Quantcast

ನಿಮಗೇನಾದರೂ ಐಡಿಯಾ ಹೊಳೆದರೆ ತಿಳಿಸಿ..

shree dn n

ಶ್ರೀ ಡಿ ಎನ್ 

ನೆನ್ನೆ ಆಫೀಸಿನಿಂದ ವಾಪಸ್ ಬರಬೇಕಾದರೆ ಆಟೋಚಾಲಕನ ಜತೆ ಮಾತುಕತೆ.
“ದಿನಾ ಇಷ್ಟು ದೂರ ಬರ್ತೀರಾ ಮೇಡಂ”
“ಇಲ್ಲಪ್ಪಾ ವಾರಕ್ಕೆ ಮೂರು ದಿನ ಮಾತ್ರ ಬರ್ತೀನಿ, ಉಳಿದ ದಿನ ಮನೆಯಿಂದ್ಲೇ ಕೆಲಸ ಮಾಡ್ತೀನಿ”
“ನೀವು ಎಷ್ಟು ಓದಿದೀರಾ ಮೇಡಂ”
“ನಾನಾ, ಎಂಎ ಓದಿದೀನಿ”

“ಎಂಎ ಅಂದ್ರೆ ಅದು ಪೀಯೂಸಿ ಆದ್ಮೇಲೆ ಬರತ್ತಾ”
“ಇಲ್ಲ, ಅದು ಡಿಗ್ರಿ ಆದ್ಮೇಲೆ ಬರತ್ತೆ…”
“ನೀವೆಲ್ಲಿ ಓದಿರೋದು ಮೇಡಂ”
“ಮಂಗ್ಳೂರಲ್ಲಿ ಅಣ್ಣಾ”
“ನಂಗೂ ಮಗಳಿದಾಳೆ, ಈ ವರ್ಷ ಹತ್ತನೇ ಕ್ಲಾಸು..”
“ಓ ಹೌದಾ, ಯಾವ ಸ್ಕೂಲು”
“ಪ್ರೈವೇಟ್ ಸ್ಕೂಲು”
“ಎಲ್ಲಿ”
“ಹೆಸರಘಟ್ಟ ಹತ್ರ, ಚಿಕ್ಕಬಾಣಾವರದಲ್ಲಿ”
“ಸ್ಕೂಲು ಹೆಸರೇನು?”
” xxx ಪಬ್ಲಿಕ್ ಸ್ಕೂಲು.. ಗೊತ್ತಾ?”
“ಇಲ್ಲ, ಸುಮ್ನೇ ಕೇಳ್ದೆ ಅಷ್ಟೆ”
auto1“ನನ್ ಮಗಳು ಓದಿ ಕೆಲಸಕ್ಕೆ ಹೋಗ್ಬೇಕು ಅಂದ್ರೆ ಇನ್ನೆಷ್ಟು ವರ್ಷ ಓದ್ಬೇಕು ಮೇಡಂ?”
“ಅದು ಹಂಗೆಲ್ಲಾ ಗೊತ್ತಾಗಲ್ಲ, 18 ವರ್ಷ ಮಿನಿಮಮ್ ಆಗಿರಬೇಕು ಕೆಲಸಕ್ಕೆ ಹಾಕ್ಬೇಕಾದ್ರೆ.. ಏನು ಮಾಡ್ಬೇಕಂತಿದಾಳೆ ಮಗಳು?”
“ಇನ್ನೂ ಹತ್ತನೇ ಕ್ಲಾಸು, ದಿನಾ ಅದು ಇನ್ಫಾರ್ಮೇಶನ್ ಬೇಕು ಅದು ಬೇಕು ಇದು ಬೇಕು ಸ್ಕೂಲಲ್ಲಿ ಕೇಳ್ತಾರೆ ಅಂತ 100-125 ರೂಪಾಯಿ ಇಸ್ಕೋತಾಳೆ, ನಾನು ತಿಂಗ್ಳಿಗೆ 40,000 ದುಡೀದೇ ಇದ್ರೆ ದುಡ್ಡು ಯಾವ್ದಕ್ಕೂ ಸಾಕಾಗಕ್ಕಿಲ್ಲ…”
“ಸ್ಕೂಲಲ್ಲಿ ಪ್ರಾಜೆಕ್ಟು ಅದು ಇದು ಇರತ್ತೇನೋ. ಸಿಬಿಎಸ್ಇ ಸ್ಕೂಲಾ?”
“ಏನೋ ಗೊತ್ತಿಲ್ಲ, ದುಡ್ಡು ಮಾತ್ರ ಕೇಳ್ತಾಳೆ, ನಂಗೆ ಕಷ್ಟಾ ಇದೆ, ತುಂಬಾ ಓದ್ಸಕ್ಕೆ ಆಗಾಕಿಲ್ಲ..”
“ಇಂಟರ್ನೆಟ್ಟಿಗೆ ಕೇಳ್ತಾಳೇನೋ ದುಡ್ಡು, ಮನೆಗೇ ಇಂಟರ್ನೆಟ್ ಹಾಕಿಸ್ಕೊಂಬಿಡಿ”
“ಅವೆಲ್ಲಾ ನಂಗೊತ್ತಾಗಕ್ಕಿಲ್ಲ ಮೇಡಂ, ನಾ ನಾಕನೇ ಕ್ಲಾಸು ಮಾತ್ರ ಓದಿರೋದು..”
“ಹೌದಾ, ನಿಮ್ಮ ವೈಫು ಎಷ್ಟು ಓದಿದಾರೆ?”
“ಅವ್ರು ಏಳನೇ ಕ್ಲಾಸು ಓದಿದಾರೆ”
“ಹ್ಮ್… ಆದ್ರೆ ಮಗೂ ಓದೋದ್ರಲ್ಲಿ ಚುರುಕಿದಾಳಾ?”
“ಹೂಂ ಒಳ್ಳೆ ಮಾರ್ಕ್ಸು ಬರತ್ತೆ ಅವ್ಳಿಗೆ..”
“ಹಾಗಿರ್ಬೇಕಾದ್ರೆ ಸ್ಕೂಲು ಮಾತ್ರ ಬಿಡ್ಸಕ್ಕೆ ಹೋಗ್ಬೇಡಿ, ಮೈನಾರಿಟಿ ವೆಲ್ಫೇರು, ಸೋಶಿಯಲ್ ವೆಲ್ಫೇರು ಡಿಪಾರ್ಟ್ಮೆಂಟುಗಳಿವೆ, ಸ್ಕಾಲರುಶಿಪ್ಪು ಅದು ಇದು ಅಂತ ಇರತ್ತೆ, ಹಾಗೇ ಕಷ್ಟದಲ್ಲಿರೋರಿಗೆ ಸಹಾಯ ಮಾಡೋರೂ ಇರ್ತಾರೆ, ಟ್ರೈ ಮಾಡಿ”
“ಮೊನ್ನೆ ಮೊನ್ನೆ ಬಂದಿತ್ತು ಯಾವುದೋ ಸ್ಕಾಲರುಶಿಪ್ಪು, ಮಗು ಹೇಳ್ತಾ ಇದ್ಲು.. ಆದ್ರೆ ಅದು ಆನುಲೈನಲ್ಲಿ ಹಾಕ್ಬೇಕಾಗಿತ್ತಂತೆ, ನಂಗವೆಲ್ಲಾ ಗೊತ್ತಾಗಕಿಲ್ಲ ಅದಿಕ್ಕೇ ಹಾಕಿಲ್ಲ ನಾನು..”
“ಹ್ಮ್…”
“ಆಮೇಲೆ ನಾ ಓದ್ಸಿ ಏನ್ ಪ್ರಯೋಜ್ನ ಅವ್ಳಿಗೆ?”
“ಯಾಕೆ ಹಾಗೆ ಹೇಳ್ತೀರಣ್ಣಾ, ಈಗಿನ ಕಾಲದಲ್ಲಿ ಓದದೇ ಇದ್ರೇ ಬದುಕೋದು ಹೆಂಗೆ?”
“ಅಲ್ಲಮ್ಮಾ, ಅವ್ಳಿಗೆ ಇವಾಗ್ಲೇ 17 ವರ್ಷ, ಮುಂದಿನ ವರ್ಷ ಮದುವೆಗೆ ಬಂದ್ಬಿಡ್ತಾಳಲ್ಲ, ಓದ್ಸಿ ಏನ್ಮಾಡ್ಲಿ…”
“ಅಯ್ಯೋ ಹಾಗೆ ಮಾತ್ರ ಮಾಡ್ಬೇಡಿ, ಈಗ ನಾನೇ ನೋಡಿ, ನಾಳೆ ಮದುವೆ ಆಗ್ತೀನಿ ಅಂತ ಓದೋ ಟೈಮಲ್ಲಿ ಓದದೇ ಇದ್ದಿದ್ರೆ ಇವತ್ತು ಇಷ್ಟು ದೊಡ್ಡ ಸಿಟೀನಲ್ಲಿ ಬಂದು ಬದುಕಕ್ಕಾಗ್ತಾ ಇತ್ತಾ.. ಮಗು ಸ್ಕೂಲು ಮಾತ್ರ ಬಿಡಿಸ್ಬೇಡಿ ಅಣ್ಣ.. ಓದಿ ಅವ್ರವರ ಕಾಲ ಮೇಲೆ ನಿಂತ್ಕೊಳೋ ತರಾ ಆಗ್ಬೇಕಲ್ಲಾ…?”
“ಆದ್ರೂ ನಮ್ಮನೇಲಿರಲ್ವಲ್ಲಾ ಅವಳು ಮದುವೆ ಆದ್ಮೇಲೆ..”
ಹೀಗೆಯೇ ಮುಂದುವರಿದಾಗ ಮಾತಾಡಿ ಪ್ರಯೋಜನ ಇಲ್ಲವೆಂದುಕೊಂಡೆ. ಅಷ್ಟರಲ್ಲಿ ಯಾವ್ದೋ ಫೋನ್ ಕಾಲ್ ನನ್ನ ಸಹಾಯಕ್ಕೆ ಬಂತು, ಮಾತಾಡಿ ಮುಗಿಸಿದ ಮೇಲೆ ನನ್ನ ಪಾಡಿಗೆ ಕೈಲಿದ್ದ ಪುಸ್ತಕದಲ್ಲಿ ಮುಳುಗಿಹೋದೆ.
ಇಳಿಯಬೇಕಾದರೆ ಆತನ ಕೈಲಿ ಆತನ ಹೆಸರು, ದೂರವಾಣಿ ಸಂಖ್ಯೆ ಕೇಳಿ ತೆಗೆದುಕೊಂಡು, ಹುಡುಗಿಯನ್ನು ಶಾಲೆಯಿಂದ ಬಿಡಿಸದಿರುವಂತೆ ಕೇಳಿಕೊಂಡೆ, ಹಾಗೂ ಏನಾದರೂ ಸಹಾಯ ಸಿಗುವಂತಹದಿದ್ದರೆ ಹೇಳುತ್ತೇನೆಂದು ಹೇಳಿದೆ.
ಮುಂದೇನು? ನಿಮಗೇನಾದರೂ ಐಡಿಯಾ ಹೊಳೆದರೆ ತಿಳಿಸಿ.

One Response

  1. Anonymous
    August 23, 2016

Add Comment

Leave a Reply