Quantcast

ನಾನು ಇಲ್ಲಿ ಇನ್ನೊಂದಿಷ್ಟು ಪ್ರಶ್ನೆಗಳನ್ನು ಎತ್ತುತ್ತಿದ್ದೇನೆ..

ಅರ್ಥ ಮಾಡಿಸಬೇಕಾದ್ದು ಇನ್ನೂ ಇದೆ…

ಭಾರತಿ ಹೆಗಡೆ

ಕೆಲವು ದಿನಗಳ ಹಿಂದೆ ಜಯಲಕ್ಷ್ಮೀ ಪಾಟೀಲ್ ಅವರು ಚಿತ್ರರಂಗದಲ್ಲಿ ಮಹಿಳಾ ಗೀತರಚನಾಕಾರರು ಯಾಕಿಲ್ಲ? ದಯವಿಟ್ಟು ಅರ್ಥ ಮಾಡಿಸಿ ಎಂದು ಬರೆದಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಗೀತರಚನಕಾರರು ಹಾಗೂ ವಾಗ್ಗೇಯಕಾರರು, ಸಂಗೀತ ಕ್ಷೇತ್ರದಲ್ಲಿನ ಮಹಿಳೆಯರ ಸಾಧನೆಯ ಕುರಿತು ವಿಸ್ತೃತವಾಗಿ ಹಿರಿಯ ಸಾಹಿತಿ ಸಿ.ಎನ್.ರಾಮಚಂದ್ರನ್ ಅವರು ಬರೆದಿದ್ದಾರೆ. ಮಹಿಳೆಯರ ಕುರಿತು ನಿಜಕ್ಕೂ ಅಪರೂಪದ ಲೇಖನ ಇದು ಎನ್ನಬಹುದು.

woman1ನಾನು ಇಲ್ಲಿ ಇನ್ನೊಂದಿಷ್ಟು ಪ್ರಶ್ನೆಗಳನ್ನು ಎತ್ತುತ್ತಿದ್ದೇನೆ. ಚಿತ್ರರಂಗದಲ್ಲಿ ಮಹಿಳಾ ಗೀತರಚನಾಕಾರರು ಯಾಕಿಲ್ಲ ಎಂಬ ಪ್ರಶ್ನೆಯ ಹಿಂದೆಯೇ ಚಿತ್ರರಂಗದಲ್ಲಿ ಮಹಿಳೆಯರನ್ನು ಹೆಚ್ಚು ಭಾಗಿಯಾಗಿಸದ ಕುರಿತು ಇನ್ನಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಅದು ಸ್ಕ್ರಿಪ್ಟ್ ರೈಟಿಂಗ್, ಸಂಭಾಷಣೆಕಾರರು, ನಿರ್ದೇಶನ, ಕತೆಗಾರರು, ಹೀಗೆ ಹಲವಾರು ವಿಭಾಗಗಳಲ್ಲಿ ಕೂಡ ಮಹಿಳೆಯರನ್ನು ಹೆಚ್ಚು ಬಳಸಿಕೊಂಡಿಲ್ಲ. ಹಾಗಾಗಿಯೇ ನಮ್ಮ ಬಹುತೇಕ ಚಿತ್ರಗಳು ಮಹಿಳಾ ವಿರೋಧಿಯಾಗಿಯೇ ನಿಲ್ಲುತ್ತವೆ. ಅಥವಾ ಕಾಲ ಬದಲಾದರೂ, ಮಹಿಳೆಯ ಸ್ಥಿತಿಗತಿಗಳು ಬದಲಾದರೂ ಮಹಿಳೆ ಎಂದರೆ ಹೀಗೆಯೇ ಇರಬೇಕೆಂಬ ನಮ್ಮ ಪರಂಪರಾಗತ ಮೌಲ್ಯಗಳು ಬದಲಾಗದಂತೆ ನೋಡಿಕೊಂಡಿದೆ ನಮ್ಮ ಚಿತ್ರರಂಗ.

ಚಿತ್ರರಂಗದಲ್ಲಿ ಲಿಂಗ ತಾರತಮ್ಯದ ಕುರಿತು ಮಾತನಾಡುವಾಗಲೆಲ್ಲ ವೇತನ ತಾರತಮ್ಯ ಅಥವಾ ನಟಿಯೊಬ್ಬಳ ಎಕ್ಸ್ಪೋಷರ್ ಜಾಸ್ತಿ ಆಯ್ತು ಅಥವಾ ಅದರ ಕುರಿತು ಹೆಚ್ಚು ಚರ್ಚೆಗಳಾಗುತ್ತ ಹೋಗುತ್ತವೆ. ನಟಿಯರನ್ನು ಈ ಕುರಿತು ಕೇಳಿದರೆ, ನಿರ್ದೇಶಕರಿಗೆ ಬೇಕಾಗಿ, ನಿರ್ಮಾಪಕರಿಗೆ ಬೇಕಾಗಿ ಇಷ್ಟೊಂದು ಎಕ್ಸ್ಪೋಷರ್ ಎನ್ನಲಾಗುತ್ತದೆ.

ಆದರೆ ಬಹುತೇಕ ಸಿನಿಮಾಗಳ ಕತೆ, ಸಂಭಾಷಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಹೋದಾಗ ತಿಳಿಯುತ್ತದೆ. ಲಿಂಗ ತಾರತಮ್ಯ ಅಥವಾ ಮಹಿಳೆ ಎಂದರೆ ಹೀಗೆಯೇ ಇರಬೇಕು ಎಂಬ ಚೌಕಟ್ಟನ್ನು ಹೇಗೆ ನಮ್ಮ ಚಿತ್ರರಂಗ ಅದ್ಭುತವಾಗಿ ವಿಧಿಸುತ್ತಾ ಬಂದಿದೆ ಎಂಬುದು ತಿಳಿಯುತ್ತದೆ.

ಸುಧೀರ್ಘ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ತಂತ್ರಜ್ಞಾನದಲ್ಲಿ, ಕ್ಯಾಮೆರಾ ವರ್ಕ್ ನಲ್ಲಿ, ಹಾಡುಗಳಲ್ಲಿ, ಡಾನ್ಸ್ ಗಳಲ್ಲಿ ತುಂಬ ಬದಲಾವಣೆಗಳನ್ನು ನಾವು ಕಾಣುತ್ತೇವೆ. ಆದರೆ ಪ್ರಾರಂಭದಿಂದ ಇಂದಿನವರೆಗೂ ಹೆಣ್ಣಿನ ಕುರಿತಾದ ಸಂಭಾಷಣೆ ಮಾತ್ರ ಹಾಗೆಯೇ ಇದೆ. ಕೆಲವು ಉದಾಹರಣೆಗಳು ಹೀಗಿವೆ…

ಆಗಿನ ಕಾಲದ ಕೆಲವು ಸಿನಿಮಾಗಳಲ್ಲಿ, ಬಡ ಹುಡುಗ ಶ್ರೀಮಂತರ ಮನೆಯ ಚೆಂದನೆಯ ಹುಡುಗಿಯನ್ನು ಪ್ರೀತಿಸುತ್ತಾನೆ. ಅಲ್ಲಿ ಅಂತಸ್ತಿನ ಪ್ರಶ್ನೆ ಬರುತ್ತದೆ. ಆಗ ಅಪ್ಪ ಅಮ್ಮ ಕೇಳುತ್ತಾರೆ, `ನನ್ನ ಮಗಳನ್ನು ನೀನು ಚೆನ್ನಾಗಿ ಸಾಕ್ತೀಯ ಎಂಬ ನಂಬಿಕೆ ಏನಿದೆ? ನೀನು ತರುವ ಸಂಬಳದಲ್ಲಿ ನನ್ನ ಮಗಳ ಮೇಕಪ್ ಗೂ ಸಾಕಾಗುವುದಿಲ್ಲ. ಪೌಡರ್ ಡಬ್ಬಿಗೂ ಸಾಕಾಗಲ್ಲ‘ ಎಂದು ಹೇಳುತ್ತಾರೆ.

ಈಗ ಮೊನ್ನೆ ಮೊನ್ನೆಯ ಗಣೇಶ್, ಸುದೀಪ್, ಇತ್ತೀಚೆಗಿನ ಯಶ್ ಸಿನಿಮಾಗಳಲ್ಲೂ ಇಂಥದ್ದೇ ಡೈಲಾಗ್ ಗಳನ್ನು ನಾವು ಕೇಳ್ತಾ ಇದ್ದೇವೆ. ಅಂದರೆ ಹೆಣ್ಣನ್ನು ಯಾರೋ ಒಬ್ಬರು ನೋಡಿಕೊಳ್ಳಬೇಕು, ಅವಳನ್ನು ಸಾಕಬೇಕು ಎಂಬ ಮಾತುಗಳಲ್ಲಿಯೇ ಅವಳು ಪರಾಧೀನಳು ಎಂಬುದನ್ನು ಮತ್ತೆ ಮತ್ತೆ ಹೇರುತ್ತಿದೆ ನಮ್ಮ ಚಿತ್ರಗಳ ಸಂಭಾಷಣೆಗಳು.

ಇನ್ನೊಂದು ಸಂಭಾಷಣೆ. ಇದೆಲ್ಲವುಗಳನ್ನೂ ನಾನು ಆಗಿನಿಂದ ಈಗಿನವರೆಗೂ ಹರಿದುಕೊಂಡು ಬಂದಿರುವ, ಹರಿಯುತ್ತಲೇ ಬಂದಿರುವ ಸಂಭಾಷಣೆಗಳನ್ನು ಮಾತ್ರ ಇಲ್ಲಿಡುತ್ತಿದ್ದೇನೆ.

ಒಂದಷ್ಟು ಜನ ಗೂಂಡಾಗಳು ನಾಯಕಿ ಮೇಲೆ ಅಟ್ಯಾಕ್ ಮಾಡುತ್ತಾರೆ. ಆಗ ಹೀರೋ ಬಂದು ತಪ್ಪಿಸುತ್ತಾನೆ. ಪಾಪ, ಹೆಣ್ಣು ಹೆಂಗಸು ಇವಳಿಂದೇನು ಸಾಧ್ಯ? ನನ್ನ ಹತ್ತಿರ ಕೇಳಿ ನಾನು ಕೊಡುತ್ತೇನೆ ಎಂದು ಆ ಗೂಂಡಾಗಳನ್ನೆಲ್ಲ ಹಣ್ಣುಗಾಯಿ ನೀರು ಗಾಯಿ ಮಾಡಿ ಹಾಕುತ್ತಾನೆ. ವಾಸ್ತವದಲ್ಲಿ ಹೆಣ್ಣಿಗಲ್ಲ, ಗಂಡಿಗೂ ಅಷ್ಟೊಂದು ಜನ ಬಂದು ದಾಳಿ ಮಾಡಿದರೆ ಎದುರಿಸಲು ಸಾಧ್ಯವೇ?

ಅಂದರೆ ಹೆಣ್ಣೆಂದರೆ ಸುಕೋಮಲೆ, ಅವಳಿಂದೇನೂ ಆಗದು ಹಾಗೂ ಗಂಡು ಪರಾಕ್ರಮಶಾಲಿ, ಎಂಬುದನ್ನು ಸಾಬೀತುಪಡಿಸುವ ರೀತಿಯಿದು.
ಅದೇ ರೀತಿ ಇನ್ನೊಂದು ಸಂಭಾಷಣೆ – ಹೆಣ್ಣಾದ ನಿನಗೇ ಇಷ್ಟು ಪೊಗರಿರಬೇಕಾದರೆ ನಾನು ಗಂಡಸು ನನಗಿನ್ನೆಷ್ಟು ಸೊಕ್ಕಿರಕೂಡದು, ಹೆಣ್ಣೇ ಅದೆಷ್ಟು ಸೊಕ್ಕೇ ನಿನಗೆ, ಬೇಡ ಬೇಡ ಎಂದರೂ ಮೀಸೆ ಬರುವ ನನಗಿನ್ನೆಷ್ಟು ಪೊಗರಿರಕೂಡದು..ಇಂಥ ಸಂಭಾಷಣೆಗಳು ಆ ಕಾಲಕ್ಕೆ ಅಂದರೆ 30-40 ವರ್ಷಗಳ ಹಿಂದಿನ ನಾಯಕರು ಆಡಿದಾಗ ಒಂಥರಾ ಕೇಳೋಕೆ ಮಜಾ ಅನಿಸುತ್ತಿತ್ತು.

ಆದರೆ ಈಗಲೂ ಅಂಥದ್ದೇ ಡೈಲಾಗ್ ಗಳು. ಏನೇ ನಿಂಗೆಷ್ಟು ಸೊಕ್ಕು. ನಾನು ಗಂಡಸು, ಮೀಸೆ ಹೊತ್ತವನು ನಾನು ನಂಗಿನ್ನೆಷ್ಟು ಸೊಕ್ಕಿರುವುದಿಲ್ಲ ಎಂಬಂಥ ಸಂಭಾಷಣೆಗಳನ್ನು ಈಗಿನ ಎಲ್ಲ ನಾಯಕರ ನಟರ ಬಾಯಲ್ಲೂ ಹೇಳಿಸಿಯಾಗಿದೆ.

ಒಬ್ಬ ಗಂಡಿಗೆ ನಾಲ್ಕು ಹೆಂಗಸರ ಸಹವಾಸ ಇದ್ದರೆ ಅವನನ್ನು ಈ ಸಮಾಜ ಎಂಥ ರಸಿಕ ಮಹಾಶಯ ಎಂದು ಹೇಳುತ್ತದೆ. ಅದೇ ಒಬ್ಬ ಹೆಣ್ಣಿಗೆ ಈ ರೀತಿ ಗಂಡಸರ ಸಹವಾಸವಿದ್ದರೆ ಅವಳನ್ನು ಸಮಾಜ ನೋಡುವ ದೃಶಷ್ಟಿಯೇ ಬೇರೆ, ಅವಳಿಗೆ ಬೇರೆಯದೇ ಹೆಸರಿಡಲಾಗುತ್ತದೆ.

woman2ಹೆಣ್ಣಿನ ರಕ್ಷಣೆ ನನ್ನ ಕರ್ತವ್ಯ, ಅವಳ ತಾಳಿ ಬೀಳಬಾರದೆಂದು ನಾನು ಅವಳ ಗಂಡನನ್ನು ನಾನು ರಕ್ಷಿಸುತ್ತೇನೆ, ನಿನ್ನ ತಾಳಿ ಹೋಗಿ ನೀನು ವಿಧವೆಯಾಗಬಾರದು ಎಂಬ ಒಂದೇ ಕಾರಣಕ್ಕೆ ನಾನು ನಿನ್ನ ಗಂಡನ ರಕ್ಷಣೆಗೆ ಬರುತ್ತೇನೆ,  ಅದಕ್ಕಿಂತ ಸಿನಿಮಾಗಳಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ ನಡೆದರೆ ನಾಯಿ ಮುಟ್ಟಿದ ಮಡಕೆ, ನಾನು ನಿನಗೆ ತಕ್ಕವಳಲ್ಲ, ಎಂದು ಹೆಣ್ಣಿನ ಬಾಯಿಯಿಂದಲೇ ಹೇಳಿಸಿ ಅವಳು ಸಾಯುವ ಹಾಗೆ ಮಾಡುವುದು. ಕಡೆಗೆ ಅವಳಿಗಾಗಿ ನಾಯಕ ಕಣ್ಣೀರು ಹರಿಸುವುದು. ಒಟ್ಟಿನಲ್ಲಿ ಅವನನ್ನು ಒಳ್ಳೆಯವನ ಹಾಗೆ ವಿಜೃಂಭಿಸಿವವುದು ನಡೆಯುತ್ತದೆಯೇ ಹೊರತು ಅಂಥ ಅವಳನ್ನು ಸ್ವೀಕರಿಸುವಂಥ ಕತೆಗಳು ತುಂಬ ಅಪರೂಪ ನಮ್ಮಲ್ಲಿ.

ಈ ಅಷ್ಟೂ ಸಂಭಾಷಣೆಗಳು ಕನ್ನಡ ಚಿತ್ರರಂಗದ 83 ವರ್ಷದ ಇತಿಹಾಸದಲ್ಲಿ ಆಗಿನಿಂದ ಈಗಿನವರೆಗೂ ಜೀವಂತವಾಗಿ ನಿಂತಿವೆ. ಯಾಕೆ ಹೇಳಿ? ಯಾಕೆಂದರೆ ಇಂಥ ಎಲ್ಲ ಸಂಭಾಷಣೆಗಳನ್ನು ಬರೆದಂಥವರು ಪುರುಷರು. ಅವರಿಗೆ ಮಹಿಳೆಯನ್ನು ಇದರಾಚೆ ನೋಡಲು ಸಾಧ್ಯವೇ ಆಗುತ್ತಿಲ್ಲ.

ಇನ್ನು ಕತೆಯ ದೃಷ್ಟಿಯಿಂದಲೂ ಅಷ್ಟೇ. ಹೆಣ್ಣನ್ನು ತ್ಯಾಗಮಯಿಯಾಗಿ ಅಥವಾ ಗ್ಲಾಮರ್ ಗೊಂಬೆಯನ್ನಾಗಿ ಮಾತ್ರ ನೋಡುವ ಚಿತ್ರರಂಗಕ್ಕೆ ಇವೆರಡರ ಆಚೆ ಮಹಿಳೆಯಿದ್ದಾಳೆ ಎಂದು ಅನಿಸುವುದೇ ಇಲ್ಲ.

ಕಲಿತ ಹೆಣ್ಣೊಬ್ಬಳು ತನ್ನ ಸಮಾನಕ್ಕೆ ಮದುವೆಯಾಗಲು ಗಂಡು ಬೇಕು ಎಂದು ಹೇಳಿಬಿಟ್ಟರೆ ಅವಳು ಜೋರಿನವಳು, ಅವಳಿಗೆ ಬುದ್ಧಿಕಲಿಸುವಂಥ ಕತೆಗಳೇ ಹೆಚ್ಚು ಇರುತ್ತವೆ. ಓದಿದವಳನ್ನು ಏನನ್ನೂ ಓದದೇ ಇರುವವನಿಗೆ ಮದುವೆ ಮಾಡಿಕೊಡುವುದು, ಅವಳು ಅವನನ್ನು ಒಪ್ಪುವಂತೆ ಮಾಡಿ, ತನ್ನದು ತಪ್ಪಾಯಿತು ಎಂದು ಹೇಳಿ ಅವನನ್ನೇ ಮದುವೆಯಾಗುವಂತೆ ಕತೆ ಹೆಣೆಯುವುದು.. ಇಂಥ ಸಿನಿಮಾಗಳು ಹೆಚ್ಚು.

ಅದಿಲ್ಲದಿದ್ದರೆ ಹೆಣ್ಣನ್ನು ಪಳಗಿಸುವಂಥ ಚಿತ್ರಗಳು. ಇದಂತೂ ಬಿಡಿ. ಎಲ್ಲ ಭಾಷೆಯ, ಎಲ್ಲ ನೆಲದಲ್ಲೂ ಇಂಥ ಚಿತ್ರಗಳು ಹೆಚ್ಚು ಜನಪ್ರಿಯವಾಗಿವೆ. ಟೇಮಿಂಗ್ ಆಫ್ ದ ಶ್ರೂ ನಿಂದ ಹಿಡಿದು ಕನ್ನಡದ ಬಹದ್ದೂರ್ ಗಂಡು, ಅಂಜದ ಗಂಡು, ನಂಜುಂಡಿ ಕಲ್ಯಾಣ, ಸಿರಿತನಕ್ಕೆ ಸವಾಲ್ ಸಾಲು ಸಾಲು ಚಿತ್ರಗಳು ಸಿಗುತ್ತವೆ.
ಎಲ್ಲ ಕಡೆಯೂ ಅಷ್ಟೇ, ನಾಯಕಿ ಶ್ರೀಮಂತ ಮನೆಯವಳು, ಸೌಂದರ್ಯವತಿ. ಅವಳ ಸೊಕ್ಕನ್ನು ಅಡಗಿಸಿ,ಅವಳನ್ನು ಪಳಗಿಸುವಂಥ ಕತೆಗಳು. ಹೆಣ್ಣಿಗೆ ಆಯ್ಕೆಯೇ ಇಲ್ಲ ಎಂಬಂತಹ ಕತೆಗಳೇ ನಮ್ಮಲ್ಲಿ ಹೆಚ್ಚು ಬಂದಿವೆ.

ಅದಕ್ಕೆ ಮೂರು ಕಾಲಿನ ಕುದುರೆ ಏರಿ ಬಂದ ಓ ಚೆಲುವೆ ಜಂಬ ಮಾಡಬೇಡಮ್ಮ, ಭೂಮಿ ಮೇಲೆ ನಡೆಯಮ್ಮ..
ಮುತ್ತಿನಂಥ ಮಾತೊಂದು ಗೊತ್ತೇನಮ್ಮ ನಿನಗೆ ಗೊತ್ತೇನಮ್ಮ

ಎಂಬಂಥ ಹಾಡುಗಳು ಸದಾ ಜನಪ್ರಿಯ. ಅಂದರೆ ನಮ್ಮ ಪ್ರೇಕ್ಷಕ ಪ್ರಭುಗಳು ಅಂಥವನ್ನು ಕೇಳಿ ಎಂಜಾಯ್ ಮಾಡುತ್ತಾರೆ. ಅಂಥ ಸಿನಿಮಾಗಳು ಹೆಚ್ಚು ಯಶಸ್ವಿಯೂ ಆಗುತ್ತದೆ.

ಇನ್ನು ಶ್ರೀಮಂತ ಮನೆಯ ವಿದ್ಯಾವಂತ, ಚೆಲುವೆಯನ್ನು ಬಡವನಾದ ನಾಯಕ ಪ್ರೀತಿಸುವುದು. ನಾಯಕ ಹೇಗೇ ಇರಲಿ, ಅವನು ರೌಡಿಯಾಗಿರಲಿ, ಕುರೂಪಿಯಾಗಿರಲಿ ಹೇಗೇ ಇರಲಿ ಚೆಂದನೆಯ ಹೆಣ್ಣನ್ನು ಶ್ರೀಮಂತರ ಮನೆಯ ಹೆಣ್ಣನ್ನು ಪ್ರೀತಿಸುತ್ತಾನೆ. ಆ ಪ್ರೀತಿಗಾಗಿ ಹೊಡೆದಾಟ, ಬಡಿದಾಟ. ಕೊನೆಯಲ್ಲಿ ಪ್ರೀತಿಗಾಗಿ ಜಾತಿ, ಅಂತಸ್ತು ಇವ್ಯಾವನ್ನೂ ತರಕೂಡದೆಂಬ ಸಂದೇಶವಿರುತ್ತದೆ.

ಆದರೆ ಯಾಕೆ ಶ್ರೀಮಂತ ಮನೆಯ ಹುಡುಗ, ಬಡವರ ಮನೆಯ, ಚೆಂದವಿಲ್ಲದ ಹುಡುಗಿಯೊಬ್ಬಳನ್ನು ಪ್ರೀತಿಸುವುದಿಲ್ಲ? ಅದಕ್ಕಾಗಿ ಯಾಕೆ ಬಡಿದಾಟವಾಗುವುದಿಲ್ಲ. ಶ್ರೀಮಂತರ ಮನೆಯ ಹುಡುಗನೊಬ್ಬ ಬಡ ಹುಡುಗಿಯನ್ನು ಮದುವೆಯಾಗಿಬಿಟ್ಟರೆ ಅದು ಆ ಹುಡುಗಿಯ ಜನ್ಮಜನ್ಮಾಂತರದ ಪುಣ್ಯ ಎಂಬಂತೆ ತೋರಿಸಲಾಗುತ್ತದೆ.

ಇನ್ನು ಇತ್ತೀಚೆಗೆ ಬರುವಂಥ ಸಿನಿಮಾಗಳು ನಿಜಕ್ಕೂ ಭಯಾನಕವಾಗಿಯೇ ಇವೆ. ಆಗೆಲ್ಲ ಓದಿದ ಹುಡುಗಿ ವಿದ್ಯಾವಂತ ಹುಡುಗ ಬೇಕು ಎಂಬುದನ್ನು ಕೇಳುವುದು ತಪ್ಪು ಎಂಬಂತೆ ನೋಡಲಾಗುತ್ತಿತ್ತು.

ಆದರೆ ಈಗ ಹಾಗಲ್ಲ , ಪ್ರೀತಿಯಲ್ಲಿ ಅದೆಂಥ ಸ್ಯಾಡಿಸಮ್ ಎಂದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀನು ನನ್ನನ್ನು ಪ್ರೀತಿಸಲೇ ಬೇಕೆಂಬ ಒತ್ತಾಯ. ಅವನು ಹೇಗೇ ಇರಲಿ, ಅವಳು ಇವನ್ನು ಪ್ರೀತಿಸಲೇಬೇಕು. ಅದಕ್ಕಾಗಿಯೇ ಹೊಡೆದಾಟಗಳು.

ಅವನು ಓದಿರದೇ ಇರಲಿ, ಶುದ್ಧ ಸೋಮಾರಿ, ಕೆಲಸ ಬೊಗಸೆ ಏನೂ ಇಲ್ಲದ ಶುದ್ಧ ಸೋಮಾರಿಯಾಗಿದ್ದರಲಿ, ನೋಡಲು ಅದೆಷ್ಟೇ ಕುರೂಪಿಯಾಗಿರಲಿ, ಚೆಂದನೆಯ ಹುಡುಗಿಯನ್ನು ಪ್ರೀತಿಸುತ್ತಾನೆ. ಅದಕ್ಕೂ ಎಂತೆಂಥ ಡೈಲಾಗ್ ಗಳು.. ರೀ.. ನಾನು ನಿಮ್ಮನ್ನು ಪ್ರೀತಿಸ್ತೇನ್ರೀ.. ಸಾಯೋವರೆಗೂ ಪ್ರೀತಿಸ್ತಾನೇ ಇರ್ತೀನ್ರೀ,,, ನೀವ್ಯಾಕ್ರೀ ಪ್ರೀತ್ಸಲ್ಲ ನನ್ನ..ಎಂದು ಕೇಳೋದು.

ಅವನ ಉದ್ಯೋಗವೆಂದರೆ ಲವ್ ಮಾಡೋದೇ ಅವನಫುಲ್ ಟೈಮ್ ಡ್ಯೂಟಿ ಅನ್ನೋ ಥರ ತೋರಿಸೋದು. ಅಂದರೆ ಗಂಡು ಹೇಗಿದ್ದರೂ ಪರವಾಗಿಲ್ಲ, ಅವನಿಗೆ ಆಯ್ಕೆಗಳಿರುತ್ತವೆ. ಹೆಣ್ಣಿಗೆ ಮಾತ್ರ ಆಯ್ಕೆಯೇ ಇಲ್ಲ ಎಂಬುದನ್ನು ನಮ್ಮ ಚಿತ್ರರಂಗ ಈಗಲೂ ತೋರಿಸಲಾಗುತ್ತಿದೆ.

ಇವೆಲ್ಲ ಮಹಿಳೆಯನ್ನು ಹೀಗೇ ಇರಬೇಕು ಎಂಬುದನ್ನು ಮತ್ತೆ ಮತ್ತೆ ಹೇಳುವಂಥ ವ್ಯವಸ್ಥೆಗಳು ತಾನೆ? ಅಂದರೆ ಹೆಣ್ಣಿಗೆ ಇಲ್ಲೆಲ್ಲ ಆಯ್ಕೆಗಳೇ ಇಲ್ಲದಂತೆ ಕತೆ ರಚನೆ, ಸಂಭಾಷಣೆ ಹೆಣೆದದ್ದು ಕೂಡ ಅರ್ಥವಾಗದ ಅರ್ಥ ಮಾಡಿಸಲು ಸಾಧ್ಯವಾಗದ ಕತೆ ತಾನೆ?

9 Comments

 1. Sumana Lakshmisha
  April 9, 2016
 2. Poornima
  March 30, 2016
 3. godavari
  March 30, 2016
 4. Bharathi Hegade
  March 30, 2016
 5. priya
  March 30, 2016
 6. ನೀತಾ. ರಾವ್
  March 30, 2016
  • Poornima
   March 30, 2016
 7. ನೀತಾ. ರಾವ್
  March 30, 2016
 8. nandinarasimha
  March 30, 2016

Add Comment

Leave a Reply