Quantcast

ರೊಬೆರ್ಟೋ ಬೆನಿಗ್ನಿ, ರೊಬೆರ್ಟೋ ಬೆನಿಗ್ನಿ ಮತ್ತು ರೊಬೆರ್ಟೋ ಬೆನಿಗ್ನಿ ಮಾತ್ರ..

ಜಗತ್ತಿನ ಶ್ರೇಷ್ಠ ಸಿನಿಮಾ ಯಾವುದು?

aijoor with devanooru

ಚಂದ್ರಶೇಖರ ಐಜೂರು 

 children of heaven1ಜಗತ್ತಿನ ಶ್ರೇಷ್ಠ ಸಿನಿಮಾ ಯಾವುದು? ಎಂಬ ಪ್ರಶ್ನೆಯನ್ನಿಟ್ಟುಕೊಂಡು ನಾವೊಂದಷ್ಟು ಜನ ಗೆಳೆಯರು ಮಾತಿಗೆ ಕುಳಿತಿದ್ದೆವು. 1997ರಲ್ಲಿ ಕೂದಲೆಳೆ ಅಂತರದಲ್ಲಿ ಆಸ್ಕರ್ ತಪ್ಪಿಹೋದ ‘Children of Heaven’ ಚಿತ್ರದ ಕಡೆ ಎಲ್ಲರ ಚಿತ್ತ ಹರಿಯುವಂತೆ ಮಾಡಿ ಆ ಚಿತ್ರಕ್ಕೆ ಒಂದಾದರೂ ಆಸ್ಕರ್ ಸಿಗಬೇಕಿತ್ತು ಎಂದು ನನ್ನದೊಂದು ಅಭಿಪ್ರಾಯ ಮಂಡಿಸಿದೆ.

ಆ ವರ್ಷ ‘ಫಾರಿನ್ ಲ್ಯಾಂಗ್ವೇಜ್’ ಕೆಟಗರಿಯಲ್ಲಿ ಇರಾನಿನ ಮಜೀದ್ ಮಜೀದೀ ನಿರ್ದೇಶನದ Children of Heaven ಇಟಲಿಯ ರೊಬೆರ್ಟೋ ಬೆನಿಗ್ನಿ ನಿರ್ದೇಶನದ Life is Beautiful ಚಿತ್ರಗಳು ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ತೀವ್ರ ಪೈಪೋಟಿ ನಡೆಸಿದ್ದವು. ಆದರೆ, ಅಂತಿಮ ಕ್ಷಣದಲ್ಲಿ Best Picture, Best Music, Best Actor ಪ್ರಶಸ್ತಿಗಳು Life is Beautifulನ ರೊಬೆರ್ಟೋ ಬೆನಿಗ್ನಿ ಪಾಲಾದವು. ರೊಬೆರ್ಟೋ ಬೆನಿಗ್ನಿ ಈ ಚಿತ್ರದ ಕತೆಗಾರ, ನಟ ಮತ್ತು ನಿರ್ದೇಶಕ ಕೂಡ.

ಸೀಮಿತ ಸಂಪನ್ಮೂಲವಿಟ್ಟುಕೊಂಡು ಮಜೀದ್ ಇಡೀ ಜಗತ್ತೇ ಬೆರಗಾಗುವಂಥ ಸಿನಿಮಾ ಮಾಡಿದ್ದ. ತನ್ನ ತಂಗಿಯ ಶೂ ಕಳೆದು ಹಾಕುವ ಅಲಿ, ಬದುಕು ಎಸೆಯುತ್ತಿರವ ದೊಡ್ಡ ಸವಾಲಿಗೆ ಏಕಾಂಗಿಯಾಗಿ ಎದೆಕೊಡಬೇಕಿದೆ. ಕಿತ್ತು ತಿನ್ನುತ್ತಿರುವ ಮನೆಯ ಬಡತನ ಕಂಡು ಅಲಿ ಮತ್ತು ಅವನ ತಂಗಿ ಝಾರಾ ತನ್ನ ತಂದೆಗೆ ಶೂ ಕೊಡಿಸು ಎಂದು ಕೇಳಲಾರರು. ಕೊಡಿಸುವ ಸ್ಥಿತಿಯಲ್ಲಿ ಅವರ ತಂದೆಯೂ ಇಲ್ಲ. ಇಬ್ಬರು ಬದುಕಿನ ದೊಡ್ಡ ಪರೀಕ್ಷೆಗೆ ಸಜ್ಜಾಗುವುದೇ ಇಲ್ಲಿ.

ಆದರೆ, Life is Beautifulನ ಕತೆ ಇಷ್ಟು ಸರಳವಾಗಿಲ್ಲ. ನಾಜಿಗಳ ನಡುವೆ ಸೇರಿಕೊಂಡಿರುವ ಯಹೂದಿಗಳನ್ನೆಲ್ಲ ಪ್ರತ್ಯೇಕಿಸಿ ಅವರನ್ನು Concentration Campಗಳಲ್ಲಿ ಅರ್ಥಾತ್ ಕೊಲುದಾಣಗಳಲ್ಲಿ ಕೂಡಿಹಾಕುವಂತೆ ಹಿಟ್ಲರ್ ನ ಆದೇಶ ಹೊರಬೀಳುತ್ತದೆ. ರೊಬೆರ್ಟೋ ಬೆನಿಗ್ನಿ ಯಹೂದಿ, ಅವನ ಹೆಂಡತಿ ನಾಜಿ; ಈ ಇಬ್ಬರಿಗೂ ಹುಟ್ಟಿರುವ ಕೂಸು? ಅವನನ್ನು ಯಹೂದಿಯೆಂದು ತೀರ್ಮಾನಿಸಿ ಬೆನಿಗ್ನಿಯೊಂದಿಗೆ ಕೊಲುದಾಣಕ್ಕೆ ರವಾನಿಸಲಾಗುತ್ತದೆ. ಈ ಕೊಲುದಾಣದಲ್ಲಿ ಬೆನಿಗ್ನಿ ತನ್ನ ಮಗನೊಂದಿಗೆ ಸೇರಿ ಹೊಸದೊಂದು ಆಟ ಶುರು ಮಾಡುತ್ತಾನೆ.

roberto benigni

ಈ ಎರಡು ಚಿತ್ರಗಳ ಆಯ್ಕೆಯಲ್ಲಿ ನನ್ನ ಮನಸ್ಸು Children of Heaven ಕಡೆ ವಾಲುತ್ತಿದ್ದುದ್ದನ್ನು ಕಂಡ ಮಿತ್ರ ಸಂತೋಷ್, ‘ನಾವು ಭಾರತೀಯರೇ ಹೀಗೆ ಸ್ವಲ್ಪ ಎಮೋಷನ್ ಅನ್ನಿಸುವುದೆಲ್ಲ ನಮ್ಮದಾಗಿ ಬಿಡುತ್ತದೆ. ಬಹುಶಃ 1997ರಲ್ಲಿ ಆಸ್ಕರ್ ನ ಅಂತಿಮ ಸುತ್ತಿನ ಹಣಾಹಣಿಯಲ್ಲಿ ಈ ಎರಡು ಚಿತ್ರಗಳಲ್ಲಿ ಒಂದನ್ನು ಶ್ರೇಷ್ಠವೆಂದು ಆಯ್ಕೆ ಮಾಡುವಾಗ ಜ್ಯೂರಿಗಳ ನಡುವೆಯೂ ಇಂಥದ್ದೇ ಉಸಿರು ಬಿಗಿಯಾಗಿ ಮಾತು ಹೊರಡದ ಕ್ಷಣಗಳು ನಿರ್ಮಾಣಗೊಂಡಿವೆ. Children of Heavenನಲ್ಲಿ ಅಣ್ಣ ತಂಗಿಯ ಅಸಹಾಯಕತೆಗಳು ತೆರೆಯ ಮೇಲೆ ಮೂಡಿದಾಗಲೆಲ್ಲ ಮಜೀದ್ ತಾನು ಭಾವುಕನಾಗಿ ನಮ್ಮನ್ನು ಆರ್ದ್ರಗೊಳ್ಳುವಂತೆ ಮಾಡಿ ಗೆಲ್ಲಬಲ್ಲ. ನೆಪ ಸಿಕ್ಕರೆ ಸಾಕು, ಕಣ್ಣೀರು ಹಾಕಲು ಸಿದ್ಧವಿರುವ ಭಾರತೀಯ ಮನಸ್ಸುಗಳಿಗೆ Children of Heaven ಹೇಳಿ ಮಾಡಿಸಿದಂತಿದೆ. ಆದರೆ, Life is Beautifulನಲ್ಲಿ ರೊಬೆರ್ಟೋ ಬೆನಿಗ್ನಿ ಇಂಥ ಕಣ್ಣು ತೇವಗೊಳ್ಳುವ ಸಂದರ್ಭಗಳು ಎದುರಾದಾಗಲೆಲ್ಲ ಅದನ್ನು ಮೀರಿ ಬದುಕನ್ನು ಇನ್ನಷ್ಟು ಪ್ರೀತಿಯೊಂದಿಗೆ ಸರಳವಾಗಿ ಎದುರುಗೊಳ್ಳುತ್ತಾನೆ’ ಎಂದು ಹೇಳಿದ್ದು ನನ್ನನ್ನು ನಾನೇ ಮರುವಿಮರ್ಶೆಗೆ ಒಳಪಡಿಸಿಕೊಳ್ಳುವಂತೆ ಮಾಡಿತು.

ಅವತ್ತು ಸಂಜೆ ಮನೆಗೆ ಬಂದವನು ಮತ್ತೆ Life is Beautiful ಮತ್ತು Children of Heaven ನೋಡಿದೆ. ನನ್ನ ಹಿಂದಿನ ಗ್ರಹಿಕೆಗಿಂತ ಸಂತೋಷ್ ಹೇಳಿದ್ದು ಹೆಚ್ಚು ಸತ್ಯ ಅನ್ನಿಸಿತು. ‘ಅಪ್ಪ ನನ್ ಹೊಟ್ಟೆ ಹಸಿತಿದೆ, ಇನ್ನೊಂದು ಪೀಸ್ ಬ್ರೆಡ್ ಬೇಕು, ಈ ಆಟ ಯಾವಾಗ ಮುಗ್ಯುತ್ತೇ? ನಮ್ ಸ್ಕೋರೆಷ್ಟು? ನಾವ್ಯಾವಾಗ ಮನೆಗ್ಹೋಗೋದು? ಇಷ್ಟು ದಿನ ಆದ್ರು ಯಾಕೆ ಅಮ್ಮ ನಮ್ಮನ್ನು ನೋಡಲು ಬರಲಿಲ್ಲ…’ ಇಂಥ ಸನ್ನಿವೇಶಗಳು ಸಾಂಪ್ರದಾಯಿಕವಾಗಿ ರೀಲು ಸುತ್ತುವ ಭಾರತೀಯ ನಿರ್ದೇಶಕನ ಕೈಗೆ ಸಿಕ್ಕಿದ್ದಿದ್ದರೆ ತಾನೂ ಅತ್ತು ಪ್ರೇಕ್ಷಕರನ್ನು ಅಳಿಸಿ ಇಡೀ ಚಿತ್ರವನ್ನು ಕಣ್ಣೀರ ಮಳೆಯಾಗಿಸುತ್ತಿದ್ದ.

life is beautiful2ತನ್ನ ಮಗನ ಕೋಮಲ ಜಗತ್ತನ್ನು ಚೂರು ಮಾಡಲು ಬಯಸದ ಬೆನಿಗ್ನಿ, ‘ಪಂದ್ಯವೊಂದನ್ನು ಗೆಲ್ಲಲಿಕ್ಕೆಂದೇ ನಾವು ಇಲ್ಲಿಗೆ ಬಂದಿದ್ದೇವೆ. ಹೆಚ್ಚು ಸ್ಕೋರ್ ಮಾಡಬೇಕು, ಸ್ಕೋರ್ ಮಾಡುವ
ಆತುರದಲ್ಲಿ ಆಟದ ನಿಯಮಗಳನ್ನು ಮುರಿಯುವಂತಿಲ್ಲ’ ಎಂದು ಹೇಳುತ್ತಾನೆ. ಕಡೆಗೆ ಬೆನಿಗ್ನಿ ಹಠಾತ್ ಎರಗುವ ಸಾವಿನತ್ತ ನಡೆದು ಹೋಗುವಾಗಲೂ ತಾನೇ ರೂಪಿಸಿದ ಆಟದ ನಿಯಮ ತಪ್ಪದಂತೆ ನಡೆದುಕೊಳ್ಳುತ್ತಾನೆ. ‘ನಾವಿಷ್ಟು ದಿನ ಇದ್ದದ್ದು ಹಿಟ್ಲರನ ಕೊಲುದಾಣದಲಿ’ ಎಂಬ ಸತ್ಯ ಆ ಮುಗ್ಧ ಹುಡುಗನಿಗೆ ಕಡೆಗೂ ಗೊತ್ತಾಗುವುದಿಲ್ಲ.

Life is Beautifulನ ಪ್ರತಿ ಫ್ರೇಮನ್ನು ಆವರಿಸಿಕೊಳ್ಳುವುದು ರೊಬೆರ್ಟೋ ಬೆನಿಗ್ನಿ, ರೊಬೆರ್ಟೋ ಬೆನಿಗ್ನಿ ಮತ್ತು ರೊಬೆರ್ಟೋ ಬೆನಿಗ್ನಿ ಮಾತ್ರ.

ಈ ಎರಡು ಚಿತ್ರಗಳನ್ನು ಮತ್ತೆ ಮತ್ತೆ ನೋಡುವಂತೆ ಮಾಡಿದ ಗೆಳೆಯ ಸಂತೋಷ್ (Santosh Dindima)ಗೆ ನನ್ನ ಕೃತಜ್ಞತೆಗಳು.

 

Add Comment

Leave a Reply