Quantcast

ನಾದದ ನದಿ ಬತ್ತಿಹೋಯಿತು..

ಜಿ ಎನ್ ಮೋಹನ್

ಮಲ್ಲಿಕಾರ್ಜುನ ಮನ್ಸೂರರ ಬದುಕು ಒಂದು ‘ರಸಯಾತ್ರೆ’. ಮನೆ ಮಠ ಮರೆತು ಸಂಗೀತವನ್ನು ತಮ್ಮ ಪುಟ್ಟ ಕಂಠದೊಳಗೆ ಹಿಡಿದಿಟ್ಟುಕೊಂಡ ಈ ಅದ್ಭುತ ಪ್ರತಿಭೆ ಎಲ್ಲರ ಎದೆಯೊಳಗೆ ಒಂದು ನಾದದ ನದಿಯನ್ನು ಹುಟ್ಟು ಹಾಕಿತು.

ಈ ನದಿಯ ದಡದಲ್ಲಿ ನಡೆದು ಅದರ ಜುಳುಜುಳು ನಾದವನ್ನು ಮನ್ಸೂರರಿಲ್ಲದ ಲೋಕಕ್ಕೆ ಪರಿಚಯಿಸುವ ಒಂದು ಮಹತ್ವದ ಪ್ರಯತ್ನ ನಡೆದಿದೆ.

nandan kudhyadi2ಮಲ್ಲಿಕಾರ್ಜುನ ಮನ್ಸೂರರ ಆತ್ಮಚರಿತ್ರೆ ‘ನನ್ನ ರಸಯಾತ್ರೆ’ಯನ್ನು ಆಧರಿಸಿ ಈ ರಸಯಾತ್ರಿಕನ ಬದುಕಿನ ಕೆಲವು ನೋಟಗಳನ್ನು ಬರೋಡಾ ಲಲಿತಕಲೆಗಳ ಕಾಲೇಜು ಹಾಗೂ ಪುಣೆ ಫಿಲಂ ಇನ್ ಸ್ಟಿಟ್ಯೂಟ್ ನ ಪದವೀಧರ ನಂದನ್ ಕುದ್ಯಾಡಿ ಹಿಡಿದಿಟ್ಟಿದ್ದಾರೆ.

ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ತಯಾರಿಸಿರುವ ಈ ಸಾಕ್ಷ್ಯಚಿತ್ರ 47 ನಿಮಿಷಗಳದ್ದು. ಈ ಹಿಂದೆ ನೊಬೆಲ್ ಪ್ರಶಸ್ತಿ ವಿಜ್ಞಾನಿ ಸುಬ್ರಹ್ಮಣ್ಯಂ ಚಂದ್ರಶೇಖರ್, ಗಣಿತಜ್ಞ ಶ್ರೀನಿವಾಸ ರಾಮಾನುಜಂ ಕುರಿತು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿರುವ ನಂದನ್ ಕುದ್ಯಾಡಿ ಬ್ರೆಕ್ಟ್ ಕವನದಿಂದಲೂ ಪ್ರೇರಿತರಾಗಿ ಕಿರುಚಿತ್ರ ತಯಾರಿಸಿದ್ದಾರೆ.

ಮಲ್ಲಿಕಾರ್ಜುನ ಮನ್ಸೂರರ ಸಂಗೀತಕ್ಕೆ ಮನಸೋತ ಇವರು ಮನ್ಸೂರರ ಬಗ್ಗೆ ಚಿತ್ರ ತಯಾರಿಸುವ ಬಗ್ಗೆ ಭಾರತ ಸರ್ಕಾರದ ವಿದೇಶಾಂಗ ಪ್ರಚಾರ ವಿಭಾಗಕ್ಕೆ ಯೋಜನೆಯೊಂದನ್ನು ಸಲ್ಲಿಸಿದರು. ಈ ಯೋಜನೆಗೆ ತಕ್ಷಣವೇ ರೆಕ್ಕೆ ಸಿಕ್ಕಿದ್ದಿದ್ದರೆ ‘ದಿ ಟ್ರಾವಲರ್ಸ್ ಸಾಂಗ್’ ಅಥವಾ ‘ರಸಯಾತ್ರಾ’ ಸಾಕ್ಷ್ಯಚಿತ್ರದ ಬಣ್ಣವೇ ಬೇರೆಯಾಗಿರುತ್ತಿತ್ತು, ಆದರೆ ಹಾಗಾಗಲಿಲ್ಲ. ಎಲ್ಲ ಕಡತಗಳಂತೆಯೇ ಈ ಕಡತವೂ ಕತ್ತಲ ಕೋಣೆ ಸೇರಿತು. ಮನ್ಸೂರರು ತೀವ್ರ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದ ಸುದ್ದಿ ಪತ್ರಿಕೆಗಳಲ್ಲಿ ವರದಿಯಾದಾಗಲೇ ಸರ್ಕಾರ ಎಚ್ಚರಗೊಂಡದ್ದು. ತಕ್ಷಣವೇ ಯೋಜನೆಗೆ ಸಮ್ಮತಿ ಸಿಕ್ಕಿತು. ಆದರೆ ನಿರ್ದೇಶಕ ನಂದನ್ ಕುದ್ಯಾಡಿ ಅವರ ಮುಂದೆ ಇದ್ದದ್ದು ಮನ್ಸೂರರ ಕೊನೆಯ ದಿನಗಳು ಮಾತ್ರ.

ನಂದನ್ ಇನ್ನಿಲ್ಲದಂತೆ ಕೆಲಸ ಮಾಡಿದರು. ಹಾಸಿಗೆ ಹಿಡಿದಿದ್ದ ಮನ್ಸೂರರು ಸ್ವಲ್ಪ ಚೇತರಿಸಿಕೊಂಡು ಪುನಃ ಹಾಡಲು ಆರಂಭಿಸುವುದನ್ನೇ ಜಾತಕ ಪಕ್ಷಿಯಂತೆ ಕಾದರು. ನಂದನ್ ಕನಸು ಭಗ್ನಗೊಳ್ಳಲಿಲ್ಲ. ಅಥಣಿಯ ಶಿವಾಲಯದಲ್ಲಿ ಮನ್ಸೂರರು ಬಸವಣ್ಣನವರ ವಚನಕ್ಕೆ ದನಿ ನೀಡುವುದರೊಂದಿಗೆ ಸಂಗೀತದ ಅಲೆಗಳನ್ನು ಮತ್ತೆ ಹುಟ್ಟುಹಾಕಿದರು.

ನಂದನ್ ಕುದ್ಯಾಡಿ ದಣಿವಿಲ್ಲದಂತೆ ದುಡಿದರು. ಅವರ ಮಾತುಗಳನ್ನು, ಸಂಗೀತವನ್ನು ಧ್ವನಿಮುದ್ರಿಸಿಕೊಂಡರು. ಕೇವಲ ನಾಲ್ಕು ತಿಂಗಳು ಮಾತ್ರ, ನಾದದ ನದಿ ಬತ್ತಿಹೋಯಿತು.

ಮನ್ಸೂರರು ನಿಧನರಾದರೂ ಅವರನ್ನು ಎಲ್ಲರಿಗೂ ಪರಿಚಯಿಸುವ ಕೆಲಸವನ್ನು ನಂದನ್ ಕುದ್ಯಾಡಿ ಸವಾಲಾಗಿ ಸ್ವೀಕರಿಸಿದರು.
ಈ ಕಾರಣಕ್ಕಾಗಿಯೇ ‘ರಸಯಾತ್ರೆ’ ಯಲ್ಲಿ ಹಲವು ಮನ್ಸೂರರಿದ್ದಾರೆ. ಬಾಲಕ ಮನ್ಸೂರ, ಯುವಕ ಮನ್ಸೂರ, ಗಾಯಕ ಮನ್ಸೂರ, ಬದುಕಿನ ಇಳಿದಿನಗಳ ಮನ್ಸೂರ, ನಂದನ್ ರಸಯಾತ್ರೆಯನ್ನು ಈ ಹಲವು ಮನ್ಸೂರರ ಮೂಲಕ ಪುನರ್ ಸೃಷ್ಠಿಸುವ ಕೆಲಸ ಮಾಡಿದ್ದಾರೆ. ಉಳಿದಂತೆ ಇಡೀ ರಸಯಾತ್ರೆಯುದ್ದಕ್ಕೂ ನಂದನ್ ನಾಲ್ಕು ತಿಂಗಳ ಕ್ಯಾಮೆರಾ ಕಣ್ಣಲ್ಲಿ ಹಿಡಿದಿಟ್ಟ ಮನಸೂರರು ಒಳಝರಿಯಾಗಿ ಹರಿದಿದ್ದಾರೆ.

mansur1ಕಂಪನಿ ನಾಟಕದಲ್ಲಿ ಹಾಡಲು ಆರಂಭಿಸಿದ ಮನ್ಸೂರ್ ರಸಯಾತ್ರಿಯಾಗಿ ಬೆಳೆಯುವವರೆಗಿನ ಎಲ್ಲಾ ವಿವರಗಳನ್ನೂ ‘ರಸಯಾತ್ರಾ’ ಬಿಂಬಿಸಿದೆ. ನಾಟಕ ಹಾಗೂ ಮನ್ಸೂರ್ ಎರಡನ್ನೂ ಚಿತ್ರ ಅವಲಂಬಿಸಿರುವುದರಿಂದ ಅಲ್ಲಲ್ಲಿ ಪುನರಾವರ್ತನೆ, ಕೆಲವು ಕಡೆ ನಿರೂಪಣೆಯಲ್ಲಿ ಗೊಂದಲ ಕಾಣಿಸಿದೆ. ಚಿತ್ರದುದ್ದಕ್ಕೂ ಮನ್ಸೂರರ ಗಾಯನ ಮತ್ತು ಮನ್ಸೂರರ ಮಾತುಗಳು ಚಿತ್ರದಲ್ಲಿ ಮನ್ಸೂರರು ಇಲ್ಲ ಎಂಬ ಭಾವನೆಯನ್ನೇ ತರಿಸುವುದಿಲ್ಲ. ಇದು ನಂದನ್ ಸಾಧಿಸಿದ ಬಹುಮುಖ್ಯ ಯಶಸ್ಸು.

ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಮಗು ಎಂದು ತಿರಸ್ಕಾರಕ್ಕೆ ಗುರಿಯಾಗುವ ಮನ್ಸೂರ್ ಈ ನಕ್ಷತ್ರಗಳ ಕಥೆಗಳನ್ನು ಮೀರಿ ಬೆಳೆದಿರುವುದನ್ನು ಚಿತ್ರ ಬಿಚ್ಚಿಡುತ್ತದೆ.

ಮನ್ಸೂರರು ಇಲ್ಲವಾದ ಆ ದಿನ ಚಿತ್ರೀಕರಣಕ್ಕಾಗಿ ಕಟ್ಟಿದ್ದ ಲೈಟ್ ಗಳು ಬಿಚ್ಚಲ್ಪಡುತ್ತವೆ. ನಂದನ್ ತಂಡ ಮನೆಯ ಅಂಗಳದಲ್ಲಿ ನೆರೆಯುವ ದೃಶ್ಯ ಕಣ್ಣುಗಳನ್ನ ಒದ್ದೆಯಾಗಿಸುತ್ತದೆ.

ಈ ಸಾಕ್ಷ್ಯಚಿತ್ರ 1995 ರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು ಪಡೆದಿದೆ. ‘ರಸಯಾತ್ರಾ’ ವಿಶ್ವದ ಎಲ್ಲಾ ರಾಯಭಾರ ಕಚೇರಿಗಳ ಮೂಲಕ ಪ್ರದರ್ಶಿಸಲ್ಪಡಲಿದೆ. ಮನ್ಸೂರರನ್ನು ಎಲ್ಲೆಡೆಗೆ ಕರೆದೊಯ್ಯುವ ಪ್ರೀತಿ ತೋರಿದ ನಂದನ್ ಕುದ್ಯಾಡಿ ಪ್ರಶಂಸೆಗೆ ಅರ್ಹರು.

ಇಲ್ಲಿದೆ ಸಾಕ್ಷ್ಯಚಿತ್ರ – ನೋಡಿ 

One Response

  1. Sudha ChidanandGowd
    May 7, 2016

Add Comment

Leave a Reply