Quantcast

ಅಡಿಯಷ್ಟು ಉದ್ದದ ಬೆರಳು..

ಮಿತ್ರಾ ವೆಂಕಟ್ರಾಜ

ಭಾಮಿನಿಗೆ ಆ ಹೆಂಗಸಿನ ನೆನಪು ಮರುಕಳಿಸಿತು. ಸತ್ತ ಹೆಣವಾಗಿ ಅಲ್ಲ. ಅಥವಾ ಆಕೆಯ ಮರಣದ ಸುದ್ದಿಯಲ್ಲಿದ್ದಂತೆ ಎಪ್ಪತ್ತೆಂಟು ವರ್ಷದ ಹೆಂಗಸಾಗಿಯೂ ಅಲ್ಲ. ಭಾಮಿನಿಗೆ ಹದಿಮೂರು ವರ್ಷವಿರುವಾಗ ಅವಳು ಆಕೆಯನ್ನು ನೋಡಿದಂತೆ. ಆಕೆಯ ಮುಖ ಭಾಮಿನಿಯ ಎದುರು ಸ್ಪಷ್ಟವಾಗಿ ನಿಂತಿದೆ. ಆಕೆಯ ಚಲನವಲನ, ನೆಟ್ಟಗಿನ ನಡೆ. ಇನ್ನು ಆ ದಪ್ಪ ಗಡುಸಿನ ಸ್ವರವಂತೂ ಅವಳ ತಲೆಯೊಳಗೇ ಕುಳಿತುಬಿಟ್ಟಿದೆ. ಇದಲ್ಲದೆ ಗಂಟಲನ್ನು ಕ್ಯಾಕರಿಸಿ ಉಗಿಯುವ ಆಕೆಯ ಪರಿ. ಇದೇನೂ ಸಾಮಾನ್ಯ ನೆನಪಲ್ಲ. ಉಳಿದು ಹೋದ ಮುಳ್ಳಿನ ಒಂದು ತುಂಡು.

ಆ ದಿವಸ ಬೆಳಗಿನಿಂದ ಮಳೆ ಬಿಟ್ಟಿತ್ತು. ಬಲೆಯಂತಿದ್ದ ಪರದೆಯನ್ನು ತೂರಿ ಬರುವ ಸೂರ್ಯನ ಅಡ್ಡಡ್ಡ ಕಿರಣಗಳೂ, ಪ್ರಖರತೆಯನ್ನು ಇನ್ನಷ್ಟು ಹೆಚ್ಚಿಸುವ ಕತ್ತಿಯಾಕಾರದ ಎಲೆಗಳೂ ಭಾಮಿನಿಯ ಕಣ್ಣಿಗೆ ಕಾಣುತ್ತಿದ್ದವು. ಮಳೆಗಾಲದ ಬಿಸಿಲಿನ ಆ ತೀಕ್ಷ್ಣ ಉರಿಯನ್ನು ನೆನಪಿಸಿಕೊಳ್ಳುತ್ತಿದ್ದಂತೆ ಅವಳ ಬಾಯಿ ಮತ್ತು ಕಣ್ಣುಗಳು ಒಣಗಿದಂತಾಗುತ್ತವೆ.

homesಆ ಕತೆ ಸುರುವಾಗುವುದು ಕೋಡಿ ಎಂಬ ಊರಿನಲ್ಲಿ. ಆದರೆ ಎಂಭತ್ತರ ದಶಕದ ಆ ಕತೆಯು ಎಲ್ಲಿಯೂ, ಯಾವಕಾಲದಲ್ಲೂ ನಡೆಯಬಹುದಿತ್ತು.
ಒಂದು ಕಾಲನ್ನು ಮಡಚಿ ಕುರ್ಚಿಗೆ ಊರಿ, ಆ ಕಾಲಿನ ಮೇಲೆ ಕೈಯ್ಯನ್ನು ಉದ್ದಕ್ಕೆ ನೀಡಿ ಆಕೆ ಕುಳಿತ ಭಂಗಿಯೆಂದರೆ ಫರ್ಮಾನು ಹೊರಡಿಸಲು ತಯಾರಾದಂತೆ! ಆಕೆಯ ಒಂದು ಹೂಂಕಾರಕ್ಕೆ, ಕೈಯ ಒಂದು ಸಂಜ್ಞೆಗೆ ಕೊಡಿಯಿಂದ ಕಡೆಯವರೆಗೆ ನಡುಕ ಬರಬೇಕು. ಆವತ್ತು ಅವಳು ತೋರು ಬೆರಳನ್ನು ಮುಂದೆ ಮಾಡಿ, ‘ಬನ್ನಿ, ಇಲ್ಲಿ,’ ಎಂದಿದ್ದಳು. ಅವರು ಅವಳ ಎದುರು ಚಾವಡಿಯಲ್ಲಿ ಸಾಲಾಗಿ ನಿಂತಿದ್ದರು, – ಮುಂದೆ ಭಾಮಿನಿಯ ಅಮ್ಮ, ಅವಳ ಹಿಂದಿನಿಂದ ಮೂವರು ಮಕ್ಕಳು.

ಆಕೆ ಮುಂದೆ ನೀಡಿದ್ದ ಆ ಬೆರಳು ಭಾಮಿನಿಗಿನ್ನೂ ನೆನಪಿದೆ. ಅದು ಸುಮಾರು ಒಂದು ಅಡಿಯಷ್ಟಾದರೂ ಉದ್ದವಿತ್ತು. ಆದರೆ ಹಾಗೆ ಹೇಳಿದರೆ ಅವಳ ತಮ್ಮನಾಗಲೀ, ತಂಗಿಯಾಗಲೀ ನಂಬುವುದೇ ಇಲ್ಲ. ಅವರಿಬ್ಬರು ಆಗ ತುಂಬ ಸಣ್ಣವರು. ಅವರಿಗೆ ನೆನಪಿರುವುದೂ ಕಷ್ಟ. ಅವಳ ಅಮ್ಮನಾದರೋ ಸುಮ್ಮನೆ ಮುಖ ಕೆಳಗೆ ಹಾಕಿ ನೆಲವನ್ನೇ ನೋಡುತ್ತ ನಿಂತಿದ್ದಳು. ಅವಳು ಆ ಬೆರಳನ್ನು ನೋಡಿಯೇ ಇರಲಿಲ್ಲವಂತೆ. ‘ನಂಗೆ ಅದೊಂದೂ ನೆನಪಿಲ್ಲೆ,’ ಇಷ್ಟೇ ಅವಳು ಹೇಳುವ ಮಾತು. ಅವಳಿಗೆ ಹಿಂದಿನದನ್ನು ನೆನಪು ಮಾಡುವುದೇ ಬೇಡವಾಗಿತ್ತು. ಏನು ಕೇಳಿದರೂ ಅವಳು ಹೇಳುವುದು ಹೀಗೆ. ಹಾಗಾಗಿ ಭಾಮಿನಿಗೆ ತಿಳಿದ ವಿಷಯಗಳೆಲ್ಲ ಕೇವಲ ಅವಳೊಬ್ಬಳ ನೆನಪಿನ ಮೇಲೆಯೇ ಆಧಾರಿತವಾದುದು.

ಒಮ್ಮೊಮ್ಮೆ ಅವಳಿಗೆ ತನ್ನ ತಮ್ಮ-ತಂಗಿಯಂದಿರು ಅದೃಷ್ಟವಂತರು ಎಂದು ಅನಿಸುತ್ತಿತ್ತು. ಯಾವುದೇ ಹಳೆಯ ನೆನಪಿನ ಭಾರವಿಲ್ಲದ ನಿಶ್ಚಿಂತೆಯ ಬದುಕು ಅವರದು, ತನ್ನ ಹಾಗಲ್ಲ. ಈಗಲೂ ಒಮ್ಮೊಮ್ಮೆ ಅವಳು ದುಸ್ವಪ್ನ ಬಿದ್ದು ಬೆಚ್ಚಿ ಎಚ್ಚೆತ್ತ ಮೇಲೆ, ಕನಸಿನ ಭಾಗಗಳು ಮಸುಕು ಮಸುಕಾಗುತ್ತ ಹೋಗುವಾಗ ಅಲ್ಲಿ ಒಂದಡಿ ಉದ್ದದ ಬೆರಳು ಮಾತ್ರ ಹೌದೋ ಅಲ್ಲವೋ ಎಂಬಂತೆ ಕಾಣುತ್ತಿದ್ದುದಿತ್ತು.

ಆಕೆಯ ಹೆಸರು ಅಕ್ಕಯ್ಯಮ್ಮ. ಮಕ್ಕಳು ಅವಳನ್ನು ಅತ್ತೆಮ್ಮ ಎಂದು ಕರೆಯಬೇಕೆಂಬ ವಾಡಿಕೆ. ಆದರೆ ಆಕೆಯನ್ನು ಹಾಗೆ ಕರೆಯಲು ಅಥವಾ ಯಾವುದೇ ಸಂಬಂಧದ ಮುದೆ ಹಿಡಿದು ಅವಳ ಬಗ್ಗೆ ಯೋಚಿಸಲೂ ಭಾಮಿನಿಯ ಮನಸ್ಸು ಒಪ್ಪಿದ್ದೆಂದೇ ಇಲ್ಲ. ಆಕೆ ಬಾಯಿ ತೆರೆದಳೆಂದರೆ ಕೆಟ್ಟಶಬ್ದಗಳೇ ಹೊರಬರುತ್ತಿದ್ದವು, – ದರಿದ್ರ ಹಿಡದ್ದ್, ಉಪಾಸ್ ಮುಖದ್ದ್, ತೆಗಲ್ ಗಳ್ಳಿ, ಕಲಿಗೆಟ್ಟದ್ದ್…. ಹೀಗೆ, ಇನ್ನಷ್ಟು ಕಳಪೆಯ ಬೈಗಳು. ಆ ಶಬ್ದಗಳನ್ನು ಹೇಳಲೂ ಭಾಮಿನಿಗೆ ಬಾಯಿ ಬಾರದು. ಆಕೆಯನ್ನು ಉದ್ಧರಿಸುವಾಗ ಒಮ್ಮೊಮ್ಮೆ ತಪ್ಪಿ ಹೇಳಿದರೂ ನಾಲಿಗೆಯನ್ನು ಚೆನ್ನಾಗಿ ತಿಕ್ಕಿ ಒರೆಸಿಕೊಳ್ಳುತ್ತಿದ್ದಳು. ಆಕೆಯಾದರೂಭಾಮಿನಿಯನ್ನಾಗಲೀ, ಅವಳ ತಂಗಿ-ತಮ್ಮಂದಿರನ್ನಾಗಲೀ ಎಂದೂ ಹೆಸರು ಹೇಳಿ ಕರೆದವಳಲ್ಲ. ಮುಂಗ್ರಿ ಸೊಡ್ಡಿದು, ಕೋಡಂಗಿ, ಎಮ್ಮಿತಮ್ಮ, ಹೊಟ್ಟೆಬಾಕ, ಪಿರ್ಕಿ, ಗಂಡ್ ಬೀರಿ, ಅರಪಚ್ಚೆ, ಕೊರಾಜಿ, ಇನ್ನು ಪ್ರಾಣಿಗಳ ಹೆಸರಂತೂ ಇದ್ದೇ ಇವೆ, – ಹೋರಿ, ನಾಯಿ, ಕತ್ತೆ, ಹಂದಿ, ಇವೇ ಇತ್ಯಾದಿ.

‘ಏನಾ ಹೆಣೆ, ನಿಂಗ್ ಎಷ್ಟ್ ಹೇಳ್ಕು? ನಿಂಗೆ ಹೇಳಿದ ಭಾಷೆ ಇಲ್ದ ಕಾಂತೆ. ನಿನ್ನ್ ಗಂಡ ಹೋಯಿ ಪೂರ ನಾಲ್ಕು ತಿಂಗಳಾತ್ತ ಬಂತು ಹೌದ?’ಎಂದಿದ್ದಳು ಆ ದಿನ.
‘ಗಂಡ ಹೋಯಿ..’ ಎಂಬ ಮಾತು ಕೇಳಿ ಅವಳ ಅಮ್ಮನ ಕಣ್ಣಲ್ಲಿ ನೀರಾಡಿತು. ಅದನ್ನು ಕಂಡು ಮೂರೂ ಮಕ್ಕಳೂ ಕೀಲಿ ಕೊಟ್ಟಂತೆ ಅಳಲು ಸುರುಮಾಡಿದವು.
‘ಅಳಪೇಲ್ ತಿಪ್ಪಿಗಳು!’ ಏರುಸ್ವರದ ಗಡಸು ದನಿಗೆ ಅವರ ಕಣ್ಣೀರು ಅರ್ಧ ಹಾದಿಯಲ್ಲೇ ನಿಂತಿತು. ‘ಹೀಂಗ್ ದಿನಾ ಕಣ್ಣೀರ್ ತೆಗೆದ್ರೆ ಮನೆಗೆ ಒಳ್ಳೆದಾತ್ತ? ಕೋಡಂಗಿಗಳು. ತಿಂದದ್ ಕಣ್ಣೀಗ್ ಹಿಡದ್ ನಿಮ್ಗೆ.’

birdsಮೇಲ್ಮುಖವಾಗಿ ತಿರುಗಿದ್ದ ಆಕೆಯ ಚಟ್ಟೆ ಮೂಗಿನ ಸೊಳ್ಳೆಗಳು ನಾಯಿಯ ಸೊಳ್ಳೆಗಳಷ್ಟು ದೊಡ್ಡದಾಗಿದ್ದವು. ಕೂದಲಿದ್ದ ಆಕೆಯ ಕೆಳ ಗಲ್ಲವು ಮುಂದಕ್ಕೆ ಚಾಚಿದ್ದವು. ದಪ್ಪ ತುಟಿಗಳು ಎದುರು ಇರುವವರನ್ನು ನುಂಗುವಂತೆ ಅಡ್ಡಡ್ಡವಾಗಿ ಹೊರಳುತ್ತಿದ್ದವು. ಓರೆಕೋರೆಯಾದ ಉದ್ದುದ್ದದ ಹಲ್ಲುಗಳು ಇನ್ನೇನು ಮೂರು ಮಕ್ಕಳನ್ನೂಕಚ್ಚಿ ಬಿಡುವವೋ ಎಂಬಂತೆ ಮುಂದಕ್ಕೆ ಚಾಚುತ್ತಿದ್ದವು. ಆಕೆ ನಿಜವಾಗಿಯೂ ಹೀಗಿದ್ದಳೇ ಅಥವಾ ತನ್ನ ಕಲ್ಪನೆಯಲ್ಲಿ ರೂಪುಪಡೆದಳೇ ಎಂದು ಭಾಮಿನಿಯು ಒಮ್ಮೊಮ್ಮೆ ಅಚ್ಚರಿಪಡುವುದಿತ್ತು. ಆದರೆ ಕೇಳುವುದು ಯಾರನ್ನು?

ಅಷ್ಟರಲ್ಲೇ ಕೇಳಿತ್ತು ಗುಡುಗಿನ ಆರ್ಭಟ.
‘ಏ ಸೋಮಾ! ಇವ್ರ ಸಾಮಾನೆಲ್ಲ ತೆಗಿ. ತೆಗ್ದು ಬಿಸಾಡು ಆಚೆ.’

ಆಕೆ ಎದ್ದು ನಿಂತಿದ್ದಳು. ಆಕೆಯ ತಲೆ ಈಗ ಚಾವಡಿಯ ಮಾಡನ್ನು ತಾಗುತ್ತಿತ್ತು. ಭಾಮಿನಿಗೆ ಇದು ಸರಿಯಾಗಿ ನೆನಪಿದೆ. ಆದರೆ ಅವಳ ತಮ್ಮನಾಗಲೀ, ತಂಗಿಯಾಗಲೀ ಇದನ್ನು ಒಪ್ಪುವುದೇ ಇಲ್ಲ. ಯಾರಾದರೂ ಅಷ್ಟು ಉದ್ದ ಇರುವುದು ಸಾಧ್ಯವೇ ಎಂದು ಅವರು ಕೇಳುತ್ತಿದ್ದರು. ಆದರೆ ಅಮ್ಮನ ಸೀರೆಯ ಸೆರಗನ್ನು ಹಿಡಿದು ನಿಂತಿದ್ದ ಭಾಮಿನಿಯು ಮೇಲೆ ನೋಡುವಾಗ ಆಕೆಯನೆತ್ತಿಯು ಮೇಲಿನ ಮಾಡಿಗೆ ತಾಗುತ್ತಿದ್ದುದನ್ನು ಕಣ್ಣಾರೆ ನೋಡಿದ್ದಳು.

‘ಸೋಮಾ,’ ಎಂದು ಕರೆಯುವಾಗ ಆಕೆಯ ಕೈಗಳು ಚಾವಡಿಯ ಉದ್ದಕ್ಕೂ ಬೀಸಿದವು. ಕೋದಂಟಿಯಂತಹ ಉದ್ದದ ಕೈಗಳು ಹಾಗೂ ಗೆರಸಿಯಂತಹ ಅಗಲದ ಮುಂಗೈಗಳು ಗಂಡಸಿನಂತಿದ್ದವು. ಆಕೆಯ ಶಕ್ತಿಯೂ ಗಂಡಸಿನಂತೆಯೇ ಇತ್ತು. ಆ ಶಕ್ತಿಯ ಸ್ಪಷ್ಟ ಅನುಭವ ಭಾಮಿನಿಗಿತ್ತು. ಗೋಕುಲಾಷ್ಟಮಿಯ ಮರುದಿನ ಉಂಡೆ ಕದ್ದಳೆಂದು ಆಕೆ ಭಾಮಿನಿಯನ್ನು ಜಪ್ಪಿ ಗುದ್ದಿದ ಹೊಡೆತಕ್ಕೆ ಅವಳು ಏಳುದಿನಗಳ ವರೆಗೆ ಜ್ವರದಲ್ಲಿ ಮಲಗಿದ್ದಳು. ಒಮ್ಮೆ ಮನೆಕೆಲಸದ ಹುಡುಗನಿಗೆ ಆಕೆ ಕಾಲಿನಿಂದ ಒಂದೇ ಸಲ ಒದ್ದ ರಭಸಕ್ಕೆ ಆ ಹುಡುಗ ಫಿಟ್ಸ್ ಬಂದು ವಿಲವಿಲನೆ ಒದ್ದಾಡಿದ್ದನ್ನೂ ಅವಳು ನೋಡಿದ್ದಳು.

‘ಎಂಥ ಕಾಣ್ತ ನಿಂತ್ಕಂಡದ್ದು? ಹೊರಡಿ ಇಲ್ಲಿಂದ. ಈ ರಾತ್ರಿ ಬೆಳಗಾಪುದ್ರೊಳಗೆ ನಿಮ್ಮ ಸುಟ್ಟ ಸೊಡ್ಡು ನನ್ನ ಎದುರಿಗೆ ಇರುಕಾಗ. ಸಲಿಗೆ ಕೊಟ್ಟ ನಾಯಿ ನೆಸಲು ನೆಕ್ಕಿತಂಬ್ರು.’

ಆಕೆಯ ಮಾತುಗಳಲ್ಲಿ ಒಂದು ರೀತಿಯ ದಯದಾಕ್ಷಿಣ್ಯವಿಲ್ಲದ ದ್ವೇಷವು ಹೊರಹೊಮ್ಮುತ್ತಿತ್ತು. ವಿಚಿತ್ರವಾದ ಉದ್ದೇಶರಹಿತ ದ್ವೇಷ. ಇದೇನೂ ಹೊಸ ವಿಷಯವಾಗಿರಲಿಲ್ಲವಾದರೂ, ಆಕೆಯ ಕಪ್ಪು ಕೊರೆಯುವ ಕಣ್ಣುಗಳನ್ನು ಭಾಮಿನಿಗೆ ನೋಡುವುದಾಗಿರಲಿಲ್ಲ. ಅಂದರೆ ಕಣ್ಣುಗಳ ಬಿಳಿಭಾಗವು ಪೂರ್ಣ ಉಜ್ಜಿಹೋಗಿದ್ದವು. ಕೆಂಪಾದ ಕೆನ್ನೆಗಳು ಬೀಗಿ ಬಾಯಿಯ ಸುತ್ತ ಬಿದ್ದಂತಿದ್ದವು. ಕೆಳತುಟಿಯು ಕೆನ್ನೆಯ ಭಾರದಿಂದ ಜಜ್ಜಿ ಹೋದಂತೆ ಚಾಚಿಕೊಂಡಿತ್ತು.
‘ಅಮ್ಮ..’ ಎಂದು ಅವಳ ತಮ್ಮ ಅಳುವ ರಾಗ ತೆಗೆದಿದ್ದ. ಭಾಮಿನಿಗೆ ತಮ್ಮನ ಮುಖ ವಿಚಿತ್ರವಾಗಿ ಕಂಡಿತು. ಅವನ ಒಂದು ಕೆನ್ನೆಯಲ್ಲಿ, ಒತ್ತಿ ಮಲಗಿದ್ದರಿಂದಾಗಿ ಚಾಪೆಯ ನೇಯ್ಗೆಯ ಗೆರೆಗಳು ಕೊರಯಲ್ಪಟ್ಟಿದ್ದವು. ಮಧ್ಯಾಹ್ನದ ನಿದ್ದೆ ಮಾಡುತ್ತಿದ್ದ ಅವನನ್ನು ಅಮ್ಮ ಎಬ್ಬಿಸಿ ಎಳೆದುಕೊಂಡು ಬಂದಿದ್ದಳು. ಅಮ್ಮ ಅವನ ಭುಜದ ಮೇಲೆ ಕೈಯಿಟ್ಟು ಸುಮ್ಮನಿರುವಂತೆ ಸನ್ನೆ ಮಾಡಿದಳು. ಅಮ್ಮನ ಮುಖದಲ್ಲಿ ದುಃಖದ ಛಾಯೆಯಿತ್ತು. ಹುಬ್ಬು ಗಂಟಿಕ್ಕಿದ್ದ ಅವಳ ಬಾಯಿಯ ತುದಿಗಳು ಕೆಳಮುಖವಾಗಿ ಬಾಗಿದ್ದವು. ಹಣೆಯಲ್ಲಿ ಪುಟ್ಟ ನಾಮದಂತಹ ಗೆರೆ ಮೂಡಿತ್ತು.

ಭಾಮಿನಿಯ ಮಡಿಲಲ್ಲಿ ಸ್ವಲ್ಪ ಮೊದಲು ಕೊಯ್ದಿದ್ದ ಗೊರಟೆಹೂಗಳು ಇನ್ನೂ ಇದ್ದವು. ಬೆಳಗಿನಿಂದ ಮಳೆ ಬಿಟ್ಟಿದೆಯೆಂದು ಅವಳು ಹೂ ಕೊಯ್ಯಲು ಅಂಗಳಕ್ಕೆ ಹೋಗಿದ್ದಳು. ಆಗಲೇ ಆಕೆಯ ಗುಡುಗಿನಂತಹ ಕರೆಯು ಇಡೀ ಮನೆಯಲ್ಲಿ ಪ್ರತಿಧ್ವನಿಸಿ ಅಂಗಳಕ್ಕೆ ತಲಪಿತ್ತು. ಈಗಅವಳು ಹೂಗಳು ಚೆಲ್ಲದಂತೆ ಲಂಗದ ತುದಿಗಳನ್ನು ಮೇಲೆ ಎತ್ತಿ ಹಿಡಿದುಕೊಂಡೇ ಅಮ್ಮನ ಒತ್ತಿಗೆ ನಿಂತಿದ್ದಳು.

homes2ಸಂಜೆಯಾಗುತ್ತ ಬಂದಿತ್ತು. ಚಾವಡಿಯ ಮೇಲಿದ್ದ ಬಿಸಿಲ ಕೋಲು ಜಗಲಿಗೆ ಇಳಿಯುತ್ತಿತ್ತು. ಭಾಮಿನಿ ತನ್ನ ಕಣ್ಣುಗಳನ್ನು ಒತ್ತಿ ಮುಚ್ಚಿಕೊಂಡಿದ್ದಳು. ಎಷ್ಟೊಂದು ಗಟ್ಟಿಯಾಗಿ ಮುಚ್ಚಿದ್ದಳೆಂದರೆ, ಕಣ್ಣರೆಪ್ಪೆಯ ಹಿಂದೆ ಅವಳಿಗೆ ಬಣ್ಣಗಳು ಕಾಣತೊಡಗಿದ್ದವು, – ಕಡು ಪಚ್ಚೆ, ಕುಕ್ಕುವ ಕೆಂಪು, ಗುಲಾಬಿ, ಹಳದಿ, ನೀಲಿ ಬಣ್ಣಗಳ ನೃತ್ಯವನ್ನು ಅವಳು ನಾಟಕದಂತೆ ನೋಡತೊಡಗಿದ್ದಳು. ಇಷ್ಟು ವರ್ಷಗಳ ಮೇಲೆ ಆ ಹೆಂಗಸು ಅಕ್ಕಯ್ಯಮ್ಮ ಸತ್ತುಹೋದಳೆಂಬ ಸುದ್ದಿಯು ಅವಳ ನೆನಪನ್ನೆಲ್ಲ ಪುನಃ ಕೆದಕಿತ್ತು.

ಮಳೆಗಾಲದ ಆ ರಾತ್ರಿಯನ್ನು ಅವಳು ಎಂದಾದರೂ ಮರೆಯಲು ಸಾಧ್ಯವೇ? ಮಳೆಗಾಲದಲ್ಲಿ ಬೆಳಿಗ್ಗೆಯೆಂಬುದು ಐದುಗಂಟೆಗೇ ತಲೆಯೆತ್ತುತ್ತಿತ್ತು. ಆದರೆ ಆವತ್ತುಅವರು ಬೆಳಗಾಗುವುದನ್ನು ಕಾದಿರಲಿಲ್ಲ. ಬೆಳಕು ತಲೆಯೆತ್ತುವ ಮೊದಲೇ, ರಾತೋರಾತ್ರಿ ಜೀರುಗುಟ್ಟಿ ಸುರಿಯುವ ಮಳೆಯಲ್ಲಿ ಗಂಟುಮೂಟೆ ಹೊತ್ತುಕೊಂಡು ಆ ಮನೆಯನ್ನು ಬಿಟ್ಟಿದ್ದರು. ಮಳೆನೀರು ಬಿದ್ದು ಕೊಚ್ಚೆಯಾದ ಮಣ್ಣಿನಲ್ಲಿ ಕಾಲು ಎತ್ತಿಡುತ್ತ, ಮುಖದ ನೀರನ್ನು ಒರೆಸಿಕೊಳ್ಳುತ್ತ, ಒಬ್ಬರಿಗೊಬ್ಬರು ಆತುಗೊಂಡು ದಟ್ಟಮರಗಳ ಎಡೆಯಲ್ಲಿ ದಾರಿಮಾಡಿಕೊಂಡು ನಡೆಯುತ್ತಿದ್ದರು. ಗಾಳಿಗೆ ಆವತ್ತು ಹಲ್ಲು ಬಂದಿತ್ತು. ತೆಳ್ಳಗಿನ ರವಕೆಯೊಳಗಿಂದ ನುಗ್ಗಿ ಬಂದು ಅದು ಅವಳನ್ನು ಕಚ್ಚುತ್ತಿದ್ದುದು ಅವಳಿಗಿನ್ನೂ ಸರಿಯಾಗಿ ನೆನಪಿದೆ.

ಇವತ್ತಿನ ದಿನದಲ್ಲಿ ಅವಳು ನಗುತ್ತಿರಬಹುದು, ಖುಶಿಯಲ್ಲಿ ಮಾತನಾಡುತ್ತಿರಬಹುದು ಅಥವಾ ಹಾಡು ಹೇಳುತ್ತ ಕೆಲಸ ಮಾಡುತ್ತಿರಬಹುದು; ಆದರೆ ಜೀರುಗುಟ್ಟಿ ಸುರಿಯುವ ಮಳೆಯ ಧಾರೆಯನ್ನು ತೂರಿಕೊಂಡು ಕಂಕುಳಡಿಯಲ್ಲಿ ಬಟ್ಟೆಯ ಗಂಟು ಹಿಡಿದುಕೊಂಡು ಮೂರು ಮಕ್ಕಳು ಮತ್ತು ತಾಯಿ ಕಾಡಿನ ಮಧ್ಯ ನಡೆದು ಬರುವ ಆ ದೃಶ್ಯವೆಂಬುದು ಅವಳೆದುರು ಹೊತ್ತುಗೊತ್ತಿಲ್ಲದೆ ಬಂದುಬಿಡುತ್ತದೆ. ಅದು ಅವಳನ್ನು ಬಿಡುವುದೇ ಇಲ್ಲ.

ಉದ್ದಕ್ಕೆ ಎಳೆದಿಟ್ಟ ಧೀರ್ಘವಾದ ಆ ರಾತ್ರಿಯನ್ನು ಒಂದೇ ನಿಮಿಷಕ್ಕೆ ಹಿಚುಕಿಡುವುದು ಸಾಧ್ಯವಾಗಿದ್ದರೆ ಎಂದು ಅವಳು ಎಷ್ಟೋ ಬಾರಿ ಅಂದುಕೊಳ್ಳುತ್ತಿದ್ದಳು! ಇಷ್ಟೊಂದು ಅಮಾನುಷವಾಗಿ ಯಾರಾದರೂ ವತರ್ಿಸುವುದು ಸಾಧ್ಯವೇ ಎಂದೂ ಅವಳು ಅಚ್ಚರಿಪಡುತ್ತಿದ್ದಳು.

ಅವಳ ಅಮ್ಮನ ಹತ್ತಿರ ಕೇಳಿ ಏನೂ ಪ್ರಯೋಜನವಿರಲಿಲ್ಲ. ‘ಅವರು ಮಾಡಿದ್ದು ಒಂದಕ್ಕೆ ಸಮವೇ, ಹಿರಿಮನೆಯಲ್ಲಿ ನಮಗೆ ಅಧಿಕಾರ ಇರಲಿಲ್ಲ.’ ಎನ್ನುವವಳು ಅವಳು. ಅಣ್ಣ-ತಮ್ಮಂದಿರುಗಳಲ್ಲಿ ಈ ಮೊದಲೇ ಪಾಲಾಗಿ ಬೇರೆ ಬೇರೆ ಮನೆ ಮಾಡಿ ಕೆಲವು ವರ್ಷಗಳೇ ಆಗಿದ್ದುವಂತೆ. ಗಂಡ ಇದ್ದಕ್ಕಿದ್ದಂತೆ ತೀರಿಕೊಂಡಾಗ ಅವಳುಕಂಗಾಲಾಗಿ ಮಕ್ಕಳೊಡನೆ ಹಿರಿಮನೆಗೆ ಹೋಗಿದ್ದಳಂತೆ. ಹಾಗೆ ಹೋದವಳುಅಪರಕಾರ್ಯಗಳೆಲ್ಲ ಕಳೆದ ಮೇಲೂ ಏನು ಮಾಡುವುದೆಂದು ತಿಳಿಯದೆ ಬುದ್ಧಿಗೆ ಮಂಕುಬಡಿದವರಂತೆ ಅಲ್ಲೇ ಇದ್ದುಬಿಟ್ಟಿದ್ದಳು. ಅವಳಿಗೆ ಆಗ ಪ್ರಾಯವಾದರೂ ಎಷ್ಟು? ಇನ್ನೂ ಇಪ್ಪತ್ತೈದೂ ಆಗಿರಲಿಲ್ಲ. ಹೀಗೆ ನಾಲ್ಕು ತಿಂಗಳು ತಮ್ಮನ್ನು ಅಲ್ಲಿ ಇರಲು ಬಿಟ್ಟದ್ದೇ ಹೆಚ್ಚು ಎನ್ನುತ್ತಿದ್ದಳು ಅವಳ ಅಮ್ಮ. ಭಾಮಿನಿಗೆ ಅಮ್ಮನ ಸ್ವಭಾವ ತಿಳಿದಿತ್ತು;ಅವಳಿಗೆ ದಿವ್ಯ ಮರೆವು. ಬೇಡವಾದುದನ್ನೆಲ್ಲ ಮರೆತು, ಬೇಕಾದುದನ್ನು ಮಾತ್ರ ನೆನಪಿಟ್ಟುಕೊಳ್ಳುವವಳು.

ಹಾಗಾಗಿ ಭಾಮಿನಿಯ ನೆನಪುಗಳು, ಅವಳ ಭಾವನೆಗಳು, ಅವಳ ಅಭಿಪ್ರಾಯಗಳು ಕೇವಲ ಅವಳವೇ ಭ್ರಮೆಗಳಾಗಿ ಉಳಿದುಬಿಟ್ಟಿವೆ.

Add Comment

Leave a Reply