Quantcast

ನನ್ನನ್ನೇ ಅಲ್ಲವೇ ನಾನು ಹುಡುಕುತ್ತಿರುವುದು..

ನಾನು ಎಲಿದ್ದೇನೆ, ಯಾವ ಕಾಲದ ಉಯ್ಯಾಲೆಯಲ್ಲಿ ಜೀಕಿಸಿಕೊಳ್ಳುತ್ತಾ ತತ್ಪರಳಾಗಿದ್ದೇನೆ ಎಂದು ಕೆಲವೊಮ್ಮೆ ನನಗೇ ಗೊಂದಲವಾಗುವುದುಂಟು.

ನನ್ನದು ಆ ಕಾಲ, ನಿನ್ನದು ಈ ಕಾಲ ಎಂಬುವುದೊಂದು ನಿಜಕ್ಕೂ ಇದೆಯಾ? ಈ ಕಾಲದಲ್ಲಿ ಇದ್ದುಕೊಂಡು ಇನ್ಯಾವುದೋ ಕಾಲದಲ್ಲಿ ಮುಳುಗಿ ಹೋದಂತೆ, ಅಥವಾ ಇನ್ಯಾವುದೋ ಕಾಲದ ಜೀವಿಯೊಂದು ಈ ಕಾಲದ ಒಂದು ಅಚ್ಚರಿಯಂತೆ ಬದುಕುವುದು ನಿಜವಿರಬಹುದು ಅನ್ನಿಸುತ್ತದೆ. ‘ಒಂದಾನೊಂದು ಕಾಲದಲ್ಲಿ..’ ಎಂದು ಆರಂಭವಾಗುವ ಕಥೆಗಳ ಒಳಗೆ ನಾನೂ ಜೀವಿಸಿದ್ದರೆ ಅಚ್ಚರಿ ಎಂಬುದು ಕಿಂಚಿತ್ತೂ ಇರಲಿಕ್ಕಿಲ್ಲ.

avadhi-column-nagashree- horiz-edited12 ನೇ ಶತಮಾನದಲ್ಲಿ ಬದುಕಿದ್ದ ಜಲಾಲುದ್ದೀನ್ ರೂಮಿಯನ್ನು ಓದುವಾಗ ಈ ಕಾಲಕ್ಕೂ ನನಗೆ ಅವನ ಕಾವ್ಯಗಳು ಬರಿಯ ಕಾವ್ಯದಂತೆ ಕೇಳಿಸುತ್ತಿಲ್ಲ, ಕಣ್ಣಾಲಿಗಳಿಗೆ ಕಾಣುತ್ತಿಲ್ಲ,  ಬರಿಯ ದೇಹಕ್ಕೆ ತಗುಲುವ ಅನುಭವಗಳಾಗುತ್ತಿಲ್ಲ. ಅದು, ಕೇವಲ ಶಬ್ಧ, ಧ್ವನಿಗಳೇ ನನ್ನ ಕಿವಿಯಾದ ಹಾಗೆ,  ಅದರ ಅರ್ಥಗಳೇ ನನಗೆ ನಾನಾದ ಹಾಗೆ.

ಅವನು ಹೇಳುತ್ತಾನೆ!

ಯಾತಕ್ಕೆ ಹುಡುಕುವುದು? ನಾನೇ ಅಲ್ಲವೇ ಅವನು.

ಅವನೇ ಅಲ್ಲವೇ ನನ್ನಿಂದ ಮಾತ ಆಡಿಸುತ್ತಿರುವುದು.

ನನ್ನನ್ನೇ ಅಲ್ಲವೇ ನಾನು ಹುಡುಕುತ್ತಿರುವುದು…

ನಾನು ಬೇರೆಯಲ್ಲಾ ನೀನು ಬೇರೆಯಲ್ಲಾ ಎಂದು ಕೈಮುಗಿದು ಬೇಡುವ ಈ ಜೀವಗಳು, ಯಾವ ಕಾಲದಲ್ಲಾದರೂ ಇದೆಲ್ಲಾ ಕೆಲವರನ್ನಾದರೂ ಕಾಡಬಹುದು. ನಾನೂ ಹುಡುಕುತ್ತಿರುವ ನಿಜಗಳೂ ಇದೇ ಅಲ್ಲವೇ ಎಂದು ದಿಗ್ಭ್ರಮೆಯಾಗಬಹುದು!

ರೂಮಿಯ ಒಂದು ಕಾವ್ಯದಲ್ಲಿ ಹೇಳುತ್ತಾನೆ,

ಓ ಮುಸಲ್ಮಾನರೇ, ನಾನ್ಯಾರೆಂದು ಗೊತ್ತಿಲ್ಲ, ಮುಸಲ್ಮಾನನಂತೂ ಅಲ್ಲವೇ ಅಲ್ಲ, ಫಾರಸಿಯಲ್ಲ, ಮೂಡಣದವನಲ್ಲ, ಪಡುವಣದವನಲ್ಲ, ಆಕಾಶದವನಲ್ಲ, ಸ್ವರ್ಗವಾಸಿಯಲ್ಲ, ಮಣ್ಣು ಗಾಳಿಯಿಂದ ಹುಟ್ಟಿದವನಲ್ಲ… ಹೀಗೆ ಸಾಗುವ ಅವನ ಸಾಲುಗಳು. ಇದನ್ನೆಲ್ಲಾ ತರ್ಕಿಸಲು ಆಗದೆ ನಾನು ಸುಮ್ಮನೆ ಕುಳಿತಿದ್ದೆ. ಆಗ ಮತ್ತೆ ಅವನದೇ ಹೊಳಪಿನ ಮಾತುಗಳು ನನ್ನ ತಲೆಯೊಳಗೆ… ತರ್ಕ ಹೇಳುವುದಂತೆ,  “ಅವನನ್ನು ನಾನು ಮಾತಿಂದ ಚಕಿತಗೊಳಿಸುವೆ”, ಅಷ್ಟರಲ್ಲಿ ಪ್ರೇಮ ಉಸುರುತ್ತದೆ, “ನಾ ಆತ್ಮದಿಂದ ಮೋಡಿ ಮಾಡುವೆನೆಂದು, ಆಗ ಆತ್ಮ ಹೃದಯಕ್ಕೆ ಪಿಸುಗುಡುತ್ತದೆ, “ಹೋಗು ಇದೆಲ್ಲಾ ಸುಮ್ಮನೆ, ಚಕಿತಗೊಳಿಸಲು, ಅವನಿಲ್ಲದ ತೃಣವೊಂದಾದರೂ ಇದೆಯಾ ನಮ್ಮ ಬಳಿ?”

ಎಂತಹ ಸಾಲುಗಳು! ನಾನು ಎಂಟು ನೂರು ವರುಷಗಳ ಹಿಂದೆ ರೂಮಿಯ ಸಾಂಗತ್ಯದಲ್ಲಿ ಅವನ ಅಲೆದಾಟದ  ಹೆಜ್ಜೆಗಳಲ್ಲಿ ಕರಗಿದ ನೆರಳಂತೆಯೋ, ಅಥವಾ ಈಗ ನನ್ನ ದೇಹದ ಎಲ್ಲೋ ಒಂದು ಕಪಾಟಿನಲ್ಲಿ ಸುಮ್ಮನೆ ಮಲಗಿರುವ ರೂಮಿಯ ಆತ್ಮಸಾಂಗತ್ಯದಲ್ಲಿಯೋ ಒಂದಾದಂತೆ ಅನ್ನಿಸುತ್ತದಲ್ಲಾ!

ಸುಮ್ಮನೆ ನಾನು ಮಾತಾಡುವುದಕ್ಕಿಂತ ಅವನೇ ಹೇಳುತ್ತಾನೆ. ಹೀಗೆ-

ಅರಿಯದೊಂದು ಚಲಿಸುತ್ತಿದೆ ನಮ್ಮೊಳಗೆ,

ಅದು ಚಲಿಸುತ್ತಿದೆ ಈ ವ್ಯೋಮವನ್ನೇ,

ತಲೆಗೆ ಅರಿವಾಗದೆ ಪಾದ,

ಪಾದವರಿಯದೆ ಶಿರ-

ಬೇಕೂ ಇಲ್ಲ ಅವುಗಳಿಗೆ ಇದೆಲ್ಲ

ಸುಮ್ಮನೆ ಚಲಿಸುತ್ತಿದೆ.

ಹೀಗೆಲ್ಲಾ ಅನ್ನಿಸುತ್ತಿದೆ.

ಎಲ್ಲಿಯ ರೂಮಿ ಎಲ್ಲಿಯ ನಾನು, ಈ ಕಾಲಧರ್ಮ, ಶ್ರೇಷ್ಟತೆ ಎಂಬುದು ನಿಜಕ್ಕೂ ಇದೆಯಾ ಎಂದು ಬೆರಗಾಗಿದ್ದೇನೆ.

ಇವತ್ತು ಶ್ರೀ ಕೃಷ್ಣಜನ್ಮಾಷ್ಟಮಿ. ನಾನು ಬಾಲ್ಯದಿಂದ ಇಂದಿನವರೆಗೂ ಬಹಳ ಮೆಚ್ಚುವ ಹಬ್ಬವಿದು. ಮನೆಯಲ್ಲಿ, ಬಗೆಯ ಬಗೆಯ ಸಿಹಿ ಉಂಡೆಗಳನ್ನು, ಚಕ್ಕುಲಿ ಇನ್ನಿತರ ತಿನಿಸುಗಳನ್ನು ತಯಾರಿಸಿಸುತ್ತಿದ್ದರು. ನಡುರಾತ್ರಿ ಕೃಷ್ಣ ಹುಟ್ಟುವ ತನಕ ಅದನ್ನು ಮಕ್ಕಳಿಗೆ ಮುಟ್ಟದಂತೆ, ತಿನ್ನದಂತೆ ಕಟ್ಟುನಿಟ್ಟಿನಲ್ಲಿರಿಸುತ್ತಿದ್ದರು. ಆದರೆ ನಾವು ನಡುರಾತ್ರಿಯ ತನಕ ಅದನ್ನು ತಿನ್ನುವ ಆಸೆಯಿಂದ ತೂಕಡಿಸಿಕೊಂಡು, “ಒಂದು ಸಲ ಆ ಕೃಷ್ಣನೆಂಬುವವನು ಇದನ್ನೆಲ್ಲಾ ತಿನ್ನುವ ಹೊತ್ತು ಬಂದು ಬಿಡಲಪ್ಪಾ” ಎಂದು ಅದರ ಪರಿಮಳದಲ್ಲಿಯೇ  ಓಡಾಡಿಕೊಂಡುರುತ್ತಿದ್ದೆವು.

sufiರಾತ್ರಿಯ ಹೊತ್ತು, ಮನೆಯ ಹಿರಿಯರು ದೀಪದ ಬೆಳಕಿನಂತೆ ಉರಿಯುತ್ತಾ ಹಬ್ಬದ ಹೊಸತನದಲ್ಲಿ, ಕೆಲಸ ಕಾರ್ಯಗಳ ದಣಿವಿನಲ್ಲಿ ಚುರುಕಾಗಿರುತ್ತಿದ್ದರು. ಉಂಡೆ ತಯಾರಿಸಿದ, ಚಕ್ಕುಲಿ ಕಾಯಿಸಿದ ದೊಡ್ಡ ದೊಡ್ಡ ಪಾತ್ರೆಪರಡಿಗಳನ್ನು ಅವರು ತೊಳೆದು ಸ್ವಚ್ಚಗೊಳಿಸುವ ಹೊತ್ತಿಗೆ ಚಂದಿರ ನೆತ್ತಿಗೆ ಬಂದು ಕೃಷ್ಣ ಎಂಬ ಪುನರಪಿ ಜನಿಸುವ ಸಮಯವಾಗುತ್ತಿತ್ತು. ಇನ್ನೇನು ಕೃಷ್ಣ ಹುಟ್ಟಬೇಕು, ಅವನ ಕುರಿತು ಕೇಳಿ ಕಂಡರಿದ ಕಥೆಗಳೆಲ್ಲಾ ನೆನಪಾಗಿ ಮೆಲ್ಲಗೆ ಕಾಲಚಕ್ರ ಹಿಂದಕ್ಕೆ ಸರಿವ ಹೊತ್ತಿಗೆ ನಮ್ಮ ನಮ್ಮ ಅರಿವಿನೊಳಗಿನ ಕೃಷ್ಣನ ನೆರಳುಗಳು ಮನೆಯಲ್ಲಿ ಸಂಚರಿಸುವುದು.

ಯಾವುದೋ ಕಾಲಕ್ಕೆ ಸಂದ ಕೃಷ್ಣನಂತವನೊಬ್ಬ ಮತ್ತೆ ಮತ್ತೆ ಹುಟ್ಟುವ ನವನೀತನಂತೆ ಮನೆಯಲ್ಲಿ  ಸುಳಿದಾಡಿ, ಎಲ್ಲವೂ ಬೆರಕೆಗೊಂಡು ಮಗು ಮನಸ್ಸಿಗೆ ಅರಿಯದ ಅನುಭೂತಿಯೊಂದು ದೊರೆಯುವಾಗ ಯುಗಧರ್ಮ ಎಂಬುದೊಂದು ಇದೆಯಾ ಅನಿಸುತ್ತಿದೆ.

“There is no such thing as time” ಎಂದು  ಭೌತ ವಿಜ್ಞಾನಿಯೊಬ್ಬರು,  ಹೇಳಿದ್ದಾರೆ. ಕಾಲವನ್ನು ಕೈಯ್ಯಲ್ಲಿ ಹಿಡಿಯಲು ಹೊರಟರೆ ಕೈ ಬೆರಳ ಸಂಧಿಗಳಲ್ಲಿ ಜಾರುವ ಕಾಲವನ್ನು ಹಿಡಿಯುವುದಾದರೂ ಹೇಗೆ? ಅದನ್ನು ಹಾಗೆಲ್ಲಾ ಹಿಡಿಯಲಾಗುವುದಿಲ್ಲ, ಯಾಕೆಂದರೆ ಕಾಲವೆಂಬುದುದೊಂದು ಇದ್ದರೆ ತಾನೆ? ಎನ್ನುತ್ತಾರೆ. ಹಾಗಿದ್ದರೆ ಭೂತ, ವರ್ತಮಾನ ಭವಿಷ್ಯ ಎಂಬ ಕಾಲಗಳೇ ಇಲ್ಲವೇ! ಪ್ರತಿ ನಿಮಿಷವೂ ನಮ್ಮಿಂದ ನುಣುಚಿಕೊಳ್ಳುತ್ತಲೇ ಒಡೆದು ಚಿಗುರುವ ಘಳಿಗೆಗಳೆಲ್ಲಾ ಏನವು ಮತ್ತೆ? ಕಾಲವೆಂಬ ಮಾಯಾವಿ ತುಣುಕುಗಳ ಯಾವುದೋ ಕೆಲವು ನಿಮಿಷಗಳಲ್ಲಿ ನಮ್ಮ ತಿಳಿವಿಗೆ ಬರುವ ರೂಮಿ ಎಂಬ ದಿವ್ಯ ಕವಿ ನಡೆದಾಡಿರಬಹುದಾದ ನೆಲವೋ, ಕೃಷ್ಣನೆಂಬ ದಿವ್ಯ ಪ್ರೇಮಿ ಕುಣಿದಾಡಿದ ವೃಂದಾವನದ ಮಣ್ಣಿನ ಪರಿಮಳವೋ ಈಗ ನಾನಿರುವ ಈ ಶತಮಾನದ ನನ್ನ ಮಣ್ಣಿನಲ್ಲೂ ಬೆರೆತುಹೋಗುವುದಲ್ಲಾ! ಇದಕ್ಕೆಲ್ಲಾ ಏನೆನ್ನುವುದು!

ರೂಮಿ ಎಂಬ ಸೂಫಿ ನನ್ನ ಹೃದಯವನ್ನು ಒದ್ದೆಗೊಳಿಸುವ ಮೊದಲೇ, ಕೃಷ್ಣನೆಂಬ ಪ್ರೇಮಮಯಿ ನನ್ನನ್ನು ಬೆರಗು ಗೊಳಿಸುವ ಮೊದಲೇ ಯಾವುದೋ ಒಂದು ಇರುಳು, ನನ್ನ ಮನೆಯ ಅಂಗಳದ ಸೆಖೆಯಲ್ಲಿ ಬೆವರುತ್ತಾ ನನಗೆ ಇದೆಲ್ಲಾ ಸಣ್ಣಗೆ ಅರ್ಥವಾಗುವ ಹಾಗೆ ಅನ್ನಿಸುತ್ತಿತ್ತಲ್ಲಾ! ಇದು ಹೇಗೆ ಎಂಬ ವಿಸ್ಮಯ ಕುದಿಯುತ್ತದೆ.

ನಮ್ಮ ಮನೆಯ ಒತ್ತಿನ ಪುಟ್ಟ ಮನೆಯಲ್ಲಿ ಶಂಕರನೆಂಬ ಮೇಸ್ತ್ರಿ ಇದ್ದಾನೆ. ಮದುವೆಯಾದರೂ ಹೆಂಡತಿ ಯಾವ ಕಾರಣಕ್ಕೋ ಬಿಟ್ಟು ಹೋಗಿದ್ದಾಳೆ. ಅವನೆಲ್ಲಾದರೂ ಎದುರಿಗೆ ಸಿಕ್ಕರೆ ಮುಖವನ್ನೂ ನೋಡದೆ ಒಂದು ಅರೆಘಳಿಗೆ ಕ್ಷೀಣವಾಗಿ ನಕ್ಕು ಮತ್ತೆ ತಲೆತಗ್ಗಿಸಿ ರುಮುರುಮು ನಡೆಯುತ್ತಾನೆ. ಮನೆಯಲ್ಲೂ ಯಾರ ಬಳಿಯೂ ಜಾಸ್ತಿ ಮಾತು ಕತೆ ಇಲ್ಲವಂತೆ. ಅವನ ಕೊರಳಲ್ಲಿ ಬಿಗಿದ ಕಪ್ಪುದಾರದ ರಕ್ಷೆಯಲ್ಲಿ ಯಾವಾಗಲೂ ಇರುವ ಲಾಕ್ಷಣಿಕನಂತಿದ್ದಾನೆ.

ಹಗಲಿಡೀ ಬೆವರು ಹಿಂಡಿ ದುಡಿದು ಮಾತೇ ಹೊರಡಿಸದವನು ಎಂದೋ ಕುಡಿದಾಗ ಮನೆಯ ಅಂಗಳದಲ್ಲಿ ಶತಪತ ಹೆಜ್ಜೆಹಾಕುತ್ತಾ ಅವನ ನೋವಿನ ಎಳೆಗಳನ್ನು ಹೆಣೆದು ಮುಡಿ ಕಟ್ಟುತ್ತಿದ್ದ. ಅವನು ಯಾರನ್ನೋ ಬಯ್ಯುತ್ತಿದ್ದ ಯಾರನ್ನೋ ಹೊಗಳುತ್ತಿದ್ದ, ದೀನನಾಗುತ್ತಿದ್ದ, ಅಳುತ್ತಿದ್ದ. “ನೀವೆಲ್ಲಾ ಕೆಟ್ಟ, ಕಸಗಳು, ಎಂದೋ ಸತ್ತು ಮಲಗಿದವರು, ಥೂ ನನ್ನನ್ನು ತಿಳಿಯದ ಮೂರ್ಖರೇ, ನೋಡಿ ತಿಂಗಳ ಬೆಳಕು ನಿಮಗಾರಿಗೂ ಕಾಣುತ್ತಿಲ್ಲ, ಥೂ ನನ್ನನ್ನು ತಿಳಿಯದ ಮೂರ್ಖರೇ, ನನ್ನ ವಿಷಯವೆಲ್ಲಾ ದೇವರೊಬ್ಬನಿಗೆ ತಿಳಿದಿರುತ್ತದೆ” ಎಂದು ಉಸುರುವಾಗ ನಾನು ತಣ್ಣಗೆ ನಡೆದಾಡಿಕೊಂಡು ಚಂದಿರನನ್ನು ನೋಡುತ್ತಿದ್ದೆ.

ಮಾತಿಗೆ ನಿಲುಕದ ಅವನ ಉಮ್ಮಳಗಳು ನನ್ನ ಎದೆಯಲ್ಲಿ ಕೇಳಿಸುತ್ತಿತ್ತು. ಬೆಳಗ್ಗೆ ಎಂದಿನಂತೆಯೇ ಎಲ್ಲವನ್ನು ಮರೆತ ವಿಶ್ವದ ಈ ಸಣ್ಣ ಜೀವವೊಂದರ ಪುಟ್ಟ ಹೃದಯಕ್ಕೆ ಏನೆಲ್ಲಾ ತಿಳಿದಿದೆಯಲ್ಲಾ ಅನ್ನಿಸುತ್ತಿತ್ತು. ಮತ್ತೆ ಅವನು ತಲೆತಗ್ಗಿಸಿ ನಡೆವ ಲೆಕ್ಕಕ್ಕಿಲ್ಲದ ಜೀವದಂತೆ ಇರುತ್ತಿದ್ದ.

ಕಾಲ ಅಂತ ಒಂದಿರಲಿ ಎಂದೇ ಇಟ್ಟುಕೊಳ್ಳುವ. ಎಲ್ಲಾ ಕಾಲಕ್ಕೂ ಹಸಿವೆಗಳಿರುತ್ತದೆ. ತನ್ನ ಮೂವತ್ತರ ಹರೆಯದಲ್ಲಿ, ತನ್ನೊಳಗಿನ ತಾಕಲಾಟಗಳಿಂದ ಎದೆ ಬಿರಿವ ಹುಡುಕಾಟದಿಂದ ಅಲೆಮಾರಿಯಾಗಿದ್ದ ರೂಮಿಗೂ ಭಿಕ್ಷಾಟನೆ ನಡೆಸಿ ಹೊಟ್ಟೆ ತುಂಬಿಸಿಕೊಳ್ಳುವಷ್ಟು ಹಸಿವಿತ್ತು. ಹಾಗೆ ನೋಡಿದರೂ ಕೃಷ್ಣನೂ ಬೆಣ್ಣೆ ಕದಿಯುತ್ತಿದ್ದದ್ದು ಸುಳ್ಳಲ್ಲವಲ್ಲಾ.

parijata krishna2

ಇಷ್ಟೇ ಆಗಿದ್ದರೆ ಇವತ್ತು ಮನುಷ್ಯನಿಗೆ ಇಷ್ಟೆಲ್ಲಾ ಸಂಧಿಗ್ಧಗಳು ಇರುತ್ತಿರಲಿಲ್ಲವೇನೋ! ಹೊಟ್ಟೆ ಹಸಿವಿನ ನಂತರ ಮಿದುಳಿನ ಹಸಿವೆ ಇರುತ್ತದಲ್ಲಾ!. ರೂಮಿಯ ಹಸಿವು ಅಲ್ಲಿಗೆ ಮುಗಿದಿದ್ದರೆ ಖ್ಯಾತಿಯ ಅಮಲು ಅವನಿಗೆ ವಾಕರಿಕೆ ತರಿಸುತ್ತಿರಲಿಲ್ಲ. ಗೊಂದಲಗಳ ಬೇರನ್ನು, ಅಗಾಧವಾದ ನೋವನ್ನು ಹುಡುಕುತ್ತಾ ಹೊರಡುತ್ತಿರಲಿಲ್ಲ.ತನ್ನ ಆತ್ಮಸಂಗಾತಿ ಶಂಸ್ ತಬ್ರೀಜ್ ದೂರವಾಗಿ ನಂತರ ಮತ್ತೆ ಭೇಟಿಯಾದಾಗ ಇಬ್ಬರು ಕಾಲಿಗೆರಗಿ, ಗುರು ಯಾರು ಶಿಷ್ಯನಾರು? ದೇವನಾರು ಭಕ್ತನಾರು? ನದಿ ಯಾವುದು ಸಮುದ್ರ ಯಾವುದು? ಎಂಬ ಅರಿವೂ ಇಲ್ಲದಂತೆ ಇರುತ್ತಾರೆ.

ಕೃಷ್ಣನ ಹಳೆಯ ಗೋಕುಲದ ಆ ಆಕಾಶ, ಹಳೆಯ ಮರಗಳು, ವೃಂದಾವನದ ಮಣ್ಣಿನ ಪರಿಮಳ,  ಕೊಳಲಿನ ದನಿಗೆ, ಅಷ್ಟು ರಾಧೆಯರ ನಿಟ್ಟುಸಿರು ಸಾಕ್ಷಿಯಾಗಿರುತ್ತಿರಲಿಲ್ಲ. ಗೋಪಿಕೆಯರು ಕೃಷ್ಣನನ್ನು ಅರಸುವುದೋ ಕೃಷ್ಣನೇ ಅವರ ಸಾಂಗತ್ಯ ಬಯಸಿ ಬರುವುದೋ, ಅವರಾರು ಇವರಾರು ಎಂದು ತಿಳಿಯದ ಸ್ಥಿತಿಯದು. ನನ್ನ ಮನೆಯಲ್ಲಿ ಇಂದು ಮತ್ತೆ ಹುಟ್ಟುವ ಕೃಷ್ಣನನ್ನು ಅರಸುತ್ತಾ ನಂಬಿರುವವರೆಲ್ಲ ಮನಸ್ಸಿನಲ್ಲಿ ಆತಂಕ, ಬದುಕಿನ ಸಂಕಷ್ಟಗಳು ಇನ್ನಾದರೂ ದೂರ ಹೋಗಲಿ ಎಂಬಂತೆ ಕೂತಿದ್ದಾರೆ! ಇಂತಹದ್ದೊಂದು ಎಲ್ಲರಿಗೂ ಬೇಕು. ಅದು ಯಾವ ರೂಪದಲ್ಲದರೂ ಇರಬಹುದು. ನನಗೆ, ಆ ಶ್ರಮಿಕ ಶಂಕರನಿಗೆ, ರೂಮಿಯಂತಹ ಅಲೆಮಾರಿಗೆ, ಮತ್ತೆ ಕೃಷ್ಣನಂತಹ ದೈವ ಎಂಬ ಮನುಷ್ಯನಿಗೂ ಕೂಡಾ!

ಇನ್ನು ಇಂತಹ ಅರಸುವಿಕೆಯ ನಡುವೆ ಹುಟ್ಟಿಕೊಳ್ಳುವ ಆತ್ಮದ ಹಸಿವು! ಅದೊಂದು ತೋಡಿಕೊಳ್ಳಬೇಕೆಂಬ ಚಟದಂತೆ. ಅದೊಂತರ ಮುಗಿದ ಮೇಲೆ ಮೂಡುವ ಧನ್ಯತೆಯಂತೆ! ಯಾರನ್ನೋ ಸಂಧಿಸಿ ಎಲ್ಲವನ್ನೂ ತೋಡಿಕೊಂಡ ಮೇಲೆ ದೊರೆಯುವ ಬೆಳಕಿನ ಬೆಳಕಂತೆ! ಪ್ರೇಮ, ಯಾತನೆ, ವಿರಹ, ಹುಡುಕಾಟದ ದೊಡ್ಡ ಕಾವ್ಯದ ಗೊಂಚಲನ್ನೇ ರೂಮಿ ಸೃಷ್ಟಿಸಿದ್ದಾನೆ. ಈಗ ನಾನು ಹೀಗೆಲ್ಲಾ ರೂಮಿ, ಕೃಷ್ಣ, ಶಂಕರನೆಂದು ಬರೆಯದಿದ್ದರೆ ನನ್ನ ಆತ್ಮವಾದರೂ ಹೇಗೆ ಸುಖಪಟ್ಟಿತು? ಅದೊಂದು ಏನೋ ಅರ್ಥವಾಗಿ ಹೇಳಿ ಹಂಚಿದ ಆತ್ಮಸುಖ! ಗೋಪಿಕೆಯರು ಕೃಷ್ಣನಲ್ಲಿ ಮೈಮರೆತರೆ, ಮೈಗೆ ನಾಚಿಕೆಯಾದರೂ ಎಲ್ಲೀಂದ ಬಂದೀತು ಎಂಬಂತೆ

ವಿಜ್ಞಾನ, ಆಧ್ಯಾತ್ಮ, ನೈಜತೆ ಕಲ್ಪನೆಗಳೆಲ್ಲಾ ಸಾಮಾನ್ಯರಲ್ಲಿ ಅತಿ ಸಾಮಾನ್ಯರಾದ ನಮ್ಮಂತವರಿಗೆ ಎಷ್ಟು ದಕ್ಕುತ್ತದೋ ಅಷ್ಟೆ ನಮಗೆ ತಿಳಿದ ಸತ್ಯಗಳಂತೆ ನಮಿಸಿ ನಂಬುತ್ತೇವೆ. ನಂಬುವಾಗಲೂ ನಮಗೆ ಗೊತ್ತಿಲ್ಲದ ಕಣವೊಂದು ನಮ್ಮ ಹಿಂದೆ ನಕ್ಕು ನಮ್ಮನ್ನು ನಗೆಪಾಟಲಾಗಿಸುತ್ತಿರಬಹುದೇ ಎಂದು ಜಾಣರೂ ಆಗುತ್ತೇವೆ.

ನಿಜಕ್ಕೂ ಈ ಕಾಲ, ಯುಗ ಎನ್ನುವುದು ಉಂಟೇ ಎಂದು ಮತ್ತೆ ಮತ್ತೆ ಅನ್ನಿಸುತ್ತಿದೆ.

4 Comments

 1. S.p.vijaya Lakshmi
  August 26, 2016
 2. 'ಶ್ರೀ' ತಲಗೇರಿ
  August 25, 2016
 3. Gokul
  August 25, 2016
 4. vidyashankar
  August 25, 2016

Add Comment

Leave a Reply