Quantcast

ಚಿತ್ರೋತ್ಸವದಲ್ಲಿ ಭಾನುವಾರ ಕಳೆದದ್ದೇ ಗೊತ್ತಾಗಲಿಲ್ಲ

cinibuzz3

ಹಿಂದಿನ ದಿನದ ಚಿತ್ರಗಳ ಗುಂಗಿನಲ್ಲೆ ಬೆಳಕಾಗಿತ್ತು.  ಒಂಥರಾ ಮೋಡ ಮುಸುಕಿದ ಬೆಳಗು. ಇವತ್ತು ನಿನ್ನೆಯ ಚುರುಕು ಬಿಸಿಲಿರಲಿಕ್ಕಿಲ್ಲ ಎಂದುಕೊಳ್ಳುತಲೇ ಬೇಗ ಬೇಗ ತಯಾರಾಗಿ ಆಟೋ ಬದಲಿಸಿ, ಮೆಟ್ರೋ ಹಿಡಿದು ಸಿರಿಪೋರ್ಟ್ ಅಡಿಟೋರಿಯಂ ತಲುಪುವ ಧಾವಂತದಲ್ಲಿದ್ದಾಗಲೇ ಗೆಳತಿಯೊಬ್ಬಳು ಮಂಡೀಹೌಸ್ ನಿಂದ ಪಿಕ್ ಮಾಡಿದಳು.

delhi film renukaಸಿರಿಫೋರ್ಟ್ ತಲುಪಿದಾಗ ನಿನ್ನೆಯ ಗೌಜಿ ಇದ್ದಿಲ್ಲ.  ಬೆಳಗಿನ ಹನ್ನೊಂದಕ್ಕೆ “ಹರಿವು” ಪ್ರದರ್ಶನವಾಗಲಿತ್ತು.  ದೆಹಲಿ ವೀಕ್ಷಕರ ಮನಗೆದ್ದ ಸಂಚಾರಿ ವಿಜಯ್ ಬೆಂಗಳೂರಿಗೆ ಹೊರಟು ಹೋಗಿದ್ದರಿಂದ ಇವತ್ತು ಥಿಯೇಟರ್ ಪೂರ್ತಿ ಭಣಗುಡುತ್ತಿತ್ತು.   ಅವರನ್ನು ಸುತ್ತುವರಿದಿದ್ದ ಯುವಕ ಯುವತಿಯರ ಗುಂಪು ಇವತ್ತು ಕಡಿಮೆಯಿತ್ತು.  ನಿನ್ನೆಯ ಹಬ್ಬದ ವಾತಾವರಣ ಇಂದು ಇರದಿದ್ದರೂ ಬಹಳಷ್ಟು ಜನ ರಜೆಯ ದಿನವೆಂದು ಚಿತ್ರ ನೋಡಲು ಬಂದಿದ್ದರು.

62 ನೇ ರಾಷ್ಟ್ರೀಯ ಪ್ರಶಸ್ತಿಯಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ, 2014 ರ ಸಾಲಿನ ರಾಜ್ಯದ ಅತ್ಯುತ್ತಮ ಕನ್ನದ ಚಿತ್ರ ಪ್ರಶಸ್ತಿ ಪಡೆದ ಹರಿವು, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ, ದೆಹಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ ಮತ್ತು ದೆಹಲಿ ಹೆಬಿಟೆಟ್ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ.   ಮಂಜುನಾಥ್  ಎಸ್. ನಿರ್ದೇಶನದ ” ಹರಿವು”  ನಗರೀಕರಣದ ಸಂಧರ್ಭದಲ್ಲಿ  ತೀವ್ರವಾದ ಪರಕೀಯ ಭಾವವನ್ನು ಅನುಭವಕ್ಕೆ ತರುವ ತಲ್ಲಣಗಳು,  ಫೇಸ್‍ಬುಕ್ ಅಂತರ್ಜಾಲಗಳಲ್ಲಿ ವಿಜೃಂಭಿಸುವ ಮಾನವೀಯ ಸ್ನೇಹ ಸಂಬಂಧಗಳು ವಾಸ್ತವದಲ್ಲಿ ಪೊಳ್ಳಾಗುತ್ತಿರುವ ಆತಂಕವನ್ನು ಹೇಳುತ್ತಾರೆ. ಹಾಗೆ ಹೇಳುತ್ತಲೇ ಸಮಕಾಲೀನ ಸಮಾಜದಲ್ಲಿ ವರ್ಗ ಸಂಸ್ಕೃತಿ ಮತ್ತು ವರ್ತನೆಯ ಮಾದರಿಗಳ ಸಮಸ್ಯೆಗಳನ್ನು ಅವಲೋಕಿಸುವ ಪ್ರಯತ್ನವನ್ನು ಮಾಡುತ್ತಾರೆ. ಶರಣಪ್ಪನ ಪಾತ್ರದಲ್ಲಿ ಮತ್ತೊಮ್ಮೆ ಸಂಚಾರಿ ವಿಜಯ್  ಪ್ರೇಕ್ಷಕರ ಮನ ಗೆಲ್ಲುತ್ತಾರೆ.

ಉತ್ತರ ಕರ್ನಾಟಕದ ಭಾಷೆ, ವೇಷ ಭೂಷ ಮತ್ತು  ನಟನೆಯಲ್ಲಿ ವಿಜಯ್ ಮತ್ತು ಅವನ ಹೆಂಡತಿಯ ಪಾತ್ರಧಾರಿ ನೆನಪಿನಲ್ಲಿ ಉಳಿಯುತ್ತಾರೆ.  “ಹೆಗಲ ಮ್ಯಾಲ ಕುಂಡ್ರಸಿಕೊಂಡು ಹ್ವಾದ ಮಗನ ಹೆಣಾನ  ಈಗ ತಲಿ ಮ್ಯಾಲಿಟ್ಟುಕೊಂಡ ಬಂದೇರಿ ಅನ್ನುವಾಗ ಬಹಳ ಜನರು ಭಾವುಕರಾಗಿದ್ದರು. ತಾಂತ್ರಿಕ ಕಾರಣದಿಂದಾಗಿ ಡಿವಿಡಿ ಓಡದೇ ಕೈಕೊಟ್ಟು ಕರ್ನಾಟಕ ಭವನದಿಂದ ಇನ್ನೊಂದನ್ನು ತರಿಸುವ ವಿಳಂಬದಲ್ಲಿ  ಎಲ್ಲರೂ ಹರಟೆ ಹೊಡೆಯುತ್ತ ಊಟಕ್ಕೆ ತೆರಳಿದೆವು. ಇವತ್ತೂ ಕೂಡ ವ್ಯವಸ್ಥಿತವಾದ ಊಟವಿತ್ತು. ಭೋಜನದ ನಂತರ ಹರಿವು ಚಿತ್ರ ಮುಂದುವರಿಯಿತು.

cini buzzನಂತರ ಪಿ. ಶೇಷಾದ್ರಿ ನಿರ್ದೇಶನದ “ವಿದಾಯ” ಪ್ರದರ್ಶನವಾಯಿತು.  8ನೇ ಬೆಂಗಳೂರು ಅಂತಾರಾಷ್ಟ್ರಿಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ, 2014 ರ ಸಾಲಿನ ರಾಜ್ಯ ಪ್ರಶಸ್ತಿಯಲ್ಲಿ ಲಕ್ಷ್ಮಿ ಗೋಪಾಲಸ್ವಾಮಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ, ಪಿ. ಶೇಷಾದ್ರಿ ಅವರಿಗೆ ಅತ್ಯುತ್ತಮ ಚಿತ್ರಕಥಾ ಕರ್ತೃ ಪ್ರಶಸ್ತಿ ಸಿಕ್ಕಿದೆ. ರೋಗಪೀಡಿತ ಪತಿ ಮರಣ ಬಯಸುತ್ತಾನೆ. mercy kiiling ಮಾನ್ಯವಲ್ಲದ ನಮ್ಮ ದೇಶದಲ್ಲಿ Euthanasia (the painless killing of a patient suffering from an incurable and painful disease or in an irreversible coma)  ವನ್ನು ರೋಗಿಯೇ ಬಯಸಿದಾಗ ಕಾನೂನಿನ ಮತ್ತು ವೈದ್ಯರ ಆದೇಶದ ಪ್ರಕಾರ ರೋಗಿಯ ಹೆಸರಿನಲ್ಲಿ  ಪತ್ನಿ  ರಿಟ್ ಪೆಟಿಷನ್ ಹಾಕುತ್ತಾಳ.

ಟಿವಿ ಸಂದರ್ಶನದಲಿ ಬಾಗವಹಿಸಿ ಅವಳು ಮಾತನಾಡಿದ ನಂತರ ಆಕೆ ಅನುಭವಿಸುವ ಯಾತನೆಯನ್ನು ಚಿತ್ರ ಸಶಕ್ತವಾಗಿ ಕಟ್ಟಿಕೊಡುತ್ತದೆ.  ಕೊನೆಗೆ ಕೋರ್ಟ್ ಆ ರಿಟ್ ಅನ್ನು ವಜಾಗೊಳಿಸುತ್ತದೆ.  ಆ ಮೊದಲಿನ ಯಮಯಾತನೆ ಯಾರಿಗೂ ಸಹಿಸಲಸಾಧ್ಯ.  ಪ್ರಕೃತಿ ಚಿಕಿತ್ಸೆಗೆಂದು ಧರ್ಮಸ್ಥಳಕ್ಕೆ ಕರೆದೊಯ್ಯುತ್ತಾಳೆ.    ಕೊನೆಗೂ ಆತ ಬದುಕುಳಿಯುವುದಿಲ್ಲ. ಸಾವಿನ ಅಂಚಿನಲ್ಲಿರುವ ಇನ್ನೊಂದು ರೋಗಪೀಡಿತ ಮಗುವಿಗೆ ಮೃತನ ಕಿಡ್ನಿ ಅಥವಾ ಹೃದಯವನ್ನು ದಾನಮಾಡುವ ಸುಳಿವಿನೊಂದಿಗೆ ಚಿತ್ರ ಮುಗಿಯುತ್ತದೆ.

ರೋಗಪೀಡಿತನ ಪತ್ನಿಯ ಪಾತ್ರದಲ್ಲಿ ಲಕ್ಷ್ಮಿ ಗೋಪಾಲಸ್ವಾಮಿ ಅಭಿನಯ ಹೃದಯವನ್ನು ಆರ್ದ್ರಗೊಳಿಸುತ್ತದೆ. ಬಹಳ ಕಾಲ ಮನಸನ್ನು ಕಾಡುವ ಚಿತ್ರ.  ಪಿ. ಶೇಷಾದ್ರಿ ಅವರ  “ಭಾರತ್ ಸ್ಟೋರ್ ” ನೋಡಿದವರಿಗೆ “ವಿದಾಯ” ಅಷ್ಟೇ ಇಷ್ಟವಾಗುವ ಕಥಾವಸ್ತುವನ್ನು ಹೊಂದಿದೆ.  ಆದರೆ ಬರೀ ಮನರಂಜನೆ ಬಯಸುವ ಒಂದು ಪ್ರೇಕ್ಷಕವರ್ಗಕ್ಕೆ ಗಂಭೀರ ವಿಚಾರಪೂರ್ಣ ಅಬಿರುಚಿ ಚಿತ್ರಗಳು ರುಚಿಸಲಿಲ್ಲ. ಮತ್ತೆ ಮತ್ತೆ ಹರಿವು ಮತ್ತು ವಿದಾಯ ಚಿತ್ರಗಳಲ್ಲಿ ಬರುವ ಸಾವು , ಆಸ್ಪತ್ರೆಯ ವಾತಾವರಣ ಪಿಚ್ಚೆನ್ನಿಸುವಂತೆ ತೋರಿತು.  ರಂಗಿತರಂಗವನ್ನು ಸಿಳ್ಳೆ ಹಾಕಿ, ಹಾಡು, ಸಂಗೀತ, ನೃತ್ಯಗಳನ್ನು ಆಸ್ವಾದಿಸಿದ ಪ್ರೇಕ್ಷಕರು ಗಂಭೀರ ಚಿತ್ರಗಳು ಹಿಡಸಲಿಲ್ಲವೆಂಬುದನ್ನು ತಮ್ಮ ಕಮೆಂಟುಗಳ ಮೂಲಕ ತೋರ್ಪಡಿಸಿದರು.

ಸಂಜೆಯ ಟೀ, ಕಾಫಿ ಮುಗಿಯುತ್ತಿದ್ದಂತೆ ಆರಂಭವಾಯಿತು ಕೃಷ್ಣಲೀಲೆ. 

vidaaya movie” ಕೃಷ್ಣಲೀಲಾ” –  ನಟ ಅಜಯ್ ರಾವ್ ನಿರ್ಮಾಪಕರಾಗಿ ತಯಾರಿಸಿದ ಮೊದಲ ಚಿತ್ರ , ಶಶಾಂಕ್ ನಿರ್ದೇಶನದ ಈ ಚಿತ್ರ ರಾಜ್ಯದ ಕೆಲವು ಚಿತ್ರಮಂದಿರಗಳಲ್ಲಿ ಶತದಿನ ಪ್ರದರ್ಶನ ಕಂಡಿದೆ.  ಕೆಲವು ಹಿರಿಯರು ಇದು ಪೌರಾಣಿಕ ಕಥೆಯೋ ಇಲ್ಲ ಸಾಮಾಜಿಕವೋ ಎನ್ನುವ ಚರ್ಚೆಯಲ್ಲಿ ಮುಳುಗಿದ್ದರೆ ಇನ್ನು ಕೆಲವರಿಗೆ ಇದೂ ಒಂದು ಸಿನೆಮ ನೋಡಿಕೊಂಡೇ ಹೋದರಾಯಿತು ಎನ್ನುವ ನಿರ್ವಿಕಾರ ಭಾವವೂ ಇತ್ತು.  ಹೊರಗೆ ಸಿಕ್ಕಾಪಟ್ಟೆ ಬಿಸಿಲು ಧಗೆ.  ಹವಾನುಕೂಲದ ತಂಪಿನಲ್ಲಿ ಬಿಸಿಬಿಸಿ ಸಮೋಸ  ಮತ್ತು ಟೀ ಕುಡಿಯುತ್ತ  ಜನ ಹರಟುತ್ತಿದ್ದರು.

ಕಥಾನಾಯಕ ಕೃಷ್ನ ಶಾಲೆಗಾಗಿ ವ್ಯಾನ್ ಓಡಿಸುವ ಚಾಲಕ. ಐವರು ಸದಸ್ಯರಿರುವ ಕೆಳಮಧ್ಯಮ ವರ್ಗದ ಕುಟುಂಬದ ಏಕೈಕ ದುಡಿಯುವ ವ್ಯಕ್ತಿ.   ಅವನ ಬದುಕಲ್ಲಿ ಅಪರಿಚಿತ ಲೀಲಾಳ ಪ್ರವೇಶವಾಗುತ್ತದೆ. ಆ ನಂತರ ಕೃಷ್ಣ ಮತ್ತು ಲೀಲಾ ಅವರ ಜೀವನದಲ್ಲಿ ನಡೆಯುವ ಘಟನೆಗಳು ಚಿತ್ರದ ಕಥಾವಸ್ತು.

ನಾಳೆ ಕಛೇರಿಗೆ ಹೋಗುವವರು, ಮನೆಯಲ್ಲಿ ಇರುವವರು ಮರುದಿನದ ಕೊನೆಯ ದಿನದ ಚಿತ್ರ ಪ್ರದರ್ಶನಗಳ ಬಗ್ಗೆ, ತಾವು  ಬರುವ ಹೋಗುವ ಪ್ಲಾನ್  ಬಗ್ಗೆಯೇ ಚರ್ಚಿಸುತ್ತಿದ್ದರು.  ಬಿಸಿಲಿಳಿದಿದ್ದರೂ ಧಗೆ, ಸೆಕೆಗೆ ಏನೂ ಕಮ್ಮಿಯಿಲ್ಲದಂಥ ಭಾನುವಾರ ಕಳೆದದ್ದೇ ಗೊತ್ತಾಗಲಿಲ್ಲ.

Add Comment

Leave a Reply