Quantcast

ಅವಧಿ recommends..

ಬದನಾಮ್‌ ಕಾಶ್ಮೀರ ಬದ್ಮಾಶ್‌ ‘ವಜೀರ’

dilawar

ದಿಲಾವರ್ ರಾಮದುರ್ಗ

ವಜೀರ್, ಅಂದರೆ ಪ್ರಧಾನಿ. ಶತರಂಜ್‌ (ಚದುರಂಗ) ನ ಆಟದಲ್ಲಿ ಇದೊಂದು ಪ್ರಮುಖ ದಾಳ. ಬಾದಷಾಹನನ್ನು ರಕ್ಷಿಸುವ ಹೊಣೆ ದಳಪತಿಯದು. ರಾಜನ ಆಡಳಿತದ ಆಶಯಗಳನ್ನು ಪ್ರಜೆಗಳಿಗೆ ತಲುಪಿಸುವುದಕ್ಕಿರುವ ಒಂದು ವ್ಯವಸ್ಥೆಯಲ್ಲಿ ವಜೀರನದು ಪ್ರಮುಖ ಪಾತ್ರ.

ಯುದ್ಧ ಹೊರಗೆ ನಡೆದಷ್ಟು ಒಳಗೂ ನಡೆಯುತ್ತದೆ. ಸಾಮ್ರಾಜ್ಯ ವಿಸ್ತರಣೆಗೆ ಯಾ ಸಾಮ್ರಾಜ್ಯ ರಕ್ಷಣೆಗೆ ಬಾದಷಾಹ ತಲೆಕೆಡಿಸಿಕೊಳ್ಳುವಷ್ಟು ಸಾಮ್ರಾಜ್ಯಕ್ಕೆ ಅಧಿಪತಿಯಾಗುವ ಕನಸಿನ ಬಗ್ಗೆ ವಜೀರನೂ ತಲೆಕೆಡಿಸಿಕೊಳ್ಳುತ್ತಲೇ ಇರುತ್ತಾನೆ. ಬಾದಷಾಹನಿಗೆ ಹತ್ತಿರದ ಈ ಪದವಿ ಒಮ್ಮೊಮ್ಮೆ ನೇರ ಬಾದಷಾಹನಿಗೇ ಮುಳುವಾದ ಕಥೆಗಳು ಸಾಕಷ್ಟಿವೆ. ವಜೀರ ಹುದ್ದೆ ಬಹುತೇಕ ಸೃಷ್ಟಿ ಅಥವಾ ನೇಮಕಾತಿ. ಅತ್ಯಂತ ಅರ್ಹನಾದವನು ಈ ಹಂತಕ್ಕೆ ಏರುವುದು ಕಷ್ಟ. ಬಹುಶಃ ಇದು ಬಾದಷಹ ಆದವನಿಗೂ ಇಷ್ಟವಾಗುವಂಥದ್ದಲ್ಲ.

ಬಾದಷಾಹ ತನಗೆ ಅನುಕೂಲವಾಗಬಲ್ಲ ಮತ್ತು ತನ್ನ ಮಾತುಗಳನ್ನು ಶಿರಸಾವಹಿಸಿ ಪಾಲಿಸುವ ವ್ಯಕ್ತಿಯನ್ನೇ ವಜೀರನನ್ನಾಗಿಸುವುದು. ಕೆಲವು ಸಂದರ್ಭಗಳಲ್ಲಿ ವಜೀರನಾದವನು ಬಾದಷಾಹನ ಚಮಚ್ಯಾ ಆಗುವುದೂ ಇದೆ. ಇವೆಲ್ಲ ರಾಜಕೀಯ ಗುರಿ ಮತ್ತು ಅಧಿಕಾರ ಚದುರಂಗದಾಟಕ್ಕೆ ಪೂರಕವಾಗಬಲ್ಲ ಮೊಹರುಗಳಷ್ಟೇ. ಹೀಗಾಗಿ ವಜೀರ್‌ ಎನ್ನುವುದು ನಿಜವಾದರ್ಥದಲ್ಲಿ ಒಂದು ಮೊಹರಾ ಅಷ್ಟೇ.

ವಜೀರ ಸಿನಿಮಾ ಇಂಥದೊಂದು ರಾಜಕೀಯ ಚದುರಂಗದಾಟದ ಪ್ಲಾಟ್‌ ಹೊಂದಿದೆ. ಇಲ್ಲಿ ವಜೀರ ಒಂದು Ghost. ಜನಾಂಗದ ಅಂತಃಕಲಹ, ಜನಾಂಗಗಳ ನಡುವಿನ ಸಂಘರ್ಷದಲ್ಲಿಯೂ ಚದುರಂಗದಾಟವೇ ಇದೆ. ಅಷ್ಟೇ ಏಕೆ ಮನುಷ್ಯನ ನಿಜ ಬದುಕಿನಲ್ಲೂ ಚದುರಂಗದಾಟವಿದೆ. ಅದು ಭಾವನೆಗಳನ್ನೇ ದಾಳವನ್ನಾಗಿಸಿಕೊಳ್ಳುವ ಆಟ. ವಜೀರ ಚಿತ್ರದಲ್ಲಿ ವಿಧು ವಿನೋದ್‌ ಚೋಪ್ರಾ, ಅಭಿಜಿತ್‌ ಜೋಶಿ ಇದೆಲ್ಲವನ್ನು ಕಥೆಯಾಗಿ ಹೆಣೆದುಕೊಟ್ಟಿದ್ದಾರೆ. ನಿರ್ದೇಶಕ ಬಿಜೊಯ್‌ ನಂಬಿಯಾರ್‌ ಚೋಪ್ರಾ ಕಥೆಯನ್ನು ದೃಶ್ಯವಾಗಿಸುವಲ್ಲಿ ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಭಾಗಶಃ ಯಶಸ್ವಿಯೂ ಆಗಿದ್ದಾರೆ. ಹಾಲಿವುಡ್‌ ಚಿತ್ರ ನಿರ್ಮಾಣಕ್ಕೆಂದು ಹೆಚ್ಚೂ ಕಮ್ಮಿ ದಶಕದ ಹಿಂದೆಯೇ ಚೋಪ್ರಾ ಈ ಸ್ಕ್ರಿಪ್ಟ್ ಮಾಡಿಟ್ಟುಕೊಂಡಿದ್ದರಂತೆ.
ಚಿತ್ರದ ಕನ್‌ಫ್ಲಿಕ್ಟ್‌ ಲೈನ್‌

ಭಯೋತ್ಪಾದನೆ ನಿಗ್ರಹ ದಳದ ATS (Anti-Terrorism Squad) ಅಧಿಕಾರಿ ಡ್ಯಾನಿಶ್‌ ಅಲೀ ಮತ್ತು ಕಥಕ್‌ ನೃತ್ಯಕಲಾವಿದೆ ರುಹಾನಾ ನಡುವಿನ ಪ್ರೇಮಕ್ಕೆ ನೂರೀ ಎನ್ನುವ ಮುದ್ದು ಮಗಳು. ರುಹಾನಾ ತನ್ನ ಕಾಲ್ಗೆಜ್ಜೆಗಳ ರಿಪೇರಿಗೆಂದು ಮಾರ್ಕೆಟ್‌ಗೆ ಬಂದ ಸಂದರ್ಭ. ಅಲ್ಲಿ ಡ್ಯಾನಿಶ್‌ ಅಲೀ ಭಯೋತ್ಪಾದಕ ಫಾರೂಕ್‌ ರಮೀಜ್‌ನನ್ನು ಕಾಣುತ್ತಾನೆ. ಅವನನ್ನು ಕಾರಿನಲ್ಲಿ ಬೆನ್ನಟ್ಟುತ್ತಾನೆ. ಡ್ಯಾನಿಶ್‌ ಕಾರಿನ ಮೇಲೆ ರಮೀಜ್‌ ಪ್ರತಿದಾಳಿ ನಡೆಸುತ್ತಾನೆ. ಈ ಹಣಾಹಣಿಯಲ್ಲಿ ಡ್ಯಾನಿಶ್‌ ಮಗಳು ನೂರೀ ಸಾವನ್ನಪ್ಪುತ್ತಾಳೆ. ಇದರಿಂದ ದಂಪತಿ ನಡುವೆ ವಿರಸ ಮೂಡಿ, ಡ್ಯಾನಿಶ್‌ನಿಂದ ರುಹಾನಾ ದೂರವಾಗುತ್ತಾಳೆ. ತನ್ನ ಮಗಳು ನೂರೀ ಸಾವಿಗೆ ಡ್ಯಾನಿಶ್‌ನ ಅತಿರೇಕದ ನಡೆಯೇ ಕಾರಣ ಎನ್ನುವುದು ಆಕೆಯ ವಾದ. ಮಗಳ ಸಾವಿಗೆ ಕಾರಣನಾದವರ ವಿರುದ್ಧ ಆಕ್ರೋಶ ಡ್ಯಾನಿಶ್‌ ಅಲಿಯದು. ಆದರೆ ಅದಕ್ಕೂ ಮುನ್ನ ಕೆಲಸ ಕಳೆದುಕೊಂಡು ತೀವ್ರ ಹತಾಶೆಗೊಳಗಾಗುವ ಡ್ಯಾನಿಶ್‌ ಮಗಳ ಸಮಾಧಿಯ ಮುಂದೆ ಆತ್ಮಹತ್ಯೆಗೂ ಯತ್ನಿಸಿರುತ್ತಾನೆ. ಇದು ಒಂದು ಲೈನ್‌.

ಮತ್ತೊಂದೆಡೆ ಪಂಡಿತ ಓಂಕಾರನಾಥ್‌ ಧರ್‌ ಕಾಶ್ಮೀರಿ ಪಂಡಿತ. ಚೆಸ್‌ ಹೇಳಿಕೊಡುವ ಟ್ರೈನರ್‌. ಎರಡೂ ಕಾಲು ಕಳೆದುಕೊಂಡು ವ್ಹೀಲ್‌ ಚೇರ್‌ ಮೇಲೆ ಬದುಕುವ ವ್ಯಕ್ತಿ. ತಲೆ ಮಾತ್ರ ಭಾರೀ ಚುರುಕು. ಕಾಶ್ಮೀರಿ ಬ್ರಾಹ್ಮಣ ಪಂಡಿತ. ಅವನಿಗೊಬ್ಬ ಮಗಳು ನೀನಾ. ಆಕೆ ವೆಲ್ಫೇರ್‌ ಮಿನಿಸ್ಟರ್‌ ಯಝಾದ್‌ ಖುರೇಶಿ ಮಗಳಿಗೆ ಚೆಸ್‌ ಹೇಳಿಕೊಡುವ ಟೀಚರ್‌. ಆಕೆ ಮಿನಿಸ್ಟರ್‌ ಮನೆಯಲ್ಲಿ ಕಾಲು ಜಾರಿ ಮಹಡಿಯಿಂದ ಬಿದ್ದು ಸತ್ತಳೆನ್ನುವುದು ವರದಿ. ಅದು ಕೊಲೆ ಎನ್ನುವುದು ಪಂಡಿತನಿಗೆ ಖಚಿತ. ಹೀಗಾಗಿ ಖುರೇಶಿ ಬೇಟೆ ಪಂಡಿತನ ಅಂತಿಮ ಗುರಿ. ಡ್ಯಾನಿಶ್‌ ಅಲಿಯನ್ನು ತನ್ನ ಚಾಣಾಕ್ಷತೆಯಿಂದ ಮತ್ತು ಮಾತಿನ ಚತುರತೆಯಿಂದ ಸ್ನೇಹಕ್ಕೆ ಸೆಳೆದುಕೊಳ್ಳುತ್ತಾನೆ. ತನ್ನ ಗುರಿಗೆ ಇವನನ್ನೇ ಅಸ್ತ್ರವನ್ನಾಗಿ ಆಯ್ದುಕೊಳ್ಳುತ್ತಾನೆ. ಇದು ಎರಡನೇ ಲೈನ್‌.

ಭಯೋತ್ಪಾದಕ ಫಾರೂಕ್‌ ರಮೀಜ್‌ ಮತ್ತು ಖುರೇಶಿ ನಡುವೆ ನಂಟಿದೆ. ಹಾಗೆಯೇ ಪಂಡಿತ್‌ ಧರ್‌ ಮಗಳು ನೀನಾ ಸಾವಿಗೂ ಖುರೇಶಿಯದೇ ನಂಟಿದೆ. ಅಷ್ಟೇ ಅಲ್ಲ, ಖುರೇಶಿ ಮಗಳು ರೂಹಿ ಕೂಡ ಅವನ ಮಗಳಲ್ಲ. ರೂಹಿಯ ತಂದೆ ತಾಯಿಯನ್ನು ಕೊಂದ ಪಾತಕಿ ಇವನು. ಅದನ್ನು ಕಣ್ಣಾರೆ ಕಂಡಿದ್ದು ಈ ರೂಹೀ. ಇದನ್ನೇ ಅವಳು ನೀನಾ ಬಳಿ ಹೇಳಿಕೊಂಡಿದ್ದು. ಅದನ್ನು ಕೇಳಿಸಿಕೊಂಡ ಖುರೇಶಿ ನೀನಾಳನ್ನು ಮುಗಿಸಿದ್ದು. ಇಷ್ಟೆಲ್ಲ ಆದ ನಂತರ ರೂಹೀಯನ್ನೇ ತನ್ನ ಮಗಳೆಂದು ಎಲ್ಲರನ್ನು ನಂಬಿಸಿ ಅನುಕಂಪ ಗಳಿಸಿ ಅದನ್ನೇ ರಾಜಕೀಯಕ್ಕಾಗಿ ಬಳಸಿಕೊಳ್ಳುವ ಖುರೇಶಿ ಅಸಲಿ ವಿಲನ್‌. ರೂಹಿಗೆ ಇದೆಲ್ಲ ಗೊತ್ತು. ಡ್ಯಾನಿಶ್‌ ಅಲೀಗೆ ಇದೆಲ್ಲವನ್ನು ಮನದಟ್ಟು ಮಾಡುತ್ತಾಳೆ ಕೂಡ. ಇಲ್ಲಿ ರೂಹಿ ಮುಗ್ಧೆ. ಅವಳನ್ನು ಇಸ್ಲಾಂನ ಸಂಕೇತವಾಗಿಯೂ ಕಾಣಬಹುದು. ಖುರೇಶಿಯಂಥವರ ಕೈಯಲ್ಲಿ ಇಸ್ಲಾಂ ದುರ್ಬಳಕೆಯಾಗುತ್ತಿದೆ ಎನ್ನುವುದು ಇಲ್ಲಿ ಗುರುತಿಸಬೇಕಾದ ಸೂಕ್ಷ್ಮ. ಇದು ಚಿತ್ರದ ಅಂಡರ್‌ ಕರೆಂಟ್‌.

ಬಹುತೇಕ ನವಿರಾದ ಮಾನವೀಯ ನೆಲೆಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ ಚೋಪ್ರಾ, ಮಿಷನ್‌ ಕಾಶ್ಮೀರ್‌ ಮತ್ತಿತರ ಸಿನಿಮಾಗಳ ಮೂಲಕ ಲೈನ್‌ ಆಫ್‌ ಕನ್‌ಫ್ಲಿಕ್ಟ್‌ ವಿಷಯದ ಕುರಿತಾಗಿಯೂ ಚಿತ್ರ ಮಾಡಿದ್ದಾರೆ. ಧರ್ಮವೊಂದನ್ನಿಟ್ಟುಕೊಂಡು ಜಗದ ಎಲ್ಲೆಡೆ ನಡೆಯುತ್ತಿರುವ ಹಿಂಸೆ ಕಾಶ್ಮೀರದ ಸಮಸ್ಯೆಯಲ್ಲೂ ಇದೆ. ಇದನ್ನೇ ಕೇಂದ್ರವಾಗಿಟ್ಟುಕೊಂಡು ವಜೀರ ಚಿತ್ರ ಕಟ್ಟಿಕೊಡಲು ಚೋಪ್ರಾ ಯತ್ನಿಸಿದ್ದಾರೆ.

ಈ ಸಲ ಅವರ ಯತ್ನ ಹಿಂಸೆಯ ದೃಷ್ಟಿಕೋನದಿಂದ ಕೂಡಿದೆ. ಮೂಲ ಕಾಶ್ಮೀರದವರೇ ಆಗಿರುವ ಚೋಪ್ರಾ, ಕಣಿವೆಯಿಂದ ಹೊರಕ್ಕೇ ಉಳಿದಂತಿರುವ ಕಾಶ್ಮೀರಿ ಪಂಡಿತರ ಬಗ್ಗೆ ತೀವ್ರ ಕಾಳಜಿಯನ್ನು ‘ವಜೀರ್’ ಚಿತ್ರದಲ್ಲಿ ವ್ಯಕ್ತಪಡಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಹಿಂಸೆಗೆ ಕಾರಣ ಏನು? ಬ್ರಾಹ್ಮಣ ಪಂಡಿತ ಸಮುದಾಯದವರು ಕಣಿವೆಯಿಂದ ಹೊರಕ್ಕುಳಿದಿದ್ದು ಯಾಕಾಗಿ? ಇದಕ್ಕೆಲ್ಲ ಕಾರಣ ಏನು? ಇದಕ್ಕೆ ಆರೋಪಗಳು ಹಲವು. ಇದೆಲ್ಲ ಅರ್ಥವಾಗುವಂಥದೇ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಸ್ಲಾಂ ಬಗ್ಗೆ ತುಂಬ ತಪ್ಪು ಗ್ರಹಿಕೆಗಳಿವೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಒಟ್ಟು ಜಗದ ರಾಜಕೀಯ ತನ್ನ ಚದುರಂಗದಾಟಕ್ಕೆ ಈ ಆರೋಪಗಳನ್ನೇ ಪ್ರಮುಖ ದಾಳಗಳನ್ನಾಗಿ ಬಳಸಿಕೊಳ್ಳುತ್ತದೆ. ಕಣಿವೆಯ ಸಾಮಾಜಿಕ ಮತ್ತು ಧಾರ್ಮಿಕ ರಾಜಕಾರಣ ಇದನ್ನೇ ಆಧಾರವಾಗಿಟ್ಟುಕೊಂಡು ಹಿಂಸೆಗಿಳಿಯುತ್ತದೆ. ಹಿಂಸೆಗೆ ಪ್ರತಿ ಹಿಂಸೆ. ಇದೊಂದು ನಿರಂತರ ಪ್ರಕ್ರಿಯೆಯಂತಾಗಿದೆ.

ಇಲ್ಲಿ ಖುರೇಶಿ ಒಂದು ಪಂಗಡಕ್ಕೆ ಸೇರಿದವನು. ಸುನ್ನಿ ಎನ್ನುವರ್ಥದಲ್ಲಿ. ಡ್ಯಾನಿಶ್‌ ಅಲಿ ಪಾಲಿಸುವ ಇಸ್ಲಾಂ ಕೂಡ ಭಿನ್ನ. ಅಂದರೆ ಶಿಯಾ. ಸಾಮಾನ್ಯವಾಗಿ ಈ ಶಿಯಾ ಗುಂಪಿನವರು ಅಲೀ ಹೆಸರನ್ನು ಹೆಚ್ಚಿಗೆ ಇಟ್ಟುಕೊಳ್ಳುತ್ತಾರೆ. ಹಜರತ್‌ ಅಲೀ ಅವರ ಅನುಯಾಯಿಗಳಿವರು. ಸೂಕ್ಷ್ಮವಾಗಿ ಯೋಚಿಸಿದರೆ ಇಸ್ಲಾಂ ಒಳಗಿನ ಭಿನ್ನಾಭಿಪ್ರಾಯವನ್ನು ಇಲ್ಲಿ ಪರೋಕ್ಷವಾಗಿ ಬಳಸಿಕೊಳ್ಳಲಾಾಗಿದೆ. ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು ಎನ್ನುವ ಹಳಸಲು ರಾಜಕೀಯ ತಂತ್ರಗಾರಿಕೆಯರ್ಥದಲ್ಲಿ. ಇದನ್ನು ಬಳಸಿಕೊಳ್ಳುತ್ತಿರುವುದು ಕಣಿವೆಯ ಚಾಣಾಕ್ಷ ಪಂಡಿತ ರಾಜಕಾರಣ. ಇದನ್ನೇ ಅನುಪಮ್‌ ಖೇರ್‌ ಅಂಥವರು ಸಾರ್ವಜನಿಕ ಜೀವನದಲ್ಲಿ ಬಳಸಿಕೊಳ್ಳುತ್ತಿರುವುದು. ಇದೆಲ್ಲವೂ ಕಣಿವೆಯ ಅಲ್ಪಸಂಖ್ಯಾತರ ಮೇಲೆ ಕಾಳಜಿ ಎನ್ನುವ ಸಾಫ್ಟ್‌ ಝೋನ್‌ನಲ್ಲಿ ನಿಂತು ಬಹುಸಂಖ್ಯಾತ ಕಾಶ್ಮೀರಿಗಳ ಮೇಲೆ ಪ್ರತಿ ಹೋರಾಟಕ್ಕೆ ನಿಲ್ಲುವ ಯತ್ನಗಳು. ಕಾಶ್ಮೀರಿಗಳ ಸಮಸ್ಯೆಯೇ ಬೇರಿದೆ. ಅದು ಆಝಾದ್‌ ಕಾಶ್ಮೀರ್‌ ಮತ್ತು ಕಾಶ್ಮೀರ್‌ ಭಾರತದ ಅಂಗ ಎಂದುಕೊಂಡವರ ನಡುವಿನ ಸಂಘರ್ಷವೂ ಹೌದು. ಇದು ಚಿತ್ರದ ಅಸಲಿ ಒಳಬೇಗುದಿ.

ಚಿತ್ರದ ಪ್ಲಾಟ್‌ನಲ್ಲಿ ಓಂಕಾರನಾಥ್‌ ಧರ್‌ ಗೆ ಖುರೇಷಿ ಮೇಲೆ ಕಣ್ಣಿದೆ. ತನ್ನ ವೈಯಕ್ತಿಕ ಕಾರಣಗಳಿಗೇ ಇರಬಹುದು. ತನ್ನ ಸೇಡನ್ನು ತೀರಿಸಿಕೊಳ್ಳಲು ಆತ ತನ್ನ ಚದುರಂಗದಾಟದ ಸೂಕ್ಷ್ಮಗಳನ್ನು ಬಳಸಿಕೊಳ್ಳುತ್ತಾನೆ. ಅಂದರೆ ಬಾದಷಾಹನಿಗೆ ಹತ್ತಿರದ ವಜೀರ್‌ನನ್ನೇ ಆತ ತನ್ನ ದಾಳವನ್ನಾಗಿಸಿಕೊಳ್ಳುತ್ತಾನೆ. ಕಾಶ್ಮೀರದ ವ್ಯವಸ್ಥೆಯ ಅಂದರೆ ಇಸ್ಲಾಂ ಒಳಗಿನ ಭಿನ್ನತೆಯನ್ನೇ ಆತ ಅಸ್ತ್ರವಾಗಿಸಿಕೊಳ್ಳುತ್ತಾನೆ. ಈ ನೆಲೆಯಲ್ಲಿಯೇ ಆತನಿಗೆ ಡ್ಯಾನಿಶ್‌ ಅಲಿ ದೋಸ್ತ್‌ ಆಗಿ ಮತ್ತು ಆಮೂಲಕ ತನ್ನ ಗುರಿಗೆ ಅಸ್ತ್ರವಾಗಿ ಕಾಣಿಸಿಕೊಳ್ಳುವುದು.

ಡ್ಯಾನಿಶ್‌ ಅಲೀ ಭಯೋತ್ಪಾದನಾ ನಿಗ್ರಹ ದಳದಲ್ಲಿ ಅಧಿಕಾರಿಯಾಗಿದ್ದವ. ಕಾಶ್ಮೀರದ ರಾಜಕೀಯ ಮತ್ತು ಪೊಲೀಸ್‌ ವ್ಯವಸ್ಥೆಗೆ ತೀರ ಹತ್ತಿರದವ. ಒಳಸುಳಿಗಳು ಮತ್ತು ಒಳದಾರಿಗಳನ್ನು ಬಲ್ಲವ ಎನ್ನುವರ್ಥದಲ್ಲಿ. ಕಾಶ್ಮೀರದ ರಾಜಕೀಯ ಘರ್ಷಣೆಯನ್ನು ಹೊರಗಿನವರು ಇಸ್ಲಾಂ ಹೊರತಾಗಿ ನೋಡುವ ಸಾಧ್ಯತೆಗಳು ಕಮ್ಮಿ.
ಶತರಂಜದಾಟವನ್ನು ಚೆನ್ನಾಗಿ ಬಲ್ಲ ಓಂಕಾರನಾಥ್‌ ಧರ್‌, ಯಾವ ದಾಳವನ್ನು ಯಾವ ಸಮಯದಲ್ಲಿ ಯಾವುದರ ವಿರುದ್ಧ ಬಳಸಿಕೊಳ್ಳಬೇಕು ಎನ್ನುವ ಚಿಂತನೆಯಲ್ಲೇ ಇರುತ್ತಾನೆ. ಪಂಡಿತನಿಗೆ ತನ್ನ ಗುರಿ ಮುಖ್ಯ. ಆತ ಯಾವುದಕ್ಕೂ ಸಿದ್ಧ. ಯಾರನ್ನೋ ಬಲಿ ಕೊಡಲು ಕೂಡ. ಆದರೆ ಇಲ್ಲಿ ಧರ್‌ ನನ್ನು ಕೊಂಚ ಚಾಣಾಕ್ಷನನ್ನಾಗಿಸಲು ತಂತ್ರ ಬಳಕೆಯಾಗಿದೆ. ಧರ್‌ ತಾನೇ ಬಲಿಯಾಗುವ ಮೂಲಕ ತನನ್ನು ತಾನು ಶಹೀದ್‌ ಮಟ್ಟಕ್ಕೇರಿಸಿಕೊಳ್ಳುತ್ತಾನೆ. ಅದನ್ನು ಡ್ಯಾನಿಶ್‌ಗೂ ಮನದಟ್ಟು ಮಾಡಲು ವಿಡಿಯೋ ಕೂಡ ಮಾಡಿಸಿಟ್ಟುಕೊಂಡಿರುತ್ತಾನೆ.

ಡ್ಯಾನಿಶ್‌ ಅಲಿ ಗೆಳೆಯ ಕಾಶ್ಮೀರಿ ಪಂಡಿತ ಧರ್‌ಗೆ ಕೊಟ್ಟ ಮಾತಿನಂತೆ ಸೇಡು ತೀರಿಸಿಕೊಳ್ಳುವ ಗುರಿಯನ್ನು ತನ್ನ ಪರಮ ಕರ್ತವ್ಯವನ್ನಾಗಿಸಿಕೊಳ್ಳುತ್ತಾನೆ. ಖುರೇಶಿ ವಿರುದ್ಧ ಜಂಗ್‌ ಶುರು ಮಾಡಿ ಕೊನೆಗೂ ಆತನನ್ನು ಮುಗಿಸುತ್ತಾನೆ. ಅದಕ್ಕಾಗಿ ಅದೇ ಪೊಲೀಸ್‌ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಾನೆ. ಇದರರ್ಥ. ಕಾಶ್ಮೀರಿಗಳ ಅಂತಃಕಲಹ, ಸೇನೆ ಮತ್ತು ಪೊಲೀಸ್‌ ಬಂದೂಕು ಬಳಸಿಕೊಳ್ಳುವ ಮೂಲಕವೇ ಕಾಶ್ಮೀರ ಕಣಿವೆಯಲ್ಲಿ ಶಾಂತಿ ನೆಲೆಸುವುದು ಸಾಧ್ಯ. ಮುಸ್ಲಿಂ ಭಯೋತ್ಪಾದನೆ ಎಂದು ಹೆಸರಾಗಿರುವ ಅಲ್ಲಿನ ಹಿಂಸೆಯನ್ನು ಮುಗಿಸಿ, ಕಾಶ್ಮೀರಿಗಳ ಶಕ್ತಿಯನ್ನು ತಗ್ಗಿಸಿ ಆನಂತರವೇ ಕಾಶ್ಮೀರಿ ಪಂಡಿತರು ಕಣಿವೆಯಲ್ಲಿ ಹಾಯಾಗಿ ವಾಪಸ್‌ ಆಗಬಹದು. ಇದು ಚೋಪ್ರಾ, ಅಭಿಜಿತ್‌ ಜೋಶಿ, ದೇಶಪಾಂಡೆ ಎಲ್ಲ ಸೇರಿ ಹೆಣೆದ ಪ್ಲಾಟ್‌. ಅಂದರ್‌ ಕೀ ಬಾತ್‌ ಅನ್ನು ಭಾವಪರವಶತೆಯೊಳಗೆ ಬೆರೆಸಿ ತೆರೆಯ ಮೇಲೆ ಸಚ್ಚಿ ಕಹಾನಿಯಂತೆ ಧ್ವನಿಸಲು ಪೂರಕವಾದ ಅಂಶಗಳೂ ಭರಪೂರ ಸಾಂಗತ್ಯ ನೀಡಿವೆ.

ಶತರಂಜ್‌ನಲ್ಲಿ ಧರ್‌ ತನ್ನದೇ ಒಂದು ಸ್ಪೇಶಲ್‌ ಆಟ ರೂಪಿಸಿಕೊಂಡಿದ್ದಾನೆ,. ರಷ್ಯನ್‌ ಹುಡುಗಿಯ ಜತೆ ವೋಡ್ಕಾ! ದಾಳಗಳನ್ನು ವೋಡ್ಕಾದ ಪೆಗ್‌ ಆಗಿಸಿ ಅದರಲ್ಲಿ ವೋಡ್ಕಾ ಹಾಕಿ ಕುಡಿಯುತ್ತ ನಶೆ ಏರಿಸಿಕೊಳ್ಳುವುದು. ಆಮೂಲಕ ಡ್ಯಾನಿಶ್‌ ಅಲಿಯಲ್ಲಿ ಖುರೇಶಿ ವಿರುದ್ಧದ ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸೆಯ ವಿರುದ್ಧದ ನಶೆಯನ್ನು ಹೆಚ್ಚಿಸುವುದು. ಅದನ್ನು ವಿಷವನ್ನಾಗಿಸುವುದು. ಆ ವಿಷದಿಂದಲೇ ಖುರೇಶಿ ಮತ್ತವನ ಸಂತತಿಯನ್ನು ಮುಗಿಸುವುದು. ಹೀಗೆ ಕಾಶ್ಮೀರ ಕಣಿವೆಯಲ್ಲಿ ಹಿಂಸೆಯ ವಿಷವನ್ನು ಬಿತ್ತುವ ಐಡಿಯಾಗಳು ಇಡೀ ದೇಶದಲ್ಲಿ ವಿಜೃಂಭಿಸುತ್ತವೆ. ಕಾಶ್ಮೀರದಲ್ಲಿ ಆಝಾದ್‌ ಕಾಶ್ಮೀರ ಹೆಸರಲ್ಲಿ ನಡೆಯುವ ಒಳಗಿನ/ಹೊರಗಿನಿಂದ ನಡೆವ ಹಿಂಸೆಗೆ ಮತ್ತು ಇಂಡಿಯನ್‌ ಮಿಲಿಟರಿ ಶಾಂತಿಗಾಗಿ ಬಂದೂಕು ನೆಪದಲ್ಲಿ ನಡೆಸುವ ಯತ್ನಗಳು ಅದಕ್ಕೆ ಪ್ರತಿಹಿಂಸೆಯಂತೆ ಕಾಣಿಸುತ್ತವೆ. ಒಟ್ಟು ಹಿಂಸೆ-ಪ್ರತಿಹಿಂಸೆಯ ಯತ್ನಗಳೆಲ್ಲವೂ ಇಸ್ಲಾಂ ಸಫಾಯಾ ಕೆಲಸವೇ ಆಗಿವೆ ಎನ್ನುವುದು ಸ್ಪಷ್ಟ.

ಅಮಿತಾಬ್‌ ತಮ್ಮ ಅಭಿನಯದ ಅನುಭವದಿಂದ ಪಾತ್ರವೇ ತಾವಾಗಿದ್ದಾರೆ. ಫರ್ಹಾನ್‌ ಅಖ್ತರ್‌ ಬಲಿಗೆ ಸಾಕಿದ ಹೋರಿಯಂತೆ ಅಬ್ಬರಿಸಿದ್ದಾರೆ. ಖುರೇಶಿ ಕಾಶ್ಮೀರಿ ಮುಸ್ಲೀಮರ ಕ್ರೌರ್ಯ ಪ್ರತಿನಿಧಿಸುವ ಹಾಗೆ ಅಭಿನಯಿಸಿದ್ದಾರೆ. ಇದೆಲ್ಲವನ್ನು ಸಹಿಸಿಕೊಂಡ ಕಾಶ್ಮೀರದ ಮಂಜಿನಂತೆ ತಣ್ಣಗೆ ಕಾಣಿಸುವ ರೂಹಿ ಕಂಗಳಲ್ಲಿ ಶಾಂತಿಯ ಬಿಂಬವಿದೆ. ರೂಹೀಯ ಆ ಕಂಗಳೇ ಧರ್ಮ. ನಾವು ಧರ್ಮವನ್ನು, ಮನುಷ್ಯರನ್ನು ಮತ್ತು ಒಟ್ಟು ಜಗತ್ತನ್ನು ಹೀಗೆ ಕಾಣುವ ಜರೂರಿ ಇದೆ ಎನ್ನುವ ಭಾವ ಮುಖ್ಯ. ಅದು ಅಂತಿಮ ಸತ್ಯವೂ.. ಇಡೀ ವಜೀರ ಚಿತ್ರ ಹಿಂಸೆಯಿಂದಲೇ ಅಬ್ಬರಿಸುತ್ತದೆ. ಆದರೆ ತಣ್ಣನೆ ಕಂಗಳ ರೂಹೀ ಮಾತ್ರ ಹೆಚ್ಚು ನೆನಪಲ್ಲುಳಿಯುತ್ತಾಳೆ. ದಿಲ್ಲೊಳಕ್ಕಿಳಿಯುತ್ತಾಳೆ

One Response

  1. Kiran
    January 14, 2016

Add Comment

Leave a Reply