Quantcast

ರಯೋ ಒಲಿಂಪಿಕ್ಸ್ : ಒಂದು ಪೋಸ್ಟ್ ಮಾರ್ಟಂ

rajaram tallur low res profile

ರಾಜಾರಾಂ ತಲ್ಲೂರು

ಒಟ್ಟು 550 ಕೋಟಿ ರೂಪಾಯಿಗಳ  Target Olympics Podium (TOP) ಖರ್ಚಿಗೆ ಎರಡು ಮೆಡಲ್ಲುಗಳನ್ನು ಸಂಪಾದಿಸಿಕೊಂಡ ಭಾರತ ತಂಡ ರಯೋದಿಂದ ವಾಪಸ್ ಬಂದಿದೆ. ಕಳೆದ ಒಲಂಪಿಕ್ಸಿನಿಂದೀಚೆಗೆ ಕ್ರೀಡೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದಲ್ಲಿ ಸುರಿದಿರುವ ಹಣವನ್ನೂ ಈ ಖರ್ಚಿನ ಬಾಬ್ತಿಗೆ ಸೇರಿಸಿದರೆ,ಮಹಾಸಾಗರದಲ್ಲಿ ಬರೀ ಎರಡು ಮುತ್ತುಗಳನ್ನು ಹೆಕ್ಕಿತಂದಂತಾಗಿದೆ.

ಸರಕಾರದ ನಿರೀಕ್ಷೆಗಳೇನಿದ್ದವು ಮತ್ತು ಅಂತಿಮ ಫಲಿತಾಂಶ ಏನು ಎಂಬ ವಾಸ್ತವಗಳೀಗ ಸರಕಾರದ ಎದುರಿದೆ, 2020ರಲ್ಲಿ ಟೋಕಿಯೋ ವಿಮಾನ ಹತ್ತುವ ಮುನ್ನ ಏನೇನು ಮಾಡಬೇಕೆಂಬುದನ್ನೂ ನಿರ್ಧರಿಸುವುದಕ್ಕೆ ಅಲ್ಲಿ ಜವಾಬ್ದಾರಿ ಹೊತ್ತವರಿದ್ದಾರೆ.

avadhi-column-tallur-verti- low res- cropಅಧಿಕಾರಿಗಳ ಒಲಿಂಪಿಕ್ಸ್

ಕ್ರೀಡೆಗಳನ್ನು ಬಿಟ್ಟು, ನಮ್ಮ ಅಧಿಕಾರಿಗಳ ಒಲಂಪಿಕ್ಸ್ ಕಡೆಗೊಮ್ಮೆ ಗಮನ ಹಾಯಿಸೋಣ. ವ್ಯವಸ್ಥೆಗೆ ಏನಾದ್ರೂ ಸ್ವಲ್ಪ ವಿವೇಚನೆ ಇದ್ದರೆ, ಈ ಅಧಿಕಾರಿಗಳಿಂದ ಈ ನಂದೂರಾಯನ ದರ್ಬಾರಿನ ಕುರಿತು ಸಮಜಾಯಿಷಿಯನ್ನಾದರೂ ಕೇಳಿ ಪಡೆಯಬೇಕಿದೆ. ಇಲ್ಲಿ ಕೆಳಗಿರುವುದು ಈ ತನಕ ಮಾಧ್ಯಮಗಳ ಗಮನಕ್ಕೆ ಬಂದ ಪಟ್ಟಿ. ಅಂದರೆ ಇದಿನ್ನೂ ಟಿಪ್ ಆಫ್ ದಿ ಐಸ್ ಬರ್ಗ್ ಮಾತ್ರ!

* ಸ್ವಾತಂತ್ರ್ಯದ ದಿನ ಬ್ರೆಜಿಲ್ ದೂತಾವಾಸಕ್ಕೆ ಒಳ್ಳೆಯ ಡಿನ್ನರ್ ಇದೆಯೆಂದು ಲಿಖಿತ ಆಹ್ವಾನದ ಮೇರೆಗೆ ಹೋದ ಕ್ರೀಡಾಳುಗಳಿಗೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸಿಕ್ಕಿದ್ದು ಬರೀ ಶರಬತ್ತು, ಕಡ್ಲೆಬೀಜ, ಚಾಕೋಲೇಟು.

* ಸ್ವತಃ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರ ಪಟಾಲಂ ಒಲಿಂಪಿಕ್ ಗ್ರಾಮದಲ್ಲಿ ಸಿಕ್ಕ ಸಿಕ್ಕ ಕಡೆ ಅನಧಿಕ್ರತವಾಗಿ ನುಗ್ಗಲು ಹೋಗಿ, ಒಲಂಪಿಕ್ಸ್ ಸಮಿತಿಯಿಂದ ಎಚ್ಚರಿಕೆಯ ‘ಮರ್ಯಾದೆ’ ಪಡೆಯಿತು.

*  ಒಲಿಂಪಿಕ್ಸಿಗೆ ಹೋದ ವೈದ್ಯರ ತಂಡದಲ್ಲಿದ್ದ  ವೈದ್ಯರಲ್ಲಿ ಡಾ| ಪವನ್ ದೀಪ್ ಇಂಡಿಯನ್ ಒಲಂಪಿಕ್ಸ್ ಅಸೋಸಿಯೇಷನ್ನಿನ ಉಪಾಧ್ಯಕ್ಷ ತರ್ಲೋಚನ್ ಸಿಂಗ್ ಅವರ ಪುತ್ರ. ಇನ್ನೊಬ್ಬ ವೈದ್ಯ ಕರ್ನಲ್ ಆರ್ ಎಸ್ ನೇಗಿ, ಒಲಂಪಿಕ್ಸ್ ಅಸೋಸಿಯೇಷನ್ನಿನ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅವರ ದೂರದ ಸಂಬಂಧಿ. ತಮಾಷೆಯೆಂದರೆ, ಅವರಿಬ್ಬರೂ ರೇಡಿಯಾಲಜಿಸ್ಟ್ ಗಳು (ಅಂದರೆ ಎಕ್ಸರೇ ತಜ್ನರು)!!

* ಒಂದು ಕೋಟಿ ಖರ್ಚು ಮಾಡಿ ಹರ್ಯಾಣಾದಿಂದ ಹೋದ ಒಂಭತ್ತು ಮಂದಿ ಅಧಿಕಾರಿಗಳ ತಂಡದ ನಾಯಕ ಅಲ್ಲಿನ ಕ್ರೀದಾ ಸಚಿವ ಅನಿಲ್ ವಿಜ್. ಈ ತಂಡ ಅಲ್ಲಿದ್ದಷ್ಟೂ ದಿನ ಅಲ್ಲಿ ಊರುಸುತ್ತುವ, ಮಜಾ ಉಡಾಯಿಸುವ ಕಾರ್ಯಕ್ರಮಗಳಲ್ಲಿ ವ್ಯಸ್ತವಾಗಿತ್ತಂತೆ! ಈ ಪಟ್ಟಿಯಲ್ಲಿ ಹರ್ಯಾಣಾದ ನ್ಯಾಷನಲ್ ರೈಫಲ್ಸ್ ಅಸೋಸಿಯೇಷನ್ ಅಧ್ಯಕ್ಷ ರಣೀಂದರ್ ಸಿಂಗ್, ಹರ್ಯಾಣಾ ಮುಖ್ಯಮಂತ್ರಿ ಮಗ ಅಭಯ್ ಸಿಂಗ್ ಚೌತಾಲಾ ಅವರೂ ಬರುತ್ತಾರೆ.

rio2* ರಯೋದಲ್ಲಿರುವ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ನಾರಾಯಣ ರಾಮಚಂದ್ರನ್ ಅವರು ಕೊನೆಯ ತನಕವೂ ಒಬ್ಬನೇ ಒಬ್ಬ ಕ್ರೀಡಾಳುವನ್ನು ಭೇಟಿ ಮಾಡಿಲ್ಲ. ಹಾಗೆಂದು ಶೂಟರ್ ಅಭಿನವ್ ಭಿಂದ್ರಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
* ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರ ಫಿಸಿಯೋತೆರಪಿಸ್ಟ್ ರಯೋ ತಲುಪಿದ್ದು, ಆಕೆ ಫೈನಲ್ಲಿಗೆ ಏರಿದ ಬಳಿಕ!

* ಮಹಿಳೆಯರ ಮ್ಯಾರಥಾನ್ (43 ಕಿಮೀ) ನಲ್ಲಿ ಪಾಲ್ಗೊಂಡ ಒ. ಪಿ. ಜೈಷ ಅವರಿಗೆ ಓಡುವಾಗ ಅಗತ್ಯ ದೇಹದ್ರವಗಳನ್ನು ಪೂರೈಸಲು ಯಾರೂ ಲಭ್ಯರಿಲ್ಲದೇ, ಆಕೆ ನಿರ್ಜಲೀಕರಣದಿಂದಾಗಿ ಮೂರುತಾಸು ಮೂರ್ಛೆತಪ್ಪಿದ್ದರು. ಎರಡೂವರೆ ಕಿಲೋಮೀಟರಿಗೊಮ್ಮೆ ದ್ರವಗಳ ವ್ಯವಸ್ಥೆ ಮಾಡುವ ಬದಲು ಎಂಟು ಕಿ.ಮೀಗೊಂದು ಮಾಡಲಾಗಿತ್ತಾದರೂ, ಅಲ್ಲಿ ನಿರ್ವಹಣೆಗೆ ಯಾರೂ ಲಭ್ಯರಿರಲಿಲ್ಲ.

* ಪುರುಷರ ಹಾಕಿ ತಂಡಕ್ಕೆ ಸ್ಪರ್ಧೆಯ ಮೊದಲ ದಿನ ಸಂಜೆಯ ತನಕವೂ ಕಿಟ್ ತಲುಪಿರಲಿಲ್ಲ. ಕೊನೆಯ ಕ್ಷಣದಲ್ಲಿ ಕೋಚ್ ಸ್ವತಃ ಓಡಾಡಿ ವ್ಯವಸ್ಥೆ ಮಾಡಿಕೊಳ್ಳಬೇಕಾಯಿತು.

* ಬಾಕ್ಸಿಂಗ್ ಸ್ಪರ್ಧಾಳುಗಳಿಗೆ ದೇಶದ ಹೆಸರಿರುವ ನಿಯಮಬದ್ಧ ಜರ್ಸಿ ಒದಗಿಸದಿದ್ದದ್ದರಿಂದ, ಅವರು ಅನರ್ಹರಾಗುವ ಸಾಧ್ಯತೆ ಇತ್ತು. ಕೊನೆಯ ಕ್ಷಣದಲ್ಲಿ ಇದನ್ನು ಸರಿಪಡಿಸಿ, ಅಪಾಯ ತಪ್ಪಿತು.

* ಒಲಿಂಪಿಕ್ಸ್ ಗ್ರಾಮದ ಕ್ರೀಡಾಳು ವಸತಿಗಳಲ್ಲಿ ಸುಸೂತ್ರ ಹಾಸಿಗೆಗಳಾಗಲೀ, ಖುರ್ಚಿಗಳಾಗಲೀ ಇರಲಿಲ್ಲ. ಆದರೆ, ಅಧಿಕಾರಿಗಳಾಗಿ ಹೋದವರೆಲ್ಲ ತಾರಾ ಹೊಟೇಲುಗಳಲ್ಲಿ ವೈಭೋಗ ಅನುಭವಿಸುತ್ತಿದ್ದರು.

rio1

Add Comment

Leave a Reply