Quantcast

ಮತ್ತೊಂದು ಸದಭಿರುಚಿಯ ಚಿತ್ರ ಬರ್ತಿದೆ..

‘ರಾಮಾ.. ರಾಮಾ.. ರೇ..’

15c5e3ec-2274-48c1-86ff-6339870ca9f3

ನಾಗರಾಜ ಪಾಟೀಲ

ಇಂದಿನ ಕಿರುಚಿತ್ರಗಳೆ ನಾಳೆಯ ಸಿನೆಮಾಗಳು ಎಂಬ ಮಾತು ಗಾಂಧಿನಗರದ ಮಂದಿ ಬಲವಾಗಿ ನಂಬಿದಂತಿದೆ. ಇತ್ತಿಚಿಗೆ ಕನ್ನಡದಲ್ಲಿ ಕಿರುಚಿತ್ರಗಳು ಹೆಚ್ಚಾಗಿಯೇ ನಿರ್ಮಾಣವಾಗುತ್ತಿವೆ. ಸುಮಾರು ಎರಡು ವರ್ಷಗಳ ಹಿಂದೆ ‘ಜಯನಗರ 4ನೇ ಬ್ಲಾಕ್’ ಎಂಬ ಕಿರುಚಿತ್ರ ಯು ಟ್ಯೂಬ್ ನಲ್ಲಿ ಲೋಡ್ ಆಗಿ ಕೆಲವೇ ದಿನಗಳಲ್ಲಿ 1 ಲಕ್ಷಕ್ಕು ಹೆಚ್ಚು ನೋಡುಗರನ್ನು ತಲುಪಿತ್ತು. ಈಗಲೂ ಈ ಕಿರುಚಿತ್ರ 3 ಲಕ್ಷಕ್ಕೂ ಹೆಚ್ಚು ಹಿಟ್ ಪಡೆದುಕೊಳ್ಳುತ್ತಾ ಮುನ್ನುಗ್ಗುತ್ತಿದೆ.

ಇತ್ತೀಚಿನ ನಗರೀಕರಣದ ಜೀವನದ ಜಂಜಾಟಗಳಲ್ಲಿ ಮುಳುಗಿರುವ ಜನರ ಮನೋಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಮಾನವೀಯ ಮೌಲ್ಯಗಳನ್ನು ಬಿತ್ತುವ, ಆಂತರಿಕ ಸಂಬಂಧಗಳ ನಡುವಿನ ತೀವ್ರತೆಯನ್ನು ಎತ್ತಿಹಿಡಿಯುವಂತಹ ಕಥಾವಸ್ತು ‘ಜಯನಗರ 4ನೇ ಬ್ಲಾಕ್’ ಕಿರುಚಿತ್ರ ಒಳಗೊಂಡಿತ್ತು. ಹಾಗಾಗಿಯೇ ಜನರಿಗೆ ಹೆಚ್ಚು ಹತ್ತಿರವಾಗಿದೆ ಎಂಬುವುದು ಒಂದು ಮೂಲಗಳ ಅಭಿಪ್ರಾಯ. ಆಗಲೇ ಚಿತ್ರ ರಸಿಕರು ಧರ್ಮಣ್ಣ ಕಡೂರ, ಸತ್ಯಪ್ರಕಾಶ ಮತ್ತು ನಟರಾಜ್ ಈ ಮೂವರ ಮೇಲೆ ಭರವಸೆ ಇಟ್ಟಾಗಿತ್ತು. ಒಂದು ಚಿಕ್ಕ ಯಶಸ್ಸು, ಮತ್ತೊಂದು ದೊಡ್ಡ ಸಾಧನೆಗೆ ಹಾದಿಯಾಗುತ್ತದೆ ಎಂಬ ಮಾತಿದೆ. ಇಲ್ಲಿ ಆಗಿದ್ದು ಅದೇ. ಜಯನಗರದಲ್ಲಿ ಸಿಕ್ಕ ಗೆಲವು ಗಾಂಧಿನಗರದವರೆಗೆ ತಂದು ನಿಲ್ಲಿಸಿದೆ.

 

d0714fcc-ce4d-4d5b-9a47-9a9864062ad4ಈ ತಂಡದಲ್ಲಿ ಒಬ್ಬರಾದ ಧರ್ಮಣ್ಣ ಮೂಲತ ಚಿಕ್ಕಮಂಗಳೂರು ಜಿಲ್ಲೆಯ ಕಡೂರಿನವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಇವರು ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಚಲನಚಿತ್ರದ ಆಕರ್ಷಣೆಗೆ ಒಳಗಾಗಿ ಸಿನಿಮಾ ಜಗತ್ತನ್ನು ಅರಸಿಕೊಂಡು ಬಣ್ಣ ಬಣ್ಣದ ಕನಸುಗಳೊಂದಿಗೆ ಬೆಂಗಳೂರಿಗೆ ಬಂದೇ ಬಿಟ್ಟರು.

ದೂರದ ಬೆಟ್ಟ ನುಣ್ಣಗೆ ಅನ್ನೊ ಹಾಗೆ, ಈ ಕ್ಷೇತ್ರದಲ್ಲಿ ಆಸೆಗಳಿದ್ದರೆ ಮಾತ್ರಕ್ಕೆ ಸಾಧನೆ ಆಗೊದಿಲ್ಲ ಅಂತ ಕೆಲವೇ ದಿನಗಳಲ್ಲಿ ಧರ್ಮಣ್ಣನಿಗೆ ಗೊತ್ತಾಗಿತ್ತು. ಗುರಿ ಮತ್ತು ಗುರು ಎರಡೂ ಮುಖ್ಯ. ಗುರಿ ಏನೋ ಇದೆ, ಆದರೆ ಗುರು..! ಆವಾಗಲೇ ಕೈ ಹಿಡಿದಿದ್ದು ಯಶವಂತ ಸರದೇಶಪಾಂಡೆಯವರು. ಆಲ್ ದಿ ಬೆಸ್ಟ್..1 ರಾಶಿಚಕ್ರ, ಸಹಿ ರೀ ಸಹಿ ಮುಂತಾದ ಜನಪ್ರೀಯ ನಾಟಕಗಳ ಮೂಲಕ ಜನಪ್ರೀಯವಾಗಿದ್ದ ಯಶವಂತ ಸರದೇಶಪಾಂಡೆಯವರ ಗುರು ಸಂಸ್ಥೆಯ ತಂಡದಲ್ಲಿ ಸದಸ್ಯರಾಗಿ ಕರ್ನಾಟಕಾದ್ಯಂತ ಸಂಚರಿಸಿ ನಾಟಕ ಪ್ರದರ್ಶನಗೊಳಿಸಿದ್ದಲ್ಲದೇ, ಹೊರ ದೇಶದಲ್ಲೂ ಕೂಡ ಧರ್ಮಣ್ಣ ತಮ್ಮ ಅಭಿನಯ ಕೌಶಲ್ಯವನ್ನು ತೋರಿಸಿದರು.

ಅಭಿನಯದಿಂದ ಹಿಡಿದು ರಂಗಭೂಮಿಯ ಎಲ್ಲ ವಿಭಾಗದಲ್ಲೂ ಕೆಲಸ ಮಾಡಿ ಸೈ ಎನಿಸಿಕೊಂಡರು. ರಂಗಭೂಮಿಯ ಸಹವಾಸದಿಂದ ಸಿನೆಮಾ ಹುಚ್ಚು ಇನ್ನೂ ಹೆಚ್ಚಾಗಿತ್ತು. ಆಗೊಮ್ಮೆ ಈಗೊಮ್ಮೆ ಸಿನೆಮಾದಲ್ಲೂ ಕೂಡಾ ಚಿಕ್ಕ ಪುಟ್ಟ ಪಾತ್ರಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದರು.

ಅದೇ ಸಮಯಕ್ಕೆ ಬಾಲ್ಯ ಸ್ನೇಹಿತರಾದ ಸತ್ಯಪ್ರಕಾಶ್ ಮತ್ತು ನಟರಾಜ ಜತೆ ಸೇರಿ ಅದೇ ‘ಜಯನಗರ 4ನೇ ಬ್ಲಾಕ್’ ಕಿರುಚಿತ್ರದ ಪ್ರಯತ್ನ, ಮುಂದೆ ಸಿನೆಮಾ ಮಾಡಬಹುದಾದ ಪ್ರೇರಣೆ ನೀಡಿದೆ. ಹೌದು, ಇದೇ ಕ್ರೀಯಾಶೀಲರ ತಂಡ ಸಿನೆಮಾ ತಯಾರಿಸಿದೆ. ಸ್ವಂತ ಬ್ಯಾನರ್ ನಲ್ಲಿ ‘ರಾಮಾ ರಾಮಾ ರೇ..’ ಎನ್ನುವ ಚೊಚ್ಚಲ ಚಿತ್ರವನ್ನು ನಿರ್ದೇಶನ ಮಾಡಿ ಮುಗಿಸಿದ್ದಾರೆ ಸತ್ಯಪ್ರಕಾಶ್. ಸತ್ಯಪ್ರಕಾಶ್ ಹೇಳುವಂತೆ ಸಿನಿಮಾ ನನ್ನ ಚಿಕ್ಕಂದಿನ ಕನಸು. ಇದು ಕೇವಲ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಇದೊಂದು ತಂಡದ ಕೆಲಸ. ಎಲ್ಲರೂ ಸೇರಿ ಮಾಡಬೇಕಾದ ಕೆಲಸ. ಎಲ್ಲರನ್ನು ಪ್ರತಿನಿಧಿಸುವ ವ್ಯಕ್ತಿಯಾಗಿ ನಾನಿದ್ದೇನೆ ಹೊರತು ನನ್ನಿಂದಲೇ ಎಲ್ಲವೂ ಅಲ್ಲ ಎಂದು ಸರಳವಾಗಿ ನುಡಿಯುತ್ತಾರೆ.
ಚಿತ್ರದ ಚಿತ್ರೀಕರಣ ಹಾಗೂ ಕಥೆಯ ಬಗ್ಗೆ ಹೇಳುತ್ತಾ.. ಈ ಚಿತ್ರ ಮುಖ್ಯವಾಗಿ ನಾಲ್ಕು ಪಾತ್ರಗಳ ನಡುವೆ ನಡೆಯುತ್ತದೆ. ರಾಮಾ ರಾಮಾ ರೇ.. ಅಪ್ಪಟ ಪಯಣದ ಚಿತ್ರ. ಶೇಕಡ 80 ರಷ್ಟು ಭಾಗ ಪ್ರಯಾಣದಲ್ಲೇ ನಡೆಯುತ್ತದೆ. ಚಿತ್ರ ರಸ್ತೆಯ ಮೇಲೆ ಸಾಗುತ್ತದೆ. ಹೀಗಾಗಿ ಈ ಚಿತ್ರದಲ್ಲಿ ಒಂದು ಜೀಪು ಬಳಸಲಾಗಿದೆ. ಅದು ಕೂಡು ಇಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಹುಟ್ಟಿನಿಂದ ಸಾವಿನವರೆಗಿನ ಬದುಕಿನಲ್ಲಿನ ಪ್ರೀತಿ, ದ್ವೇಷ, ಕೆಟ್ಟತನ, ಒಳ್ಳೆಯತನಗಳನ್ನು ಪಾತ್ರಗಳ ಮೂಲಕ ಹಿಡಿಡುವ ಪ್ರಯತ್ನ ಚಿತ್ರದಲ್ಲಿದೆ. ಸಿನಿಮಾದ ವಸ್ತು ಗಂಭೀರವಾದರೂ ಅದನ್ನು ಪ್ರಸ್ತುತ ಪಡಿಸುವಿಕೆ ಲವಲವಿಕೆಯಿಂದ ಕೂಡಿದೆ ಎನ್ನುತ್ತಾರೆ.

ಚಿತ್ರೀಕರಣ ಮಾಡಿದ ಜಾಗವಂತೋ ವಿಜಯಪುರದಿಂದ ಸುಮಾರು 40ಕಿಮೀ ದೂರದ ಮಹಾರಾಷ್ಟ್ರದ ಗಡಿ ಸಮೀಪದ ಭಾಗ. ತುಂಬಾ ಪ್ರಶಾಂತವಾದ ಜಾಗ. ಜನ ಸಂಚಾರವಿಲ್ಲದ ಪ್ರದೇಶ. ನಮ್ಮ ಕಥೆಗೆ ಮನೆಗಳಿಲ್ಲದ, ಲೈಟ್ ಕಂಬಗಳಿಲ್ಲದ, ಮೊಬೈಲ್ ಟವರ್, ಹಸಿರು ಮರಗಳು ಇಲ್ಲದ ವಿಶಾಲ ರಸ್ತೆಯಿರುವ ಲೊಕೇಶನ್ ಬೇಕಿತ್ತು. ನಮ್ಮ ಕಥೆಗೆ ಹೇಳಿ ಮಾಡಿಸಿದಂತ ಜಾಗ ವಿಜಯಪುರದಲ್ಲಿ ಸಿಕ್ಕಿತು. ಬೆಂಗಳೂರಿನಿಂದ ದೂರವಾದರೂ ಅಲ್ಲೇ ಚಿತ್ರಿಕರಣ ಮಾಡುವುದಾಗಿ ನಿರ್ಧರಿಸಿ ಶೂಟಿಂಗ್ ಪ್ರಾರಂಭಿಸಿದೆವು. ಮತ್ತು 2ನೇ ಹಂತದ ಚಿತ್ರೀಕರಣಕ್ಕೆ ಮತ್ತೆ 20 ದಿನ ಇಡೀ ಕರ್ನಾಟಕ ತಿರುಗಿದೆವು. ಚಿತ್ರವೂ ಪಯಣದ್ದು, ಅದರೊಟ್ಟಿಗೆ ಚಿತ್ರತಂಡವೂ ಚೌಕಟ್ಟಿಲ್ಲದೆ ಪಯಣಿಸಿ ಚಿತ್ರೀಕರಣ ಮುಗಿಸಿಕೊಂಡು ಬಂದೆವು ಎನ್ನುತ್ತಾರೆ ಧರ್ಮಣ್ಣ.

5e258523-93f4-4969-80e6-551bc0c62b45
ಕಲಾವಿದರ ವಿಭಾಗಕ್ಕೆ ಬಂದರೆ ಜಯರಾಂ, ನಟರಾಜ್ ಚಿತ್ರದ ಪ್ರಮುಖ ಪಾತ್ರಧಾರಿಗಳು, ಜಯನಗರ ಫೋರ್ಥ್ ಬ್ಲಾಕ್ ಕಿರುಚಿತ್ರದಲ್ಲಿ ಪ್ರೇಮಿಗಳಾಗಿ ನಟಿಸಿದ್ದ ಧರ್ಮಣ್ಣ ಕಡೂರು ಮತ್ತು ಬಿಂಬಶ್ರೀ ನೀನಾಸಂ ಇಲ್ಲಿಯೂ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದಾರೆ. ರಾಧಾ ರಾಮಚಂದ್ರ, ಎಂ.ಕೆ ಮಠ, ಶ್ರೀಧರ್, ಪ್ರಿಯಾ ಷಟಮರ್ಶನ್, ಭಾಸ್ಕರ್ ದೇವ್ ಚಿತ್ರದಲ್ಲಿದ್ದಾರೆ. ಎಲ್ಲರೂ ರಂಗಭೂಮಿ ಹಿನ್ನೆಲೆ ಉಳ್ಳವರು ಎಂಬುವುದು ವಿಶೇಷ. ಅಲ್ಲದೇ ವಿಜಯಪುರ ಹಾಗು ಸುತ್ತಮುತ್ತಲ ಕಲಾವಿದರನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

ಈ ಚಿತ್ರದಲ್ಲಿ ನಟರು, ತಾಂತ್ರಿಕ ವರ್ಗದವರು, ಸ್ನೇಹಿತರು, ಬಂದು-ಬಳಗದವರು ಹೀಗೆ ಹಲವಾರು ಜನರು ನಿರ್ಮಾಪಕರಿದ್ದಾರೆ. ಇದು ಜನರಿಂದ ಜನರಿಗಾಗಿಯೇ ಮಾಡಿರುವ ಚಿತ್ರ. ಚಿತ್ರದ ಚಿತೀಕರಣದ ಕೆಲಸ ಮುಗಿದು ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಇನ್ನೆರಡು ತಿಂಗಳಲ್ಲಿ ಬಿಡುಗಡೆಗೆ ಸಿದ್ಧಗೊಳ್ಳಲಿದೆಯಂತೆ.

One Response

Add Comment

Leave a Reply