Quantcast

ಬೆನ್ನಿಗೆ ಚೂರಿ ಇರಿದ ಸಿನೆಮಾ ಪ್ರಶಸ್ತಿ

ರಾಜಕೀಯದ ಬಾಹುಬಲಕ್ಕೆ ಬಲಿಯಾದ ಸಿನೆಮಾ ಪ್ರಶಸ್ತಿ

ಸದಭಿರುಚಿಯ ಚಿತ್ರಗಳ ಬೆನ್ನಿಗೆ ಚೂರಿ

b m basheer

ಬಿ ಎಂ ಬಷೀರ್ 

‘‘ಬಾಹುಬಲಿ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಯಾಕೆ ದೊರಕಿತು?’’ ಎನ್ನುವ ಪ್ರಶ್ನೆ ‘‘ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ?’’ ಪ್ರಶ್ನೆಯಷ್ಟೇ ಈಗ ಮಹತ್ವವನ್ನು ಪಡೆದುಕೊಂಡಿದೆ.

ಈ ಬಾರಿಯ ಸಿನೆಮಾ ಪ್ರಶಸ್ತಿ ಭಾರತದ ರಾಜಕೀಯ ಬದಲಾವಣೆಗಳ ಜೊತೆಗೆ ತಳಕು ಹಾಕಿಕೊಂಡಿವೆಯೇ ಎಂಬ ಪ್ರಶ್ನೆ ನಿರ್ಲಕ್ಷಿಸುವಂತಹದ್ದು ಖಂಡಿತ ಅಲ್ಲ. ಭಾರತದ ಸಾಂಸ್ಕೃತಿಕ ಪುನರುತ್ಥಾನಕ್ಕೆಂದು ಹೊರಟಿರುವ ಮಂದಿಗಳು ಈ ಬಾರಿ, ಪ್ರಶಸ್ತಿಯ ತೀರ್ಪುಗಾರರಾಗಿರಬಹುದೇ? ರಾಷ್ಟ್ರೀಯತೆ, ಹಿಂದಿ ಯಜಮಾನಿಕೆ, ಭ್ರಾಮಕ, ರಮ್ಯಇತಿಹಾಸಗಳನ್ನು ಎತ್ತಿ ಹಿಡಿಯುವ ಭಾಗವಾಗಿ ಈ ಬಾರಿ ಪ್ರಶಸ್ತಿಯನ್ನು ಹಂಚಲಾಗಿದೆ ಮತ್ತು ಸೃಜನಶೀಲತೆಯ ಕುರಿತಂತೆ ಗಂಧಗಾಳಿಯಿಲ್ಲದ ಮನುಷ್ಯನಿಗೆ ಮಾತ್ರ ‘ಬಾಹುಬಲಿ’ಯನ್ನು ಅತ್ಯುತ್ತಮ ಚಿತ್ರ ಎಂದು ಆರಿಸಲು ಸಾಧ್ಯ ಎನ್ನುವುದು ಹೆಚ್ಚಿನ ವಿಮರ್ಶಕರ ಅಭಿಪ್ರಾಯವಾಗಿದೆ.

 

Illustration depicting a set of cut out letters formed to arrange the words not fair.

ಈ ಬಾರಿ ರಾಷ್ಟ್ರಪ್ರಶಸ್ತಿಯನ್ನು ವೆಟ್ರಿಮಾರನ್ ನಿರ್ದೇಶಿಸಿದ ತಮಿಳು ಚಿತ್ರ ‘ವಿಸಾರಣೈ’ ತನ್ನದಾಗಿಸಿಕೊಳ್ಳುತ್ತದೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಒಂದು ವೇಳೆ ಹಿಂದಿ ಚಿತ್ರಕ್ಕೇ ಪ್ರಶಸ್ತಿಯನ್ನು ನೀಡಬೇಕು ಎಂಬ ಉದ್ದೇಶವಿದ್ದರೆ ಅವರ ಮುಂದೆ ನೀರಜ್ ಘಾಯ್ವಾನ್ ನಿರ್ದೇಶಿಸಿದ ‘ಮಸಾನ್’ ಚಿತ್ರವಿತ್ತು. ಈ ಎರಡೂ ಚಿತ್ರಗಳು ಸಿನಿಮಾದ ಎಲ್ಲ ಸೂಕ್ಷ್ಮಗಳನ್ನು ಬಳಸಿಕೊಂಡು ನಿರೂಪಿಸಲ್ಪಟ್ಟ, ಪ್ರೇಕ್ಷಕರ ಮನಸ್ಸನ್ನು ಅಲ್ಲಾಡಿಸಿದ ಚಿತ್ರಗಳು. ಅದಕ್ಕೆ ಪ್ರಶಸ್ತಿಯ ಅರ್ಹತೆಯಿಲ್ಲ ಎನ್ನುವುದನ್ನು ತೀರ್ಮಾನಿಸಿದವರು ಖಂಡಿತಾ ಸಿನೆಮಾದ ಒಳಗಿನ ಜನರಲ್ಲ, ಹೊರಗಿನ ಜನರು ಎನ್ನುವುದು ಮೇಲ್ನೋಟಕ್ಕೆ ಅರ್ಥವಾಗಿ ಬಿಡುತ್ತದೆ.

ಯಾಕೆಂದರೆ ಈ ಎರಡೂ ಚಿತ್ರಗಳು ವ್ಯವಸ್ಥೆಯ ಕ್ರೌರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರಶ್ನಿಸುತ್ತವೆ. ‘ವಿಸಾರಣೈ’ ಚಿತ್ರ ಪೊಲೀಸ್ ವ್ಯವಸ್ಥೆಯೊಳಗಿನ ಕ್ರೌರ್ಯವನ್ನು ತೆರೆದಿಟ್ಟರೆ, ‘ಮಸಾನ್’ ಚಿತ್ರ ಸಮಾಜದ ಜಾತಿ ರಾಜಕಾರಣವನ್ನು ತೆರೆದಿಡುತ್ತದೆ. ಸದ್ಯದ ರಾಜಕೀಯ ಸಂದರ್ಭ ಈ ಎರಡೂ ಚಿತ್ರಗಳಿಗೂ ಹೊಂದಿಕೆಯಾಗುವುದಿಲ್ಲ ಸರಿ. ವ್ಯವಸ್ಥೆಯ ಕಣ್ಣಿಗೇ ಕೈ ಹಾಕಿ ಮಾತನಾಡುವ ಈ ಚಿತ್ರಕ್ಕೆ ಪ್ರಶಸ್ತಿ ನೀಡುವುದು ಇಷ್ಟವಿಲ್ಲದೇ ಇದ್ದರೆ ಕನಿಷ್ಟ ‘ಬಜರಂಗಿ ಭಾಯಿಜಾನ್’ಗಾದರೂ ಪ್ರಶಸ್ತಿ ಒಲಿಯಬೇಕಾಗಿತ್ತು.

ಅದೂ ಕೂಡ ಇನ್ನಾವುದೋ ರಾಜಕಾರಣಕ್ಕೆ ಬಲಿಯಾಯಿತು. ಇವುಗಳಿಗೆಲ್ಲ ಪ್ರಶಸ್ತಿ ಸಿಗಲಿಲ್ಲ ಎನ್ನುವುದಕ್ಕಿಂತಲೂ ದೊಡ್ಡ ವ್ಯಂಗ್ಯ ‘ಬಾಹುಬಲಿ’ಗೆ ಪ್ರಶಸ್ತಿ ನೀಡಲಾಯಿತು ಎನ್ನುವುದು. ಆಯ್ಕೆ ಸಮಿತಿ ಈ ಬಾರಿ ತನ್ನ ಸೂಕ್ಷ್ಮತೆಗಳನ್ನು ಸಂಪೂರ್ಣ ಕಳೆದುಕೊಂಡಿದೆ ಎನ್ನುವುದಕ್ಕೆ ಈ ಆಯ್ಕೆಯೇ ಅತ್ಯುತ್ತಮ ಉದಾಹರಣೆ.

‘ಬಾಹುಬಲಿ’ಗೆ ಯಾಕೆ ನೀಡಬಾರದು ಎನ್ನುವುದರ ಪಟ್ಟಿಯನ್ನೇ ನೀಡಬಹುದು. ಮುಖ್ಯವಾಗಿ ‘ಬಾಹುಬಲಿ’ ಚಿತ್ರ 70ರ ದಶಕದ ಚಂದಮಾಮ ಕತೆಯನ್ನು ಹೊಂದಿದೆ. ಎರಡನೆಯದು, ಈ ಚಿತ್ರ ಅಪೂರ್ಣವಾಗಿದೆ. ಸಾಂಕೇತಿಕವಾಗಿಯಾದರೂ ಕತೆ ಮುಗಿಯುವುದಿಲ್ಲ. ದಗ್ಗುಬಾಟ್ಟಿ(ಖಳ ನಾಯಕ) ಮತ್ತು ಸತ್ಯರಾಜ್(ಕಟ್ಟಪ್ಪ) ಹೊರತುಪಡಿಸಿ ಯಾವ ಪಾತ್ರಗಳಿಗೂ ಜೀವವಿಲ್ಲ. ನಾಯಕ ಬಾಹುಬಲಿ ಪಾತ್ರವಂತೂ ತೀರಾ ಪೇಲವವಾಗಿದೆ. ಚಿತ್ರಕತೆಯ ಹೆಣಿಗೆಯಲ್ಲಿ ಯಾವುದೇ ಬಿಗಿಯಿಲ್ಲ. ಸಂದೇಶ, ಗುರಿಯಂತೂ ಈ ಚಿತ್ರಕ್ಕೆ ಇಲ್ಲವೇ ಇಲ್ಲ.

ಬರೇ ದೃಶ್ಯ ವೈಭವಕ್ಕಾಗಿ ಈ ಚಿತ್ರವನ್ನು ಆರಿಸಲಾಯಿತೇ? ಆತ್ಮವೇ ಇಲ್ಲದ ಶವವನ್ನು ಅದೆಷ್ಟು ಶೃಂಗರಿಸಿದರೇನು? ಆ ಶೃಂಗಾರಕ್ಕೆ ಆಯ್ಕೆ ಸಮಿತಿ ಸೋತಿತೆ? ಮೆಲೋಡ್ರಾಮಗಳಿಂದ ಅಬ್ಬರಿಸುವ ಈ ಚಿತ್ರ, ಸಿನೆಮಾದ ಸೂಕ್ಷ್ಮತೆಗಳನ್ನೆಲ್ಲ ಗಾಳಿಗೆ ತೂರಿದೆ. ಇಂತಹದೊಂದು ಚಿತ್ರಕ್ಕೆ ಪ್ರಶಸ್ತಿ ನೀಡುವ ಮೂಲಕ, ಚಿತ್ರ ತಯಾರಕರಿಗೆ ಆಯ್ಕೆ ಸಮಿತಿ ಅದೇನೋ ಸಂದೇಶವನ್ನು ನೀಡುವಂತಿದೆ.

ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಇದಕ್ಕೆ ಹೊರತಾಗಿಲ್ಲ. ಯಾವುದೇ ಅಧಿಕೃತ ದಾಖಲೆಗಳಿಲ್ಲದೆ, ಇತಿಹಾಸವನ್ನು ಅತೀ ವೈಭವೀಕರಿಸಿ, ಹಲವು ಸತ್ಯಗಳನ್ನು ಸಾರಾಸಗಟಾಗಿ ಮುಚ್ಚಿ ಹಾಕಿ, ಪರಂಪರೆಯ ಅತಿ ರಮ್ಯ, ವೈಭವೀಕರಣವನ್ನು ಮಾಡುವ ‘ಬಾಜಿರಾವ್ ಮಸ್ತಾನಿ’ ಚಿತ್ರವನ್ನು ನಿರ್ದೇಶಿಸಿದ ಬನ್ಸಾಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಇತಿಹಾಸವನ್ನು ‘ಚಂದಮಾಮ ಕತೆಯಾಗಿ’ ಪುರಾಣಗಳ ಕಾಲ್ಪನಿಕ ರೂಪಾಂತರವಾಗಿ ಕಟ್ಟಿಕೊಡುವ ಈ ಎರಡು ಪ್ರಯತ್ನಗಳು ಯಾರಿಗಾದರೂ ಖುಷಿಕೊಟ್ಟಿದ್ದರೆ ಅದು ಆರೆಸ್ಸೆಸ್ ಮನಸ್ಥಿತಿಗಳಿಗೆ ಮಾತ್ರ. ಇವುಗಳ ಮುಂದೆ, ‘ವಿಸಾರಣೈ’, ‘ಮಸಾನ್’ನಂತಹ ಚಿತ್ರಗಳು ಅವರಿಗೆ ದೇಶದ್ರೋಹಿ ಚಿತ್ರಗಳಾಗಿ ಕಂಡರೂ ಅಚ್ಚರಿಯಿಲ್ಲ.

dilwale protest gujaratಭಾರತೀಯ ಸಿನಿಮಾಗಳ ಪಾಲಿಗೆ ಬಾಲಿವುಡ್ ಹಿರಿಯಣ್ಣನಾಗಿದ್ದರೂ, ಅತ್ಯುತ್ತಮ ಚಿತ್ರಗಳೆಲ್ಲವೂ ಬಂದಿರುವುದು ಬಂಗಾಳಿ, ಮರಾಠಿ, ಮಲಯಾಳಂ, ಕನ್ನಡದಂತಹ ಪ್ರಾದೇಶಿಕ ಭಾಷೆಗಳಿಂದ. ಕಳೆದ ಬಾರಿ ‘ಕೋರ್ಟ್’ ಎನ್ನುವ ಮರಾಠಿ ಚಿತ್ರ ದೇಶದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತು. ಇನ್ನೊಂದು ಮರಾಠಿ ಚಿತ್ರ ‘ಶ್ವಾಸ್’ನ್ನು ನಾವಿಲ್ಲಿ ನೆನೆಯಬಹುದು. ಕಮರ್ಷಿಯಲ್ ಚಿತ್ರಗಳಿಗೂ ಕಲಾತ್ಮಕ ಸ್ಪರ್ಶವನ್ನು ನೀಡಿದ ಹೆಗ್ಗಳಿಗೆ ಮಲಯಾಳಂ, ತಮಿಳು ಚಿತ್ರಗಳಿಗಿದೆ.

ಸ್ವರ್ಣಕಮಲ ಪಡೆದ ಕನ್ನಡ ಚಿತ್ರಗಳ ಸಾಲುಗಳನ್ನು ಇಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿಲ್ಲ. ಬಂಗಾಳಿ ಮತ್ತು ಮಲಯಾಳಂ ಚಿತ್ರಗಳೆಲ್ಲ ತಮ್ಮ ಸೃಜನಶೀಲತೆಯ ಬಲದಿಂದಲೇ ಗೆದ್ದವುಗಳು. ಇವುಗಳ ನಡೆವೆಯೂ ಮಧುರ್ ಭಂಡಾರ್ಕರ್ ನಿರ್ದೇಶಿಸಿದ ಪೇಜ್ ತ್ರೀ, ಚಾಂದ್ನಿ ಬಾರ್, ಟ್ರಾಫಿಕ್ ಸಿಗ್ನಲ್ ನಂತಹ ಹಿಂದಿ ಚಿತ್ರಗಳನ್ನು ನಾವು ನೆನೆಯಲೇಬೇಕಾಗುತ್ತದೆ. ಆದರೆ ಈ ಬಾರಿ, ಅತ್ಯುತ್ತಮ ಚಿತ್ರವೆಂದು ಗುರುತಿಸುವ ಸಂದರ್ಭದಲ್ಲಿ ಸಂವೇದನಾಹೀನ ಮನಸ್ಸುಗಳು ಆಯ್ಕೆಯ ಹಿಂದೆ ಕೆಲಸ ಮಾಡಿರುವುದು ಎದ್ದು ಕಾಣುತ್ತದೆ. ಈ ಕಾರಣದಿಂದಲೇ, ಸಿನೆಮಾದ ಎಲ್ಲ ಸೂಕ್ಷ್ಮಗಳನ್ನು ಬದಿಗೊತ್ತಿ ಜನಪ್ರಿಯ ಮೆಲೋಡ್ರಾಮಗಳನ್ನೇ ಅತ್ಯುತ್ತಮ ಸಂವೇದನೆ ಎಂದು ಘೋಷಿಸಲಾಯಿತು. ಸಿನೆಮಾದ ಸೂಕ್ಷ್ಮಗಳು ಗೊತ್ತಿಲ್ಲದ ಜನರಿಂದಷ್ಟೇ ಇಂತಹ ಘೋಷಣೆ ಸಾಧ್ಯ.

ತಮಾಷೆಯೆಂದರೆ ಇದೇ ಸಂದರ್ಭದಲ್ಲಿ ಇನ್ನೊಂದು ಹೊಸ ಪ್ರಶಸ್ತಿಯನ್ನು ಘೋಷಿಸಲಾಯಿತು. ಆ ಪ್ರಶಸ್ತಿಯ ಹೆಸರು ‘ಚಿತ್ರಸ್ನೇಹಿ ರಾಜ್ಯ’! ಮತ್ತು ಆ ಪ್ರಶಸ್ತಿಯನ್ನು ಕೊಟ್ಟದ್ದು ಗುಜರಾತಿಗೆ. ಯಾವ ಕಾರಣಕ್ಕಾಗಿ ಎನ್ನುವ ಉತ್ತರ ಇನ್ನೂ ಹೊರ ಬಿದ್ದಿಲ್ಲ. ಗುಜರಾತನ್ನು ಚಿತ್ರ ಸ್ನೇಹಿ ರಾಜ್ಯ ಎಂದು ಯಾವ ಮಾನದಂಡದಲ್ಲಿ ಗುರುತಿಸಲಾಯಿತು?

ಶಾರುಕ್ ಖಾನ್ ಅವರ ‘ದಿಲ್ವಾಲೆ’ ಚಿತ್ರ ಬಿಡುಗಡೆಯಾದಾಗ ಗುಜರಾತ್ ನಲ್ಲಿ ಸಣ್ಣದೊಂದು ಗಲಭೆಯೇ ನಡೆಯಿತು. ಕಳೆದ ಡಿಸೆಂಬರ್ ನಲ್ಲಿ ಅಹ್ಮದಾಬಾದ್, ಸೂರತ್ ಹಾಗೂ ಮೆಹ್ಸಾನಾದಲ್ಲಿ ನಡೆದ ತೀವ್ರ ಪ್ರತಿಭಟನೆಯ ಕಾರಣವನ್ನು ನೆಪವಾಗಿಟ್ಟುಕೊಂಡು ‘ದಿಲ್ವಾಲೆ’ ಚಿತ್ರ ಪ್ರದರ್ಶನವನ್ನೇ ಗುಜರಾತ್ ನಲ್ಲಿ ರದ್ದುಗೊಳಿಸಲಾಯಿತು. 2016ರ ಫೆಬ್ರವರಿಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಖಾನ್ ಅವರ ‘ರಯೀಸ್’ ಚಿತ್ರದ ಶೂಟಿಂಗ್ ಗೆ ಅಡ್ಡಿಪಡಿಸಿದರು. ಅಷ್ಟೇ ಅಲ್ಲ, ಎರಡು ವರ್ಷಗಳ ಹಿಂದೆ, ಆಮಿರ್ ಖಾನ್ ಅವರ ‘ಪೀಕೆ’ ಚಿತ್ರದ ವಿರುದ್ಧವೂ ಗುಜರಾತ್ ನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯಿತು. ಈ ಕಾರಣದಿಂದ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ರದ್ದುಗೊಳಿಸಲಾಯಿತು.

ಗುಜರಾತ್ ನಿಂದ ಈ ದೇಶಕ್ಕೆ ಅತ್ಯುತ್ತಮ ಚಿತ್ರಗಳು ದೊರಕಿರುವ ಉದಾಹರಣೆಗಳೂ ಕಡಿಮೆ. ಬರೇ ಹಣದ ವ್ಯವಹಾರ, ಹೂಡಿಕೆಗಳನ್ನು ಮುಂದಿಟ್ಟುಕೊಂಡು ಈ ಪ್ರಶಸ್ತಿಯನ್ನು ನೀಡಲಾಯಿತೆ? ಅಥವಾ ಇನ್ನಾವುದಾದರೂ ರಾಜಕೀಯ ಉದ್ದೇಶ ಇದರ ಹಿಂದೆ ಇದೆಯೆ? ಈ ಪ್ರಶ್ನೆ ಚರ್ಚೆಗೆ ಅರ್ಹವಾದುದು. ನಿಜಕ್ಕೂ ಚಿತ್ರ ಸ್ನೇಹಿ ಪ್ರಶಸ್ತಿ ನೀಡುವುದಿದ್ದರೆ ಅದು ಆಂಧ್ರ ಅಥವಾ ತಮಿಳುನಾಡಿಗೆ ಸಲ್ಲಬೇಕು. ಇಂದು ಬಾಲಿವುಡ್ ನಿಂತಿರೋದೆ ತಮಿಳು, ತೆಲುಗು ಚಿತ್ರಗಳ ರಿಮೇಕ್ ಮೇಲೆ. ಬಾಲಿವುಡ್ ಗೆ ಹತ್ತು ಹಲವು ನಿರ್ಮಾಪಕರನ್ನು, ನಿರ್ದೇಶಕರನ್ನು, ನಟರನ್ನು, ಇನ್ನಿತರ ಕಲಾವಿದರನ್ನು ಈ ರಾಜ್ಯಗಳು ನೀಡಿವೆ. ಕೇರಳವೂ ಇದರಲ್ಲಿ ಹಿಂದೆ ಬಿದ್ದಿಲ್ಲ.

ಭಾರತೀಯ ಚಿತ್ರೋದ್ಯಮದಲ್ಲಿ ಕ್ರಿಮಿನಲ್ ಗಳು, ರಾಜಕಾರಣಿಗಳ ನಂಟು ಇಂದು ನಿನ್ನೆಯದಲ್ಲ. ಆದರೆ ಆ ಪಾತ್ರ ಹಣ ಹೂಡಿಕೆ, ನಿರ್ಮಾಣ ಇತ್ಯಾದಿಗಳಿಗಷ್ಟೇ ಸೀಮಿತವಾಗಿತ್ತು. ಸಿನೆಮಾದ ಆತ್ಮವಾಗಿರುವ ಸೃಜನಶೀಲತೆಯ ಸೂಕ್ಷ್ಮಗಳಿಗೆ ಯಾರೂ ಈವರೆಗೆ ಕೈ ಹಾಕಿರಲಿಲ್ಲ. ಪ್ರಶಸ್ತಿಯ ಆಯ್ಕೆ ಸಂದರ್ಭದಲ್ಲಿ ಹಲವು ರಾಜಕಾರಣಗಳು ಈ ಹಿಂದೆಯೂ ನಡೆದಿದೆಯಾದರೂ, ಈ ಬಾರಿ ನಡೆದಂತಹ ಪ್ರಮಾದ ಈ ಹಿಂದೆ ಯಾವತ್ತೂ ನಡೆದಿಲ್ಲ. ಸಿನೆಮಾವನ್ನು ಗಂಭೀರವಾಗಿ ಸ್ವೀಕರಿಸಿದಂತಹ ನಿರ್ದೇಶಕರಿಗೆ, ಕಲಾವಿದರಿಗೆ ಇದೊಂದು ಆಘಾತವೇ ಸರಿ.

ಅಷ್ಟೇ ಅಲ್ಲ, ಈ ಬಾರಿಯ ಆಯ್ಕೆ, ಈ ದೇಶಕ್ಕೆ ಭವಿಷ್ಯದಲ್ಲಿ ಬೇಕಾದ ಚಿತ್ರ ಯಾವ ರೀತಿಯದ್ದು ಎನ್ನುವ ಮಾದರಿಯನ್ನು ಕೊಟ್ಟಿದೆ. ಇದು ಸಿನೆಮಾವನ್ನು ಗಂಭೀರವಾಗಿ ಸ್ವೀಕರಿಸಿದ ಜನರಿಗೆ ನೀಡಿರುವ ಎಚ್ಚರಿಕೆಯೂ ಹೌದು.

7 Comments

 1. Anupama
  August 12, 2016
 2. Aasif K
  April 3, 2016
 3. ಕೆಂಪರಾಜು ಬಿ.ಎಸ್.
  April 3, 2016
 4. nanadinarasimha
  April 2, 2016
 5. Shama, Nandibetta
  April 2, 2016
 6. na.da.shetty
  April 2, 2016

Add Comment

Leave a Reply