Quantcast

ಯಾರಪ್ಪಾ ಈ ವೀರಪ್ಪನ್?

ಕಿಲ್ಲಿಂಗ್ ವೀರಪ್ಪನ್ ಅನೇಕ ಕಾರಣಗಳಿಗೆ ಸದ್ದು ಮಾಡುತ್ತಿದೆ. `ವೀರಪ್ಪನ್ ರೋಲ್ ನಲ್ಲಿ ಮಾಡಿರೋನು ಯಾರೋ ಬಾಂಬೆ ನಟನಂತೆ. ಥೇಟು ಹಾಗೇ ಇದಾನಲ್ವಾ?’ ಇದು ಜನಸಾಮಾನ್ಯರ ಬಾಯಲ್ಲಿ ಬರುತ್ತಿರುವ ಮಾತು.

ರಾಮ್ ಗೋಪಾಲ್ ವರ್ಮಾ ವೀರಪ್ಪನ್‌ನನ್ನು ಮಟ್ಟ ಹಾಕುವ ಪಾತ್ರಕ್ಕೆ ಶಿವಣ್ಣ ಫಿಕ್ಸ್ ಮಾಡುವಲ್ಲಿ ಅಂಥಾ ಕಷ್ಟವಾಗಿರಲಿಲ್ಲ. ಆದರೆ ವೀರಪ್ಪನ್ ಪಾತ್ರಕ್ಕೆ ಯಾರನ್ನು ಹೊಂದಿಸುವುದು ಎಂಬ ಆಲೋಚನೆಯಲ್ಲಿದ್ದಾಗ ವರ್ಮಾಗೆ ಹೊಳೆದದ್ದು ಮರಾಠಿ ರಂಗಭೂಮಿಯ ಅದ್ಭುತ ನಟ ಸಂದೀಪ್. ಈ ಸಿನಿಮಾ ಶುರುವಾದ ನಂತರ ‘ಈ ಚಿತ್ರದಲ್ಲಿ ವೀರಪ್ಪನ್ ಪಾತ್ರ ಮಾಡಿರುವ ಸಂದೀಪ್ ವೀರಪ್ಪನ್‌ನ ಸಂಬಂಧಿಯಂತೆ’ ಅನ್ನೋ ಗಾಳಿಸುದ್ದಿ ಹರಿದಾಡುತ್ತಿದೆ.

ಆದರೆ ವೀರಪ್ಪನ್‌ಗೂ ಸಂದೀಪ್‌ಗೂ ಎಲ್ಲಿಂದೆಲ್ಲಿಯ ಸಂಬಂಧವೂ ಇಲ್ಲ. ಸಂದೀಪ್ ಥೇಟು ವೀರಪ್ಪನ್‌ನಂತೆಯೇ ಕಾಣುವಂತೆ ಮಾಡಿರುವ ಕೀರ್ತಿ ಮೇಕಪ್ ಕಲಾವಿದ ವಿಕ್ರಂ ಗಾಯಕ್‌ವಾಡ್ ಅವರದ್ದು. ಇನ್ನು ಸಂದೀಪ್ ಕೂಡಾ ಭೌತಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ವೀರಪ್ಪನ್‌ನನ್ನೇ ಆವಾಹಿಸಿಕೊಂಡವರಂತೆ, ಶ್ರಮವಹಿಸಿ ನಟಿಸಿದ್ದಾರಂತೆ. ವರ್ಮಾ ಪ್ರಕಾರ ಈ ಸಿನೆಮಾ ರಿಲೀಸಾದ ಮೇಲೆ ಜನ ಒರಿಜಿನಲ್ ವೀರಪ್ಪನ್ ಮುಖವನ್ನು ಮರೆತು ಸಂದೀಪ್‌ರನ್ನೇ ನೆನಪಲ್ಲಿಟ್ಟುಕೊಳ್ಳೋದು ಗ್ಯಾರೆಂಟಿಯಂತೆ.

ಅಸಲಿಗೆ ಸಂದೀಪ್ ಭಾರದ್ವಾಜ್ ರಂಗಭೂಮಿ ಪ್ರತಿಭೆ. ಅಧ್ಬುತವಾದ ಚಿತ್ರಕಲಾವಿ ಕೂಡಾ. ಹರಿಯಾಣ ರಾಜ್ಯದ ಈ ಹುಡುಗ ಹುಟ್ಟಿಬೆಳೆದಿದ್ದೆಲ್ಲಾ ಸಣ್ಣದೊಂದು ಗ್ರಾಮದಲ್ಲಾದರೂ, ನಟನಾಗಬೇಕೆನ್ನುವ ಹಂಬಲದಿಂದ ದೆಹಲಿಯ ತೆಕ್ಕೆಗೆ ಬಿದ್ದವನು. ಒಂದಿಷ್ಟು ನಾಟಕಗಳಲ್ಲಿ ಮಾಡುತ್ತಾ, ಸಿನಿಮಾಗಳಲ್ಲೂ ಸಣ್ಣ ಪುಟ್ಟ ಪಾತ್ರ ಗಿಟ್ಟಿಸಿಕೊಂಡಿದ್ದ ಸಂದೀಪ್ ನನ್ನು ವೀರಪ್ಪನ್ ಗೆಟಪ್ಪಿನಲ್ಲಿ ನೋಡಿದವರೆಲ್ಲಾ ಆಶ್ಚರ್ಯಗೊಂಡಿದ್ದಾರೆ.

ಎಲ್ಲಿನ ಹರಿಯಾಣ, ಎಲ್ಲಿಯ ತಮಿಳುನಾಡು! ಅದೆಲ್ಲಿಂದಲೋ ಬಂದ ಈ ನಟ ವೀರಪ್ಪನ್ ನಂಥ ವಿಕ್ಷಿಪ್ತ ವ್ಯಕ್ತಿಯ ಮ್ಯಾನರಿಸಂಗಳನ್ನು ಅಧ್ಯಯನ ಮಾಡಿ ಅದೇ ರೀತಿ ನಟಿಸುವುದೆಂದರೆ ಸುಲಭದ ಮಾತಲ್ಲ. ಕಿಲ್ಲಿಂಗ್ ವೀರಪ್ಪನ್ ಸಿನಿಮಾ ತೆರೆಗೆ ಬರಲು ಬಾಕಿ ಇರೋದು ಇನ್ನೊಂದೇ ದಿನ. ಸಿನಿಮಾ ಹೇಗಿದೆಯೋ ಗೊತ್ತಿಲ್ಲ. ಆದರೆ ನೋಡಿದವರಿಗೆ ವೀರಪ್ಪನ್ ಪಾತ್ರಧಾರಿ ಸಂದೀಪ್ ಥ್ರಿಲ್ ಕೊಡೋದು ಮಾತ್ರ ಗ್ಯಾರೆಂಟಿ!

Add Comment

Leave a Reply