Quantcast

ಒಂದು ದಿನ ಇದ್ದಕ್ಕಿದ್ದಂತೆ ದೊಡ್ಡ ಶಬ್ದ ನಮ್ಮ ಮನೆಗೆ ಕೇಳಿಸಿತು..

ನಮ್ಮೂರಿಗೆ ಜೆಸಿಬಿ ಬಂದಿತ್ತಾ

rakesh konaje

ರಾಕೇಶ್ ಕೊಣಾಜೆ 

ಮುಖಪುಟ ಕಲೆ : ಬಾದಲ್ ನಂಜುಂಡಸ್ವಾಮಿ

ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಕಥೆ. ನಾನಾಗ ನಾಲ್ಕನೇ ಕ್ಲಾಸಿನಲ್ಲಿದ್ದೆ. ಒಂದು ದಿನ ಇದ್ದಕ್ಕಿದ್ದಂತೆ ದೊಡ್ಡ ಶಬ್ದ ನಮ್ಮ ಮನೆಗೆ ಕೇಳಿಸಿತು. ಅದೇನು ಶಬ್ದ ಎಂದು ಕುತೂಹಲದಿಂದ ಪಕ್ಕದ ಮನೆಯ ಗೆಳೆಯನ ತಂದೆಯನ್ನು ವಿಚಾರಿಸಿದಾಗ ತಿಳಿದಿದ್ದು ನಮ್ಮೂರಿಗೆ ಯಾವುದೋ ದೊಡ್ಡದಾದ ಮಣ್ಣು ಅಗೆಯುವ ಯಂತ್ರದ ಪ್ರವೇಶವಾಗಿದೆಯೆಂದು. ನಮ್ಮೂರಿಗೆ ಬೋರ್ ವೆಲ್ ಕೊರೆಯುವ ಮೆಷೀನ್ ಕೂಡ ಆ ದಿನಗಳಲ್ಲಿ ಪ್ರವೇಶ ಪಡೆದಿರಲಿಲ್ಲ. ಹಾಗಿರುವಾಗ ಮಣ್ಣು ಅಗೆಯುವ ಇಷ್ಟು ಜೋರಾಗಿ ಶಬ್ದ ಮಾಡುವ ಈ ಯಂತ್ರ ಯಾವುದೆಂದು  ಊರಿನವರೆಲ್ಲರಿಗೂ ಸಹಜವಾಗಿಯೇ ಕುತೂಹಲ ಏರ್ಪಟ್ಟಿತು.

ಯಂತ್ರ ಬಂದು ತನ್ನ ಕೆಲಸವನ್ನು ಮಾಡಲು ಪ್ರಾರಂಭಿಸಿದ ಕೇವಲ ಅರ್ಧ ಗಂಟೆಯಲ್ಲಿಯೇ ಆ ಪ್ರದೇಶದಲ್ಲಿ ದೊಡ್ಡದಾದ ಜನಜಾತ್ರೆಯೇ ನಿರ್ಮಾಣಗೊಂಡಿತು. ಅದು ನಮ್ಮೂರಿನ ದಾಸರ ಮೂಲೆ ಎಂಬ ಪ್ರದೇಶಕ್ಕೆ ತೆರಳುವ ಕಾಲು ದಾರಿಯನ್ನು ಅಗಲಗೊಳಿಸಿ ರಸ್ತೆಯನ್ನಾಗಿ ಮಾರ್ಪಾಡು ಮಾಡುವ ಸಲುವಾಗಿ ಕಾಮಗಾರಿಗೆ ಬಂದಿದ್ದ ಯಂತ್ರವಾಗಿತ್ತು. ಆ ರಸ್ತೆಯು ಗುಡ್ಡ ಪ್ರದೇಶವನ್ನು ಸಮತಟ್ಟಾಗಿ ಮಾಡಬೇಕಾಗಿದ್ದರಿಂದ ಯಾರೋ ಊರಿನ ಹಿರಿಯರು ಈ ದೊಡ್ಡದಾದ ಮಣ್ಣು ಅಗೆಯುವ ಯಂತ್ರವನ್ನು ಆ ರಸ್ತೆ ಕಾಮಗಾರಿ ನಡೆಸುವ ಸಲುವಾಗಿ ಬಾಡಿಗೆಗೆ ತಂದಿದ್ದರು.

tundu hykluಏನಿದ್ದರೂ ರಸ್ತೆಗೆ ಡಾಮರು ಹಾಕುವ ರೋಡ್ ರೋಲರ್ ಮತ್ತು ಆಕಾಶದಲ್ಲಿ ಹಾರುವ ಹೆಲಿಕಾಪ್ಟರ್ ಗಳು ಹಾಗೂ ವಿಮಾನಗಳನ್ನು ಮತ್ತು ಅಪರೂಪಕ್ಕೆ ಮಂಗಳೂರಿಗೆ ತೆರಳುವಾಗ ದಾರಿ ಮಧ್ಯೆ ನೇತ್ರಾವತಿ ಸೇತುವೆಯ ಬದಿಯಲ್ಲಿ ಹಾದು ಹೋಗುವ ರೈಲುಗಳನ್ನು ಮಾತ್ರ ಕಂಡಿದ್ದ ನಮಗೆ ಈ ಮಣ್ಣು ಅಗೆಯುವ ಯಂತ್ರ ಅಚ್ಚರಿಯ ವಿಷಯವೇ ಆಗಿತ್ತು. ಅದೂ  ಕೂಡ ಕ್ಷಣ ಮಾತ್ರದಲ್ಲಿ ಸುಮಾರು ಹತ್ತಿಪ್ಪತ್ತು ಆಳುಗಳು ಸೇರಿ ಅಗೆಯುವ ಮಣ್ಣನ್ನು ಅಗೆದು ಲಾರಿಗೆ ತುಂಬಿಸುವ ಯಂತ್ರವು ನಮಗೆಲ್ಲರಿಗೂ ಜಗತ್ತಿನ ಅದ್ಬುತಗಳಲ್ಲೊಂದು. ಆವರೆಗೆ ಅಂತಹ ಒಂದು ಯಂತ್ರದ ಸಂಶೋಧನೆಗಾಗಿದೆ ಎಂಬುದರ ಬಗ್ಗೆನೇ ನಮಗೆ ಗೊತ್ತಿರಲಿಲ್ಲ.

ಈ ಮಣ್ಣು ಅಗೆಯುವ ಯಂತ್ರದ ಚಾಲಕ ಮಣ್ಣನ್ನು ಅಗೆದು ಹಾಕುತ್ತಿದ್ದಾಗ ನಾವು ಮಕ್ಕಳು ಬೆರಗುಗಣ್ಣಿನಿಂದ ನೋಡುತ್ತಿದ್ದರೆ, ಯುವಕರು ಯಂತ್ರದ ಕಾರ್ಯ ಶೈಲಿಯ ಬಗ್ಗೆ ತಮ್ಮದೇ ರೀತಿಯಲ್ಲಿ ವಿವರಿಸುತ್ತಾ ಆ ಯಂತ್ರದ ಮುಂದಿನ ಬಕೆಟನ್ನು ಕಂಡು ಇದು ಆನೆಯನ್ನು ಮಾದರಿಯನ್ನಾಗಿಟ್ಟುಕೊಂಡು ಮಾಡಿರುವ ಯಂತ್ರವಾಗಿದೆ. ಕೇವಲ ಡೀಸೆಲ್ ತುಂಬಿಸಿದರೆ ಸಾಕಂತೆ ಎಷ್ಟು ದೊಡ್ಡ ಗುಡ್ಡವನ್ನೂ ಒಂದೇ ದಿನದಲ್ಲಿ ನೆಲಸಮ ಮಾಡುತ್ತದಂತೆ ಎಂದು ಹಲವು ಅಂತೆ ಕಂತೆಗಳನ್ನು ಸೃಷ್ಟಿಸುತ್ತಿದ್ದರೆ, ವಯೋವೃದ್ದರು ನಾವು ಯುವಕರಾಗಿರುವಾಗ ನಮ್ಮೂರಿನ ಮೊದಲ ರಸ್ತೆಯಾದ ಬಾಸೆಲ್ ಮಿಶನ್ ಶಾಲೆಯ ರಸ್ತೆಯನ್ನು ನಿರ್ಮಿಸಲು ತಾವು ಪಟ್ಟಿರುವ ಕಷ್ಟಗಳ ಬಗ್ಗೆ ಮಾತನಾಡುತ್ತಾ, ಕಾಲ ಕಲಿಯುಗ ಎಂದು ಇದಕ್ಕೇ ಹೇಳೋದು ಮಣ್ಣು ಅಗೆಯುವುದಕ್ಕೂ ಯಂತ್ರಗಳು ಬಂದಿವೆ ಇನ್ನು ಮನುಷ್ಯನಿಗೆ ಊಟ ಮಾಡಿಸಲೂ ಯಂತ್ರಗಳ ಸೃಷ್ಟಿಯಾಗದಿದ್ದರೆ ಸಾಕು ಎಂಬಂತಹ ಮಾತುಗಳನ್ನಾಡುತ್ತಿದ್ದರು.

ಅದೇ, ಮನೆಯ ಗೃಹಿಣಿಯರು ಯಂತ್ರ ಅಗೆದು ಹಾಕಿದ್ದ ಮಣ್ಣಿನ ರಾಶಿಯಲ್ಲಿದ್ದ ಸೌದೆಯನ್ನು ಒಟ್ಟುಗೂಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ಯಾವುದೇ ಯಂತ್ರ ಇದ್ದರೇನು ಒಣ ಸೌದೆ ಸಿಕ್ಕಿದರೆ ಮೂರು ಹೊತ್ತಿನ ಊಟ ಬೇಯಿಸಲು ಪಕ್ಕದ ವಿಶ್ವವಿದ್ಯಾನಿಯಲದ ಗುಡ್ಡೆಗೆ ನಡೆದುಕೊಂಡು ಹೋಗುವುದು ತಪ್ಪುತ್ತದೆ. ಸಮೀಪದಲ್ಲಿಯೇ ಆ ಮಳೆಗಾಲವನ್ನು ಕಳೆಯಲು ಬೇಕಾಗುವ ಸೌದೆ ಸಿಗುತ್ತಲ್ಲಾ ಎನ್ನುವುದು ಅವರ ಮನದಿಂಗಿತವಾಗಿತ್ತು.

ಹೀಗೆ ಒಬ್ಬೊಬ್ಬರು ಒಂದೊಂದು ಆಲೋಚನೆಯಲ್ಲಿರುವಾಗ ಯಂತ್ರವು ತನ್ನ ಆ ದಿನದ ಕೆಲಸವನ್ನು ಪೂರ್ಣಗೊಳಿಸಿ ನಗರದೆಡೆಗೆ ತನ್ನ ಪ್ರಯಾಣವನ್ನು ಮುಂದುವರೆಸಿತು. ನನ್ನನ್ನು ಆ ಯಂತ್ರದ ಬಳಿಗೆ ಹೋಗಲು ಅಮ್ಮ ಅನುಮತಿ ನೀಡದೇ ಇದ್ದಾಗ “ನಾನಿದ್ದೇನೆ ಕಳಿಸಿಕೊಡಿ, ಎಲ್ಲರಂತೆ ಅವನಿಗೂ ಕುತೂಹಲ, ತೋರಿಸಿ ಬರುತ್ತೇನೆ ಎಂದು ನನ್ನ ದೊಡ್ಡಪ್ಪನ ಮಗ ನನ್ನನ್ನು ಆ ಯಂತ್ರ ಕೆಲಸ ಮಾಡುತ್ತಿದ್ದಲ್ಲಿಗೆ ಕರೆದುಕೊಂಡು ಹೋಗಿದ್ದರು.

ಎಲ್ಲರೂ ಯಂತ್ರವನ್ನು ನೋಡಿದ ಮೇಲೆ ಮನೆಯ ದಾರಿ ಹಿಡಿದಂತೆ ನಾನು ಮತ್ತು ಅಣ್ಣ ಜತೆಯಾಗಿ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಅಣ್ಣ ಮಾತ್ರ ಚಿಂತೆಯಿಂದ ‘ಇಂತಹ ಯಂತ್ರಗಳು ಬಂದರೆ ನಾಳೆ ನಮ್ಮ ಗತಿಯೇನು. ನೋಡು ನಾವು ಹತ್ತು ಮಂದಿ ಮಾಡುತ್ತಿದ್ದ ಕೆಲಸವನ್ನು ಯಂತ್ರ ಒಂದೇ ಮಾಡಿ ಮುಗಿಸಿತು. ಎಲ್ಲರೂ ಇಂತಹ ಯಂತ್ರಗಳನ್ನೇ ಕರೆಸಿದರೆ ನಮಗೆ ಹೊಟ್ಟೆಗೆ ಏನು ಮಾಡೋದು’. ಎಂದು ತನ್ನ ಕಸುಬಿನ ಮೇಲೆ ಯಂತ್ರವು ಮಾಡಬಹುದಾದ ಪ್ರಹಾರವನ್ನೂ ತನ್ನ ಭವಿಷ್ಯವನ್ನೂ ಊಹಿಸಿ ಚಿಂತಿತನಾಗಿದ್ದ. ಅವತ್ತು ‘ಇವನು ಯಾಕೆ ಹೀಗಾಡುತ್ತಾನೆ.

jcb2ಎಲ್ಲರೂ ಖುಷಿಯಲ್ಲಿರುವಾಗ ಇವನದೇನು ಹೊಸ ವರಸೆ’ ಎಂದು ನಾನು ಆ ವಿಷಯವನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಇವತ್ತು ನಿಜಕ್ಕೂ ಎಲ್ಲಾ ಕೆಲಸಗಳನ್ನು ಯಂತ್ರಗಳೇ ನಿರ್ವಹಿಸುತ್ತಿರುವುದನ್ನು ಕಂಡಾಗ ಅಣ್ಣ ಚಿಂತೆಗೀಡಾಗಿದ್ದು ಇದಕ್ಕಾಗಿಯೇ ಇರಬೇಕು ಎಂದಣಿಸುತ್ತದೆ. ಆದರೆ ಮನುಷ್ಯನ ಜಾಗದಲ್ಲಿ ಯಂತ್ರಗಳು ಬಂದರೂ ಅಣ್ಣನಂತವರು ಪರ್ಯಾಯವಾದ ಉದ್ಯೋಗವನ್ನು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಆಯ್ಕೆ ಮಾಡಿಕೊಂಡಿದ್ದು ಇಂತಹ ಆವಿಷ್ಕಾರದ ಪ್ರಭಾವವೂ ಆಗಿರಬಹುದು.

ಯಾರು ಏನೇ ಚಿಂತೆಯಲ್ಲಿದ್ದರೂ ನಮ್ಮೂರಿನ ಮೀಟಿಂಗ್ ಪಾಯಿಂಟ್ ರಮೇಶಣ್ಣನ ಶರಾಬು ಅಂಗಡಿಯ ಬಿಸಿ ಬಿಸಿ ಚರ್ಚೆಯ ವಿಷಯ ಇದೇ ಯಂತ್ರವಾಗಿತ್ತು. ಪ್ರತಿಯೊಬ್ಬರೂ ತಮಗೆ ಗೊತ್ತಿದ್ದಂತೆ ಯಂತ್ರದ ಸಾಧಕ ಬಾಧಕಗಳನ್ನು ಸ್ನೇಹಿತರ ಮುಂದಿರಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದರು. ಇನ್ನು ನಾವು ಶಾಲಾ ಮಕ್ಕಳಂತೂ ಮರುದಿನ ಶಾಲೆಗೆ ತೆರಳಿ ಸ್ನೇಹಿತರೆಲ್ಲಾ ಸೇರಿಕೊಂಡು ಯಂತ್ರದ ಬಗ್ಗೆ ಚರ್ಚಿಸಿದ್ದೇ ಚರ್ಚಿಸಿದ್ದು. ಟೀಚರಲ್ಲಿ ಯಂತ್ರದ ಕುರಿತು ಹಲವು ಮಾಹಿತಿಗಳನ್ನೂ ಕಲೆಹಾಕಿದ್ದೆವು. ನಮ್ಮ ಆಟದಲ್ಲಿಯೂ ಈ ಮಣ್ಣು ಅಗೆಯುವ ಯಂತ್ರವು ಪ್ರಮುಖ ಪಾತ್ರವನ್ನು ಪಡೆದಿತ್ತು.

ಕಾಲ ಕ್ರಮೇಣ ಈ ಯಂತ್ರವು ಊರಿನ ಹಲವು ಕೆಲಸಗಳಿಗೆ ಬರತೊಡಗಿತು. ಪ್ರಾರಂಭದಲ್ಲಿ ಅದರ ಬಗ್ಗೆ ಇದ್ದ ಕುತೂಹಲ ತಣ್ಣಗಾಗತೊಡಗಿತು. ಪ್ರಾರಂಭದಲ್ಲಿ ಹೀರೋವಂತೆ ಕಂಡಿದ್ದ ಆ ಯಂತ್ರದ ಚಾಲಕ ನಂತರ ನಮ್ಮಂತೆಯೇ ಸಾಮಾನ್ಯ ಮನುಷ್ಯನಾಗಿ ಕಾಣುತ್ತಿದ್ದ. ಇಂದು ಇಪ್ಪತ್ತು ವರ್ಷಗಳ ನಂತರ ಮಣ್ಣು ಅಗೆಯುವ ಯಾವುದೇ ಕಾರ್ಯವಿರಲಿ ಜೆಸಿಬಿ ಕಂಪನಿಯ ಮಣ್ಣು ಅಗೆಯುವ ಯಂತ್ರವಿರದೇ ಇದ್ದರೆ ಕೆಲಸಗಳು ಸಾಗುವುದೇ ಇಲ್ಲ ಎಂಬಷ್ಟರ ಮಟ್ಟಿಗೆ ಆ ಯಂತ್ರವು ನಮ್ಮೂರಿನ ಜನರನ್ನು ಮರಳು ಮಾಡಿದೆ.

ತಂತ್ರಜ್ಞಾನಗಳಿಗೆ ಜನರು ಹೇಗೆ ಒಗ್ಗಿಕೊಳ್ಳುತ್ತಾರೆ ಎಂಬುದು ಈ ಒಂದು ಉದಾಹರಣೆಯು ನನ್ನ ಕಣ್ಣೆದುರಿಗಿದೆ. ಇವಾಗ ನಮ್ಮೂರಿನಲ್ಲಿ ಗದ್ದೆ ಉಳುವ ಟಿಲ್ಲರ್, ಮಣ್ಣು ಅಗೆತ, ಸಮತಟ್ಟು ಮಾಡುವಿಕೆ ಹೀಗೆ ಹೆಚ್ಚಿನ ಎಲ್ಲ ಕೆಲಸಗಳೂ ಯಂತ್ರಗಳಿಂದಲೇ ಮಾಡಲ್ಪಡುತ್ತಿವೆ. ಅಂದು ನಮಗಿದ್ದ ಅಚ್ಚರಿ ಇಂದಿನ ಮಕ್ಕಳು ಹುಟ್ಟುವಾಗಲೇ ಇಂತಹ ಯಂತ್ರಗಳನ್ನು ಕಂಡಿದ್ದರಿಂದ ಅವರಿಗೂ ಇಲ್ಲ. ಒಟ್ಟಾರೆಯಾಗಿ ಇಂದಿನ ನಮ್ಮ ಜೀವನ ಶೈಲಿಯೂ ತಂತ್ರಜ್ಞಾನಗಳಿಂದಲೇ ಬದಲಾವಣೆಯನ್ನೂ ಕಂಡಿದೆ.

Add Comment

Leave a Reply