Quantcast

ಕುಂವೀ ಪ್ರೀತಿ ಹೀಗೆ..

katte gururaj

ಕಟ್ಟೆ ಗುರುರಾಜ್ 

“ಸಾರ್ ನೀವು ಧ್ವಾರಕಾ ಹೋಟೆಲ್‌ ನಿಂದ ಬರೋದು ಹೇಗೆ? ‘
“ರೀ. ನೀವು ಸಮಾರಂಭದ ಕಡೆ ಗಮನ ಕೊಡಿ, ನನ್ನ ಕಡೆಯಲ್ಲ. ಆಟೋನೋ,ಓಲೋನೋ ಹಿಡ್ಕೊಂಡು ಬಂದ್ರಾಯ್ತು…’
ಅಂದರು ಕುಂ.ವೀ.

ಮಾತಲ್ಲಿ ಹಿರಿಯ ಸಾಹಿತಿ, ಇಷ್ಟೊಂದು ಪುಸ್ತಕ ಬರೆದಿದ್ದಾರೆ, ಅಗಾಧ ಅನುಭವದ ಹಮ್ಮು ಬಿಮ್ಮು ಕಾಣಲಿಲ್ಲ. ಅವರ ಹೇಳಿದಂತೆ ವೋಲೋದಲ್ಲಿ ಬಂದರು. ಡ್ರೈವರ್ ಹುಡುಕಿ ದುಡ್ಡು ಕೊಡುವ ಹೊತ್ತಿಗೆ ಕುಂವೀ. ರೂಮಲ್ಲಿ ಬಂದು ಕೂತಿದ್ದರು;
ತಾವೇ ಕಿಸೆಯಿಂದ ದುಡ್ಡು ಕೊಟ್ಟು.

“ಸಾರ್ ಎಷ್ಟಾಯ್ತು. ಅದು ನನ್ನ ಜವಾಬ್ದಾರಿ ‘ಅಂದರೆ.
“ಇದೇನು ಲೆಕ್ಕ ಮಾಡೋ ಸಮಯನಾ… ಹೋಗ್ರೀ… ವೇದಿಕೆ ಕಡೆ ನೋಡ್ರೀ.. ‘ಅಂದರು…
ಕುಂವೀ. ಪ್ರೀತಿ ಹೀಗೆ..

kum veeಅವರು ಯಾರಾದರು ಮಾತನಾಡುತ್ತಿದ್ದರೆ ಸಾಕು… ಬಹಳ ಕುತೂಹಲದಿಂದ, ಮಾತು, ಅದರ ಹಿನ್ನೆಲೆ, ವ್ಯಕ್ತಿ, ಅವರ ಸ್ವಭಾವ ಹೀಗೆ ಎಲ್ಲವನ್ನೂ ಪುಟ್ಟ ಮಗುವಂತೆ ಕಣ್ಣರಳಿಸಿ ಗಮನಿಸುತ್ತಾರೆ. ಪುಳಕ, ಭಾವಸ್ಪಂದನ, ತಲ್ಲೀನತೆ ಎಲ್ಲವೂ ಅವರ ಮುಖದಲ್ಲಿ ರಿಸಲ್ಟಿನಂತೆ ಕಾಣುತ್ತಿರುತ್ತದೆ. ಪ್ರತಿ ಘಟನೆಗೆ ವಿಶಿಷ್ಟವಾದ ಎಕ್ಸಪ್ರೆಷನ್ ಇರುತ್ತದೆ.

ಮೊನ್ನೆ ಪುಸ್ತಕ ಬಿಡುಗಡೆ ವೇದಿಕೆಯಲ್ಲಿ ಡಾ. ಚಿಟ್ಟಿಯಪ್ಪ ಮಾತನಾಡುತ್ತಿದ್ದರೆ ಪುಟ್ಟ ಮಗುವಿನಂತೆ ಚೇರಿನ ಒಂದು ಬದಿಗೆ ಒರಳಿ, ಬೆರಗು ಗಣ್ಣಿನಿಂದ ಚಿಟ್ಟಿ ಅವರನ್ನು ದಿಟ್ಟಿಸುತ್ತಾ ಮಾತುಗಳನ್ನು ಆಸ್ವಾದಿಸುತ್ತಿದ್ದ ರೀತಿ ನೋಡಬೇಕಿತ್ತು…

ಎಲ್ಲ ಆದಮೇಲೆ ಟಿ.ವಿ ಕ್ಲಬಲ್ಲಿ ಕೂತಿದ್ದರು ಕುಂವೀ..
ಸಾರ್, ನೀವು ನನ್ನ ಪುಸ್ತಕ ಬಿಡುಗಡೆಗೆ ಹೇಗೆ ಒಪ್ಪಿಕೊಂಡ್ರೀ.. ಮೊದಲ ಪುಸ್ತಕ.
ಮೊದಲ ಪುಸ್ತಕ ಅಂದರೆ ಪ್ರಕಾಶಕರು ಕೂಡ ಓಡಿ ಹೋಗ್ತಾರೆ. ಅಂತದ್ರಲ್ಲಿ ನೀವು…
ಮಾತು ತುಂಡರಿಸುವ ಮುನ್ನವೇ ಕುಂವೀ ಮಾತಿಗಿಳಿದರು…

ನಾವು ದೊಡ್ಡೋರಾಗೋದು ನಮ್ಮ ಜೊತೆ ಇರೋರು ಬೆಳೆದಾಗ.. ಇವರು ಅವ್ರು ಅಂತಲ್ಲ. ಬರೆಸ್ತಾ ಇರಬೇಕು, ಬೆಳಸ್ತಾ ಇರಬೇಕು.
ಕಳೆದವಾರ ನೀವು ನನ್ನ ಪುಸ್ತಕ ಬಿಡುಗಡೆ ಬಂದಿದ್ದರಲ್ಲಾ ಎಷ್ಟೊಂದು ಲೇಖಕರು ಬಂದಿದ್ದರು ನೋಡಿದ್ರಾ… ಅವರೆಲ್ಲಾ ಏಕೆ ಬಂದ್ರು ಹೇಳಿ… ಇದೇ ಕಾರಣಕ್ಕೆ…ಬರೆಯೋಕೆ ಅವಸರ ಪಡಬಾರದು. ಕಾಯಬೇಕು. ನೀವು ಚಿಟ್ಟಿಯಪ್ಪರದ್ದು ಇನ್ನೊಂದು ಪುಸ್ತಕ ಮಾಡಿ. ಆತುರ ಮಾಡಬೇಡಿ. ಅವರನ್ನು ದಿನಗಟ್ಟಲೆ ಮಾತನಾಡಿಸಿ. ಅವರ ಪಾಡಿಗೆ ಅವರನ್ನು ಮಾತನಾಡಲು ಬಿಡಿ. ಅವರ ಮಾತನ್ನೇ ಬರೀರಿ ಇನ್ನೂ ಸೊಗಸಾಗಿರುತ್ತೆ.

ಕಥೆಗಾರ, ಲೇಖಕ ಯಾವತ್ತು ಹಾದಿ ಇಲ್ಲದ ಜಾಗಗಳಲ್ಲಿ ಓಡಾಡಬೇಕು. ಹೆದ್ದಾರಿ ಪಯಣದಿಂದ ಏನೂ ಅನುಭವ ಆಗೋಲ್ಲ ಅಂತ ಅಂದರು..
ನಾಲ್ಕು ದಿನ ಮೊದಲು ಫೇಸ್‌ಬುಕ್ಕಲ್ಲಿ ಜೋಗಿಸಾರ್ ಕೂಡ ನಾನು ಇನ್ನು ಮುಂದೆ ಒಳದಾರಿಯಲ್ಲೇ ಓಡಾಡುತ್ತೇನೆ ಅನ್ನೋದನ್ನು ಹೇಳಿದ್ದರು.

ಕುಂವೀ ಒಂದು ಮಾತಿಗೆ ಹತ್ತು ಜೀವನಾನುಭವದ ಘಟನೆ ಹೇಳ್ತಾರೆ.
ಕಥೆಗಳು, ಘಟನೆಗಳು ಸೇರಿದರೆ ಕುಂವೀಯಾಗುತ್ತಾರೆ.

ಕುಂವೀ ಕಣ್ಣಲ್ಲಿ ಸಾವಿರಾರು ಚಿತ್ರಗಳು ಓಡುತ್ತಿರುತ್ತವೆ. ಮನೆಯಲ್ಲಿದ್ದರೆ ಸಿನಿಮಾ ನೋಡೋದೇ ಕೆಲಸ. ಸ್ನಾನಕ್ಕೆ ಹೋದರೆ ಟಿ.ವಿ ಸೌಂಡ್‌ ಜಾಸ್ತಿ ಇಡ್ತೀನಿ.. ಕಾಮೆಂಟ್ರಿ ಥರ ಕೇಳ್ತಾ ಇರಬೇಕು’ ಕುಂವೀ ಹೇಳುತ್ತಾರೆ.

ಬೆಂಗಳೂರಿಗೆ ಬಂದರೆ ಅಪಾರ, ವಿಕಾಸ್‌ ರನ್ನು ಹಿಡಿದು ಡಿಸ್ಕ್ ತುಂಬಾ ಸಿನಿಮಾ ತುಂಬಿಸಿಕೊಂಡು ಪ್ರೀತಿಯಿಂದ ನೋಡ್ತಾರೆ.
ಕುಂವೀ ಅಂದರೆ ಹೀಗೇನೇ…ಜೀವನೋತ್ಸಾಹ..

Add Comment

Leave a Reply

%d bloggers like this: