Quantcast

ಮಲ್ಲಾಡದ ಹುಡುಗಿ ಬಂದಳೇ ಕೊನೆಗೆ?

ಗೋಪಾಲ ವಾಜಪೇಯಿ

ಮಾರ್ಚ್ ತಿಂಗಳಲ್ಲೊಂದು ಮುಂಜಾವ. ನನ್ನ ಮಟ್ಟಿಗಿನ್ನೂ ಸೂರ್ಯೋದಯವಾಗಿರಲಿಲ್ಲ.
ದಿಂಬಿನಡಿಯ ಮೊಬೈಲು ರಿಂಗಣಿಸಿತು. ಇಷ್ಟು ಬೆಳಿಗ್ಗೆಯೇ ಯಾರಪ್ಪ ಎಂದು ನೋಡಿದರೆ,
ಕರೆ ಮಾಡಿದವರು ಹಿರಿಯ ಕವಿ ಸಹೃದಯಿ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರು !

”ನಮಸ್ಕಾರ ಸಾರ್,” ಅಂತ ನಾನು.
”ರಾತ್ರೆ ಒಂದು ಗಂಟೆಗೆಲ್ಲ ಬರೆದುಬಿಟ್ಟೆ ವಾಜಪೇಯಿ. ಮೇಲ್ ಕಳಿಸಿದ್ದೀನಿ ನೋಡಿ,” ಅಂತ ಅವರು.
”ತುಂಬಾ ಥ್ಯಾಂಕ್ಸ್ ಸಾರ್… ಈಗಲೇ ನೋಡ್ತೀನಿ,” ಅಂತ ಪೂರ್ಣ ಎಚ್ಚರಗೊಂಡೆ.
”ಹಾಂ, ಕೇಳಿ ಇಲ್ಲಿ… ನಿಮ್ಮ ಪುಸ್ತಕ ಓದಿ ಏನು ಬರೆಯಬೇಕೆಂದು ಬಗೆಹರಿಯಲಿಲ್ಲ. ಅದಕ್ಕೇ, ಒಂದು ಪದ್ಯ ಬರೆದುಬಿಟ್ಟೆ ನಿಮ್ಮ ಬಗ್ಗೆ… ಒಂದು ಸಾನೆಟ್ಟು…” ಎಂದವರು ಹೇಳುತ್ತಿದ್ದರೆ ಕುಣಿಯುವಷ್ಟು ಖುಷಿ !

ನನ್ನ ಬಗ್ಗೆ ಒಬ್ಬ ಹಿರಿಯ ಕವಿ ಒಂದು ಸಾನೆಟ್ ಬರೆಯುತ್ತಾರೆಂದರೆ ನಿಜಕ್ಕೂ ಅದೊಂದು ದೊಡ್ಡ ಸರ್ಟಿಫಿಕೆಟ್, ಉನ್ನತ ಪ್ರಶಸ್ತಿ ನನಗೆ.
ಹೌದು, ಇತ್ತೀಚಿಗೆ ಬಿಡುಗಡೆಯಾದ ನನ್ನ ‘ಸಂತ್ಯಾಗ ನಿಂತಾನ ಕಬೀರ’ ನಾಟಕ ಕೃತಿಯ ಎರಡನೆಯ ಆವೃತ್ತಿಗೆ ”ನಿಮ್ಮ ಅಭಿಪ್ರಾಯ ಬರೆದುಕೊಡಿ,” ಅಂತ ವಿನಂತಿಸಿಕೊಂಡು, ಎಚ್ಚೆಸ್ವಿ ಅವರಿಗೆ ಅದರ ಮೊದಲ ಆವೃತ್ತಿಯ ಒಂದು ಪ್ರತಿ ನೀಡಿದ್ದೆ. ಒಪ್ಪಿಕೊಂಡ ಅವರು,
”ನನಗೆ ಮರೆವು. ಆಗಾಗ ಸಂಜಯನ ಹತ್ತಿರ ನೆನಪಿಸುತ್ತಲಿರಿ,” ಎಂದಿದ್ದರು. ಹಾಗೇ ಎರಡು ತಿಂಗಳು ಕಳೆದಿತ್ತು.

ಆದರೆ ‘ಅಭಿಪ್ರಾಯ’ದ ಬದಲು ಅವರು ಬರೆದದ್ದು ಸಾನೆಟ್ಟು.
ನಿಜಕ್ಕೂ ಅದು ‘ಸಂತ್ಯಾಗ ನಿಂತಾನ ಕಬೀರ’ ನಾಟಕ ಕೃತಿಯ ಮೌಲ್ಯ ಹೆಚ್ಚಿಸಿದೆ.

ಅನಂತ್ ನಾಗ್ ಬರಹ ಒಂದು ತೂಕವಾದರೆ ಇದು ಇನ್ನೊಂದು ತೂಕ !
ಓದಿ ನೋಡಿ.

hsv

ಗೋಪಾಲ ವಾಜಪೇಯಿ

ಗೆಳೆಯ ವಾಜಪೇಯಿ, ನಿಮ್ಮ ಶಾಯಿಯಲ್ಲೇ ಉಂಟು ಹಾಡ
ಸಹಜ ತುರಾಯಿ. ಹಸೀ ಗ್ವಾಡಿಗೆ ಹಳ್ಳು ನೆಟ್ಟಂಗೇನೆ ಮತ್ತೆ
ಗೆಜ್ಜೆಗಾಲ ಪದಪಂಕ್ತಿ. ನಿಮ್ಮ ನಾಟಕ ಹಾಡುಪಾಡು ಯಾ-
ವತ್ತೂ ರಸಿಕರಿಗಚ್ಚುಮೆಚ್ಚು. ಚಿಂತಿ ಹರೀಬೇಕಂದರೆ ಸಂತರೂ
ಬರಲಿಕ್ಕೇಬೇಕು ಸಂತೆಗೆ. ನಿಮ್ಮ ದೊಡ್ಡಪ್ಪನ್ನ ನಾನು ಮರೆ
ತಿಲ್ಲ. ನಂದಭೂಪನ ಪಾರ್ಟ್ ಹಾಕಿದ ಲಿಯರ್ ದೊರೆಯನ್ನೂ.
ನೀವು ಮಳ್ಳು ಹಿಡಿದಂಗೆ ಕರೆದೇ ಕರೆದ ಮಲ್ಲಾಡದ ಹುಡುಗಿ
ಬಂದಳೇ ಕೊನೆಗೆ? ನವಣಿಗೆ ಬವಣಿ ಹರಿಯುವ ತಾಖತ್ತುಂಟು
ಖರೆ. ನಾಗಮಂಡಲದ ಚಪ್ಪರದ ಮ್ಯಾಲೆ ಒಪ್ಪವಾಗಿ ಕೂತ
ಹಕ್ಕಿಯಷ್ಟೂ ಬಂದವಷ್ಟೇ ನಿಮ್ಮೊಳಗರುಳ ತವರ ಒಪ್ಪಾರಕ್ಕೆ?
ಏಕತಾರಿ ಹಿಡಿದು ಎದೆಯೊಳಗನ್ನೇ ಬಗಿದು ದುಡಿಮಿಡಿವ
ನಿಮ್ಮ ಕಬೀರಗೆ ತೆರೆ ಯಾವತ್ತೂ ಆಗದು ಮರೆ. ಮರೆತಿದ್ದೆ,
ನಿಮ್ಮ ಹಾಡಿಗೆ ಸ್ವಾಗತ ಹೇಳುತ್ತಾ ಸುವ್ವೀ ಎಂದು ಸೋಬಾನ
ಗೊಣಗಿವೆ ನನ್ನ ಕವನ, ಕೈಕೊಂಡು ಏನೋ ಹೊಸ ತೀರ್ಮಾನ.

– ಎಚ್. ಎಸ್. ವೆಂಕಟೇಶಮೂರ್ತಿ 

santyaga nintana kabeera

‘ಸಂತ್ಯಾಗ ನಿಂತಾನ ಕಬೀರ’ ನಾಟಕ

ಬೆಂಗಳೂರಿನ ಅಂಕಿತ, ಸಪ್ನಾ, ಮತ್ತು ನವ ಕರ್ನಾಟಕದ ಪುಸ್ತಕ ಮಳಿಗೆಗಳಲ್ಲಿ ಲಭ್ಯ.

ಪ್ರತಿಗಳನ್ನು ನೇರವಾಗಿ ಮನೆಗೆ ತರಿಸಿಕೊಳ್ಳಬಯಸುವವರು ಕೆಳಗಿನ ವಿಳಾಸಕ್ಕೆ ಬರೆದುಕೊಳ್ಳಿ :
ಯಾಜಿ ಪ್ರಕಾಶನ,
ಭೂಮಿ, ನಹರ್ ಕಾಲೋನಿ,
ಎಂ.ಪಿ.ಪ್ರಕಾಶನಗರ,
ಹೊಸಪೇಟೆ 583201
(ಮೊಬೈಲ್ : 9449922800)

One Response

  1. Gopaala Wajapeyi
    June 5, 2016

Add Comment

Leave a Reply