Quantcast

ನೇರ ವರದಿ ನೀಡ್ತಾರೆ ರೇಣುಕಾ ನಿಡಗುಂದಿ..

ಅನೂಪ್ ಭಂಡಾರಿ ಅವರ ” ರಂಗಿತರಂಗಕ್ಕೆ”  ಹೌಸ್ ಫುಲ್.  ಕೂರಲೂ ಜಾಗವಿರದಷ್ಟು ಜನ.  ಸುಪ್ರೀಮ್ ಕೋರ್ಟಿನ ವಕೀಲರು, ಸರಕಾರಿ ಅಧಿಕಾರಿಗಳು,  IAS ತಯಾರಿಗೆಂದು ದೆಹಲಿಯಲ್ಲಿ ನೆಲೆಸಿರುವ ಕನ್ನಡದ ವಿದ್ಯಾರ್ಥಿಗಳು, ಮಾಧ್ಯಮ ಮಿತ್ರರು,  ಕವಿ, ನಾಟಕಕಾರ ಎಚ್.ಎಸ್.ಶಿವಪ್ರಕಾಶ ಮುಂತಾದ ಗಣ್ಯರು ಸೇರಿದಂತೆ ಕನ್ನಡ  ಚಿತ್ರಪ್ರೇಮಿಗಳು ಆಗಮಿಸಿ ಚಲನಚಿತ್ರೋತ್ಸವನ್ನು  ಕನ್ನಡಿಗರ ಹಬ್ಬವಾಗಿಸಿದರು. ಕರ್ನಾಟಕ ಚಲನಚಿತ್ರಅಕಾಡೆಮಿ ಮತ್ತು ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಚಿತ್ರಪ್ರೇಮಿಗಳಿಗೆ ಧಾರಾಳ ಪುಷ್ಕಳ ಊಟ, ಸಂಜೆ ಚಹಾ, ಮತ್ತು ಕುರುಕಲು ವ್ಯವಸ್ಥೆ ಮಾಡಿದ್ದವು.

delhi film renukaನವದೆಹಲಿಯ ಸಿರಿಫೋರ್ಟ್ ಥಿಯೇಟರುಗಳ ಸಮುಚ್ಚಯವೇ ಬೆಳ್ಳಿತೆರೆಗಳ ಮಾಂತ್ರಿಕ ತಾಣ. ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವಗಳು ದಶಕಗಟ್ಟಲೆ ನಡೆದ ದೃಶ್ಯವೈಭವದ ಕೇಂದ್ರ. ಧ್ವನಿ ಮತ್ತು ದೃಶ್ಯ ಎರಡೂ ಶ್ರೇಷ್ಠ ಮಟ್ಟದಲ್ಲಿ ಬಿಂಬಿತವಾಗುವ ಉತ್ಕೃಷ್ಟ ಪ್ರೊಜೆಕ್ಷನ್ ತಾಂತ್ರಿಕತೆ. ಈ  ಸುವ್ಯಸ್ಥಿತ ಥಿಯೇಟರುಗಳಲ್ಲಿ  ಕುಳಿತು ಚಿತ್ರ ನೋಡುವ ಅನುಭವವೇ ಅನನ್ಯವಾದುದು. ದೆಹಲಿಯ ಏರುತ್ತಿರುವ ಬಿಸಿಲಿನ ಝಳದ ಪರಿವೆಯನ್ನು ಕೊಡವಿ ಹಾಕಿ ಕನ್ನಡಿಗರು ಮತ್ತು ಕನ್ನಡೇತರರು ಕೂಡ ಚಿತ್ರೋತ್ಸವಕ್ಕೆ ಬಂದು ಒಂದೆಡೆ ಕಲೆತು, ಪರಿಚಿತರು ಮಿತ್ರರೊಡನೆ ಮಾತಾಡಿ, ಹರಟೆ ಹೊಡೆದು, ಗುಣಮಟ್ಟದ ಕನ್ನಡ ಸಿನೆಮಾ ನೋಡಿಕೊಂಡು ವಾರಾಂತ್ಯ ಕಳೆದದ್ದು ಒಂದು ವಿಶೇಷ.

ದಿಲ್ಲಿಯ ಪ್ರತಿಷ್ಠಿತ ತಾಣದಲ್ಲಿ ಇಂತಹುದೊಂದು ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಯೋಜಿಸಿದ್ದು ಹೊಸ ದಾಖಲೆಯೆಂದರೂ ನಡೆದೀತು. ಮುಂಬರುವ ದಿನಗಳಲ್ಲಿ ಮೈಲಿಗಲ್ಲು ಸ್ವರೂಪದ ಇಂತಹ ಕಾರ್ಯಕ್ರಮಗಳು ನಡೆಯುವ ಎಲ್ಲ ಆಸೆಯ ಟಿಸಿಲುಗಳು ಮೊಳೆತಿವೆ.

ಬಿ.ಎಸ್. ಲಿಂಗದೇವರು ನಿರ್ದೇಶನದ “ನಾನು ಅವನಲ್ಲ ಅವಳು” ಹೆಣ್ಣಿನ ಮನೋಭೂಮಿಕೆಯ ಗಂಡಿನ ಕಥೆಯನ್ನು ಹೇಳುತ್ತದೆ. ಸಿನೆಮಾದ ಕೆಲವು ಡೈಲಾಗ್ಸ್ ಗೆ ಲೇವಡಿ ಮಾಡಿ ನಗುತ್ತಿದ್ದ ಜನರು ಕೊನೆಗೆ ವಿದ್ಯಾಳ (ಮಾದೇಶ) ಒಂದು ಸಂಭಾಷಣೆಯನ್ನು ಮನಸಾರೆ ಮೆಚ್ಚಿ ಚಪ್ಪಾಳೆ ತಟ್ಟಿದ್ದು ಅವರ ಮನದಲ್ಲಿ ಮಾನವೀಯತೆ ಜಿನುಗಿದ್ದಕ್ಕೆ ಸಾಕ್ಷಿಯೇನೋ ಎಂಬಂತಿತ್ತು. ಭಿಕ್ಷೆ ಬೇಡದೆ ಮರ್ಯಾದೆಯಿಂದ ಬಾಳಲು ನಮಗೆ ಉದ್ಯೋಗ ಕೊಡ್ತೀರಾ?   ನಾನು ಅವಿದ್ಯಾವಂತಳಲ್ಲ, ಎಂ.ಎ ಮಾಡಿದ್ದೇನೆ. ವಿಲ್ ಯೂ ಗಿವ್ ಮೆ ಅ ಜಾಬ್ ” ಎಂಬ ಆಕೆಯ ದಿಟ್ಟ ಸವಾಲಿಗೆ ಪ್ರೇಕ್ಷಕರು ಸಿಳ್ಳೆಹಾಕಿ ಚಪ್ಪಾಳೆ ತಟ್ಟಿ ಮೆಚ್ಚುಗೆ ತೋರಿದರು.

cini buzzಈ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿರುವ ಸಂಚಾರಿ ವಿಜಯ್ ದಿನವಿಡೀ ಪ್ರೇಕ್ಷಕರ ನಡುವೆ ಕುಳಿತು ಸಿನೆಮಾಗಳನ್ನು ನೋಡಿದ್ದು ವಿಶೇಷ. ಅವರ ಅಭಿನಯವನ್ನು ತೆರೆಯ ಮೇಲೆ ನೋಡಿದ ನಂತರವಂತೂ ವಿಜಯ್ ಅವರನ್ನು ಮುತ್ತುವರಿದ ಅಭಿಮಾನಿಗಳು ಸ್ಪರ್ಧೆಗೆ ಬಿದ್ದು ಸೆಲ್ಫೀ, ಫೋಟೋ ಕ್ಲಿಕ್ಕಿಸಿಕೊಳ್ಳುತ್ತ  ಖುಶಿಪಟ್ಟರು. ಈ ಮೆಚ್ಚುಗೆಯ ಹೊಳೆಯಲ್ಲಿ ವಿಜಯ್ ಕೂಡ ಮಿಂದೆದ್ದು ಪುಳಕಿತಗೊಂಡದ್ದು ಕಾಣುತ್ತಿತ್ತು. ಅಂತ, ಬಂಧನ, ಮುತ್ತಿನಹಾರದಂತಹ ಜನಪ್ರಿಯ ಚಿತ್ರಗಳನ್ನು ನೀಡಿರುವ ಅಕಾಡೆಮಿಯ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ಪ್ರೇಕ್ಷಕರ ಪಾಲಿಗೆ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದ್ದರು.

ಮಂಡ್ಯ ಜಿಲ್ಲೆಯ dialect ನಲ್ಲಿ ನಡೆಯುವ ”ತಿಥಿ” ಚಿತ್ರದಲ್ಲಿ ನಟರೆಲ್ಲ ಆ ಊರಿನ ಜನರೇ.  ಸ್ಥಾನಿಕರನ್ನೆ ಬಳಸಿ ರಾಮರೆಡ್ಡಿ ಒಳ್ಳೆಯ ಚಿತ್ರ ಕಟ್ಟಿಕೊಟ್ಟಿದ್ದಾರೆ.  ನೂರಒಂದು ವರ್ಷ ತುಂಬಿದ ಸೆಂಚುರಿ ಗೌಡರ ಸಾವಿನ ನಂತರ ಅವರ ಮಗ – ಗಡ್ದಪ್ಪ,  ಮೊಮ್ಮಗ – ತಾಮ್ಮಣ್ನ, ಮರಿಮೊಮ್ಮಗ – ಅಭಿ” ಈ ಮೂರು ತಲೆಮಾರಿನ ಮೂರು ಪಾತ್ರಗಳು ” ತಿಥಿ” ಕಾರ್ಯನಡೆಯುವವರೆಗೂ ನಡೆದುಕೊಳ್ಳುವ ಸ್ವಾರ್ಥ ಪರಮಾರ್ಥಗಳ ವೈಖರಿ ಈ ಚಿತ್ರದ ಕಥಾವಸ್ತು. ಯಾವ ಸೆಟ್ಟೂ ಇಲ್ಲ, ಊರಿನ ಜನರೇ ನಟರು. ಕುರಿಮಂದೆಯ ಅಲೆಮಾರಿಗಳನ್ನು ಬಳಸಿ ಮಾಡಿದ ಅತ್ಯುತ್ತಮ ಚಿತ್ರ ದೆಹಲಿ ಕನ್ನಡಿಗರ ಮನಗೆದ್ದಿತು. ಮಂಡ್ಯ ಸೊಗಡಿನ ನುಡಿಗಟ್ಟಿಗೆ ಜನ ಖುಷಿಯಿಂದ ಸ್ಪಂದಿಸುತ್ತಿದ್ದರು.

ಉದ್ಘಾಟನೆ ಹೇಗಿತ್ತು 

ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಲನಚಿತ್ರೋತ್ಸವ ನಿರ್ದೇಶನಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಇವರುಗಳ ಸಂಯುಕ್ತ ಆಶ್ರಯದಲ್ಲಿ  ಚಲನಚಿತ್ರೋತ್ಸವ ಅದ್ದೂರಿ ಉದ್ಘಾಟನೆ ಕಂಡಿತು.

ಮೂರು ದಿನಗಳ ಈ ಚಲನ ಚಿತ್ರೋತ್ಸವ ದೆಹಲಿಯಲ್ಲಿ ಮೊದಲ ಬಾರಿಗೆ ಜರುಗುತ್ತಿದ್ದು ದೆಹಲಿ ಕನ್ನಡಿಗ ಚಿತ್ರ ಪ್ರೇಮಿಗಳ ಪಾಲಿಗೆ ರಸದೌತಣ.

12974403_1267948426552821_1367375478167422351_nಉದ್ಘಾಟನಾ ಕಾರ್ಯಕ್ರಮದಲ್ಲಿ ನವದೆಹಲಿಯ ಕರ್ನಾಟಕ ಭವನದ ಸ್ಥಾನಿಕ ಆಯುಕ್ತರಾದ ಅತುಲ್ ಕುಮಾರ್ ತಿವಾರಿ, ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಚಿತ್ರೋತ್ಸವ ನಿರ್ದೇಶನಾಲಯದ ನಿರ್ದೇಶಕ  ಸಿ. ಸೆಂಥಿಲ್ ರಾಜನ್, ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಎಚ್ ಬಿ ದಿನೇಶ್, ಕರ್ನಾಟಕ ಭವನದ ಸ್ಥಾನಿಕ ಉಪ ಆಯುಕ್ತರಾದ ಅನೀಸ್ ಕೆ ಜಾಯ್, ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಟ ಸಂಚಾರಿ ವಿಜಯ್, ನವದೆಹಲಿಯ ವಿಜಯ ಕರ್ನಾಟಕದ ಹಿರಿಯ ಸಹಾಯಕ ಸಂಪಾದಕ ಡಿ. ಉಮಾಪತಿ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಮ್. ನಾಗರಾಜ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು ವಹಿಸಿದ್ದರು.

ದೇಶದ ರಾಜಧಾನಿಯಲ್ಲಿ ಕನ್ನಡ ಚಲನಚಿತ್ರೋತ್ಸವ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಸೆಂಥಿಲ್ ರಾಜನ್ ಅವರು ದೇಶದ ಇತರ ಮಹಾನಗರಗಳಾದ  ಕೊಲಕತ್ತಾ, ಮುಂಬಯಿಗಳಲ್ಲೂ  ಇಂತಹ ಕನ್ನಡ ಚಲನಚಿತ್ರೋತ್ಸವಗಳನ್ನು ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳಲು ಎಲ್ಲ ಸಹಕಾರದ ಭರವಸೆಯನ್ನಿತ್ತರು.

12994463_1267948563219474_6180174861798215109_nಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ಮಾತನಾಡುತ್ತ ಕನ್ನಡ ಚಲನಚಿತ್ರ ರಂಗ ಇಂದು ಎದುರಿಸುತ್ತಿರುವ ಸಮಸ್ಯೆ, ಕನ್ನಡ ಚಿತ್ರರಂಗದ ಉಳಿವಿಗಾಗಿ ಎಷ್ಟೋ ಕನ್ನಡ ಚಿತ್ರ ತಯಾರಕರು ತಮ್ಮ ಆಸ್ತಿ-ಪಾಸ್ತಿಗಳನ್ನು ಮಾರಾಟ ಮಾಡಿ ಚಿತ್ರ ನಿರ್ಮಿಸಿ ಕನ್ನಡ ಚಿತ್ರರಂಗವನ್ನು ಕಾಪಿಟ್ಟ ಬಗೆಯನ್ನು ಹಂಚಿಕೊಂಡರು.  ಕನ್ನಡ ಚಿತ್ರರಂಗ ಇತರೆ ಯಾವುದೇ ಭಾಷೆಯ ಚಿತ್ರರಂಗಕ್ಕಿಂತ ಕಡಿಮೆಯಿಲ್ಲ. ಉತ್ತಮ ಅಭಿರುಚಿ ಚಿತ್ರಗಳು ಈಗಲೂ ಬರುತ್ತಿವೆ. ಗರಿಷ್ಠ ಸಂಖ್ಯೆಯ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿವೆ.  ಭವಿಷ್ಯದಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ಪಡೆಯುವ ದಿನಗಳು ಬಂದೇ ಬರುತ್ತವೆಂದು ಆಶಿಸಿದರು.

ಬೆಂಗಳೂರಿನಂಥ ಕಾಸ್ಮೋಪಾಲಿಟನ್ ಮಹಾನಗರದಲ್ಲಿ ಪರ ಭಾಷಾ ಚಿತ್ರಗಳೊಂದಿಗೆ ಕನ್ನಡ ಚಿತ್ರಗಳು ಪೈಪೋಟಿ ನಡೆಸಿ ಉಳಿದು ಬೆಳೆಯಬೇಕಾದ ದುಸ್ಥಿತಿಯನ್ನು ಎದುರಿಸಿವೆ. ಎಲ್ಲಾ ಸಂಕಷ್ಟಗಳ ಮಧ್ಯೆಯೂ ಸಂಚಾರಿ ವಿಜಯ್ ನಂಥ ಪ್ರತಿಭಾವಂತ ಕಲಾವಿದರು ಕನ್ನಡಚಿತ್ರರಂಗವನ್ನು ಜೀವಂತವಾಗಿಟ್ಟಿವೆ ಎಂದು ಮೆಚ್ಚಿದರು. ಕನ್ನಡ ಚಲನಚಿತ್ರೋತ್ಸವವನ್ನು ದೇಶದ ಮಹಾನಗರಗಳಲ್ಲಿನ ಕನ್ನಡಿಗರಿಗೆ  ತಲುಪಿಸುವ ಮಹತ್ಕಾರ್ಯಕ್ಕೆ ಅಸ್ತು ಎಂದು ಹೆಗಲುಕೊಟ್ಟ ಸೆಂಥಿಲ್ ರಾಜ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಕರ್ನಾಟಕ ಭವನದ ಸ್ಥಾನಿಕ ಆಯುಕ್ತರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಈ ಪ್ರಯತ್ನವನ್ನು  ಶ್ಲಾಘಿಸಿದರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ . ವಸಂತ ಶೆಟ್ಟಿ ಬೆಳ್ಳಾರೆ ಮೆಚ್ಚುಗೆ ವ್ಯಕ್ತಪಡಿಸುತ್ತ  ಮುಂಬರುವ ದಿನಗಳಲ್ಲಿ ತುಳು, ಕೊಡವದಂಥ ಉಪ ಭಾಷೆಗಳ ಚಿತ್ರಗಳೂ ರಾಜಧಾನಿಯಲ್ಲಿ ಪ್ರದರ್ಶಗೊಳ್ಳುವಂತಾಗಲಿ ಎಂದು ಆಶಿಸಿದರು.

ವಿಜಯ ಕರ್ನಾಟಕದ ಹಿರಿಯ ಸಹಾಯಕ ಸಂಪಾದಕರಾದ ಡಿ.ಉಮಾಪತಿ ಅವರು, Formula (ಸಿದ್ಧಸೂತ್ರಗಳು) ಮತ್ತು Star culture (ಹೀರೋ ಆರಾಧನೆ)ಯ ರೋಗಗಳು ಉತ್ತಮ ಚಿತ್ರ ನಿರ್ಮಾಣಕ್ಕೆ ಕಂಟಕಪ್ರಾಯ ಆಗಿ ಕೊಲ್ಲುತ್ತಿವೆ ಎಂದು ವ್ಯಥೆಪಟ್ಟರು. ರಾಜೇಂದ್ರ ಸಿಂಗ್ ಬಾಬು ಅವರೇ 13007240_1267948586552805_4789318970749358776_nಹೇಳಿರುವಂತೆ  ಆರೂಕಾಲು ಕೋಟಿ ಜನಸಂಖ್ಯೆಯಿರುವ ಕರ್ನಾಟಕದಲ್ಲಿ ಥಿಯೇಟರ್ ಗೆ ಹೋಗಿ ಕಾಸು ಕೊಟ್ಟು ಸಿನೆಮ ನೋಡುವವರ ಸಂಖ್ಯೆ ಬರೀ ಇಪ್ಪತ್ತೈದು ಲಕ್ಷ. ಇದಲ್ಲದೇ ಮನರಂಜನಾ ತೆರಿಗೆಯ ಭಾರಿ ದುರುಪಯೋಗ ನಡೆದಿದೆ. ಕನ್ನಡ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದೇವೆಂದು ದಾಖಲೆಯಲ್ಲಿ ತೋರಿಸಿ ಅಸಲಿಗೆ ಪರಭಾಷಾ ಚಿತ್ರಗಳನ್ನು ತೋರಿಸಿ ತೆರಿಗೆ ವಂಚಿಸುವ ದಂಧೆ ನಡೆದಿದೆ. ವಾಣಿಜ್ಯ ತೆರಿಗೆ ಇಲಾಖೆಯ ಕೆಲವು ಕುಳಗಳು ಈ ವಂಚನೆಯಲ್ಲಿ ಶಾಮೀಲು. ದಿವಂಗತ ಡಿ.ಕೆ ರವಿ ತೆರಿಗೆ ಆಯುಕ್ತರಾಗಿದ್ದಾಗ ಚಿತ್ರರಂಗಗಳ ಮೇಲೆ ದಾಳಿ ಮಾಡಿ ಒಂದೇ ದಿನದಲ್ಲಿ 70  ಲಕ್ಷ  ರುಪಾಯಿ ತೆರಿಗೆ ವಂಚನೆಯನ್ನು ಪತ್ತೆ ಮಾಡಿದ್ದುಂಟು. ಚಲನಚಿತ್ರಗಳು ಕೇವಲ ಜನಪ್ರಿಯವಾಗಿರುವುದಷ್ಟೇ ಅಲ್ಲದೆ ಜನಪರವೂ ಆಗಿರಬೇಕಾದದ್ದು ಈಗಿನ ತುರ್ತುಅಗತ್ಯ”  ಎಂದರು.

ತಾವು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದಾಗ ರಾಜೇಂದ್ರಸಿಂಗ್ ಬಾಬು ಅವರ ಸೂಪರ್ ಹಿಟ್ ಸಿನೆಮಾ “ಅಂತ ” ವನ್ನು ನೋಡಿದ ಸಾಹಸವನ್ನು ಪ್ರೇಕ್ಷಕರೊಬ್ಬರು ಖುಷಿಯಿಂದ ನೆನೆದರು. ಹಿಂದಿಯಲ್ಲಿ ”ಮೇರೀ ಆವಾಜ್ ಸುನೋ” ಹೆಸರಿನಲ್ಲಿ ಬಾಬೂ ಅವರೇ ನಿರ್ದೇಶಿಸಿದ ಇದೇ ಚಿತ್ರದ ಹೀರೋ ಜಿತೇಂದ್ರ. ಹಿಂದೀಯಲ್ಲೂ ಸೂಪರ್ ಹಿಟ್ ಆದ ಈ ಸಿನೆಮಾ  ಉತ್ತರ ಭಾರತದಲ್ಲಿ 24 ತಾಸುಗಳ ಕಾಲ ಎಡೆಬಿಡದೆ ಪ್ರದರ್ಶನ ನಡೆಸಿ ದಾಖಲೆ ಸ್ಥಾಪಿಸಿದ್ದನ್ನು ಖುದ್ದು ಬಾಬು ಅವರೊಂದಿಗೆ ಮೆಲುಕು ಹಾಕಿದರು. ಸ್ಟಾರ್ ಡೈರೆಕ್ಟರ್ ಆಗಿ ಹೋದ ಬಾಬು ಅವರನ್ನು ಪ್ರತ್ಯಕ್ಷ ಭೇಟಿ ಆಗುವ ಅಪರೂಪದ ಅವಕಾಶ ಒದಗಿಬಂದದ್ದಕ್ಕೆ ಮುದಗೊಂಡರು.

ಉದ್ಘಾಟನೆಯ ಮೊದಲ ದಿನ ತಿಥಿ, ನಾನು ಅವನಲ್ಲ್ಲ ಅವಳು,  ಮತ್ತು ರಂಗಿತರಂಗಪ್ರದರ್ಶನಗೊಂಡವು.  ರಾಮ ರೆಡ್ಡಿ ನಿರ್ದೇಶನದ ಈ ಚೊಚ್ಚಲ ಚಿತ್ರಕ್ಕೆ 68ನೆಯ ಲೋಕಾರ್ನೋಚಿತ್ರೋತ್ಸವದಲ್ಲಿ ಜೋಡಿ ಪ್ರಶಸ್ತಿ, 63 ನೆಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿಅತ್ಯುತ್ತಮ ಕನ್ನಡ ಚಿತ್ರವಷ್ಟೇ ಅಲ್ಲದೇ ಸ್ಪರ್ಧಿಸಿದ ಎಲ್ಲ ಚಿತ್ರೋತ್ಸವಗಳಲ್ಲೂ ಪ್ರಶಸ್ತಿಗಳ ಗೌರವ ಪಡೆದಿದೆ.

One Response

  1. Gubbachchi Sathish
    April 18, 2016

Add Comment

Leave a Reply