Quantcast

ನಾನು ಕಾಯ್ಕಿಣಿಗೇ ಕೈ ಕೊಟ್ಟೆ..

ಸರಿಯಾಗಿ ೨೧ ವರ್ಷಗಳ ಹಿಂದಿನ ಮಾತು.

ಕಡಲ ಅಬ್ಬರವನ್ನು ಅನೇಕ ರೀತಿಯಲ್ಲಿ ಕೇಳಿಸುತ್ತಿದ್ದ ಮಂಗಳೂರಿನಲ್ಲಿದ್ದೆ.

ಆಗ ಅಂಚೆಯಣ್ಣ ಬಂದ. ‘ಅಂಚೆಯ ಅಣ್ಣ ಬಂದಿಹನಣ್ಣ ಅಂಚೆಯ ಹಂಚಲು ಮನೆ ಮನೆಗೆ’ ಎನ್ನುವಂತೆ. ‘ಆಫೀಸ್ ಆಫೀಸ್ ಗೆ..’ ಅಂತ ನಾನು ಬದಲಿಸಿ ಹಾಡಿಕೊಳ್ಳುತ್ತಿದ್ದೆ.

ಪತ್ರಿಕಾ ಕಚೇರಿಗೆ ಅಂಚೆಯ ಅಣ್ಣ ಅಂತಹ ಕುತೂಹಲಕರ ವ್ಯಕ್ತಿಯೇನಲ್ಲ, ಕಾವ್ಯ, ಕಥೆ, ಕಾದಂಬರಿ ಅಥವಾ ಸಿನೆಮಾಗಳಲ್ಲಿ ಬರುವ ಹಾಗೆ ಆತ ‘ಆಹಾ..’ ಅಲ್ಲ ಒಂದು ದೊಡ್ಡ ಕಟ್ಟು ತಂದು ಟೇಬಲ್ ಮೇಲೆ ಹಾಕಿ ಹೋದರೆ ಅದನ್ನು ಬಿಚ್ಚದೆ ಗಂಟೆಗಟ್ಟಲೆ ಕೊಳೆಯುತ್ತಿರುತ್ತದೆ. ಯಾಕೆಂದರೆ ಅದರಲ್ಲಿ ಕೊಲೆ, ಸುಲಿಗೆ, ಮೂಕರ್ಜಿ, ಜಾಹಿರಾತು, ಎಮ್ಮೆ ಕಾಣೆಯಾಗಿದೆ ಹುಡುಕಿಕೊಡಿ ಇಂತಹವೇ ಹೆಚ್ಚು.

ಹಾಗಾಗಿ ನಾನೂ ಹಾಗೇ ಸುಮ್ಮನಾಗಿದ್ದೆ. ಆಗ ನೋಡಿ ನೂರೆಂಟು ಪತ್ರಗಳ ಮಧ್ಯೆ ಇದು ಇಣುಕಿದ್ದು. ‘ಪಿಂಕ್ ಸ್ಲಿಪ್’ ಎನ್ನುವುದು ಗೊತ್ತಿಲ್ಲದ ಕಾಲ ಅದು. ಹಾಗಾಗಿ ಇಡೀ ಕಟ್ಟಿನಲ್ಲಿ ಇಣುಕುತ್ತಿದ್ದ ಪಿಂಕ್ ಪತ್ರ ನನ್ನ ಗಮನ ಸೆಳೆದುಬಿಟ್ಟಿತು

ಅದೊಂದೇ ಕಾರಣಕ್ಕೆ ಆ ಪೋಸ್ಟ್ ಕಟ್ಟು ಬಿಚ್ಚಿದೆ. ಅರೆ! ಅದು ನನಗೇ ಬಂದಿರುವ ಪತ್ರ

ನೋಡಿದರೆ ಮುಂಬೈನಿಂದ ಜಯಂತ್

ನನಗೋ ಕಡಲ ತೀರದಲ್ಲಿದ್ದವರೆಲ್ಲ ಕಡಲ ತೀರದ ಭಾರ್ಗವರೇ..

ಹಾಗಾಗಿ ತಕ್ಷಣ ಒಳಕ್ಕೆ ಜಿಗಿದೆ

ಅದು ನಾನು ಆಗ ತಾನೇ ಸಂಪಾದಿಸಿದ್ದ ನನ್ನನ್ನು ಕಾಡಿದ, ಆವರಿಸಿಕೊಂಡ ಕವಿ ಸು ರಂ ಎಕ್ಕುಂಡಿಯವರ ಬಗೆಗಿನ ‘ಎಕ್ಕುಂಡಿ ನಮನ’ ಪುಸ್ತಕಕ್ಕೆ ಬರೆದ ಪತ್ರ.

ಆ ಎಕ್ಕುಂಡಿಯವರು ನನ್ನೊಳಗೆ ಒಂದು ಉತ್ತರ ಕನ್ನಡವನ್ನೇ ಕಡೆದು ನಿಲ್ಲಿಸಿದ್ದರು

ಬೆಳ್ಳಕ್ಕಿ, ತಲೆದೂಗುವ ತೆಂಗಿನ ಮರಗಳು, ಹಸಿರು ಮುಕ್ಕಳಿಸುವ ಗದ್ದೆಗಳು ಹಾಗೂ ಹಾಗೂ ಆ ಬಕುಳದ ಹೂವುಗಳು

ekkundi namana

 

”ಇಳೆಗೆ ಬಂದಿರುವ ಚೈತ್ರವೇ ಬಾ ಒಳಗೆ 

ಬೇವಿನಲಿ ಒಂದಿಷ್ಟು ಬೆಲ್ಲ ಕಲೆಸು 

ರೇಶಿಮೆಯ ರೆಕ್ಕೆಗಳ ಬಿಡಿಸಿದಾ ಪತಂಗವೇ 

ಎಲ್ಲಿಹುದು ನಾವೆಲ್ಲಾ ಕಂಡ ಕನಸು..” 

ಎಂದು ಕೇಳಿ ಕಾಡಿದ್ದವರು

 

ಪುತ್ತೂರಿನ ಬೋಳಂತಕೋಡಿ ಈಶ್ವರ ಭಟ್ಟರ ಕರ್ನಾಟಕ ಸಂಘ ಎಂದರೆ ಅದು ಆಕ್ಸ್ ಫರ್ಡ್, ಪೆಂಗ್ವಿನ್ ಗಿಂತ ಹೆಚ್ಚು

ಹಾಗಾಗಿ ಅವರ ಬಳಿ ಎಕ್ಕುಂಡಿ ಅವರ ಬಗ್ಗೆ ಒಂದು ಪುಸ್ತಕ ಮಾಡಿ ಎಂದು ದುಂಬಾಲು ಬಿದ್ದಿದ್ದೆ

ಅವರು ನೀವೇ ಮಾಡಿಕೊಡುವುದಾದರೆ ಸೈ ಎಂದಿದ್ದರು

ಅದೊಂದು ಕಥೆ- ಎಕ್ಕುಂಡಿಯವರ ಹುಟ್ಟುಹಬ್ಬಕ್ಕೆ ಅರ್ಪಣೆಯಾಗಲಿ ಎಂದು ನಾನು ತುರುಸಿನಿಂದ ಮಾಡುತ್ತಿದ್ದ ಕೆಲಸ

ಅವರಿಗೆ ಸಂತಾಪ ಸೂಚಕ ಪುಸ್ತಕವಾಗಿ ಹೋಯ್ತು

ಎಕ್ಕುಂಡಿ ದಿಢೀರನೆ ಎದ್ದು ಹೋಗಿಬಿಟ್ಟಿದ್ದರು

 

ಈ ಕೃತಿ ಬೆಳಕು ಕಂಡದ್ದೇ ತಡ ನಾನು ಇನ್ನಿಲ್ಲದಷ್ಟು ಸಂತಸ ಅನುಭವಿಸಿದೆ

ನರಹಳ್ಳಿ ಬಾಲಸುಬ್ರಹ್ಮಣ್ಯ, ಕು ಶಿ ಹರಿದಾಸ ಭಟ್, ಟಿ ಪಿ ಅಶೋಕ ಪುಟಗಟ್ಟಲೆ ವಿಮರ್ಶೆ ಬರೆದರು

ಆಗಲೇ ನನ್ನ ಹುಡುಕುತ್ತಾ ಮುಂಬೈ ನ ಮುಲುಂದ್ ನ, ವೈಶಾಲಿನಗರದ, 2 D 57 ಫ್ಲ್ಯಾಟ್ ನಿಂದ ಈ ಪತ್ರ ಹೊರಟದ್ದು

”ದೊಡ್ಡ ದನಿಯ ಬೇಂಡು ಬಜಂತ್ರಿ, ಕೂಗಿ ಕರೆಯುವ ದಲ್ಲಾಳಿಗಳ
ಪೇಟೆಯಲ್ಲಿ- ಮೂಲೆಯಲ್ಲಿ ಬಕುಳದ ಹೂವಿನ ಮಾಲೆಗಳನ್ನು ಹಿಡಿದು
ಕೂತಿದ್ದ…”

ಎಕ್ಕುಂಡಿಯವರನ್ನು ಕಂಡಿರಿಸಿದ ಬಗ್ಗೆ ಕಾಯ್ಕಿಣಿ ಬರೆದಿದ್ದರು

 

ಇರಲಿ ಈಗ ನಾನು ಕೊಟ್ಟ ಟೈಟಲ್ ಗೆ ಬರುತ್ತೇನೆ

ಕವಿತೆಯ (ಬರೆಯುವುದ) ಕೈ ಬಿಡಬೇಡಿ, ಅದು ನನ್ನಂತ ಓದುಗನ ಕೈಬಿಟ್ಟಂತೆ ಎಂದು ಕಾಯ್ಕಿಣಿ ಬರೆದಿದ್ದರು

ನಾನು ಕಾಯ್ಕಿಣಿಯ ಕೈಬಿಟ್ಟೆ ಅಥವಾ ಅವರಿಗೇ ಕೈಕೊಟ್ಟೆ

ಕವಿತೆ ಬರೆಯುವುದ ಬಿಟ್ಟೇ ಬಿಟ್ಟೆ

kaikini- gnm1

25-12-95-back

4 Comments

 1. Anonymous
  August 18, 2016
 2. Shyamala Madhav
  August 18, 2016
 3. s.p.vijayalakshmi
  August 18, 2016
 4. ಸುಚಿತ್ ಕೋಟ್ಯಾನ್ ಕುರ್ಕಾಲು
  August 18, 2016

Add Comment

Leave a Reply