Quantcast

‘ಸ್ಕೂಲ್ ಮಾಸ್ಟರ್’ ಚಿತ್ರದಿಂದ ಪ್ರೇರಿತ ಎಂದು ಅಮಿತಾಭ್ ಮರೆಮಾಚಿದರು

gangadharaa pattar

ಟಿ ಕೆ ಗಂಗಾಧರ ಪತ್ತಾರ್ 

ಕುಸುಮಾಗ್ರಜ ಶಿರ್ವಾಡಕರ್ ರವರ “ವೈಷ್ಣವಿ” ಎಂಬ ಮರಾಠೀ ಕಥೆಯನ್ನಾಧರಿಸಿ ಚಿತ್ರರಂಗದ ಮೇಷ್ಟ್ರು ಎಂದೇ ಗೌರವಿಸಲ್ಪಡುವ ಬಿ.ಆರ್.ಪಂತುಲು ನಿರ್ದೇಶಿಸಿ-ನಿರ್ಮಿಸಿದ 1958ರಲ್ಲಿ ಬೆಳ್ಳಿತೆರೆಯನ್ನು ಬೆಳಗಿದ “ಸ್ಕೂಲ್ ಮಾಸ್ಟರ್” ಕನ್ನಡ ಚಿತ್ರದ ಶಾಲೆಯ ಪ್ರಾರ್ಥನಾ ಗೀತೆಯ ದೃಶ್ಯವಿದು.

ಮೂಲತಃ ಸೋಸಲೆ ಅಯ್ಯಾ ಶಾಸ್ತ್ರಿಯವರು ರಚಿಸಿದ 32 ಪಂಕ್ತಿ  (8ಚರಣ)ಗಳ ಗೀತೆಯ ಕೆಲವು ಸಾಲುಗಳನ್ನು ತೆಗೆದುಕೊಂಡು ಕೆಲವು ಸಾಲು ಹೊಸದಾಗಿ ಸೇರಿಸಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ಬರೆದ ಈ ಗೀತೆಯನ್ನು ಸಂಗೀತ ನಿರ್ದೇಶಕ ಟಿ.ಜಿ.ಲಿಂಗಪ್ಪನವರೇ ಎ.ಪಿ.ಕೋಮಲ ಮತ್ತು ರಾಣಿಯವರ ಜೊತೆಯಲ್ಲಿ ತುಂಬಾ ಸುಶ್ರಾವ್ಯವಾಗಿ ಹಾಡಿದ್ದಾರೆ.

b r pantuluನಾನು 1959-1964ರ ಅವಧಿಯಲ್ಲಿ ಕೊಪ್ಪಳ ಜಿಲ್ಲೆ ಯಲಬುರ್ಗಿ ತಾಲೂಕ ಕುಕನೂರು ಹೋಬಳಿಯ ಸೋಂಪುರ ಸರ್ಕಾರಿ ಶಾಲೆಯಲ್ಲಿ 1-ರಿಂದ-6 ನೇ ತರಗತಿ ಓದುತ್ತಿದ್ದಾಗ ದಿನಾಲೂ ಪ್ರಾರ್ಥನೆಯಲ್ಲಿ ಹಾಡುತ್ತಿದ್ದ ನಾಲ್ಕು ಗೀತೆಗಳಲ್ಲಿ ಇದೂ ಒಂದು. ಮಿಕ್ಕ ಮೂರು ಅಂದಿನ ನಾಡಗೀತೆ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು…”, “ವಂದೇ ಮಾತರಂ…” ಹಾಗೂ ಜನ ಗಣ ಮನ ಅಧಿನಾಯಕ ಜಯಹೇ…”

ಈ ಚಿತ್ರದಲ್ಲಿ ಬಿ.ಆರ್. ಪಂತುಲು ಎಂ.ವಿ.ರಾಜಮ್ಮ ಉದಯಕುಮಾರ್, ಸಾಹುಕಾರ್ ಜಾನಕಿ, ಬಿ.ಸರೋಜಾದೇವಿ ತಾರಾಗಣದಲ್ಲಿದ್ದು ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ್ ಪೊಲೀಸ್ ಇನಸ್ಪೆಕ್ಟರ್ ಪಾತ್ರ ವಹಿಸಿದ್ದಾರೆ. ಪಂತುಲುರವರು ಈ ಚಿತ್ರದ ತಮಿಳು ಅವತರಣಿಕೆ Engal Kudumbam Perisu, ತೆಲುಗು ಅವತರಣಿಕೆ Badi Pantulu ಗಳನ್ನು ಕೂಡಾ 1958ರಲ್ಲೇ ಬಿಡುಗಡೆಗೊಳಿಸಿದರು.

“ಸ್ಕೂಲ್ ಮಾಸ್ಟರ್” ಶೀರ್ಷಿಕೆಯಲ್ಲಿಯೇ 1959ರಲ್ಲಿ ಹಿಂದಿ ಹಾಗೂ 1964ರಲ್ಲಿ ಮಲಯಾಳಂ ಭಾಷೆಯಲ್ಲಿಯೂ ಚಿತ್ರ ನಿರ್ಮಿಸಿದರು. ಇಲ್ಲಿ ಅವಧಿ ಓದುಗರಿಗಾಗಿ ಚಿತ್ರದಲ್ಲಿ ಅಳವಡಿಸಿ ಗೀತೆ ಹಾಗೂ ಶಾಸ್ತ್ರಿಗಳವರ ಮೂಲ ಕವಿತೆಯ ಪೂರ್ತಿಪಾಠವನ್ನು ಕೊಡಲಾಗಿದೆ. (1970-80ದಶಕದಲ್ಲಿ ಬಂದ ಅಮಿತಾಭ್-ಹೇಮಾಮಾಲಿನಿ ಅಭಿನಯದ “ಬಾಗ್ ಬನ್”ಚಿತ್ರವೂ “ಸ್ಕೂಲ್ ಮಾಸ್ಟರ್”ಚಿತ್ರದಿಂದ ಪ್ರೇರಿತವೆಂದೂ ಆದರೆ ಈ ಅಂಶವನ್ನು ಅಮಿತಾಭ್ ಮರೆಮಾಚಿದ್ದಾರೆಂಬ ವಾದವೂ ಇದೆ.

ಕಣಗಾಲ ಪ್ರಭಾಕರ ಶಾಸ್ತ್ರಿಗಳು ಬರೆದ ಚಿತ್ರಗೀತೆ :-

ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ/ಪ/
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ/ಅ/ಪ/

ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ/1/

ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ
ಮನೆಯ ಮಕ್ಕಳ ಐಕ್ಯಗಾನವ ಲಾಲಿಸೈ ಪರಿಪಾಲಿಸೈ/2/

ಸೋಸಲೆ ಅಯ್ಯಾ ಶಾಸ್ತ್ರಿಗಳ ಮೂಲ ಕವಿತೆಯ ಪೂರ್ತಿಪಾಠ:-

school master2ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ
ನೇಮಿಸೆಮ್ಮೊಳು ಧರ್ಮಕಾರ್ಯವ ತೇ ನಮೋಸ್ತು ನಮೋಸ್ತುತೇ
ಕ್ಷೇಮದಿಂದಲಿ ಪಾಲಿಸೆಮ್ಮನು ತೇ ನಮೋಸ್ತು ನಮೋಸ್ತುತೇ || ೧ ||

ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ
ಕಾವರಿಲ್ಲವು ನಿನ್ನ ಬಿಟ್ಟರೆ ಸೂರ್ಯನೇ ಜಗದೀಶನೇ
ಜೀವಕೋಟಿಯು ನಿನ್ನ ಈ ಬೆಳಕಿಂದ ಜೀವಿಪುದಲ್ಲವೆ || ೨ ||

ರಾತ್ರೆನಿದ್ದೆಯ ಗೈವ ಕಾಲದಿ ನೀನೆ ನಮ್ಮನು ಕಾದೆಯೈ
ಮಿತ್ರನೆಂಬುವ ನಾಮಧೇಯವು ಸತ್ಯವಾಯಿತು ನಿನ್ನೊಳು
ಸ್ತೋತ್ರ ಮಾಡುವ ಹಾಗೆ ನಿನ್ನನ್ನು ಹಕ್ಕಿಗಳ್ ದನಿಗೈವವೈ
ಚಿತ್ರಭಾನುವೆ ನೋಡಿ ನಿನ್ನನದೆಲ್ಲಿ ಪೋದುದೊ ಕತ್ತಲೆ || ೩ ||

ಉತ್ತಮೋತ್ತಮ ನಿನ್ನ ಪಾದದ ಭಕ್ತಿಯೇ ಸ್ಥಿರವಲ್ಲವೇ
ವಿತ್ತವೆಂಬುದು ಗಾಳಿಯಲ್ಲಿಹ ದೀಪದಂದದಿ ಚಂಚಲ
ಮತ್ತರಾಗುತ ಬಿಟ್ಟು ನಿನ್ನನು ಕೆಟ್ಟ ಯೋಚನೆ ಗೈಯದಾ
ಚಿತ್ತವಂ ನಮಗಿತ್ತು ರಕ್ಷಿಸು ಪದ್ಮನಾಭ ಸುರೇಶನೇ || ೪ ||

ಆಡುವಾಗಲು ನಾವು ಭೋಜನ ಮಾಡುವಾಗಲು ಸರ್ವದಾ
ನೋಡಿ ನೀ ದಯದಿಂದ ನಮ್ಮನು ಪಾಲಿಸೈ ಭಗವಂತನೇ
ಬೇಡಿಕೊಂಬೆವು ನಮ್ಮ ದೇಹಕೆ ಸೌಖ್ಯವಂ ಬಲ ಪುಷ್ಟಿಯಂ
ನೀಡು ನಿನ್ನಯ ಪಾದಭಕ್ತಿಯನೆಂದಿಗೂ ಬಿಡಲಾರೆವು || ೫ ||

ನಿನ್ನ ದರ್ಶನಗೈವ ನೇತ್ರದ ಜನ್ಮ ಸಾರ್ಥಕವಲ್ಲವೇ
ನಿನ್ನ ಪೂಜಿಪ ಹಸ್ತವೇ ಬಲುದೊಡ್ಡದಲ್ಲವೆ ದೇವನೇ
ನಿನ್ನ ನಾಮವ ಪೇಳ್ವ ನಾಲಗೆ ಧನ್ಯವಲ್ಲವೆ ಸರ್ವದಾ
ನಿನ್ನ ಜಾನಿಪ ಚಿತ್ತವೃತ್ತಿಯೆ ಯೋಗ್ಯವಲ್ಲವೆ ಲೋಕದಿ || ೬ ||

ನೀನೆ ತಾಯಿಯು ನೀನೆ ತಂದೆಯು ನೀನೆ ನಮ್ಮೊಡನಾಡಿಯೂ
ನೀನೆ ಬಂಧುವು ನೀನೆ ಭಾಗ್ಯವು ನೀನೆ ವಿದ್ಯೆಯು ಬುದ್ಧಿಯೂ
ನೀನು ಪಾಲಿಸದಿದ್ದರೆಮ್ಮನು ಬೇರೆ ಪಾಲಿಪರಿಲ್ಲಲೈ
ದೀನಪಾಲನೆ ನಿನ್ನಧೀನದೊಳಿರ್ಪನಮ್ಮನು ಪಾಲಿಸೈ || ೭ ||

ಶ್ರೀಮುಕುಂದನೆ ಗಾಳಿಯಲ್ಲಿಯು ನೀರಿನಲ್ಲಿಯು ನೀನಿಹೇ
ಭೂಮಿಯಲ್ಲಿ ಯಮಗ್ನಿಯಲ್ಲಿಯು ಬಾನಿನಲ್ಲಿಯು ನೀನಿಹೆ
ರಾಮನೂ ನರಸಿಂಹನೂ ಪರಮಾತ್ಮ ಕೃಷ್ಣನು ನೀನೆಯೇ
ನೀ ಮಹಾತ್ಮನು ನಮ್ಮ ತಪ್ಪುಗಳೆಲ್ಲ ಮನ್ನಿಸಿ ಪಾಲಿಸೈ || ೮ ||

Add Comment

Leave a Reply