Quantcast

ಪ್ರೀತಿಯನ್ನೇ ಹುಡುಕುತ್ತಾ ಹೋದವರ ಕಥೆ!

lahari thantri

ಲಹರಿ ತಂತ್ರಿ 

ಅದೊಂದು ಬದುಕ ತುಂಬಾ ಪ್ರೀತಿಯನ್ನೇ ಹುಡುಕುತ್ತಾ ಹೋದವರ ಕಥೆ!

ಪ್ರೀತಿಯೆಂಬ ಯುದ್ಧದಲ್ಲಿ ಗೆಲ್ಲುತ್ತಲೇ ಸೋತವರ ಕಥೆ.  ಜಗತ್ತು ತೊಡಿಸಿದ ಮಹಾಪತಿವ್ರತೆಯರೆಂಬ ಹಣೆಪಟ್ಟಿಯ ಭಾರ ಹೊರಲಾರದೇ ನಲುಗಿದವರ ಕಥೆ.

ಅಲ್ಲಿದ್ದವರೈವರು. ಸ್ವರ್ಗದ ವಸಂತೋತ್ಸವದ ಸಂಭ್ರಮಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುತ್ತಾ ಗತಕ್ಕೆ ಜಾರುತ್ತಾರೆ ಈ ನಾರೆಯರು.

anahata4ರಾಮಾಯಣದುದ್ದಕ್ಕೂ ಕಾಡುವ ಊರ್ಮಿಳೆ ತನ್ನ ವೇದನೆಗಳ ನಿವೇದಿಸುವ ಪರಿ ಆತ್ಮೀಯವೆನಿಸಿದರೂ ನಮ್ಮದಾಗುವುದಿಲ್ಲ! ಪಾತ್ರಧಾರಿಗಳೆನಿಸುತ್ತಾರೆಯೇ ಹೊರತು ರಂಗದ ಮೇಲಿದ್ದವರು ಊರ್ಮಿಳೆಯೆನಿಸುವುದಿಲ್ಲ. ಆದರೂ ಊರ್ಮಿಳೆ ಮನ ಮುಟ್ಟುತ್ತಾಳೆ! ಮಾತುಗಳ ಮೂಲಕ, ಭಾವಗಳ ಮೂಲಕ ಅವಳ ಮೂಕ ಸಂವೇದನೆಗಳು ನೋಡುಗರನ್ನು ತಲುಪುತ್ತವೆ.

ಲಕ್ಷ್ಮಣ, ರಾಮನ ತಮ್ಮನಾಗಿ ಮಾತ್ರವಲ್ಲದೆ, ಊರ್ಮಿಳೆಯ ಗಂಡನೂ ಆಗಿದ್ದ ಎಂಬುದನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಹದಿನಾಲ್ಕು ವರ್ಷ ಪ್ರೀತಿಸುವ ಪತಿಯನ್ನು ಅಗಲಿ ಅರಮನೆಯಲ್ಲಿ ವನವಾಸ ಅನುಭವಿಸುವ ಹದಿನಾರರ ತುಂಬು ಹರೆಯದ ಹುಡುಗಿ ಊರ್ಮಿಳೆ. ದೇಹದ ಬಯಕೆಗಳ ಮೆಟ್ಟಿ ಪ್ರೀತಿಗೆ ಹಾತೊರೆಯುತ್ತಾ ಹಪಾಹಪಿಸುವ ಅವಳಿಗೆ ವನವಾಸದ ನಂತರವೂ ಗಂಡನಾಗಿ ಲಕ್ಷ್ಮಣ ದೊರೆಯುವುದೇ ಇಲ್ಲ!

ಚರಿತ್ರೆಯ ಪುಟಗಳಲ್ಲಿ ದಾಖಲಾಗುವ ರಾಮಾಯಣದ ಪಾತ್ರಗಳಲ್ಲಿ ಊರ್ಮಿಳೆ ಕಾಣುವುದೇ ಇಲ್ಲ. ‘ನೀನು ಲಕ್ಷ್ಮಣನ ಜೊತೆಗೆ ಕಾಡಿಗೆ ಹೋಗಿದ್ದರೆ, ಅಲ್ಲಿ ಮಾಯಾಜಿಂಕೆಯ ಬೇಟೆಯ ಸಮಯದಲ್ಲಿ ಸೀತೆಯ ಜೊತೆಯಿದ್ದಿದ್ದರೆ. ರಾವಣನ ಬಲೆಯಲ್ಲಿ ಸೀತೆ ಬೀಳದೇ ಹೋಗುತ್ತಿದ್ದಳಾ?’ ಎಂಬ ಮಂಡೋದರಿಯ ಪ್ರಶ್ನೆ ರಾಮಾಯಣವನ್ನು ನೋಡಬಹುದಾದ ಮತ್ತೊಂದು ಆಯಾಮವನ್ನು ತೋರಿಸುತ್ತದೆ.

ಪ್ರಶ್ನೆಗಳಲ್ಲಿಯೇ ಮುಳುಗೇಳುವ ಊರ್ಮಿಳೆಯ ನಂತರ ಉತ್ತರವಾಗಿ ಆವರಿಸಿಕೊಳ್ಳುವವಳು ಅಹಲ್ಯೆ! ತಾಯಿಯಿಲ್ಲದೆ ಆಶ್ರಮದಲ್ಲಿ ಬೆಳೆದ ಮಗು ಆಕೆ. ಆಶ್ರಮದ ಕಟ್ಟುಪಾಡಿಗೆ ಹೊಂದಲಾಗದೇ ಬಿಡುಗಡೆಗೆಂದು ಕಾಯುತ್ತಿರುವ ದಿನದಂದೇ ಜೀವನ ಪರ್ಯಂತದ ಬಂಧನಕ್ಕೆ ಒಳಗಾದವಳು. ಮೋಹಿಸದೇ ವರಿಸಿದ ಪತಿಯನ್ನು ಒಪ್ಪಲಾಗದೇ ಪ್ರತಿ ರಾತ್ರಿ ತನ್ನನ್ನು ತಾನೇ ದಹಿಸಿಕೊಂಡವಳು.

ಗೌತಮರ ಸನ್ಯಾಸತ್ವದ ಜೀವನವನ್ನು ಸಹಿಸಲಾರದೇ ಎದೆ ತುಂಬಾ ಪ್ರೀತಿ ನೀಡುವ ಜೀವಕ್ಕಾಗಿ ಕಾದ ನೆಲದಂತೆ ಕಾದವಳು! ಆಗ ಬಂದಿದ್ದ ಇಂದ್ರ. ಅವನ ಪ್ರೀತಿಗೆ, ಎದೆಯ ಹರವಿಗೆ, ತೋಳ ಬಿಸುಪಿಗೆ ಇಡಿ ಇಡಿಯಾಗಿ ತನ್ನನ್ನು ಅರ್ಪಿಸಿಕೊಂಡ ಅಹಲ್ಯೆಗೆ ಕಡೆಗೂ ಸಿಕ್ಕಿದ್ದು ಏಕಾಂತವೆಂಬ ಬಂಧನವಿಲ್ಲದ ಬಯಲು. ಇಂದ್ರನನ್ನು ಮೋಹಿಸಿದ್ದು ಹೌದು, ಅವನೊಡನೆ ಭೋಗಿಸಿದ್ದು ಹೌದು, ಇಂದ್ರನೆಂದು ತಿಳಿದೇ ಅವನೊಡನೆ ಪ್ರೀತಿಗೆ ಬಿದ್ದಿದ್ದು ಎಂಬುದನ್ನು ಇನಿತೂ anahata3ಅಂಜಿಕೆಯಿಲ್ಲದೆ ಹೇಳಿ ಉಳಿದದ್ದೆಲ್ಲವನ್ನೂ ಕಟ್ಟುಕಥೆ ಎಂದು ಸಾರಾಸಗಟಾಗಿ ತಿರಸ್ಕರಿಸಿ ಬಿಡುವ ಅಹಲ್ಯೆಯನ್ನು ಬಾಚಿ ತಬ್ಬಿಕೊಂಡುಬಿಡುವ ಮನಸ್ಸಾಗುತ್ತದೆ. ಗಂಡನ ನಿರಾಕರಣೆಗೆ ಒಳಗಾದ ಹೆಣ್ಣು ಪ್ರೀತಿಗಾಗಿ ಹಂಬಲಿಸಿದರೆ, ಕೈ ಚಾಚಿದರೆ ತಪ್ಪು ಎನ್ನುವ ಸ್ವಯಂಘೋಷಿತ ಬುದ್ಧಿಜೀವಿಗಳೆದುರಿಗೆ ‘ಅನಾಹತ’ ಬೇರೆಯದೆ ರೀತಿಯಾಗಿ ಎದ್ದು ನಿಲ್ಲುತ್ತದೆ.

ಕಡೆಗೆ ಬರುವವಳು ರಾಧೆ! ಅದೇ ನಡು ಮಧ್ಯಾಹ್ನದ ಕನಸಲ್ಲಿ ಬಂದು ಕೃಷ್ಣನ ಬಗ್ಗೆ ಕುತೂಹಲವ ಕೆರಳಿಸುವ ರಾಧೆ. ಮುರುಳಿಯ ಕೊಳಲ ನಾದಕ್ಕೆ ಮಾರುಹೋದವಳು, ಅವನ ಬೆಚ್ಚಗಿನ ಸ್ಪರ್ಶಕ್ಕೆ ಮಾರುಹೋದವಳು, ನವಿರು ಪ್ರೀತಿಗೆ ಮನಸೋತವಳು. ರಾಧೆ ಹೇಳುವ ಕಥೆ ಮನ ಕಲುಕುತ್ತದೆ! ಕೊಳಲ ಬಿಸುಟು ಹೊರಟ ಕೃಷ್ಣನನ್ನು ಒಮ್ಮೆ ತಡೆದು ನಿಲ್ಲಿಸುವ ಮನಸ್ಸಾಗುತ್ತದೆ. ‘ಮಥುರೆಗೆ ಹೋಗಬೇಡವೋ ಮಾಧವಾ.. ರಾಧೆ ನೋಯುತ್ತಾಳೆ’ ಎಂದು ಕೂಗಿ ಹೇಳುವ ಎಂದೆನಿಸುತ್ತದೆ.

ಕಡಲು ಸೇರುವ ಮೊದಲೇ ನದಿ ಬತ್ತಿದಂತೆ  ಪ್ರೀತಿಯನ್ನು ಪೂರ್ಣವಾಗಿ ತನ್ನದಾಗಿಸಿಕೊಳ್ಳುವ ಮೊದಲೇ ರಾಧೆ ಏಕಾಂಗಿಯಾಗುತ್ತಾಳೆ. ಕೊಳಲನೂದುವ ಉಸಿರಲ್ಲಿ ಬೆಂಕಿಯಿತ್ತೇ ಎಂಬುವಷ್ಟು ವಿರಹದಲ್ಲಿ ಬೇಯುತ್ತಾಳೆ! ‘ಯಾಕಾಗಿ ಬಂದೆ ನೀನು ಕೇಶವ. ಏನಾಗಿ ಹೋದೆ ನೀನು ಕೇಶವ. ‘ರಾಧೆ ಕಾಡುತ್ತಾಳೆ, ಕದಲಿಸುತ್ತಾಳೆ. ಕೃಷ್ಣ ಕರಗುತ್ತಾನೆ, ಕಣ್ಣೀರಾಗಿಸುತ್ತಾನೆ.

ಮಂಡೋದರಿ, ಗಾಂಧಾರಿಯರು ತಮ್ಮ ಕಥೆಗಳನ್ನು ವಿಸ್ತರಿಸದಿದ್ದರೂ ನೋವಿನ ಮಜಲುಗಳನ್ನು ಉಂಡ ಕುರುಹಾಗಿ ನಾಟಕದುದ್ದಕ್ಕೂ ಆಗಾಗ ಸುಳಿದಾಡುತ್ತಿರುತ್ತಾರೆ.

ಪುರಾಣದ ಸ್ತ್ರೀ ಪಾತ್ರಗಳ ಭಾವಕ್ಕೆ, ನೋವಿಗೆ ದನಿಯಾಗುವಲ್ಲಿ, ಹೊಸದೊಂದು ಆಯಾಮವನ್ನೇ ಕಟ್ಟಿಕೊಡುತ್ತಾ ಆಲೋಚನಾ ಲಹರಿಯನ್ನು ಸೆಳೆಯುವಲ್ಲಿ ನಾಟಕ ರಚನಕಾರರು ಗೆದ್ದಿದ್ದಾರೆ. ಪಾತ್ರಗಳಿಗೆ ಇನ್ನಷ್ಟು ಜೀವ ತುಂಬಬೇಕಿತ್ತು, ಮತ್ತಷ್ಟು ಅನುಭವಿಸಬೇಕಿತ್ತು ಎಂಬ ಆಕ್ಷೇಪಣೆಯ ಹೊರತಾಗಿಯೂ ನಾಟಕ ಗೆಲ್ಲುತ್ತದೆ. ರಂಗಸಜ್ಜಿಕೆ, ವಸ್ತ್ರವಿನ್ಯಾಸ, ಪ್ರಸಾಧನ ಎಲ್ಲವೂ ಅಚ್ಚುಕಟ್ಟು. ಒಟ್ಟಾರೆಯಾಗಿ ‘ಅನಾಹತ’ ಅವ್ಯಾಹತವಾಗಿ ಮನಸ್ಸನ್ನು ತುಂಬಿಕೊಳ್ಳುತ್ತದೆ.

One Response

  1. Mahesh Kempegowda
    April 7, 2017

Add Comment

Leave a Reply