Quantcast

ನೂರು ಮತದ ಹೊಟ್ಟ ತೂರಿದ ‘ಸೈರಟ್”

ನೂರು ಮತದ ಹೊಟ್ಟ ತೂರಿ

kumaraa raaita

ಕುಮಾರ ರೈತ

ಭಾರತೀಯ ಸಮಾಜದಲ್ಲಿ ಜಾತಿ-ಮತ-ಧರ್ಮ-ಅಂತಸ್ತು ಇವೆಲ್ಲ ಗಿರಗಿಟ್ಲೆ. ಒಮ್ಮೆ ಕುಳಿತರೆ ದಾಟುವುದು ಕಷ್ಟ. ಇದರಿಂದ ಪಾರಾಗಲು ಯತ್ನಿಸಿದ ಅಪಾರ ಜೀವಗಳು ಅಸು ನೀಗಿವೆ. ಪಾರಾದವೆಂದು ಅಂದುಕೊಂಡವರು ಇದೇ ಗಿರಗಿಟ್ಲೆ ತೊಟ್ಟಿಲಿನಲ್ಲಿ ಕುಳಿತು ಸುತ್ತುತ್ತಲೇ ಇರುತ್ತಾರೆ. ಇಲ್ಲಿರುವ ಕ್ರೌರ್ಯ, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿನ ಭಿಭಿತ್ಸತೆಯನ್ನು ಮರಾಠಿ ಸಿನೆಮಾ ‘ಸೈರಟ್” ಸಾಕ್ಷಿಪ್ರಜ್ಞೆಯಿಂದ ವಿವರಿಸುತ್ತದೆ.

sairath5ಆ ಗ್ರಾಮದಲ್ಲಿ ಯಥಾಸ್ಥಿತಿ ವಾದ ಮುಂದುವರಿಸಿದರಷ್ಟೆ ಬದುಕು. ಕೆಳಗೆ ರಾಡಿ ಹುದುಗಿಸಿಕೊಂಡು ಮೇಲಷ್ಟೆ ತಿಳಿಯಾಗಿ ಕಾಣುವ ನೀರಿನಂತೆ. ಅಲ್ಲಿಯೂ ಕೆಸರಿನಿಂದ ಮೇಲೆದ್ದ ಕಮಲಗಳಂತೆ ಜೀವನೋತ್ಸವದಿಂದ ಪುಟಿಯುವ ಒಂದಷ್ಟು ಯುವಜೀವಗಳು. ಈ ಜೀವಜೀವಗಳ ನಡುವೆ ಪ್ರೀತಿ ಎಂಬ ಮೊಳಕೆ ಯಾವಾಗ ಹುಟ್ಟಿ ಯಾವಾಗ ಮರವಾಗಿ ಬೆಳೆಯುತ್ತದೆಯೋ ಹೇಳಲು ಕಷ್ಟ.

ಫ್ಯೂಡಲಿಸ್ಟ್ ಮನೋಭಾವದ, ಪಾಠ ಹೇಳುವ ಮೇಷ್ಟ್ರನ್ನು ಮಗ ಹೊಡೆದು ಬಂದರೂ ಬುದ್ದಿ ಕಲಿಸದ ಅಪ್ಪ. ಇವನಿಗೆ ಹೂವಿನಂಥ ಮಗಳು ಆರ್ಚನಾ ಪಾಟೀಲ್. ನೋಡಲಷ್ಟೆ ಈಕೆ ಹೂ. ಆದರೆ ಸ್ವಭಾವತಃ ಕೆಚ್ಚೆದೆಯ ಹುಡುಗಿ. ಇದು ಕೆಳಜಾತಿ ಎಂದು ಊರವರು ಕರೆಯುವ ಕುಟುಂಬದ ತುಂಬು ಜೀವನೋತ್ಸವದ ಪ್ರಶಾಂತ್ ಕಾಳೆ.

ಗ್ರಾಮದ ಅಲಿಖಿತ ನಿಯಮಗಳನ್ನು ಮುರಿಯುವ ಇವರು ತಮ್ಮ ಬದುಕು ಕಟ್ಟಿಕೊಳ್ಳಲು ಅಪಾರವಾಗಿ ಹೋರಾಡುತ್ತಾರೆ. ಇಂಥ ಪ್ರೇಮಿಗಳು ಎಷ್ಟೆಲ್ಲ ಕಷ್ಟ ಪಡಬೇಕಾಗುತ್ತದೆ ಎಂದು ನಿರ್ದೇಶಕ ನಾಗರಾಜ ಮಂಜುಳೆ ಪರಿಪರಿಯಾಗಿ ಹೇಳುತ್ತಾರೆ. ನಾನು ಇವೆಲ್ಲ ವಿವರಗಳನ್ನು ಹೇಳಲು ಹೋಗುವುದಿಲ್ಲ. ಓರ್ವ ನಿರ್ದೇಶಕ ಸಮಕಾಲೀನ ಸಮಾಜದ ದುರಂತವನ್ನು ಸಿನೆಮಾದ ಎಲ್ಲ ವಿಭಾಗಗಳನ್ನು ಸಾಧ್ಯವಿರುವಷ್ಟು ದುಡಿಸಿಕೊಳ್ಳುವ ಮೂಲಕ ಎಷ್ಟೊಂದು ಶಕ್ತಿಯುತವಾಗಿ ಕಟ್ಟಿಕೊಂಡುತ್ತಾನೆ ಎಂದು ಹೇಳುವುದರಷ್ಟಕ್ಕೆ ನನ್ನ ಗಮನ.

sairath4 directorಊಳಿಗಮಾನ್ಯ ಶಾಹಿತನ ಹೊದ್ದ ಗ್ರಾಮವೊಂದರಲ್ಲಿ ನಡೆಯುವ ಎಲ್ಲ ಬೆಳವಳಿಗೆಗಳನ್ನು ಯಾವ ಬುದ್ದಿ ಮಾತು, ಉಪದೇಶ, ಭಾಷಣಗಳಿಲ್ಲದೆ ಕಟ್ಟಿಕೊಟ್ಟ ಕಾರಣಕ್ಕೂ ‘ಸೈರಟ್’ ಗಮನ ಸೆಳೆಯುತ್ತದೆ. ಇಂಥಲ್ಲಿ ತಮ್ಮ ಪಾಡಿಗೆ ತಮ್ಮ ಕರ್ತವ್ಯ ಮುಂದುವರೆಸಲು ಶಿಕ್ಷಕರು ತಂತಿ ಮೇಲಿನ ನಡಿಗೆ ಕಸರತ್ತು ಮಾಡುವುದನ್ನು ಹೇಳಲಾಗಿದೆ.

ಎಷ್ಟೋ ಸಂದರ್ಭಗಳಲ್ಲಿ ಪೊಲೀಸ್ ಠಾಣೆಗಳು ಕೂಡ ಫ್ಯೂಡಲಿಸ್ಟ್ ಸೊಸೈಟಿ ಎದುರು ಅಶಕ್ತವಾಗುವುದನ್ನು ಹೇಳಲಾಗಿದೆ. ಅಮಾಯಕ ಹುಡುಗರನ್ನು ರಕ್ಷಿಸದೇ ಅವರನ್ನು ಜಮೀನ್ದಾರಿ ಗೂಂಡಾಗಳೊಡನೆ ಕಳಿಸುವ ಅಧಿಕಾರಿ ವರ್ತನೆ ಇಲ್ಲಿನ ವ್ಯವಸ್ಥೆ ಅದೆಷ್ಟರ ಮಟ್ಟಿಗೆ ಅನಿರ್ಲಿಪ್ತವಾಗಿದೆ ಎಂಬುದನ್ನು ಹೇಳುತ್ತದೆ.
ಪೂರ್ವ ಯೋಜನೆ, ಸೂಕ್ತ ನೆರವುಗಳಿಲ್ಲದೆ ಮಹಾನಗರಗಳಿಗೆ ಧಾವಿಸುವ ಪ್ರೇಮಿಗಳು ಅನುಭವಿಸುವ ಹಿಂಸೆಯ ಬಗ್ಗೆಯೂ ಹೇಳುವ ನಿರ್ದೇಶಕ ಇಲ್ಲಿಯೂ ಮಾನವೀಯತೆ ಗಂಗೆ ಅಶುದ್ದಗೊಳ್ಳದೆ ಹರಿಯುತ್ತಿದ್ದಾಳೆ ಎಂದು ಉದಾಹರಣೆಗಳ ಮೂಲಕ ಹೇಳಿರುವುದೂ ಗಮನ ಸೆಳೆಯುತ್ತದೆ.

ಅಂತೂ ಬದುಕು ಕಟ್ಟಿಕೊಂಡೆವು ಎಂದುಕೊಳ್ಳುವ ಜೀವಗಳು ಸಮಾಜ ಒಡ್ಡಿದ ಸವಾಲಿನಲ್ಲಿ ಗೆದ್ದವೆ ಎಂಬುದೇ ಪ್ರಶ್ನೆ. ಇಲ್ಲಿ ಇವರ ಪುಟ್ಟ ಮಗುವಿನ ಕಣ್ಣುಗಳ ಮೂಲಕವೂ ನಿರ್ದೇಶಕ ಘಟನಾವಳಿ ಹೇಳುತ್ತಾನೆ. ಹೊರಗೆ ಅಂಬೆಗಾಲಿಡುತ್ತಾ ಹೋಗುವ ಮಗುವಿನ ನೆರಳು ದೊಡ್ಡದಾಗಿ ಬೆಳೆಯುತ್ತಾ ಹೋಗುವುದನ್ನು ಚಿತ್ರಿಸುವುದರ ಮೂಲಕ ಈ ಮಗುವಿನ ಮತ್ತು ಸಮಾಜದ ಭವಿಷ್ಯವನ್ನೂ ಹೇಳುತ್ತದೆ.

ಚಿತ್ರಕಥೆಯ ಪ್ರತಿ ವಿವರಕ್ಕೂ ಗಮನ ನೀಡಲಾಗಿದೆ. ಇದನ್ನು ಸಶಕ್ತವಾಗಿಸುವಲ್ಲಿ ನಿರ್ದೇಶಕ ನಾಗರಾಜ ಮಂಜುಳೆ, ಅವಿನಾಶ್ ಘಡ್ಗೆ ಶ್ರಮ ಪಟ್ಟಿದ್ದಾರೆ. ಚಿತ್ರದ ಪ್ರತಿಯೊಂದು ವಿಭಾಗಗಳ ನಡುವೆಯೂ ಸಮನ್ವಯ ಸಾಧಿಸಿದ್ದರೂ ಸಂಕಲನ ಕಾರ್ಯಕ್ಕೆ (ಕುಟುಬ್ ಇನಾಂದರ್) ಇನ್ನೊಂದಷ್ಟು ಚುರುಕು ನೀಡಲು ಗಮನ ನೀಡಬೇಕಿತ್ತು ಎನಿಸುತ್ತದೆ.

sairath2ಕ್ಯಾಮೆರಾ ಬಹು ರಮ್ಯವಾಗಿ ದೃಶ್ಯಗಳನ್ನು ಕಟ್ಟಿಕೊಡುವ ಮೂಲಕ ಚಿತ್ರಕಥೆಯನ್ನು ಮಸುಕು ಮಾಡುವ ಸಾಧ್ಯತೆ ಇರುತ್ತದೆ. ಆದರೆ ಇಂಥ ಅಪಾಯವನ್ನು ಸುಧಾಕರ ರೆಡ್ಡಿ ಮೀರಿದ್ದಾರೆ. ಹಿನ್ನೆಲೆ ಸಂಗೀತ, ಹಾಡುಗಳು ಸಿನೆಮಾ ಲಯ ಹದಗೆಡಿಸಿಲ್ಲ (ಸಂಗೀತ: ಅಜಯ್ ಅತುಲ್) ಉಡುಪು, ಲೋಕೇಷನ್ ಆಯ್ಕೆಯಲ್ಲಿಯೂ ಚಿತ್ರತಂಡ ಎಚ್ಚರ ವಹಿಸಿದೆ.

ನಿರ್ದೇಶಕ ಬಹುಮುಖ್ಯವಾಗಿ ಗೆದ್ದಿರುವುದು ಕಲಾವಿದರ ಆಯ್ಕೆಯಲ್ಲಿ. ಈಗಾಗಲೇ ಪ್ರೇಕ್ಷಕರು ನೋಡಿರುವ ಮುಖಗಳನ್ನು ಬಿಟ್ಟು ಹೊಸಬರನ್ನು ಆಯ್ಕೆ ಮಾಡಿರುವುದು ತೀರಾ ಸಣ್ಣ ಸಂಗತಿಯಲ್ಲ. ಇದಕ್ಕೆ ಕಲಾವಿದರ ಮೇಲಿನ ಭರವಸೆ ಇದಕ್ಕೂ ಮೊದಲಾಗಿ, ಮಿಗಿಲಾಗಿ ಚಿತ್ರಕಥೆ ಮೇಲಿನ ಭರವಸೆ ಮುಖ್ಯವಾಗುತ್ತದೆ. ಇಂಥ ವಿಶ್ವಾಸವನ್ನು ಹೊಂದಿರುವ ಕಾರಣದಿಂದಲೇ ನಿರ್ದೇಶಕ ನಾಗರಾಜ ಮಂಜುಳೆ ಅವರು ಇದುವರೆಗೂ ಮರಾಠಿ ಚಲನಚಿತ್ರ ರಂಗ ನೋಡಿರದ ಭಾರಿ ಭಾರಿ ಹಿಟ್ ಸಿನೆಮಾ ನೀಡಿದ್ದಾರೆ.

ನಾಯಕಿ ರಿಂಕು ರಾಜಗುರು ಕಣ್ಣುಗಳ ಮೂಲಕವೇ ಭಾವಭಿನಯ ಹೊಮ್ಮಿಸುತ್ತಾರೆ. ಈಕೆ ಅಭಿನಯ ನೋಡಿದರೆ ಮರಾಠಿ ಸಿನೆಮಾ ರಂಗದ ಭರವಸೆ ನಟಿ ಎನ್ನಬಹುದು. ನಾಯಕ ಪಾತ್ರಧಾರಿ ಆಕಾಶ್ ತೋಷರ್ ಮತ್ತು ಈತನ ಗೆಳೆಯರ ಪಾತ್ರಧಾರಿಗಳ ಅಭಿನಯದ ತಾಜಾತನ ಮೆಚ್ಚುಗೆ ಮೂಡಿಸುತ್ತದೆ.

ಆದರೆ ನಿರ್ದೇಶಕ ಕಥೆ ಹೇಳಲು ಆರಂಭಿಸಿರುವುದು ಮತ್ತು ಕಟ್ಟಿಕೊಡುತ್ತಾ ಹೋಗುವ ರೀತಿ ಇವರ ಮೇಲೆ ತಮಿಳು ಮತ್ತು ತೆಲುಗು ಸಿನೆಮಾಗಳ ವ್ಯಾಕರಣ ಮಾಡಿರುವ ಪ್ರಭಾವವನ್ನೂ ನೆನಪಿಸುತ್ತದೆ. ಇದೇನೇ ಇರಲಿ. ಇಲ್ಲಿನ ಸಮಾಜದ ಕ್ರೌರ್ಯ ಮತ್ತು ಪ್ರೇಮಿಗಳ ತಲ್ಲಣಗಳನ್ನು ಸಶಕ್ತವಾಗಿ ಕಟ್ಟಿಕೊಟ್ಟಿರುವ ಕಾರಣಕ್ಕೆ ಈ ಸಿನೆಮಾ ಮುಖ್ಯವಾಗುತ್ತದೆ.

2 Comments

  1. MARUTHI
    July 29, 2016
  2. ರಾಜಕುಮಾರ
    June 1, 2016

Add Comment

Leave a Reply