Quantcast

ಗುಬ್ಬಿ ವೀರಣ್ಣ ರಂಗಮಂದಿರ, ನಾಸಿರುದ್ದೀನ್ ಶಾ ಹಾಗೂ ಇಸ್ಮತ್ ಆಪಾ ಕೆ ನಾಮ್

‘ಇಸ್ಮತ್ ಆಪಾ ಕೆ ನಾಮ್ ‘ ನಾಸಿರುದ್ದೀನ್ ಶಾ ನಿರ್ದೇಶಿಸಿದ ನಾಟಕದ ಹೆಸರು. ಆಪ್ ಕೆ ನಾಮ್ ಅಲ್ಲ!
 ಇಸ್ಮತ್ ಆಪಾ ಎಂದು ಇಸ್ಮತ್ ಚುಗ್ತಾಯಿ ಅವರನ್ನು ಆತ್ಮೀಯರು ಕರೆಯುತ್ತಿದ್ದರು ಎಂದು ನಾಸಿರುದ್ದೀನ್ ಶಾ ಅವರೇ ಹೇಳುತ್ತಾರೆ.

vasanth bhat

ವಸಂತ 

ತುಮಕೂರು ಜಿಲ್ಲೆಯ ಗುಬ್ಬಿಗೆ ಒಂದು ವಿಶೇಷ ಸಾಂಸ್ಕೃತಿಕ ಇತಿಹಾಸವಿದೆ. ಕರ್ನಾಟಕದ ವೃತ್ತಿಪರ ರಂಗಭೂಮಿಯ ದಂತಕಥೆಯೆಂದೇ ಖ್ಯಾತಿವೆತ್ತ ಪದ್ಮಶ್ರೀ ಗುಬ್ಬಿ ವೀರಣ್ಣನವರು ಇಲ್ಲಿನವರು. ಅಂತಹ ಗುಬ್ಬಿಯೆಂಬೋ ಗುಬ್ಬಿಯಂತಹ ಊರಿನಲ್ಲಿ ವೀರಣ್ಣನವರನ್ನು ಜೀವಂತವಾಗಿರಿಸುವ ಸ್ತುತ್ಯಾರ್ಹ ಪ್ರಯತ್ನವನ್ನು gubbi veerannaಇಲ್ಲಿನ ಗುಬ್ಬಿ ವೀರಣ್ಣ ಟ್ರಸ್ಟ್ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಉತ್ಸಾಹದ ಚಿಲುಮೆಯಂತಿರುವ ಖ್ಯಾತ ಕಲಾವಿದೆ ಶ್ರೀಮತಿ ಬಿ.ಜಯಶ್ರಿ ಅವರ ನೇತೃತ್ವದಲ್ಲಿ ಇಲ್ಲಿನ ಹಿರಿಕಿರಿಯ ಆಸಕ್ತರೊಂದಿಗೆ, ಸರಕಾರದ ಬೆಂಬಲ ಪಡೆದು ಅವರು ಕಟ್ಟಿದ ಗುಬ್ಬಿ ವೀರಣ್ಣ ರಂಗಮಂದಿರ ನಿಜವಾದ ಅರ್ಥದಲ್ಲಿ ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಡುತ್ತಲಿದೆ.

ಕಳೆದವಾರ, ಎಪ್ರಿಲ್ 20 ರಿಂದ 24ರ ವರೆಗೆ ಟ್ರಸ್ಟು ಈ ರಂಗಮಂದಿರದಲ್ಲಿ ರಾಷ್ಟ್ರೀಯ ನಾಟಕೋತ್ಸವವನ್ನು ಹಮ್ಮಿಕೊಂಡಿತ್ತು. ಕರ್ನಾಟಕವನ್ನೂ ಒಳಗೊಂಡಂತೆ ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ನಾಟಕ ತಂಡಗಳು ತಮ್ಮ ಅದ್ಭುತ ಪ್ರದರ್ಶನಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾದವು ಎನ್ನುವುದಕ್ಕೆ ಬೆಳಬೆಳಗ್ಗೆಯೇ ಥಿಯೇಟರಿನ ಮುಂದೆ ತೂಗುಹಾಕಿದ್ದ ‘ಟಿಕೇಟು ಮುಗಿದಿವೆ’, ಎಂಬ ಬೋರ್ಡ್ ಸಾಕ್ಷಿಯಾಗಿತ್ತೆಂದರೆ ನಂಬುವುದು ಕಷ್ಟ!

ರಂಗೋತ್ಸವದ ಕೊನೆಯ ದಿನ, ಕಳೆದ ಭಾನುವಾರ, ದೇಶದ ಖ್ಯಾತ ನಟ ನಾಸಿರುದ್ದೀನ್ ಶಾ ಅವರ ನಿರ್ದೇಶನದಲ್ಲಿ ಮುಂಬಯಿಯ ಮೋಟ್ಲೆ ಥಿಯೇಟರ್ ಗ್ರುಪ್ ಪ್ರಸ್ತುತಪಡಿಸಿದ ಖ್ಯಾತ ಉರ್ದು ಲೇಖಕಿ ಇಸ್ಮತ್ ಚುಗ್ತಾಯಿ ಅವರ ಮೂರು ಕತೆಗಳನ್ನಾಧರಿಸಿದ ‘ಇಸ್ಮತ್ ಆಪಾ ಕೆ ನಾಮ್’ ಎಂಬ ಕಥನೋಪಾಖ್ಯಾನವನ್ನು ನೋಡುವ ಅವಕಾಶ ದೊರೆತದ್ದು ನಿಜಕ್ಕೂ ಅದ್ಭುತ ಅನುಭವ! ಅದರಲ್ಲೂ ನಾಸಿರುದ್ದೀನ್ ಶಾ ನಂತಹ ಪ್ರತಿಭಾನ್ವಿತ ನಟನನ್ನು ಈ ಗುಬ್ಬಿಯ ರಂಗದ ಮೇಲೆ ಕಂಡು ಆಸ್ವಾದಿಸುವ ಅವಕಾಶ ಸಿಕ್ಕಿದ್ದೇ ಒಂದು ಅದೃಷ್ಟ. ಈ ವಯಸ್ಸಿನಲ್ಲಿಯೂ ಎಂತಹ ಚೈತನ್ಯ, ಅದೆಂತಹ ಆಕರ್ಷಕ ನಟನೆ, ರಂಗದ ಮೇಲಿದ್ದೂ ಪ್ರೇಕ್ಷಕರೊಂದಿಗೆ ಪಿಸುಗುಟ್ಟುವ, ಆಪ್ತವಾಗಿ ತೆಕ್ಕೆಗೆ ತೆಗೆದುಕೊಳ್ಳುವ, ಸುಲಲಿತವಾಗಿ ಬಾಗುವ, ಬಳುಕುವ, ನೇರವಾಗಿ ಎದೆಯ ಕದ ತಟ್ಟುವ ಆತನೊಳಗಿನ ನಟನಿಗೆ ಹ್ಯಾಟ್ಸ್ ಆಫ್!

ಇಸ್ಮತ್ ಚುಗ್ತಾಯಿ ಅವರ ಬಗ್ಗೆ ಪ್ರಾಸ್ತಾವಿಕವಾಗಿ ಆಪಸ್ನಾತಿಯಿಂದಲೆಂಬಂತೆ ಹರಟೆಯ ಸ್ವರೂಪದಲ್ಲಿ ಮಾತಿಗಾರಂಭಿಸಿದ ನಾಸಿರುದ್ದೀನ್ ಶಾ, ನಗುನಗುತ್ತಲೇ ಆಕೆಯ ಪ್ರತಿಭೆಯನ್ನು, ವ್ಯವಸ್ಥೆಯ ವಿರುದ್ಧ ಆಕೆ ಬರವಣಿಗೆಯ ಮೂಲಕ ಕೈಗೊಂಡ ಪ್ರತಿಭಟನೆಯನ್ನು ಅನಾವರಣಗೊಳಿಸಿದ್ದರು. b jayashree singingನಮ್ಮದೆಂದಿಗೂ ಸಂಪ್ರದಾಯಸ್ಥ ಸಮಾಜ. ಇಂತಹುದರಲ್ಲಿ ಮಹಿಳೆಯೋರ್ವಳು ಬಿಂದಾಸಾಗಿ ಮಾತನಾಡುತ್ತಾಳೆಂದ ಮಾತ್ರಕ್ಕೇ ಏನೆಲ್ಲ ರೆಕ್ಕೆ ಪುಕ್ಕ ಕಟ್ಟುವ ಗಂಡುಗಾಂಪರ ಗುಂಪು ಸುಮ್ಮನೇ ಬಿಟ್ಟೀತೆ? ಎಂದು ಕಣ್ಣು ಮಿಟುಕಿಸಿ, ಆ ನಡುವಿನ ಅರೆಕ್ಷಣದ ಮೌನದೊಳಗೆಯೇ ಇಸ್ಮತ್ ಎಂತಹ ರೆವಲ್ಯೂಶನರಿ ವ್ಯಕ್ತಿತ್ವದ ಬರಹಗಾರ್ತಿಯಾಗಿದ್ದರು ಎಂಬುದನ್ನು ನಿರೂಪಿಸಿ, ಆಕೆ ಅನೇಕ ವಿವಾದಗಳನ್ನು ಮೈಮೇಲೆಳೆದುಕೊಂಡು ಬದುಕಿದ್ದನ್ನು ಹೇಳಿದ್ದರು. ಮಹಿಳೆಯರ, ಅದರಲ್ಲೂ ಮುಸ್ಲಿಂ ಮಹಿಳೆಯರ ಅದುಮಿಟ್ಟ ನೋವು, ದಿನಗಳೆದಂತೆ ಉಬ್ಬುಬ್ಬಿ ಬರುವ ಬಸುರಿನ ಹಾಗೆ. ಇದ್ದುದನ್ನ ಇದ್ದಂತೆ ಹೇಳಿದ ಅವಳ ಕೆಚ್ಚು ತಮ್ಮನ್ನು ಕಾಡಿದ್ದನ್ನು, ಅವರ ಮೂರು ಕತೆಗಳ ಹೆಣಿಗೆಯಾಗಿಸಿ ಒಂದು ಕಥನ ನಿರೂಪಣೆಯ ರೂಪವನ್ನು ಪಡೆದುಕೊಂಡಿದ್ದನ್ನು ಪಕ್ಕದ ಮನೆಯ ನಾಣಿ ತನ್ನ ಗೆಳೆಯ ವೆಂಕನಿಗೆ ಹೇಳಿದ ರೀತಿಯಲ್ಲಿ ಹೇಳಿದ್ದು ಅಪ್ಯಾಯಮಾನವಾಗಿತ್ತು.

ಚುಯಿಮುಯಿ, ಮೊಘಲ್ ಬಚ್ಚಾ ಹಾಗೂ ಘರ್ವಾಲಿ ಎಂಬ ಮೂರು ವಿಭಿನ್ನ ಕಥೆಗಳ ನಿರೂಪಣೆಯಾಗಿರುವ ‘ಇಸ್ಮತ್ ಆಪಾ ಕೆ ನಾಮ್’ ಕಥಾನಕ ಇತರ ರೆಗ್ಯುಲರ್ ನಾಟಕಗಳಂತಲ್ಲ. ಮೂರೂ ಬೇರೆ ಬೇರೆಯೇ ಆದ ಸನ್ನಿವೇಶಗಳೇ ಆದರೂ ಅವುಗಳನ್ನು ಒಟ್ಟಿಗೆ ಜೋಡಿಸಿದ್ದು ಸ್ತ್ರೀಸಂವೇದನೆಯ ವಿಭಿನ್ನ ಅಭಿವ್ಯಕ್ತಿ. ಮೇಲ್ನೋಟಕ್ಕೆ ಇವು ಬೇರೆ ಬೇರೆಯೇ ಆದ ಘಟನೆಗಳೆಂದು ತೋರಿದರೂ, ಆಂತರ್ಯದಲ್ಲಿ ಬೆಸಗೊಂಡಿದ್ದು, ಪ್ರಧಾನ ವ್ಯವಸ್ಥೆಯಿಂದಾಚೆ, ಅಂಚಿಗೆ ತಳ್ಳಲ್ಪಟ್ಟವಳೆಂದು ಬಿಂಬಿಸಲಾದ ಹೆಣ್ಣುಲೋಕದ ಅರಿವಿನ ಕಥನವನ್ನೆ! ಆದರೆ, ಇಲ್ಲಿ ಸೋತಂತೆ ಕಂಡರೂ ಗೆಲುವು ಅವಳ ಅರಿವಿನದ್ದೇ!

ಮೊದಲನೆಯದಾಗಿ ಆರಂಭವಾಗುವ ಚುಯಿಮುಯಿ ಕಥನದಲ್ಲಿ ಬಸುರಿನ ಬಯಕೆಯೇ ಜೀವನದ ಪರಮೋಚ್ಛಗುರಿಯಾಗಿರುವ ಮುಸ್ಲಿಂ ಹೆಣ್ಣುಮಗಳೊಬ್ಬಳ ಹಳವಂಡವನ್ನು ಪರಿಪರಿಯಾಗಿ ತೆರೆದಿಡಲಾಗುತ್ತದೆ. ತಾನು ಬಸಿರಾದರೆ ತನ್ನ ಗಂಡ ಬೇರೊಬ್ಬ ಹೆಂಗಸಿನತ್ತ ಹೋಗಲಾರ ಮತ್ತು ತನ್ನ ವಂಶವನ್ನು ಮುನ್ನಡೆಸುವ ಸಂತಾನವನ್ನು ಆತನಿಗೆ ನೀಡಿದರೆ ತನ್ನ ಜೀವನ ಸಾರ್ಥಕವಾದಂತೆ ಎನ್ನುವುದು ಅವಳ ತಪನೆ. ಆದರೆ, ಆಕೆ ಚಂದನದ ಗೊಂಬೆ! ಅವಳಿಗೆ ತದ್ವಿರುದ್ಧ ಎಂಬಂತೆ ಇನ್ನೊಬ್ಬ ಮಹಿಳೆ. ಅವಳೋ ಬಲು ಬಜಾರಿ. ಮದುವೆಯೆಂದರೇ ಅರಿಯಳವಳು. ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಅಪ್ಪ ಯಾರೆಂದೇ ಗೊತ್ತಿಲ್ಲ. ಅಂತವಳು ಚಲಿಸುವ ರೈಲಿನಲ್ಲೇ ನಾಯಿ ಮರಿ ಹಾಕಿದಷ್ಟು ಸಹಜವಾಗಿ ಮಗುವನ್ನು ಹೆರುತ್ತಾಳೆ, ಅಷ್ಟೇ ನಿರುಮ್ಮಳವಾಗಿ ಅವಳೆದುರಿಗೇ ತನ್ನ ಹಸುಗೂಸನ್ನೆತ್ತಿಕೊಂಡು ಏನೂ ಆಗಿಲ್ಲವೆಂಬಂತೆ ಜನಜಂಗುಳಿಯಲ್ಲಿ ಮರೆಯಾಗುತ್ತಾಳೆ. ಇವಳೋ ಚಿತ್ರದೊಳಗಿನ ಚಿಗುರೆ ಕಂಗಳ ಚೆಲುವೆ. ತೆನೆಗಾಣದ ಹಸಿರು ಹೊಲ. ಅವಳೋ ಬತ್ತದೊರತೆಯ ನಿತ್ಯಹರಿದ್ವರ್ಣ ಕಾಡುನೆಲ. ಹೀಗೆ ಚುಯಿಮುಯಿ ಕತೆ ವಿರುದ್ಧ ಗುಣಗಳ ಪಾತ್ರಗಳನ್ನು ಮುಖಾಮುಖಿಯಾಗಿಸಿ ಹೆಣ್ಣು ಲೋಕದೊಳಗಿನ ಘನವಿಸ್ತಾರವನ್ನು ತೆರೆದಿಡುತ್ತದೆ.

nasiruddeen sha1ಈ ಕಥಾನಕದ ಎರಡನೆಯ ಕಥೆ ಗೋರಿ ಬಿ ಕಾಲೇಮಿಯಾರ ಟ್ರ್ಯಾಜಿಕ್ ಲವ್ ಸ್ಟೋರಿ ‘ಮೊಘಲ್ ಬಚ್ಚಾ’! ಇದು ‘ದಿ ವೇಲ್’ ಎಂಬ ಹೆಸರಿನಲ್ಲಿ ಇಂಗ್ಲಿಶ್ ಭಾಷೆಗೆ ಅನುವಾದಗೊಂಡು ಪ್ರಸಿದ್ಧವಾಗಿರುವ ಕತೆ. ಅಂದಕಾಲತ್ತಿಲ್ ಪ್ರಸಿದ್ಧ ಆಡಳಿತಗಾರರ ಹೆಂಡಂದಿರು ತಮ್ಮತಮ್ಮ ಗಂಡಂದಿರ ಕೋಪವನ್ನು ಮತ್ತು ಸೋಲನ್ನು ಹೇಗೆ ಅವಡುಗಚ್ಚಿಕೊಂಡು ನುಂಗಿಕೊಳ್ಳಬೇಕಾಗಿತ್ತು ಎಂಬುದರ ಕುರಿತಾದದ್ದು. ಇಲ್ಲಿ ಬರುವ ಕಾಲೇಮಿಯಾ ಗಂಡಸಿನ ವಿಸ್ತಾರ ಪ್ರಪಂಚವನ್ನು ನಿದರ್ಶಿಸುವ, ಅಡಿಗರ ವರ್ಧಮಾನದ ನಾಣಿಮಗ ಶೀನಿಯ ಹನುಮದ್ವಿಕಾಸವನ್ನು ಪ್ರತಿನಿಧಿಸಿದರೆ, ಗೋರಿ ಬಿ ಪರದೆಯೊಳಗೇ ತನ್ನೆಲ್ಲ ಅನುಪಮ ಸೌಂದರ್ಯವನ್ನು ಹುದುಗಿಸಿಕೊಂಡು ಸಂಕಷ್ಟವನ್ನು ಅನುಭವಿಸಿಸುವಾಕೆ. ಹಾಗಿದ್ದುಕೊಂಡೇ ಗಂಡನನ್ನು ಸೋಲಿಸುವ ಸಾವಿತ್ರಿಯಂತಹ ಪತಿವ್ರತೆ! ರತ್ನಾ ಪಾಠಕ್ ಶಾ ಅಭಿನಯಿಸಿದ ಈ ಕಥಾನಕ ಅಜ್ಜಿ ಮೊಮ್ಮಕ್ಕಳಿಗೆ ಹೇಳುವ ಕತೆಯ ಹಾಗೆ ಚೇತೋಹಾರಿಯಾಗಿತ್ತು. ಅಪ್ಪಜ್ಜನ ಹೆಸರನ್ನೇ ಹೇಳಿಕೊಂಡು ಕಾಲಕಳೆಯುವ ಬಿಡಾಡಿ ಮೊಘಲ್ ಮೊಮ್ಮಕ್ಕಳ ನವಾಬೀ ರಿವಾಜನ್ನು ಅವರು ಸಮರ್ಥವಾಗಿಯೇ ಅಭಿವ್ಯಕ್ತಿಸಿದರೆನ್ನಬಹುದು.

ಕಥಾನಕದ ಕೊನೆಯ ಭಾಗವೇ ಘರ್ವಾಲಿ. ಇದು ಗಂಡಸೊಬ್ಬ ಇಟ್ಟುಕೊಂಡ ಹೆಣ್ಣುಮಗಳೊಬ್ಬಳ ಕತೆ. ಲಾರ್ಜೊ ಎಂಬಾಕೆ ಸುಂದರ ಹೆಣ್ಣುಮಗಳು ಆ ಮನೆಯ ಕೆಲಸದಾಕೆಯೂ ಹೌದು, ಅದೇ ಕಾಲಕ್ಕೆ ಯಜಮಾನ ಮಿರ್ಜಾನಿಗೆ ಬೇಕೆನಿಸಿದಾಗೆಲ್ಲ ಕಾಮತೃಷೆಯನ್ನು ತಣಿಸುವ ಆಟದ ಬೊಂಬೆಯೂ ಹೌದು. ಆಕೆಯ ಮೇಲೆ ಕಣ್ಣಿಟ್ಟವರಿಗೇನೂ ಕಡಿಮೆಯಿಲ್ಲ! ದಿನಗಳೆದಂತೆ ಆಕೆ ಹಳತಾದ ಅಂಗಿಯ ಹಾಗೆ ತನ್ನ ಯಜಮಾನನಿಂದ ಅಲಕ್ಷ್ಯಕ್ಕೊಳಗಾದಾಗ ಸಹಜವಾಗಿಯೇ ಇರದುದರೆಡೆಗಿನ ತುಡಿತಕ್ಕೊಳಗಾಗಿ ಬೇರೆಡೆಗೆ ತುಂಡುಮೇಯತೊಡಗಿದಾಗ ಮಿರ್ಜಾನ ಕೋಪಕ್ಕೆ ಗುರಿಯಾಗುತ್ತಾಳೆ. ಬುಡವೇ ಇಲ್ಲದ ನೆಲೆ ಕಳೆದುಕೊಳ್ಳುತ್ತಾಳೆ. ಕೆಲಕಾಲದ ನಂತರ ಸಹಜವಾಗಿ ಎಂಬಂತೆ ಮತ್ತೆ ಅವನ ಮನೆಗೇ ವಾಪಸಾಗಿ ಈ ಹಿಂದಿದ್ದ ಯಜಮಾನ್ತಿ ಕಂ ಕೆಲಸದವಳ ಜಾಗವನ್ನು ಹೊದೆವ ಚಾದರದಂತೆ ಅಮರಿಕೊಳ್ಳುತ್ತಾಳೆ. ಮಿರ್ಜಾನಿಗೂ ಅದು ಬೇಕಾಗಿರುತ್ತದೆ.

nasiruddeen sha2ಈ ಕಥಾನಕದುದ್ದಕ್ಕೂ ನಮ್ಮನ್ನು ಹಿಡಿದಿಡುವುದು ನಾಸಿರುದ್ದಿನ್ ಶಾ ಅವರ ಅಪ್ರತಿಮ ಏಕಪಾತ್ರಾಭಿನಯ. ಕಥೆಯ ಪಾತ್ರಗಳೆಲ್ಲವನ್ನೂ ಭಿನ್ನ ರೀತಿಯಲ್ಲಿಯೇ ಸಂಬಾಳಿಸುವ ನಾಸಿರುದ್ದಿನ್ ಶಾ ತಮ್ಮ ಧ್ವನಿಯ ಏರಿಳಿತ ಹಾಗೂ ಹಾವಭಾವಗಳ ಮೂಲಕ, ನಡುನಡುವಿನ ಮೌನದ ಮೂಲಕ ಯಶಸ್ವಿಯಾಗಿ ಕತೆಯ ಹಂದರವನ್ನುಕಟ್ಟುತ್ತ ಹೋಗುತ್ತಾರೆ. ರಂಗದ ಗುಂಟ ಅವರು ಸ್ಪೇಸನ್ನು ಬಳಸಿಕೊಳ್ಳುವ ರೀತಿ, ಮಾತುಗಳನ್ನು ಬಾಣದಂತೆ ಎಸೆಯುವ ಛಾಪು, ಚೂಪುಕಣ್ಣುಗಳೊಳಗೇ ಭಾವವನ್ನು ಅಭಿವ್ಯಕ್ತಿಸುವ ಪರಿ ಇಡೀ ಅರ್ಧತಾಸು ನಮ್ಮನ್ನು ಮೈಮರೆವಂತೆ ಮಾಡುತ್ತದೆ.

ಇಸ್ಮತ್ ಚುಗ್ತಾಯಿ ಅವರ ಕಥೆಗಳಿಗೆ ಜೀವದುಂಬಿ ಸಮರ್ಥವಾಗಿ ಪ್ರೇಕ್ಷಕರಿಗೆ ದಾಟಿಸುವ ನಾಸಿರುದ್ದಿನ್ ಶಾ ತಮ್ಮ ನಿರ್ದೇಶನದಲ್ಲಿ ಇಡೀ ಒಂದುವರೆ ಗಂಟೆಗಳ ಕಾಲ ಎಲ್ಲಿಯೂ ಬೋರುಹೊಡೆಸದಂತೆ ನಿರ್ವಹಿಸುವಲ್ಲಿ ಸಫಲರಾಗುತ್ತಾರೆ. ದ್ವಂದ್ವಾರ್ಥದ ಯಾವ ಸಂಭಾಷಣೆಗಳೂ ಸಭ್ಯತೆಯ ಎಲ್ಲೆ ಮೀರುವುದಿಲ್ಲ. ಆದಾಗ್ಯೂ ಮಾಡಬೇಕಾದ ಪರಿಣಾಮವನ್ನು ಮಾಡಿರುತ್ತವೆ. ತುಂಬ ಸೂಕ್ಷ್ಮವಾಗಿ ಲಿಂಗರಾಜಕೀಯವನ್ನು ಮತ್ತು ಹೆಣ್ಣಾಗಿ ಕಟ್ಟಲ್ಪಟ್ಟ ಅವಳ ಜಗತ್ತು ಹಾಗೂ ನಿಜದ ನೆಲೆಯನ್ನು ತೆರೆದು ತೋರುವ ಈ ಕಥನ ಆಖ್ಯಾನ ಕೊನೆಯಲ್ಲಿ ಒಂದು ನಿಟ್ಟುಸಿರು ಮೂಡಿಸುತ್ತದೆ. ಹಾದರ ಕೇವಲ ಗಂಡು ಜಗತ್ತಿನ ಸೊತ್ತು, ಹೆಣ್ಣು ಕೇವಲ ತನ್ನದೇ ತೊತ್ತು ಎಂಬ ಮಿಥ್ ಒಡೆಯುವಲ್ಲಿ ಸಫಲವಾಗುತ್ತದೆ. ಆರಂಭದಲ್ಲಿ ವಿದ್ರೋಹಾತ್ಮಕ ಚಿಂತನೆಯ ಮೂಲಕ ಅಭಿವ್ಯಕ್ತಿಗೊಳ್ಳುವ ಹೆಣ್ಣುಅರಿವು ನಡುವೆ ಬಾಗುತ್ತ, ಮಾಗುತ್ತ, ಕೊನೆಗೂ ಗಂಡು-ಹೆಣ್ಣುಗಳ ಪರಸ್ಪರ ಅಹಂನಿರಸನಗೊಂಡು ‘ಒಲಿಸಿ ಒಲಿವಾ ನಲಿಸಿ ನಲಿವ ಜೀವ ದಿವ್ಯಗಾನ’ ಎಂಬ ಆಶಯವನ್ನು ಅಭಿವ್ಯಕ್ತಿಸುವ ಅಪ್ಪಟ ಸ್ತ್ರಿಯಾತ್ಮಕ ಅಸ್ಮಿತೆಯನ್ನು ಮುನ್ನೆಲೆಗೆ ತರುವ ಮೂಲಕ ತನಗಂಟಿದ ಗಂಡುಬೀರಿತನದ ಬಿರುದನ್ನು ಮೀರಿ ನಡೆಯುವ ಇಸ್ಮತ್ ಚುಗ್ತಾಯಿ ಅವರ ಮೂಲ ಆಶಯವನ್ನು ನಾಸಿರುದ್ದಿನ್ ಶಾ ‘ಇಸ್ಮತ್ ಆಪಾ ಕೆ ನಾಮ್’ ಮೂಲಕ ಸಮರ್ಥವಾಗಿ ಹೊರಹೊಮ್ಮಿಸುವಲ್ಲಿ ಸಫಲರಾಗುತ್ತಾರೆ.

One Response

  1. lalitha sid
    April 28, 2016

Add Comment

Leave a Reply