Quantcast

ಜಸ್ಟ್ ರಿಲ್ಯಾಕ್ಸ್, ನಿನ್ನ ಕನಸು ನನಸಾಗುತ್ತದೆ..

hrudayashiva

ಹೃದಯ ಶಿವ 

ತನ್ನ The Revenant ಚಿತ್ರದ ಅಭಿನಯಕ್ಕಾಗಿ ಈ ಸಾಲಿನ ಆಸ್ಕರ್ ಪ್ರಶಸ್ತಿ ಗೆದ್ದ ನಟ ಲಿಯೋನಾರ್ಡೋ ಡಿಕಾಪ್ರಿಯೋ ಸಂದರ್ಶನವನ್ನು ಹಿಂದೊಮ್ಮೆ ನಾನು ಕನ್ನಡಕ್ಕೆ ಅನುವಾದಿಸಿದ್ದೆ.

ಇಲ್ಲಿದೆ ಓದಿಕೊಳ್ಳಿ :

de caprio oscars

ನೀವು ನಟರಾಗಿದ್ದು ಹೇಗೆ?

ಡಿಕಾಪ್ರಿಯೋ : ನನಗೆ ಮೊದಲಿನಿಂದಲೂ ನಟನಾಗುವ ಬಯಕೆಯಿತ್ತು. ಈ ಬಯಕೆಗೆ ಪೂರಕವಾಗಿ ನಾನು ಬೆಳೆದ ವಾತಾವರಣವೂ ಸಹಕರಿಸಿತ್ತು ಅನ್ನಬಹುದು. ನಾನು ಕಲೆಯತ್ತ ಆಸಕ್ತನಾಗುವಲ್ಲಿ ನನ್ನ ಹೆತ್ತವರ ಪಾತ್ರವೂ ದೊಡ್ಡದೇ. ಅವರು ನನ್ನನ್ನು ಮ್ಯೂಸಿಯಂಗೆ ಕರೆದೊಯ್ಯುತ್ತಿದ್ದರು. ಅಲ್ಲಿಯ ಕಲೆಯನ್ನು ಸೂಕ್ಷ್ಮವಾಗಿ ಗಮನಿಸಲು ಅವಕಾಶ ಮಾಡಿಕೊಟ್ಟರು. ಹಾಗೆಯೇ ನಾನು ಶಾಲಾ ಪುಸ್ತಕಗಳಾಚೆಗೂ ಹೆಚ್ಚು ಹೆಚ್ಚು ಓದಲು ಅವಕಾಶ ಕಲ್ಪಿಸಿಕೊಟ್ಟರು. ನನ್ನಮ್ಮ ಪ್ರತಿ ದಿನ ಎರಡು ಗಂಟೆಗಳ ಕಾಲ ಕಾರು ಓಡಿಸಿಕೊಂಡು ನನ್ನನ್ನು ಯೂನಿವರ್ಸಿಟಿ ಎಲಿಮೆಂಟರಿ ಸ್ಕೂಲಿಗೆ ಕರೆದೊಯ್ಯುತ್ತಿದ್ದಳು. ಕ್ಲಾಸ್ ಮುಗಿದ ಮೇಲೆ ನನ್ನಪ್ಪ ಬಂದು ನನ್ನನ್ನು ಪಿಕ್ ಅಪ್ ಮಾಡುತ್ತಿದ್ದ.

ನನ್ನಪ್ಪ ಅರವತ್ತರ ದಶಕದಲ್ಲಿ ನ್ಯೂಯಾರ್ಕಿನ ಪ್ರಸಿದ್ಧ ಹಾಸ್ಯಗಾರರಲ್ಲಿ ಒಬ್ಬನಾಗಿದ್ದ. ಆತ ಒಂದಿಷ್ಟು ಕಾಮಿಕ್ಸ್ ಬುಕ್ಸ್ ಇತ್ಯಾದಿಗಳನ್ನು ಆ ಕಾಲಕ್ಕೆ ನ್ಯೂಯಾರ್ಕಿನುದ್ದಕ್ಕೂ ಹಂಚಿದ್ದ. ನಾನು ಸಣ್ಣವನಿದ್ದಾಗ ಆತನೊಂದಿಗೆ ಅನೇಕ ಬಾರಿ ಕಾಮಿಕ್ಸ್ ಬುಕ್ಸ್ ಅಂಗಡಿಗಳಿಗೆ ಹೋಗಿದ್ದೂ ಉಂಟು. ಅದೆಲ್ಲವೂ ಸಾಹಿತ್ಯ ಮತ್ತು ಕಲೆಯತ್ತ ನನಗೆ ಆಸಕ್ತಿ ಬೆಳೆಯಲು ಕಾರಣವಾಯಿತು ಅನ್ನಬಹುದು.

ಇಷ್ಟಕ್ಕೂ ಶಾಲಾದಿನಗಳಲ್ಲಿ ನನಗೆ ಓದಿನತ್ತ ಅಷ್ಟಾಗಿ ಆಸಕ್ತಿ ಇರಲಿಲ್ಲ. ಗಣಿತ ನನ್ನ ಪಾಲಿಗೆ ವರ್ಸ್ಟ್! ಆದ್ಧರಿಂದ ನನಗೆ ಓದಿನತ್ತ ಏಕಾಗ್ರತೆ ವಹಿಸಲು ಕಡೆಗೂ ಆಗಲೇ ಇಲ್ಲ. ಜನ ಯಾವಾಗಲೂ ಹೇಳುತ್ತಿರುತ್ತಾರೆ, “ಯೂ ಷುಡ್ ಹ್ಯಾವ್ ಟ್ರೈಡ್ ಹಾರ್ಡ್” ಅಂತ. ಆದರೆ ನನಗೆ ಅದೆಲ್ಲಾ ತಮಾಷೆಯಾಗಿ ಕಾಣುತ್ತಿತ್ತು. ಒಂದೇ ಕಡೆ ಕೂತು ಹೋಂ ವರ್ಕ್ ಮಾಡುವುದೆಂದರೆ ಆ ಕಾಲಕ್ಕೆ ನನಗೆ ಬೋರು. ನಾನು ಇಷ್ಟಕ್ಕೂ ಶಾಲೆಗೆ ಹೋಗುತ್ತಿದ್ದದ್ದು ಓದುವ ಸಲುವಾಗಿಯಾಗಿರಲಿಲ್ಲ, ಲಂಚ್ ಟೈಮ್ ನಲ್ಲಿ ಸ್ನೇಹಿತರ ಮುಂದೆ ಬ್ರೇಕ್ ಡಾನ್ಸ್ ಮಾಡುವ ಸಲುವಾಗಿ.

ನನಗೆ ಐದು ವರ್ಷವಿದ್ದಾಗ ಏನಾಯಿತೆಂದರೆ ನನ್ನಮ್ಮ ‘ರೋಮ್ಪರ್ ರೂಂ’ ಷೋಗೆ ನನ್ನನ್ನು ಕರೆದುಕೊಂಡು ಹೋಗಿದ್ದಳು. ಅದು ನನ್ನ ಫೇವರಿಟ್ ಷೋ ಆಗಿತ್ತು. ಆ ದಿನ ನಾನು ಎಷ್ಟು ಎಕ್ಸೈಟ್ ಆಗಿದ್ದೆನೆಂದರೆ ಸೀದಾ ಓಡಿ ಹೋಗಿ ಕ್ಯಾಮೆರಾ ಮುಂದೆ ನಿಂತಿದ್ದೆ. ಅದರ ಟೇಪ್ ಸಿಕ್ಕರೆ ಈಗಲೂ ನಾನು ಸಂಭ್ರಮಿಸಬಲ್ಲೆ. ಆ ಘಟನೆ ನನ್ನ ಪಾಲಿಗೆ ಒಂದು ಸದಾ ಕಾಡುವ ನೆನಪು. ಇಂಥದೇ ಇನ್ನೊಂದು ನೆನಪೆಂದರೆ ನನಗೆ ಹತ್ತು ವರ್ಷವಿದ್ದಾಗ ನನ್ನದೇ ವಯಸ್ಸಿನ ಐದು ಮಂದಿ ಹುಡುಗರನ್ನು ಸ್ಟೇಜೊಂದಕ್ಕೆ ಕರೆದರು.

ನಾನು ಇನ್ನೇನು ಸ್ಟೇಜ್ ಹತ್ತಬೇಕು ಅನ್ನುವಷ್ಟರಲ್ಲಿ ಅಲ್ಲಿದ್ದ ಇತರ ಹುಡುಗರು ನನ್ನ ಕಡೆ ಕೈ ತೋರಿಸುತ್ತಾ ‘ನಾಟ್ ಹಿಮ್…ನಾಟ್ ಹಿಮ್…’ ಅಂತ ಅಲ್ಲಿದ್ದ ಆಯೋಜಕರಿಗೆ ಹೇಳುತ್ತಿದ್ದರು. ಆ ದಿನ ಸ್ಟೇಜ್ ಹತ್ತಲು ಆಗಲಿಲ್ಲ. ಅವತ್ತು ನನಗೆ ನಿಜಕ್ಕೂ ದುಃಖವಾಯಿತು. ಆ ದುಃಖ ಎಷ್ಟಿತ್ತೆಂದರೆ ವಾಪಾಸು ಕಾರಿನಲ್ಲಿ ಮನೆಗೆ ಹೋಗುವಾಗ, “ಡ್ಯಾಡ್, ಹೇಗಾದರೂ ಸರಿಯೇ.. ನಾನೊಬ್ಬ ನಟ ಆಗಬೇಕು” ಎಂದು ಅಪ್ಪನಲ್ಲಿ ನನ್ನ ಆಶಯ, ಹತಾಶೆಯನ್ನು ತೋಡಿಕೊಂಡಿದ್ದೆ. ನನ್ನ ಆಳದ ವ್ಯಾಕುಲತೆಯನ್ನು ಗ್ರಹಿಸಿದ ಅಪ್ಪ, “ಚಿಂತಿಸಬೇಡ ಲಿಯಾನಾರ್ಡೋ, ಒಂದಲ್ಲ ಒಂದು ದಿನ ನಿನ್ನ ಕನಸು ನನಸಾಗುತ್ತದೆ. ಜಸ್ಟ್ ರಿಲ್ಯಾಕ್ಸ್” ಎಂದು ಬೆನ್ನು ತಟ್ಟಿ ಸಮಾಧಾನಪಡಿಸಿದ್ದ. ನಾನು “ಓಕೆ” ಅಂತ ಹೇಳಿ ಅಳುವುದನ್ನು ನಿಲ್ಲಿಸಿದೆ.

decapriocartoon

ನಿಮ್ಮ ಹೆತ್ತವರು ಡೈವೋರ್ಸ್ ಪಡೆದಿದ್ದು ಯಾವಾಗ?

ಡಿಕಾಪ್ರಿಯೋ : ನಾನು ಹುಟ್ಟುವ ಮೊದಲೇ! ಆ ಕಾರಣದಿಂದಲೇ ನನಗೆ ಎರಡು ಬೇರೆ ಬೇರೆ ಜಗತ್ತುಗಳ ಪರಿಚಯವಾಗಿದ್ದು, ಬದುಕಿನ ಆಳದ ಸೂಕ್ಷ್ಮಗಳು ನಿಧಾನವಾಗಿ ಅರ್ಥವಾಗತೊಡಗಿದ್ದು.

ನಿಮ್ಮ ಹೈಸ್ಕೂಲು ದಿನಗಳ ಬಗ್ಗೆ ಹೇಳುತ್ತೀರಾ?

ಡಿಕಾಪ್ರಿಯೋ : ನಾನು ಅಂತಹ ಹೇಳಿಕೊಳ್ಳುವಂತಹ ಸ್ಟೂಡೆಂಟ್ ಆಗಿರಲಿಲ್ಲ. ಹೆಚ್ಚೆಂದರೆ ಹನ್ನೊಂದನೇ ಗ್ರೇಡ್ ಅಥವಾ ಹನ್ನೆರಡನೇ ಗ್ರೇಡ್ ಪಡೆಯುತ್ತಿದ್ದೆ. ಅಷ್ಟೊತ್ತಿಗಾಗಲೇ ಇನ್ನೇನು ಮುಗಿಯುವ ಅಂಚಿನಲ್ಲಿದ್ದ ‘ದಿಸ್ ಬಾಯ್ಸ್ ಲೈಫ್’ ಎಂಬ ಟಿವಿ ಷೋಗೆ ಆಡಿಶನ್ ನಡೆಯುತ್ತಿತ್ತು. ನಾನೂ ಕೂಡ ಅದರಲ್ಲಿ ಭಾಗವಹಿಸಿದ್ದೆ. ‘ಪೇರೆಂಟ್ ಹುಡ್’ ನನ್ನ ಮೊಟ್ಟಮೊದಲ ಟಿವಿ ಷೋ. ಅದರಲ್ಲಿ ನಾನು ಮಾಡಿದ್ದ ಪಾತ್ರದ ಹೆಸರು ಗ್ಯಾರಿ ಬುಕ್ ಮ್ಯಾನ್ ಅಂತ. ಹಸ್ತಮೈಥುನ ಮಾಡಿಕೊಳ್ಳುವ ಹುಡುಗನ ಪಾತ್ರವದು. ಆ ಸಂದರ್ಭದಲ್ಲಿ ನನಗೆ ನೆನಪಾದದ್ದೆಂದರೆ ನಟ ಪಾಲಿ ಶೋರ್ ಮತ್ತು ಆತನೊಂದಿಗೆ ನಾನು ಮಾತಾಡುತ್ತಿದ್ದ ಸೆಕ್ಸ್ ಬಗೆಗಿನ ಬೆಚ್ಚಗಿನ ವಿಷಯಗಳು.

ರಿಯಲಿ?

ಡಿಕಾಪ್ರಿಯೋ : ಒಂದು ದಿನ ನಾವಿಬ್ಬರು ಸುಮಾರು ಒಂದು ಗಂಟೆಯ ಕಾಲ ಸೆಕ್ಸ್ ಬಗ್ಗೆ ಮಾತಾಡಿದ್ದೆವು. ಯಾಕೆಂದರೆ ನನಗೆ ಸೆಕ್ಸ್ ಬಗ್ಗೆ ಎಲ್ಲಿಲ್ಲದ ಕುತೂಹಲವಿತ್ತು. ಅವತ್ತು ಪಾಲಿ ಶೋರ್ ನನಗೆ ಹುಡುಗಿಯರ ಬಗ್ಗೆ ಮತ್ತು ಸೆಕ್ಸ್ ಕುರಿತ ಎಲ್ಲದರ ಬಗ್ಗೆ ಹೇಳಿದ್ದ.

ಆಗ ನಿಮಗೆ ಎಷ್ಟು ವಯಸಾಗಿತ್ತು?

ಡಿಕಾಪ್ರಿಯೋ : ಸುಮಾರು ಹದಿನಾಲ್ಕೋ, ಹದಿನೈದೋ ಇರಬೇಕು.

ಸೆಕ್ಸ್ ಕುರಿತಂತೆ ನಿಮ್ಮ ನಿಲುವು ಎಂಥಾದ್ದು ಎಂಬುದರ ಬಗ್ಗೆ ಹೇಳಿ ಹಾಗಾದರೆ…

ಡಿಕಾಪ್ರಿಯೋ : ಅದರ ಬಗ್ಗೆ ಸಂದರ್ಭ ಬಂದಾಗಲೆಲ್ಲಾ ಮಾತಾಡಿದ್ದೇನೆ. ಐ ಡೋಂಟ್ ನೋ ಮೈ ಸೆಲ್ಫ್ ಕಂಪ್ಲೀಟ್ಲಿ.

de caprio

ಸೆಕ್ಸ್ ಬಗ್ಗೆ ಮಾತಾಡುವುದೇ ಅಪಾಯಕಾರಿ ಅನ್ನಿಸುತ್ತೆ ನನಗೆ. ಯಾಕೆಂದರೆ ಈ ವಿಷಯದಲ್ಲಿ ಅಂತಃಪ್ರಜ್ಞೆ ಜಾಗರೂಕವಾಗುವ ಸಂಭವವುಂಟು!

ಡಿಕಾಪ್ರಿಯೋ : ಓಕೆ, ಈ ಸೆಕ್ಸಿನೆಸ್ ಅನ್ನೋದಿದೆಯಲ್ಲ ಅದು ಗ್ರಹಿಕೆಗೆ ಸಿಗದ ವಿಚಾರ. ಇದೊಂದು ಸುಪ್ತಮನಸ್ಸಿಗೆ ಸಂಬಂಧಸಿದ ಸಂಗತಿ, ಡೆಫನೇಟ್ಲಿ ಯೂ ಡೋಂಟ್ ಹ್ಯಾವ್ ಪ್ಲಾನ್. ಈ ವಿಷಯದಲ್ಲಿ ನನ್ನ ನಿಲುವು ಏನು ಎಂಬುದರ ಬಗ್ಗೆ ನಾನು ಚಿಂತಿಸಬೇಕಾದ ಅನಿವಾರ್ಯತೆ ಇಲ್ಲ ಅನ್ನಿಸುತ್ತೆ… ಈ ವಿಚಾರದಲ್ಲಿ ಜನ ನನ್ನ ಬಗ್ಗೆ ಏನೇ ಮಾತಾಡಿಕೊಂಡರೂ ನನಗೆ ಚಿಂತೆಯಿಲ್ಲ.

ನೀವು ಬದಲಾಗಿದ್ದೀರಾ ಅನ್ನಿಸ್ತಿಲ್ವಾ?

ಡಿಕಾಪ್ರಿಯೋ : ನನಗೆ ಗೊತ್ತು, ನಾನು ಬದಲಾಗಿದ್ದೇನೆ. “ಹೌ ಡು ಯೂ ಡೀಲ್ ವಿತ್ ಫೇಮ್?” ಎಂದು ಜನ ನನ್ನನ್ನು ಕೇಳುತ್ತಾರೆ. ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ಯಾರಾದರೂ ನನ್ನ ಹತ್ತಿರ ಬಂದು “ನಿಜಕ್ಕೂ ನಿಮ್ಮ ಪರ್ಫಾರ್ಮೆನ್ಸ್ ಇಷ್ಟವಾಯ್ತು” ಅಂದಾಗ ಪ್ರಾಮಾಣಿಕವಾಗಿ ‘ಥ್ಯಾಕ್ಸ್’ ಅಂತಷ್ಟೇ ಹೇಳಿ ಮುಗುಳ್ನಗುತ್ತೇನೆ. ನಾನೊಬ್ಬ ಸಭ್ಯ ಅಂತ ಯಾರಲ್ಲೂ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ನನ್ನ ಬಗ್ಗೆ ಯಾರು ಏನೇ ಹೇಳಿದರೂ ಆ ಮಾತನ್ನು ಗೌರವಿಸುತ್ತೇನೆ. ನಾನು ‘ವಾಟ್ಸ್ ಈಟಿಂಗ್ ಗಿಲ್ಬರ್ಟ್ ಗ್ರೇಪ್’ ಸಿನಿಮಾ ಮಾಡುವಾಗ ನನಗೆ ಯಾವುದೇ ಒತ್ತಡಗಳಿರಲಿಲ್ಲ. ಹಾಗೆ ನೋಡಿದರೆ ಆಗ ನಿಜಕ್ಕೂ ನನ್ನ ಮೇಲೆ ಒತ್ತಡವಿತ್ತು, ಆದರೆ ಅದು ನನ್ನ ಅರಿವಿಗೆ ಬಂದಿರಲಿಲ್ಲ. ಇಷ್ಟಕ್ಕೂ ‘ವಾಟ್ಸ್ ಈಟಿಂಗ್ ಗಿಲ್ಬರ್ಟ್ ಗ್ರೇಪ್’ನಲ್ಲಿ ನಾನು ಒಬ್ಬ ನಟನಾಗಿ ಹೇಗೆ ನನ್ನ ಜವಾಬ್ಧಾರಿ ನಿಭಾಯಿಸಿದ್ದೆ ಎಂಬುದು ಇನ್ನೂ ಗೊತ್ತಾಗುತ್ತಿಲ್ಲ.

ನೀವು ಈವರೆಗೆ ಆಯ್ಕೆ ಮಾಡಿಕೊಂಡ ಅಷ್ಟೂ ಪಾತ್ರಗಳಿಗೆ ಒಗ್ಗುತ್ತೀರಿ. ಅದರ ಹಿಂದಿನ ರಹಸ್ಯವೇನು?

ಡಿಕಾಪ್ರಿಯೋ : ನನ್ನ ಪ್ರಕಾರ ನಟರು ಮಾಡುವ ಒಂದು ದೊಡ್ಡ ಮಿಸ್ಟೇಕ್ ಅಂದರೆ ವೃತ್ತಿಬದುಕಿನಲ್ಲಿ ಬಿಸಿನೆಸ್ ಗೆ ಹೆಚ್ಚು ಆದ್ಯತೆ ಕೊಡುವುದು. ಎಷ್ಟೋ ಸಲ ಏನಾಗುತ್ತದೆ ಎಂದರೆ ಈ ವ್ಯವಹಾರಿಕ ಮನಸ್ಥಿತಿ ತೀರಾ ಪ್ರಬಲವಾಗುತ್ತಾ ಹೋದಾಗ ನಟನೊಬ್ಬ ಕರಪ್ಟ್ ಆಗುವ ಸಂಭವವಿದೆ. ಆಗ ಎಲ್ಲೋ ಒಂದುಕಡೆ ತಮ್ಮೊಳಗಿನ ಕಲೆಗೆ ಹೊಡೆತ ಬಿದ್ದು ಮತ್ತೆ ತಾವು ಮೊದಲು ಎಲ್ಲಿದ್ದರೋ ಅಲ್ಲಿಗೇ ತಲುಪಬೇಕಾಗಬಹುದು. ಅದಕ್ಕೆ ನಾನು ಹೇಳೋದು ಬಿಸಿನೆಸ್ ಅನ್ನುವುದು ಕ್ರೂರವಾದದ್ದು. ಯಾಕೆಂದರೆ ಅದು ನೀವೇನೂ ಕಲಿಯದಂತೆ ಮಾಡಿಬಿಡುತ್ತೆ. ಆದ್ದರಿಂದ ಅದರ ಬಗ್ಗೆ ನನಗೆ ಒಂಥರಾ ಅಸಡ್ಡೆಯ ಭಾವ. ನನ್ನಿಡೀ ಬದುಕಿನಲ್ಲಿ ನಾನು ಯಾವತ್ತೂ ಬಿಸಿನೆಸ್ ಗೆ ಆದ್ಯತೆ ನೀಡಲಿಲ್ಲ. ಇಷ್ಟಕ್ಕೂ ನಾನು ಪಾತ್ರಗಳ ಜೀವಂತಿಕೆಗೆ ಹೆಚ್ಚು ಒತ್ತು ಕೊಡುತ್ತೇನೆ.

ನಿಮ್ಮ ತಂದೆಗಾಗಿ ಒಂದು ಕಾರನ್ನು ಉಡುಗೊರೆ ಕೊಡಬೇಕೆಂದು ನೀವು ಬಯಸಿದ್ದೀರಿ ಅಂತ ಕೇಳಿಪಟ್ಟಿದ್ದೆ. ಅದರ ಬಗ್ಗೆ ಹೇಳುತ್ತೀರಾ?

ಡಿಕಾಪ್ರಿಯೋ : ನನ್ನ ತಂದೆಗೆ ಒಂದೊಳ್ಳೆ ಕಾರಿನ ಅಗತ್ಯವಿರುವುದರ ಬಗ್ಗೆ ನಾನು ಖಂಡಿತ ಬಲ್ಲೆ. ಅದಕ್ಕಾಗಿ ಆತನ ಐವತ್ತನೇ ಹುಟ್ಟುಹಬ್ಬದಂದು ಉಡುಗೊರೆಯಾಗಿ ಒಂದು ಕಾರು ಕೊಡೋಣ ಅಂದುಕೊಂಡಿದ್ದೇನೆ. ಆ ಹುಟ್ಟುಹಬ್ಬದಂದು ಆತನ ಎಲ್ಲಾ ಸ್ನೇಹಿತರು, ನಮ್ಮ ಇದೇ ಕುಟುಂಬ ಅಲ್ಲಿ ನೆರೆಯಬೇಕು ಅನ್ನೋದು ನನ್ನಾಸೆ. ಆ ದಿನ ಅಲ್ಲಿ ಮಧುರವಾದ ಸಂಗೀತವಿರಬೇಕು, ಆ ಸಂಗೀತದ ನಡುವೆ ನನ್ನಪ್ಪ ತನ್ನೆಲ್ಲಾ ಸ್ನೇಹಿತರ, ಕುಟುಂಬ ಸದಸ್ಯರ ನಡುವೆ ಕೇಕ್ ಕತ್ತರಿಸಬೇಕು. ಆ ಕ್ಷಣದ ನೆನಪಿಗೆ ನಾನು ಆತನಿಗೊಂದು ಕಾರು ಕೊಡಬೇಕು. ನಾನು ಹಾಕಿಕೊಂಡಿರುವ ಈ ಯೋಜನೆಯ ಬಗ್ಗೆ ಆತನಿಗೆ ಮೊದಲೇ ತಿಳಿದಿರಬಾರದು. ಆತನ ಮುಖ ಅರಳುವ ಆ ಘಳಿಗೆ ಈ ಕಾರು ಕೊಡುವು ಖುಷಿ ನನ್ನದಾಗಬೇಕು. ಇಷ್ಟಕ್ಕೂ ಈ ಕಾರು ನನ್ನೆಲ್ಲಾ ಭಾವನೆಗಳ ಸಂಕೇತ ಅಂತೇನೂ ಇಲ್ಲ. ಇದರಾಚೆಗೂ ನನ್ನ ಹೆತ್ತವರ ಜೊತೆ ಸಮಯ ಕಳೆಯಲು ನಾನು ಬಯಸುತ್ತೇನೆ. ನಾನು ನನ್ನ ಹೆತ್ತವರ ಬಗ್ಗೆ ಧ್ಯಾನಿಸಿದಾಗಲೆಲ್ಲ್ಲಾ ನನ್ನ ಮನಸಿನ ತುಂಬೆಲ್ಲಾ ನನ್ನ ಬಾಲ್ಯವೇ ತುಂಬಿಕೊಳ್ಳುತ್ತದೆ- ಪ್ರತಿ ಭಾನುವಾರದ ಬೆಳಗ್ಗೆ ನನ್ನ ಅಪ್ಪನ ಜೊತೆ ಫ್ರೆಂಚ್ ಟೋಸ್ಟ್ ತಿನ್ನುತ್ತಿದ್ದದ್ದು, ನನ್ನ ಅಮ್ಮನೊಡಗೂಡಿ ಕ್ರಿಸ್ಮಸ್ ಟ್ರೀ ಅಲಂಕರಿಸುತ್ತಿದ್ದದ್ದು… ಒಬ್ಬ ಮನುಷ್ಯನಿಗೆ ಇಂತಹ ನೆನಪುಗಳು ಯಾವತ್ತಿಗೂ ಉಪಯುಕ್ತ.

ನಿಮಗೆ ಬರೆಯುವುದರ ಬಗ್ಗೆ ಏನಾದರೂ ಆಸಕ್ತಿ ಇದೆಯಾ?

ಡಿಕಾಪ್ರಿಯೋ : ನನಗೆ ನಟನೆಯಷ್ಟೇ ಸಾಕು ಅನ್ನಿಸುತ್ತೆ. ಸಾಧ್ಯವಾದರೆ ಒಬ್ಬನೇ ಸಿಕ್ಕಸಿಕ್ಕಲ್ಲಿಗೆ ಪ್ರಯಾಣ ಮಾಡಲು ಬಯಸುತ್ತೇನೆ. ಹಾಗೆಯೇ ಪ್ರೀತಿಯಲ್ಲಿ ಬೀಳುವುದರ ಬಗ್ಗೆಯೂ ನನಗೆ ಯೋಜನೆಯುಂಟು.

ಅಂದರೆ… ಈಗಾಗಲೇ ಪ್ರೀತಿಯಲ್ಲಿ ಬಿದ್ದಿದ್ದೀರಿ…

ಡಿಕಾಪ್ರಿಯೋ : ಇಲ್ಲ, ಸದ್ಯಕ್ಕೆ ಬೇಡ. ನಾನು ಮುಂದೊಮ್ಮೆ ನನ್ನ ಸಂಗಾತಿ, ಅಂದರೆ ನನ್ನ ಹೆಂಡತಿಯೊಡಗೂಡಿ ಎಲ್ಲೋ ಒಂದು ಕಡೆ ಪ್ರಯಾಣ ಬೆಳೆಸುತ್ತೇನೆ ಎಂಬ ಕಲ್ಪನೆಯೇ ನನಗೆ ಬರುತ್ತಿಲ್ಲ. ಇದು ನಿಮಗೂ ಬೇಡವಾದ ವಿಷಯ, ಆದರೂ ನಾನು ಯಾವ ಬಗೆಯ ಮನುಷ್ಯನೆಂದರೆ ಇದೆಲ್ಲವನ್ನೂ ನಿಮ್ಮಂತಹ ಯಾರೊಂದಿಗಾದರೂ ಹಂಚಿಕೊಳ್ಳಬಯಸುವವನು. ಆ ಕಾರಣದಿಂದಲೇ ನನ್ನ ‘ದಿ ಬ್ಯಾಸ್ಕೆಟ್ ಬಾಲ್ ಡೈರೀಸ್’ ಚಿತ್ರ ಮುಗಿಯುತ್ತಿದ್ದಂತೆಯೇ ನನ್ನ ಅಮ್ಮನ ಜೊತೆಗೂಡಿ ಒಂದು ಟ್ರಿಪ್ ಹಾಕಿದ್ದೆ. ಆ ಮೂಲಕ ನನ್ನ ಅಮ್ಮನ ಜೊತೆ ಒಂದಿಷ್ಟು ಸಮಯ ಕಳೆಯುವ ಬಯಕೆ ನನ್ನದಾಗಿತ್ತು. ಆದ್ದರಿಂದ ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ… ಇದು ನನ್ನ ಪಾಲಿಗೆ ಪ್ರೀತಿಯಲ್ಲಿ ಬೀಳುವ ಕಾಲವಲ್ಲ; ನೆನಪುಗಳಲ್ಲಿ ಮುಳುಗುವ ಹೊತ್ತು!

One Response

  1. Vijayakumar N
    March 1, 2016

Add Comment

Leave a Reply