Quantcast

ನೆಚ್ಚಿನ ನರಹಳ್ಳಿ ಸರ್ ಗೆ ಪ್ರಶಸ್ತಿ

ನಮ್ಮ ನೆಚ್ಚಿನ ನರಹಳ್ಳಿ ಬಾಲಸುಬ್ರಹ್ಮಣ್ಯ ಸರ್ ಗೆ ಶಿವರಾಮ ಕಾರಂತ ಪ್ರಶಸ್ತಿ ಸಂದಿದೆ.

ಸದಾ ಮುಗುಳ್ನಗುತ್ತಾ, ಕನ್ನಡದ ಹುಮ್ಮಸ್ಸನ್ನು ಹೆಚ್ಚಿಸುತ್ತಾ ಸಾಗುವ ನರಹಳ್ಳಿ ಅವರಿಗೆ ಕನ್ನಡದ ಕೆಲಸಕ್ಕಾಗಿಯೇ ಸ್ಥಾಪಿಸಲಾಗಿರುವ ಪ್ರಶಸ್ತಿ ಸಂದಿದೆ. ಮೂಡಬಿದ್ರೆಯ ಡಾ ಶಿವರಾಮ ಕಾರಂತ ಪ್ರತಿಷ್ಠಾನ ನೀಡುವ ಈ ಪ್ರಶಸ್ತಿ ಗಾಗಿ ‘ಅವಧಿ’ಯ ಅಭಿನಂದನೆಗಳು 

‘ಅಭಿನವ’ದ ನ. ರವಿಕುಮಾರ್ ಈ ಹಿಂದೆ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಜೊತೆ ನಡೆಸಿದ ಮಾತುಕತೆಯ ಮೆಲುಕು ಇಲ್ಲಿದೆ 

ನರಹಳ್ಳಿ ಅವರ ಕಣ್ಣೋಟ ಈ ಸಂದರ್ಶನದಲ್ಲಿ ಸಿಕ್ಕು ಹೋಗುತ್ತದೆ. ಓದಿ- 

 

ನರಹಳ್ಳಿ ಬಾಲಸುಬ್ರಹ್ಯಣ್ಯಂ ಅವರ ಜೊತೆ ಮಾತುಕತೆ

abhinava ravikumar

ನ ರವಿಕುಮಾರ್

ನರಹಳ್ಳಿ ಬಾಲಸುಬ್ರಹ್ಮಣ್ಯಂ (೫.೯.೧೯೫೩) ಅವರು ಕನ್ನಡದ ಮುಖ್ಯ ವಿದ್ವಾಂಸರು, ವಿಮರ್ಶಕರಲ್ಲಿ ಒಬ್ಬರು. ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಅವರು ಸಲ್ಲಿಸಿದ ಸೇವೆ ಅನುಪಮವಾದುದು. ಕೆ. ಎಸ್. ನರಸಿಂಹಸ್ವಾಮಿ ಅವರ ಕವಿತೆಗಳನ್ನು ಕುರಿತ ‘ಇಹದ ಪರಿಮಳದ ಹಾದಿ’ ಇವರ ಸಂಶೋಧನಾ ಪ್ರಬಂಧ. ಕುವೆಂಪು ನಾಟಕಗಳ ಅಧ್ಯಯನ, ಕುವೆಂಪು ಕಾವ್ಯ ಅಧ್ಯಯನ, ಸಾಹಿತ್ಯ ಸಂಸ್ಕೃತಿ, ಕ್ರಿಸ್ತಾಂಜಲಿ, ಸಿಂಗರ್ ಕಥೆಗಳು, ಹಣತೆಯ ಹಾಡು ಮುಂತಾದವು ಮುಖ್ಯ ಪುಸ್ತಕಗಳು.

ವಿ ಎಂ ಇನಂದಾರ್ ಪ್ರಶಸ್ತಿ, ಜಿ. ಎಸ್. ಎಸ್. ಪ್ರಶಸ್ತಿ, ಸ. ಸ. ಮಾಳವಾಡ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಶಿಕ್ಷಕರ ದಿನವೇ ತಮ್ಮ ೬೦ರ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅವರನ್ನು ‘ಅವಧಿ’ಗಾಗಿ ಮಾತನಾಡಿಸಿದ ಬರಹ ಇಲ್ಲಿದೆ.

ಈಗ ಕೇಂದ್ರ ಸಾಹಿತ್ಯ ಅಕಾಡಮಿಯ ಕನ್ನಡ ಮತ್ತು ದಕ್ಷಿಣಭಾರತೀಯ ಭಾಷೆಗಳ ಸಂಚಾಲಕರೂ ಆಗಿದ್ದಾರೆ. ಹತ್ತು ಹಲವು ಕಾರ್ಯಯೋಜನೆಗಳನ್ನು ತಮ್ಮ ತಲೆಯ ತುಂಬಾ ತುಂಬಿಕೊಂಡು ಕೆಲಸಮಾಡುವ ಹುರುಪು ತೋರಿದ್ದಾರೆ

AABphoto1ನೀವು ಓದುತ್ತಿದ್ದ ದಿನಗಳಲ್ಲಿನ ಶಿಕ್ಷಣ ಕ್ರಮ ಹೇಗಿತ್ತು?

ಮಾಹಿತಿ ತಂತ್ರಜ್ಞಾನ ಅಥವಾ ವ್ಯಾಪಾರೀಕರಣವನ್ನೇ ಕೇಂದ್ರವಾಗುಳ್ಳ ಈ ಹೊತ್ತಿನ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ನೋಡುತ್ತೀರಿ?

ನಾವು ಓದುತ್ತಿದ್ದಾಗ ಒಳ್ಳೆಯ ಗುರುಗಳು ಸಿಕ್ಕಿದ್ದು ನಮ್ಮ ಪುಣ್ಯ. ಆಗ ಓದು ಎಂಬುದು ಕೇವಲ ಉದ್ಯೋಗ ಗಿಟ್ಟಿಸಲು ಬೇಕಾದ ಅರ್ಹಾತಾ ಪತ್ರವಾಗಲೀ, ಮಾಹಿತಿ ಸಂಗ್ರಹವೆಂತಾಗಲೀ ಆಗಿರಲಿಲ್ಲ. ನಮ್ಮ ನಮ್ಮ ವ್ಯಕ್ತಿತ್ವಗಳನ್ನು ರೂಪಿಸಿಕೊಳ್ಳಲು, ಬೆಳೆಸಿಕೊಳ್ಳುವ ಜೀವನ ವಿಧಾನ ಆಗಿತ್ತು. ಆದರೆ ಇವತ್ತು ಹೆಚ್ಚು ಅವಕಾಶಗಳಿದ್ದರೂ, ಸಾಧ್ಯತೆಗಳಿದ್ದರೂ ವಿದ್ಯಾಭ್ಯಾಸ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತಿಲ್ಲ. ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತಿಲ್ಲ. ವಿದ್ಯಾಭ್ಯಾಸ ವ್ಯಕ್ತಿತ್ವಗಳ ವಿಕಾಸಕ್ಕೆ ದಾರಿಮಾಡಿಕೊಟ್ಟರೆ ಸಮಾಜ ತಾನೇ ತಾನಾಗಿ ಮೇಲ್‌ಸ್ತರದ ಬೆಳವಣಿಗೆಗೆ ಕಾರಣವಾಗುತ್ತದೆ.

ಕನ್ನಡ ಭಾಷೆ ಇವತ್ತು ಎದುರಿಸುತ್ತಿರುವ ಬಹಳ ಮುಖ್ಯ ಪ್ರಶ್ನೆ ಯಾವುದು?

ಮತ್ತು ಶಿಕ್ಷಕ ಸಮೂಹ ಹೇಗೆ ಇದನ್ನು ಎದಿರುಗೊಳ್ಳಬೇಕು?

ಇವತ್ತು ಕನ್ನಡ ಭಾಷೆಗಿರುವ ಬಹಳ ದೊಡ್ಡ ಆತಂಕ ಎಂದರೆ ಕನ್ನಡ ಮಕ್ಕಳ ಮನಸ್ಸಿನಿಂದ ದೂರವಾಗುತ್ತಿರುವುದು. ಒಂದು ಸಮಾಜದಲ್ಲಿ ಭಾಷೆ ಎನ್ನುವುದು ಕೇವಲ ಸಂವಹನದ ಮಾಧ್ಯಮ ಮಾತ್ರ ಅಲ್ಲ. ಅದೊಂದು ಜೀವನ ವಿಧಾನ, ಒಂದು ಸಂಸ್ಕೃತಿ. ಯಾವುದೇ ವಿಷಯವಾಗಿರಲಿ ಬಹಳದೊಡ್ಡ ಸಂಶೋಧನೆ ನಡೆದರೂ ಅದು ಪ್ರಕಟಗೊಳ್ಳುವುದು ಭಾಷೆಯ ಮೂಲಕವೇ. ಆದರೆ ಇವತ್ತು ಭಾಷೆಯ ವಿಚಾರವಿರಲಿ, ಮಾನವಿಕ ವಿಭಾಗಗಳನ್ನೇ ಮುಚ್ಚಲಾಗುತ್ತಿದೆ. ನನ್ನ ಅನುಭವದಲ್ಲಿಯೇ ಹೇಳುವುದಾದರೆ ನಾನು ೩೦-೩೫ ವರ್ಷ ಕೆಲಸ ಮಾಡಿದ, ಸರ್ಕಾರದ ಅನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿದ್ದ ಸೋಷಿಯಾಲಜಿ, ಪೊಲಿಟಿಕಲ್ ಸೈನ್ಸ್, ಐಚ್ಚಿಕ ಕನ್ನಡ, ಐಚ್ಚಿಕ ಇಂಗ್ಲಿಷ್, ಪತ್ರಿಕೋದ್ಯಮ ಮುಂತಾದ ವಿಭಾಗಗಳನ್ನೇ ಮುಚ್ಚಲಾಗಿದೆ. ಅಲ್ಲಿ ಈಗ ಉಳಿದಿರುವುದು ಬಿ ಕಾಮ್ ಮುಂತಾದ ವಾಣಿಜ್ಯ ಮತ್ತು ಲಾಭದಾಯಕ ವಿಷಯಗಳು ಮಾತ್ರ.

ನಾನು ೧೫ -೨೦ ವರ್ಷಗಳ ಹಿಂದೆ ಒಂದು ಸಂಶೋಧನೆ ಮಾಡಿದ್ದೆ. ಯಾರು ಪ್ರಾಥಮಿಕ ಶಾಲೆಗೆ ಅಧ್ಯಾಪಕರಾಗಿ ಹೋಗ್ತಾರೆ ಎನ್ನುವ ವಿಷಯದ ಕುರಿತು. ನಿಮಗೆ ಆಶ್ಚರ್ಯವಾಗಬಹುದು- ಮೊದಲ ರ‍್ಯಾಂಕ್ ಇರಲಿ, ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ಯಾವ ವಿದ್ಯಾಥಿಯೂ ಈ ಕ್ಷೇತ್ರವನ್ನು ಆರಿಸಿಕೊಳ್ಳುವುದಿಲ್ಲ. ಸಾಮಾನ್ಯ ಅಂಕ ಪಡೆದು ಬೇರೆ ಎಲ್ಲೂ ಅವಕಾಶ ದೊರೆಯದ ಕಾರಣಕ್ಕೆ ಈ ಕ್ಷೇತ್ರಕ್ಕೆ ಹೋಗುತ್ತಾರೆ. ಜಗತ್ತಿನ ವಿಶ್ವವಿದ್ಯಾನಿಲಯಗಳನ್ನು ನಮ್ಮ ಕಣ್ಣ ಮುಂದೆ ತಂದುಕೊಂಡರೆ ಅಲ್ಲಿ ನೊಬಲ್ ಪ್ರಶಸ್ತಿ ಪಡೆದ ವ್ಯಕ್ತಿಗಳಿರುತ್ತಾರೆ. ಹಾಗೆಯೇ ಜಗತ್ತಿನ ೧೦೦ ಶ್ರೇಷ್ಠ ವಿಶ್ವವಿದ್ಯಾನಿಲಯಗಳನ್ನು ಪಟ್ಟಿ ಮಾಡುವಾಗ ಭಾರತದ ಯಾವ ವಿಶ್ವವಿದ್ಯಾಲಯವೂ ಅದರಲ್ಲಿ ಸೇರಿರುವುದಿಲ್ಲ ಎಂಬ ವಿಷಯವನ್ನು ಓದಿದ್ದ ನೆನಪು. ಹೀಗಾಗಿ ನಾವು ಭಾಷೆಯ ಕಡೆಗೆ ಹೆಚ್ಚು ಒತ್ತು ನೀಡಿದರೆ ಸಂಸ್ಕೃತಿಯೂ ಉಳಿಯುತ್ತದೆ ಭಾಷೆಗೂ ಪ್ರಾಮುಖ್ಯತೆ ಬರುತ್ತದೆ.

ನಿಮ್ಮ ಶೈಕ್ಷಣಿಕ ಜೀವನದ ಬಹುದೊಡ್ಡ ಘಟನೆ ಎಂದು ಯಾವುದನ್ನು ನೆನಪಿಸಿಕೊಳ್ಳಬಯಸುತ್ತೀರಿ?

ನಾನು ವಿಜ್ಞಾನದ ವಿದ್ಯಾರ್ಥಿ. ಬಿ‌ಎಸ್ಸಿ ಓದುತ್ತಿದ್ದೆ. ಮೊದಲ ವರ್ಷ ಪೂರೈಸಿದ ತಕ್ಷಣ ನನ್ನ ಕ್ಷೇತ್ರ ಇದಲ್ಲ ಎನ್ನಿಸಿ ಮತ್ತೆ ಮೊದಲನೆಯ ಆನರ್ಸ್‌ಗೆ (ಬಿ. ಎ) ಸೇರಿದೆ. ಇದು ನನ್ನ ಜೀವನದ ಬಹಳ ದೊಡ್ಡ ಪರಿವರ್ತನೆಗೆ ಕಾರಣವಾಯಿತು.

ಇವತ್ತಿನ ಶಿಕ್ಷಕರ ಜವಾಬ್ದಾರಿ ಏನಾಗಿರಬೇಕೆಂದು ನೀವು ಬಯಸುತ್ತೀರಿ?

ಓದು ಎನ್ನುವುದು ಯಾವತ್ತಿಗೂ ಉಲ್ಲಾಸದ ಅನುಭವವಾಗಿರಬೇಕು. ಆದರೆ ಈ ಹೊತ್ತು ವಿದಾರ್ಥಿಗಳಿಗೆ ಅದು ಹಿಂಸೆಯ ಅನುಭವವಾಗುತ್ತಿದೆ. ಶಿಕ್ಷಕರಿಗೆ ಇದು ಕರ್ತವ್ಯವಾಗಿದೆ. ಅದು ಸಂತೋಷಕರ ಪ್ರಕ್ರಿಯೆಯಾಗಬೇಕು. ಸಾಹಿತ್ಯ ಇರಲಿ, ವಾಣಿಜ್ಯ ಇರಲಿ, ಎಂಜಿನಿಯರಿಂಗ್ ಇರಲಿ ಅದು ಉಲ್ಲಾಸಕರವಾದ ಕ್ರಿಯೆಯಾಗಬೇಕು. ನಮ್ಮಲ್ಲಿ ಒಂದು ಮಾತಿದೆ ಒಬ್ಬ ಕೆಟ್ಟ ವೈದ್ಯನಿಂದ ಕೆಲವು ಜನ ಸಾಯಬಹುದು, ಕೆಟ್ಟ ಇಂಜಿನಿಯರ್‌ನಿಂದ ಕೆಲವು ಕಟ್ಟಡಗಳು ಬೀಳಬಹುದು ಆದರೆ ಒಬ್ಬ ಕೆಟ್ಟ ಶಿಕ್ಷಕನಿಂದ ಒಂದು ತಲೆಮಾರೇ ಹಾಳಾಗಿಬಿಡಬಹುದು ಎಂದು.

ಹೀಗಾಗಿ ನಿರಂತರ ಅಧ್ಯಯನದ ಮೂಲಕ, ಸಮಕಾಲೀನ ಜ್ಞಾನಕ್ಕೆ ತೆರೆದುಕೊಳ್ಳುವುದರ ಮೂಲಕ, ವಿದ್ಯಾರ್ಥಿಗಳಿಗೆ ಆದರ್ಶವಾಗಿ ಅನೇಕ ತಲೆಮಾರುಗಳನ್ನು ರೂಪಿಸುವ ಮೂಲಕ ಆರೋಗ್ಯಕರವಾದ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಬಹುದು. ತಮ್ಮ ಅವಕಾಶಗಳ ಮೂಲಕ ಕನ್ಸ್‌ಟ್ರಕ್ಟೀವ್ ಕೆಲಸಗಳನ್ನೂ ಮಾಡಬಹುದು ಇಲ್ಲ; ಡಿಸ್ಟ್ರೆಕ್ಟೀವ್ ಆಗಿಯೂ ಮಾಡಬಹುದು. ಆದರೆ ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಜವಾಬ್ದಾರಿ ಅಧ್ಯಾಪಕರ ಮೇಲಿದೆ.

ನೀವು ಸಾಹಿತ್ಯ ಅಕಾಡೆಮಿಯ ಕನ್ನಡ ಮತ್ತು ದಕ್ಷೀಣ ಪ್ರಾಂತ ಭಾಷೆಗಳ ಸಂಚಾಲಕರೂ ಹೌದು.

ನಿಮಗೆ ಈ ವಿಚಾರ ತಿಳಿದಾಗ ನಿಮ್ಮ ಮೊದಲ ಪ್ರತಿಕ್ರಿಯೆ ಏನು?

ಇದು ಅನಿರೀಕ್ಷಿತ. ಈ ವಿಷಯ ನನಗೆ ತಿಳಿದಾಗ ಅಮೆರಿಕದಲ್ಲಿದ್ದೆ ಅದೂ ರಾತ್ರಿ ೧- ೨೫. ನಾನು ಇದನ್ನು ಯಾವತ್ತು ನಿರೀಕ್ಷಿಸಿರಲಿಲ್ಲ ಕೂಡ. ಸಹಜವಾಗಿಯೇ ನನಗೆ ಸಂತೋಷವಾಯ್ತು. ಯಾಕೆಂದರೆ ರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಸರಿಯಾಗಿ ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದಕ್ಕೆ. ನನ್ನ ಓದು, ಅನುಭವದಲ್ಲಿ ಕರ್ನಾಟಕದ ಆಚೆಗೆ ಕನ್ನಡಕ್ಕೆ ತುಂಬಾ ಪ್ರಾಮುಖ್ಯತೆ ಇದೆ, ನಿರೀಕ್ಷೆಗಳು ಇವೆ. ಹೀಗಾಗಿ ಅದನ್ನು ಸರಿಯಾಗಿ ಪ್ರತಿನಿಧಿಸುವ ಕೆಲಸ ಮುಖ್ಯವಾಗಿ ಆಗಬೇಕಿದೆ. ಇದು ಎರಡು ಬಗೆಯಲ್ಲಿ ಆಗಬೇಕಿದೆ.೧ ಕೇಂದ್ರದಿಂದ ರಾಷ್ಟ್ರಮಟ್ಟದಲ್ಲಿ ಕನ್ನಡಕ್ಕೆ ಸಿಗಬೇಕಾದ ಮನ್ನಣೆ ಸೌಲಭ್ಯಗಳನ್ನು ಪಡೆದುಕೊಳ್ಳುವುದು೨. ಕನ್ನಡವನ್ನು ಬೇರೆ ಬೇರೆ ನೆಲೆಗಳಲ್ಲಿ ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವುದು.

ನಾನು ಹಲವು ಕೃತಿಗಳನ್ನು ಅನುವಾದಿಸಿದ್ದೇನೆ ಸಿಂಗರ್, ಮಾರ್ಕ್ವೆಜ್ ಮುಂತಾದವರನ್ನು. ಅಂದರೆ ಇಂಗ್ಲಿಶ್‌ನಿಂದ ಆಗಿದೆ, ರಶ್ಯನ್ ನಿಂದ ಆಗಿದೆ; ಆದರೆ ತಮಿಳಿನಿಂದ ತೆಲಗುನಿಂದ ಮಲಯಾಳಂನಿಂದ ಆಗಬೇಕಾದಷ್ಟು ಆಗಿಲ್ಲ. ಹಾಗೆಯೇ ಕನ್ನಡದ ಕೃತಿಗಳು ತಮಿಳು, ತೆಲುಗು, ಮಲೆಯಾಳಂನಂಥ ಭಾಷೆಗಳಿಗೆ ಅನುವಾದವಾಗಬೇಕಿದೆ

ಕನ್ನಡದ ಜನ ಮಾನಸ ಸಾಹಿತ್ಯ ಅಕಾಡೆಮಿಗೆ ಯಾವ ರೀತಿಯ ಸಹಕಾರ ನೀಡಬೇಕೆಂದು ಬಯಸುತ್ತೀರಿ?

ಈಗ ಸಾಹಿತ್ಯ ಅಕಾಡೆಮಿ ಮತ್ತು ಜನಸಾಮಾನ್ಯರ ನಡುವೆ ನಿಕಟವಾದ ಸಂಬಂಧ ಇಲ್ಲ. ಎಷ್ಟೋ ಜನರಿಗೆ ಸಾಹಿತ್ಯ ಅಕಾಡೆಮಿ ಎಂಬುದೊಂದು ಇದೆ ಎಂಬುದೇ ಇಲ್ಲ. ಸಾಹಿತ್ಯ ಅಕಾಡೆಮಿ ಅತ್ಯುತ್ತಮವಾದವಾದ ಪುಸ್ತಕಗಳನ್ನು ಪ್ರಕಟಿಸುತ್ತದೆ. ಯಥಾ ಪ್ರಕಾರ ಅವು ತಲುಪುತ್ತಿಲ್ಲ. ಕನ್ನಡದ ಜನ ಸಂವೇದನಾಶೀಲರು ಪ್ರೀತಿಯಿಂದ ಏನನ್ನು ಬೇಕಾದರೂ ಸ್ವೀಕರಿಸಬಲ್ಲವರು. ಒಂದು ಹಂತದಲ್ಲಿ ಎಲ್ಲವೂ ತಮ್ಮ ಬಳಿಗೆ ಬರಬೇಕೆಂದು ಬಯಸುವವರು. ಆದರೆ ಇವತ್ತು ಹಾಗಿಲ್ಲ ನಾವೇ ಕೆಲವನ್ನು ಹೋರಾಟ ಮಾಡಿಯಾದರೂ ಗಳಿಸಿಕೊಳ್ಳಬೇಕು ಅಥವಾ ಉಳಿಸಿಕೊಳ್ಳಬೇಕು.

ಇಂಥ ಕೆಲಸಕ್ಕೆ ಸಾಹಿತ್ಯ ಅಕಾಡೆಮಿ ಸೇತುವೆ ಆಗಬೇಕು. ನಾನು ನಾಲ್ಕೂ ಭಾಷೆಗಳಿಗೂ ಸಂಚಾಲಕನಾಗಿರುವುದರಿಂದ ಈ ಅವಕಾಶವನ್ನು ಪಡೆದುಕೊಂಡು ದ್ರಾವಿಡ ಭಾಷೆಗಳ ಮಧ್ಯೆ ಕನ್ನಡವನ್ನು ಕಟ್ಟುವ ಕೆಲಸವನ್ನು ಮಾಡಬೇಕೆಂಬ ಆಸೆ ನನಗಿದೆ. ಇವತ್ತಿನವರೆವಿಗೂ ಆರ್ಯರ ಪ್ರಭಾವ ನಮ್ಮ ಮೇಲೆ ಸಾಕಷ್ಟಾಗಿದೆ. ಇದಕ್ಕಿಂತ ಭಿನ್ನವಾದ ದ್ರಾವಿಡ ಮೀಮಾಂಸೆಯನ್ನು ಕಟ್ಟುವ ಕೆಲಸವನ್ನು ಮಾಡುವ ಜರೂರು ಇದೆ. ಇದಕ್ಕೆ ಪಜ್ಞಾವಂತ ಜನರ, ಮಾಧ್ಯಮದವರ, ಜನಪ್ರತಿನಿಧಿಗಳ ಸಹಕಾರ ಬೇಕು.

2 Comments

  1. Anonymous
    August 23, 2016
  2. kvtirumalesh
    August 23, 2016

Add Comment

Leave a Reply