Quantcast

ಕೈಗೆ ಸಿಕ್ಕ ಎಂಟಾಣೆಯನ್ನು ಬಾಲಣ್ಣನ ಕೈಗಿಟ್ಟಿದ್ದಾರೆ!

ಬಾಲಣ್ಣನ ಸಹಿ!

ಶಶಿಧರ ಚಿತ್ರದುರ್ಗ

ಕನ್ನಡ ಚಿತ್ರರಂಗದ ಅಭಿಜಾತ ಕಲಾವಿದ ಟಿ.ಎನ್.ಬಾಲಕೃಷ್ಣ ಅವರ ಸಹಿ ಇದು. ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರ ಹಿರಿಯ ಸಹೋದರ ನಾಗೇಶ್ ಬಾಬ `ಅನಿರೀಕ್ಷಿತ’ (1970) ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದರು. ಆ ಚಿತ್ರದಲ್ಲಿ ನಟಿಸಿದ ಬಾಲಣ್ಣ ಅಗ್ರಿಮೆಂಟ್ ಗೆ ಸಹಿ ಮಾಡಿದ್ದರಂತೆ. ಅಶ್ವತ್ಥ ಸರ್ ಈ ಸಹಿಯನ್ನು ಜೋಪಾನವಾಗಿಟ್ಟುಕೊಂಡಿದ್ದಾರೆ.

ಒಂದು ತಮಾಷೆ ಪ್ರಸಂಗ :-

ಬಾಲಣ್ಣನಿಗೆ ಆರಂಭದ ದಿನಗಳಿಂದಲೂ ಅಶ್ವತ್ಥನಾರಾಯಣ ಮತ್ತು ಅವರಣ್ಣ ನಾಗೇಶ್ ಬಾಬ ಅವರ ಬಗ್ಗೆ ಪ್ರೀತಿ-ವಿಶ್ವಾಸ. ಹಿಂದೊಮ್ಮೆ ಖುದ್ದು ಬಾಲಣ್ಣ ತಮ್ಮೊಂದಿಗೆ ಹಂಚಿಕೊಂಡ ಪ್ರಸಂಗವೊಂದನ್ನು ಅಶ್ವತ್ಥರು ಹೀಗೆ ನೆನಪು ಮಾಡಿಕೊಳ್ಳುತ್ತಾರೆ….

ಆರಂಭದ ದಿನಗಳಲ್ಲಿ ಅಣ್ಣ ನಾಗೇಶ್ ಬಾಬು ಮತ್ತು ನಾನು ಇಬ್ಬರೂ ಮದರಾಸಿನಲ್ಲಿದ್ದೆವು. ಅಣ್ಣ ಅಲ್ಲಿನ ದಕ್ಷಿಣ ಭಾರತ ವಾಣಿಜ್ಯ ಮಂಡಳಿಯಲ್ಲಿ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆಗ ಕಚ್ಛಾ ಫಿಲ್ಮ್ ಗಳಿಗೆ ಖೋಟಾ ಪದ್ಧತಿಯಿತ್ತು. ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳ ಶೂಟಿಂಗ್ ಗೆ ಫಿಲ್ಮ್ ಪಡೆಯಲು ಸಾಕಷ್ಟು ಪ್ರಯಾಸಪಡುತ್ತಿದ್ದರು. ಫಿಲ್ಮ್ ಗಳನ್ನು ಸೂಕ್ತ ರೀತಿಯಲ್ಲಿ ವಿತರಿಸಲು ವಾಣಿಜ್ಯ ಮಂಡಳಿಯಲ್ಲೊಂದು ಸಮಿತಿಯೂ ಇತ್ತು.

ಆಗ ತಮಿಳು, ತೆಲುಗು ಸಿನಿಮಾಗಳೇ ಹೆಚ್ಚಿನ ಆಧ್ಯತೆ. ಸಹಜವಾಗಿಯೇ ಕನ್ನಡ ಚಿತ್ರನಿರ್ಮಾಪಕರಿಗೆ ಸುಲಭವಾಗಿ ಫಿಲ್ಮ್ ಗಳು ಲಭ್ಯವಾಗುತ್ತಿರಲಿಲ್ಲ. ಆಗ ವಾಣಿಜ್ಯ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಣ್ಣ ಕನ್ನಡ ಚಿತ್ರನಿರ್ಮಾಪಕರಿಗೆ ನೆರವಾಗುತ್ತಿದ್ದರು. ತಮ್ಮ ಶಿಫಾರಸು ಬಳಸಿ ಅಗತ್ಯವಿದ್ದವರಿಗೆ ಫಿಲ್ಮ್ ಗಳನ್ನು ಒದಗಿಸಲು ಪ್ರಯತ್ನಿಸುತ್ತಿದ್ದರು.

ಒಂದು ದಿನ ಹಿರಿಯ ನಟ ಬಾಲಕೃಷ್ಣ ವಾಣಿಜ್ಯ ಮಂಡಳಿಗೆ ಹೋಗಿದ್ದಾರೆ. ಆಗ ಅವರು `ಕಲಿತರೂ ಹೆಣ್ಣೆ’ ಚಿತ್ರ ನಿರ್ಮಿಸಲು ತಯಾರಿ ನಡೆಸುತ್ತಿದ್ದರು. ಎಂದಿನಂತೆ ಹಳೆಯ ಅಂಗಿ, ದಾಡಿ ಮತ್ತು ತಮ್ಮ ಟ್ರೇಡ್ ಮಾರ್ಕ್ ಮಂಕಿ ಟೋಪಿ ಹಾಕಿಕೊಂಡಿದ್ದರು. ಬಾಲಣ್ಣ ಆಗಮಿಸಿದ ವೇಳೆ ಅಣ್ಣ ಕಚೇರಿಯಲ್ಲಿ ತಲೆ ಬಗ್ಗಿಸಿಕೊಂಡು ಏನೋ ಬರೆಯುತ್ತಾ ಕುಳಿತಿದ್ದರಂತೆ.

ಬಾಲಣ್ಣ ಸೀದಾ ಹೋಗಿ ಅವರ ಪಕ್ಕ ನಿಂತು, `ಸ್ವಾಮಿ, ನಾನು ಬಡ ಕಲಾವಿದ. ಜೀವನ ತುಂಬಾ ಕಷ್ಟವಾಗಿದೆ..’ ಎಂದಿದ್ದಾರೆ. ಬರೆಯುತ್ತಾ ಕುಳಿತಿದ್ದ ಅಣ್ಣ ಅವರ ಮುಖ ನೋಡದೆ ಜೇಬಿಗೆ ಕೈಹಾಕಿ, ಕೈಗೆ ಸಿಕ್ಕ ಎಂಟಾಣೆಯನ್ನು ಬಾಲಣ್ಣನ ಕೈಗಿಟ್ಟಿದ್ದಾರೆ! `ಹೌದು, ಈಗ ಇದರ ಅವಶ್ಯಕತೆಯೂ ಇದೆ. ಇದರ ಜೊತೆಗೆ ಹೇಗಾದರೂ ಶಿಫಾರಸು ಮಾಡಿ ನೀವು ನನಗೆ ಫಿಲ್ಮ್ ಖೋಟಾ ಕೊಡಿಸಬೇಕು..’ ಎಂದಿದ್ದಾರೆ ಬಾಲಣ್ಣ. ಆಗ ಕತ್ತೆತ್ತಿ ನೋಡಿದ ಅಣ್ಣನಿಗೆ ತಾನು ಎಂಟಾಣೆ ಕೊಟ್ಟದ್ದು ಯಾರಿಗೆಂದು ಗೊತ್ತಾಗಿದೆ. ನಗುತ್ತಲೇ ಎದ್ದು ನಿಂತು ಕ್ಷಮೆಯಾಚಿಸಿದ್ದಾರೆ.

2 Comments

  1. sangamitradiggi
    December 2, 2016

Add Comment

Leave a Reply