Quantcast

ಅಥವಾ ಅದು ‘ರಂಗಿತರಂಗ’ದ ಭೂತ ಇರಬಹುದಾ..??

prasad shenoy r kಪ್ರಸಾದ್ ಶೆಣೈ ಆರ್ ಕೆ

ಆ ಗಾಡಾಂಧಕಾರದಲ್ಲಿ ಮೂರ್ತಿಗೆ ಕಾಣಿಸಿದ್ದೇನು?

ಆ ಬೆಟ್ಟ, ಅಮವಾಸ್ಯೆಯ ರಾತ್ರಿಯಲ್ಲಿ ಭೀಕರವಾಗಿ ಕಂಡು ದೂರದಲ್ಲಿ ಯಾರೋ ನಿಂತಿದ್ದಾರೆ ಅಂತ ಭಯ ಹುಟ್ಟಿಸುತ್ತಿತ್ತು.. ದಾರಿ ಪೂರ್ತಿ ನೀರವ, ಮೊದಲ ಮಳೆಗೆ ರಭಸಗೊಂಡು ಎಲ್ಲೋ ದೂರದಲ್ಲಿ ಹರಿಯುತ್ತಿರುವ ಹಳ್ಳದ ಜೋಗುಳ ಹಾಗೇ ಕೇಳಿಸುತ್ತಿತ್ತು. ಜೊತೆಗೆ ಜೀರುಂಡೆಗಳು, ದೊಡ್ಡ ಮಂಡೆಗಪ್ಪೆಗಳು ಮೃದಂಗ ಬಾರಿಸುತ್ತಲೇ ಇತ್ತು. ಒಮ್ಮೊಮ್ಮೆ ನಕ್ಷತ್ರ ರಾಶಿಗಳ ಅಂಚಿನಲ್ಲಿ ಮಿನುಗುತ್ತಿದ್ದ ಆ ನಕ್ರೆ ಬೆಟ್ಟ ನೋಡಿದರೆ ಮೈ ಮನಸ್ಸು ದಿಗ್ಮೂಢವಾಗಿ ಮನಸ್ಸಿನೊಳಗೇ ಭಯ, ಸೋಜಿಗ, ಎಲ್ಲೋ ಕೇಳಿದ ಯಾವುದ್ಯಾವುದೋ ಕತೆಗಳು, ನೆನೆಪಾಗಿ ಒಳಗೆ ಏನೇನೋ ಆಗುತ್ತಿತ್ತು.

tundu hyklu…ಗಂಟೆ ಸುಮಾರು ರಾತ್ರಿ 2.30 ಇರಬೇಕು, ಪಕ್ಕದ ಊರಲ್ಲಿ ಆವತ್ತು ರಾತ್ರಿ ಪೂರ್ತಿ ಬಯಲಾಟ, ಆಟವೇನೋ ಚೆನ್ನಾಗಿತ್ತು ಆದರೆ 1 ಗಂಟೆಗೆ ಹೊತ್ತಿಗೆ ಕಣ್ಣು ತೂಗಲು ಶುರುವಾಗಿ ಬೈಕ್ ಹತ್ತಿಕೊಂಡು ಮನೆ ದಾರಿ ಹಿಡಿದೇ ಬಿಟ್ಟೆ.

ಸುಮಾರು 2 ಗಂಟೆ ಹೊತ್ತಿಗೆ ರಕ್ಷಿತಾರಣ್ಯ ವ್ಯಾಪ್ತಿಗೆ ಒಳಪಡುವ ಪಳ್ಳಿ ಕಾಡು ದಾಟಿ ಕುರುಚಲು ಕಾಡಿನ ಮಗ್ಗುಲಿಗೆ ಬಂದಿದ್ದೆನಷ್ಟೇ. ಅಷ್ಟರಲ್ಲಿ ಕಾಡಿನ ಸೆರಗಲ್ಲಿ ತುಳುನಾಡಿನ ಸಂಪ್ರದಾಯದಂತೆ ಭೂತದ ವೇಷ ಹಾಕಿದ್ದ ಆಕೃತಿಯೊಂದು ನನ್ನ ಬೈಕಿನ ಮುಂದಿನಿಂದ ತಟಕ್ಕನೇ ಹಾದು ಎತ್ತಲೋ ಹೋದಂತಾಯ್ತು…

ಆ ನಿರ್ಜನ ರಾತ್ರಿ, ನನ್ನ ಬೈಕ್ ನ ಹೆಡ್ ಲೈಟ್ ನ ಅಲ್ಪ ಸ್ವಲ್ಪ ಬೆಳಕು ಹಾದಿದ್ದರಿಂದ ಭೂತದ ವೇಷ ಅಂತ ಅರಿವಾಗಿ ಕುಸಿದು ಹೋದೆ. ಅಲ್ಲದೇ ವಿಚಿತ್ರ ಹೆಜ್ಜೆ ಸಪ್ಪಳವೊಂದು ಕೇಳಿಸಿ ನಖ ಶಿಖಾಂತ ನಡುಗಿದೆ. ನೀವು ಹೇಳಬಹುದು ಮೊದಲೇ ನಿದ್ರೆಯಲ್ಲಿ ತೂಗುತ್ತಿದ್ದಿ ಅಂತ ಹೇಳ್ತಿ ಪುಣ್ಯಾತ್ಮ… ಇನ್ನು ಭೂತ ಅಂತೆ ಭೂತ… ನಿದ್ರೆ ಕಣ್ಣಿನಲ್ಲಿ ಹಾಗೆಲ್ಲಾ ಕಾಣುತ್ತೆ. ಭ್ರಮೆ ಅವತರಿಸುವುದೇ ಆಗ ಅಂತ ನೀವು ನನ್ನನ್ನು ತರಾಟೆಗೆ ತೆಗೆದುಕೊಳ್ಳಬಹುದು.

ಆದರೆ ಇಲ್ಲಿ ನಿಜ ಕತೆಯನ್ನು ಹೇಳೋದಷ್ಟೇ ಮುಖ್ಯ ನಂಗೆ. ಮುಂದೆ ಹೇಳುತ್ತೇನೆ ಕೇಳಿ… ಬರೀ ಆ ಆಕೃತಿ ಕಂಡಿದ್ದು ಭ್ರಮೆಯೇ ಇರಬಹುದು ಅಂತ ನಾನು ಆ ಕ್ಷಣಕ್ಕೆ ಅಂದುಕೊಂಡೆ. ಆದರೆ ಮುಂದೆ ವೇಗದಿಂದ ಬೈಕ್ ಓಡಿಸಿದೆ… ಸುಮಾರು 2.ಕಿ.ಮೀ ಓಡಿತ್ತೇನೋ? ಆಗಲೇ… ಅದೇ ಆಕೃತಿ ಯಾವ ದಿಕ್ಕಿಗೆ ಹೋಗಿತ್ತೋ ಅದೇ ದಿಕ್ಕಿನಿಂದ ಪ್ರತ್ಯಕ್ಷವಾಗಿ ನನ್ನ ಬೈಕ್ ಗೆ ಎದುರಾಗಿ ಸರಿದು ಹೋಯಿತು.

ಅದೇ ಆಕೃತಿ…ಅಬ್ಬಾ…2 ಕಿ.ಮೀ ಹಿಂದೆ ಸಿಕ್ಕ ಆಕೃತಿ. ಇಲ್ಲೂ ಹೇಗೆ ಬಂತು ಅಷ್ಟು ಬೇಗ. ಚಿಂತಿಸುತ್ತಲೇ ಹೋದಂತೆಲ್ಲಾ ದಂಗು ಆವರಿಸಿಕೊಳ್ಳುತ್ತಿತ್ತು. ನೀವು ಎಷ್ಟೇ ಧೈರ್ಯಶಾಲಿ ಆಗಿರಿ ಆದರೆ ಒಬ್ಬರೇ ಈ ಹಾದಿಯಲ್ಲಿ ಅದೂ ಕ್ಷಣ ಕ್ಷಣವೂ ನಿಗೂಡವಾಗಿಯೇ ಹೋಗುವ ಈ ಹಾದಿಯಲ್ಲಿ ಒಂಟಿ ಪಯಣ ಮಾಡುತ್ತಿದ್ದಾಗ ಈ ತರ ಅನುಭವವಾದರೆ ಹೇಗಾಗಬೇಡ, ಈ ಕಾಡು ಸರಿದು ಹೋದರೆ ಸಾಕು ಅನ್ನಿಸುತ್ತಿತ್ತು.

ನಾನು ದಾರಿ ಸರಿದು ಬಂದ ಆ ವ್ಯಾಪ್ತಿಯಲ್ಲಿ ಒಂದೂ ಮನೆಗಳೂ ಇರಲಿಲ್ಲ. ಇರೋದಕ್ಕೂ ಸಾಧ್ಯವಿಲ್ಲ ಅಂತಹ ಪ್ರದೇಶ ಅದು. ಅಂತದ್ದರಲ್ಲಿ ಈಗ ಕಾಣಿಸಿದ ಆಕೃತಿ ವೇಷ ತೊಟ್ಟ ಮನುಷ್ಯನಾಗಿರಲು ಸಾಧ್ಯವಾ? ಅಥವಾ ‘ರಂಗಿತರಂಗ’ದ ಭೂತದಂತೆ ಅಂಗಾರನಂತಹ ಮನುಷ್ಯನನ್ನು ಹುಡುಕಿಕೊಂಡು ಬರುತ್ತಿದೆಯಾ ಹೇಗೆ? ಅಂತ ಭಯಗೊಂಡು ಬೈಕು ಓಡಿಸಿದೆ.

gear…ಹಾಗೇ ಓಡಿಸುವಾಗ ಒಂದು ತಿರುವು ಸಿಗುತ್ತದೆ, ಆ ತಿರುವಿನಲ್ಲಿ ಹೋದರೆ ಬೇಡ ಬೇಡವೆಂದರೂ ದೂರದಲ್ಲಿ ಕಾಡು ಕಳೆದು ಮೆತ್ತಗಾಗಿ ಬಿದ್ದಿದ್ದ ವಿಶಾಲ ಬಯಲು ಕಾಣಿಸಿಯೇ ಕಾಣಿಸುತ್ತದೆ. ಅಲ್ಲೂ ಒಬ್ಬರದ್ದೂ ಮನೆಯಿಲ್ಲ.

ಅದು ಬಂಡೆಗಲ್ಲುಗಳ ಸೆರಗು, ಅತ್ತ ನೋಡುತ್ತಿದ್ದಂತೆಯೇ ಸಣ್ಣಗಿನ ಪಂಜಿನಂತಹ ಬೆಳಕೊಂದು ಕಾಣಿಸಿತು. ಆ ಬೆಳಕು ಒಮ್ಮೆ ಜಿಗ್ಗಾಗಿ ಮತ್ತೊಮ್ಮೆ ಸಣ್ಣಗಾಗಿ ಕಲ್ಲು ಬೆಟ್ಟ ಹತ್ತುತ್ತಲೇ ಹೋಯ್ತು. ಅಂತಹ ಬೃಹದಾಕಾರದ ಕಲ್ಲು ಬೆಟ್ಟವನ್ನು ಈ ಮಳೆಗಾಲದಲ್ಲಿ ಯಾವ ಸಾಮಾನ್ಯನೂ ಹತ್ತಲು ಸಾಧ್ಯವೇ ಇರಲಿಲ್ಲ. ಅಲ್ಲದೇ ಅಲ್ಲಿಗೆ ಮನುಷ್ಯರೂ ಆ ರಾತ್ರಿ ವೇಳೆ ಹೋಗುವುದೂ ಅಸಾಧ್ಯ ಎನ್ನುವುದು ನಂಗೆ ಯಾವತ್ತೊ ಗೊತ್ತಿತ್ತು.

ಅಷ್ಟೊತ್ತಿಗೆ ಉರಿಯುತ್ತಿದ್ದ ಆ ಒಂದೇ ಒಂದು ಬೆಳಕು ಎರಡು ಮೂರು ಕಡೆಗಳಲ್ಲಿ ಕಾಣಿಸಿ ಏಕಕಾಲಕ್ಕೆ ಸಣ್ಣಗಾಗಿ, ಮತ್ತೆ ಜಿಗ್ಗೆಂದು ಬೆಳಗಿ ಕೊನೆಗೆ ಆಕಾಶದಲ್ಲಿ ಸರಿದುಹೋದಂತೆಯೋ? ಬೆಟ್ಟದ ಮೇಲೆ ಕರಗಿ ಹೋದಂತೆಯೋ ಒಟ್ಟಾರೆ ಅದು ಮತ್ತೆ ಕಾಣಿಸಲಿಲ್ಲ. ಎದೆ ದಸಕ್ಕೆಂದಿತು. ದೊಡ್ಡ ವಿಷಯವಾ ಮಾರಾಯಾ… ಇದಕ್ಕೆಲ್ಲಾ ಹೆದರೋದಾ? ಅಂತ ನೀವು ನಿಡುಸುಯ್ಯಬೋದು.

ಆದರೆ ನೆನಪಿರಲಿ. ಆ ಗಾಢಾಂದಕಾರ, ಕಾಡು, ಎಲ್ಲೋ ಏನೇನೋ ಬಿದ್ದು ಸರಿದುಹೋಗುವ ವಿಚಿತ್ರ ಸದ್ದು, ಬ್ರಹ್ಮ ರಾಕ್ಷಸನಂತೆ ನಿಂತ ಆ ದೊಡ್ಡ ಕಲ್ಲಿನ ಬೆಟ್ಟ, ಜೊತೆಗೆ ಒಂದು ಭಯಾನಕ ಮೌನ ಇವೆಲ್ಲಾ ಅನುಭವಿಸಿದರೆ ಗೊತ್ತಾಗ್ತದೆ ನಿಮಗೆ ನಮ್ಮೂರಿನ ಆ ರಹಸ್ಯ ಸ್ಥಳ ಹೇಗಿದೆ ಅಂತ. ಒಮ್ಮೆ ಬನ್ನಿ ರಾತ್ರಿ ಒಟ್ಟಿಗೇ ಹೋಗೋಣ.

ಗೆಳೆಯ ಮೂರ್ತಿ ತನ್ನ ಅನುಭವದ ಕತೆ ನಿಲ್ಲಿಸಿದ, ಮೊನ್ನೆ ತಾನು ನೋಡಿದ್ದು ಭೂತವೆಂದೂ. ಅಲ್ಲಿ ತುಂಬಾ ಮಂದಿಗೆ ವಿಚಿತ್ರ ಅನುಭವಗಳಾಗುತ್ತಿದೆ ಎಂದೂ ಒತ್ತಿ ಹೇಳಿದಾಗ,  ನಾನು ಮತ್ತೂ ಸೋಜಿಗಗೊಂಡೆ. ಭೂತ ಇದೆಯೋ? ಇಲ್ವಾ ಅನ್ನೋದಕ್ಕಿಂತಲೂ ಇಂತಹ ಕತೆಗಳನ್ನು ಕೇಳುತ್ತಾ, ಸವಿಯುತ್ತಾ, ಬದುಕಿನ ನಿತ್ಯ ಪ್ರೀತಿಗೆ ಕೂತೂಹಲದ ರೆಕ್ಕೆ ಮೂಡಿಸೋದಷ್ಟೇ ಮುಖ್ಯ ಅನ್ನಿಸಿತು. ಆ ಭೂತ ನಂಗೂ ಕಾಣಿಸೋ ಮಾರಾಯ ಒಮ್ಮೆ ಆ ಕಾಡಿನತ್ತಿರ ಹೋಗೋಣ ಅಂದೆ… ಒಪ್ಪಿದ.

…ನೀವೂ ಭೂತ ಗೀತಾ ನಂಬ್ತಿರೋ ಗೊತ್ತಿಲ್ಲ ಆದರೆ ಇಂತಹ ಒಂದು ದಟ್ಟ ರಾತ್ರಿ ಸಿಗುವ ಭಯಾನಕ ಅನುಭವಗಳಲ್ಲೂ ಒಂದು ತರ ಥ್ರಿಲ್ಲಿದೆ ಅಲ್ಲವಾ? ಇಂತಹ ಅನುಭವದ ರೋಚಕ ಕತೆಗಳು ತುಂಬಾ ಇದೆ. ಮುಂದಿನ ಅಂಕಣದಲ್ಲಿ ಇದೇ ದಾರಿಯಲ್ಲಿ ಆದ ಮತ್ತೊಂದು ವಿಚಿತ್ರ ಕತೆಯೊಂದನ್ನು ಹೇಳುತ್ತೇನೆ.

One Response

  1. Bhagyachikkanna
    August 24, 2016

Add Comment

Leave a Reply