರಿಸಬೇಕಾಗಿ ಬರುತ್ತದೆ. ಆಗ ಸಾಹಿತ್ಯ ಕೃತಿಯೊಂದನ್ನು ಆಧರಿಸಿ ಸಿನಿಮಾ ಮಾಡುವಾಗ ಎದುರಾಗುವ ಸವಾಲುಗಳು, ಮೂಲಕೃತಿಯಲ್ಲಿನ ಆಶಯ, ಸತ್ವವನ್ನು ತೆರೆಯ ಮೇಲೆ ಸಮರ್ಥವಾಗಿ ತರಬೇಕಾಗಿ ಬಂದಾಗ ಎಡತಾಕುವ ಸಮಸ್ಯೆಗಳು ಸಾಮಾನ್ಯವಾಗಿ ಮೊದಮೊದಲಿಗೆ ನಿರ್ದೇಶಕನ ಗಮನಕ್ಕೆ ಬಂದಿರುವುದಿಲ್ಲ. ಆದ್ದರಿಂದ ಕೃತಿಯಲ್ಲಿರುವ ಯಾವುದೋ ಒಂದು ಕಂಟೆಂಟ್ ಅನ್ನು ತಂತ್ರಜ್ಞಾನದ ಸಹಾಯದೊಂದಿಗೆ ದೃಶ್ಯರೂಪಕ್ಕಿಳಿಸಿ ಪ್ರೇಕ್ಷಕನೆದುರು ಇಡಲು ಮುಂದಾಗಬೇಕಾದಾಗ ಒಂದಿಷ್ಟು ಮಾರ್ಪಾಟುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಮೂಲಕೃತಿಯನ್ನು ಓದಿರುವ ಯಾರಾದರೂ ಸಿನಿಮಾ ನೋಡಿದ ನಂತರ ಕಂಡು ಬರುವ ವ್ಯತ್ಯಾಸವನ್ನು ಪತ್ತೆ ಹಚ್ಚಿ “ಯೂ ಆರ್ ರಾಂಗ್” ಅಂತ ನಿರ್ದೇಶಕನೆದುರು ಜಬರ್ದಸ್ತ್ ಮಾಡಬಹುದು. ಆದರೆ ಮೂಲ ಕೃತಿಯನ್ನು ಓದಿರದಿದ್ದ ಪ್ರೇಕ್ಷಕ ತಾನು ತನ್ನ ಇಂದ್ರಿಯಗಳನ್ನು ದೃಶ್ಯ ಮಾಧ್ಯಮಕ್ಕೆ ಒಗ್ಗಿಸಿಕೊಂಡು ಚಿತ್ರ ವೀಕ್ಷಿಸುವುದರಿಂದ, ಚಿತ್ರವನ್ನು ಅರ್ಥ ಮಾಡಿಕೊಳ್ಳುವುದರಿಂದ ಇಂತಹ ಏರುಪೇರುಗಳು ಆತನಿಗೆ ಗೊತ್ತಾಗುವುದಿಲ್ಲ-ಆದ್ದರಿಂದ ಎರಡನ್ನೂ ಸಮಾನವಾಗಿ ಸರಿದೂಗಿಸುವುದು ಒಬ್ಬ ನಿರ್ದೇಶಕನಿಗೆ ಇಲ್ಲಿ ಅನಿವಾರ್ಯ” ಎಂದು ಉತ್ತರಿಸುತ್ತಾರೆ.

ಈ ಮಾತಿನಿಂದ ಚಕಿತಗೊಂಡ ಮಾರ್ಕ್ವೆಜ್, “ನಿಮ್ಮ ಜೀವನದಲ್ಲಿ ಬೆಳ್ಳಿತೆರೆಯ ಮೇಲೆ ಬಿಂಬಿಸಲಾಗದಂತಹ ಯಾವುದಾದರೂ ನಿಜ ದೃಶ್ಯವನ್ನು ಕಂಡಿದ್ದೀರಾ?” ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಕುರೋಸಾವ ಪ್ರತಿಕ್ರಿಯಿಸುತ್ತಾ “ನಾನು ಸಣ್ಣವನಾಗಿದ್ದಾಗ ಇಲ್ಲಿಡಾಚಿ ಎಂಬ ಊರಿನಲ್ಲಿ ಶೂಟಿಂಗ್ ನಡೆಯುತ್ತಿದ್ದ ಚಿತ್ರವೊಂದರಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ನಿರ್ದೇಶಕರಿಗೆ ಆಗಲೇ ಅನ್ನಿಸಿತ್ತು… ಅಲ್ಲಿನ ವಾತಾವರಣ ಭವ್ಯವಾಗಿಯೂ ಆದರೆ ವಿಚಿತ್ರವಾಗಿಯೂ ಇತ್ತು ಎಂದು. ಆ ಕಾರಣಕ್ಕಾಗಿಯೇ ಚಿತ್ರೀಕರಣಕ್ಕೆ ಆ ಸ್ಥಳವನ್ನು ಬಳಸಿಕೊಳ್ಳಲಾಗಿತ್ತು. ಆದರೆ ನಮಗೆ ದೊರೆತಿದ್ದ ಕೆಲವು ಮಾಹಿತಿಯಲ್ಲಿ ಊರಿನ ಬಗ್ಗೆ ಯಾವುದೋ ಅಂಶ ದಟ್ಟವಾಗಿ ಮರೆಮಾಚಿದಂತಿತ್ತು. ಅದೇನೆಂದರೆ ಅಲ್ಲಿನ ಕಾರ್ಮಿಕ ಘಟಕಗಳಲ್ಲಿ ಕೆಲಸ ಮಾಡುವ ವಾತಾವರಣ ಭಯಾನಕವಾಗಿತ್ತು ಮತ್ತು ಅಲ್ಲಿನ ಮಹಿಳೆಯರು ಮತ್ತು ಮಕ್ಕಳು ಸದಾ ತಮ್ಮ ಸುರಕ್ಷೆಯ ಬಗ್ಗೆ ಭಯಭೀತರಾಗಿದ್ದರು. ಕೆಲವರಿಗೆ ಆ ಊರಿನ ದೃಶ್ಯಾವಳಿಗಳು ಗೊಂದಲವನ್ನುಂಟುಮಾಡಿದರೆ ಮತ್ತೆ ಕೆಲವರಿಗೆ ಇರುವುದಕ್ಕಿಂತಲೂ ವಿಚಿತ್ರವಾಗಿ ತೋರುತ್ತಿತ್ತು. ಆದರೆ ಕ್ಯಾಮೆರಾದ ಕಣ್ಣಿಗೆ ಕಾಣುತ್ತಿದ್ದ ಆಯಾಮವೇ ಬೇರೆ” ಎಂದು ಉತ್ತರಿಸುವ ಮೂಲಕ ತಮ್ಮ ಅನುಭವಕ್ಕೆ ದಕ್ಕಿದ ಸಂಗತಿಯೊಂದನ್ನು ಹಂಚಿಕೊಂಡಿದ್ದರು.

ಕುರೋಸಾವ ಮತ್ತು ಮಾರ್ಕ್ವೆಜ್ ಹೀಗೆ ಬೇರೆ ಬೇರೆ ವಿಷಯಗಳನ್ನು ಎತ್ತಿಕೊಂಡು ಆಳಕ್ಕಿಳಿದು ಮಾತನಾಡುತ್ತಾ ಹೋದಂತೆ ಕುರೋಸಾವ ನಿರ್ದೇಶನದ ‘ರಾಪ್ಸೊಡಿ ಇನ್ ಆಗಸ್ಟ್’ ಚಿತ್ರದತ್ತ ಹೊರಳಿ ಮಾತಿನ ಭಾವ ದಟ್ಟವಾಗುತ್ತಾ ಹೋಗುತ್ತದೆ.

‘ರಾಪ್ಸೊಡಿ ಇನ್ ಆಗಸ್ಟ್’ ನಾಗಸಾಕಿ ನಗರದ ಮೇಲೆ ಅಮೆರಿಕ ಮಾಡಿದ ಪರಮಾಣು ಬಾಂಬ್ ದಾಳಿಯಿಂದ ದುರಂತಕ್ಕೆ ತುತ್ತಾದ ವೃದ್ಧೆಯೊಬ್ಬಳ ಹೋರಾಟದ ಕಥಾನಕ. ಆ ಚಿತ್ರ ಬಿಡುಗಡೆಯಾದಾಗ ಅನೇಕ ಅಮೆರಿಕನ್ ವಿಮರ್ಶಕರು ಅಪಸ್ವರಗಳನ್ನು ಎತ್ತಿದ್ದರು. ಆ ಚಿತ್ರದಲ್ಲಿ ಜಪಾನೀಯರು ಆ ಬಾಂಬ್ ದಾಳಿ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು ಎಂಬ ಕಾರಣಕ್ಕೆ ಇರಬಹುದು.

filmಹಿರೋಷಿಮಾ ನಗರ ಅನೇಕ ಕೈಗಾರಿಕಾ ಘಟಕಗಳನ್ನು ಹೊಂದಿದ್ದರಿಂದ ಅದು ಸಹಜವಾಗಿಯೇ ಅಮೆರಿಕನ್ ಸೈನಿಕರ ಬೇಟೆಯಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಆದರೆ ನಾಗಸಾಕಿಯಲ್ಲಿ ಅಂತಹ ಒಂದೂ ಘಟಕ ಇರಲಿಲ್ಲ. ಅಷ್ಟೇ ಅಲ್ಲ, 1945ರ ಆಗಸ್ಟ್ 9ರಂದು ನಡೆದ ಈ ಎರಡನೇ ಪರಮಾಣು ದಾಳಿಯ ಗುರಿ ಕೈಗಾರಿಕಾ ಪ್ರದೇಶವಾದ ಕಿತ ಕ್ಯುಶು ನಗರವಾಗಿತ್ತು. ಆದರೆ ಅಂದು ಈ ನಗರ ಮೋಡಗಳಿಂದ ಆವೃತವಾಗಿತ್ತು. ಆದರೆ ಯಾವುದಾದರೂ ಒಂದು ಸ್ಥಳದ ಮೇಲೆ ಪರಮಾಣು ಬಾಂಬ್ ಹಾಕಲೇಬೇಕೆಂಬ ಗುರಿಯನ್ನು ಹೊಂದಿದ್ದ ಅಮೆರಿಕನ್ ಸೈನಿಕರ ಕಣ್ಣಿಗೆ ಆಗ ಬಿದ್ದದ್ದೇ ನಾಗಸಾಕಿ ನಗರ.

ಈ ದಾಳಿಯ ಬಗ್ಗೆ ಕುರೋಸಾವ ಮತ್ತು ಮಾರ್ಕ್ವೆಜ್ ನಡುವಿನ ಕುತೂಹಲಕಾರಿ ಸಂಭಾಷಣೆ ಹೀಗೆ ಸಾಗುತ್ತದೆ :

ಮೊದಲು ಕುರೋಸಾವ “ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ಸಾವಿಗೀಡಾದ ಜನರ ಸಂಖ್ಯೆ ಒಟ್ಟು 230,000 ಎಂಬುದು ಎಲ್ಲರಿಗೂ ಗೊತ್ತಿರುವಂತಹ ಮೇಲ್ನೋಟದ ವರದಿ. ಆದರೆ ಅಲ್ಲಿ ನಿಜಕ್ಕೂ ಸತ್ತವರ ಸಂಖ್ಯೆ ಅರ್ಧ ಮಿಲಿಯನ್ನಿಗೂ ಅಧಿಕ. ಹಾಗೆಯೇ ಈ ದುರಂತ ಘಟಿಸಿ ನಲವತ್ತೈದು ವರ್ಷಗಳೇ ಉರುಳಿದ್ದರೂ ಇವತ್ತಿಗೂ ಅದರ ಹೊಡೆತಕ್ಕೆ ಗುರಿಯಾದ ಸುಮಾರು 2,700 ಮಂದಿ ಆಸ್ಪತ್ರೆಯಲ್ಲಿ ಸಾವಿನ ಬಾಗಿಲು ತಟ್ಟುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪರಮಾಣು ಬಾಂಬ್ ಇನ್ನೂ ಜಪಾನೀಯರನ್ನು ಕೊಲ್ಲುತ್ತಲೇ ಇದೆ” ಎಂಬ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ಅದಕ್ಕೆ ಪ್ರತಿಕ್ರಿಯೆಯಾಗಿ ಮಾರ್ಕ್ವೆಜ್ “ತಮಗಿಂತಲೂ ಮುನ್ನ ರಷಿಯನ್ನರು ಜಪಾನನ್ನು ಆಕ್ರಮಿಸಿಕೊಳ್ಳುವ ಭಯದಿಂದ ಅಮೆರಿಕನ್ನರು ನಾಗಸಾಕಿ ಮೇಲೆ ದಾಳಿ ಮಾಡಿದ್ದಿರಬಹುದು” ಎನ್ನುತ್ತಾರೆ. ಈಗ ಕುರೋಸಾವ “ಅದು ನಿಜವಾದರೆ, ಯುದ್ಧದೊಂದಿಗೆ ಯಾವುದೇ ಸಂಬಂಧ ಹೊಂದಿರದಿದ್ದ ಸಾಮಾನ್ಯರು ವಾಸಿಸುತ್ತಿದ್ದ ನಗರದ ಮೇಲೆ ದಾಳಿ ಮಾಡುವ ಅಗತ್ಯವಾದರೂ ಏನಿತ್ತು?” ಎಂದು ಮರು ಸವಾಲು ಹಾಕುತ್ತಾರೆ.

ಮಾರ್ಕ್ವೆಜ್ ಕೂಡ ಸುಮ್ಮನಾಗುವುದಿಲ್ಲ. ಬದಲಾಗಿ “ನಿಮ್ಮ ತರ್ಕ ಸರಿ ಎಂದೇ ಇಟ್ಟುಕೊಂಡರೆ ನಾಗಸಾಕಿಯಷ್ಟೇ ಅಸುರಕ್ಷಿತವಾಗಿದ್ದ ಮತ್ತು ಜಪಾನ್ ರಾಜಧಾನಿಯ ಮಧ್ಯೆ ಇರುವ ರಾಜವಂಶದ ಇಂಪೀರಿಯಲ್ ಪ್ಯಾಲೆಸ್ ಮೇಲೆಯೇ ಅಮೆರಿಕ ಅಣುಬಾಂಬ್ ಅನ್ನು ಹಾಕಬಹುದಿತ್ತಲ್ಲವೇ? ಆದರೆ ಹಾಗೆ ಮಾಡಲಿಲ್ಲ ಯಾಕೆ ಎಂಬುದಕ್ಕೆ ನನ್ನಲ್ಲಿರುವ ಉತ್ತರ ಅಮೆರಿಕಕ್ಕೆ ಜಪಾನಿನ ರಾಜಕೀಯ ಮತ್ತು ಸೈನಿಕ ಶಕ್ತಿಗಳನ್ನು ನಾಶ ಮಾಡುವ ಉದ್ದೇಶವಿರಲಿಲ್ಲ. ಬದಲಾಗಿ ಅವುಗಳನ್ನು ರಕ್ಷಿತವಾಗಿಟ್ಟು ಯುದ್ಧದ ನಂತರ ಇತರರೊಂದಿಗೆ ಯುದ್ಧದ ಲಾಭವನ್ನು ಹಂಚಿಕೊಳ್ಳುವ ಬದಲಾಗಿ ತಾನೇ ಎಲ್ಲ ಲಾಭವನ್ನು ಗಿಟ್ಟಿಸಿಕೊಳ್ಳುವ ಹುನ್ನಾರ ಇತ್ತು. ಇಂತಹ ಹುನ್ನಾರಕ್ಕೆ ಜಗತ್ತಿನ ಯಾವ ದೇಶವೂ ಗುರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅಣುಬಾಂಬ್ ದಾಳಿ ಆಗಿಲ್ಲದಿದ್ದರೆ ಜಪಾನ್ ಅಮೆರಿಕಕ್ಕೆ ಶರಣಾಗುತ್ತಿತ್ತೆ?” ಎಂದು ಪ್ರಶ್ನಿಸುತ್ತಾರೆ.

ಮಾರ್ಕ್ವೆಜ್ ಹೇಳಿದ ಈ ಮಾತುಗಳಿಗೆ ಏನೂ ಹೇಳದಂತಾಗುವ ಕುರೋಸಾವ ತುಸು ಸಾವರಿಸಿಕೊಂಡು “ಇದಕ್ಕೆ ಸ್ಪಷ್ಟ ಉತ್ತರ ಕೊಡುವುದು ಕಷ್ಟ. ಯಾಕೆಂದರೆ ನಾಗಸಾಕಿ ಮೇಲಿನ ದಾಳಿಯಲ್ಲಿ ಉಳಿದವರು ಆ ದುರಂತವನ್ನು ಮರೆಯಲು ಯತ್ನಿಸುತ್ತಿದ್ದಾರೆ. ಯಾಕೆಂದರೆ ಅವರಲ್ಲಿ ಬಹಳಷ್ಟು ಜನ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ತಮ್ಮ ಹೆತ್ತವರನ್ನು, ಒಡ ಹುಟ್ಟಿದವರನ್ನು, ತಾವು ಹೆತ್ತ ಮಕ್ಕಳನ್ನೇ ಅನಾಥವಾಗಿಸಿದ್ದಾರೆ. ಅದರ ಬಗ್ಗೆ ಈಗಲೂ ಅವರನ್ನು ಪಾಪಪ್ರಜ್ಞೆ ಕಾಡುತ್ತಿದೆ. ಆ ದುರಂತ ಸಂಭವಿಸಿದ ನಂತರದ ಆರು ವರ್ಷಗಳ ಕಾಲ ಅಮೆರಿಕವೇ ಇಲ್ಲಿ ಅಧಿಪತ್ಯವನ್ನು ಸ್ಥಾಪಿಸಿತ್ತು. ಆ ಸಮಯದಲ್ಲಿ ಈ ದುರಂತವನ್ನು ಮರೆಸುವ ಯತ್ನದಲ್ಲಿ ಅದು ತೊಡಗಿತ್ತಲ್ಲದೆ ಅಮೇರಿಕಾದ ಜೊತೆ ಜಪಾನಿ ಸರ್ಕಾರವೂ ಕೈಜೋಡಿಸಿತ್ತು. ಈ ಎಲ್ಲ ಪ್ರಕ್ರಿಯೆಗಳು ಒಂದು ಯುದ್ಧದಿಂದಾಗುವ ದುರಂತ ಎಷ್ಟು ಬೀಕರವಾದುದೆಂಬುದನ್ನು ಅರ್ಥಮಾಡಿಕೊಳ್ಳಲು ನಾನು ಸಿದ್ಧನಿದ್ದೇನೆ. ಆದರೆ ಕನಿಷ್ಠ ಪಕ್ಷ ಈ ದುರಂತಕ್ಕೆ ಕಾರಣವಾದ ದೇಶ ಜಪಾನಿ ಜನರ ಮುಂದೆ ಕ್ಷಮೆ ಯಾಚಿಸಬೇಕು ಎಂಬ ಆಶಯವನ್ನು ಹೊಂದಿದ್ದೇನೆ. ಎಲ್ಲಿಯತನಕ ಅಮೇರಿಕಾ ಕ್ಷಮೆ ಯಾಚಿಸುವುದಿಲ್ಲವೋ ಅಲ್ಲಿಯತನಕ ಈ ದುರಂತ ನಮ್ಮ ಜನರನ್ನು ಕಾಡುತ್ತಲೇ ಇರುತ್ತದೆ” ಎಂದಷ್ಟೇ ಹೇಳಿ ಸುಮ್ಮನಾಗುವರು.

ಕುರೋಸಾವ ಮತ್ತು ಮಾರ್ಕ್ವೆಜ್ ನಡುವಿನ ಮಾತುಗಳು ಇತಿಹಾಸದ ನೆನಪುಗಳತ್ತ, ಪರಮಾಣು ಬಾಂಬಿನ ಪ್ರಭಾವದತ್ತ, ಸಿನಿಮಾದತ್ತ ಹೊರಳಿದರೂ ಒಂದು ದಟ್ಟ ಜಿಜ್ಞಾಸೆ ಇಬ್ಬರನ್ನೂ ಆವರಿಸಿದ್ದು ಸುಳ್ಳಲ್ಲ.

ಬರೆದಿದ್ದು : ನವೆಂಬರ್ 12, 2014

Add Comment

Leave a Reply