Quantcast

ಅವರು ಈಗಿಲ್ಲ, ನೀವು ಈ ಕಥೆ ಕೇಳದೆ ಹೋಗುವ ಹಾಗಿಲ್ಲ..

ಕನ್ನಡಕ್ಕೆ ಕಾಡುವ ಹಾಡುಗಳನ್ನು ಕೊಟ್ಟ ಗೀತಪ್ರಿಯ ಇನ್ನಿಲ್ಲ.

ಲಕ್ಷ್ಮಣ ರಾವ್ ಮೋಹಿತೆ ಎನ್ನುವ ಬಾಲಕ ಗಾಂಧಿನಗರಕ್ಕೆ ಹೆಜ್ಜೆ ಇಟ್ಟು ‘ಗೀತಪ್ರಿಯ’ ಆದದ್ದು ದೊಡ್ಡ ಕಥೆ.

ಕನ್ನಡ ಚಲನ ಚಿತ್ರ ಗೀತೆಗಳ ಪೈಕಿ ವಾಹ್! ಎನ್ನುವ ೧೦ನ್ನು ನೀವು ಆರಿಸಿದರೆ ಅದರಲ್ಲಿ ಖಂಡಿತಾ ಒಂದಷ್ಟು ಗೀತ ಪ್ರಿಯ ಅವರದ್ದೇ ಎಂದು ಅನುಮಾನವಿಲ್ಲದೆ ಹೇಳಬಹುದು.

ಅವರ ಅತಿ ಜನಪ್ರಿಯ ಗೀತೆ ‘ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ..’ ದ ಹಿಂದಿನ ಕಥೆಯನ್ನು ನಮ್ಮ ಎ ಆರ್ ಮಣಿಕಾಂತ್ ಅಷ್ಟೇ ಹೃದಯಸ್ಪರ್ಶಿಯಾಗಿ ಇಲ್ಲಿ ಬಿಚ್ಚಿಟ್ಟಿದ್ದಾರೆ 

a r manikanth

ಎ ಆರ್ ಮಣಿಕಾಂತ್

 

ಚಿತ್ರ: ಬೆಳುವಲದ ಮಡಿಲಲ್ಲಿ…
ಗೀತೆರಚನೆ: ಗೀತಪ್ರಿಯ
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
ಸಂಗೀತ: ರಾಜನ್-ನಾಗೇಂದ್ರ
kalpanaಬೆಳವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ
ಒಂದೊಂದು ಬೆವರ ಹನಿ ಮುತ್ತಾಯ್ತದೊ
ರಾಗಿಯ ಜ್ವಾಳದ ತೆನೆಯಾಯ್ತದೊ
ಎಲ್ಲಾರ ಅನ್ನದ ತುತ್ತಾಯ್ತದೋ|| ಬೆಳುವಲದ….||

ದುಡಿಮೇಲಿ ಯಾವತ್ತು ಇರಬೇಕು ಭಕ್ತಿ
ಬಡತನವ ಓಡ್ಸೋಕೆ ಅದು ಒಂದೇ ಯುಕ್ತಿ
ದುಡಿಯೋರೆ ನಾಡಿನ ಬಲು ದೊಡ್ಡ ಶಕ್ತಿ
ಬೆಳೆಯೋರ ಕೈಗಳು ದೇಶಕ್ಕೆ ಆಸ್ತಿ!!
ಈ ನಮ್ಮ ಶಕ್ತೀಲಿ ನಂಬಿಕೆ ಇಟ್ಟಾಗ
ನಾವ್ಕಾಣೊ ಕಸವೆಲ್ಲ ರಸವಾಯ್ತದೊ
ನಾವ್ಕಾಣೊ ಕನಸೆಲ್ಲ ನನಸಾಯ್ತದೊ
ಓಹೊ ಹಾಹಾ ಹಾಹಾ ಓಹೊ ಹಾಹಾ… ಬೆಳುವಲದ….!!

ಉಳುವೋನೆ ಲೋಕಕ್ಕೆ ಬೇಕಾದ ಗೆಳೆಯ
ಹಳ್ಳಿಗೂ ಡಿಲ್ಲಿಗೂ ಕೊಡ್ತಾನೆ ಬೆಳೆಯ
ಭೂತಾಯಿ ಬಂಟ ಈ ನೇಗಿಲನೆಂಟ
ಇವ್ನಿಂದ್ಲೆ ಅಳಿಯೋದು ಹಸಿವಿನಾ ಸಂಕಟ
ಈ ಬಂಟ ದುಡಿದಾಗ ಭೂದೇವಿ ನಗ್ತಾಳೆ
ಆವಾಗ್ಲೆ ನೆಲವೆಲ್ಲ ಹಸಿರಾಯ್ತದೊ
ಎಲ್ಲರ ಬಾಳಿನ ಉಸಿರಾಯ್ತದೊ!!

ಚಿತ್ರರಂಗದಲ್ಲಿ ನಾಯಕ-ನಾಯಕಿಯರು ಹೆಸರು ಬದಲಿಸಿಕೊಳ್ಳುವ; ಹಾಗೆ ಬದಲಾದ ಹೆಸರಿನಿಂದಲೇ ಜನಪ್ರಿಯನಾದ ಉದಾಹರಣೆಗಳು ಬೇಕಾದಷ್ಟಿವೆ. ಆದರೆ ಒಬ್ಬ ಗೀತೆರಚನೆಕಾರ ಕಂ ನಿರ್ದೇಶಕನೂ ಬದಲಾದ ಹೆಸರಿನಿಂದಲೇ ಜನಪ್ರಿಯನಾದ ಎಂಬುದಕ್ಕೆ ಸಾಕ್ಷಿಯಾಗಿ ಇರುವವರು ಗೀತಪ್ರಿಯ. ಲಕ್ಷ್ಮಣರಾವ್ ಮೋಹಿತೆ ಎಂಬುದು ಅವರ ನಿಜ ನಾಮಧೇಯ. ಚಿತ್ರರಂಗದ ಜನ ಆ ಹೆಸರನ್ನು ಶಾರ್ಟ್ ಅಂಡ್ ಸ್ವೀಟ್ ಆಗಿ ಎಲ್.ಆರ್. ಮೋಹಿತೆ ಎಂದು ಕರೆದರು. ಪದಗಳ ಜತೆಗೇ ಸರಸವಾಡುವ ಮಂದಿ ಎಲ್.ಆರ್. ಮೋಹಿತೆ ಅಂದರೆ `ಎಲ್ಲರಿಂದಲೂ ಮೋಹಿತರಾದವರು’ ಎಂದೇ ಅರ್ಥ ಎಂದು ಹೇಳಿ ಗೀತಪ್ರಿಯ ಮಗುವಿನಂತೆ ನಗಲು ಕಾರಣರಾದರು.

ತಮ್ಮ ನಿರ್ದೇಶನದ ಮೊದಲ ಚಿತ್ರ `ಮಣ್ಣಿನ ಮಗ’ಕ್ಕೆ ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ಹೆಗ್ಗಳಿಕೆ ಗೀತಪ್ರಿಯ ಅವರದು. ಚಿತ್ರರಂಗಕ್ಕೆ ಬರುವ ಮೊದಲು ಅವರು ಮಿಲಿಟರಿ ಕ್ಯಾಂಪ್ನಲ್ಲಿ; ನಂತರ ಕಬ್ಬನ್ಪಾರ್ಕ್ಗೆ ಸಮೀಪವಿದ್ದ ಒಂದು ರೆಸ್ಟೋರೆಂಟ್ನಲ್ಲಿ ಕ್ಲಾರ್ಕ್ ಆಗಿ ಕೆಲಸ ಮಾಡುತ್ತಿದ್ದರು.ಆ ದಿನಗಳಲ್ಲೇ ವಿಪರೀತ ಓದುವ, ಹಾಡು ಬರೆಯುವ; ಚಿತ್ರರಂಗ ಸೇರಿ ಮಹತ್ವದ ಸಾಧನೆ ಮಾಡುವ ಮಹದಾಸೆ ಹೊಂದಿದ್ದರು ಲಕ್ಷಣರಾವ್ ಮೋಹಿತೆ. ಹೀಗಿದ್ದಾಗಲೇ ಅದೊಮ್ಮೆ ಸಂಗೀತ ನಿರ್ದೇಶಕ ವಿಜಯಭಾಸ್ಕರ್ರ ಪರಿಚಯವಾಯಿತು. ಅವರು-`ಈ ಕೆಲಸ ಬಿಟ್ಟು ಬಿಡು. ನಿನ್ನ ಆಯ್ಕೆಯೇ ಆದ ಚಿತ್ರರಂಗಕ್ಕೆ ಬಾ. ಅಲ್ಲಿ ಸ್ಕ್ರಿಪ್ಟ್ ಮಾಡಿಕೊಂಡೇ ಬದುಕಬಹುದು’ ಅಂದರಂತೆ. ಸರಿ, ತಕ್ಷಣವೇ ವಿಜಯಭಾಸ್ಕರ್ ಜತೆಯಲ್ಲಿ ಮದ್ರಾಸಿನ (ಈಗಿನ ಚೆನ್ನೈ) ರೈಲು ಹತ್ತಿದರು ಲಕ್ಷ್ಮಣರಾವ್ ಮೋಹಿತೆ. ಅಲ್ಲಿ ಚಿತ್ರಕಥೆ-ಹಾಡುಗಳನ್ನು ಬರೆಯಲು ಇವರು ತೋರಿದ ಶ್ರದ್ಧೆ, ವಹಿಸಿದ ಶ್ರಮವನ್ನು ಗಮನಿಸಿದ ವಿಜಯಭಾಸ್ಕರ್ ಇಷ್ಟೊಂದು ಮುದ್ದಾಗಿ ಹಾಡು ಬರೀತೀಯಲ್ಲ ಮೋಹಿತೆ? ಇನ್ಮೇಲೆ ನಿನ್ನ ಹೆಸರನ್ನು `ಗೀತಪ್ರಿಯ’ ಅಂತಾನೇ ಇಟ್ಕೊ ಅಂದರಂತೆ.

ಲಕ್ಷ್ಮಣರಾವ್ ಮೋಹಿತೆ `ಗೀತಪ್ರಿಯ’ ಎಂದು ಬದಲಾಗಿದ್ದಕ್ಕೆ ಇರುವ ಹಿನ್ನೆಲೆ ಇದು.

ಜನಪ್ರಿಯ, ಚಿತ್ರಗೀತೆಗಳ ಪಟ್ಟಿಯಲ್ಲಿ ಶಾಶ್ವತ ಸ್ಥಾನ ಪಡೆದ `ಹಾರುತಿರುವ ಹಕ್ಕಿಗಳೆ, ತೇಲುತಿರುವ ಮೋಡಗಳೆ’, `ಬೆಸುಗೆ ಬೆಸುಗೆ’ ನೀರ ಬಿಟ್ಟು ನೆಲದ ಮೆಲೆ ದೋಣಿ ಸಾಗದು’ `ಇದೇನ ಸಂಸ್ಕೃತಿ ಇದೇನ ಸಭ್ಯತೆ’, `ಸೋಲೇ ಗೆಲುವೆಂದು ಬಾಳಲಿ ಅರಿತಾದ ಮೇಲೆ…’ ಮುಂತಾದುವೆಲ್ಲ ಗೀತಪ್ರಿಯರ ರಚನೆಗಳೇ. ಸೂಪರ್ಹಿಟ್ ಅಂದಾಕ್ಷಣ ನೆನಪಾಗುವ `ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ’ ಕೂಡ ಗೀತಪ್ರಿಯರ ರಚನೆಯೇ. ಕೃಷಿಕರ ಬದುಕು ಹಾಗೂ ಕೃಷಿಯ ಮಹತ್ವ ಸಾರುವ ಆ ಹಾಡು ಸೃಷ್ಟಿಯಾದದ್ದು ಹೇಗೆ? ಬೆಂಗಳೂರಿನ ಮಿಲಿಟರಿ ಕ್ಯಾಂಪ್ ಹಾಗೂ ಮದ್ರಾಸಿನಲ್ಲಿದ್ದ ಗೀತಪ್ರಿಯ ಅವರಿಗೆ ರೈತರ ಬದುಕಿನ ಕಥೆ ದಕ್ಕಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಅವರು ಹೇಳಿದ್ದಿಷ್ಟು:

`ನಾನು ಬೆಂಗಳೂರಿನಲ್ಲೇ ಇದ್ದವನು ಎಂಬುದು ನಿಜ. ಆದರೆ ಮೊದಲಿನಿಂದಲೂ ನನಗೆ ರೈತರ ಬಗ್ಗೆ ವಿಪರೀತ ಕಳಕಳಿಯಿತ್ತು. ನನ್ನ ಹೆಂಡತಿ, ತುಮಕೂರು ಜಿಲ್ಲೆ ಬೆಳ್ಳಾವೆ ಸಮೀಪದ ಗೊಲ್ಲಹಳ್ಳಿಯವಳು. ಬೆಳ್ಳಾವೆಯಿಂದ ಅಲ್ಲಿಗೆ ನಡೆದುಕೊಂಡೇ ಹೋಗಬೇಕಿತ್ತು. ಹೆಂಡತಿಯ ಊರಿಗೆ ಹೋಗುವಾಗಲೆಲ್ಲ ನನಗೆ ರೈತರು ಕಾಣುತ್ತಿದ್ದರು. ಅವರು ಸದಾ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದರು. ಎಷ್ಟೋ ಸಂದರ್ಭದಲ್ಲಿ ಅವರಿಗೆ ಕುಡಿಯಲು ನೀರೂ ಇರುತ್ತಿರಲಿಲ್ಲ. ಆದರೆ ಅದಕ್ಕೆಲ್ಲ ಆ ಜನ ಸಂಕಟದಿಂದ ಕಂಬನಿ ಮಿಡಿಯುತ್ತಿರಲಿಲ್ಲ. ಬದಲಿಗೆ ತಮಗೆ ಗೊತ್ತಿರುವ ಹಾಡುಗಳನ್ನು ಹೇಳಿಕೊಂಡು ನಗುನಗುತ್ತಲೇ ದುಡಿಯುತ್ತಿದ್ದರು. ವರ್ಷದ ಕೊನೆಗೆ ಒಳ್ಳೆಯ ಫಸಲು ಬಂದಾಗ ಭಾರೀ ಲಾಭದ ಆಸೆಯೇ ಇಲ್ಲದೆ ವ್ಯಾಪಾರಿಗಳಿಗೆ ಮಾರಿಬಿಡುತ್ತಿದ್ದರು. ಅಷ್ಟೇ ಅಲ್ಲ, ರಾಗಿ/ಭತ್ತದ ಕಣಕ್ಕೆ ಬಂದವರಿಗೂ ಒಂದಿಷ್ಟು ದವಸ-ಧಾನ್ಯವನ್ನು ಉಚಿತವಾಗಿ ಕೊಡುತ್ತಿದ್ದರು.

ಮುಂದೆ, ಗ್ರಾಮೀಣ ಕಥಾಹಂದರದ `ಬೆಳುವಲದ ಮಡಿಲಲ್ಲಿ….’ ಸಿನಿಮಾ ನಿರ್ದೇಶನ ಮಾಡುವಾಗ ಈ ಹಿಂದೆ ರೈತರು ಅನುಭವಿಸುತ್ತಿದ್ದ ಸಂಕಟ, ಸಂತಸ ಅವರ ಬೆವರಿನಿಂದ ಭೂಮಿ ತಾಯಿ ಹಚ್ಚ ಹಸಿರಿನಿಂದ ನಳನಳಿಸುತ್ತಿದ್ದ ಸಂದರ್ಭಗಳೆಲ್ಲ ಒಂದೊಂದಾಗಿ ನೆನಪಿಗೆ ಬಂದವು. ರೈತ ಬೆಳೆ ತೆಗೆಯದಿದ್ದರೆ; ಅದನ್ನು ಮಾರಾಟ ಮಾಡದಿದ್ದರೆ ಎಲ್ಲರಿಗೂ ಉಪವಾಸವೇ ಗತಿ ಎಂಬುದನ್ನು ಹೇಳಬೇಕು ಅನ್ನಿಸ್ತು. ಅದೇ ಉದ್ದೇಶದಿಂದ `ಉಳುವೋನೆ ಲೋಕಕ್ಕೆ ಬೇಕಾದ ಗೆಳೆಯ, ಹಳ್ಳೀಗೂ ದಿಲ್ಲಿಗೂ ಕೊಡ್ತಾನೆ ಬೆಳೆಯ….’ ಎಂಬ ಸಾಲು ಬರೆದೆ….’

ಪರಿಣಾಮ ಏನಾಯಿತೆಂದರೆ-ರೈತರ ಹಾಡು ಪಾಡು ಒಂದು ಅಮರ ಗೀತೆಯಾಗಿ ಅರಳಿಕೊಂಡಿತು….

2 Comments

  1. isathal
    February 18, 2016
  2. Chandraprabha B
    January 18, 2016

Add Comment

Leave a Reply