Quantcast

ಹುಷಾರು, ಆಟಗಾರರು ಎಕ್ಸ್ಪೋರ್ಟ್ ಆಗುವ ದಿನ ದೂರ ಇಲ್ಲ

ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪದಕಹೀನತೆಗೆ ಕಾರಣ ಏನು?

k puttaswamy

ಕೆ ಪುಟ್ಟಸ್ವಾಮಿ 

ಮುಖಪುಟ ಚಿತ್ರ: ಸತೀಶ್ ಆಚಾರ್ಯ 

ಸಾಮಾನ್ಯ ಕ್ರೀಡಾ ಪ್ರೇಮಿಯಂತೆ ನಾನು ಒಲಿಂಪಿಕ್ ಕೂಟದ ಆಟಗಳನ್ನು ನೋಡುತ್ತಿದ್ದೇನೆ. ಅದರಲ್ಲೂ ಭಾರತದ ಆಟಗಾರರ ಪ್ರದರ್ಶನವನ್ನು ಆಸ್ಥೆಯಿಂದ ನೋಡುತ್ತಾ ಬಂದಿದ್ದೇನೆ.

ಒಲಿಂಪಿಕ್ ಕೂಟ ಆರಂಭವಾಗುವ ಎರಡು ತಿಂಗಳಿನಿಂದ ‘ಹಿಂದೂ’ ಪತ್ರಿಕೆಯ ಕ್ರೀಡಾಪುಟ ಮತ್ತು ‘ಸ್ಪೋರ್ಟ್ಸ್ ಸ್ಟಾರ್‍’ನ ಸಂಚಿಕೆಗಳಲ್ಲಿ ಒಲಿಂಪಿಕ್‍ ಕೂಟಕ್ಕೆ ಸಂಬಂಧಿಸಿದಂತೆ ಪ್ರಕಟವಾಗುವ ಸುದ್ದಿ, ಲೇಖನಗಳನ್ನು ಓದುತ್ತೇನೆ. ಇದು ನನಗಂಟಿರುವ ಗೀಳು.

sindhu rioಆದರೆ ಸಾಕ್ಷಿಯ ಕಂಚು ಬರುವವವರೆಗೆ ಭಾರತದ ಬರಹೀನತೆಗೆ ಅನೇಕ ಕಾರಣಗಳನ್ನು ತಜ್ಞರು, ಹೆಚ್ಚಾಗಿ ತಜ್ಞರಲ್ಲದವರು ತರ್ಕಿಸುತ್ತಿದ್ದಾರೆ.( ಶೋಭಾ ಡೇ ಎಂಬ ಸಾಫ್ಟ್ ಪೋರ್ನ್ ಕಾದಂಬರಿ ಬರೆಯುವ ಲೇಖಕಿ ಆಟಗಾರರು ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಹೋಗುತ್ತಾರೆಂದು ಹಗುರವಾಗಿ ಟೀಕಿಸಿದ್ದಾರೆ).

ಇರಲಿ, ಆದರೆ ನಾನು ಗಮನವಿಟ್ಟು ನೋಡಿದಂತೆ ಭಾರತದ ಸ್ಪರ್ಧಾಳುಗಳು ಆಟವನ್ನು ಬಹು ಗಂಭಿರವಾಗಿಯೇ ಪರಿಗಣಿಸಿ ಪಾಲ್ಗೊಂಡಿದ್ದಾರೆ. ಅವರ ಗುಣಮಟ್ಟ ಒಳ್ಳೆಯದಿದೆ. ಆದರೆ ಇತರ ಸ್ಪರ್ಧಾಳುಗಳು ಕ್ರೀಡೆಯ ಗುಣಮಟ್ಟವನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಅದನ್ನು ಹಿಂಬಾಲಿಸುವಷ್ಟು ಶಕ್ತಿ ನಮ್ಮ ಸ್ಪರ್ಧಾಳುಗಳಲ್ಲಿದ್ದರೂ ಆ ಶಕ್ತಿಯನ್ನು ಗೆಲುವಿಗೆ ಪರಿವರ್ತಿಸುವ ಕುಶಲತೆ ಇಲ್ಲ.

ಆ ಕೌಶಲ್ಯ ದಕ್ಕಿಸಿಕೊಳ್ಳಲು ಅಗತ್ಯವಾದ ತರಬೇತಿಯಿರಲಿ ನಮ್ಮಲ್ಲಿ ತರಬೇತುದಾರರೇ ಇಲ್ಲ. ಕ್ರೀಡಾ ಸಂಸ್ಥೆಗಳೆಲ್ಲವೂ ರಾಜಕಾರಣಿಗಳ ಉಸ್ತುವಾರಿಯಲ್ಲಿವೆ. ಅವರು ನೇಮಕ ಮಾಡುವ ಕೋಚುಗಳನ್ನೇ ನಮ್ಮ ಕ್ರೀಡಾಪಟುಗಳು ಅಂಗೀಕರಿಸಬೇಕು. ಅಲ್ಲದೆ ಚೀನಾ, ಜಪಾನ್, ಕೊರಿಯಾದಂತಹ ಪದಕ ಗೆಲ್ಲುವ ರಾಷ್ಟ್ರ ಬಿಟ್ಟರೆ ಅಮೆರಿಕ, ಕೆನಡಾ, ಗ್ರೇಟ್ ಬ್ರಿಟನ್, ಫ್ರಾನ್ಸ್ ದೇಶಗಳಿಗೆ ಪದಕ ತಂದು ಕೊಡುವವರು ಸ್ಥಳೀಯರಲ್ಲ. (ಅಮೆರಿಕದಲ್ಲಿ ಆಫ್ರೋ ಅಮರಿಕನ್ನರನ್ನು ಹೊರತು ಪಡಿಸಿದರೆ ಪದಕ ಗೆಲ್ಲವವ ಸ್ಥಳೀಯರು ಕಡಿಮೆಯೇ. ಈ ವರ್ಷ ಅಮೆರಿಕದ ತಂಡದಲ್ಲಿ 46 ಕ್ರೀಡಾಪಟುಗಳು ಕಳೆದ ಹತ್ತು ವರ್ಷಗಳಿಂದ ಅನ್ಯದೇಶದಿಂದ ಅಮೆರಿಕ ಪೌರತ್ವವನ್ನು ಪಡೆದವರಿದ್ದಾರೆ)

sakshi rio

ಪ್ರಮುಖವಾಗಿ ಆಫ್ರಿಕಾ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ದ್ವೀಪಗಳಿಂದ ವಲಸೆ ಹೋಗಿ ತಮ್ಮ ಆಟದ ಕೌಶಲ್ಯವನ್ನು ವೃದ್ಧಿಸಿ ಆಶ್ರಯ ನೀಡಿದ ದೇಶಗಳಿಗೆ ಪದಕ ತಂದು ಕೊಡುತ್ತಿದ್ದಾರೆ. ಹೀಗೇ ಆದರೆ ನಮ್ಮ ಪ್ರತಿಭಾವಂತರೂ ಅದೇ ಕೆಲಸವನ್ನು ಮಾಡಬಹುದು. ಆದರೆ ಅನೇಕರಿಗೆ ಆ ಮರ್ಮ ತಿಳಿದಿಲ್ಲ. ಬೇಗ ಅದು ಕರಗತವಾಗಿ ನಮ್ಮ ಪ್ರತಿಭೆಗಳು ಪರದೇಶದಲ್ಲಿ ಮೆರೆದಾಡಿದರೆ ಆಶ್ಚರ್ಯಪಡಬೇಕಿಲ್ಲ. ಜಾಗತೀಕರಣದಲ್ಲಿ ಯಾವುದು ತಾನೆ ಅಸಾಧ್ಯ.? ಬೇರೆ ದೇಶಕ್ಕೆ ಆಟಗಾರರನ್ನು ರಫ್ತು ಮಾಡುವ ಉದ್ಯಮ ಲಾಭದಾಯಕವೆನಿಸಿದರೆ ಅದು ಭಾರತದಲ್ಲೇ ಮೊದಲು ನೆಲೆ ಕಾಣುತ್ತದೆ. ಯಾಕೆಂದರೆ ಜಗತ್ತಿನಲ್ಲಿ ಅಗ್ಗವಾಗಿ ಸಿಗುವವರು ನಾವೇ ತಾನೆ?

ಮತ್ತೊಂದು ವಿಷಯ. ಯಾವುದೇ ಒತ್ತಡ ಇಲ್ಲದೆ ಎಂಟು ವರ್ಷದ ಹಿಂದೆ ಒಲಿಂಪಿಕ್ ಚಿನ್ನವನ್ನು ತಂದ ಅಭಿನವ ಭಿಂದ್ರೆಯ ಆಟ ಕಳಪೆಯಾಗಿರಲಿಲ್ಲ. ಮಾಧ್ಯಮಗಳು ಅನಗತ್ಯ ನಿರೀಕ್ಷೆ ಒತ್ತಡ ಹೇರಿದ್ದು ಆತನ ಮೇಲೆ ಪ್ರಭಾವ ಬೀರಿರಬಹುದು. ಆಟಗಾರ ಒತ್ತಡವಿಲ್ಲದಿರುವಾಗ ಸಹಜ ಲಯ ಕಂಡುಕೊಳ್ಳಬಲ್ಲ. ಕೂದಲೆಳೆಯಲ್ಲಿ ಪದಕ ತಪ್ಪಿಸಿಕೊಂಡ ದೀಪ ಕರ್ಮಾಕರ್ ಸಹ ಇದೇ ಒತ್ತಡದಲ್ಲಿ ಬಳಲಿರಬಹುದು. ದೀಪಾ ಕರ್ಮಾಕರ್ ಅವರ ಪ್ರತಿಭೆಯನ್ನು ಗುರುತಿಸಿ ಅಮೆರಿಕಾದ ಅಥವಾ ರೊಮೇನಿಯಾದ ನುರಿತ ಕೋಚುಗಳಿಂದ ತರಬೇತಿ ಕೊಡಿಸಿದ್ದರೆ ಖಂಡಿತಾ ಪದಕ ಬರಬಹುದಿತ್ತು.

ಏಕೆಂದರೆ ಮೊದಲೇ ಹೇಳಿದಂತೆ ಗೆಲ್ಲವ ಸಾಮರ್ಥ್ಯದ ಜೊತೆಗೆ ವಿಜಯದ ಗೆರೆಯನ್ನು ಮುಟ್ಟುವ ಕುಶಲತೆಯೂ ಮುಖ್ಯವಾಗುತ್ತದೆ. ಇನ್ನು ವಿನೇಶ್ ಪೊ್ಟ್, ಇಲ್ಲದಿದ್ದರೆ ಸೈನಾ ನೆಹ್ವಾಲ್‍ಗೆ ಅದೃಷ್ಟ ಕೈಕೊಟ್ಟರೆ ಆತನು ದಾಸ್, ಶ್ರೀಕಾಂತ್ ಅವರ ಪ್ರದರ್ಶನ ಸಹ ಚೆನ್ನಾಗಿಯೇ ಇತ್ತು. ಸಿಂಧೂ ಅವರ ಆಟಕ್ಕೆ ಗೆಲುವಾಗಲಿ.

 

Dipa Karmakar of India performs in the women’s vault final of the Artistic Gymnastics event during the 2014 Commonwealth Games in Glasgow, Scotland, on July 31, 2014. AFP PHOTO / CARL COURT / AFP PHOTO / CARL COURT

ಈಗ ಈ ದೇಶಪ್ರೆಮ, ಭಾರತಕ್ಕೆ ಪದಕ ಬರಲಿಲ್ಲ ಎಂಬ ಸಿನಿಕತನಕ್ಕೆ ಸ್ವಲ್ಪ ರಜೆ ಕೊಟ್ಟು ಒಲಿಂಪಿಕ್ ಹಬ್ಬವನ್ನು ಕಣ್ತುಂಬಿಕೊಳ್ಳಿ. ಇಲ್ಲದಿದ್ದರೆ ramp ಮೇಲೆ ಹೆಜ್ಜೆ ಹಾಕುತ್ತಾ ನಡೆಯುವ ಮಾಡೆಲ್‍ ನಂತೆ ಮಾದಕ ಹೆಜ್ಜೆ ಹಾಕುತ್ತಾ ಎದೆಯ ಮೇಲಿನ ಕ್ರೋವೇಷಿಯಾ ಧ್ವಜವನ್ನು ಮುಟ್ಟಿನೋಡಿ ಜಂಭದ ಕೋಳಿಯಂತೆ ಆರಂಭದ ಎರಡೂ ಎಸತೆಗಳನ್ನು ಫೌಲ್ ಏನೂ ಆಗಿಯೇ ಇಲ್ಲವೆಂಬಂತೆ ಮೂರನೇ ಬಾರಿಗೆ ಅದೆ ಹೆಜ್ಜೆ ಕುಣಿಸುತ್ತಾ ವೃತ್ತದೊಳಗೆ ನರ್ತಿಸಿ ಚಿನ್ನದ ಪದಕದ ಎಸೆತವನ್ನು ತೂರಿದ ಸ್ಯಾಂಡ್ರಾ ಪರ್ಕೋವಿಷ್‍ಳ ಬಿಂದಾಸ್ ವರ್ತನೆಯ ಸೊಬಗನ್ನು ಸವಿಯಲಾರಿರಿ.

ಮ್ಯಾರಾಥಾನ್ ಸ್ಪರ್ಧೆಯಲ್ಲಿ ಗುರಿಗೆ ಕೆಲವೇ ಕಿಲೋಮೀಟರ್ ದೂರದಲ್ಲಿರುವಾಗ ಮಗ್ಗರಿಸಿ ಬಿದ್ದ ಅವಳಿ ಸೋದರಿಯನ್ನು ಎತ್ತಿ ನಿಲ್ಲಿಸಿ ತನ್ನ ಓಟವನ್ನೂ ಬಿಟ್ಟು ದೇಶದ ಜನರ ಮಾತುಗಳ ಬಗ್ಗೆ ಯೋಚಿಸದೆ ಗಾಯಗೊಂಡವಳನ್ನು ಕೈ ಹಿಡಿದು ನಡೆಸಿ ಗುರಿ ಮುಟ್ಟಿಸಿದ ಜರ್ಮನಿಯ ಸೋದರಿಯರು ಮೆರೆದ ಮಾನವೀಯತೆಯ ರೋಮಾಂಚನದಿಂದ ವಂಚಿತರಾಗುತ್ತೀರಿ.

5 ಸಾವಿರ ಮಿಟರ್‍ನಲ್ಲಿ ಅಮೆರಿಕದ ಅಬೆ ಡಿ ಗೋಸ್ಟಿನ್‍ಗೆ ಢಿಕ್ಕಿ ಹೊಡೆದು ಬೀಳಿಸಿದ ನ್ಯೂಜಿಲ್ಯಾಂಡ್‍ನ ನಿಕಿ ಹ್ಯಾಂಬಲಿನ್ ಓಡುವುದು ಬಿಟ್ಟು ಬಿದ್ದ ಎದುರಾಳಿಯನ್ನು ಗುರಿಮುಟ್ಟಿಸಿದ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಗುವುದನ್ನು ತಪ್ಪಿಸಿಕೊಳ್ಳುತ್ತೀರಿ. ಅಷ್ಟೇ ಏಕೆ ಕುಸ್ತಿಯಲ್ಲಿ 0-5 ಪಾಯಿಂಟ್‍ಗಳಿಂದ ಹಿಂದಿದ್ದ ಸಾಕ್ಷಿ ಮಲಿಕ್ ಅವರ ಕತೆಯೇ ಮುಗಿಯಿತು ಎನ್ನುವಾಗಲೇ ತನ್ನ ಪರವಾಗಿ ಸ್ಕೋರನ್ನು 9-5ಕ್ಕೆ ಪರಿವರ್ತಿಸಿದ ಪವಾಡವನ್ನು ನೋಡದಂತಾಗುತ್ತದೆ.

ಇನ್ನು ಕೆಲವೇ ದಿನಗಳು ಬಾಕಿಯಿರುವ ಈ ಭುವನದ ಬೆಡಗನ್ನು ನೋಡಿ. ಭಾರತೀಯರ ಆಟದ ವಿಶ್ಲೇಷಣೆ ಆಮೇಲೆ.

One Response

  1. Nandinarasimha
    August 19, 2016

Add Comment

Leave a Reply